ಫೆಬ್ರವರಿ ೧೫, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

15 ಫೆಬ್ರವರಿ 2೦19


ಶುಕ್ರವಾರ/ ಹಸಿರು / ಸಾಧಾರಣ ಕಾಲದ ಐದನೇ ವಾರ 
1ನೇ ವಾಚನ - ಆದಿ 3: 1-8 
ಕೀರ್ತನೆ - 32: 1-2, 5, 6-7 
ಶುಭಸಂದೇಶ - ಮಾರ್ಕ 7: 31-37

ವಾಚನಗಳು
ಮೊದಲನೇ  ವಾಚನ


ಆದಿಕಾಂಡದಿಂದ ವಾಚನ
ಆದಿ 3: 1-8
1ಸರ್ವೇಶ್ವರನಾದ ದೇವರು ಉಂಟುಮಾಡಿದ ಭೂಜಂತುಗಳಲ್ಲಿ ಅತಿ ಯುಕ್ತಿಉಳ್ಳದ್ದು ಸರ್ಪ. ಅದು ಮಹಿಳೆಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಕೂಡದು ಎಂದು ದೇವರು ಆಜ್ಞೆ ಮಾಡಿರುವುದು ನಿಜವೋ”? ಎಂದು ಕೇಳಿತು. 2ಅದಕ್ಕೆ ಆ ಮಹಿಳೆ, “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; 3ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು, ‘ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದು ಉತ್ತರ ಕೊಟ್ಟಳು. 4ಆಗ ಆ ಸರ್ಪ, “ಆ ಮಾತು ನಿಜವಲ್ಲ, ನೀವು ಸಾಯುವುದು ಸುಳ್ಳು. 5ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು. ನೀವು ದೇವರಂತೆ ಆಗಿ ಒಳಿತು- ಕೆಡುಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು. 6ಆಗ ಆ ಮಹಿಳೆ, “ಈ ಮರದ ಹಣ್ಣು ಊಟಕ್ಕೆ ಎಷ್ಟು ಚೆನ್ನಾಗಿದೆ, ನೋಟಕ್ಕೆ ಎಷ್ಟು ರಮಣೀಯವಾಗಿದೆ, ಜ್ಞಾನಾರ್ಜನೆಗೆ ಎಷ್ಟು ಆಕರ್ಷಣೀಯವಾಗಿದೆ” ಎಂದು ತಿಳಿದು, ಅದನ್ನು ತೆಗೆದುಕೊಂಡು ತಿಂದಳು; ಸಂಗಡವಿದ್ದ ಗಂಡನಿಗೂ ಕೊಟ್ಟಳು; ಅವನೂ ತಿಂದನು. 7ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು. 8ಅಂದು, ಸಂಜೆಯ ತಂಗಾಳಿಯಲ್ಲಿ, ಸರ್ವೇಶ್ವರನಾದ ದೇವರು ತೋಟದೊಳಗೆ ಸಂಚರಿಸುವ ಸಪ್ಪಳವು ಕೇಳಿಸಿತು. ಅವರಿಗೆ ಕಾಣಿಸಿಕೊಳ್ಳಬಾರದೆಂದು ಆದಾಮನೂ ಹವ್ವಳೂ ಹಿಂದೆ ಅವಿತುಕೊಂಡರು.


ಕೀರ್ತನೆ 


ಕೀರ್ತನೆ 138: 1-2, 5, 6-7
ಯಾರ ಪಾಪ ಪರಿಹಾರವಾಗಿದೆಯೋ - ಅವರೇ ಧನ್ಯರು
                                                  
ಯಾರ ಪಾಪ ಪರಿಹಾರವಾಗಿದೆಯೋ
ಯಾರ ದ್ರೋಹ ವಿಮೋಚನೆಯಾಗಿದೆಯೋ - ಅವರೇ ಧನ್ಯರು.

ಯಾರಪರಾಧವನು ಪ್ರಭು ಎಣಿಸಿಲ್ಲವೋ
ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು.

ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು
ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು.

“ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ”ಎಂದೆನು
ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು.

ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ
ಹುಚ್ಚುಹೊಳೆ ಉಕ್ಕಿಬಂದಾಗ ನೀ ಸಿಕ್ಕಲಿಲ್ಲವೆನ್ನದಿರಲಿ.

ನೀನೆ ನನಗೆ ಮರೆಯು, ಆಪತ್ತಿನಲಾಸರೆಯು
ನನ್ನನು ಆವರಿಸುವ ಉದ್ದಾರಕ ನಾದವು.



ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 7: 31-37
31ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಸಿದೋನಿನ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲೇಯ ಸರೋವರದ ತೀರಕ್ಕೆ ಹಿಂದಿರುಗಿದರು. 32ಮಾತನಾಡಲಾಗದ ಒಬ್ಬ ಕಿವುಡನನ್ನು ಜನರು ಅವರ ಬಳಿಗೆ ಕರೆತಂದರು. ಅವನ ಮೇಲೆ ಕೈಗಳನ್ನಿಡಬೇಕೆಂದು ಬೇಡಿಕೊಂಡರು. 33ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದೊಯ್ದು, ತಮ್ಮ ಬೆರಳುಗಳನ್ನು ಅವನ ಕಿವಿಯೊಳಗೆ ಇಟ್ಟರು. 34ತಮ್ಮ ಉಗುಳಿನಿಂದ ಅವನ ನಾಲಗೆಯನ್ನು ಮುಟ್ಟಿದರು. ಬಳಿಕ ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೀರ್ಘವಾಗಿ ಉಸಿರೆಳೆದು, 'ಎಪ್ಫಥಾ' ಎಂದರೆ 'ತೆರೆಯಲಿ' ಎಂದರು. 35ತಕ್ಷಣವೇ ಅವನ ಕಿವಿಗಳು ತೆರೆದವು; ನಾಲಗೆಯ ಬಿಗಿ ಸಡಿಲಗೊಂಡಿತು; ಅವನು ಸರಾಗವಾಗಿ ಮಾತನಾಡತೊಡಗಿದನು.

36ಇದನ್ನು ಯಾರಿಗೂ ಹೇಳಕೂಡದೆಂದು ಯೇಸು ಜನರಿಗೆ ಕಟ್ಟಪ್ಪಣೆ ಮಾಡಿದರು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಆಸಕ್ತಿಯಿಂದ ಈ ಕಾರ್ಯವನ್ನು ಪ್ರಚಾರ ಮಾಡಿದರು. 37ಎಲ್ಲರೂ ಆಶ್ಚರ್ಯಭರಿತರಾಗಿ, ಇವರು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ! ಎಂದುಕೊಳ್ಳುತ್ತಿದ್ದರು. 

ಚಿಂತನೆ
ಪ್ರಲೋಭನೆ
ಮನುಜನಿಗೆ ಪ್ರಲೋಭನೆಗಳು ಸಹಜ. ಕೆಲವೊಮ್ಮ ಈ ಶೋಧನೆ, ಪ್ರಲೋಭನೆಗಳು ನೇರವಾಗಿ ಬರಬಹುದು, ಪರೋಕ್ಷವಾಗಿ ಬರಬಹುದು. ಕೆಲವೊಮ್ಮೆ ನಮಗೆ ತಿಳಿಯುವ ಹಾಗೆ ಅಥವಾ ತಿಳಿಯದ ರೀತಿಯಲ್ಲಿ ಬರಬಹುದು. ಇಂದಿನ ಮೊದಲನೆಯ ವಾಚನದಲ್ಲಿ ಸರ್ಪದ ರೂಪದಲ್ಲಿ ಸೈತಾನನು ಏವಳನ್ನು ಶೋಧನೆಗೆ ದೂಡುತ್ತಾನೆ. ಏವಳು ದೇವರ ಆಜ್ಞೆಯನ್ನು ಮೀರುವಂತೆ ಸರ್ಪವು ಪ್ರೇರೇಪಿಸುತ್ತದೆ. ಸುಳ್ಳು ಆಶ್ವಾಸನೆಯ ಮೂಲಕ ತನ್ನತ್ತ ಸೆಳೆಯುತ್ತದೆ.

ಈ ಜಗತ್ತಿನಲ್ಲಿ ಸತ್ಯಕ್ಕಿಂತ ಸುಳ್ಳು ಆಶ್ವಾಸನೆಯನ್ನು ನಂಬುವವರೇ ಜಾಸ್ತಿ. ಏವಳಂತೆ ನಾವು ಪ್ರಾಪಂಚಿಕ ಶೋಧನೆಗಳಿಗೆ ಮರುಳಾಗದೆ ದೇವರ ವಾಕ್ಯದ ಪ್ರಕಾರ ಜೀವಿಸಿ, ಸೈತಾನನನ್ನು ಮೆಟ್ಟಿನಿಲ್ಲುವ ಶಕ್ತಿಗಾಗಿ ಪ್ರಾರ್ಥಿಸೋಣ.




ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment