ಜನವರಿ ೮, ೨೦೧೯

ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

8 ಜನವರಿ 2019

ಮಂಗಳವಾರ/ಬಿಳಿ/ದೈವದರ್ಶನದ ನಂತರದ ಮಂಗಳವಾರ
1ನೇ ವಾಚನ - 1 ಯೊವಾನ್ನ 4: 7-1೦
ಕೀರ್ತನೆ  -  72:  1-4,  7-8
ಶುಭಸಂದೇಶ  -  ಮಾರ್ಕ  6:  34-44 


ವಾಚನಗಳು
ಪ್ರಥಮ ವಾಚನ

ಸಂತ ಯೊವಾನ್ನನು ಬರೆದ ಮೊದಲ ಪತ್ರದಿಂದ ವಾಚನ

7ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು. 8ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿಸ್ವರೂಪಿ. 9ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು. 10ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜ ಗುಣ ತೋರಿಬರುತ್ತದೆ.

ಕೀರ್ತನೆ 
        
ಶ್ಲೋಕ: ರಾಷ್ಟ್ರಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ

1 : ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ|
     ಕಲಿಸು ನಿನ್ನ ನೀತಿಯನು ರಾಜಕುವರನಿಗೆ||

2 : ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ|
     ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ||

3 : ಬೆಟ್ಟಗುಡ್ಡಗಳಿಂದ ಬರಲಿ ಸಮೃದ್ಧಿ|
     ನಿನ್ನ ಪ್ರಜೆಗೆ ಫಲಿಸಲಿ ನ್ಯಾಯನೀತಿ||

4 : ದೀನದಲಿತರನಾತ ಉದ್ಧರಿಸಲಿ|
     ಬಡಬಗ್ಗರಿಗೆ ನ್ಯಾಯ ದೊರಕಿಸಲಿ|
     ಪ್ರಜಾಹಿಂಸಕರನು ಸದೆಬಡಿಯಲಿ||

7 : ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ|
     ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ||

8 : ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ|
     ಮಹಾ ನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ||



ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

34ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು. 35ಅಷ್ಟರಲ್ಲಿ ಸಂಜೆಯಾಗುತ್ತಾ ಬಂದಿತು. ಶಿಷ್ಯರು ಯೇಸುವಿನ ಬಳಿಗೆ ಬಂದು, 36ಈಗಾಗಲೇ ಹೊತ್ತು ವಿರಿಹೋಯಿತು; ಇದು ನಿರ್ಜನ ಪ್ರದೇಶ; ಇನ್ನು ಜನರನ್ನು ಕಳುಹಿಸಿಬಿಡಿ. ಅವರು ಸವಿಪದ ಊರುಕೇರಿಗಳಿಗೆ ಹೋಗಿ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ, ಎಂದರು. 

37ಆಗ ಯೇಸು, ನೀವೇ ಅವರಿಗೆ ಊಟಕ್ಕೇನಾದರೂ ಕೊಡಿ, ಎಂದರು ಅದಕ್ಕೆ ಶಿಷ್ಯರು ನಾವು ಹೋಗಿ ಇನ್ನೂರು ದೆನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುತಂದು ಅವರಿಗೆ ಊಟಕ್ಕೆ ಬಡಿಸೋಣವೇನು? ಎಂದರು. 38ಯೇಸು, ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ, ಹೋಗಿ ನೋಡಿಕೊಂಡು ಬನ್ನಿ, ಎಂದರು. ಅವರು ವಿಚಾರಿಸಿಕೊಂಡು ಬಂದು, ನಮ್ಮಲ್ಲಿ ಐದುರೊಟ್ಟಿ ಮತ್ತು ಎರಡು ವಿನುಗಳಿವೆ, ಎಂದು ತಿಳಿಸಿದರು.

39ಎಲ್ಲರು ಪಂಕ್ತಿಪಂಕ್ತಿಯಾಗಿ ಹಸಿರು ಹುಲ್ಲಿನ ಮೇಲೆ ಊಟಕ್ಕೆ ಕುಳಿತುಕೊಳ್ಳಬೇಕೆಂದು ಯೇಸು ಅಪ್ಪಣೆಮಾಡಿದರು. 40ಅವರು ಐವತ್ತರಂತೆಯೂ ನೂರರಂತೆಯೂ ಪಂಕ್ತಿಯಲ್ಲಿ ಕುಳಿತರು. 41ಯೇಸು ಆ ಐದು ರೊಟ್ಟಿಗಳನ್ನೂ ಎರಡು ವಿನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಆ ರೊಟ್ಟಿಗಳನ್ನು ಮುರಿದು ಜನರಿಗೆ ಬಡಿಸುವಂತೆ ಅವನ್ನು ಶಿಷ್ಯರಿಗೆ ಕೊಟ್ಟರು. ಅಂತೆಯೇ ಎರಡು ವಿನುಗಳನ್ನು ಜನರೆಲ್ಲರಿಗೆ ಹಂಚುವಂತೆ ಮಾಡಿದರು. 42ಎಲ್ಲರೂ ಹೊಟ್ಟೆ ತುಂಬಾ ತಿಂದು ತೃಪ್ತರಾದರು. 43ಇನ್ನೂ ಉಳಿದಿದ್ದ ರೊಟ್ಟಿ ಮತ್ತು ವಿನಿನ ತುಂಡುಗಳನ್ನು ಒಟ್ಟುಗೂಡಿಸಿದಾಗ, ಅವು ಹನ್ನೆರಡು ಬುಟ್ಟಿ ತುಂಬ ಆದವು. 44ಊಟ ಮಾಡಿದವರಲ್ಲಿ ಗಂಡಸರ ಸಂಖ್ಯೆಯೇ ಐದು ಸಾವಿರ. 

ಚಿಂತನೆ
ಆಧ್ಯಾತ್ಮಿಕ ಹಸಿವು

ಆಹಾರ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಬಡವರ, ನಿರ್ಗತಿಕರ ಕಷ್ಟ, ಹಸಿವನ್ನು ಕಂಡಾಗ ಕ್ರಿಸ್ತನ ಮನ ಕರಗುತಿತ್ತು. ತಮ್ಮ ಬೋಧನೆಯ ಮೂಲಕ ಆಧ್ಯಾತ್ಮಿಕ ಹಸಿವನ್ನು ನೀಗಿಸುವುದರ ಜೊತೆಗೆ  ಶಾರೀರಿಕ ಹಸಿವನ್ನು ನೀಗಿಸುತ್ತಾರೆ. ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಐದು ಸಾವಿರ ಜನರಿಗೆ ಭೋಜನ ಹಂಚುವುದನ್ನು ನಾವು ಓದುವಾಗ ಇಸ್ರಯೇಲ್ ಜನರಿಗೆ ಮರುಭೂಮಿಯಲ್ಲಿ ಸರ್ವೇಶ್ವರ ಸ್ವಾಮಿ ಮನ್ನಾ ನೀಡಿದ್ದನ್ನು ನೆನಪಿಸುತ್ತದೆ (ವಿಮೋ 16; ಸಂಖ್ಯಾ 11) ಮತ್ತು ಯೇಸುಸ್ವಾಮಿ ಧರೆಗಿಳಿದ ಜೀವಂತ ಮನ್ನಾ ಎಂಬುದನ್ನು ಮುಂತಿಳಿಸುತ್ತದೆ. ಕ್ರಿಸ್ತನಿಗಿದ್ದ ಅನುಕಂಪದ ಮನಸ್ಸು ನಮ್ಮದಾಗಲಿ. ಕ್ರಿಸ್ತ ತಮ್ಮ ಬೋಧನೆ ಮತ್ತು ವ್ಯಕ್ತಿತ್ವದಿಂದ ಜನ ಸಮೂಹವನ್ನು ಆಕರ್ಷಿಸಿದಂತೆ ನಾವು ಕೂಡ ನಮ್ಮ ಬದುಕಿನಿಂದ ಸದ್ಗುಣಗಳಿಂದ ಕ್ರಿಸ್ತನನ್ನು ಪ್ರತಿಬಿಂಬಿಸುತ್ತಾ ಜನರನ್ನು ಕ್ರಿಸ್ತನೆಡೆಗೆ ಸೆಳೆಯ ಬೇಕಿದೆ.


© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment