ಜನವರಿ ೯, ೨೦೧೯

ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

9 ಜನವರಿ 2019

ಬುಧವಾರ/ಬಿಳಿ/ ದೈವದರ್ಶನದ ನಂತರದ ಬುಧವಾರ
1ನೇ ವಾಚನ - 1 ಯೊವಾನ್ನ 4: 11-18
ಕೀರ್ತನೆ  -  72:  1-2,  1೦-13
ಶುಭಸಂದೇಶ  -  ಮಾರ್ಕ  6:  45-52



ವಾಚನಗಳು
ಮೊದಲನೇ ವಾಚನ

ಸಂತ ಯೊವಾನ್ನನು ಬರೆದ ಮೊದಲ ಪತ್ರದಿಂದ ವಾಚನ

11ಪ್ರಿಯರೇ, ದೇವರೇ ನಮ್ಮನ್ನು ಇಷ್ಟಾಗಿ ಪ್ರೀತಿಸಿರುವಲ್ಲಿ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸಲೇಬೇಕು. 12ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೂ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಸಿರುತ್ತಾರೆ. ಅವರ ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬರುತ್ತದೆ. 13ದೇವರು ನಮಗೆ ತಮ್ಮ ಆತ್ಮವನ್ನು ನೀಡಿರುವುದರಿಂದಲೇ ನಾವು ಅವರಲ್ಲಿಯೂ ಅವರು ನಮ್ಮಲ್ಲಿಯೂ ನೆಲೆಸಿರುವುದನ್ನು ತಿಳಿದುಕೊಳ್ಳುತ್ತೇವೆ. 14ಪಿತನು ತಮ್ಮ ಪುತ್ರನನ್ನು ಲೋಕೋದ್ಧಾರಕನನ್ನಾಗಿ ಕಳುಹಿಸಿಕೊಟ್ಟದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇದರ ವಿಷಯವಾಗಿ ಸಾಕ್ಷಿ ಹೇಳುತ್ತೇವೆ. 15ಯೇಸುವೇ ದೇವರ ಪುತ್ರನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲೆಸಿದ್ದಾರೆ; ಅವನೂ ದೇವರಲ್ಲಿ ನೆಲೆಸಿದ್ದಾನೆ. 16ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿ ನಮಗೆ ಗೊತ್ತಿದೆ. ಅದರಲ್ಲಿ ನಮಗೆ ವಿಶ್ವಾಸವಿದೆ. ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. 17ಇದರಿಂದಾಗಿ, ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬಂದಿರುತ್ತದೆ; ನ್ಯಾಯತೀರ್ಪಿನ ದಿನದಂದು ನಾವು ಭರವಸೆಯಿಂದಿರುತ್ತೇವೆ. ಈ ಲೋಕದಲ್ಲಿ ನಮ್ಮ ಬಾಳು ಕ್ರಿಸ್ತಯೇಸುವಿನ ಬಾಳಿನಂತೆ ಇರುವುದರಿಂದಲೇ ಆ ಭರವಸೆ ನಮಗೆ ಇರುತ್ತದೆ. 18ಪ್ರೀತಿ ಇರುವಲ್ಲಿ ಭೀತಿ ಇರುವುದಿಲ್ಲ. ಪೂರ್ಣ ಪ್ರೀತಿ ಭೀತಿಯನ್ನು ಹೊರದೂಡುತ್ತದೆ. ಭೀತಿ ಇರುವಲ್ಲಿ ಯಾತನೆ ಇರುತ್ತದೆ. ಭೀತಿಯಿಂದಿರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ.

ಕೀರ್ತನೆ 
        
ಶ್ಲೋಕ: ರಾಷ್ಟ್ರಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ

1 :   ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ|
       ಕಲಿಸು ನಿನ್ನ ನೀತಿಯನು ರಾಜಕುವರನಿಗೆ||
2 :   ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ|
       ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ ||
10 : ಕಷ್ಟಗಳನರ್ಪಿಸಲಿ ತಾರ್ಷಿಷ್ ಹಾಗೂ ದ್ವೀಪದ್ವೀಪದ ರಾಜರುಗಳು|
      ಕಾಣಿಕೆಗಳ ತಂದೊಪ್ಪಿಸಲಿ ಶೆಬಾ ಹಾಗೂ ಸೆಬಾದ ರಾಜರುಗಳು //
12 : ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು|
       ಉದ್ಧರಿಸುವನಾತ ದಿಕ್ಕಿಲ್ಲದ ದೀನದಲಿತರನು||

13 : ದೀನದರಿದ್ರರಿಗೆ ದಯೆಯ ತೋರುವನು|
       ದಲಿತರ ಪ್ರಾಣವನು ಕಾಪಾಡುವನು||


ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

45ಇದಾದಮೇಲೆ ಯೇಸುಸ್ವಾಮಿ, ತಾವು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಸರೋವರದ ಆ ಕಡೆಗಿದ್ದ ಬೆತ್ಸಾಯಿದಕ್ಕೆ ಹೋಗುವಂತೆ ಆಜ್ಞಾಪಿಸಿದರು. 46ಜನರನ್ನು ಬೀಳ್ಕೊಟ್ಟ ಬಳಿಕ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋದರು.  47ಕತ್ತಲೆ ಕವಿದಾಗ ದೋಣಿಯು ಸರೋವರದ ಮಧ್ಯೆ ಸಾಗಿತ್ತು. ಇತ್ತ ಯೇಸು ಒಬ್ಬರೇ ದಡದಲ್ಲಿದ್ದರು. 48ಎದುರುಗಾಳಿ ಬೀಸುತ್ತಿದ್ದುದರಿಂದ ಶಿಷ್ಯರು ಹುಟ್ಟುಹಾಕಿ ದಣಿದು ಹೋಗಿದ್ದರು. ಇದನ್ನು ಕಂಡ ಯೇಸು ಸರೋವರದ ನೀರಿನ ಮೇಲೆ ನಡೆದುಕೊಂಡು ಅವರ ಕಡೆಗೆ ಬಂದು, ಅವರನ್ನು ದಾಟಿ ಮುಂದೆ ಹೋಗುವುದರಲ್ಲಿದ್ದರು. 

49ಆಗ ಸುಮಾರು ರಾತ್ರಿಯ ಕಡೇ ಜಾವದ ಸಮಯ. ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ಶಿಷ್ಯರು ನೋಡಿದರು; ಭೂತವೆಂದು ಭಾವಿಸಿ ಭಯದಿಂದ ಚೀರಿದರು. ಅವರೆಲ್ಲರೂ ಯೇಸುವನ್ನು ನೋಡಿ ದಿಗಿಲುಗೊಂಡಿದ್ದರು. 50ತಕ್ಷಣವೇ ಯೇಸು ಅವರೊಡನೆ ಮಾತನಾಡುತ್ತಾ, ಭಯಪಡಬೇಡಿ, ಬೇರೆ ಯಾರೂ ಅಲ್ಲ, ನಾನೇ; ಧೈರ್ಯದಿಂದಿರಿ, ಎಂದು ಅವರೊಡನೆ ಮಾತಾಡಿ ದೋಣಿಯನ್ನು ಹತ್ತಿದರು. 51ಆಗ ಎದುರುಗಾಳಿ ನಿಂತು ಹೋಯಿತು. ಶಿಷ್ಯರು ಬೆಕ್ಕಸಬೆರಗಾದರು. ಅವರ ಬುದ್ಧಿ ಮಂದವಾಗಿತ್ತು. 52ರೊಟ್ಟಿಗಳ ಅದ್ಭುತವನ್ನು ಅವರು ಇನ್ನೂ ಗ್ರಹಿಸಿಕೊಂಡಿರಲಿಲ್ಲ. 

ಚಿಂತನೆ
ಪ್ರಸನ್ನತೆಯ ಸ್ಥಳ

ಐದು ಸಾವಿರ ಜನರಿಗೆ ಭೋಜನ ನೀಡಿದ ನಂತರ ಯೇಸು ಪ್ರಾರ್ಥಿಸಲು ಬೆಟ್ಟಕ್ಕೆ ತೆರಳುತ್ತಾರೆ. ಯೆಹೂದ್ಯರ ನಂಬಿಕೆಯ ಪ್ರಕಾರ ಬೆಟ್ಟವು ದೇವರ ಪ್ರಸನ್ನತೆಯ ಸ್ಥಳ. ದೇವರು ತಮ್ಮ ಒಡಂಬಡಿಕೆಯನ್ನು ಮಾಡಿ ಕೊಂಡದ್ದು ಬೆಟ್ಟಗಳ ಮೇಲೆ, ಹತ್ತು ಆಜ್ಞೆಗಳನ್ನು ನೀಡಿದ್ದು ಸಿನಾಯ್ ಬೆಟ್ಟದ ಮೇಲೆ, ಕ್ರಿಸ್ತ ರೂಪಾಂತರಗೊಂಡಿದ್ದು ತಾಬೋರ್ ಬೆಟ್ಟದ ಮೇಲೆ, ನಮಗಾಗಿ ಶಿಲುಬೆಯಾತನೆ ಮತ್ತು ಮರಣವನ್ನಪ್ಪಿದ್ದು ಕಲ್ವಾರಿ ಬೆಟ್ಟದ ಮೇಲೆ ಹೀಗೆ ಬೆಟ್ಟವು ದೇವರ ಪ್ರಸನ್ನತೆಯ ಸ್ಥಳವಾದರೆ ಸಮುದ್ರ, ಸಾಗರವು ಪಿಶಾಚಿಯ, ದುಷ್ಟಶಕ್ತಿಗಳ ವಾಸಸ್ಥಾನವೆಂಬುದು ಯೆಹೂದ್ಯರ ನಂಬಿಕೆಯಾಗಿತ್ತು. ಹಾಗಾಗಿ ಕ್ರಿಸ್ತ ನೀರಿನ ಮೇಲೆ ನಡೆದು ಬಂದಾಗ ಭೂತವೆಂದು ಭಾವಿಸಿ ಶಿಷ್ಯರು ಹೆದರಿದರು ಮತ್ತು ತಮ್ಮ ಅವಿಶ್ವಾಸವನ್ನು ತೋರ್ಪಡಿಸಿದರು. ಕ್ರಿಸ್ತ ಸಮುದ್ರವನ್ನು ಶಾಂತಗೊಳಿಸುವುದರ ಮೂಲಕ ಶಿಷ್ಯರಿಗೆ ಧೈರ್ಯ ತುಂಬುತ್ತಾರೆ ಹಾಗೂ ಸಮುದ್ರದ ಮೇಲೆ ನಡೆಯುವುದರೊಂದಿಗೆ ದುಷ್ಟ ಶಕ್ತಿಗಳು ತಮ್ಮ ಅಧೀನದಲ್ಲಿವೆ ಎಂದು ಸಾಬೀತು ಪಡಿಸುತ್ತಾರೆ.

© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment