ಅಬ್ರಹಾಮ

ನೋಹನ ಮಕ್ಕಳ ವಂಶಾವಳಿಯ ಪಟ್ಟಿಯು ಅಬ್ರಾಮನೊಂದಿಗೆ ಕೊನೆಗೊಳ್ಳುತ್ತದೆ. ನಂತರ ಅವನು ಅಬ್ರಹಾಮನಾದನು. ದೇವರು ಅಬ್ರಾಮನಿಗೆ ಅವನ ಸ್ವಂತ ಊರಾದ ಕಲ್ದೀಯರ (ದಕ್ಷಿಣ ಮೆಸಪೊತಾಮ್ಯದಲ್ಲಿರುವ) ಊರ್ ಎಂಬ ಪಟ್ಟಣದಿಂದ ಹೊರಟು ಕಾನಾನ್ ದೇಶಕ್ಕೆ ಹೋಗುವಂತೆ ಹೇಳಿದರು. ದೇವರೊಂದಿಗೆ ವಿಶೇಷ ಸಂಬಂಧ ಹೊಂದಿದ ಮಹಾಜನಾಂಗ ಅವನಿಂದ ಉಂಟಾಗುವುದೆಂದೂ, ಅಬ್ರಹಾಮ ಮತ್ತು ಅವನ ಹೆಂಡತಿ ಸಾರಳಿಗೂ ಹಾಗೂ ಅವರ ಸಂತತಿಯ ನಿಮಿತ್ತವಾಗಿ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದ ಉಂಟಾಗುವುದೆಂದೂ ದೇವರು ವಾಗ್ದಾನ ಮಾಡಿದರು. ಆದಿ. 12:1-3; 15:1-21). ಹೀಗಾಗಿ ಅಬ್ರಹಾಮನು ಸಾರಳು ಮತ್ತು ತನ್ನ ತಮ್ಮನ ಮಗನಾದ ಲೋಟನೊಂದಿಗೆ ಹೊರಟನು. ಮುಂದೆ ಇಸ್ರಾಯೇಲರ ಚರಿತ್ರೆಯಲ್ಲಿ ಪ್ರಮುಖವಾಗುವ ಸ್ಥಳಗಳನ್ನು (ಶೆಕಮ್ ಮತ್ತು ಬೇತಲ್ ಆದಿ: 12:4-9) ದಾಟಿ, ಐಗುಪ್ತದಲ್ಲಿ ಬಹಳ ದಿನಗಳವರೆಗೆ ತಂಗಿದ್ದು, ಕೊನೆಗೆ ಕಾನಾನ್ ದೇಶದಲ್ಲಿ ನೆಲೆಸಿದನು. ಲೋಟನು ಜೋರ್ಡನ್ ಹೊಳೆಗೆ ಮೂಡಣಕ್ಕಿರುವ ಪ್ರದೇಶದಲ್ಲಿ ನೆಲೆಸಿದನು, ಅಬ್ರಹಾಮನು ಪಶ್ಚಿಮದಲ್ಲಿದ್ದ ಹೆಬ್ರೋನಿನ ಸಮೀಪದಲ್ಲಿರುವ ಮಮ್ರೆ ತೋಪಿನಲ್ಲಿ ವಾಸ ಮಾಡಿದನು.(ಆದಿ 13)
ಅಬ್ರಹಾಮನಿಗೆ ಮಕ್ಕಳಿಲ್ಲದಿದ್ದಾಗ್ಯೂ, ಅವನಿಂದ ಬಹು ಸಂತತಿ ಉಂಟಾಗುವುದೆಂದು ದೇವರು ಅವನಿಗೆ ವಾಗ್ದಾನ ಮಾಡಿದರು (ಆದಿ.15). ಕೊನೆಯಲ್ಲಿ ಅಬ್ರಹಾಮನು ತೊಂಭತ್ತೊಂಭತ್ತು ವರ್ಷದವನಾದಾಗ, ಸಾರಳು ಅವನಿಗೆ ಮಗನನ್ನು ಹೆತ್ತಳು. ಆ ಮಗುವಿಗೆ ಇಸಾಕನೆಂದು ಹೆಸರಿಟ್ಟರು. ಈ ಹೆಸರಿನ ಅರ್ಥ “ನಗುವಂತೆ ಮಾಡುವುದು” ಅಥವಾ ನಗುವುದು. ಯಾಕೆಂದರೆ ವೃದ್ಧಾಪ್ಯದಲ್ಲಿ ತನಗೆ ಮಗುವಾಗುವುದೆಂಬ ವಿಷಯ ತಿಳಿದಾಗ ಸಾರಳು ನಕ್ಕಿದ್ದಳು. (ಆದಿ.18:9-15). ಅಬ್ರಹಾಮನು ದೇವರ ವಾಗ್ದಾನದಲ್ಲಿ ಭರವಸೆ ಇಟ್ಟನು (ಆದಿ.17: 1-27) ಮತ್ತು ಅವನು ಒಬ್ಬ ಮಗನನ್ನು ಪಡೆದನು. ದೇವರೊಂದಿಗೆ ಅಬ್ರಹಾಮನಿಗಿದ್ದ ವಿಶೇಷವಾದ ಸಂಬಂಧದ ಗುರುತಾಗಿ ಇಸಾಕನಿಗೆ ಸುನ್ನತಿಯಾಯಿತು (ಆದಿ 21:1-7). ಇಸಾಕನನ್ನು ಬಲಿಯಾಗಿ ಸಮರ್ಪಿಸಬೇಕೆಂದು ದೇವರು ಹೇಳಿದಾಗಲೂ, ದೇವರಲ್ಲಿ ಅವನಿಗಿದ್ದ ಭರವಸೆಯು ಮುಂದುವರಿಯಿತು. ಆದರೆ ದೇವರು ಇಸಾಕನನ್ನು ಉಳಿಸಿದರು. ಭೂಮಿಯ ಮೇಲಿನ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವಂತೆ ಅವನಿಂದ ಅಸಂಖ್ಯವಾದ ಸಂತತಿಯನ್ನುಂಟು ಮಾಡುವೆನೆಂದು ದೇವರು ತಿರುಗಿ ಅಬ್ರಹಾಮನಿಗೆ ವಾಗ್ದಾನ ಮಾಡಿದರು. (ಆದಿ. 22:1-19). ಹೊಸ ಒಡಂಬಡಿಕೆಯಲ್ಲಿ ದೇವರ ವಾಗ್ದಾನಗಳಲ್ಲಿ ಮಾನವನಿಗಿರುವ ನಂಬಿಕೆಗೆ ಅನೇಕ ಸಾರಿ ಅಬ್ರಹಾಮನನ್ನು ಉದಾಹರಿಸಲಾಗಿದೆ. (ಅ.ಕೃ.7:2-50); ರೋಮಾ 4:1-25; ಗಲಾ 3:1-29, ಇಬ್ರಿ 6.13, 14; 7:1-10; 11:8)

No comments:

Post a Comment