ಪ್ರಾರ್ಥಿಸೋಣ
ಸರ್ವಶಕ್ತ ದೇವರೇ, ನಿಮ್ಮ ಸೇವಕ ಆಸ್ಕರ್ ರೊಮೇರೊರವರನ್ನು
ದನಿಯಿಲ್ಲದ ಬಡವರ ದನಿಯಾಗಿ ನೀವು ಆರಿಸಿದಿರಿ. ತಮ್ಮ ಪ್ರಾಣವನ್ನೇ ಕೊಟ್ಟು ವಿಮೋಚನೆಯ ಹಾದಿಯನ್ನು
ಕ್ರಮಿಸಿದ ಇವರು ಭರವಸೆಯ ದೀಪವಾಗಿ ಕಂಗೊಳಿಸುತ್ತಿದ್ದಾರೆ. ಇವರ ಹಾಗೂ ಎಲ್ ಸಾಲ್ವದೋರ್ ದೇಶದ ಇತರ ರಕ್ತಸಾಕ್ಷಿಗಳಿಂದ ಪ್ರೇರಿತರಾಗಿ
ನಾವೆಲ್ಲರೂ ಧೈರ್ಯದಿಂದ ಯಾವುದೇ ಅಮಿಷಕ್ಕೆ ಒಳಗಾಗದೆ ನಿಮ್ಮ ವಾಕ್ಯಕ್ಕೆ ಸಾಕ್ಷಿಗಳಾಗಿ ಬಾಳಲು ಕೃಪೆ
ನೀಡಿರಿ. ಜೀವ ನೀಡುವ ನಿಮ್ಮ ವಾಕ್ಯವೇ ಆಗಿದ್ದಾರೆ ಪ್ರಭು ಯೇಸುಕ್ರಿಸ್ತರು. ಇವರಿಗೆ ನಿಮ್ಮೊಂದಿಗೆ
ಹಾಗೂ ಪವಿತ್ರಾತ್ಮರಲ್ಲಿ ಯುಗಯುಗಾಂತರಕ್ಕೂ ಸ್ತುತಿ ಹಾಗೂ ಮಹಿಮೆ ಸಲ್ಲಲಿ ಆಮೆನ್.
ಸ್ವರ್ಗೀಯ ತಂದೆಯೇ ನಿಮಗೆ ವಂದನೆಗಳು. ಏಕೆಂದರೆ
ನೀವು ನಮ್ಮನ್ನು ಪಾಪ ಹಾಗೂ ಮರಣದ ಆಳ್ವಿಕೆಯಿಂದ ವಿಮುಕ್ತಗೊಳಿಸಿ ನಿಮ್ಮ ಕುಮಾರರ ರಾಜ್ಯಕ್ಕೆ ಬರಮಾಡಿದ್ದೀರಿ.
ತಮ್ಮ ಮರಣದಿಂದ ಅವರು ನಮಗೆ ಜೀವ ನೀಡಿದಂತೆ, ತಮ್ಮ ಪ್ರೀತಿಯಿಂದ ಅವರು ಯುಗಯುಗಾಂತರಕ್ಕೂ ಜೀವಿಸಿ
ಆಳುವ ನಿಮ್ಮ ಕುಮಾರರ ಮುಖಾಂತರ ಪ್ರಾರ್ಥಿಸುತ್ತೇವೆ. ಆಮೆನ್.
ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದಿಂದ ನಮ್ಮ
ಪಾಪಗಳನ್ನು ತೊಳೆದವರೂ ತಮ್ಮ ಪಿತನಾದ ದೇವರ ಸೇವೆಗೆ ನಮ್ಮನ್ನು ದೈವೀರಾಜ್ಯದ ಯಾಜಕರನ್ನಾಗಿ ಮಾಡಿದವರೂ
ಆದ ಯೇಸುಕ್ತಿಸ್ತರಿಗೆ ಮಹಿಮೆ ಮತ್ತು ಆಧಿಪತ್ಯ
ಯುಗಯುಗಾಂತರಕ್ಕೂ ಸಲ್ಲಲಿ! ಆಮೆನ್. (ಪ್ರಕಟಣೆ ೧: ೫-೬)
ದಿವ್ಯ ರಕ್ಷಕರೇ, ನೀವು ಕಲ್ವಾರಿ ಬೆಟ್ಟದಲ್ಲಿ ಶಿಲುಬೆಯ ಮರದ ಮೇಲೆ ನನ್ನ ಪಾಪಗಳಿಗಾಗಿ
ಯಾತನೆಯನ್ನು ಅನುಭವಿಸಿದಿರಿ. ನನ್ನ ಈ ನಶ್ವರ ಬಾಳಿನ ಎಲ್ಲಾ ಆಗುಹೋಗುಗಳಲ್ಲಿ ನಾನು ನನ್ನ ರಕ್ಷಕರಾದ
ನಿಮ್ಮ ಮಾರ್ಗದರ್ಶನ ಹಾಗೂ ಬೆಳಕಿನಲ್ಲಿ ನಡೆದು ನಿತ್ಯ ಜೀವನ ಭಾಗ್ಯವನ್ನು ಪಡೆಯುವಂತೆ ಕರುಣಿಸಿರಿ.
ಆಮೆನ್.
ಸರ್ವಶಕ್ತರ ನಿತ್ಯ ದೇವರೇ, ನಿಮ್ಮ ಅಪಾರವಾದ ಪ್ರೀತಿಯ
ನಿಮಿತ್ತ ನಿಮ್ಮನ್ನು ಪ್ರೀತಿಸುವ ಭಕ್ತಾದಿಗಳಿಗೆ ಅವರ ಗ್ರಹಿಕೆಗೂ ಮೀರಿದ ಕೃಪಾವರಗಳನ್ನು ದಯಪಾಲಿಸುತ್ತೀರಿ.
ನಾವೆಲ್ಲರೂ ನಿಮ್ಮನ್ನು ಅತ್ಯಧಿಕವಾಗಿ ಪ್ರೀತಿಸಿ ನಮ್ಮ ಊಹೆಗೂ ಮೀರಿದ ನಿಮ್ಮ ವರದಾನಗಳಿಗೆ ಪಾತ್ರರಾಗುವಂತೆ
ಅನುಗ್ರಹಿಸಿರಿ. ನಿಮ್ಮ ಕುಮಾರ ಪ್ರಭು
ಯೇಸುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ ಆಮೆನ್.
ಪರಿಶುದ್ಧರು, ಪರಿಶುದ್ಧರು, ಸೇನೆಗಳ
ದೇವರಾದ ಕರ್ತರು ಪರಿಶುದ್ಧರು, ಇಹಪರಗಳು ನಿಮ್ಮ ಮಹಿಮೆಯಿಂದ ತುಂಬಿವೆ. ಮಹೋನ್ನತದಲ್ಲಿ ಪ್ರಭುವೇ
ನಿಮಗೆ ಮಹಿಮೆಯಾಗಲಿ, ಆಮೆನ್.
ನಿಮ್ಮ ಯಾತನೆ ಹಾಗೂ ಶಿಲುಬೆಯ ಮೂಲಕ, ಪ್ರಭುವೇ
ನನ್ನನ್ನು ಬಲಪಡಿಸಿರಿ, ಆಮೆನ್.
ನನ್ನ ಆಧಾರವೂ, ರಕ್ಷಕರೂ ಆಗಿರುವ ಪ್ರಭುವೇ, ನನ್ನ
ಬಾಯಿ ಮಾತಿನ ಜಪವೂ, ನನ್ನ ಹೃದಯದ ಧ್ಯಾನವೂ ನಿಮ್ಮ ದಿವ್ಯ ಸನ್ನಿಧಿಯಲ್ಲಿ ಸದಾ ಅಂಗೀಕೃತವಾಗಲಿ ಆಮೆನ್.

No comments:
Post a Comment