ಯೇಸುವನ್ನು ಹಿಂಬಾಲಿಸಿದ ಸ್ತ್ರೀಯರು


ಕ್ರಿಸ್ತಯೇಸು, ಯೋಸೇಫನಿಂದ ಬಡಗಿ ಕಾಯಕವನ್ನು ಚೆನ್ನಾಗಿ ಕಲಿತು,  ಅದರಲ್ಲಿ ನಿಷ್ಣಾತನಾಗಿದ್ದನು. ಆತನು ಸಿದ್ಧಪಡಿಸಿದ ಮರಗೆಲಸದ ವಸ್ತುಗಳು, ಮುಖ್ಯವಾಗಿ, ಹಗುರವಾಗಿದ್ದು ಪ್ರಾಣಿಗಳನ್ನು ಹಿಂಸಿಸದ ನೇಗಿಲುಗಳು ತುಂಬಾ ಬೇಡಿಕೆಯಲ್ಲಿದ್ದವು. ಯೋಸೇಫನು ಕಾಲವಾದ ಮೇಲೆ, ಯೇಸು, ತನ್ನ ತಮ್ಮಂದಿರಿಗೂ ಅದನ್ನು ತೋರಿಸಿಕೊಟ್ಟಿದ್ದನು. ಆತನ ದೈಹಿಕ ದಿನಗಳು ಅಂತಿಮಗೊಳ್ಳಲು ಇನ್ನೂ ಮೂರುವರೆ ವರ್ಷಗಳು ಇದ್ದಾಗ, ಯೇಸು ಮನೆಯ ಹೊಣೆಗಾರಿಕೆಯನ್ನು ತಮ್ಮಂದಿರಿಗೆ ವಹಿಸಿಕೊಟ್ಟು ತಾನು ಮೆಸ್ಸೀಯನಾಗಿ ಮಾಡಬೇಕಾಗಿದ್ದ ವಿವಿಧ ಸೇವೆಗಳನ್ನು ನಿರ್ವಹಿಸಲು, ನಾಲ್ಕು ಗೋಡೆಗಳಿಂದ ಹೊರಬಂದು, ವಿಶಾಲ ಜಗತ್ತನ್ನು ಪ್ರವೇಶಿಸಿದನು.
ಆತನ ಜೊತೆಯಲ್ಲಿ ಅಪೊಸ್ತಲರಿದ್ದರು, ವಿಶ್ವಾಸಿಗಳಿದ್ದರು, ಇನ್ನೂ ಸಹಸ್ರಾರು ಹಿಂಬಾಲಕರು ಆತನ ವಾಕ್ಯಗಳನ್ನು ಕೇಳಲು, ಆತನಿಂದ ಗುಣಹೊಂದಲು, ಆತನ ಹಿಂದೆಯೇ ಬರುತ್ತಿದ್ದರು. ಇಂಥ ಸಮಯದಲ್ಲಿ ಯೇಸುವಿನ ಹಾಗೂ ಆತನ ನಿಕಟ ಹಿಂಬಾಲಕರ ಬೇಕುಬೇಡಗಳನ್ನು ನೋಡಿಕೊಳ್ಳುತ್ತಿದ್ದವರು ಯಾರು? ಅವರ ಊಟ ಉಡುಪುಗಳನ್ನು ನಿಯತವಾಗಿ ಒದಗಿಸುತ್ತಿದ್ದವರು ಯಾರು? ಯೇಸುವಿಗೆ, ತನ್ನ ಬಡಗಿ ಕೆಲಸವನ್ನು ಮುಂದುವರಿಸಲು ಸಮಯವಾದರೂ ಎಲ್ಲಿತ್ತು?
ಆಗ, ಯೇಸುವಿನ ಹಿಂದೆಯೇ ಬರುತ್ತಿದ್ದ ಸ್ತ್ರೀಯರು ನಮ್ಮ ನೆನಪಿಗೆ ಬರುತ್ತಾರೆ. ಅವರು, ತಮ್ಮ ಮನೆಗಳನ್ನು ಒತ್ತಟ್ಟಿಗಿರಿಸಿ, ಮನೆಯವರ ವಿರೋಧವನ್ನು ಎದುರಿಸುತ್ತಾ ಯೇಸುವಿನ ಸೇವೆಯಲ್ಲಿ ನಿರತರಾಗಿದ್ದವರು. ಕೂಜನ ಹೆಂಡತಿ ಯೋಹಾನಳು, ಸುಸಾನ್ನಳು, ಮಗ್ದಲದ ಮರಿಯಳು, ಮಾರ್ಕನ ತಾಯಿ ಮರಿಯಳು ಹೀಗೆ, ಕೆಲವರ ಹೆಸರುಗಳನ್ನು ಮಾತ್ರ ಕೊಟ್ಟಿದೆಯೇ ಹೊರತು, ಹೆಚ್ಚಿನವರು ಅನಾಮಿಕರೇ. ಅವರಲ್ಲನೇಕರು ಅನುಕೂಲಸ್ಥರು. ತಕ್ಕಮಟ್ಟಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿದ್ದಿರಬೇಕು. ಆದರೆ, ಅವರ ಈ ದಿಟ್ಟ ಹೆಜ್ಜೆ ಸುಲಭವಾಗಿರಲಿಲ್ಲ! ಆಗಿನ ಯೆಹೂದ್ಯ ಸ್ತ್ರೀಯರಿಗೆ ಅನೇಕ ಕಟ್ಟುಪಾಡುಗಳಿದ್ದವು. ಮನೆಯಿಂದ ಹೊರಗೆ ಕಾಲಿಡಲೂ ಅವರಿಗೆ ಅನುಮತಿ ಬೇಕಾಗಿತ್ತು. ಪರಪುರುಷರೊಂದಿಗೆ ಮಾತಾಡುವ ಸ್ವಾತಂತ್ರ್ಯವೂ ಅವರಿಗಿರಲಿಲ್ಲ. ಇನ್ನು, ಪರಪುರುಷರ ಸೇವೆಮಾಡುವುದಂತೂ ದೂರವೇ ಉಳಿಯಿತು!
ಈ ಎಲ್ಲಾ ಅಡತಡೆಗಳನ್ನು ದಾಟಿಬರಲು ಅವರಿಗಿದ್ದ ದಿಟ್ಟತನ ಎಲ್ಲಿಂದ ಬಂದಿರಬೇಕು? ಕ್ರಾಂತಿಪುರುಷನಾದ ಯೇಸುವಿನ ಸಾನ್ನಿಧ್ಯದಿಂದಲೇ ಈ ಧೈರ್ಯ ಬಂದಿತೆಂದು ನಾವು ಧಾರಾಳವಾಗಿ ಹೇಳಬಹುದು. ಹೌದು, ಒಂದು ಹೆಣ್ಣು, ಮನಸ್ಸು ಮಾಡಿದರೆ ಏನನ್ನು ತಾನೇ ಮಾಡಲಾರಳು? ಯೇಸುವಿನ ನಿಕಟ ಶಿಷ್ಯರೂ ಹೆದರಿ ಓಡಿಹೋಗಿರುವಾಗ, ಈ ಅನಾಮಿಕ ಸ್ತ್ರೀಯರ ಗುಂಪು, ಯೇಸುವನ್ನು ರೋಮಾಯ ಸೈನಿಕರು ಹಿಡಿದು, ಆತನಿಗೆ ಅಪಮಾನಮಾಡಿ, ಹಿಂಸಿಸುತ್ತಿದ್ದಾರೆಂಬ ಸುದ್ದಿ ಕೇಳಿದೊಡನೆಯೇ, ಹಿಂದೆಮುಂದೆ ನೋಡದೆ ಅಲ್ಲಿಗೆ ಓಡಿಬಂದರು.
ಅಲ್ಲಿ, ಅವರು ಕಂಡದ್ದೇನು? ಯೇಸುವಿನ ತಲೆಯ ಮೇಲೆ ಒತ್ತಿ ಇಟ್ಟಿದ್ದ ಮುಳ್ಳಿನ ಕಿರೀಟ, ಅಲ್ಲಿಂದ ಸುರಿಯುತ್ತಿದ್ದ ಅಮೂಲ್ಯ ರಕ್ತ, ದೇಹದ ಮೇಲೆ ಅವ್ಯಾಹತವಾಗಿ ಬೀಳುತ್ತಿದ್ದ ಚಾಟಿಯೇಟಿನ ಕೆಂಪು ಗುರುತುಗಳು, ಆಯಾಸದಿಂದ ಬಾಗಿದ್ದ ಆತನ ದಿವ್ಯ ಶರೀರ! ಇನ್ನು ಅವರಿಗೆ ತಡೆಯಲಾಗಲಿಲ್ಲ. ಅವರ ಕಣ್ಣುಗಳಿಂದ ಕಣ್ಣೀರ ಕೋಡಿ ಹರಿಯಿತು. ಅವರು ಎದೆ ಬಡಿದುಕೊಳ್ಳುತ್ತಾ, ಗೋಳಾಡುತ್ತಾ, ಸಿಪಾಯಿಗಳಿಂದ ತಳ್ಳಿಸಿಕೊಂಡರೂ ಹಿಂತೆಗೆಯದೆ ಯೇಸುವಿನ ಹತ್ತಿರಕ್ಕೆ ಬಂದರು. (ಲೂಕ ೨೩:೨೭-೩೧)
ಇದನ್ನು ಕಂಡು ಯೇಸು, ತನ್ನ ಬಾಧೆಯನ್ನೆಲ್ಲಾ ಮರೆತು, ಅವರನ್ನು ಸಂತೈಸುತ್ತಾನೆ-
“ಯೆರೂಸಲೇಮಿನ ಸ್ತ್ರೀಯರೇ, ನನಗೋಸ್ಕರ ಅಳಬೇಡಿರಿ. ನಿಮಗೋಸ್ಕರವೂ, ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ”. ಈ ಅರ್ಥಗರ್ಭಿತ ಮಾತುಗಳು ಮುಂದೆ ಅವರಿಗೆಲ್ಲಾ ಒದಗಲಿರುವ ತೊಂದರೆಗಳನ್ನು ಸೂಚ್ಯವಾಗಿ ನಮ್ಮ ಮುಂದಿಡುತ್ತವೆ.
ಪ್ರತೀತಿಯೊಂದು ಹೀಗೆ ಹೇಳುತ್ತದೆ - ವೆರೋನಿಕಾ ಎಂಬ ಸ್ತ್ರೀ, ತನ್ನ ಕರವಸ್ತ್ರದಿಂದ ಯೇಸುವಿನ ಮುಖದಲ್ಲಿ ಧಾರಾಳವಾಗಿ ಸುರಿಯುತ್ತಿದ್ದ ರಕ್ತಮಿಶ್ರಿತ ಬೆವರನ್ನು ಪ್ರೀತಿ, ಭಕ್ತಿಗಳಿಂದ ಒರೆಸಿದಳು, ಮತ್ತು ಆ ವಸ್ತ್ರವನ್ನು ಈಗಲೂ ಟ್ಯೂರಿನ್ ನಲ್ಲಿ ಸಂಗ್ರಹಿಸಿಡಲಾಗಿದೆ.
ಇರಲಿ, ಯೆರೂಸಲೇಮಿನ ಅನಾಮಿಕ ಸ್ತ್ರೀಯರೇ, ನೀವು ಧನ್ಯರು! ನಾವು ನಿಮ್ಮಿಂದ ಕಲಿಯಬೇಕಾದ್ದು ಸಾಕಷ್ಟಿದೆ. ನಾವು ಹೀಗೆ ಕುಟುಂಬವನ್ನೂ ಅಲ್ಲಿರುವವರನ್ನೂ ಧಿಕ್ಕರಿಸಿ, ಯೇಸುವನ್ನು ಹಿಂಬಾಲಿಸಲು ಸಿದ್ಧವಾಗಿದ್ದೇವೆಯೇ?
ಯೇಸು ದೈಹಿಕವಾಗಿ ಲೋಕವನ್ನು ಬಿಟ್ಟುಹೋದ ಮೇಲೂ ಆ ಸ್ತ್ರೀಯರು ಸುಮ್ಮನಿರಲಿಲ್ಲ! ಕ್ರೈಸ್ತತ್ವವು ಜಗತ್ತಿನಲ್ಲೆಲ್ಲಾ ಹರಡಲು ಅವರ ಪಾಲೂ ಹೆಚ್ಚಿಗಿದ್ದಿರಬೇಕು. ಆದರೆ, ಆಗಿನ ಯೆಹೂದ್ಯ ಸಂಪ್ರದಾಯದ ಕಾರಣ, ನಂತರದ ಲೇಖಕರು ಅವರ ವಿಷಯವನ್ನೇ ಎತ್ತಿಲ್ಲ! ಮೊದಲು ಹೆಸರಿದ್ದವರೂ ಮುಂದೆ ಅನಾಮಿಕರಾದರು.

No comments:

Post a Comment