ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.
22 ಜನವರಿ 2019
ಮಂಗಳವಾರ/ಹಸಿರು/ಸಾಧಾರಣ ಕಾಲದಎರಡನೇ ವಾರ
ಐಚ್ಛಿಕ ಸ್ಮರಣೆ - ಸಂತ ವಿನ್ಸೆಂಟ್ ಪಲ್ಲೋಟ್ಟಿ (ಸೇ.ದ ಮತ್ತು ರ.ಸಾ)
1ನೇ ವಾಚನ - ಹಿಬ್ರಿ 6: 1೦-2೦
ಕೀರ್ತನೆ - 111: 1-2, 4-5, 9-1೦
ಶುಭಸಂದೇಶ - ಮಾರ್ಕ 2: 23-28
ವಾಚನಗಳು
ಮೊದಲನೇ ವಾಚನ
ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ
10ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಮಾಡುತ್ತಲೂ ಇದ್ದೀರಿ. ದೇವರ ಹೆಸರಿನಲ್ಲಿ ನೀವು ಮಾಡಿದ ಪ್ರೀತಿಪೂರ್ವಕವಾದ ಸೇವೆಯನ್ನು ದೇವರು ಮರೆಯುವಂತಿಲ್ಲ. ಅವರು ಅನ್ಯಾಯ ಮಾಡುವವರೇನೂ ಅಲ್ಲ. 11ನೀವು ಹೊಂದಿರುವ ನಿರೀಕ್ಷೆ ಪೂರ್ಣವಾಗಿ ಕೈಗೂಡುವಂತೆ ನಿಮ್ಮಲ್ಲಿ ಪ್ರತಿಯೊಬ್ಬನೂ ಮೊದಲಿನ ಆಸಕ್ತಿಯನ್ನು ಕಡೆಯತನಕವೂ ತೋರಿಸಬೇಕೆಂದು ಹಾರೈಸುತ್ತೇನೆ.
12ನೀವು ಆಲಸಿಗಳಾಗಿರಬಾರದು; ವಿಶ್ವಾಸದಿಂದಲೂ ಬಹು ತಾಳ್ಮೆಯಿಂದಲೂ ದೈವ ವಾಗ್ದಾನಗಳನ್ನು ಬಾಧ್ಯವಾಗಿಸಿಕೊಂಡವರನ್ನು ಅನುಸರಿಬೇಕು. 13ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತಮ್ಮ ಮಾತನ್ನು ಈಡೇರಿಸುವುದಾಗಿ ಶಪಥ ಮಾಡಿದರು. ತಮಗಿಂತಲೂ ಮೇಲಾದವರಾರೂ ಇಲ್ಲವಾದ ಕಾರಣ ತಮ್ಮ ಸ್ವಂತ ಹೆಸರಿನಲ್ಲೇ ಶಪಥ ಮಾಡಿದರು. 14“ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಹೆಚ್ಚಿಸಿಯೇ ತೀರುವೆನು,” ಎಂದರು.
15ಅಂತೆಯೇ, ಅಬ್ರಹಾಮನು ದೀರ್ಘಕಾಲ ಕಾದಿದ್ದು ದೇವರ ವಾಗ್ದಾನದ ಫಲವನ್ನು ಪಡೆದನು. 16ಮನುಷ್ಯರು ತಮಗಿಂತಲೂ ಹೆಚ್ಚಿನವರ ಮೇಲೆ ಆಣೆಯಿಡುವುದು ವಾಡಿಕೆ. ಹೀಗೆ ಆಣೆಯಿಟ್ಟ ಪ್ರಮಾಣಮಾಡಿದರೆ ಎಲ್ಲ ವಿವಾದಗಳು ಕೊನೆಗೊಳ್ಳುತ್ತವೆ. 17ಹಾಗೆಯೇ, ದೇವರು ತಮ್ಮ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವವರಿಗೆ ತಮ್ಮ ಸಂಕಲ್ಪ ಅಚಲವಾದುದು ಎಂಬುದನ್ನು ಸ್ಪಷ್ಟಪಡಿಸಲು, ಶಪಥಮಾಡಿ ಸ್ಥಿರಪಡಿಸಿದರು.
18ದೇವರ ವಾಗ್ದಾನ ಮತ್ತು ಶಪಥ ಇವೆರಡೂ ಅಚಲವಾದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಮೋಸಮಾಡುವವರೇ ಅಲ್ಲ. ಇದರಿಂದಾಗಿ, ದೇವರ ಆಶ್ರಯಕ್ಕಾಗಿ ಧಾವಿಸಿ ಬಂದಿರುವ ನಾವು, ನಮ್ಮ ಮುಂದಿರಿಸಿರುವ ನಂಬಿಕೆ ನಿರೀಕ್ಷೆಯಲ್ಲಿ ಸ್ಥಿರವಾಗಿ ನಿಲ್ಲಲು ಬಲವಾದ ಪ್ರೋತ್ಸಾಹ ದೊರೆತಂತಾಯಿತು. 19ಈ ನಂಬಿಕೆ, ನಿರೀಕ್ಷೆ ನಮ್ಮ ಬಾಳನೌಕೆಯ ಸ್ಥಿರವಾದ ಹಾಗೂ ಸುರಕ್ಷಿತವಾದ ಲಂಗರಿನಂತಿದೆ. ಇದು ತೆರೆಯ ಹಿಂದಿರುವ ಸ್ವರ್ಗೀಯ ಗರ್ಭಗುಡಿಯನ್ನು ಪ್ರವೇಶಿಸುವಂಥದ್ದು. 20ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನ ಯಾಜಕರಾದ ಯೇಸು ನಮ್ಮ ಮುಂದಾಳಾಗಿ ಹೋಗಿ ಆ ಗರ್ಭಗುಡಿಯನ್ನು ಪ್ರವೇಶಿಸಿದ್ದಾರೆ.
ಕೀರ್ತನೆ
ಶ್ಲೋಕ: ತನ್ನೊಡಂಬಡಿಕೆಯ ಚಿರ ನೆನಪಿರುವುದು ಆತನಿಗೆ
1 : ಅಲ್ಲೆಲೂಯ /
ಸಜ್ಜನರ ಸಂಘದೊಳು, ಸಭಾಸದಸ್ಯರೊಳು ಕೂಡಿ /
ಹೊಗಳುವೆ ಪ್ರಭುವನು ಮನಃ ಪೂರ್ವಕವಾಗಿ ಹಾಡಿ //
2 : ಮಹತ್ತಾದವು ಪ್ರಭುವಿನಾ ಕಾರ್ಯಗಳು /
ಕೊಂಡಾಡುವರು ಅವುಗಳನು ಭಕ್ತಾದಿಗಳು //
4 : ಆತನ ಅದ್ಭುತಕಾರ್ಯ ಸ್ಮರಣೀಯ /
ಕರುಣಾವಂತ ಪ್ರಭು, ಪ್ರೀತಿಯನು //
5 : ಆಹಾರವನೀಯುವನು ಭಯಭಕ್ತಿಯುಳ್ಳವರಿಗೆ /
ತನ್ನೊಡಂಬಡಿಕೆಯ ಚಿರ ನೆನಪಿರುವುದು ಆತನಿಗೆ //
9 : ವಿಮೋಚನೆಯನಿತ್ತಿಹನು ಪ್ರಭು ತನ್ನ ಪ್ರಜೆಗೆ /
ಸ್ಥಿರಸ್ಥಾಪಿತವಾಗಿಹುದು ಆತನ ಒಡಂಬಡಿಕೆ /
ಪರಿಶುದ್ಧ, ಪರಮ ಪೂಜ್ಯ ಆತನ ನಾಮಾಂಕೆ //
10 :ಸುಜ್ಞಾನಕ್ಕೆ ಮೂಲವು ದೈವಭಯವು /
ಅದರ ಪಾಲನೆಯು ವಿವೇಕತನವು /
ಪ್ರಭುವಿಗೆ ಸ್ತೋತ್ರ ಸದಾಕಾಲವು //
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
23ಅದೊಂದು ಸಬ್ಬತ್ ದಿನ. ಯೇಸುಸ್ವಾಮಿ ಗೋದಿಯ ಹೊಲಗಳಲ್ಲಿ ಹಾದು ಹೋಗುತ್ತಿದ್ದರು. ಜೊತೆಯಲ್ಲಿದ್ದ ಅವರ ಶಿಷ್ಯರು ತೆನೆಗಳನ್ನು ಕೀಳಲಾರಂಭಿಸಿದರು. 24ಇದನ್ನು ಕಂಡ ಫರಿಸಾಯರು, ನೋಡು, ಸಬ್ಬತ್‌ದಿನದಲ್ಲಿ ನಿಷಿದ್ಧವಾದುದನ್ನು ನಿನ್ನ ಶಿಷ್ಯರು ಮಾಡುತ್ತಿದ್ದಾರೆ, ಇದು ಸರಿಯೇ? ಎಂದು ಯೇಸುವನ್ನು ಪ್ರಶ್ನಿಸಿದರು. 25ಅದಕ್ಕೆ ಯೇಸು, ಹಿಂದೆ, ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದು, ಉಣ್ಣಲು ಏನೂ ಇಲ್ಲದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೇ? 26ಪ್ರಧಾನಯಾಜಕ ಅಬಿಯಾತರನ ಕಾಲದಲ್ಲಿ ಅವನು ದೇವಮಂದಿರದೊಳಕ್ಕೆ ಹೋಗಿ, ಯಾಜಕನ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿಂದ; ಅಲ್ಲದೆ, ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲವೇ? ಎಂದು ಅವರನ್ನು ಕೇಳಿದರು. 27ಬಳಿಕ ಯೇಸು ಅವರಿಗೆ, ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ. 28ಆದುದರಿಂದ ನರಪುತ್ರನು ಸಬ್ಬತ್ತಿಗೂ ಒಡೆಯ, ಎಂದರು.
ಚಿಂತನೆ
ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ
ಇಂದಿನ ಶುಭಸಂದೇಶ ಯೇಸುಸ್ವಾಮಿ ಸಬ್ಬತ್ತಿಗೂ ಒಡೆಯ ಎಂಬುದನ್ನು ನಿರೂಪಿಸುತ್ತದೆ. ಫರಿಸಾಯರ ಪ್ರಶ್ನೆಗೆ ಯೇಸು ಹಳೆಯ ಒಡಂಬಡಿಕೆಯ ಘಟನೆಯೊಂದರ ಉದಾಹರಣೆಯನ್ನು ನೀಡುತ್ತಾರೆ. ಯೇಸು ಇಲ್ಲಿ 1 ಸಮುವೇಲ 21:2-7 ವಾಕ್ಯಗಳನ್ನು ಅವರಿಗೆ ನೆನಪಿಸುತ್ತಾರೆ ಹಾಗೂ ``ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ'' ಎಂದು ಸ್ಪಷ್ಟಪಡಿಸುತ್ತಾರೆ. ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳಿಗೆ ಕಾನೂನು, ಕಟ್ಟಳೆಗಳೇ ಮುಖ್ಯವಾಗಿದ್ದವು, ಆದರೆ ಆ ಕಾನೂನು, ಕಟ್ಟಳೆಗಳ ಒಳ ಅರ್ಥ, ಉದ್ದೇಶಗಳನ್ನು ಅವರು ಮರೆತ್ತಿದ್ದರು. ಯೇಸು ಅರ್ಥಶೂನ್ಯ ಕಾನೂನು, ಕಟ್ಟಳೆಗಳನ್ನು ಖಂಡಿಸಿದರು ಮತ್ತು ಧರ್ಮ, ಸಂಪ್ರದಾಯ, ಆಚಾರ ವಿಚಾರಗಳಿರುವುದು ಮಾನವನ ಏಳಿಗೆಗೆ ಮತ್ತು ಸನ್ಮಾರ್ಗಕ್ಕೆ ಎಂಬುದನ್ನು ಸಾರಿ ಹೇಳಿದರು. ಮಾನವೀಯತೆ, ಮನುಷ್ಯತ್ವ ವಿರೋಧಿ ಆಚಾರ ವಿಚಾರ, ಸಂಪ್ರದಾಯ, ಕಟ್ಟಳೆಗಳನ್ನು ಮೀರಿ ಇಂದು ನಾವು ನಡೆಯಬೇಕಿದೆ.
ಇಂದಿನ ಸಂತರು
ಸಂತ ವಿನ್ಸೆಂಟ್
ರಕ್ತಸಾಕ್ಷಿ ಸಂತ ವಿನ್ಸೆಂಟ್ ಅವರನ್ನು ಸರ್ಗೋಸಾದ ವಿನ್ಸೆಂಟ್, ರಕ್ತಸಾಕ್ಷಿ ವಿನ್ಸೆಂಟ್, ಹ್ಯೂಸ್ಕಾದ ವಿನ್ಸೆಂಟ್ ಅಥವಾ ಸೇವಾದರ್ಶಿ (ಡೀಕನ್) ವಿನ್ಸೆಂಟ್ ಎಂದು ಕರೆಯಲಾಗುತ್ತದೆ. ಸ್ಪೇನ್ ದೇಶದ ಮೂಲದ ಸಂತ ವಿನ್ಸೆಂಟ್ ಅವರು, ಸರ್ಗೋಸಾದ ಚರ್ಚಿನ ಸೇವಾದರ್ಶಿ (ಡೀಕನ್) ಆಗಿದ್ದರು. ಕಥೋಲಿಕ ಕ್ರೈಸ್ತರು ಮತ್ತು ಆಂಗ್ಲಿಕನ್ ಸಭೆಯವರು ಜನವರಿ 22 ರಂದು ಅವರ ಸ್ಮರಣೆಯ ಹಬ್ಬವನ್ನು ಮಾಡಿದರೆ, ಸಾಂಪ್ರದಾಯಿಕ ಪೂರ್ವದ ಕ್ರೈಸ್ತ ಧರ್ಮಸಭೆಗಳು ನವೆಂಬರ್ 11 ರಂದು ಹಬ್ಬದಾಚರಣೆ ಮಾಡುತ್ತವೆ.
ಸರಗೋಸಾ ಸಮೀಪದ ಹ್ಯೂಸ್ಕಾ ಸಂತ ವಿನ್ಸೆಂಟ್ ಅವರ ಹುಟ್ಟೂರು. ಓಸ್ಕಾ ಮೂಲದ ಎಥೂಸಿಯಸ್ ಮತ್ತು ಎನೋಲಾ ಅವರು, ವಿನ್ಸೆಂಟ್‌ರವರ ತಂದೆ ತಾಯಿ. ಸರಗೋಸಾದಲ್ಲಿ ಓದು ಮುಗಿಸಿದ ಅವರು ಸರಗೋಸಾದ ಬಿಷಪ್ ವೆಲೆರಿಯುಸ್‌ರಿಂದ ಯಾಜಕ ದೀಕ್ಷೆ ಪಡೆದ ನಂತರ, ಅವರ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಾರೆ. ಅದೇ ಸಮಯದಲ್ಲಿ ರೋಮನ್ ಚಕ್ರವರ್ತಿ ಡಯಕ್ಲೇಷಿಯನ್ ಕ್ರೈಸ್ತರ ಮೇಲೆ ದೌರ್ಜನ್ಯ ಎಸಗಲು ಆರಂಭಿಸಿದ್ದ. ಸ್ಪೇನ್ ನಲ್ಲಿ ಅವನ ಪ್ರತಿನಿಧಿಯಾಗಿದ್ದ ಡಸಿಯನ್ ವೆಲೆನ್ಸಿಯಾದಲ್ಲಿ ಧರ್ಮಾಧ್ಯಕ್ಷರನ್ನು ಮತ್ತು ಸಂತ ವಿನ್ಸೆಂಟ್ ಅವರನ್ನು ಕರೆಯಿಸಿ ಜೈಲಿಗೆ ಹಾಕಿಸುತ್ತಾನೆ. ಪವಿತ್ರ ಗ್ರಂಥಗಳನ್ನು ಬೆಂಕಿಗೆ ಹಾಕಿದರೆ ಅವರನ್ನು ಬಿಡಗಡೆ ಮಾಡುವುದಾಗಿ ಅವನು ಆಮಿಷ ಒಡ್ಡುತ್ತಾನೆ. ಧರ್ಮಾಧ್ಯಕ್ಷರ ಪರವಾಗಿ ಮಾತನಾಡಿದ ಸಂತ ವಿನ್ಸೆಂಟ್ ಅವರು, ತಮ್ಮ ಧರ್ಮವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂಬ ನೀಡುತ್ತಾರೆ. ಇದರಿಂದ ಸಿಟ್ಟಿಗೆದ್ದ ಡಸಿಯಸ್ ಅವನ ಮೇಲೆ ದೈಹಿಕ ದೌರ್ಜನ್ಯವೆಸಗಲು ತನ್ನ ಸಿಬ್ಬಂದಿಗೆ ತಿಳಿಸುತ್ತಾನೆ. ಸಂತ ವಿನ್ಸೆಂಟ್‌ರವರನ್ನು ಬಂಡೆಯೊಂದರ ಮೇಲೆ ಮಲಗಿಸಿ, ಕಬ್ಬಿಣದ ಹುಕ್ಕುಗಳಿಂದ ಮೈಯನ್ನು ಪರಚಿ ಅವರಿಗೆ ಹಿಂಸೆ ನೀಡಲಾಗುತ್ತದೆ. ಗಾಯದ ಮೇಲೆ ಉಪ್ಪುಸವರಿ ಕಾದ ಸಲಾಕೆಗಳ ಮೇಲೆ ಮಲಗಿಸಿ ಶಿಕ್ಷಿಸುತ್ತಾರೆ. ಆದರೆ ಸಂತ ವಿನ್ಸೆಂಟ್‌ರವರು ದೌರ್ಜನ್ಯವನ್ನು ಶಾಂತ ಚಿತ್ತದಿಂದ, ಸಹನೆಯಿಂದ ಅನುಭವಿಸುತ್ತಾರೆ. ಕೊನೆಗೆ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಒಡೆದ ಮಡಕೆಯ ಚೂರುಗಳ ಮೇಲೆ ಮಲಗಿಸಿ ಹಿಂಸಿಸಲಾಗುತ್ತದೆ. ಕೊನೆಗೆ ಅವರು ಅಲ್ಲಿಯೇ ಕೊನೆಯುಸಿರೆಳೆದಾಗ, ಅವರ ಮೇಲಿನ ಶಿಕ್ಷೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಜೈಲಿನ ಅಧಿಕಾರಿ ಮರಮರ ಮರುಗುತ್ತಾನೆ. ನಂತರ ತನ್ನ ಪಾಪಗಳಿಗೆ ಪಶ್ಚಾತ್ತಾಪಪಟ್ಟು ಕ್ರೈಸ್ತನಾಗುತ್ತಾನೆ. ಧರ್ಮಾಧ್ಯಕ್ಷರನ್ನು ಗಡಿಪಾರು ಮಾಡಲಾಗುತ್ತದೆ. ಚೀಲದಲ್ಲಿ ಹಾಕಿ ಸಮುದ್ರಕ್ಕೆ ಎಸೆದಿದ್ದ ವಿನ್ಸೆಂಟ್‌ರವರ ಶವವನ್ನು ಹೆಕ್ಕಿ ತೆಗೆದ ಕ್ರೈಸ್ತರು ಸಮಾಧಿ ಮಾಡುತ್ತಾರೆ. ಹಿಂದೆಯೇ ಆರಂಭವಾದ, ಅವರನ್ನು ಆದರಿಸುವ ಪರಿಪಾಠ ಕ್ರಮೇಣವಾಗಿ ಸುತ್ತಲ ಪ್ರದೇಶದಲ್ಲಿ ಪಸರಿಸಲಾರಂಭಿಸುತ್ತದೆ.
ಐತಿಹ್ಯವೊಂದರ ಪ್ರಕಾರ, ಸಮುದ್ರದಿಂದ ಹೆಕ್ಕಿತಂದ ಅವರ ಶರೀರವನ್ನು ಕಾಗೆಗಳು ಕಾಯುತ್ತಿದ್ದವಂತೆ. ಹದ್ದುಗಳಿಂದ ಅವು ರಕ್ಷಿಸಲ್ಪಟ್ಟಿತಂತೆ. ಅವರ ಸಮಾಧಿಯ ಮೇಲೆ ಗುಡಿಯೊಂದನ್ನು ಕಟ್ಟಿದ ನಂತರವೂ ಕಾಗೆಗಳು ಅಲ್ಲೆಲ್ಲಾ ಠಳಾಯಿಸುತ್ತಿದ್ದವಂತೆ. ಪ್ಯಾರಿಸ್‌ನ ಮಹಾದೇವಾಲಯವೊಂದರಲ್ಲಿ ಈ ಸಂತರ ಕಾಲಿನ ಮೂಳೆಯೊಂದನ್ನು ರಕ್ಷಿಸಿಡಲಾಗಿದೆ. ಸಂತ ವಿನ್ಸೆಂಟ್ ಅವರನ್ನು ಇಟ್ಟಿಗೆ ಮಾಡುವವರ, ನಾವಿಕರ ಹಾಗೂ ವಿನೆಗರ್ ತಯಾರಿಸುವವರ, ವೈನ್ ಮಾರಾಟಗಾರರ ಪಾಲಕ ಸಂತನೆಂದು ಗುರುತಿಸಲಾಗುತ್ತದೆ. ಅವರು ಸರಗೋಸಾ ಊರಿನ ಪಾಲಕ ಸಂತರೂ ಹೌದು.
ಚಿತ್ರ: ಗೂಗಲ್ ಕೃಪೆ

No comments:
Post a Comment