ಜನವರಿ ೨೯, ೨೦೧೯


ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

29 ಜನವರಿ 2019

ಮಂಗಳವಾರ/ ಹಸಿರು/ ಸಾಧಾರಣ ಕಾಲದ ಮೂರನೇ ವಾರ
1ನೇ ವಾಚನ - ಹಿಬ್ರಿ 1೦: 1-1೦ 
ಕೀರ್ತನೆ - 4೦: 1, 3, 6-7, 9-1೦. 
ಶುಭಸಂದೇಶ - ಮಾರ್ಕ 3: 31-35 
ಐಚ್ಛಿಕ ಸ್ಮರಣೆ - ಸಂತ ಅಪೊಲ್ಲಿನಾರಿಸ್ ಕ್ಲಾಡಿಯಸ್

ವಾಚನಗಳು
ಮೊದಲನೇ  ವಾಚನ

ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ
ಹಿಬ್ರಿ 1೦: 1-1೦ 

1ಧರ್ಮಶಾಸ್ತ್ರವು ಬರಲಿದ್ದ ಸೌಭಾಗ್ಯದ ಛಾಯೆಯೇ ಹೊರತು ಅದರ ನಿಜಸ್ವರೂಪವಲ್ಲ. ವರ್ಷವರ್ಷವೂ ನಿರಂತರವಾಗಿ ಅದೇ ಬಲಿಗಳು ಅರ್ಪಿತವಾಗುತ್ತಿವೆ. ಹೀಗಿರುವಲ್ಲಿ, ದೇವರನ್ನು ಅರಸಿ ಬರುತ್ತಿರುವವರನ್ನು ಇಂಥ ಬಲಿಗಳಿಂದ ಸಿದ್ಧಿಗೆ ತರಲು ಹೇಗೆತಾನೆ ಸಾಧ್ಯ? 2ಹಾಗೆ ಸಿದ್ಧಿಗೆ ತರಲು ಸಾಧ್ಯವಿದ್ದಿದ್ದರೆ ಬಲಿಯರ್ಪಣೆಯು ಎಂದೋ ನಿಂತು ಹೋಗುತ್ತಿತ್ತು. ಏಕೆಂದರೆ, ಆಗ ಆರಾಧಕರು ಒಮ್ಮೆಗೇ ಶುದ್ಧಿಹೊಂದಿ ತಾವು ಪಾಪಿಗಳೆಂಬ ಮನವರಿಕೆಯೇ ಇಲ್ಲದೆ ಇರುತ್ತಿದ್ದರು. 3ಬದಲಿಗೆ, ಪ್ರತಿ ವರ್ಷವೂ ಸಮರ್ಪಿಸಲಾಗುವ ಬಲಿಯರ್ಪಣೆಗಳು ಪಾಪನಿವಾರಣೆ ಆಗದ್ದನ್ನು ಜ್ಞಾಪಕಕ್ಕೆ ತರುತ್ತವೆ. 4ಏಕೆಂದರೆ, ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ. 5ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು. 6ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು. 7ಆಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.”

8ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ “ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುವೂ ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ. 9ಅನಂತರ, “ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ,” ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ. 10ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.


ಕೀರ್ತನೆ 

ಕೀರ್ತನೆ 40:2, 4, 7-8, 10, 11

ಶ್ಲೋಕ: ಪ್ರಭೂ, ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ

2 :   ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ | 
       ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ ||

4 :   ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು | 
       ಗರ್ವಿಗಳನು, ಸುಳ್ಳುದೇವರನು, ಹಿಂಬಾಲಿಸನವನು ||

7 :   ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ | 
       ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? ||

8 :   ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ | 
       ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ”||

9 :   ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ | 
       ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ ||

10 :  ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು | 
        ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು | 
        ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು ||

11 :  ಅಗಲಿಸಬೇಡ ಪ್ರಭೂ, ನಿನ್ನ ಕೃಪೆಯನು ನನ್ನಿಂದ | 
        ನಿನ್ನ ಪ್ರೀತಿ ಸತ್ಯಕೆ ಕಾದಿರಿಸಲಿ ನನ್ನನು ಸತತ ||



ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
29 ಮಾರ್ಕ 3: 31-35

31ಯೇಸುಸ್ವಾಮಿಯ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದರು. ಆದುದರಿಂದ ಅವರು ಹೊರಗೇ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು. 32ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ, ಎಂದು ಯೇಸುವಿಗೆ ತಿಳಿಸಿದರು. 33ಅದಕ್ಕೆ ಯೇಸು, ನನಗೆ ತಾಯಿ ಯಾರು?, ಸಹೋದರರು ಯಾರು? ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ, 

34ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು! 35ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ, ಎಂದರು.  


ಚಿಂತನೆ

``ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ'' ಎಂದು ಯೇಸುವಿಗೆ ತಿಳಿಸಿದಾಗ  ಯೇಸು, ``ನನಗೆ ತಾಯಿ ಯಾರು? ಸಹೋದರರು ಯಾರು?'' ಎಂದು ಪ್ರಶ್ನಿಸುತ್ತಾರೆ. ಯಾರು ಈ ಸಹೋದರರು? ಇವರು ಯೇಸುವಿನ ಸ್ವಂತ ಸಹೋದರರಲ್ಲ, ಮಾತೆ ಮರಿಯೆಳಿಗೆ ಯೇಸುವಿನ ಹೊರತು ಬೇರೆ ಮಕ್ಕಳಿರಲಿಲ್ಲ, ಯೇಸುವಿಗೆ ಸ್ವಂತ ಸಹೋದರರಿದ್ದರೆ ಅವರು ಶಿಲುಬೆಯ ಮೇಲೆ ಪ್ರಾಣ ನೀಗುವ ಸಂದರ್ಭದಲ್ಲಿ ತನ್ನ ತಾಯಿಯನ್ನು ಆಪ್ತ ಶಿಷ್ಯನಿಗೆ ಒಪ್ಪಿಸುತ್ತಿರಲಿಲ್ಲ. 

ಇನ್ನೊಂದು ದೃಷ್ಟಿಯಲ್ಲಿ ನೋಡುವುದಾದರೆ ಯೇಸು ಏಕೆ ಈ ರೀತಿ ವರ್ತಿಸಿದರು? ಅವರ ತಾಯಿಯ ಮೇಲೆ ಗೌರವ ಇರಲಿಲ್ಲವೆ? ಖಂಡಿತ ಇಂತಹ ಭಾವನೆಗಳಿಗೆ ಆಸ್ಪದ ನೀಡಬಾರದು. ಯೇಸುವಿಗೆ ತನ್ನ ತಾಯಿಯ ಮೇಲೆ ಅಪಾರ ಪ್ರೀತಿ ಇತ್ತು. ಇಲ್ಲಿ ಯೇಸು ನಮಗೆ ತಿಳಿಸ ಬಯಸುವುದು ನಮ್ಮ ಮೊದಲ ಆದ್ಯತೆ ದೇವರು. ಜಗದ ಎಲ್ಲಾ ಸಂಬಂಧಗಳಿಗಿಂತ ಆ ಸೃಷ್ಟಿಕರ್ತ ದೇವನೊಂದಿಗಿನ ಸಂಬಂಧ ಉತ್ತಮವಾಗಿರಬೇಕು ಹಾಗಾಗಬೇಕಿದ್ದರೆ ನಮ್ಮ ಆದ್ಯತೆ ಆ ದೇವರಾಗಿರಬೇಕು ಎಂಬುದೇ ಯೇಸುವಿನ ಸಂದೇಶ.



ಚಿತ್ರ: ಗೂಗಲ್ಕೃಪೆ
© 'ದನಿ' ಮಾಧ್ಯಮ ಮನೆ


ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment