ಸಾರ್ವಜನಿಕ ಉದ್ದೇಶ:
ತಮ್ಮ ಜೀವನದ ಹಂಗು ತೊರೆದು,
ಇತರರ ಜೀವವನ್ನು ಉಳಿಸಲು ಯುದ್ದ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ
ಸಹಯೋಗಿಗಳಿಗಾಗಿ.
ನೇರಳೆ/ ಮಂಗಳ/ ತಪಸ್ಸುಕಾಲದ/ಐದನೇ
ವಾರ
1ನೇ ವಾಚನ - ಸಂಖ್ಯಾ 21: 4-9
ಕೀರ್ತನೆ - 1೦2: 1-2, 15-2೦
ಶುಭಸಂದೇಶ - ಯೊವಾನ್ನ 8: 21-3೦
1ನೇ ವಾಚನ
ಸಂಖ್ಯಾ 21: 4-9
4ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸ ದಿಂದ ಅವರಿಗೆ ಬೇಸರವಾಯಿತು. 5ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡ ತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು. 6ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು. 7ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ,” ಎಂದು ಬೇಡಿಕೊಂಡರು. 8ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿ ಒಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು,” ಎಂದು ಆಜ್ಞಾಪಿಸಿದರು. 9ಅಂತೆಯೆ ಮೋಶೆ ಕಂಚಿನಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.
ಕೀರ್ತನೆ - 1೦2: 1-2, 15-2೦
ಶ್ಲೋಕ: ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ / ನನ್ನ ಕೂಗು ಸೇರಲಿ ನಿನ್ನ ಬಳಿಗೆ /
1ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ / ನನ್ನ ಕೂಗು ಸೇರಲಿ ನಿನ್ನ ಬಳಿಗೆ //
2ಕಷ್ಟಕಾಲದೊಳು ವಿಮುಖನಾಗಬೇಡ ನೀನೆನಗೆ / ಕಿವಿಗೊಡು, ಮೊರೆಯಿಡುವಾಗಲೆ, ಸದುತ್ತರಿಸು ಬೇಗನೆ //
3ಮಾಯವಾಗುತ್ತಿದೆ ನನ್ನೀ ಜೀವಮಾನ ಹೊಗೆಯಂತೆ / ಉರಿಯುತ್ತಿವೆ ಎನ್ನೆಲುಬುಗಳು ಒಲೆಯಲ್ಲಿಟ್ಟ ಕೊರಡಿನಂತೆ //
16ಏಕೆನೆ ಪುನರುದ್ಧರಿಸುವನು ಸಿಯೋನನು / ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು //
17ತಿರಸ್ಕರಿಸನಾತ ನಿರ್ಗತಿಕರ ಮೊರೆಯನು / ನೆರವೇರಿಸದೆ ಬಿಡನು ಅವರ ಕೋರಿಕೆಯನು //
18ಮುಂದಣ ಸಂತತಿಗಿದು ಶಾಸನವಾಗಿರಲಿ / ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ //
19ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ / ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ //
20ಆಲಿಸಿದಾತನು ಬಂಧಿತರ ಗೋಳಾಟವನು / ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು //
21ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು / ಜನಾಂಗಗಳೂ ರಾಜ್ಯಗಳೂ ಕೂಡಿರಲು /
ಶುಭಸಂದೇಶ
ಯೊವಾನ್ನ 8: 21-3೦
21ಯೇಸುಸ್ವಾಮಿ ಪುನಃ ಅವರಿಗೆ, “ನಾನು ಹೊರಟುಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ. ಆದರೆ ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ,” ಎಂದರು. 22ಅದಕ್ಕೆ ಯೆಹೂದ್ಯರು, ‘ತಾನು ಹೋಗುವಲ್ಲಿಗೆ ನಮ್ಮಿಂದ ಬರಲಾಗದಂತೆ! ಹಾಗೆಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುದು ಇವನ ಇಂಗಿತವೆ?’ ಎಂದು ಮಾತನಾಡಿಕೊಂಡರು. 23“ನೀವು ನರಲೋಕದವರು, ನಾನು ಪರಲೋಕದವನು. ನಿಮ್ಮಂತೆ ನಾನು ಇಹಲೋಕದವನಲ್ಲ, 24ನಿಮ್ಮ ಪಾಪಗಳಲ್ಲೇ ನೀವು ಸಾಯುವಿರೆಂದು ನಾನು ಹೇಳಿದುದು ಇದಕ್ಕಾಗಿಯೇ. ‘ಇರುವಾತನೇ ನಾನು’ ಎಂಬುದನ್ನು ನೀವು ವಿಶ್ವಾಸಿಸದೆ ಹೋದರೆ ನಿಮ್ಮ ಪಾಪಗಳಲ್ಲೇ ಸಾಯುವಿರಿ,” ಎಂದು ಯೇಸು ಅವರಿಗೆ ಹೇಳಿದರು. 25ಅವರು, “ನೀನು ಯಾರು?” ಎಂದು ಪ್ರಶ್ನಿಸಿದರು. 26ಯೇಸು, “ನಾನು ಯಾರೆಂದು ನಿಮಗೆ ಮೊದಲಿನಿಂದಲೂ ತಿಳಿಸುತ್ತಾ ಬಂದಿದ್ದೇನೆ. ನಿಮ್ಮನ್ನು ಕುರಿತು ನಾನು ಎಷ್ಟೋ ಹೇಳಿಯೇನು; ಎಷ್ಟೋ ಖಂಡಿಸಿಯೇನು. ಆದರೆ ನನ್ನನ್ನು ಕಳುಹಿಸಿದಾತನು ಹೇಳಿದ್ದನ್ನೇ ಲೋಕಕ್ಕೆ ಸಾರುತ್ತೇನೆ. ಆತನು ಸತ್ಯಸ್ವರೂಪಿ,” ಎಂದು ಹೇಳಿದರು. 27ಯೇಸುಸ್ವಾಮಿ ತಮ್ಮ ಪಿತನನ್ನು ಕುರಿತು ಹೀಗೆನ್ನುತ್ತಿದ್ದಾರೆಂದು
ಅವರು ಅರಿತುಕೊಳ್ಳಲಿಲ್ಲ. 28ಎಂದೇ ಯೇಸು ಮತ್ತೆ ಇಂತೆಂದರು: “ನರಪುತ್ರನನ್ನು ನೀವು ಮೇಲಕ್ಕೇರಿಸಿದಾಗ, ‘ಇರುವಾತನೇ ನಾನ’ ಎಂದು ನಿಮಗೆ ತಿಳಿಯುವುದು. ನಾನಾಗಿಯೇ ಏನನ್ನೂ ಮಾಡುವುದಿಲ್ಲವೆಂದೂ ಪಿತನು ನನಗೆ ಬೋಧಿಸಿದಂತೆ ನಾನು ಮಾತನಾಡುತ್ತೇನೆಂದೂ ನಿಮಗೆ ಆಗ ಅರಿವಾಗುವುದು. 29ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು ಸತತವೂ ಮಾಡುವುದರಿಂದ ಆತನು ನನ್ನನ್ನು ಏಕಾಕಿಯಾಗಿ ಬಿಟ್ಟಿಲ್ಲ.” 30ಯೇಸುಸ್ವಾಮಿ ಹೀಗೆ ಹೇಳಿದ್ದನ್ನು ಕೇಳಿ ಹಲವರಿಗೆ ಅವರಲ್ಲಿ ನಂಬಿಕೆ ಹುಟ್ಟಿತು.
ಚಿಂತನೆ
ಗ್ರೀಕ್ ಭಾಷೆಯಲ್ಲಿ ಪಾಪಕ್ಕೆ ಹಮರ್ತಿಯ ಎಂದು ಕರೆಯಲಾಗುತ್ತದೆ, ಅಂದರೆ ’ಗುರಿ ತಪ್ಪುವುದು’ ಎಂದರ್ಥ. ಯೆಹೂದ್ಯರನ್ನು ಕುರಿತು ಯೇಸು ’ನೀವು ಪಾಪದಲ್ಲಿದ್ದೀರಿ, ಪಾಪದಲ್ಲೇ ಸಾಯುವಿರಿ’ ಎಂದು ಹೇಳುವಾಗ ನೀವು ದಾರಿ ತಪ್ಪಿದ್ದೀರಿ, ಗೊತ್ತು ಗುರಿಯಿಲ್ಲದೆ ಅಲೆಯುತ್ತಿದ್ದೀರಿ ಎಂದು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದರು. ಈ ಹಿಂದೆಯೂ ಸಹ ಕಣ್ಣಾರೆ ಕಂಡರೂ ನೀವು ನೋಡಲಾರಿರಿ, ಕಿವಿಯಾರೆ ಕೇಳಿದರೂ ಗ್ರಹಿಸಲಾರಿರಿ ಎಂದಿದ್ದರು . ಕಣ್ಣುಗಳನ್ನು ತೆರೆದರೆ ಸಾಲದು ಮನದಲ್ಲಿ ಗ್ರಹಿಸಿಕೊಳ್ಳಬೇಕು, ಕಿವಿಗಳು ತೆರೆದರೆ ಸಾಲದು ಕೇಳಿದ್ದನ್ನು ಅರ್ಥೈಸಿಕೊಳ್ಳಬೇಕು. ಆ ಜನರಿಗೆ ಕಣ್ಣು ಕಿವಿಗಳೊಂದಿಗೆ ಹೃದಯ ಮಂಕಾಗಿತ್ತು. ಯೇಸುವನ್ನು ರಕ್ಷಕರಂತೆ ನೋಡುವ, ಅವರ ವಾಕ್ಯಗಳನ್ನು ಜೀವವಾಕ್ಯದಂತೆ ಗ್ರಹಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದರು. ಪಾಪದಲ್ಲಿರುವವರು ಕ್ರಿಸ್ತನೊಂದಿಗೆ ಇರಲು ಸಾಧ್ಯವಿಲ್ಲ. ಕ್ರಿಸ್ತನೊಂದಿಗೆ ಇರುವವರು ಪಾಪದಲ್ಲಿ ಜೀವಿಸಲು ಇಷ್ಟಪಡುವುದಿಲ್ಲ. ಕ್ರಿಸ್ತನ ಕಡೆಗೆ ನಮ್ಮ ಹೃದಯಗಳನ್ನು, ಮನಸ್ಸನ್ನು ತಿರುಗಿಸೋಣ.
- ಫಾದರ್ ಪೀಟರ್ ಚಿನ್ನಪ್ಪ
No comments:
Post a Comment