ಆರಾಧನೆ: ಹೊಸ ವರ್ಷಾರಂಭ



ಹಾಡು
ಪ್ರಾರಂಭ ಪ್ರಾರ್ಥನೆ
ಗತಿಸಿಹೋದ ಘಟನೆಗಳನ್ನು ನೆನೆಯಬೇಕಾಗಿಲ್ಲ. ಇಗೋ, ನೂತನ ಕಾರ್ಯವನು ನಾನೆಸಗುವೆ ಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೇ? ಮಾರ್ಗವನ್ನು ಏರ್ಪಡಿಸುವೆ ಮರುಭೂಮಿಯಲಿ, ಹರಿಸುವೆ ತೊರೆಗಳನ್ನು ಅರಣ್ಯದಲಿ. (ಯೆಶಾ 43: 18-19). ಗತಿಸಿಹೋದ ಸಮಯವನ್ನು ನೆನೆದು ವ್ಯಥೆ ಪಡದೆ ದೇವರಲ್ಲಿ ಭರವಸೆ ಇಟ್ಟು ಮುಂದೆ ಸಾಗುವುದೇ ಪ್ರತಿಯೊಬ್ಬ ಕ್ರೈಸ್ತನ ಧ್ಯೇಯವಾಗಲಿ.
ಉತ್ತರ: ನಮ್ಮ ಪ್ರಭುವಿನಲ್ಲಿ ಭರವಸೆ ಇಡೋಣ

ಪೀಠಿಕೆ
ಪರಮ ತ್ರಿತ್ವರಾದ ಏಕ ದೇವರೇ, ಪಿತ, ಸುತ, ಪವಿತ್ರಾತ್ಮರೇ, ನೀವು ಈ ಬಿಳಿ ರೊಟ್ಟಿಯ ರೂಪದಲ್ಲಿ ಚಿತ್ತೈಸಿ ಬಂದಿರುವಿರೆಂದು ನಂಬಿ ನಿಮ್ಮನ್ನು ಆರಾಧಿಸುತ್ತೇವೆ. ಪ್ರೀತಿಯ ತಂದೆಯೇ, ಸೃಷ್ಟಿಕರ್ತರೇ, ನೀವೇ ಸರ್ವ ಕಾಲಕ್ಕೂ ಒಡೆಯರು. ದೂತ ಸಂತರೊಡಗೂಡಿ ಪ್ರತಿನಿತ್ಯವೂ ನಿಮ್ಮನ್ನು ಹಾಡಿ ಹೊಗಳುತ್ತೇವೆ; ನಮ್ಮ ಸ್ತುತಿಸ್ತೋತ್ರ ಆರಾಧನೆಗಳನ್ನು ಸಲ್ಲಿಸುತ್ತೇವೆ. ಓ ಯೇಸುಪ್ರಭುವೇ, ನಮಗಾಗಿ ಈ ಭುವಿಗೆ ಅವತರಿಸಿ ಬಂದ ಅಮರ ವಾಕ್ಯವು ನೀವೇ. ನೀವೇ ನಮ್ಮ ಹೃದಯದ ಒಡೆಯರು ಮತ್ತು ಪ್ರೀತಿಪಾತ್ರರು ಎಂದು ಘೋಷಿಸುತ್ತೇವೆ; ನಮ್ಮ ಪ್ರೀತಿ ವಾತ್ಸಲ್ಯಗಳನ್ನು ನಿಮಗರ್ಪಿಸುತ್ತೇವೆ. ಓ ಪರಿಶುದ್ಧ ಆತ್ಮರೇ, ಪ್ರೀತಿಯ ಜ್ವಾಲೆಯೇ, ನಮ್ಮ ಅಂತರಂಗದ ಆಪ್ತ ಅತಿಥಿ ನೀವು. ನಮ್ಮ ಜೀವದ ಚಿಲುಮೆಯೂ ಸಾಂತ್ವನವೂ ಆದ ನಿಮಗೆ ನಮ್ಮ ಆರಾಧನೆ, ಸ್ತುತಿ ವಂದನೆ. ಬನ್ನಿ, ನಮ್ಮ ಅಂತರಾತ್ಮಗಳಲ್ಲಿ ತಂಗಿರಿ.
ಯೇಸುಪ್ರಭುವೇ, ನೀವು ನಮಗಾಗಿ ದಯಪಾಲಿಸಿದ ಈ ಹೊಸ ವರ್ಷಕ್ಕಾಗಿ ನಿಮ್ಮನ್ನು ವಂದಿಸಲು ನಿಮ್ಮ ದಿವ್ಯ ಸಾನ್ನಿಧ್ಯದಲ್ಲಿ ನೆರೆದಿದ್ದೇವೆ. ಈ ಹೊಸ ವರ್ಷ ನಿಮ್ಮ ಅನುಗ್ರಹ ಮತ್ತು ಆಶೀರ್ವಾದಗಳ ವರ್ಷವಾಗಿರಲಿ. ಹೊಸ ನಂಬಿಕೆ ಮತ್ತು ನಿರೀಕ್ಷೆಗಳೊಂದಿಗೆ ಈ ವರ್ಷವನ್ನು ಆರಂಭಿಸುತ್ತೇವೆ. ನಮ್ಮ ತಪ್ಪುಗಳನ್ನು, ಅನರ್ಹತೆಯನ್ನು ಲೆಕ್ಕಿಸದೆ ನಿಮ್ಮನ್ನು ಮತ್ತೊಮ್ಮೆ ಪ್ರೀತಿಸಲು ಮತ್ತು ನಮ್ಮ ನೆರೆಹೊರೆಯವರಿಗೆ ನೆರವಾಗುವ ಮೂಲಕ ನಿಮಗೆ ಸೇವೆ ಸಲ್ಲಿಸುತ್ತಾ ಸ್ವರ್ಗಸಾಮ್ರಾಜ್ಯದ ಸಿರಿಸಂಪತ್ತನ್ನು ಗಳಿಸಿಕೊಳ್ಳುವ ಅವಕಾಶವನ್ನು ನಮಗಿತ್ತಿದ್ದೀರಿ. ನೀವು ನಮ್ಮ ಮೇಲಿಟ್ಟಿರುವ ಈ ವಿಶೇಷ ಪ್ರೀತಿಗಾಗಿ ನಾವು ನಿಮಗೆ ಋಣಿಗಳು. ನೀವು ನಿರ್ಧರಿಸುವುದೆಲ್ಲವೂ ನೀವು ಪ್ರೀತಿಸುವವರ ಒಳಿತಿಗಾಗಿಯೇ ಎಂದು ನಂಬುತ್ತೇವೆ. ಆದ್ದರಿಂದ ಈ ಹೊಸ ವರ್ಷದಲ್ಲಿ ನೀವು ನಮಗೆಂದು ಕಾಯ್ದಿರಿಸಿರುವ ಸರ್ವವನ್ನೂ ಸಂತೋಷದಿಂದ ಸ್ವೀಕರಿಸುತ್ತೇವೆ. ಈ ಜಗತ್ತನ್ನು ಆಳುವ ನಿಮ್ಮ ಕರಗಳು ಎಂದೂ ತಪ್ಪೆಸಗಲಾರವು ಎಂದು ಖಚಿತವಾಗಿ ಅರಿತಿದ್ದೇವೆ. ನಮ್ಮ ಆಲೋಚನೆಗಳಿಗೂ ಮೀರಿದ ನಿಮ್ಮ ಯೋಜನೆ, ಚಿಂತನೆಗಳನ್ನು ಮಣಿಸುವವರಾದರೂ ಯಾರಿಹರು ಪ್ರಭು! ಓ ಮಹೋನ್ನತ ದೇವರೇ, ಈ ಹೊಸ ವರುಷದಲ್ಲಿ ಸಂಭವಿಸಬಹುದಾದುದೆಲ್ಲವನ್ನೂ ನಿಮ್ಮ ಪ್ರೀತಿಯ ಕರಗಳಲ್ಲಿ ಸಮರ್ಪಿಸುತ್ತೇವೆ.
ಓ ಯೇಸುವೇ, ನಮ್ಮ ಏಕೈಕ ಆಧಾರವೇ, ಈ ಹೊಸ ವರ್ಷದಲ್ಲಿ ನಮ್ಮ ಜೀವನವೆಂಬ ಈ ಪುಟ್ಟ ದೋಣಿಯನ್ನು ನಿಮ್ಮ ಕರಗಳಲ್ಲಿಡುತ್ತೇವೆ. ನೀವೇ ಈ ದೋಣಿಗೆ ಮಾರ್ಗದರ್ಶಿಯಾದರೆ ನಮ್ಮ ಪಯಣವು ಸುಖಕರವಾದಂತೆ. ಯೇಸುಪ್ರಭುವೇ, ನಮ್ಮನ್ನು, ನಾವು ಪ್ರೀತಿಸುವ ಕುಟುಂಬವನ್ನು, ನಾವು ದುಡಿಯುತ್ತಿರುವ ಸಮುದಾಯವನ್ನು ಆಳುವ ಪ್ರಭುವು ನೀವಾಗಿರಿ. ಪ್ರತಿಯೊಂದರಲ್ಲೂ ನಿಮ್ಮ ಕರಗಳ ಕಾರ್ಯವನ್ನು ಮನಗಾಣುವಂತೆ ಮಾಡಿರಿ. ಆಗ ಯಾವ ನೋವೂ, ಸೋಲೂ ನಮ್ಮ ಧೈರ್ಯವನ್ನು ಕುಗ್ಗಿಸಲಾರದು, ಬದಲಿಗೆ ಎಲ್ಲಾ ಕಷ್ಟ-ಸಂಕಟಗಳಲ್ಲೂ ಅರ್ಥವನ್ನು ಹುಡುಕುವ, ಮೌಲ್ಯವನ್ನು ಕಲಿಯುವ ತಾಳ್ಮೆಯನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಈ ಹೊಸ ವರ್ಷದಲ್ಲಿ ನೀವು ನಮಗೆ ಕರುಣಿಸಿದೆಲ್ಲವನ್ನು, ನಮ್ಮಿಂದ ನೀವು ದೂರ ಮಾಡಲು ಇಚ್ಛಿಸುವುದೆಲ್ಲವನ್ನು ಮನಸ್ಸಾರೆ ಒಪ್ಪಿಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡುತ್ತೇವೆ.
ಯೇಸುಪ್ರಭುವೇ, ಈ ಹೊಸ ವರ್ಷದಲ್ಲಿ ನಿಮ್ಮ ಪ್ರೀತಿಯ ಆಜ್ಞೆಗಳನ್ನು ಪಾಲಿಸಲು ಇಚ್ಛಿಸುತ್ತೇವೆ. ನಮ್ಮ ನೆರೆಹೊರೆಯವರನ್ನು ನೈಜಪ್ರೀತಿಯಿಂದ ಕಾಣಲು ಬಯಸುತ್ತೇವೆ. ದ್ವೇಷಕ್ಕೆ ಬದಲಾಗಿ ಪ್ರೀತಿಯನ್ನು, ಕೆಡುಕಿಗೆ ಬದಲಾಗಿ ಒಳಿತನ್ನು, ಶಾಪಕ್ಕೆ ಬದಲಾಗಿ ಆಶೀರ್ವಾದವನ್ನು ಹಿಂತಿರುಗಿಸುತ್ತೇವೆ. ನಮ್ಮ ನೆರೆಯವರ ತಪ್ಪುಗಳನ್ನು ಯಾವುದೇ ನಿರ್ಬಂಧನೆಗಳಿಲ್ಲದೆ ಕ್ಷಮಿಸುತ್ತೇವೆ. ಈ ವರ್ಷವು ಶಾಂತಿಯ, ಸಂತೋಷ-ಸಾಮರಸ್ಯದ ವರ್ಷವಾಗಿರಲಿದೆ. ನಮ್ಮಲ್ಲಿರಬಹುದಾದ ದ್ವೇಷ, ಅಸೂಯೆ, ಶತ್ರುತ್ವ, ಕಹಿ ಅನುಭವಗಳನ್ನು ನಮ್ಮ ಹೃದಯದಿಂದ ಕಿತ್ತೆಸೆಯುತ್ತೇವೆ. ಯೇಸುಪ್ರಭುವೇ, ನಿಮ್ಮ ಆತ್ಮರ ಪ್ರೀತಿ, ತಿಳುವಳಿಕೆ, ಸಹನೆಯನ್ನು ನಮ್ಮಲ್ಲಿ ತುಂಬಿಸಿರಿ. ನಮ್ಮ ಅಂತರಂಗವನ್ನು ಸ್ಪರ್ಶಿಸಿ, ಪರಿವರ್ತಿಸಿ ಗುಣಪಡಿಸಿರಿ.
ಪವಿತ್ರ ಪರಮಪ್ರಸಾದ ಸಂಸ್ಕಾರದಲ್ಲಿರುವ ದಿವ್ಯ ಯೇಸುವೇ, ನೀವು ನಮ್ಮ ಹೆಸರಿಡಿದು ಕರೆದು ನಮ್ಮನ್ನು ನಿಮ್ಮ ಸ್ವತ್ತನ್ನಾಗಿಸಿದ್ದೀರಿ ಎಂದು ನಮಗೆ ದೃಢಪಡಿಸಿದ್ದೀರಿ. ನೀವು ನಮ್ಮ ಜೊತೆ ಇರಲಾಗಿ ನಿಮ್ಮ ಅನುಮತಿ ಇಲ್ಲದೆ ಯಾವ ಜಲರಾಶಿಯೂ ನಮ್ಮನ್ನು ಮುಳುಗಿಸದು ಯಾವ ಬೆಂಕಿಯ ಜ್ವಾಲೆಯೂ ನಮ್ಮನ್ನು ದಹಿಸದು. ವರ್ಷದ ಆರಂಭದಲ್ಲಿ ನಿಮ್ಮ ವಾಕ್ಯದ ಈ ಅಭಯ ಸನಿಹತೆಯನ್ನು ನೆನೆಯಲು ನಮಗೆಷ್ಟೋ ಸಾಂತ್ವನ. ಓ ಯೇಸುವೇ, ನಮ್ಮ ಜೀವನದ ಪಯಣದಲ್ಲಿ ನೀವೇ ನಮ್ಮ ಬಲವೂ, ಶಕ್ತಿಯೂ. ನಿಮ್ಮ ಪ್ರಸನ್ನತೆಯು ನಮ್ಮ ಜೊತೆಗಿರಲು ನಂಬಿಕೆ ಆತ್ಮಸ್ಥೈರ್ಯ ನಮ್ಮದಾಗುವುದು. ನಿಮ್ಮ ಆ ಶಕ್ತಿ ಸಹಾಯದಲ್ಲಿ ನಂಬಿಕೆ ಇಡುತ್ತಾ ನಿಮ್ಮ ಅನಂತ ಪ್ರಸನ್ನತೆಯನ್ನು ನೆನೆಯುತ್ತಾ ಈ ಹೊಸವರ್ಷ ತೋರುವ ಹೊಸ ಹಾದಿಗೆ ಹೆಜ್ಜೆಯಿರಿಸುತ್ತೇವೆ. ನಿಮ್ಮ ಸ್ವರ್ಗೀಯ ಬಲ ನಮಗಾಧಾರವಾಗಿರಲಿ. ನಿಮ್ಮ ಕೃಪಾಶೀರ್ವಾದ ನಮ್ಮ ಮೇಲಿರಲಿ. ನಮ್ಮೆಲ್ಲರ ತಾಯಿ, ಮರಿಯಳ ನಿರ್ಮಲ ಹೃದಯದ ಮೂಲಕ ಈ ಆರಾಧನೆಯ ಕೆಲ ಕ್ಷಣಗಳನ್ನು ನಿಮಗರ್ಪಿಸುತ್ತೇವೆ.

ಶ್ಲೋಕ

ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು
ದುರ್ಜನರ ಆಲೋಚನೆಯಂತೆ ನಡೆಯದೆ /
ಪಾಪಾತ್ಮರ ಪಥದಲಿ ಕಾಲೂರದೆ /
ಧರ್ಮನಿಂದಕರ ಕೂಟದಲಿ ಕೂರದೆ //
ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು

2 ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ – ಅವನೇ ಧನ್ಯನು/
ಹಗಲಿರುಳೆನ್ನದೆ ಅದನೆ ಧ್ಯಾನಿಸುತಿರುವವನಾರೋ - ಅವನೇ ಧನ್ಯನು //
ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು

3 ನದಿಯ ಬದಿಯಲೇ ಬೆಳೆದಿಹ ಮರದಂತೆ /
ಸಕಾಲಕೆ ಫಲವೀವ ವೃಕ್ಷದಂತೆ /
ಎಲೆಬಾಡದೆ ಪಸಿರಿರುವ ತರುವಂತೆ /
ಸಿಗುವುದು ಅವನ ಕಾರ‍್ಯಗಳಿಗೆ ಸಫಲತೆ //
ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು

4 ದುರುಳರಾದರೋ ತೂರಿ ಹೋಗುವರು /
ಬಿರುಗಾಳಿಗೆ ತರಗೆಲೆಯಾಗುವರು //
ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು

5 ಎಂದೇ ನಿಲ್ಲಲಾರರು ದುರುಳರು ನ್ಯಾಯಸ್ಥಾನದಲಿ /
ಸದಸ್ಯರಾಗರು ಪಾಪಿಗಳು ಸಜ್ಜನರ ಸಂಘದಲಿ //
ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು

6 ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ /
ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ //
ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು

ಮೌನ ಆರಾಧನೆ

ಹಾಡು

ವಾಚನ : ಯೆಶಾಯ 43: 1-7
ದೇವರೇ ತಮ್ಮ ಜನತೆಯ ರಕ್ಷಕ
ಈಗಲಾದರೋ ಯಕೋಬ ವಂಶವೇ, ಇಸ್ರಯೇಲ್ ಸಂತಾನವೇ ಕೇಳು:
ನಿನ್ನನ್ನು ಸೃಷ್ಟಿಸಿದ, ರೂಪಿಸಿದ ಸರ್ವೇಶ್ವರನ ನುಡಿಯನ್ನು ಕೇಳು:
ಭಯಪಡಬೇಡ, ನಿನ್ನನ್ನು ರಕ್ಷಿಸಿದಾತ ನಾನಲ್ಲವೆ?
ನಿನ್ನನ್ನು ಹೆಸರು ಹಿಡಿದು ಕರೆದಾತ ನಾನಲ್ಲವೆ?
ನೀನು ನನ್ನವನೇ ಅಲ್ಲವೆ?
ನಾನೇ ಇರುವೆ ನಿನ್ನ ಸಂಗಡ ನೀ ಜಲರಾಶಿಯನ್ನು ದಾಟುವಾಗ
ಮುಳುಗಿಸದು ನದಿ ನೀ ಅದನ್ನು ಹಾದುಹೋಗುವಾಗ
ಸುಡದು ಬೆಂಕಿ, ದಹಿಸದು ಜ್ವಾಲೆ, ಅದರ ಮಧ್ಯೆ ನೀ ನಡೆಯುವಾಗ.
ನಿನ್ನ ದೇವರಾದ ಸರ್ವೇಶ್ವರ ನಾನು, ಇಸ್ರಯೇಲರ ಪರಮಪಾವನ ಸ್ವಾಮಿ,
ನಿನ್ನ ರಕ್ಷಕ ನಾನು. ಈಡುಮಾಡಿದ್ದೇನೆ ಈಜಿಪ್ಟನ್ನು ನಿನ್ನ ವಿಮೋಚನೆಗಾಗಿ
ಕೊಟ್ಟಿದ್ದೇನೆ ಸುಡಾನ್ ಸೆಬಾ ನಾಡುಗಳನ್ನು ನಿನಗೆ ಈಡಾಗಿ.
ನೀನೆನ್ನ ದೃಷ್ಟಿಗೆ ಅಮೂಲ್ಯನು, ಘನವಂತನು, ಅತಿಪ್ರಿಯನು.
ಎಂದೇ ನಿನ್ನ ಪ್ರಾಣರಕ್ಷಣೆಗಾಗಿ ತ್ಯಜಿಸುವೆನು ಜನರನ್ನೂ ಜನಾಂಗಗಳನ್ನೂ.
ಭಯಪಡಬೇಡ, ನಾನಿರುವೆ ನಿನ್ನ ಸಂಗಡ
ಕರೆತರುವೆ ನಿನ್ನ ಸಂತತಿಯನ್ನು ಮೂಡಣದಿಂದ
ಒಟ್ಟುಗೂಡಿಸುವೆ ನಿನ್ನವರನ್ನು ಪಡುವಣದಿಂದ.
ನಾನಪ್ಪಣೆ ಕೊಡುವೆ ಬೀಳ್ಕೊಡುಎಂದು ಬಡಗಲಿಗೆ
ತಡೆಯಬೇಡಎಂದು ನಾನೇ ಹೇಳುವೆ ತೆಂಕಲಿಗೆ.
ಹೀಗೆ ಬರಮಾಡುವೆ ನನ್ನ ಕುವರರನ್ನು ದೂರದಿಂದ
ಬರಮಾಡುವೆ ನನ್ನ ಕುವರಿಯರನ್ನು ದಿಗಂತಗಳಿಂದ.
ಕರೆತರುವೆ ಈಪರಿ ನನ್ನ ನಾಮಧಾರಿಗಳೆಲ್ಲರನು
ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿದವರನು.

ಚಿಂತನೆ
ನಮ್ಮೆಲ್ಲರನ್ನು ದೇವರು ಹೆಸರು ಹಿಡಿದು ಕರೆದು ನಮ್ಮನ್ನು ಅವರ ವಶವಾಗಿಸಿಕೊಂಡಿದ್ದಾರೆ ಎಂಬುದನ್ನು ದೇವರು ಯೆಶಾಯ ಪ್ರವಾದಿಯ ಮಾತುಗಳಲ್ಲಿ ತಿಳಿಯಪಡಿಸುತ್ತಾರೆ. ನಮ್ಮನ್ನು ಕ್ರೈಸ್ತ ಬದುಕಿಗೆ ಆಹ್ವಾನಿಸಲು ಅವರೇ ಮೊದಲು ಕಾರ್ಯಪ್ರವೃತ್ತರಾದರು. ಹಾಗಾಗಿ ದೇವರೊಡನೆ ಸಹಕರಿಸಿದರೆ ನಮ್ಮ ಬದುಕಿನ ಗುರಿಯನ್ನು ಸೇರುವುದು ನಿಶ್ಚಯ. ಆತನ ಮೇಲೆ ನಂಬಿಕೆಯಿರಿಸಿ ಆತನನ್ನು ಅವಲಂಬಿಸಿದರಷ್ಟೇ ಸಾಕು. ಈ ಹೊಸ ವರ್ಷದ ಆರಂಭದಲ್ಲಿ ಇವೆಲ್ಲವೂ ನಮಗೆ ಸಾಂತ್ವನ ನೀಡುವಂತಹವು. ಯೆಶಾಯ ಪ್ರವಾದಿಯ ಮಾತುಗಳು ನಾವು ದೇವರಿಗೆ ಸೇರಿದವರು ಎಂಬುದನ್ನು ತಿಳಿಸುತ್ತದೆ. ನಾವು ದೇವರವರು, ಅವರು ನಮ್ಮವರು. ನಾವು ಅವರ ಸ್ವತ್ತು. ನಮ್ಮನ್ನು ಕಾಯುವುದು ರಕ್ಷಿಸುವುದು ಅವರ ಹೊಣೆ. ಎಲ್ಲಾ ಆಗು-ಹೋಗುಗಳಲ್ಲಿ ದೇವರ ರಕ್ಷಣೆ ನಮಗಿದೆ. ಯಾವ ಬೆಂಕಿಯೂ ನಮ್ಮನ್ನು ದಹಿಸುವುದಿಲ್ಲ, ಯಾವ ನೀರೂ ನಮ್ಮನ್ನು ಮುಳುಗಿಸುವುದಿಲ್ಲ. ದೇವರು ತಮ್ಮ ಪ್ರೀತಿಯನ್ನೇ ನಮಗೆ ಧಾರೆ ಎರೆದಿದ್ದಾರೆ. ಆತನ ದೃಷ್ಟಿಯಲ್ಲಿ ನಾವು ಅತ್ಯಮೂಲ್ಯರು ಎನ್ನುತ್ತಾರೆ ದೇವರು. ನಾವಾದರೋ ಪಾಪಿಗಳು, ಅನರ್ಹರು, ಅಸಹಾಯಕರು; ಆದಾಗ್ಯೂ ನಮ್ಮನ್ನು ಶ್ರೇಷ್ಠರು, ಅಮೂಲ್ಯರು ಎಂದು ಪರಿಗಣಿಸಿದ್ದಾರೆ. ಎಷ್ಟೊಂದು ಹೃದಯವಂತರು ಮತ್ತು ಕರುಣಾಮಯಿ ಈ ನಮ್ಮ ದೇವರು! ಈ ಪ್ರೀತಿಗೆ ಬದಲಾಗಿ ನಾವು ಕೊಡಬಹುದಾದರೂ ಏನು? ನಾವು ನಮ್ಮನ್ನೇ ಪ್ರೀತಿಯ ಕಾಣಿಕೆಯಾಗಿ ದೇವರ ಸನ್ನಿಧಾನದ ಮುಂದಿರಿಸೋಣ. ಈ ಹೊಸವರ್ಷದ ಮುಂಬರುವ ಸನ್ನಿವೇಶಗಳಲ್ಲಿ ನಮ್ಮ ಒಳಿತಿಗಾಗಿ ಎಲ್ಲವನ್ನು ಯೋಚಿಸುವ, ನಿರ್ಧರಿಸುವ, ಲೋಪದೋಷವಿಲ್ಲದ ಆ ದೇವರ ಕರಗಳ ಮರ್ಮವನ್ನರಿಯೋಣ. ಕೃತಜ್ಞತೆಯ ಹೃದಯದೊಂದಿಗೆ, ನಂಬಿಕೆಯ ಮನಸ್ಸಿನೊಂದಿಗೆ, ಅಚಲ ಆತ್ಮಸ್ಥೈರ್ಯ, ಆಳವಾದ ವಿಶ್ವಾಸದೊಂದಿಗೆ ಈ ಹೊಸ ವರ್ಷ ತೆರೆದಿಡುವ ಹೊಸ ಹಾದಿಯಲ್ಲಿ ಮುನ್ನಡೆಯೋಣ. ಈ ಹೊಸ ವರ್ಷ ನಮ್ಮನ್ನು ದೇವರೊಂದಿಗೆ ಐಕ್ಯಗೊಳಿಸುವ ವರ್ಷವಾಗಲಿ. ನಮ್ಮನ್ನು ಪ್ರೀತಿ, ಸೇವೆಗಳಲ್ಲಿ ತೊಡಗಿಸಿಕೊಳ್ಳುವ ವರ್ಷವಾಗಲಿ. ನಾವು ದೇವರ ಅನುಗ್ರಹದೊಂದಿಗೆ ಸಂಪೂರ್ಣವಾಗಿ ಸಹಕರಿಸಿ ಬಾಳುವ ವರ್ಷವಾಗಲಿ. ನಮ್ಮ ಕುಟುಂಬಗಳಲ್ಲಿ, ಸಮುದಾಯಗಳಲ್ಲಿ, ಸಮಾಜದಲ್ಲಿ ಪ್ರೀತಿ, ಶಾಂತಿ, ಐಕ್ಯತೆ, ಸಾಮರಸ್ಯವನ್ನು ಸಾಕ್ಷೀಕರಿಸುವಂತಾಗಲಿ ಈ ವರ್ಷ. ಆತನ ಉನ್ನತ ಮಹಿಮೆ ಮತ್ತು ಸ್ತುತಿಗಾಗಿ ಹೊಸ ವರ್ಷದ ಪ್ರತಿ ಕ್ಷಣ ಮತ್ತು ದಿನಗಳನ್ನು ಮುಡಿಪಾಗಿರಿಸೋಣ.

ಪ್ರಾರ್ಥನೆ
ಈ ಹೊಸ ವರ್ಷವನ್ನು ದೇವರ ಪ್ರೀತಿಗಾಗಿ ಸಮರ್ಪಿಸುವಾಗ ಆತನ ಆಶೀರ್ವಾದಗಳಿಗಾಗಿ ಬೇಡುತ್ತಾ ನಮ್ಮೆಲ್ಲ ಬೇಡಿಕೆ ಆಕಾಂಕ್ಷೆಗಳನ್ನು ದೇವರ ಮುಂದಿರಿಸೋಣ.
1. ಪ್ರಭುವೇ, ಈ ಹೊಸ ವರ್ಷದ ಪ್ರತಿ ದಿನವನ್ನು ನಿಮ್ಮ ಆಶೀರ್ವಾದಗಳಿಂದ ತುಂಬಿ ನಾವು ನಿಮ್ಮ ಮಹಿಮೆಗಾಗಿ ನೀವು ಕೊಟ್ಟ ದಿನಗಳನ್ನು ಸದ್ವಿನಿಯೋಗಿಸಿಕೊಳ್ಳುವಂತಾಗಲೆಂದು ಪ್ರಾರ್ಥಿಸುತ್ತೇವೆ.
ಉತ್ತರ: ಪ್ರಭುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ.
2. ಪ್ರಭು ಯೇಸುವೇ, ನಿಮ್ಮ ಅಮರ ಸಾನ್ನಿಧ್ಯಕ್ಕೆ ಸೇರುವ ಈ ನಮ್ಮ ಬದುಕಿನ ಪಯಣದಲ್ಲಿ ನಿಮ್ಮ ಜೊತೆಗಾರಿಕೆಯನ್ನು ಮತ್ತು ಸನಿಹತೆಯನ್ನು ಈ ವರ್ಷದ ಪ್ರತಿಕ್ಷಣದಲ್ಲೂ ನಾವು ಅನುಭವಿಸುವಂತೆ ಪ್ರಾರ್ಥಿಸುತ್ತೇವೆ.
ಉತ್ತರ: ಪ್ರಭುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ.
3. ಈ ಹೊಸ ವರ್ಷದಲ್ಲಿ ಎಲ್ಲರು ನಮ್ಮವರು ಎಂಬ ಭಾವನೆಯಲ್ಲಿ ಕುಟುಂಬ ಮತ್ತು ಸಮುದಾಯಗಳಲ್ಲಿರುವ ಒಡಕು, ಭಿನ್ನಾಭಿಪ್ರಾಯಗಳನ್ನು ಗುಣಪಡಿಸುವ ಸುಮನಸ್ಸನ್ನು ನಾವು ಪಡೆಯುವವರಾಗುವಂತೆ ಪ್ರಾರ್ಥಿಸುತ್ತೇವೆ.
ಉತ್ತರ: ಪ್ರಭುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ
4. ಈ ಹೊಸ ವರ್ಷದ ನಮ್ಮ ಬದುಕಿನಲ್ಲಿ ನಿಮಗೆ ನಮ್ಮ ಆದ್ಯತೆಯನ್ನು ನೀಡುವಂತೆಯೂ, ನಮ್ಮ ಹೃದಯ ಮನಸ್ಸುಗಳನ್ನು ಏಕೈಕ ದೇವರಾದ ನಿಮಗೆ ಮೀಸಲಾಗಿಡುವಂತೆಯೂ ನಮಗೆ ಸಹಾಯ ನೀಡಿರೆಂದು ಪ್ರಾರ್ಥಿಸುತ್ತೇವೆ.
ಉತ್ತರ: ಪ್ರಭುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ.
5. ನಾವು ಕೆಲಸ ನಿರ್ವಹಿಸುವ ಕಾರ್ಯಕ್ಷೇತ್ರಗಳಲ್ಲಿ ಶಾಂತಿ ಮತ್ತು ಸಂತೋಷದ ಸಾಧನಗಳಾಗಿದ್ದು ನಾವೆಲ್ಲರೂ ನಿಮ್ಮ ಪಾವಿತ್ರ್ಯ ಮತ್ತು ದೈವಿಕತೆಯ ಬದುಕಿನ ಸಾರವನ್ನು ಸಾರುವ ಸಾಧನಗಳಾಗುವಂತೆ ಪ್ರಾರ್ಥಿಸುತ್ತೇವೆ.
ಉತ್ತರ: ಪ್ರಭುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ
6. ನಮ್ಮೆಲ್ಲರ ಕುಟುಂಬ ಮತ್ತು ಸಮುದಾಯಗಳು ಈ ಹೊಸ ವರ್ಷದಲ್ಲಿ ಸಮೃದ್ಧಿ ಮತ್ತು ಯಶಸ್ಸನ್ನು ಪಡೆಯುವಂತೆಯೂ, ತಮ್ಮಲ್ಲಿರುವ ಸವಲತ್ತುಗಳನ್ನು ನಿಮ್ಮ ಮಹಿಮೆಗಾಗಿಯೂ ಪರರ ಒಳಿತಿಗಾಗಿಯೂ ವಿನಿಯೋಗಿಸಿಕೊಳ್ಳುವಂತೆಯೂ ಪ್ರಾರ್ಥಿಸುತ್ತೇವೆ.
ಉತ್ತರ: ಪ್ರಭುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ.



ಅಂತಿಮ ಪ್ರಾರ್ಥನೆ

ಪರಮ ತಂದೆಯೇ, ಈ ನವ ವರ್ಷದಲ್ಲಿ ನಿಮ್ಮ ಪುತ್ರ ಯೇಸುವಿನ ಜನನ ಮತ್ತು ಆತನ ರಕ್ಷಣಾ ಸಂದೇಶ ನಮಗೆ ಶಾಂತಿ ಮತ್ತು ಸಂತೋಷವನ್ನು ತರುವಂತಾಗಲಿ. ನಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸಿರಿ; ನಿಮ್ಮ ಪ್ರೀತಿಗೆ ಸಾಕ್ಷಿಗಳಾಗಿ ಬಾಳುತ್ತಾ ನಿಮ್ಮ ಶಾಂತಿಯನ್ನು ಎಂದಿಗೂ ಸಾರುವಂತೆ ಆಶೀರ್ವದಿಸಿರಿ. ನಮ್ಮಲ್ಲಿರುವ ಎಲ್ಲ ಶಕ್ತಿ ಮತ್ತು ಉತ್ಸುಕತೆಯನ್ನು ಮನುಕುಲದ ಳಿತಿಗಾಗಿಯೂ ನಿಮ್ಮ ಉನ್ನತ ಮಹಿಮೆಗಾಗಿಯೂ ಮುಡಿಪಾಗಿಡಲು ಸಹಾಯ ಮಾಡಿರಿ. ನಮ್ಮ ಪ್ರಭುವೂ, ನಿಮ್ಮ ಪುತ್ರರೂ ಆಗಿರುವ ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.

No comments:

Post a Comment