ಆರಾಧನೆ: ವರ್ಷಾಂತ್ಯ


ಹಾಡು
ಓ ಪವಿತ್ರ ಸಂಸ್ಕಾರವೇ, ಓ ದಿವ್ಯ ಸಂಸ್ಕಾರವೇ, ಆರಾಧನೆ ಸ್ತುತಿ ವಂದನೆ ಪ್ರತಿ ಕ್ಷಣವೂ ನಿಮ್ಮದೇ.
ಪ್ರಾರಂಭ ಪ್ರಾರ್ಥನೆ
ಯಾವ ವಿಷಯದಲ್ಲೂ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾಭಾವ ಇರಲಿ. ಆಗ ಮನುಷ್ಯಗ್ರಹಿಕೆಗೂ ಮೀರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು (ಫಿಲಿಪ್ಪಿ : -). ನಿರಂತರವಾಗಿ ದೇವರಿಂದ ಪಡೆದ ಉಪಕಾರಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸುವ ಮನವೇ ಧನ್ಯ.
ಉತ್ತರ: ದೇವರೆ ನಿಮಗೆ ಸ್ತುತಿಯಾಗಲಿ
ಪೀಠಿಕೆ
ಪ್ರಭು ಯೇಸು ಕ್ರಿಸ್ತರೇ, ಈ ಪವಿತ್ರ ಪರಮ ಪ್ರಸಾದದಲ್ಲಿ ನೀವು ಇರುವಿರೆಂದು ನಾವು ನಂಬುತ್ತೇವೆ, ಆರಾಧಿಸುತ್ತೇವೆ. ನೀವೇ ನಮ್ಮ ಒಡೆಯರು, ರಾಜಾಧಿರಾಜರು. ಎಲ್ಲಾ ಕಾಲವೂ ಯುಗಗಳೂ ನಿಮ್ಮವೇ. ನೀವೇ ನಮ್ಮ ಒಡೆಯರೂ, ನಮ್ಮ ಅಂತರಂಗಗಳನ್ನು ಆವರಿಸಿರುವ ಪ್ರಭುವೂ ಎಂದು ಮನಗಂಡಿದ್ದೇವೆ. ನಿಮಗೆಂದೇ ಕಾಯ್ದಿರಿಸಲಾಗಿರುವ ನಮ್ಮ ಹೃದಯದ ಎಲ್ಲಾ ಅಭಿಲಾಷೆಗಳನ್ನು ನಿಮ್ಮ ಪೂಜ್ಯ ಪಾದಗಳಿಗರ್ಪಿಸುತ್ತೇವೆ. ಸ್ವರ್ಗದ ಎಲ್ಲಾ ದೂತಗಣಗಳು, ಸೃಷ್ಟಿ ಸಮಸ್ತಗಳು, ಮತ್ತು ತಾಯಿ ಧರ್ಮಸಭೆಯೊಡಗೂಡಿ, ನಮ್ಮ ಆರಾಧನೆ, ಸ್ತುತಿ ವಂದನೆ ನಿಮಗೆ ಪ್ರಭು. ನಿಮ್ಮನ್ನು ನಂಬದ, ಕಡೆಗಾಣಿಸುವ ಹಾಗೂ ತೊರೆದು ಹೋಗಿರುವವರಿಗಾಗಿ ನಿಮ್ಮ ಕ್ಷಮೆ ಕೋರುತ್ತೇವೆ. ಇವರೆಲ್ಲರ ಉಪೇಕ್ಷೆ, ನಿರಾಕರಣೆಗೆ ಕ್ಷಮೆ ಕೋರುತ್ತಾ, ಪ್ರಭು ಯೇಸುವೇ, ನಮ್ಮ ಅಂತರಾಳದ ಸವಿ ಪ್ರೀತಿಯನ್ನು, ನಂಬಿಕೆ ವಿಶ್ವಾಸವನ್ನು ನಿಮಗರ್ಪಿಸುತ್ತೇವೆ.
ಯೇಸುವೇ, ನಮ್ಮ ಸ್ವರ್ಗದೊಡೆಯನೇ, ಇಂದು ನಿಮ್ಮ ಪವಿತ್ರ ಪ್ರಸನ್ನತೆಯ ಮುಂದೆ ನೀವು ನಮಗಾಗಿ ಬಳುವಳಿಯಾಗಿತ್ತ ಈ ಕಳೆದ ಒಂದು ವರ್ಷದ ಆಶೀರ್ವಾದದ ಅನುಭವಗಳಿಗಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ಇಚ್ಛಿಸುತ್ತೇವೆ. ಕಳೆದ ಒಂದು ವರ್ಷದ ನೆನಪುಗಳು ಅವರ್ಣನೀಯ ಭಾವನೆಗಳಿಂದ ನಮ್ಮನ್ನು ಆವರಿಸಿವೆ. ನಮ್ಮಿಂದ ಎಣಿಸಲಸಾಧ್ಯವಾದ ಕೃಪಾವರಗಳಿಂದ ನೀವು ನಮ್ಮನ್ನು ತುಂಬಿದ್ದೀರಿ. ಸದಾ ಕಾಯುವ ನಿಮ್ಮ ಕರಗಳು ನಮ್ಮನ್ನು ಎಲ್ಲೆಲ್ಲಿಯೂ ಸುತ್ತುವರಿದಿದ್ದವು. ನಮಗಾಗಿ ನಿಮ್ಮ ಕೃಪೆಯ ಮಳೆಗರೆದಿರಿ. ನಮ್ಮ ಪಾಪಗಳನ್ನು ಕ್ಷಮಿಸಿ ನಿಮ್ಮ ಸ್ವರ್ಗದ ದ್ವಾರಗಳನ್ನು ತೆರೆದಿರಿ. ನಮ್ಮ ಪಾಪಗಳಿಗೆ ಶಿಕ್ಷಿಸುವ ಬದಲು ನಿಮ್ಮ ಪವಿತ್ರ ರಕ್ತದಿಂದ ನಮ್ಮನ್ನು ಶುದ್ಧೀಕರಿಸಿದ್ದೀರಿ. ನಿಮ್ಮನ್ನು ಕಾಣಲು, ಧ್ಯಾನಿಸಲು ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ನಮಗೆ ನೀಡಿದಿರಿ. ನಿಮ್ಮ ಪವಿತ್ರ ವಾಕ್ಯ ಮತ್ತು ಪೂಜ್ಯ ದೇಹವನ್ನು ನಮ್ಮ ಆತ್ಮಿಕ ಭೋಜನವನ್ನಾಗಿ ನೀಡಿ ಪೋಷಿಸಿದ್ದೀರಿ. ನಮ್ಮ ಎಲ್ಲಾ ಅಪ್ರಾಮಾಣಿಕತೆ, ವಂಚನೆಯ ಕ್ಷಣಗಳ ನಡುವೆಯೂ ನೀವು ನಮ್ಮ ಪ್ರಾಮಾಣಿಕ ಸ್ನೇಹಿತರಾಗಿದ್ದೀರಿ. ಈ ಎಲ್ಲಾ ಕ್ಷಣಗಳಿಗಾಗಿ, ಪ್ರಭು ಯೇಸುವೇ, ನಿಮಗೆ ನಮ್ಮ ಕೃತಜ್ಞತೆ ಮತ್ತು ಪ್ರೀತಿಯನ್ನು ಸಮರ್ಪಿಸುತ್ತೇವೆ.
ದೈಹಿಕವಾಗಿಯೂ, ಭೌತಿಕವಾಗಿಯೂ ನಾವು ನಿಮ್ಮಿಂದ ಅನೇಕ ವರಗಳನ್ನು ಪಡೆದಿದ್ದೇವೆ. ಕಳೆದ ವರ್ಷದಲ್ಲಿ ಅನೇಕ ಬಾಧೆ-ಬೇನೆಗಳಿಂದ ನಮ್ಮನ್ನು ಪಾರು ಮಾಡಿದ್ದೀರಿ. ನಮ್ಮನ್ನು ಆಕಸ್ಮಿಕ ಮರಣಕ್ಕೂ, ಪಾಪಶೋಧನೆಗೂ ಈಡು ಮಾಡುವ ಆಘಾತಗಳಿಂದ ಪಾರುಮಾಡಿದ್ದಕ್ಕಾಗಿ ವಂದನೆಗಳನ್ನು ಸಲ್ಲಿಸುತ್ತೇವೆ. ನಮ್ಮ ಪ್ರೀತಿಯ ತಂದೆ-ತಾಯಿ, ಒಡಹುಟ್ಟಿದವರು, ಸ್ನೇಹಿತರು, ಬಂಧುಗಳು, ಇವರ ಮೂಲಕ ನಿಮ್ಮ ಪ್ರೀತಿ ಹಾರೈಕೆಯನ್ನು ಅನುಭವಿಸಿದ ಕ್ಷಣಗಳಿಗಾಗಿಯೂ ನಿಮಗೆ ವಂದನೆಯನ್ನು ಸಲ್ಲಿಸುತ್ತೇವೆ. ಪ್ರಭೂ ನಮ್ಮ ನಂಬಿಕೆ ಆತ್ಮಸ್ಥೈರ್ಯ ಮತ್ತು ಆಧ್ಯಾತ್ಮಿಕ ಬಲವನ್ನು ಕುಗ್ಗಿಸುವ ಕ್ಷಣಗಳಿಂದ ನಮ್ಮನ್ನು ಮೇಲೆತ್ತಿದ್ದಕ್ಕಾಗಿ ವಂದನೆಗಳು. ತಂದೆಯಾದ ದೇವರೇ, ನೀವು ನಮಗೆ ದಯಪಾಲಿಸಿದ ಸಕಲ ವರಗಳಿಗಾಗಿ ನಿಮ್ಮ ಪುತ್ರ ಯೇಸುವಿನ ಪೂಜ್ಯ ಶರೀರ ಮತ್ತು ರಕ್ತವನ್ನು ನಿಮಗೆ ಸಮರ್ಪಿಸುತ್ತೇವೆ.
ಯೇಸುಪ್ರಭುವೇ, ಈ ವರುಷದಲ್ಲಿ ನೀವು ಕರುಣಿಸಿದ ಪ್ರತಿ ದಿನಗಳನ್ನು ಸ್ಮರಣೆಗೆ ತಂದುಕೊಳ್ಳುತ್ತಾ ನಿಮ್ಮ ಕೃಪೆಯನ್ನು ಕಡೆಗಾಣಿಸಿದ ಸಂದರ್ಭಗಳಿಗಾಗಿ ಪಶ್ಚಾತ್ತಾಪ ಪಡುತ್ತೇವೆ. ನಿಮ್ಮ ಪ್ರೀತಿಯಲ್ಲಿ ವೃದ್ಧಿಸುವ, ಸುಗುಣಗಳನ್ನು ಗಳಿಸಿಕೊಳ್ಳುವ, ನಮ್ಮ ನೆರೆಹೊರೆಯವರಿಗೆ ನೆರವಾಗುವ, ತ್ಯಾಗಗಳ ಮೂಲಕ ಸ್ವರ್ಗೀಯ ಸದನದಲ್ಲಿ ನಮ್ಮ ಸಿರಿಯನ್ನು ಕೂಡಿಡುವ ಎಷ್ಟೋ ಅವಕಾಶಗಳನ್ನು ನೀವು ನಮಗೆ ನೀಡಿದ್ದೀರಿ. ಆದರೆ ಅವೆಲ್ಲವುಗಳನ್ನು ನಮ್ಮ ಅವಿವೇಚನೆಯಿಂದ ಕಳೆದುಕೊಂಡಿದ್ದೇವೆ. ಓ ದಯಾಮಯ ದೇವರೇ, ಫಲ ಬಿಡದ ಅಂಜೂರದ ಮರಕ್ಕೆ ಕರುಣೆಯಿಂದ ಮತ್ತೊಂದು ಅವಕಾಶವನ್ನು ನೀಡಿದಂತೆ ನಮ್ಮ ಮೇಲೂ ಕಾರುಣ್ಯವಂತರಾಗಿ ನಮ್ಮ ಜೀವನವನ್ನು ಮರು ರೂಪಿಸಿಕೊಳ್ಳಲು ಮತ್ತೊಂದು ಅವಕಾಶವನ್ನು ನೀಡಿರಿ.
ಯೇಸು ಪ್ರಭುವೇ, ನಿಮ್ಮ ಸ್ವರ್ಗೀಯ ಪಿತನಿಗೆ ನಾವು ಸದಾ ಕೃತಜ್ಞರಾಗಿ ಬಾಳುವಂತೆ ನೀವು ಅಪೇಕ್ಷಿಸುತ್ತೀರಿ. ನಿಮ್ಮಿಂದ ಗುಣಮುಖನಾಗಿ ತಿರುಗಿ ಬಂದು ನಿಮ್ಮನ್ನು ವಂದಿಸಿದ ಆ ಒಬ್ಬ ಕುಷ್ಠರೋಗಿಯ ಧನ್ಯತಾಭಾವವನ್ನು ಕಂಡು ನೀವು ಪರವಶರಾದಿರಿ. ಇಂದು ನಮ್ಮ ಕೃತಜ್ಞತಾಪೂರ್ಣ ಹೃದಯಗಳೊಂದಿಗೆ ಇಷ್ಟು ವರ್ಷ ನೀವು ಮಾಡಿದ ಎಲ್ಲಾ ಉಪಕಾರಗಳಿಗಾಗಿ ವಂದನೆ ಸಲ್ಲಿಸಲು ನಿಮ್ಮ ದಿವ್ಯ ಸಾನ್ನಿಧ್ಯದಲ್ಲಿ ಸೇರಿದ್ದೇವೆ. ನಾವು ಈ ಕೆಲಕ್ಷಣ ಕಳೆಯುವ ಆರಾಧನಾ ಸಮಯ ನಮ್ಮ ಕೃತಜ್ಞತೆಯ ಅಭಿವ್ಯಕ್ತಿಯಾಗಿರಲಿ. ನಾವು ನಿಮಗೆ ಸಲ್ಲಿಸಲು ಇಚ್ಛಿಸುವ ನಮ್ಮ ಸ್ತುತಿಸ್ತೋತ್ರ ಆರಾಧನೆ ನಿಮ್ಮ ಸಾನ್ನಿಧ್ಯಕ್ಕೆ ಏರುವಂತೆ ನಿಮ್ಮ ಕಾರುಣ್ಯಭರಿತ ಪ್ರೀತಿ ಮತ್ತು ಆಶೀರ್ವಾದಗಳು ದೀನರಾದ ನಮ್ಮ ಮೇಲೆ ಇಳಿದು ಬರಲಿ.

ಶ್ಲೋಕ
ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ /
೨ ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ /
ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ //
ಭೂನಿವಾಸಿಗಳೇ, ಜಯಘೋಷ ಮಾಡಿ ಪ್ರಭುವಿಗೆ /
೩ ಪ್ರಭುವೇ ದೇವರೆಂಬುದನು ಮರೆತು ಬಿಡಬೇಡಿ ನೀವು /
ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು /
ಆತನ ಜನ, ಆತನೆ ಮೇಯಿಸುವ ಕುರಿಗಳು ನಾವು //
ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ /
೪ ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ /
ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ /
ಆತನ ನಾಮವನು ಕೊಂಡಾಡಿ ಉಪಕಾರ ಸ್ಮರಣೆಯೊಂದಿಗೆ //
ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ /
೫ ಹೌದು, ಪ್ರಭುವೆನಿತೋ ಒಳ್ಳೆಯವನು /
ಇರುವುದಾತನ ಪ್ರೀತಿ ಯುಗಯುಗಕೂ /
ಆತನ ಸತ್ಯತೆ ತಲತಲಾಂತರಕೂ //
ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ /

ಮೌನ ಆರಾಧನೆ
ಹಾಡು
ವಾಚನ: ಕೊಲೊಸ್ಸೆ ೩: ೧೨-೧೭
ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು. ದೇವರ ಸ್ವಂತ ಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣಗಳಾಗಿರಲಿ. ಒಬ್ಬರನ್ನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು ಸಂಪೂರ್ಣಗೊಳಿಸುವ ಬಂಧನ. ನಿಮ್ಮ ಹೃನ್ಮನಗಳು ಕ್ರಿಸ್ತಯೇಸುವಿನ ಶಾಂತಿ ಸಮಾಧಾನದಿಂದ ತುಂಬಿರಲಿ. ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ; ಕೃತಜ್ಞತೆ ಉಳ್ಳವರಾಗಿ ಜೀವಿಸಿರಿ. ಕ್ರಿಸ್ತಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶ ಮಾಡಿರಿ ಹಾಗೂ ಬುದ್ಧಿ ಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ತಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ. ನುಡಿಯಲ್ಲಾಗಲೀ ನಡತೆಯಲ್ಲಾಗಲೀ ನೀವು ಏನು ಮಾಡಿದರೂ ಯೇಸುಸ್ವಾಮಿಯ ಹೆಸರಿನಲ್ಲಿಯೇ ಮಾಡಿರಿ. ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.
ಚಿಂತನೆ
ಸಂತ ಪೌಲರು, ನಾವು ಸದಾ ಕೃತಜ್ಞತೆಯುಳ್ಳವರಾಗಿರುವಂತೆಯೂ, ಕೀರ್ತನೆಗಳಿಂದ ದೇವರನ್ನು ಸಂಕೀರ್ತಿಸುವಂತೆಯೂ ನಮ್ಮನ್ನು ಹುರಿದುಂಬಿಸುತ್ತಾರೆ. ನಾವು ಮಾಡುವುದೆಲ್ಲವೂ ಯೇಸುವಿನ ಹೆಸರಿನಲ್ಲಿ ತಂದೆ ದೇವರಿಗೆ ಕೃತಜ್ಞತೆ ಸಲ್ಲಿಸುವಂತದ್ದಾಗಿರಬೇಕು. ದೇವರಿಗೆ ಸದಾ ಮಹಿಮೆ ಸಲ್ಲಿಸಬೇಕೆಂಬುದು ಅಪೋಸ್ತಲ ಪೌಲರ ನಿರೀಕ್ಷೆಯಾಗಿದೆ. ನಮ್ಮ ನಡೆಯಲ್ಲೂ ನುಡಿಯಲ್ಲೂ ನಾವು ದೇವರಿಗೆ ಧನ್ಯತೆಯನ್ನು ತೋರ್ಪಡಿಸಬೇಕು. ಕೃತಜ್ಞರಾಗಿ ಬಾಳಬೇಕಾದ ಮಾದರಿಯನ್ನು ಯೇಸುವೇ ನಮಗೆ ತೋರಿಸಿದ್ದಾರೆ. ಪ್ರತಿ ಸಂದರ್ಭದಲ್ಲೂ ಪದೇ ಪದೇ ಅವರು ತಮ್ಮ ತಂದೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು. ಪ್ರತಿ ಅದ್ಭುತಕಾರ್ಯಗಳನ್ನು ಕೈಗೊಳ್ಳುವ ಮೊದಲು ಸ್ವರ್ಗದೆಡೆಗೆ ತಮ್ಮ ಕರಗಳನ್ನೆತ್ತಿ ತಂದೆ ದೇವರಿಗೆ ವಂದನೆ ಸಲ್ಲಿಸುವುದು ಅವರ ವಾಡಿಕೆಯಾಗಿತ್ತು. ಯೇಸುವನ್ನು ಅನುಕರಿಸುತ್ತಾ ದೇವರನ್ನು ವಂದಿಸುವ ಸುಗುಣವನ್ನು ನಾವು ರೂಢಿಸಿಕೊಳ್ಳಬೇಕು. ಇಂದು ನಮ್ಮ ಸ್ಮರಣೆಗೆ ಬರುವ ಕಳೆದ ವರ್ಷದ ಅನುಭವಗಳು ದೇವರನ್ನು ವಂದಿಸುವ ಮುಖ್ಯ ಕಾರಣಕ್ಕೆಂದೇ ನೆನಪಾಗುತ್ತವೆ. ಲೆಕ್ಕವಿಲ್ಲದಷ್ಟು ಅನುಗ್ರಹ, ವರಗಳನ್ನು ದೇವರು ನಮಗಿತ್ತಿದ್ದಾರೆ. ದೈವೀ ಸಾನ್ನಿಧ್ಯದ ಸನಿಹತೆಯ ಸಾವಿರ ಅವಕಾಶಗಳು ನಮಗೆ ದೊರೆತಿವೆ. ಸಂತೋಷದ ಕ್ಷಣಗಳು ಮತ್ತು ನೋವು ಸಂಕಷ್ಟಗಳ ಸಾಧನದಿಂದ ನಮ್ಮನ್ನು ಪರಿಷ್ಕರಿಸಿದ ಕ್ಷಣಗಳೆಲ್ಲವನ್ನು ನಾವು ನೆನಪಿಗೆ ತಂದುಕೊಳ್ಳಬೇಕಾಗಿದೆ. ಜೊತೆಗೆ ನಮ್ಮನ್ನು ಶಿಕ್ಷಿಸದೆ ನಮ್ಮ ಪಾಪಗಳನ್ನು ಕ್ಷಮಿಸಿ, ಮನಪರಿವರ್ತನೆಗೆ ಮತ್ತೊಂದು ಅವಕಾಶ ಕೊಟ್ಟಿದ್ದಕ್ಕಾಗಿ ವಂದನೆ ಸಲ್ಲಿಸಬೇಕಾಗಿದೆ. ಫಲ ಬಿಡದ ಮರದ ರಕ್ಷಣೆ ಬಯಸಿದ ಯೇಸುಪ್ರಭು ನಮ್ಮನ್ನು ತಮ್ಮ ಪ್ರೀತಿಯಿಂದ ಬೇರ್ಪಡಿಸದೆ ಕರುಣೆ ತೋರಿಸಿದ್ದಕ್ಕಾಗಿ ವಂದಿಸೋಣ.
ಎಷ್ಟೋ ಬಾರಿ ನಮ್ಮ ಕೃತಘ್ನ ಭಾವನೆ ಯೇಸುವಿನ ಹೃದಯವನ್ನು ಘಾಸಿಗೊಳಿಸಿದೆ. ಇದನ್ನು ಸಂತ ಮಾರ್ಗರೆಟ್ ಮೇರಿಯವರಿಗೆ ತಾವೇ ಸ್ವತಃ ಅರುಹಿದ್ದಾರೆ. ಇನ್ನೆಂದೂ ಕೃತಘ್ನರಾಗಿ ಬಾಳದಿರೋಣ. ದೇವರ ಪ್ರೀತಿಯನ್ನು ನಿರಾಕರಿಸಿ ನಡೆಯುವುದೇ ಎಷ್ಟೋ ಬಾರಿ ನಾವು ದೇವರಿಗೆ ಕೃತಘ್ನರಾಗಿದ್ದಂತೆ. ಪ್ರಾಮಾಣಿಕತೆ ಮತ್ತು ಉತ್ಸುಕತೆಯಿಂದ ನಮ್ಮ ಕೃತಜ್ಞತೆಯನ್ನು ತೋರ್ಪಡಿಸೋಣ. ಭಗವಂತ ಕರುಣಿಸಿದ ದಿವ್ಯ ವರಪ್ರಸಾದಗಳಿಗೆ ನಾವು ವಂದಿಸುವುದಾದರೂ ಹೇಗೆ? ಕೀರ್ತನೆಕಾರ ಹೇಳುತ್ತಾನೆ: ’ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು, ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು’. ಬಲಿ ಆರಾಧನೆ ನಮ್ಮ ಧನ್ಯತೆಯನ್ನು ಅಭಿವ್ಯಕ್ತಿಸುವ ಒಂದು ಮಹೋನ್ನತ ಕ್ರಿಯೆ. ಆದ್ದರಿಂದ ಕ್ರಿಸ್ತನ ಪೂಜ್ಯ ಶರೀರ ಮತ್ತು ರಕ್ತದ ಅರ್ಪಣೆಯ ಮೂಲಕ ನಮ್ಮ ತಂದೆ ದೇವರಿಗೆ ಕೃತಜ್ಞತೆಯನ್ನು ಸಮರ್ಪಿಸೋಣ.
ಪ್ರಾರ್ಥನೆಗಳು
೧. ಪ್ರಭು ಯೇಸುವೇ, ನಿಮ್ಮ ವಾಕ್ಯ ಮತ್ತು ಸಂಸ್ಕಾರಗಳಿಂದ ನಮ್ಮನ್ನು ಪೋಷಿಸಿ ನಿಮ್ಮ ಪ್ರೀತಿ ಮತ್ತು ಪಾವಿತ್ರ್ಯದಲ್ಲಿ ಬೆಳೆಯಲು ನೀವು ಅನುಗ್ರಹಿಸಿದ ಅಸಂಖ್ಯ ಸನ್ನಿವೇಶಗಳಿಗಾಗಿ,
ಎಲ್ಲರೂ: ಪ್ರಭುವೇ, ನಿಮ್ಮನ್ನು ವಂದಿಸಿ ಸ್ತುತಿಸುತ್ತೇವೆ.
೨. ನಾವು ಪಾಪದಲ್ಲಿ ಬಿದ್ದು ನಿಮ್ಮ ಪ್ರೀತಿಯನ್ನು ನಿರಕರಿಸಿದ್ದಾಗ್ಯೂ ನಿಮ್ಮ ಕರುಣೆಯಿಂದ ನಮ್ಮನ್ನು ಅನುಗ್ರಹದ ಬದುಕಿಗೆ ಪುನಃ ಕರೆತಂದುದಕ್ಕಾಗಿ,
ಎಲ್ಲರೂ: ಪ್ರಭುವೇ, ನಿಮ್ಮನ್ನು ವಂದಿಸಿ ಸ್ತುತಿಸುತ್ತೇವೆ.
೩. ನಮ್ಮ ಅವಶ್ಯಕತೆಗಳಲ್ಲಿ ನಮಗೆ ನೆರವಾಗಲು ನಮ್ಮ ಬೆಳವಣಿಗೆಯಲ್ಲಿ ಆಸಕ್ತಿ ತೋರಿ ನಮ್ಮನ್ನು ಪ್ರೀತಿಸುವ ಸ್ನೇಹಿತರನ್ನು ಕರುಣಿಸಿದುದಕ್ಕಾಗಿ.
ಎಲ್ಲರೂ: ಪ್ರಭುವೇ, ನಿಮ್ಮನ್ನು ವಂದಿಸಿ ಸ್ತುತಿಸುತ್ತೇವೆ.
೪. ನಮಗೆ ಅನೇಕ ಬಾರಿ ಎದುರಾಗಬಹುದಾಗಿದ್ದ ಆಪತ್ತುಗಳಿಂದ ಸಂರಕ್ಷಿಸಿ ದುರ್ಮರಣದಿಂದ ನಮ್ಮನ್ನು ಕಾಯ್ದು ಕಾಪಾಡಿದುದಕ್ಕಾಗಿ.
ಎಲ್ಲರೂ: ಪ್ರಭುವೇ, ನಿಮ್ಮನ್ನು ವಂದಿಸಿ ಸ್ತುತಿಸುತ್ತೇವೆ.
೫. ನಮ್ಮ ಜೀವನದ ಏಳು-ಬೀಳುಗಳಲ್ಲಿ ದೀನತೆಯನ್ನು ಕಲಿಸಿ, ಜೀವನದ ಶಿಲುಬೆ ಮತ್ತು ನೋವುಗಳಿಂದ ನಮ್ಮನ್ನು ಸಂಸ್ಕರಿಸಿದುದಕ್ಕಾಗಿ,
ಎಲ್ಲರೂ: ಪ್ರಭುವೇ, ನಿಮ್ಮನ್ನು ವಂದಿಸಿ ಸ್ತುತಿಸುತ್ತೇವೆ.
೬. ನಮ್ಮ ಅಸಡ್ಡೆತನಗಳನ್ನು ಪರಿಗಣಿಸದೆ, ನಮ್ಮ ಧೂರ್ತ ನಡೆಯಿಂದ ಕಳೆದುಕೊಂಡಿರಬಹುದಾದ ನೂರಾರು ಅನುಗ್ರಹದ ಕ್ಷಣಗಳಿಗೆ ನಮ್ಮನ್ನು ಶಿಕ್ಷಿಸದೆ ಕ್ಷಮಿಸಿದುದಕ್ಕಾಗಿ,
ಎಲ್ಲರೂ: ಪ್ರಭುವೇ, ನಿಮ್ಮನ್ನು ವಂದಿಸಿ ಸ್ತುತಿಸುತ್ತೇವೆ.
ಅಂತಿಮ ಪ್ರಾರ್ಥನೆ

ಕರುಣಾಳು ದೇವರೇ, ಕಳೆದ ವರ್ಷ ನೀವು ನಮಗೆ ಕರುಣಿಸಿರಬಹುದಾದ ಅಗಣಿತ ವರಗಳನ್ನು ನಾವು ಎಣಿಸಲಸಾಧ್ಯ. ನಿಮ್ಮ ಶ್ರೇಷ್ಠ ಪ್ರೀತಿ ಮತ್ತು ಅಪಾರ ಕರುಣೆಯನ್ನು ನಾವು ಎಲ್ಲಾ ಕ್ಷಣಗಳಲ್ಲಿ ಅನುಭವಿಸಿದ್ದೇವೆ. ಅದಕ್ಕಾಗಿ ನಿಮಗೆ ವಂದನೆ ಸಲ್ಲಿಸುತ್ತೇವೆ. ನಮ್ಮೆಲ್ಲಾ ಪಾಪಗಳಿಗಾಗಿ ನಾವು ಕ್ಷಮೆ ಯಾಚಿಸುತ್ತೇವೆ. ಈ ಪ್ರಾರ್ಥನೆಯನ್ನು ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ ಯೇಸುಕ್ರಿಸ್ತರ ಮುಖಾಂತರ ನಿಮ್ಮಲ್ಲಿ ಪ್ರಾರ್ಥಿಸುತ್ತೇವೆ. ಆಮೆನ್.

No comments:

Post a Comment