ಅರಸ ದಾವೀದನಿಗೆ ಎಷ್ಟು ಜನ ಹಿಂಬಾಲಕರಿದ್ದರೋ, ಅಷ್ಟೇ ಶತ್ರುಗಳೂ ವಿರೋಧಿಗಳೂ ಇದ್ದರು. ತನ್ನ ಮಗನಾದ ಅಬ್ಷಾಲೋಮನೇ ತನಗೆ ಎದುರಾಗಿ ನಿಂತನಲ್ಲ! ದೇಶವನ್ನೇ ತೊರೆದು, ಬರಿಗಾಲಿನಲ್ಲಿ ಅಡವಿಗಳಲ್ಲಿ ತಿರುಗುತ್ತಾ ಪಡಬಾರದ ಕಷ್ಟನಷ್ಟಗಳನ್ನು ಅನುಭವಿಸಿದನಲ್ಲವೇ?
ಅಬ್ಶಾಲೋಮನ ಮರಣದನಂತರ, ದಾವೀದನ ಹಗೆಗಳಲ್ಲಿ ಮತ್ತೊಬ್ಬನಾದ ಶೆಬನು ಆತನಿಗೆ ವಿರುದ್ಧವಾಗಿ ದಂಗೆಯೆದ್ದು ಉತ್ತರದ ಇಸ್ರಾಯೇಲ್ಯರನ್ನು ಎತ್ತಿಕಟ್ಟುತ್ತಿದ್ದನು. "ದಾವೀದನಿಗೂ ನಮಗೂ ಯಾವ ಸಂಬಂಧವೂ ಇಲ್ಲ. ನಾವು ಆತನನ್ನು ತೊರೆದು, ಬೇರೆಯೇ ಇರೋಣ", ಎಂದು ಹೇಳುತ್ತಾ ತಿರುಗುತ್ತಿದ್ದನು.
ಈ ದೇಶದ್ರೋಹಿಯನ್ನು ಹಿಡಿದು ತಂದು ಅವನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ದಾವೀದನು, ತನ್ನ ಅತ್ಯಂತ ಶೂರರಲ್ಲಿ ಒಬ್ಬನಾದ ಯೋವಾಬನಿಗೆ ಆ ಕೆಲಸವನ್ನು ಒಪ್ಪಿಸುತ್ತಾನೆ. (2 ಸಮು 20)
ಶೆಬನು ತಪ್ಪಿಸಿಕೊಂಡು ಅಲ್ಲಿ, ಇಲ್ಲಿ ಓಡುತ್ತಾ ಕಡೆಗೆ "ಆಬೆಲ್ಬೆತ್ಮಾಕ " ಎಂಬ ಊರಿಗೆ ಬಂದು, ತನ್ನ ಸಂಗಡಿಗರೊಂದಿಗೆ ಅಲ್ಲಿ ಆಶ್ರಯ ಪಡೆದನು. ಯೋವಾಬನಿಗೆ ಈ ವಿಷಯ ತಿಳಿದು, ತನ್ನ ನೆಚ್ಚಿನ ಅರಸ ದಾವೀದನಿಗೆ ದ್ರೋಹ ಬಗೆದ ನೀಚ ಶೆಬನಿಗೆ ರಕ್ಷಣೆ ಒದಗಿಸಿದ್ದ ಆ ಊರಿನ ಮೇಲೆ ಕೋಪ ಕುದಿಯುತ್ತಿತ್ತು. ಆ ಹಗೆಸಾಧನೆಗಾಗಿ, ಅಲ್ಲಿಗೆ ಮುತ್ತಿಗೆ ಹಾಕಿ, ಎದುರಾಗಿ ಊರ ಗೋಡೆಗೆ ತಗಲುವಂತೆ ಒಂದು ಮಣ್ಣಿನ ದಿಬ್ಬವನ್ನು ಮಾಡಿ, ಆ ಗೋಡೆಯನ್ನೇ ಕೆಡವಲು ತೊಡಗಿದನು.
"ನಮ್ಮ ಊರ ಗೋಡೆ ಬಿದ್ದರೆ ಇನ್ನು ಮುಗಿಯಿತು! ನಮ್ಮ ಊರು ನಾಶವಾದಂತೆಯೇ "ಎಂದು ಆಬೆಲ್-ಬೇತ್ಮಾಕದ ಜನರು ಗ್ರಹಿಸಿ ನಡುಗಿದರು. ಅರಸ ದಾವೀದನ ಶೂರ ಸೈನ್ಯವನ್ನು ನಮ್ಮ ಸಣ್ಣ ಪಟ್ಟಣ ಎದುರಿಸಲು ಸಾಧ್ಯವೇ? ಎಂದು ತಬ್ಬಿಬ್ಬಾದರು. ಎಷ್ಟು ಚರ್ಚಿಸಿದರೂ ಯಾರಿಗೂ ಈ ಸಮಸ್ಯೆಗೆ ಪರಿಹಾರ ಹೊಳೆಯದೆ ಕೈಕಟ್ಟಿ ಕೂತರು. ಅಂಥ ಸಂದಿಗ್ಧ ಸಮಯದಲ್ಲಿ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಅಲ್ಲಿನ ಒಬ್ಬ ಬುದ್ದಿವಂತ ಸ್ತ್ರೀ (ಆಕೆಯ ಹೆಸರು ಸತ್ಯವೇದದಲ್ಲಿ ಕೊಟ್ಟಿಲ್ಲ) ಎದ್ದುನಿಂತು, "ನನ್ನ ಜನರೇ, ಕೇಳಿರಿ. ದಯವಿಟ್ಟು ಕೇಳಿರಿ. ಯೋವಾಬನು ನನ್ನೊಡನೆ ಮಾತಾಡುವಂತೆ, ಇಲ್ಲಿ ಹತ್ತಿರಕ್ಕೆ ಬರಬೇಕೆಂದು ಹೇಳಿರಿ" ಎಂದು ಉಚ್ಚಸ್ವರದಲ್ಲಿ ಕೂಗಿ ಹೇಳಿದಳು. ಅವಳಿಗೆ ತನ್ನ ಹುಟ್ಟೂರನ್ನು ಹೇಗಾದರೂ ಶತ್ರುಗಳಿಂದ ರಕ್ಷಿಸಬೇಕೆಂಬ ಛಲವಿತ್ತು.
ಸರಿ, ಜನರು ಯೋವಾಬನಿಗೆ ಹತ್ತಿರಕ್ಕೆ ಬರಲು ಕರೆನೀಡಿದರು. ಪುಣ್ಯಕ್ಕೆ ಅವನು ನಿರಾಕರಿಸದೆ, ಊರ ಗೋಡೆಯ ಹತ್ತಿರ ಬರಲು, ಆ ಸ್ತ್ರೀ, "ನೀನು ಯೋವಾಬನೋ" ಎಂದು ಕೇಳಿ ಖಚಿತ ಪಡಿಸಿಕೊಂಡಳು. ಅದಕ್ಕೆ ಯೋವಾಬನು, "ಹೌದು, ನಾನೇ ಯೋವಾಬನು "ಎಂದು ಉತ್ತರ ನೀಡಿದ. ಆಗ, ಆ ಹೆಣ್ಣು, “ಯೋವಾಬನೆ, ನಿನ್ನ ದಾಸಿಯ ಮಾತನ್ನು ಕೇಳು", ಎಂದು ತಗ್ಗಿದ ಧೋರಣೆಯಿಂದಲೇ ಸಂಭಾಷಣೆಯನ್ನು ಪ್ರಾರಂಭಿಸುತ್ತಾಳೆ. ಇಂಥ ಕಠಿಣ ಸಂದರ್ಭದಲ್ಲಿ ಗರ್ವದ ಹಾಗೂ ಕೋಪಬರಿಸುವ ಮಾತುಗಳು ಸೂಕ್ತವಲ್ಲ, ಎಂದು ಆ ಬುದ್ಧಿವಂತ ಮುತ್ಸದ್ದಿಗೆ ತಿಳಿದಿತ್ತು.
"ಕೇಳುತ್ತೇನೆ, ಹೇಳು", ಯೋವಾಬ ಉವಾಚ.
ಅವನಿಗೂ ಆ ಊರ ಗೋಡೆಯನ್ನು ಕೆಡವಿ, ಅಲ್ಲಿನ ಯುದ್ಧಮಾಡಿ ಅಲ್ಲಿನ ಅಮಾಯಕರನ್ನು ಕೊಲ್ಲುವ ಮನಸ್ಸಿರಲಿಲ್ಲ. ಸಂಧಿಮಾರ್ಗವೇ ಉತ್ತಮ ಎಂದು ಅವನ ಅನುಭವ ಹೇಳುತ್ತಿತ್ತು. ಹಾಗಿಲ್ಲದಿದ್ದರೆ, ಒಬ್ಬ "ಯಃಕಶ್ಚಿತ್ ಹೆಂಗಸಿನ" ಮಾತುಗಳಿಗೆ ಎಂದಿಗೂ ಸಮಾಧಾನದಿಂದ ಉತ್ತರ ಕೊಡುತ್ತಿರಲಿಲ್ಲ!
ಆಗ, ಆ ಸ್ತ್ರೀ, ತನ್ನ ಊರಿನ ಪೂರ್ವಾಪರಗಳನ್ನು ಹೇಳತೊಡಗಿ, ಇಲ್ಲಿನವರು ಜ್ಞಾನಿಗಳು, ಶಾಂತಿಪ್ರಿಯರು ಎಂದು ಬಣ್ಣಿಸಿದಳು. ಮುಂದುವರಿಸಿ, "ಇವರು ಅರಸ ದಾವೀದನಿಗೆ, ನಿಷ್ಠುರವಾಗಿಯೂ ಇದ್ದರು” ಎಂಬ ಮುಖ್ಯ ವಿಷಯವನ್ನೂ ತಿಳಿಸಿದಳು. ”ನಮ್ಮ ಪಟ್ಟಣದವರು ಸಮಾಧಾನಿಗಳು, ರಾಜನಿಷ್ಠೆಯುಳ್ಳವರು. ಇದು, ಇಸ್ರಾಯೇಲ್ ಪಟ್ಟಣಗಳ ‘ತಾಯಿ’ ಎಂದು ಹೆಸರುವಾಸಿಯಾಗಿದೆ. ಅಂಥದ್ದನ್ನು ನೀನು ನಾಶಪಡಿಸಬೇಕೆಂದು ಬಂದಿದ್ದೀಯೇ?” ಎಂದು ಕಳಕಳಿಯಿಂದ ಧೈರ್ಯಮಾಡಿಕೊಂಡು, ಯೋವಾಬನಿಗೆ ಕೂಗಿ ಹೇಳಿದಳು.
ಅದಕ್ಕೆ ಯೋವಾಬನ ಉತ್ತರ ಬಹಳ ಸೂಕ್ತವಾಗಿತ್ತು. “ಕೇಳಮ್ಮಾ, ನನಗೆ ನಿಮ್ಮ ಊರನ್ನು ನುಂಗಿಬಿಡುವ ಉದ್ದೇಶ ಇಲ್ಲವೇ ಇಲ್ಲ. ನಾನು ಖಂಡಿತವಾಗಿಯೂ ನಿಮ್ಮನ್ನೆಲ್ಲಾ ಹಾಳುಮಾಡಬೇಕೆಂಬ ಮನಸ್ಸನ್ನು ಹೊಂದಿಲ್ಲ. ಈ ಆಶಯ ನನ್ನಿಂದ ದೂರವಾಗಿರಲಿ. ಅಂಥ ಕ್ರೂರ ಬುದ್ಧಿ ನನಗೆ ಬೇಡವೇ ಬೇಡ! ಆದರೆ, ವಿಷಯ ಹೀಗಿದೆ. ಎಫ್ರಾಯಿಂ ಪರ್ವತಪ್ರದೇಶದ ಬಿಕ್ರೀಯ ಮಗ ಶೆಬ ಎಂಬ ದೇಶದ್ರೋಹಿ, ಅರಸ ದಾವೀದನಿಗೆ ವಿರೋಧವಾಗಿ ಕೈ ಎತ್ತಿದ್ದಾನೆ. ನೀವು ಆಶ್ರಯ ನೀಡಿರುವ ಆ ಪುಂಡನನ್ನು ನನಗೆ ಒಪ್ಪಿಸಿ ಬಿಟ್ಟರೆ ಸಾಕು. ನಾನು ಈ ಸ್ಥಳವನ್ನೇ ಬಿಟ್ಟು ಹೋಗುತ್ತೇನೆ” ಎಂದನು.
ಆಗ, ಆ ದಿಟ್ಟ ಹೆಣ್ಣು, ತನ್ನವರನ್ನು ಕೇಳಿ ಸಮಯ ವ್ಯರ್ಥಮಾಡುವ ಗೋಜಿಗೆ ಹೋಗಲಿಲ್ಲ! ತಾನೇ ತನ್ನ ದೃಢ ನಿರ್ಧಾರವನ್ನು ಯೋವಾಬನಿಗೆ ಹೇಳುತ್ತಾ “ಯೋವಾಬನೇ, ನೋಡು. ಈಗಲೇ ಆ ಶೆಬನ ತಲೆಯನ್ನು ಗೋಡೆಯ ಕಿಂಡಿಯಿಂದ ನಿನ್ನ ಕಡೆಗೆ ನಾವು ಎಸೆಯುತ್ತೇವೆ”, ಎಂದು ಅವನ ಮಾತುಗಳಿಗೆ ಬೆಲೆ ಕೊಟ್ಟಳು. ಇಷ್ಟು ಹೇಳಿ, ಆಕೆ, ತನ್ನವರ ಬಳಿಗೆ ಬಂದು, ವಿವೇಕದ ನಿರ್ಧಾರವನ್ನು ಅವರಿಗೆಲ್ಲಾ ತಿಳಿಸಿದಾಗ, ಅವರು ಅದಕ್ಕೆ ಕೂಡಲೇ ಒಪ್ಪಿಕೊಂಡು, ಶೆಬನನ್ನು ವಧಿಸಿ, ಅವನ ತಲೆಯನ್ನು ಯೋವಾಬನು ನಿಂತಿದ್ದ ಸ್ಥಳಕ್ಕೆ ಬಿಸಾಡಿದರು.
ಈಗ, ಯೋವಾಬನಿಗೆ ಸಮಾಧಾನವಾಯಿತು. ಅವನಿಗೆ ಬೇಕಾದದ್ದೂ ಅಷ್ಟೇ. ಕೂಡಲೇ, ಶಾಂತಿ ಸಾರುವ ತುತ್ತೂರಿ ಊದಿಸಿದನು. ಅವನ ಸೈನಿಕರೆಲ್ಲಾ ಆ ಪಟ್ಟಣವನ್ನು ಬಿಟ್ಟು, ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು. ಯೋವಾಬನು, ಯೆರೂಸಲೇಮಿಗೆ ಹೋಗಿ ದಾವೀದನಿಗೆ ಈ ಘಟನೆಯ ವರದಿ ಒಪ್ಪಿಸಿದನು. ತನ್ನ ವಿವೇಕಯುತ ಮಾತುಗಳಿಂದ, ದಿಟ್ಟತನದಿಂದ ಊರನ್ನು ಕಾಪಾಡಿದ ಹೆಣ್ಣಿನ ಹೆಸರು ಸತ್ಯವೇದದಲ್ಲಿ ಬರೆಯದಿರುವುದು ಅನ್ಯಾಯವೆಂದೆನಿಸುತ್ತದೆ. ನಾವು, ಆಕೆಯನ್ನು ಏನೆಂದು ಕರೆಯೋಣ? ”ಸ್ತ್ರೀ” ಅಂದರೆ ಅಷ್ಟೇ ಸಾಕೆ?
No comments:
Post a Comment