ಐದನೇ ಸ್ಥಳ

ಸಿಮೋನ ಹೊತ್ತಾಗ...

ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ನಾನು ಸಿಮೋನ. ಜ್ಞಾಪಕವಿಲ್ಲವೇ? ಅದೇ ಯೇಸುವಿನ ಕಲ್ವಾರಿ ಯಾತ್ರೆಯಲ್ಲಿ, ಶಿಲುಬೆ ಹೊರಲು, ಯೇಸುವಿಗೆ ಒತ್ತಾಸೆಯಾಗಿ ಬಂದ ಸಿರೇನ್ಯದ ಸಿಮೋನ ನಾನೇ. ಅಂದು ನಾನು ಸಿರೇನ್ಯದಿಂದ ಜೆರುಸಲೇಮಿನತ್ತ ಕೆಲಸದ ವಿಷಯವಾಗಿ ಬರುತ್ತಿದ್ದೆ.
ಜೆರುಸಲೇಮಿನ ಅಂದಿನ ಬಿಗುವಾದ ವಾತಾವರಣ ಕಂಡು ವಿಚಾರಿಸಿದಾಗ, ಯೇಸು ಎಂಬ ವ್ಯಕ್ತಿಗೆ ಮರಣದಂಡನೆ ವಿಧಿಸಿದ್ದಾರೆಂದು ತಿಳಿದು, ಅದನ್ನು ನೋಡಲು ಕಲ್ವಾರಿಯತ್ತ ತೆರಳಿದೆ.
ಇನ್ನೇನು ಹತ್ತಿರದಲ್ಲಿರುವಾಗ ಸೈನಿಕರ ದಂಡು ನನ್ನನ್ನು ಬಲವಂತದಿಂದ ಎಳೆದು ಯೇಸುವಿಗೆ ಸಹಾಯ ಮಾಡೆಂದು ತಳ್ಳಿದರು. ಆಗ ಒಲ್ಲದ ಮನಸ್ಸಿನಿಂದ ಮಾಡಿದ ಸಹಾಯಕ್ಕೆ ಇಂದು ನಾನು ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಂಡಿದ್ದೇನೆ .
ಆ ಎಲ್ಲಾ ಆಗು ಹೋಗುಗಳಲ್ಲಿ, ಆ ಯಾತನೆಯಲ್ಲಿ ಅವರನ್ನು ದಿಟ್ಟಿಸಿ ನೋಡಿದಾಗ, ನನಗೆ ಕಂಡದ್ದು ಅವರ ನಿಷ್ಕಲ್ಮಶ ದಿವ್ಯದೃಷ್ಟಿ. ಆ ಒಂದೇ ನೋಟದಲ್ಲಿ ಪರಮಾಪ್ತತೆಯನ್ನು ಕಂಡೆ. ಮಂಜುಗಡ್ಡೆಯಾಗಿದ್ದ ನನ್ನ ಶೀತಲ ಹೃದಯಕ್ಕೆ ಅವರ ಶಾಖದ ಅಮೃತ ಸಿಂಚನವಾಯಿತು.
ಆಗ ನನಗನಿಸಿದ್ದು "ಕ್ಷಣ ಕಾಲ ಶಿಲುಬೆ ಹೊತ್ತ ಪಾಪಿಯಾದ ನನಗೇ ಇಷ್ಟು ನೋವು, ಅಪಮಾನವಾದರೆ ಇನ್ನು ಪರಿಶುದ್ಧ, ಪರಮೋನ್ನತ, ಪ್ರಭು ಕ್ರಿಸ್ತನಿಗೆಷ್ಟು ನೋವಾಗಿರಬಹುದು???
ಪ್ರಾರ್ಥನೆ
ಪ್ರತಿದಿನ ಪ್ರತಿಕ್ಷಣ ನನ್ನ ಪಾಪಗಳಿಂದ ತಿಳಿದೂ ತಿಳಿಯದೆ ನಿಮ್ಮ ಶಿಲುಬೆಗೆ ಮತ್ತಷ್ಟು ಭಾರವನ್ನು ಹೊರಿಸುತ್ತಿದ್ದೇನೆ ಕ್ರಿಸ್ತ. ದಯವಿಟ್ಟು ಕ್ಷಮಿಸಿ. ನಿಮ್ಮಂತೆ ಬಾಳಲು ದಯೆಯ ಕರುಣಿಸಿ. ಆಮೆನ್.

ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

No comments:

Post a Comment