ಜನವರಿ ೧೪, ೨೦೧೯

ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

14 ಜನವರಿ 2019

ಸಾಧಾರಣ ಕಾಲದಆರಂಭ: ಇಂದಿನಿಂದ ಸಾಧಾರಣ ಕಾಲ ಆರಂಭವಾಗುತ್ತದೆ. ವಾರದ ವಾಚನಗಳು ವರ್ಷ 1 ರಿಂದ

 ಸೋಮವಾರ/ ಹಸಿರು/ಸಾಧಾರಣ ಕಾಲದ ಮೊದಲನೇ ವಾರ
1ನೇ  ವಾಚನ  -  ಹಿಬ್ರಿ  1:  1-6
ಕೀರ್ತನೆ - 97: 1-2, 6-7, 9
ಶುಭಸಂದೇಶ - ಮಾರ್ಕ 1: 14-2೦

ಐಚ್ಛಿಕ ಸ್ಮರಣೆ - ಪುನೀತ ದೇವಸಹಾಯಂ ರ.ಸಾ



ವಾಚನಗಳು
ಮೊದಲನೇ  ವಾಚನ

ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ

1ಪೂರ್ವಕಾಲದಲ್ಲಿ ದೇವರು ನಮ್ಮ ಪಿತೃಗಳೊಡನೆ ಹಲವಾರು ವಿಧದಲ್ಲಿ, ಅನೇಕ ಸಾರಿ ಪ್ರವಾದಿಗಳ ಮುಖಾಂತರ ಮಾತನಾಡಿದರು. 2ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. 3ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದು ಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾಶ್ರ್ವದಲ್ಲಿ ಆಸೀನರಾಗಿರುವವರೂ ಇವರೇ. 4ಹೀಗೆ ದೇವರ ಪುತ್ರನು ದೇವದೂತರಿಗಿಂತಲೂ ಶ್ರೇಷ್ಠ; ಅವರಿಗಿಂತಲೂ ಹೆಸರು ವಾಸಿಯಾದಾತ. 5ಏಕೆಂದರೆ, ದೇವರು ತಮ್ಮ ದೂತರಲ್ಲಿ ಯಾರಿಗಾದರೂ - “ನೀನೇ ನನ್ನ ಪುತ್ರ; ನಾನೇ ನಿನ್ನನಿಂದು ಪಡೆದವ,” ಎಂದು ಎಂದಾದರೂ ಹೇಳಿದ್ದುಂಟೇ? ಅಥವಾ, “ನಾನಾತನಿಗೆ ಪಿತನು, ಆತನೆನಗೆ ಪುತ್ರನು,” ಎಂದಾಗಲಿ ಹೇಳಿದ್ದುಂಟೇ? 6ಇದಲ್ಲದೆ ದೇವರು ತಮ್ಮ ಚೊಚ್ಚಲ ಮಗನನ್ನು ಭೂಲೋಕಕ್ಕೆ ಕಳುಹಿಸುವಾಗ: “ದೇವದೂತರೆಲ್ಲರೂ ಆತನನ್ನು ಆರಾಧಿಸಲಿ,” ಎಂದಿದ್ದಾರೆ.


ಕೀರ್ತನೆ 
        
ಶ್ಲೋಕ: ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು 

1: ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ|
    ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ| 
    ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ||

2:  ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು|
     ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು||

6:  ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು|
     ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು||

7:  ನಾಚಲಿ ವ್ಯರ್ಥವಿಗ್ರಹಗಳನು ಪೂಜಿಸಿ ಹಿಗ್ಗುವವರು|
     ಪ್ರಭುವಿಗೆ ಅಡ್ಡಬೀಳಲಿ ಆ ದೇವರುಗಳೆಲ್ಲರು||

9:  ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ|
     ಮಹೋನ್ನತನು ನೀನು ದೇವರುಗಳಿಗೆಲ್ಲಾ||



ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

14ಯೊವಾನ್ನನು ಬಂಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸಂದೇಶವನ್ನು ಸಾರಿದರು:  15ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ, ಶುಭಸಂದೇಶದಲ್ಲಿ ವಿಶ್ವಾಸವಿಡಿ, ಎಂದು ಘೋಷಿಸಿದರು. 

16ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸಿಮೋನನನ್ನೂ ಆತನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾದ ಇವರು ಸರೋವರದಲ್ಲಿ ಬಲೆಬೀಸುತ್ತಾ ಇದ್ದರು. 17ಯೇಸು ಅವರಿಗೆ, ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು, ಎಂದು ಕರೆದರು. 18ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. 19ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ, ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು. 20ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು. 

ಚಿಂತನೆ
ಪ್ರೀತಿ ಮತ್ತು ನ್ಯಾಯ

ಕ್ರಿಸ್ತ ತಮ್ಮ ಬಹಿರಂಗ ಜೀವನವನ್ನು ಪ್ರಾರಂಭಿಸುವ ಮುನ್ನ ಮೂವತ್ತು ವರ್ಷಗಳ ಕಾಲ ಈ ಸಮಾಜವನ್ನು  ಅಧ್ಯಯನ ಮಾಡಿದರು. ನಲ್ವತ್ತು ದಿನಗಳ ನಿರಂತರ ಪ್ರಾರ್ಥನೆ ಮತ್ತು ಉಪವಾಸದ ನಂತರ ಜನರನ್ನು ಉದ್ದೇಶಿಸಿ ಕ್ರಿಸ್ತ ನೀಡಿದ ಮೊದಲ ಸಂದೇಶ, ``ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ, ಪಶ್ಚಾತ್ತಾಪಪಟ್ಟು ಪಾಪ ಜೀವನಕ್ಕೆ ಮಿಮುಖರಾಗಿ, ದೇವರಿಗೆ ಅಭಿಮುಖರಾಗಿರಿ.'' 

ಕ್ರಿಸ್ತ ಬಂದದ್ದು ದೇವರ ಸಾಮ್ರಾಜ್ಯವನ್ನು ಸ್ಥಾಪಿಸಲು. ಪ್ರೀತಿ ಮತ್ತು ನ್ಯಾಯ ದೇವರ ಸಾಮ್ರಾಜ್ಯದ ಎರಡು ಮುಖಗಳು. ಎಲ್ಲಿ ಪ್ರೀತಿ ಮತ್ತು ನ್ಯಾಯ ನೆಲೆಸಿದೆಯೋ ಅಲ್ಲಿ ದೇವರ ಸಾಮ್ರಾಜ್ಯವಿದೆ. ಪರರನ್ನು ಪ್ರೀತಿಸುತ್ತಾ, ನ್ಯಾಯಕ್ಕಾಗಿ ದುಡಿಯುತ್ತಾ ದೇವರ ಸಾಮ್ರಾಜ್ಯವನ್ನು ಸ್ಥಾಪಿಸುವ ಜವಾಬ್ದಾರಿ ನಮ್ಮದಾಗಿದೆ.

© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment