ಶ್ರೀಮಂತ
ಹಾಗೂ ಕೀರ್ತಿವಂತ ಪೋಷಕರಿಗೆ ಜನಿಸಿದ ಸ್ತ್ರೀ ಸಂತಳು ಮಾರ್ಥಾ. ಇವರ ಕುಟುಂಬದ ಹಿನ್ನೆಲೆಗಿಂತ
ಕ್ರಿಸ್ತನಿಗೆ ನೀಡಿದ ಆತಿಥ್ಯಕ್ಕಾಗಿ ಇನ್ನೂ ಹೆಚ್ಚು ಸುಪ್ರಸಿದ್ಧ. ಮಾರ್ಥಾ, ಬೆಥನಿಯ ಮರಿಯ
(ಮಗ್ದಲದ ಮರಿಯ) ಮತ್ತು ಲಾಜ಼ರನ ಸಹೋದರಿ. ಇವರು ಜೆರುಸಲೇಮಿನ ಸಮೀಪದಲ್ಲಿರುವ ಬೆಥನಿ ಎಂಬ ಚಿಕ್ಕ
ಪಟ್ಟಣದಲ್ಲಿ ವಾಸಿಸುತಿದ್ದರು. ಈ ಮೂವರು ಯೇಸುಸ್ವಾಮಿಯ ಆಪ್ತ ಮಿತ್ರರಾಗಿದ್ದರಿಂದ ಯೇಸು
ಆಗಾಗ್ಗೆ ಇವರ ಮನೆಗೆ ಭೇಟಿ ನೀಡಿ ಇವರನ್ನು ಸಂಧಿಸುತಿದ್ದರು. ಈ ಸಂಗತಿಗಳು ಶುಭಸಂದೇಶದಲ್ಲಿ (ಲೂಕ
೧೦:೩೮-೪೨; ಯೊವಾನ್ನ ೧೧:೧-೫೩; ಯೊವಾನ್ನ ೧೨:೧-೯) ಉಲ್ಲೇಖಗೊಂಡಿವೆ. 'ಯೇಸುಸ್ವಾಮಿ
ಮಾರ್ಥಾಳನ್ನು, ಅವಳ ಸಹೋದರಿ ಮರಿಯಳನ್ನು ಹಾಗೂ ಅವಳ ಸಹೋದರ ಲಾಜರನನ್ನು ಪ್ರೀತಿಸಿದರು' ಎಂದು
ಹೇಳಲಾಗಿದೆ. ಯೇಸು ಶಿಲುಬೆಗೇರುವ ಮುನ್ನ ಭೇಟಿ ನೀಡಿದ್ದು ಈ ಕುಟುಂಬಕ್ಕೆ. ಯೇಸು ಸ್ವಾಮಿ ತಮ್ಮ
ಮನೆಗೆ ಭೇಟಿ ನೀಡಿದಾಗ ಅವರನ್ನು ಪ್ರೀತಿಯಿಂದ ಸತ್ಕರಿಸಿದ ಘನತೆಗೆ ಪಾತ್ರರು ಸಂತ ಮಾರ್ಥಾ.
ಒಮ್ಮೆ ಯೇಸುವಿಗಾಗಿ ಮತ್ತು ಶಿಷ್ಯರಿಗಾಗಿ ಔತಣ ಸಿದ್ದಪಡಿಸುತಿದ್ದಾಗ ತನ್ನ ಸಹೋದರಿ ಸಹ ಸ್ವಲ್ಪ
ಸಹಾಯ ಮಾಡಿದರೆ ಕೆಲಸ ಸರಾಗವಾದೀತು ಎಂದುಕೊಂಡಳು. ಅಂತೆಯೇ ಯೇಸುಸ್ವಾಮಿಯ ಬಳಿ ಕುಳಿತು
ಬೋಧನೆಯನ್ನು ಆಲಿಸುತಿದ್ದ ಮರಿಯಳನ್ನು ಉದ್ದೇಶಿಸಿ 'ನನ್ನ ಸಹೋದರಿಗೆ ನನಗೆ ಸಹಾಯ ಮಾಡಲು ಹೇಳಿ'
ಎಂದು ಪ್ರಭುವಿನಲ್ಲಿ ಬಿನ್ನವಿಸಿದಳು. ಯೇಸು ಮಾರ್ಥಾಳ ಪ್ರೀತಿಯ ಸೇವೆಗೆ ಮನ ಮರುಗಿದರಾದರೂ ದೇವರ
ವಾಕ್ಯವನ್ನು ಆಲಿಸಿ ಧ್ಯಾನಿಸುವುದು ಅದಕ್ಕಿಂತಲೂ ಮುಖ್ಯವಾದುದೆಂದು ಭಾವಿಸಿ ಸೌಮ್ಯವಾಗಿ
ಮಾರ್ಥಾಳಿಗೆ 'ಮಾರ್ಥಾ ಮಾರ್ಥಾ ನೀನು ಅನಾವಶ್ಯಕ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು
ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ' ಎಂಬ ಮಹತ್ವದ ಸಂದೇಶ ನೀಡಿದರು.
ಸಹೋದರ
ಲಾಜ಼ರನ ಸಾವಿನ ಸಂದರ್ಭದಲ್ಲಿ ಮಾರ್ಥಾಳ ಶ್ರೇಷ್ಠ ವಿಶ್ವಾಸ ಕಂಡು ಬರುತ್ತದೆ. ಯೇಸು ಜುದೇಯದಿಂದ ಬೆಥನಿಗೆ
ಬರುತಿದ್ದಾರೆ ಎಂಬ ವಿಷಯ ಕೇಳಿದ್ದೇ ತಡ ಮಾರ್ಥಾಳು ಹೋಗಿ ಅವರನ್ನು ಎದುರು ನೋಡಿ ಸಂಧಿಸಿದಳು.
ಯೇಸುವಿನ ಮೇಲೆ ಇಟ್ಟಿದ್ದ ಅಪಾರ ನಂಬಿಕೆಯಿಂದ 'ಸ್ವಾಮಿ ನೀವು ಇಲ್ಲಿಯೇ ಇದ್ದಿದ್ದರೆ, ನನ್ನ
ಸಹೋದರ ಲಾಜ಼ರನು ಸಾಯುತ್ತಿರಲಿಲ್ಲ'. ಅದಕ್ಕೆ ಯೇಸುವು ಪ್ರತ್ಯುತ್ತರವಾಗಿ 'ಲಾಜ಼ರನು
ಏಳುತ್ತಾನೆ, ಪುನರುತ್ಥಾನವೂ ಜೀವವೂ ನಾನೇ. ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ
ಜೀವಿಸುವನು' ಎಂಬುದನ್ನು ನೀನು ವಿಶ್ವಾಸಿಸುವೆಯಾ? ಎಂದು ಕೇಳಲು ಮಾರ್ಥಾಳು 'ಹೌದು ಪ್ರಭು, ನೀವೇ
ಅಭಿಷಿಕ್ತರಾದ ಲೋಕೋದ್ಧಾರಕ, ದೇವರ ಪುತ್ರ ಎಂದು ನಾನು ವಿಶ್ವಾಸಿಸುತ್ತೇನೆ' ಎಂದಳು. ಅದ್ಭುತ
ಕಾರ್ಯವನ್ನು ಕೈಗೊಂಡು ಲಾಜ಼ರನನ್ನು ಚಿರನಿದ್ರೆಯಿಂದ ಯೇಸು ಎಬ್ಬಿಸಿದರು. ಲಾಜ಼ರನು ಜೀವಂತವಾಗಿ
ಎದ್ದ ಕೆಲ ದಿನಗಳ ನಂತರ ಯೇಸು ಭೋಜನಕ್ಕೆಂದು ಈ ಮೂವರ ಮನೆಗೆ ಬಂದರು. ಲಾಜ಼ರನು ಭೋಜನದ
ಪಂಕ್ತಿಯಲ್ಲಿ ಕುಳಿತಿದ್ದನು. ಮರಿಯಳು ಯೇಸುವಿನ ಪಾದಕ್ಕೆ ಸುಗಂಧ ತೈಲವನ್ನು ಹಚ್ಚಿದಳು.
ಮಾರ್ಥಾಳು ಎಂದಿನಂತೆ ಪ್ರೀತಿಯಿಂದ ಅಡುಗೆ ಮಾಡಿ ಬಡಿಸಿದಳು. ಈ ಬಾರಿ ಮಾರ್ಥಾಳ ಪ್ರೀತಿಯ
ಸತ್ಕಾರದ ಭಂಗಿ ಹಿಂದೆಂದಿಗಿಂತಲೂ ಅಧಿಕ ಹರ್ಷೋದ್ಗಾರದಿಂದ ಕೂಡಿತ್ತು.
ಕೆಲವೊಮ್ಮೆ
ಕೆಲವೊಂದು ಕಾರ್ಯಗಳನ್ನು ಕೈಗೊಳ್ಳಲು ನಮಗೆ ಕಷ್ಟವೆನಿಸುತ್ತದೆ. ಕಾರಣ ಅವು ಭಾರವಾಗಿಯೂ
ಅಹಿತಕರವಾಗಿಯೂ ಇರುವುದು. ಅಂತಹ ಸಂದರ್ಭಗಳಲ್ಲಿ ನಮಗೆ ಮನೊದೀನತೆಯನ್ನೂ, ಸಣ್ಣ ಪುಟ್ಟ
ಕೆಲಸಗಳಲ್ಲಿ ಸಂತೋಷವನ್ನು ಕಾಣುವ ವರವನ್ನೂ ಸಂತ ಮಾರ್ಥಾಳಲ್ಲಿ ಬೇಡಿ ಪಡೆಯಬಹುದು.
ಕ್ರಿಸ್ತ
ಯೇಸುವಿನ ಸ್ವರ್ಗಾರೋಹಣದ ನಂತರ ಮಾರ್ಥಾ, ಮರಿಯ, ಲಾಜ಼ರ, ಮಾರ್ಸೆಲ್ಲಾ (ಮಾರ್ಥಾಳ ಸೇವಕಿ),
ಮ್ಯಾಕ್ಸಿಮಿನ್ (ಪ್ರಭುವಿನಿಂದ ದೀಕ್ಷಾಸ್ನಾನ ಪಡೆದ ೭೨ ಕ್ರಿಸ್ತನ ಅನುಯಾಯಿಗಳಲ್ಲಿ ಒಬ್ಬ) ಹಾಗೂ
ಇನ್ನಿತರ ಕ್ರೈಸ್ತರನ್ನು ಜೂದರು ಕಟ್ಟಿಹಾಕಿ ಹಾಕಿ ಪಟವಿಲ್ಲದ ನಾವಿಕನಿಲ್ಲದ ಹುಟ್ಟು ಹಾಕದ
ಹಡಗಿನಲ್ಲೇ ಹಾಕಿ ಹಡಗು ನಾಶವಾಗುವಂತಹ ತಾಣದೊಳಕ್ಕೆ ತಳ್ಳಿದರು. ಆದರೆ ದಯಾಮಯನ
ಮಾರ್ಗದರ್ಶನದೊಂದಿಗೆ ಆ ಹಡಗು ಮಾರ್‌ಸೈಲ್ಸ್ ಎಂಬಲ್ಲಿಗೆ ಹೋಗಿ ತಲುಪಿತು. ನಡೆದ ಪವಾಡ ಹಾಗೂ
ಇವರೆಲ್ಲರ ಬೋಧನೆಗಳು ಮಾರ್‌ಸೈಲ್ಸ್, ಐಕ್ಸ್ ಹಾಗೂ ಸುತ್ತಮುತ್ತಲ ಪ್ರದೇಶದ ಜನರನ್ನು ಸೆಳೆದು
ಅವರಲ್ಲಿ ಕ್ರೈಸ್ತ ವಿಶ್ವಾಸ ಬಿತ್ತಿ ಬೇರೂರಿಸಿತು. ನಂತರದ ದಿನಗಳಲ್ಲಿ ಲಾಜ಼ರನು ಮಾರ್‌ಸೈಲ್ಸ್‌ನ
ಧರ್ಮಾಧ್ಯಕ್ಷನಾದ, ಮ್ಯಾಕ್ಸಿಮಿನನು ಐಕ್ಸ್ ನ ಧರ್ಮಾಧ್ಯಕ್ಷನಾದ. ಕ್ರಿಸ್ತನ ಪಾದದಡಿ ಕುಳಿತು
ಪ್ರಾರ್ಥಿಸುವುದು ಉತ್ತಮವಾದ ಆಯ್ಕೆಯೆಂದು ಪರಿಗಣಿಸಿದ ಮರಿಯಳು ಎಲ್ಲಾ ಪ್ರಾಪಂಚಿಕ
ಆಶಾಪಾಶಗಳನ್ನು ತೊರೆದು ಎತ್ತರದ ಬೆಟ್ಟವೊಂದನ್ನು ಏರಿ ಅಲ್ಲಿಯೇ ಮೂವತ್ತು ವರ್ಷಗಳ ಕಾಲ ಜೀವನ
ನಡೆಸಿದಳು. ಪ್ರತಿದಿನ ಮರಿಯಳು ಪ್ರಾರ್ಥಿಸುತಿದ್ದಾಗ ಕೀರ್ತನಾ ಗೀತೆಗಳನ್ನು ಕೇಳಲು ಅವಳನ್ನು
ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದರು ಎಂದು ಸಹ ಹೇಳಲಾಗುತ್ತದೆ.
ಆದರೆ
ಮಾರ್ಥಾಳು ತನ್ನ ಜೀವನದ ಪಾವಿತ್ರ್ಯ ಹಾಗೂ ಅದ್ಭುತ ದಾನದ ಸದ್ಗುಣಶೀಲತೆಯಿಂದ ಸರ್ವರ
ಪ್ರೀತಿ-ಮೆಚ್ಚುಗೆಗೆ ಪಾತ್ರಳಾಗಿದ್ದಳು. ಮಾರ್‌ಸೈಲ್ಸ್ ನ ಹಲವು ಕನ್ಯೆಯರೊಡನೆ ಜೊತೆಗೂಡಿ
ಪುರಷರಿಂದ ದೂರವಿದ್ದ ಒಂದು ಪ್ರದೇಶದಲ್ಲಿ ಹೆಚ್ಚು ಸಮಯ ಜೀವಿಸಿ ದೈವಭಕ್ತಿ-ಧರ್ಮನಿಷ್ಠೆಗೆ
ಹೆಸರುವಾಸಿಯಾದಳು. ಇವರು ಮಾರ್‌ಸೈಲ್ಸ್ ಪ್ರವೇಶಿಸುತಿದ್ದಂತೆ, ಆ ಪ್ರದೇಶದಲ್ಲಿನ ಜನರನ್ನು
ಕಿತ್ತು ತಿನ್ನುತ್ತಿದ್ದ ಲಾ ತಾರಸ್ಕ್ (La
Tarasque) ಎಂಬ ಭೂಜಲಚರ ಪಶುವೊಂದನ್ನು ಗಮನಿಸುತ್ತಾರೆ. ಆ ಜಂತುವನ್ನು ಸಂತ
ಮಾರ್ಥಾ ಪಳಗಿಸಿ ಜನತೆಯ ಆಹಾರಕ್ಕೆಂದು ಪಟ್ಟಣದ ಜನತೆಗೆ ವಹಿಸಿಕೊಡುತ್ತಾರೆ. ಮಾರ್ಥಾಳ ಪ್ರೀತಿಗೆ
ಪಾತ್ರವಾದ ಪ್ರತಿಮೆಯನ್ನು ಪ್ರತಿ ವರ್ಷ ಜೂನ್ ತಿಂಗಳ ಕೊನೆಯ ವಾರಾಂತ್ಯದಲ್ಲಿ ಫ್ರಾನ್ಸ್ ನ
ತಾರಸ್ಕನ್ ಎಂಬಲ್ಲಿ ಆಡಂಬರ ಮೆರವಣಿಗೆಯ ಮುಖೇನ ಸ್ಮರಿಸಲಾಗುತ್ತದೆ. ಆ ಊರಿಗೆ ತಾರಸ್ಕನ್ ಎಂಬ
ಹೆಸರು ಬರಲು ಈ ಪ್ರಾಣಿಯು ಮೂಲವಾಗಿದೆ. ಕ್ರಿಸ್ತಶಕ ೧೪೭೪ರಲ್ಲಿ ರೇನೆ ಎಂಬ ರಾಜನು ಈ
ಆಚರಣೆಯನ್ನು ಜಾರಿಗೆ ತಂದನು. ಅಂದಿನಿಂದ ಇಂದಿನವರೆಗೂ ಈ ಆಚರಣೆಯು ಜಾರಿಯಲ್ಲಿದೆ.
ಈ
ಸ್ತ್ರೀ ಸಂತಳು ಜೀವಿಸಿದ ಫ್ರಾನ್ಸ್ ನಾಡಿನ ಪ್ರದೇಶದಲ್ಲಿ ಬೆಳೆಯುವ ತಾರಗಾನ್ ಅಥವಾ
ಎಸ್ಟ್ರಾಗಾನ್ (Tarragon
or Estragon) ಎಂಬ ಸಸಿಯು ಹೆಚ್ಚು ಔಷಧ ತತ್ವವನ್ನು ಹೊಂದಿದೆ ಹಾಗೂ ಈ ಗಿಡಕ್ಕೆ
ತಾರಗಾನ್ ಎಂಬ ಹೆಸರು ಸಹ ಲಾ ತಾರಸ್ಕ್ ಎಂಬ ಆ ಮಹಾ ಉರಗದಿಂದಲೇ ಬಂದಿದೆ.
ಉದ್ದಕ್ಕೂ
ಪಾವಾಡ ಕಾರ್ಯಗಳನ್ನು ಮಾಡುತ್ತಾ ಪ್ರಸಿದ್ದರಾದ ಇವರು ಮರಣದ ಬಗ್ಗೆ ಇತರರಿಗೆ ಮುಂತಿಳಿಸಿ ಆಗಸ್ಟ್
೪ ರಂದು ದೈವಾಧೀನರಾದರು. ಇವರ ದೇಹವನ್ನು ಫ್ರಾನ್ಸ್‌ನ ತಾರಸ್ಕನ್ ಎಂಬ ಪಟ್ಟಣದಲ್ಲಿ ಸಮಾಧಿ
ಮಾಡಲಾಗಿದ್ದು ಅಲ್ಲಿ ಮಹಾಭಕ್ತಿಯನ್ನು ತೋರಲಾಗುತ್ತಿದೆ. ಫ್ರಾನ್ಸ್‌ನ ಈ ಸ್ಥಳವು ಮಾತೆ ಮರಿಯಳ
ತಾಯಿ ಸಂತ ಅನ್ನಳ ವಿವಿಧ ಅವಶೇಷಗಳ ಸಂರಕ್ಷಣೆಗೂ ಪ್ರಸಿದ್ದವಾಗಿದೆ. ಪ್ರತಿವರ್ಷ ಜುಲೈ ೨೯ರಂದು
ಪವಿತ್ರ ಧರ್ಮಸಭೆಯು ಸಂತ ಮಾರ್ಥಾಳ ಹಬ್ಬವನ್ನು ವಿಶ್ವದ ಎಲ್ಲೆಡೆ ಆಚರಿಸುತ್ತದೆ. ಸೇವಾ
ಸ್ಫೂರ್ತಿಯಾದ ಈ ಸಂತರು ಗೃಹಿಣಿಯರ, ಮನೆಕೆಲಸದವರ, ಸತ್ಕಾರ ಸೇವಕರ, ಅಡುಗೆಯವರ, ಸೇವಾ
ಕಾರ್ಯದಲ್ಲಿ ನಿರತರಾದವರ ಪಾಲಕಿಯಾಗಿದ್ದಾರೆ.
No comments:
Post a Comment