ಮತ್ತೆ ಬಿದ್ದರೇಸು ...
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
"ಕೆಳಗಡೆ ಬೀಳುವುದು ಅಪಘಾತವೇ
ಸರಿ, ಆದರೆ ಕೆಳಗಡೆಯೇ ಉಳಿಯುವುದು ನಮ್ಮ ನಿರ್ಧಾರ". ಜೀವನದ ಹಾದಿಯಲ್ಲಿ ಒಮ್ಮೆ ಸೋತರೆ ಸಾಕು,
ಸೋಲಿಗೆ ಶರಣಾಗುವ ಜನರು ಒಂದೆಡೆಯಾದರೆ, ಪ್ರಯತ್ನದ ಮೊದಲೇ ಸೋಲಿಗೆ ಅಪ್ಪುಗೆ ನೀಡುವ ಜನರು ಇನ್ನೊಂದೆಡೆ
ಇರುವ ಈ ಜಗಕ್ಕೆ, ಕಲ್ವಾರಿ ಬೆಟ್ಟದ ಹಾದಿಯಲ್ಲಿ ಕ್ರಿಸ್ತನಿಟ್ಟ ಪ್ರತಿ ಹೆಜ್ಜೆ ಸ್ಫೂರ್ತಿದಾಯಕ,
ಸೋತ ಹೃದಯಗಳಿಗೆ ಸಾಂತ್ವನ ಚಿಲುಮೆ.
ಆ ದೀರ್ಘ ನೋವಿನಲ್ಲೂ ಸೈನಿಕರ ಕ್ರೂರ ಚಾಟಿ ಏಟುಗಳ ನಡುವೆಯೂ ಭಾರ ಶಿಲುಬೆಯನ್ನು
ಹೊತ್ತುಕೊಂಡು, ಒಂದು ಬಾರಿ ಅಲ್ಲ, ಮೂರು ಬಾರಿ ಕೆಳಗೆ ಬಿದ್ದರೂ ಲೆಕ್ಕಿಸದೆ, ಕ್ರಿಸ್ತ ಎದೆಗುಂದದೆ
ಎದ್ದು ನಿಲ್ಲುತ್ತಾರೆ. ತನ್ನ ಶಿಲುಬೆಯನ್ನು ಎತ್ತಿಕೊಂಡು ಕಲ್ವಾರಿ ಬೆಟ್ಟದೆಡೆಗೆ ಹೆಜ್ಜೆಯನ್ನು
ಇಡುತ್ತಾರೆ. ಈ ಜಗತ್ತಿನಲ್ಲಿ ಸೋಲದ ಜೀವವ ಎಲ್ಲಾದರೂ ಕಂಡಿರಾ? ಗೆದ್ದ ಪ್ರತಿಯೊಬ್ಬನೂ ಸೋತು ಎದ್ದವನಲ್ಲವೇ?
ನಮ್ಮ ಕಚೇರಿಗಳಲ್ಲಿ ಕೆಲಸದ ಪ್ರಮಾಣವನ್ನು ತಡೆಯಲಾರದೆ ಅತಿಯಾದ ಒತ್ತಡವೆಂದು ನೆಪವೊಡ್ಡಿ ಕೆಲಸದಿಂದ
ಹಿಂದೇಟು ಹಾಕುವುದು ಸರಿಯೇ? ಶಾಲೆಗಳಲ್ಲಿ ಯಾವುದಾದರೂ ಕಠೀಣ ಕಲಿಕೆಗೆ ಹೆದರಿ ಪರೀಕ್ಷೆಗೆ ಹೋಗದೆ
ಇರುತ್ತೀವಲ್ಲ ಅದು ಸರಿಯೇ? ದಾಂಪತ್ಯ ಜೀವನದಲ್ಲಿ ಆಗುವ ಸಣ್ಣಸಣ್ಣ ಜಗಳಕ್ಕೆ ಬೆಟ್ಟದಷ್ಟು ಕೋಪ ಮಾಡಿಕೊಂಡು
ವಿಚ್ಛೇದನಕ್ಕೆ ಮುಂದಾಗುತ್ತೇವಲ್ಲ ಅದು ಸರಿಯೇ? ಇವೆಲ್ಲವ ನಾವು ಮನದೊಳಗೆ ಪ್ರಶ್ನಿಸಿಕೊಳ್ಳಬೇಕಾಗಿದೆ.
ಕ್ರಿಸ್ತ ಕಲ್ವಾರಿ ಬೆಟ್ಟದಿಂದ ಕೂಗುತ್ತಿರುವುದು ಇದೇ. ನನ್ನಲ್ಲಿ ವಿಶ್ವಾಸವಿಡಿ, ನನ್ನ ಮಕ್ಕಳೇ,
ಸೋಲಿಗೆ ಶರಣಾಗದಿರಿ. ನಿಮ್ಮ ಶಿಲುಬೆಯನ್ನು ನಿಮ್ಮ ಜೀವನದಲ್ಲಿ ಹೊತ್ತುಕೊಂಡು ನನ್ನೊಡನೆ ಹೆಜ್ಜೆಹಾಕಿರಿ,
ಸನ್ಮಾರ್ಗದೆಡೆಗೆ.
ಪ್ರತಿಯೊಬ್ಬ ಕ್ರೈಸ್ತನು, ದೀಕ್ಷಾಸ್ಥಾನ ಪಡೆದ ಕ್ಷಣದಿಂದಲೇ ಕ್ರಿಸ್ತನ
ಅನುಯಾಯಿಯೇ ಸರಿ. ಆತನ ಸುವಾರ್ತೆಯನ್ನು ಈ ಭೂಮಿಯಲ್ಲಿ ಸಾರುವುದೇ ಪ್ರತಿಯೊಬ್ಬನ ಕರ್ತವ್ಯವಾಗಿದೆ.
ಸುವಾರ್ತೆ ಸಾರುವುದು ಎಂದಾಕ್ಷಣ, ನಾವುಗಳು ಅದು ಕೇವಲ ಯಾಜಕರು, ಕನ್ಯಾಸ್ರೀಯರು ಹಾಗೂ ಭೋದಕರಿಗೆ
ಸೀಮಿತ ಎಂಬ ಒಂದು ತಪ್ಪಾದ ಕಲ್ಪನೆ ಹೊಂದಿದ್ದೇವೆ. ಈ ಸೌಭಾಗ್ಯ ಕೇವಲ ಯಾಜಕರಿಗಾಗಲಿ
ಅಥವಾ ಭೋಧಕರಿಗಾಗಲಿ ಸೀಮಿತವಾಗಿಲ್ಲ. ಈ ಸೌಭಾಗ್ಯ ದೀಕ್ಷಾಸ್ಥಾನ ಪಡೆದ ಪ್ರತಿಯೊಬ್ಬ ಕ್ರೈಸ್ತನಿಗೂ
ಪ್ರಭುಯೇಸು ನೀಡಿರುವರು. ಹೇಗೆ ನಾವು ಪ್ರಭುಕ್ರಿಸ್ತರ ಬೋಧನೆಗಳನ್ನು ಮತ್ತು ಅವರ ಸಿದ್ದಾಂತಗಳನ್ನು
ನಮ್ಮ ಜೀವನಗಳಲ್ಲಿ ರೂಢಿಸಿಕೊಂಡು, ಬೇರೆಯವರಿಗೆ ಹೇಗೆ ಉದಾಹರಣೆಯಾಗಿ ಬದುಕುತ್ತೀವಿ ಎಂಬುದರಲ್ಲಿದೆ
ಸುವಾರ್ತೆ ಸಾರುವುದು. ನಮಗೆ ಆತ ನೀಡಿರುವ ಶಿಲುಬೆಗಳನ್ನು ಅಂಜದೆ ಹೇಗೆ ಹೊತ್ತುಕೊಂಡು ನಡೆದು ಉದಾಹರಣೆಯಾಗುತ್ತೇವೋ,
ಅದರಲ್ಲಿದೆ ಸುವಾರ್ತೆ ಸಾರುವುದು. ಕ್ರಿಸ್ತನ ಶಿಲುಬೆಹಾದಿ ಕೇವಲ ಒಂದು ಪಯಣವಲ್ಲ ಅದು ಪ್ರತಿಯೊಬ್ಬನ
ಜೀವನದಲ್ಲಿ ನಡೆಯುವ ಘಟನೆಗಳ ಬಿಂಬವಾಗಿದೆ. ಕ್ರಿಸ್ತರು ಹೇಗೆ ಶಿಲುಬೆಯನ್ನು ಹೊತ್ತುಕೊಂಡು ಜನಾಂಗಗಳಿಗೆ
ಮಾದರಿಯಾದರೋ, ಅಂತೆಯೇ ನಾವುಗಳು ಅನ್ಯರಿಗೆ ಮಾದರಿ ಆಗಬೇಕೆಂಬುವುದೇ ಕ್ರಿಸ್ತನ ಆಶಯ. ಕೇವಲ ಸಣ್ಣಪುಟ್ಟ
ತೊಂದರೆಗಳಿಗೆ ಶರಣಾಗುವ ನಾವುಗಳು, ಜೀವನವನ್ನು ಎದುರಿಸಿ ನಿಲ್ಲಲು ಧೈರ್ಯವಿಲ್ಲದ ನಾವುಗಳು, ನಿಜವಾಗಿಯೂ
ಕ್ರಿಸ್ತನ ಅನುಯಾಯಿಗಳೇ ಎಂಬುದು ಪ್ರಶ್ನಾರ್ಹ?
ಪ್ರಾರ್ಥನೆ
ಕರುಣಾಳು ದೇವರೆ, ಧೈರ್ಯಹೀನ ಮನಗಳಿಗೆ ಧೈರ್ಯವಾಗಿ ನೀ ಬಾ. ಸೋತ ಜನಗಳಲ್ಲಿ ಸ್ಪೂರ್ತಿಯ ತುಂಬಲು ನೀ ಬಾ, ಕ್ರಿಸ್ತನ ಹಾದಿಯಲ್ಲಿ ನಡೆಯಲು ಬೆಳಕಾಗಿ ನೀ ಬಾ.
ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
No comments:
Post a Comment