ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.
7 ಜನವರಿ 2019
ಸೋಮವಾರ/ಬಿಳಿ/ದೈವದರ್ಶನದ
ನಂತರದ ಸೋಮವಾರ
1ನೇ ವಾಚನ
- 1ನೇ ಯೊವಾನ್ನ
3: 22 -4: 6
ಕೀರ್ತನೆ -
2: 7-8, 1೦-11
ಶುಭಸಂದೇಶ - ಮತ್ತಾಯ
4: 12-17, 23-25
ಐಚ್ಛಿಕ ಸ್ಮರಣೆ - ಸಂತ
ಪೆನ್ಯಪೋರ್ಟಿನ ಸಂತ ರೇಮಂಡ್
ವಾಚನಗಳು
ಮೊದಲನೇ ವಾಚನ
ಸಂತ ಯೊವಾನ್ನನು ಬರೆದ ಮೊದಲ ಪತ್ರದಿಂದ ವಾಚನ
22ನಾವು ದೇವರ ಆಜ್ಞೆಗಳಿಗೆ ವಿಧೇಯರಾಗಿ
ಅವರಿಗೆ ಮೆಚ್ಚುಗೆಯಾದವುಗಳನ್ನೇ ಮಾಡುವುದರಿಂದ ನಾವು ಕೋರುವುದೆಲ್ಲವನ್ನೂ ಅವರಿಂದ ಪಡೆಯುತ್ತೇವೆ. 23ನಾವು ದೇವರ ಪುತ್ರ ಯೇಸುಕ್ರಿಸ್ತರ
ನಾಮದಲ್ಲಿ ವಿಶ್ವಾಸವಿಟ್ಟು ಅವರು ವಿಧಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದೇ ಅವರ ಆಜ್ಞೆ. 24ದೇವರ ಆಜ್ಞೆಯನ್ನು ಪಾಲಿಸುವವನು ಅವರಲ್ಲಿ
ನೆಲೆಸಿರುತ್ತಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ದೇವರು ನಮ್ಮಲ್ಲಿ ನೆಲೆಸಿದ್ದಾರೆಂದು ಅವರು
ದಯಪಾಲಿಸುವ ಪವಿತ್ರಾತ್ಮರಿಂದಲೇ ತಿಳಿದುಕೊಳ್ಳುತ್ತೇವೆ.
4:1ಪ್ರಿಯರೇ, ನಾವು ಪವಿತ್ರಾತ್ಮ ಪ್ರೇರಿತರು
ಎಂದು ಹೇಳುವ ಎಲ್ಲರನ್ನೂ ನಂಬಬಾರದು. ಆ ಪ್ರೇರಣೆ ದೇವರಿಂದ ಬಂದಿದೆಯೇ ಎಂದು ಪರೀಕ್ಷಿಸಿ ನೋಡಬೇಕು.
ಏಕೆಂದರೆ, ಎಷ್ಟೋ ಮಂದಿ ಕಪಟ ಪ್ರವಾದಿಗಳು ಎಲ್ಲೆಡೆಯಲ್ಲೂ ಹರಡಿದ್ದಾರೆ. 2ದೇವರ ಆತ್ಮದಿಂದ ಬಂದ
ಪ್ರೇರಣೆಯನ್ನು ನೀವು ಹೀಗೆ ಗುರುತಿಸಬಹುದು: ಮನುಷ್ಯ ಆಗಿ ಬಂದ ಕ್ರಿಸ್ತಯೇಸುವನ್ನು ಒಪ್ಪಿಕೊಳ್ಳುವ
ಆತ್ಮವು ದೇವರಿಂದ ಪ್ರೇರಿತವಾದುದು. 3ಯೇಸುವನ್ನು ಒಪ್ಪಿಕೊಳ್ಳದ ಆತ್ಮ ದೇವರಿಂದ
ಪ್ರೇರಿತವಾದುದಲ್ಲ. ಅದು ಕ್ರಿಸ್ತ ವಿರೋಧಿಯ ಆತ್ಮ. ಅದು ಬರುವುದೆಂದು ನೀವು ಕೇಳಿದ್ದೀರಿ; ಈಗಾಗಲೇ
ಅದು ಲೋಕದಲ್ಲಿ ತಲೆದೋರಿದೆ.
4ಪ್ರಿಯ ಮಕ್ಕಳೇ, ನೀವಂತೂ ದೇವರಿಗೆ ಸೇರಿದವರು. ಲೋಕದಲ್ಲಿರುವ
ದುರಾತ್ಮಕ್ಕಿಂತಲೂ ನಿಮ್ಮಲ್ಲಿರುವ ಆತ್ಮವು ಶ್ರೇಷ್ಠವಾದುದು. ಆದ್ದರಿಂದಲೇ ಆ ಕಪಟ ಪ್ರವಾದಿಗಳನ್ನು
ಜಯಿಸಿದ್ದೀರಿ. 5ಅವರು ಲೋಕಕ್ಕೆ ಸೇರಿದವರು. ಆದ್ದರಿಂದ
ಅವರು ಲೌಕಿಕವಾದುದನ್ನೇ ಮಾತನಾಡುತ್ತಾರೆ. ಎಂದೇ, ಲೋಕವು ಅವರಿಗೆ ಕಿವಿಗೊಡುತ್ತದೆ. 6ನಾವಾದರೋ ದೇವರಿಗೆ ಸೇರಿದವರು. ದೇವರನ್ನು
ಅರಿತವನು ನಮಗೆ ಕಿವಿಗೊಡುತ್ತಾನೆ. ದೇವರಿಗೆ ಸೇರದವನು ನಮಗೆ ಕಿವಿಗೊಡುವುದಿಲ್ಲ. ಇದರಿಂದಲೇ ಸತ್ಯವನ್ನು
ಸಾರುವ ಆತ್ಮ ಯಾವುದು ಮತ್ತು ಅಸತ್ಯವನ್ನು ಸಾರುವ ಆತ್ಮ ಯಾವುದು ಎಂಬುದು ನಮಗೆ ತಿಳಿಯುತ್ತದೆ.
ಕೀರ್ತನೆ
ಶ್ಲೋಕ: ನಿನಗಧೀನಮಾಡುವೆನು
ರಾಷ್ಟ್ರಗಳನು|
ಕೊಡುವೆನು ನಿನಗೆ ಸ್ವಾಸ್ತ್ಯವಾಗಿ ಜಗದ ಆದ್ಯಂತವನು||
7 ಕೇಳಿರೀ ದೈವಾಜ್ಞೆಯನು: ಆತನು ಎನಗಿಂತೆದನುI
“ಈ ದಿನ ನಾನಿನ್ನ ಹಡೆದಿಹೆನು: ನೀನೆನಗೆ ಮಗನು||
8 ಕೇಳಿದೆಯಾದರೆ ನಿನಗಧೀನಮಾಡುವೆನು ರಾಷ್ಟ್ರಗಳನು|
ಕೊಡುವೆನು ನಿನಗೆ ಸ್ವಾಸ್ತ್ಯವಾಗಿ ಜಗದ ಆದ್ಯಂತವನು||
10 ಎಂತಲೇ ವಿವೇಕಿಗಳಾಗಿರಿ, ರಾಜರುಗಳೇ, ಬುದ್ಧಿವಾದಕೆ ಕಿವಿಗೊಡಿ, ದೇಶಾಧಿಪತಿಗಳೇ||
11 "ಭಯಭಕುತಿಯಿಂದ ಪ್ರಭುವಿಗೆ ಸೇವೆ ಮಾಡಿರಿ|
ನಡುನಡುಗುತ ಆತನ ಪಾದಪೂಜೆ ಮಾಡಿರಿ”||
12 ಇಲ್ಲದಿರೆ ಭುಗಿಲೆದ್ದೀತು ಆತನ ಕೋಪಾವೇಶ|
ಮಾರ್ಗ ಮಧ್ಯದಲೇ ಕಾದಿರಬಹುದು ನಿಮಗೆ ವಿನಾಶ|
ಆತನನು
ಆಶ್ರಯಿಸುವವರಿಗಿದೆ ಸೌಭಾಗ್ಯ ಸಂತೋಷ||
ಶುಭಸಂದೇಶ
ಸಂತ ಮತ್ತಾಯನು ಬರೆದ ಶುಭಸಂದೇಶದಿಂದ ವಾಚನ
12ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ
ಹೊರಟುಹೋದರು. 13ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸವಿಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ
ವಾಸಮಾಡಿದರು. 14ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ.
ಹೀಗೆ:
"ಜೆಬುಲೋನ್
ನಾಡೇ, ನೆಫ್ತಲೀಮ್ ನಾಡೇ,
ಸರೋವರದ
ಹತ್ತಿರವಿರುವ ಹಾದಿಬೀದಿಯೇ,
ಜೋರ್ಡನಿನ
ಹೊರವಲಯವೇ,
16ಕಾರ್ಗತ್ತಲಲ್ಲಿ ವಾಸಿಸುವವರಿಗೆ
ದಿವ್ಯ ಜ್ಯೋತಿಯೊಂದು ಕಾಣಿಸಿತು.
ಮರಣಛಾಯೆ
ಕವಿದ ನಾಡಿಗರಿಗೆ
ಅರುಣೋದಯವಾಯಿತು,"
ಎಂದು
ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು.
17ಅಂದಿನಿಂದ ಯೇಸು, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ,
ಸ್ವರ್ಗಸಾಮ್ರಾಜ್ಯ ಸಮೀಪಿಸಿತು," ಎಂಬ ಸಂದೇಶವನ್ನು ಬೋಧಿಸತೊಡಗಿದರು. 23ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶ
ಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರಹದ
ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು.
24ಅವರ ಕೀರ್ತಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿತು. ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ
ಪಾರ್ಶ್ವವಾಯು ಪೀಡಿತರನ್ನೂ ನಾನಾ ತರಹದ ವ್ಯಾಧಿ ಹಾಗೂ ವೇದನೆಯಿಂದ ನರಳುತ್ತಿದ್ದ ಎಲ್ಲ
ರೋಗಿಗಳನ್ನೂ ಅವರ ಬಳಿಗೆ ಕರೆ ತಂದರು. ಯೇಸು ಅವರೆಲ್ಲರನ್ನು ಸ್ವಸ್ಥಪಡಿಸಿದರು. 25ಗಲಿಲೇಯ, ದೆಕಪೊಲಿ, ಜೆರುಸಲೇಮ್, ಜುದೇಯ ಎಂಬ ಸ್ಥಳಗಳಿಂದಲೂ ಜೋರ್ಡನ್ ನದಿಯ ಆಚೆಕಡೆಯಿಂದಲೂ
ಜನರು ತಂಡೋಪ ತಂಡವಾಗಿ ಬಂದು ಯೇಸುವನ್ನು ಹಿಂಬಾಲಿಸಿದರು.
ಚಿಂತನೆ
ವಿಶ್ವಾಸ ಮತ್ತು ಮನಪರಿವರ್ತನೆ
ವಿಶ್ವಾಸ ಮತ್ತು ಮನಪರಿವರ್ತನೆ
ದೇವರ ವಾಕ್ಯವನ್ನು ನಾಶ ಆಥವಾ ದಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸ್ನಾನಿಕ ಯೊವಾನ್ನ ಧೈರ್ಯದಿಂದ ಅನ್ಯಾಯವನ್ನೂ ಅಸತ್ಯವನ್ನೂ ಖಂಡಿಸಿದ. ಅದಕ್ಕೆ ಆತನಿಗೆ ಸಿಕ್ಕಿದ ಪ್ರತಿಫಲ ಮರಣದಂಡನೆ. ಸ್ನಾನಿಕ ಯೊವಾನ್ನನ ನಂತರ ಕ್ರಿಸ್ತ ತುಂಬಾ ಸಕ್ರಿಯರಾಗುತ್ತಾರೆ. ಯಾರಿಗೂ ಅಂಜದೆ ಯೆಹೂದ್ಯ ಮತ್ತು ಅನ್ಯ ಧರ್ಮದ ಜನರನ್ನು ವಿಶ್ವಾಸಕ್ಕೆ ಆಹ್ವಾನಿಸುತ್ತಾರೆ. ವಿಶ್ವಾಸ ಮತ್ತು ಮನಪರಿವರ್ತನೆಯಿಂದ ಮಾತ್ರ ಸ್ವರ್ಗ ಸಾಮ್ರಾಜ್ಯಕ್ಕೆ ಪ್ರವೇಶ ಎಂಬುದನ್ನು ಮನಗಾಣಿಸುತ್ತಾರೆ.
ಇಂದಿನ ಸಂತರು
ಇಂದಿನ ಸಂತರು
ಪೆನ್ಯಫೋರ್ಟಿನ ಸಂತ ರೈಮಂಡ್ (ಸು. 1175-1275)
ಸಂತ ರೈಮಂಡ್‌ರವರು ಸ್ಪಾನಿಷ್ ಪಾದ್ರಿ. 20ನೇ ಶತಮಾನದವರೆಗೂ ಚಾಲ್ತಿಯಲ್ಲಿದ್ದ ಧರ್ಮಸಭೆಯ ನೀತಿನಿಯಮಗಳ ಸಂಗ್ರಹವನ್ನು ರಚಿಸಿದ ಕೀರ್ತಿ ಇವರದು. ಈ ಸಂತರು, ನ್ಯಾಯವಾದಿಗಳ, ಅದರಲ್ಲೂ ಕ್ಯಾಥೊಲಿಕ್ ಚರ್ಚ್ ವಿಷಯಗಳ ಕಾನೂನನ್ನು ಅಧ್ಯಯನ ಮಾಡಿದ ನ್ಯಾಯವಾದಿಗಳ ಪೋಷಕರು.
ಸ್ಪೇನಿನ ಕ್ಯಾಟಲೋನಿಯಾದ ಬಾರ್ಸಿಲೋನ ಬಳಿಯ ಒಂದು ಚಿಕ್ಕ ಊರಿನಲ್ಲಿ ಇವರ ಜನನವಾಗುತ್ತದೆ. ವಿದ್ಯಾಭ್ಯಾಸ, ಬಾರ್ಸಿಲೋನದ, ಬೋಲೋನದ, ವಿಶ್ವವಿದ್ಯಾಲಯಗಳಲ್ಲಿ. ಸಿವಿಲ್ ಹಾಗೂ ಧರ್ಮಸಭೆಯ ಕಾನೂನುಗಳಲ್ಲಿ ಡಾಕ್ಟರೇಟ್ ಪದವಿ ಪಡೆದ ನಂತರ, 15 ವರ್ಷಗಳ ಕಾನೂನು ಅಧ್ಯಾಯನ. ಮುಂದೆ, ಪ್ರಾಧ್ಯಾಪಕರಾದ ಅವರಿಗೆ, ಹೊಸದಾಗಿ ರಚಿತವಾದ ಡಾಮಿನಿಕನ್ ವಿಭಾಗದ ಪರಿಚಯವಾಗುತ್ತದೆ. ಅಲ್ಲಿನ ಪ್ರಬೋಧನೆಗಳಿಂದ ಆಕರ್ಷಿತರಾಗುವ ಅವರು ತಮ್ಮ 47ನೇ ವಯಸ್ಸಿನಲ್ಲಿ ಯಾಜಕರಾಗುತ್ತಾರೆ.
ಸಂತ ರೈಮಂಡ್ ನವರು, “ಮರ್ಸಿಡೇರಿಯನ್ ಪಾದ್ರಿಗಳು” ಎನ್ನುವ ವಿಭಾಗ(ಆರ್ಡರ್)ವನ್ನು ಸ್ಥಾಪನೆಮಾಡಿದವರು. ಈ ಕಾರ್ಯಕ್ಕೆ ಆರೆಗಾನ್ 1ನೇ ಜೇಮ್ಸ್ ನವರ ಒಪ್ಪಿಗೆಯೂ ಸಿಗುತ್ತದೆ. ಇದರಿಂದಾಗಿ ಯಾಜಕರುಗಳು, ಬೇರೆಬೇರೆ ಭಾಷೆಗಳನ್ನು ಕಲಿಯಲು ಸಹಾಯಕವಾಗುತ್ತದೆಯಲ್ಲದೆ ಅವರು ಮುಸ್ಲಿಂ ರಾಷ್ಟ್ರಗಳಲ್ಲೂ ದೇವರ ಸೇವೆ ಮಾಡಲು ಅನುಕೂಲವಾಗುತ್ತದೆ.
ಪಾಪನಿವೇದನೆಯನ್ನು ಕೇಳಿಸಿಕೊಳ್ಳುವವರಿಗೆ ಸಹಾಯವಾಗಲು ಒಂದು ಹೊತ್ತಗೆ ಬರೆದು, ಅದರಲ್ಲಿ, ಯಾವಯಾವ ಪಾಪಕ್ಕೆ ಯಾವಯಾವ ಪ್ರಾಯಶ್ಚಿತ್ತ ಹೇಳಬೇಕು ಎಂದೂ ನಮೂದಿಸುತ್ತಾರೆ. ಇದು, ಯಾಜಕರುಗಳಲ್ಲಿ ತುಂಬಾ ಪ್ರಸಿದ್ದಿಯನ್ನು ಪಡೆಯುತ್ತದೆ.
ಕ್ರಮೇಣ, 9ನೇ ಪೋಪ್ ಗ್ರಿಗೊರಿಯವರು, ರೈಮಂಡ್‌ರವರನ್ನು ತಮ್ಮ ವಿಶೇಷ ಸಹಾಯಕರನ್ನಾಗಿಯೂ, ಮಹಾ ಸುಧಾರಣಾಗೃಹದ ಮುಖ್ಯಾಧಿಕಾರಿಯನ್ನಾಗಿಯೂ ನೇಮಿಸುತ್ತಾರೆ. ಕಾನೂನುತಜ್ಞರೂ ಆಗಿದ್ದ ಇವರ ಮೂಲಕ ಪೋಪ್‌ರವರು, ಕ್ಯಾಥೊಲಿಕ್ ಸಭೆಯ ನೀತಿನಿಯಮ ಕಾನೂನು ಕಾಯಿದೆಗಳನ್ನು ಒಂದು ಚೌಕಟ್ಟಿಗೆ ತರುವಂತಹ ಕಾರ್ಯ ಕೈಗೊಳ್ಳುತ್ತಾರೆ.
ಆಗ ಅರಸರಾಗಿದ್ದ 1ನೇ ಜೇಮ್ಸ್ರವರು ಧರ್ಮಸಭೆಗೆ ಬಹಳ ನಿಷ್ಠರಾಗಿದ್ದರೂ, ಕಾಮಾಭಿಲಾಷೆಗೆ ದಾಸರಾಗಿದ್ದರು. ಒಮ್ಮೆ, ಒಂದು ದ್ವೀಪದಲ್ಲಿ ನಡೆಯುತ್ತಿದ್ದ ಧಾರ್ಮಿಕ ಪರಿವರ್ತನಾ ಕೂಟಕ್ಕೆ ಅವರು, ತಮ್ಮ ಪ್ರೇಯಸಿಯನ್ನು ಕರೆದುಕೊಂಡು ಬಂದಿದ್ದನ್ನು ರೈಮಂಡರು ಕಂಡು ಅದಕ್ಕೆ ಕಟುವಾದ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ಅರಸರು ಸ್ಪಂದಿಸದೆ ಇದ್ದಾಗ, ಅವರ ಸಹವಾಸವನ್ನೇ ತೊರೆಯುತ್ತಾರೆ. ಅರಸರು ಕ್ರುದ್ಧರಾಗಿ, ರೈಮಂಡ್‌ರವರನ್ನು ಅದೇ ದ್ವೀಪದಲ್ಲಿ ನಿರ್ಬಂಧದಲ್ಲಿರಿಸುತ್ತಾರೆ. ಪವಾಡಪುರುಷರಾದ ರೈಮಂಡ್‌ರವರು, ತಮ್ಮ ಮೇಲುಹೊದಿಕೆಯ ಒಂದು ಭಾಗವನ್ನು ನೀರಿನಲ್ಲಿ ಮುಳುಗಿಸಿ, ಇನ್ನೊಂದು ಭಾಗವನ್ನು ತಮ್ಮ ಕೈಕೋಲಿಗೆ ಕಟ್ಟಿ, ಅದರಲ್ಲೇ ಮೈಲಿಗಟ್ಟಲೆ ದಾಟಿ, ಒಂದು ಅದ್ಭುತಕಾರ್ಯವನ್ನೇ ಮೆರೆಯುತ್ತಾರೆ! ಇದನ್ನು ಕಂಡ ಅರಸರು, ತಮ್ಮ ಎಲ್ಲಾ ದುಷ್ಟತನವನ್ನೂ ತೊರೆದು, ಮುಂದೆ ಒಳ್ಳೇ ಕ್ರೈಸ್ತರೆನಿಸಿಕೊಳ್ಳುತ್ತಾರೆ.
ಸಂತ ರೈಮಂಡ್‌ರವರ ಇಳಿವಯಸ್ಸಿನಲ್ಲಿ ಆರ್ಚ್ ಬಿಷಪ್ ಆಗಲು ಕರೆ ಬಂದರೂ ಒಪ್ಪಿಕೊಳ್ಳದೆ, ಬಾರ್ಸಿಲೋನಾದಲ್ಲೇ ಉಳಿಯುತ್ತಾರೆ. ಪ್ರಬೋಧಕರ ನಾಯಕರಾಗಿದ್ದ ಇವರು, ಆ ಪ್ರದೇಸದ ಎಲ್ಲಾ ಪಾದ್ರಿಗಳ, ಕನ್ಯಾಸ್ತ್ರೀಯರ ನಿವಾಸಗಳಿಗೂ ಭೇಟಿ ಕೊಡುತ್ತಿದ್ದರಾದರೂ ಮುಂದೆ, ಅದನ್ನೂ ನಿಲ್ಲಿಸುತ್ತಾರೆ.
ಅರಸರಿಗೆ ಸಲಹೆಗಾರರಾಗಿದ್ದ ಸಂತ ರೈಮಂಡ್‌ರವರು, ಕ್ರಮಬದ್ಧ ವಿಚಾರಣೆ (ಇಂಕ್ವಿಸಿಷನ್) ಬಗೆಗಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಸೆರೆಯಲ್ಲಿದ್ದವರು, ತಮ್ಮ ಪತ್ನಿಯರನ್ನು ಭೇಟಿಯಾಗಲು ಅನುಮತಿ ನೀಡಿದ್ದರು. ಇಬ್ರಿಯ ಹಾಗೂ ಕ್ಯಾಥೊಲಿಕ್‍ಗಳ ನಡುವೆ ಚರ್ಚೆಯನ್ನು ರಾಜಸನ್ನಿಧಾನದಲ್ಲಿ ಇವರು ಏರ್ಪಡಿಸಿದ್ದೊಂದು ವಿಶೇಷವೇ ಸರಿ.
1601ರಲ್ಲಿ 8ನೇ ಪೋಪ್ ಕ್ಲೆಮೆಂಟ್‍ರವರು ರೈಮಂಡ್‍ನವರು ಸಂತರೆಂದು ಘೋಷಿಸುತ್ತಾರೆ. ಧಾರ್ಮಿಕ ನ್ಯಾಯವಾದಿಗಳ ಪೋಷಕ ಸಂತರೆನಿಸಿದ. ಇವರ ಪುಣ್ಯದಿನವು ಜನವರಿ 7 ರಂದು ನಡೆಯುತ್ತದೆ.
ಚಿತ್ರಗಳು : ಗೂಗಲ್ ಕೃಪೆ

No comments:
Post a Comment