ಫೆಬ್ರವರಿ ೨೨, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

22 ಫೆಬ್ರವರಿ 2೦19


ಶುಕ್ರವಾರ / ಬಿಳಿ /  ಪ್ರೇಷಿತ ಸಂತ ಪೇತ್ರನ ಅಧಿಕಾರ ಪೀಠದ ಹಬ್ಬ 
1ನೇ ವಾಚನ - 1 ಪೇತ್ರ 5: 1-4 
ಕೀರ್ತನೆ - 23: 1-6 
ಶುಭಸಂದೇಶ - ಮತ್ತಾಯ 16: 13-19 

ವಾಚನಗಳು
ಮೊದಲನೇ  ವಾಚನ


ಆದಿಕಾಂಡದಿಂದ ವಾಚನ
1 ಪೇತ್ರ 5: 1-4 
1ಕ್ರಿಸ್ತಯೇಸುವಿನ ಮರಣ-ಯಾತನೆಯನ್ನು ಕಣ್ಣಾರೆ ಕಂಡವನೂ ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಭಾಗಿಯಾಗಲಿರುವವನೂ ಸಭಾಪ್ರಮುಖನೂ ಆದ ನಾನು, ನಿಮ್ಮಲ್ಲಿ ಪ್ರಮುಖರಾದ ಇತರರನ್ನು ಪ್ರೋತ್ಸಾಹಿಸಿ ವಿನಂತಿಸುವುದೇನೆಂದರೆ: 2ನನ್ನ ಜೊತೆಹಿರಿಯರೇ, ದೇವರು ನಿಮಗೆ ವಹಿಸಿಕೊಟ್ಟಿರುವ ಮಂದೆಯನ್ನು ಕಾಯಿರಿ. ಕಡ್ಡಾಯದಿಂದಲ್ಲ, ದೇವರ ಚಿತ್ತಾನುಸಾರ ಅಕ್ಕರೆಯಿಂದ ಕಾಯಿರಿ. ದ್ರವ್ಯದ ದುರಾಶೆಯಿಂದಲ್ಲ, ಸೇವಾಸಕ್ತಿಯಿಂದ ಕಾಯಿರಿ. 3ನಿಮ್ಮ ಪಾಲನೆಗೆ ಒಳಗಾಗಿರುವವರ ಮೇಲೆ ದರ್ಪದಿಂದ ದೊರೆತನಮಾಡದೆ ದೇವರ ಮಂದೆಗೆ ಆದರ್ಶ ಮಾದರಿಗಳಾಗಿರಿ. 4ಆಗಮಾತ್ರ, ಪ್ರಧಾನ ಕುರಿಗಾಹಿ ಪ್ರತ್ಯಕ್ಷನಾಗುವಾಗ ಮಲಿನವಾಗದ ಮಹಿಮಾನ್ವಿತ ಜಯಮಾಲೆಯನ್ನು ಪಡೆಯುವಿರಿ.

12ನನ್ನ ಈ ಪುಟ್ಟ ಪತ್ರವನ್ನು ನಂಬಿಕಸ್ಥ ಸಹೋದರನಾದ ಸಿಲ್ವಾನನ ಸಹಾಯದಿಂದ ನಿಮಗೆ ಬರೆದಿರುತ್ತೇನೆ. ನಿಮ್ಮನ್ನು ಪ್ರೋತ್ಸಾಹಿಸಲೆಂದು ಮತ್ತು ಇದುವೇ ದೇವರ ನಿಜವಾದ ಅನುಗ್ರಹವೆಂದು ಸೃಷ್ಟೀಕರಿಸಲು ಬರೆದಿದ್ದೇನೆ. ಈ ಅನುಗ್ರಹದಲ್ಲಿ ನೀವು ದೃಢವಾಗಿ ನಿಲ್ಲಿರಿ. 13ನಿಮ್ಮ ಹಾಗೆ ದೇವರಿಂದ ಆಯ್ಕೆಯಾದ ಬಾಬಿಲೋನಿನಲ್ಲಿರುವ ಸಭೆ ನಿಮಗೆ ವಂದನೆಗಳನ್ನು ತಿಳಿಸುತ್ತದೆ. ಅಂತೆಯೇ, ನನ್ನ ಮಗನಂತಿರುವ ಮಾರ್ಕನು ನಿಮ್ಮನ್ನು ವಂದಿಸಿದ್ದಾನೆ. 14ಪ್ರೀತಿಯ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಯೇಸುಕ್ರಿಸ್ತರಲ್ಲಿರುವ ನಿಮ್ಮೆಲ್ಲರಿಗೂ ಶಾಂತಿ ಸಮಾಧಾನ ಲಭಿಸಲಿ !

ಕೀರ್ತನೆ 


ಕೀರ್ತನೆ 23: 1-6
ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?

ಪ್ರಭು ಕುರಿಗಾಹಿಯಾಗಿರಲು ನನಗೆ 
ಕುಂದುಕೊರತೆಗಳೆಲ್ಲಿಯವು ಎನಗೆ? 
ಹಸಿರುಗಾವಲುಗಳಲೆನ್ನ ತಂಗಿಸುವನು 
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು 
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ 
ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ 
ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ 
ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು
 ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು 
ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ 
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ


ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮತ್ತಾಯ 16: 13-19 
13ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. 14ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆವಿಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. 15ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. 16ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. 17ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. 18ನಾನು ನಿನಗೆ ಹೇಳುತ್ತೇನೆ, ಕೇಳು "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. 19ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು."

ಚಿಂತನೆ
ಪ್ರೇಷಿತ ಪೇತ್ರನ ಅಧಿಕಾರಪೀಠ

ಧರ್ಮಸಭೆಯ ಐಕ್ಯತೆಯನ್ನು ಸೂಚಿಸುವ ಈ ಹಬ್ಬವನ್ನು 4ನೇ ಶತಮಾ?ದಿಂದ ರೋಮ್ನಗರದಲ್ಲಿ ಆಚರಿಸಲಾಗುತ್ತಿದೆ. ಇದು ಪ್ರೇಷಿತ ಪೇತ್ರನ ಮತ್ತು ಆತನ ಉತ್ತರಾಧಿಕಾರಿಯ ಸೇವಾ ಅಧಿಕಾರ ಪೀಠದ ಹಬ್ಬವಾಗಿದೆ. ಹಾಗಾಗಿ ಇದು ಜಗದ್ಗುರುಗಳ ಅಧಿಕಾರ ಪೀಠದ ಹಬ್ಬವಾಗಿದೆ.
ಮತ್ತಾಯನ ಶುಭಸಂದೇಶ ಅಧ್ಯಾಯ 16ರಲ್ಲಿ ನೋಡುವಂತೆ ಯೇಸು ಪೇತ್ರನನ್ನು ಉದ್ದೇಶಿಸಿ ``ನಿನ್ನ ಹೆಸರು ಪೇತ್ರ, ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಆದನ್ನು ಎಂದಿಗೂ ಜಯಿಸದು ......'' ಯೇಸು ಚಿರಾಯುವಾಗಿ ನಮ್ಮೊಡನೆ ಜೀವಿಸಲು ಧರ್ಮಸಭೆಯನ್ನು ಕಟ್ಟಿದರು. 1 ಪೇತ್ರ 5:1-4ರಲ್ಲಿ ಪೇತ್ರನು ನೀಡುವ ಸಂದೇಶ ಜಗದ್ದುರು, ಧರ್ಮಾಧ್ಯಕ್ಷರುಗಳು ಮತ್ತು ಗುರುಗಳಿಗೆ ಅನ್ವಯಿಸುತ್ತದೆ. ``ದೇವರು ನಿಮಗೆ ವಹಿಸಿಕೊಡುವ ಮಂದೆಯನ್ನು ಕಾಯಿರಿ. ಕಡ್ಡಾಯದಿಂದಲ್ಲ, ದೇವರ ಚಿತ್ತಾನುಸಾರ ಅಕ್ಕರೆಯಿಂದ ಕಾಯಿರಿ. ದ್ರವ್ಯದ ದುರಾಸೆಯಿಂದಲ್ಲ, ಸೇವಾಸಕ್ತಿಯಿಂದ ಕಾಯಿರಿ.'' ನಿಮ್ಮ ಪಾಲನೆಗೆ ಒಳಾಗಾಗಿರುವವರ ಮೇಲೆ ದರ್ಪದಿಂದ ದೊರೆತನ ಮಾಡದೆ ದೇವರ ಮಂದೆಗೆ ಆದರ್ಶ ಮಾದರಿಗಳಾಗಿರಿ.




ಸಂತ ಪೇತ್ರರ ಪೀಠಾರೋಹಣ 

ರೋಮನ್ ಕಥೋಲಿಕ ಧರ್ಮಸಭೆಯು ಆದಿ ಧರ್ಮಸಭೆಯ ಕಾಲದಿಂದಲೂ ಸಂತ ಪೇತ್ರರ ಪೀಠಾರೋಣದ ಸ್ಮರಣೆಯನ್ನು ಆಚರಿಸಿಕೊಂಡು ಬರುತ್ತಿದೆ. ಪ್ರೇಷಿತ ಪೀಠಕ್ಕೆ ವಿಶೇಷವಾದ ಪ್ರೀತಿ ಮತ್ತು ವಿಧೇಯತೆಯನ್ನು ತೋರುತ್ತಾ ಗೌರವಿಸುವುದು ಪ್ರತಿಯೊಬ್ಬ ಕಥೋಲಿಕ ಕ್ರೈಸ್ತನ ಆದ್ಯ ಕರ್ತವ್ಯವಾಗಿದೆ. ಪೀಠ ಎಂದಿಗೂ ಬರೀ ಅಧಿಕಾರ ಹಾಗೂ ದರ್ಪದ ಸಂಕೇತವಲ್ಲ. ಬದಲಾಗಿ ಆ ಪೀಠವನ್ನು ಅಲಂಕರಿಸುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿ ಮತ್ತು ಸೇವೆಯ ದ್ಯೋತಕವಾಗಬೇಕು ಎಂಬ ಸತ್ಯವನ್ನು ಸಾರುತ್ತದೆ. ’ಒಬ್ಬ ವ್ಯಕ್ತಿಯ ಅಸಲಿ ವ್ಯಕ್ತಿತ್ವ ಅನಾವರಣಗೊಳ್ಳುವುದು ಆತ ಅಧಿಕಾರದಲ್ಲಿದ್ದಾಗ’ ಎಂಬ ಮಾತಿನಲ್ಲಿ ಸಾಕಷ್ಟು ಸತ್ಯವಿರುವಂತೆ, ಆ ಪ್ರೇಷಿತ ಪೀಠವನ್ನು ಪ್ರಪ್ರಥಮ ಬಾರಿಗೆ ಅಲಂಕರಿಸಿದ ಸಂತ ಪೇತ್ರರು ಶುಭಸಂದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುತ್ತಾರೆ. ತಾನು ದೈವ ಪುತ್ರನಾದರೂ ಸಹ ’ನರಪುತ್ರನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಸೇವೆ ಮಾಡಲು ಬಂದಿರುವನು’ಎಂಬ ನುಡಿಗೆ ಅನುಸಾರವಾಗಿ ಕ್ರಿಸ್ತರು ದೀನದಲಿತರಿಗೆ ಶುಭಸಂದೇಶ ಸಾರಿದಂತೆ, ಅವರ ಕಷ್ಟಗಳಿಗೆ ಸ್ಪಂದಿಸುತ್ತ ಉಪಶಮನ ದಯಪಾಲಿಸಿದಂತೆ ಪೇತ್ರರು ಸಹ ಬಾಳಿದರು. ಜೀವನದಲ್ಲಿ ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರಿಗೇ ಪ್ರಥಮ ಸ್ಥಾನ ನೀಡುತ್ತ, ದೈವವಾಕ್ಯವನ್ನು ಕೊನೆತನಕವೂ ಸಾರಿದ ಅವರ ದೀನತೆ ಮತ್ತು ದೈರ್ಯ ಅನುಕರಣೀಯ.

ಚಿತ್ರ: ಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment