ಫೆಬ್ರವರಿ ೨೬, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

26 ಫೆಬ್ರವರಿ 2೦19


ಮಂಗಳವಾರ /  ಹಸಿರು / ಸಾಧಾರಣ ಕಾಲದ ಏಳನೇ ವಾರ 
1ನೇ ವಾಚನ - ಸಿರಾಖ 2: 1-11
 ಕೀರ್ತನೆ - 37: 3-4, 18-19, 27-28, 39-40
ಶುಭಸಂದೇಶ - ಮಾರ್ಕ 9: 30-37


ವಾಚನಗಳು
ಮೊದಲನೇ  ವಾಚನ


ಆದಿಕಾಂಡದಿಂದ ವಾಚನ
ಸಿರಾಖ 2: 1-11
1ಮಗನೇ, ದೇವರ ಸೇವೆಮಾಡಲು ಬಯಸುವಿಯೋ? ಹಾಗಾದರೆ ಶೋಧನೆಗಳನ್ನೆದುರಿಸಲು ನಿನ್ನಾತ್ಮವನ್ನು ಸಿದ್ಧಪಡಿಸಿಕೊ! 2ನಿನ್ನ ಹೃದಯದಲ್ಲಿರಲಿ ಪ್ರಾಮಾಣಿಕತೆ, ಸ್ಥಿರತೆ ಕಷ್ಟ ಬಂದಾಗ ನಿನಗಿರದಿರಲಿ ಚಂಚಲತೆ. 3ಆತನನ್ನು ಸೇರಿಕೊಂಡಿರು; ಬಿಟ್ಟಗಲಬೇಡ ಅಭಿವೃದ್ಧಿ ಹೊಂದುವೆ ಅಂತಿಮ ದಿನ. 4ನಿನ್ನ ಮೇಲೆ ಬಂದುದೆಲ್ಲವನು ಸ್ವೀಕರಿಸು ಬಡತನ ಬಂದರೂ ದೀರ್ಘಶಾಂತಿಯಿಂದಿರು. 5ಬಂಗಾರದ ಪರೀಕ್ಷೆಯಾಗುವುದು ಬೆಂಕಿಯಲ್ಲಿ ಆತನ ಭಕ್ತರ ಪರೀಕ್ಷೆ ಅವಮಾನದ ಕುಲುಮೆಯಲ್ಲಿ. 6ಆತನಲ್ಲಿಡು ಭರವಸೆ; ನೆರವೀಯುವನಾತ ನಿನಗೆ, ಸರಿಪಡಿಸಿಕೊ ನಿನ್ನ ನಡತೆಯನು; ನಿರೀಕ್ಷೆಯಿಡು ಆತನಲೇ. 7ದೇವರಲ್ಲಿ ಭಯಭಕ್ತಿಯುಳ್ಳವರೇ, ಆತನ ಕರುಣೆಗಾಗಿ ಕಾದಿರಿ ಸನ್ಮಾರ್ಗವನ್ನು ಬಿಟ್ಟು ತೊಲಗಬೇಡಿ; ಬಿದ್ದು ಹೋದೀರಿ! 8ದೇವರಿಗೆ ಭಯಪಡುವವರೇ, ಆತನಲ್ಲಿಡಿ ಭರವಸೆ ತಕ್ಕ ಪ್ರತಿಫಲ ದೊರಕುವುದು ನಿಮಗೆ ತಪ್ಪದೆ. 9ದೇವರಿಗೆ ಭಯಪಡುವವರೇ, ಒಳಿತನ್ನು ನಿರೀಕ್ಷಿಸಿರಿ ನಿತ್ಯ ಸಂತೋಷವನ್ನೂ ಕೃಪೆಯನ್ನೂ ಹಾರೈಸಿರಿ. 1೦ಹಿಂದಿನವರನ್ನು ಗಮನಿಸಿರಿ; ತಂದುಕೊಳ್ಳಿರಿ ಲಕ್ಷ್ಯಕೆ ದೇವರನ್ನು ನಂಬಿದವರಿಗೆ ಆಗಿದ್ದುಂಟೆ ನಾಚಿಕೆ? ಭಯಭಕ್ತಿಯಿಂದ ಬಾಳಿದವನನು ಆತ ಕೈಬಿಟ್ಟದ್ದುಂಟೆ? 11ಏಕೆನೆ, ಸರ್ವೇಶ್ವರನು ದಯಾಪೂರಿತನು, ಕನಿಕರವುಳ್ಳವನು ಪಾಪಗಳನ್ನು ಕ್ಷಮಿಸುವವನು, ಕಷ್ಟದಲ್ಲಿ ರಕ್ಷಿಸುವವನು.


ಕೀರ್ತನೆ 

 ಕೀರ್ತನೆ - 37: 3-4, 18-19, 27-28, 39-40
ಸಜ್ಜನರ ಜೀವೋದ್ಧಾರ ಪ್ರಭುವಿನಿಂದ

ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು 
ಸುರಕ್ಷಿತವಾಗಿ ಬಾಳು ಸಿರಿನಾಡಿನಲ್ಲಿದ್ದು 
ಪ್ರಭುವಿನಿಂದಲೆ ಬಯಸು ನಿನ್ನಾನಂದವನು 
ನೆರವೇರಿಸುವನಾತ ನಿನ್ನ ಮನದಾಸೆಯನು 

ಸಜ್ಜನರಿಗೆ ಸಿಗುವ ಸೊತ್ತು ಶಾಶ್ವತ 
ಪ್ರಭುವಿಗೆ ಗೊತ್ತು ಅವರ ಬಾಳಿನಂತ್ಯ 
ಮಾನನಷ್ಟವಿರದು ಕಷ್ಟಕಾಲದಲಿ 
ಕುಂದುಕೊರತೆಯಿರದು ಬರಗಾಲದಲಿ 

ಕೆಟ್ಟದನು ಬಿಡು, ಒಳ್ಳೆಯದನು ಮಾಡು
ಸಿರಿನಾಡಿನಲಿ ಚಿರಕಾಲ ಬಾಳು
ಪ್ರಭುವು ನ್ಯಾಯಪ್ರಿಯನು, ಭಕ್ತಜನರ ಪರಿಪಾಲಕನು
ಚಿರವುಳಿಸುವನು ಇವರನು, ಅಳಿಸುವನು ದುರುಳರ ಪೀಳಿಗೆಯನು

ಸಜ್ಜನರ ಜೀವೋದ್ಧಾರ ಪ್ರಭುವಿನಿಂದ 
ಆಪತ್ಕಾಲದಲಿ ಆಶ್ರಯ ಆತನಿಂದ 
ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು 
ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು 


ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 9: 30-37
30ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು. 31ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು, ಎಂದು ಯೇಸು ಅವರಿಗೆ ತಿಳಿಸಿದರು. 32ಆದರೆ ಯೇಸು ಹೇಳಿದ ಈ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. 33ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸುಸ್ವಾಮಿ, ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ? ಎಂದು ಶಿಷ್ಯರನ್ನು ಕೇಳಿದರು. ಅವರು ಮೌನ ತಾಳಿದರು. 34ಏಕೆಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು. 35ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನೂ ಕರೆದು, ಅವರಿಗೆ, 'ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ,' ಎಂದರು. 36ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ಅವರ ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ, 37ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ, ಎಂದರು. 

ಚಿಂತನೆ
ತಪ್ಪು ಕಲ್ಪನೆ


ಯೇಸು ಎರಡನೆಯ ಬಾರಿ ಮಾರ್ಕನ ಶುಭಸಂದೇಶದಲ್ಲಿ ತಮ್ಮ ಮರಣ ಮತ್ತು ಪುನರುತ್ಥಾನದ ಬಗ್ಗೆ ತಿಳಿಸುತ್ತಾರೆ. ಆದರೆ ಶಿಷ್ಯರು ಗ್ರಹಿಸಿಲು ವಿಫಲರಾಗುತ್ತಾರೆ. ಯೇಸು ಈ ಲೋಕವನ್ನು ತೊರೆಯುವ ಮುನ್ನ ತಮ್ಮ ಶಿಷ್ಯರಿಗೆ ತಮ್ಮ ಆಗಮನದ ಗುರಿ, ಉದ್ದೇಶಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಶಿಷ್ಯರು ಯೇಸು ಸ್ಥಾಪಿಸಿದ್ದ ಸಾಮ್ರಾಜ್ಯವನ್ನು ತಪ್ಪಾಗಿ ಗ್ರಹಿಸಿದರು, ಅಧಿಕಾರದ ಕನಸು ಕಾಣುತ್ತಿದ್ದರು. ಯೇಸು ಅವರಲ್ಲಿ ಮನೆಮಾಡಿದ್ದ ತಪ್ಪು ಕಲ್ಪನೆಯನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಶಿಷ್ಯರು ತಮ್ಮ ಜೀವನದಲ್ಲಿ ಪ್ರಥಮ ಸ್ಥಾನವನ್ನು ದೇವರಿಗೆ ಮೀಸಲಾಗಿಡಬೇಕು. ರಾಜದಂಡ, ಅಧಿಕಾರ ಮತ್ತು ಸ್ವಾರ್ಥವನ್ನು ಬದಿಗೊತ್ತಿ ಸೇವೆ, ತ್ಯಾಗದ ಮೂಲಕ ದೇವರ ಸಾಮ್ರಾಜ್ಯ ಕಟ್ಟಲು ಕರೆ ನೀಡುತ್ತಾರೆ.

ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment