ಇಗೋ ನಿಮ್ಮ ಅರಸ
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಬಹಳ ದಿನಗಳ ನಂತರ
ನನ್ನ ನೆನಪು ನಿಮ್ಮ ಸ್ಮೃತಿಪಟಲದ ಮೇಲೆ ಮೂಡುತ್ತಿದೆ. ನಾನು ಪಿಲಾತ. ಗುರುತು ಸಿಗಲಿಲ್ಲವೇ?
ಅದೇ.. ಕ್ರಿಸ್ತಯೇಸುವನ್ನು ಶಿಲುಬೆಗೇರಿಸಲು ಅನುಮತಿ ಕೊಟ್ಟ ಪೋಂತ್ಸಿಯಸ್ ಪಿಲಾತ ನಾನೇ.
ನಾನು ಆ ಕಾಲದ ಇತರ ರಾಜ್ಯಪಾಲರಂತೆ ಮಡದಿ ಮಕ್ಕಳ ಜೊತೆ ಹಾಯಾಗಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದೆ.
ತಿಂದದ್ದನ್ನು ಅರಗಿಸಿಕೊಳ್ಳವುದಕ್ಕೆ ಜನಗಳ ಮೇಲೆ ಅಧಿಕಾರ ಚಲಾಯಿಸುವುದು, ನ್ಯಾಯ ವಿಚಾರಣೆಗಳಲ್ಲಿ
ತೀರ್ಪು ಕೊಡುವುದು, ಸುಂಕದವರು ಸಂಗ್ರಹಿಸಿದ ಸುಂಕವನ್ನು ರೋಮ್ ಚಕ್ರವರ್ತಿಗೆ ಕಳುಹಿಸುವುದಷ್ಟೆ ನನ್ನ
ದೈನಂದಿನ ಕಾಯಕವಾಗಿತ್ತು. ನಾನೂ ಸಹ ಹೀಗೇ ಜೀವನ ಸಾಗಿಸಿಬಿಟ್ಟಿದ್ದರೆ ಬಹುಶಃ ನಾನು ಇಂದು ನಿಮ್ಮೊಡನೆ
ಮಾತಾನಾಡುತ್ತಿರಲಿಲ್ಲ. ಮಾತಾನಾಡುವುದು ಬಿಡಿ, ಇತಿಹಾಸದಲ್ಲಿ ನನ್ನ ಅಸ್ತಿತ್ವವೇ ಇರುತ್ತಿರಲಿಲ್ಲ.
ಆದರೆ ದೇವರಿಚ್ಛೆಯೇ ಬೇರೆ ಇತ್ತು. ಆ ಒಂದು ದಿನ, ಕರಾಳ ದಿನ, ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು.
ನನ್ನ ಜೀವನವನ್ನು ಬದಲಾಯಿಸಿದ ಆ ದಿನದ ಬಗ್ಗೆ ಶತಮಾನಗಳಿಂದ ನನ್ನೊಳಗೆ ಹುದುಗಿದ್ದ ಭಾವನೆಗಳನ್ನು
ಹಂಚಿಕೊಳ್ಳುತ್ತಿದ್ದೇನೆ .
ಅದು ನಾನು
ಜುದೇಯ ಪ್ರಾಂತ್ಯದ ರಾಜ್ಯಪಾಲನಾಗಿದ್ದ ಕಾಲ. ಇತರ ರಾಜ್ಯಪಾಲರುಗಳಿಗೆ ಹೋಲಿಸಿದರೆ, ನಾನು ರೋಮ್
ಚಕ್ರವರ್ತಿಗೆ ಕೊಂಚ ಸಮೀಪವರ್ತಿ. ಆದ್ದರಿಂದಲೋ ಏನೋ ನಾನು ಇತರ ರಾಜ್ಯಪಾಲರಿಗಿಂತ ಹೆಚ್ಚು ಸಿರಿವಂತನೂ
ಘನವೆತ್ತನೂ ಆಗಿದ್ದೆ.
ಹೀಗೆ, ದಿನಗಳು
ಉರುಳುವಾಗ, ಅದೊಂದು ವರ್ಷ, ನನಗೆ ಇನ್ನೂ ನೆನಪಿದೆ, ಯೆಹೂದ್ಯರ ಪಾಸ್ಖ ಹಬ್ಬ ಸಮೀಪಿಸುತ್ತಿತ್ತು.
ಆದರೆ ಈ ಹಬ್ಬದ ತಯಾರಿಯ ಕೊನೆಯ ದಿನಗಳಲ್ಲಿ ರಾಜ್ಯದಲ್ಲಿ ಏನೋ ವಿಚಿತ್ರ ಕೋಲಾಹಲವಾದಂತೆ ಕಾಣುತ್ತಿತ್ತು.
ಇದು ಯಾವುದೋ ಯೆಹೂದ್ಯರಿಗೆ ಸಂಬಂಧಪಟ್ಟ ವಿಚಾರವೆಂದು ಅದರ ಬಗ್ಗೆ ನಾನು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ.
ಏಕೆಂದರೆ ನಾನು ಯೆಹೂದ್ಯನಲ್ಲವಲ್ಲ. ಇಲ್ಲದ ಉಸಾಬರಿ ನನಗೇಕೆ?
ಆ ದಿನ ಯೆಹೂದ್ಯರ
ಗುಂಪೊಂದು ಯಾರನ್ನೋ ಬಂಧಿಸಿ ಗದ್ದಲ ಕಿರುಚಾಟಗಳಿಂದ ರಾಜಭವನದೊಳಗೆ ಪ್ರವೇಶಿಸಿತು.
ದಿಗ್ಭ್ರಮೆಗೊಂಡ ನಾನು ನನ್ನ ಅಂಗರಕ್ಷಕನನ್ನು ಕೇಳಿದಾಗ "ಯೆಹೂದ್ಯರು ನಜರೇತಿನ ಯೇಸುವನ್ನು
ಬಂಧಿಸಿ, ನ್ಯಾಯತೀರ್ಪಿಗೆ ಕರೆತರುತ್ತಿದ್ದಾರೆ" ಎಂದು ಉತ್ತರವಿತ್ತ. "ನಜರೇತಿನ ಯೇಸು!!!"
ಹೌದು, ಈ ತ ಅದೇನೋ ಪವಾಡಗಳನ್ನು ಮಾಡುತ್ತಾನೆಂದು ಈ ಹಿಂದೆ ಕೇಳಿದ್ದೆ. ಆತನನ್ನೇ ಇವರು
ಬಂಧಿಸಿರುವುದು ಪರಮಾಶ್ಚರ್ಯ.
ಎಂದಿನಂತೆ
ನ್ಯಾಯತೀರ್ಪಿಗೆ ಸಿದ್ಧನಾದೆ. ಯೇಸುವನ್ನು ಕರೆತಂದರು. ಜನರೆಲ್ಲರೂ ಹೊರಗಿದ್ದಾಗ , ಕೋಣೆಯೊಳಗಿದ್ದದ್ದು
ಯೇಸು, ನಾನು ಮತ್ತು ನನ್ನಿಬ್ಬರು ಅಂಗರಕ್ಷಕರು. ಸಾವಿರಾರು ಅಪರಾಧಿಗಳನ್ನು ನೋಡಿದ್ದೇನೆ. ಅವರ
ಘನಘೋರ ಕೃತ್ಯಗಳ ಬಗ್ಗೆ ಕೇಳಿದ್ದೇನೆ . ಎಷ್ಟೋ ಜನರಿಗೆ ಮರಣದಂಡನೆ ವಿಧಿಸಿದ್ದೇನೆ. ಆದರೆ ಯಾರ ಬಗ್ಗೆಯೂ
ಕರುಣೆ, ಅನುಕಂಪ, ಕೊನೆಗೆ ಪಾಪಪ್ರಜ್ಞೆಯೂ ಇರಲಿಲ್ಲ. ಆದರೆ ಯೇಸುವನ್ನು ನೋಡಿದ್ದು ಅದೇ ಮೊದಲು.
ಆತನ ಆಳವಾದ ಕಂಗಳು, ತೇಜಸ್ಸು ತುಂಬಿದ ಮುಖಚರ್ಯೆ, ಕಲ್ಲನ್ನೂ ಕರಗಿಸಬಹುದಾದಂತ ನೋಟ,
ಮರಣದಂಡನೆಗೆ ಒಳಗಾಗುತ್ತೇನೆ ಎಂಬ ಯಾವ ದುಃಖ ದುಗುಡಗಳಿಲ್ಲದ ಆತ ಸಾಕ್ಷಾತ್ ಸಂಯಮಮೂರ್ತಿ.
"ನೀನು ಯೆಹೊದ್ಯರ ಅರಸನೋ?" ಎಂದು ಕೇಳಿದೆ. ಯೇಸುವಿನ ಉತ್ತರದಿಂದ
ನನಗೆ ಮಾತೇ ಹೊರಡಲಿಲ್ಲ. ಆಗಲೇ ನಿರ್ಧರಿಸಿಬಿಟ್ಟೆ. "ಯೇಸು ಅಪರಾಧಿಯಲ್ಲ. ಯೇಸುವನ್ನು
ಬಿಡುಗಡೆ ಮಾಡುತ್ತೇನೆ" ಎಂದು. ಆದರೆ ಅಂತರಾಳದಲ್ಲಿ ಯಾರೋ ನುಡಿದಂತೆ "ಪಿಲಾತ, ನೀನು
ಯೇಸುವನ್ನು ಬಿಡುಗಡೆ ಮಾಡುತ್ತೀಯೋ? ಮೊದಲು ನೀನು, ನಿನ್ನನ್ನು ಬಿಡುಗಡೆ ಮಾಡಿಕೊ!" ಎಂದು ಯಾರೋ
ಈ ಟಿಯಿಂದ ತಿವಿದ ಅನುಭವ. ಎದ್ದು ಮಹಡಿಯ ಮುಂಭಾಗಕ್ಕೆ ಹೋದೆ. ಜನರನ್ನುದ್ದೇಶಿಸಿ ಯೇಸುವನ್ನು
ಬಿಡುಗಡೆ ಮಾಡುತ್ತೇನೆಂದಾಗ ಅವರು "ಆತನನ್ನು ಶಿಲುಬೆಗೇರಿಸಿ" ಎಂದು ಬೊಬ್ಬೆಯಿಟ್ಟರು.
ಈ ಗೇನು ಮಾಡಲಿ?
ನಿರಪರಾಧಿ ಕ್ರಿಸ್ತನನ್ನು ಶಿಲುಬೆಗೇರಿಸಲೊ? ಅಥವಾ ಜನರ ಇಚ್ಛೆಗೆ ವಿರುದ್ಧವಾಗಿ ಬಿಡುಗಡೆ ಮಾಡಲೊ?
ನನ್ನ ಜೀವನದ ಮಹಾಗೊಂದಲಕ್ಕೆ ಸಿಲುಕಿದ್ದೇನೆ . ಈ ಗೊಂದಲದಲ್ಲಿ ಗೆದ್ದಿದ್ದು ನನ್ನ ಅಧಿಕಾರದಾಹ.
ಎಲ್ಲಿ ನನ್ನನ್ನು ರಾಜ್ಯಪಾಲನ ಹುದ್ದೆಯಿಂದ ತೆಗೆಯುತ್ತಾರೊ ಎಂಬ ಭಯದಲ್ಲಿ ಸತ್ಯಕ್ಕೆ ದ್ರೋಹ ಎಸಗಿದೆ.
ನಿರಪರಾಧಿಯನ್ನು ದುರ್ಜನರ ಕೈಗೊಪ್ಪಿಸಿದೆ. ಲೋಕಾಭಿಲಾಷೆಗಳಿಗೆ ದಾಸನಾದೆ. ನೀವು ನನ್ನಂತಾಗದಿರಿ.
ಕ್ರಿಸ್ತನ ನೈಜ ಶಿಷ್ಯರಾಗಿ.
ಪ್ರಾರ್ಥನೆ
ಪ್ರಭುವೇ ಸದಾ ನನ್ನ ಪಾಪಗಳಿಂದ ನಿಮ್ಮನ್ನು
ನೋಯಿಸುತ್ತಿದ್ದೇನೆ . ಪದೇ ಪದೇ ನಿಮ್ಮನ್ನು ದಂಡನೆಗೆ ಗುರಿಮಾಡಿದ್ದೇನೆ. ಕ್ಷಮಿಸು ಕ್ರಿಸ್ತ.
ನನ್ನ ನಾ ಅರಿತುಕೊಂಡು ಬಾಳಲು ಕೃಪೆ ನೀಡು. ಆಮೆನ್
ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
No comments:
Post a Comment