ಜನವರಿ ೨೦, ೨೦೧೯


ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

20 ಜನವರಿ 2019

ಭಾನುವಾರ/ಹಸಿರು/ಸಾಧಾರಣ ಕಾಲದ ಎರಡನೇ ಭಾನುವಾರ  
(ಸಂತ  ಫಾಬಿಯಾನ್  ಮತ್ತು ಸೆಬಸ್ತಿಯಾನ್‌ರವರ  ಸ್ಮರಣೆ  ಇರುವುದಿಲ್ಲ)    
1ನೇ  ವಾಚನ  -  ಯೆಶಾಯ  62:  1-5    
ಕೀರ್ತನೆ  -  96:  1-3,  7-8,  9-1೦           
2ನೇ ವಾಚನ - 1 ಕೊರಿಂಥ 12: 4-11     
ಶುಭಸಂದೇಶ  -  ಯೊವಾನ್ನ  2:  1-11  




ವಾಚನಗಳು
ಮೊದಲನೇ  ವಾಚನ

ಯೆಶಾಯ ಪ್ರವಾದಿಯ ಗ್ರಂಥದಿಂದ ವಾಚನ

1ಸಿಯೋನಿನ ಸದ್ಧರ್ಮವು ಪ್ರಕಾಶಗೊಳ್ಳುವತನಕ ಜೆರುಸಲೇಮಿನ ಉದ್ಧಾರ ದೀಪವು ಬೆಳಗುವತನಕ ಸುಮ್ಮನಿರೆನು ನಾನು ಸಿಯೋನಿನ ಹಿತವನ್ನು ಲಕ್ಷಿಸದೆ, ಮೌನವಿರೆನು ಜೆರುಸಲೇಮಿನ ಸುಕ್ಷೇಮವನು ಚಿಂತಿಸದೆ. 2ನೋಡುವರು ಜನಾಂಗಗಳು ನಿನ್ನ ಸದ್ಧರ್ಮವನು ಕಾಣುವರು ಸಕಲ ರಾಜರು ನಿನ್ನ ವೈಭವವನು ಪಡೆಯುವೆ ನೀನು ಸರ್ವೇಶ್ವರನೇ ಕೊಟ್ಟ ಹೊಸ ಹೆಸರನು. 3ಸರ್ವೇಶ್ವರನ ಕೈಯಲ್ಲಿ ನೀನು ಸುಂದರ ಕಿರೀಟವಾಗಿ ಮೆರೆಯುವೆ ನಿನ್ನ ದೇವರ ಹಸ್ತದಲ್ಲಿ ರಾಜ ಮುಕುಟವಾಗಿ; 4“ಎನ್ನ ಮನದನ್ನೆ” ಎನಿಸಿಕೊಳ್ಳುವೆ ನೀನು “ಸುವಿವಾಹಿತೆ” ಎನಿಸಿಕೊಳ್ಳುವುದು ನಿನ್ನ ನಾಡು. ನಿನ್ನಲ್ಲಿದೆ ಉಲ್ಲಾಸ ಸರ್ವೇಶ್ವರನಿಗೆ ವಿವಾಹವಾಗುವುದಿದೆ ನಿನ್ನ ನಾಡಿಗೆ. 5ಯುವಕನು ಕನ್ಯೆಯುವತಿಯನು ವರಿಸುವಂತೆ ವರಿಸುವನು ಸೃಷ್ಟಿಕರ್ತನು ನಿನ್ನನು. ವರನು ವಧುವಿನಲಿ ಆನಂದಿಸುವಂತೆ ನಿನ್ನಲಿ ಆನಂದಿಸುವನು ನಿನ್ನ ದೇವನು.




ಕೀರ್ತನೆ 
        
ಶ್ಲೋಕ: ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ


1 : ಹೊಸಗೀತೆಯನು ಹಾಡಿರಿ ಪ್ರಭುವಿಗೆ / 
     ವಿಶ್ವವೆಲ್ಲವು ಹಾಡಲಿ ಆತನಿಗೆ //

2 : ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ / 
     ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ //

3 : ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ /
     ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ //

7 : ಶಕ್ತಿಸಾಮಥ್ರ್ಯ ಪ್ರಭುವಿನದೇ ಎಂದು /
     ಜಗದ ರಾಷ್ಟ್ರಗಳು ಘನಪಡಿಸಲಿ ಆತನನು ಎಂದೆಂದು //

8 : ಆತನ ನಾಮಕೆ ತನ್ನಿ ಘನತೆಗೌರವವನು / 
     ಆತನ ಮಂದಿರಕೆ ಬನ್ನಿ ಕಾಣಿಕೆ ಹೊತ್ತು //

9 : ಪ್ರಭುವಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ / 
     ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ //

10 :ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ / 
      ಕದಲದ ಸ್ಥಿರತೆಯನು ಇತ್ತಿಹನು ಧರೆಗೆ /
      ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ //



ಎರಡನೇ  ವಾಚನ

ಸಂತ ಪೌಲನು ಕೊರಿಂಥದವರಿಗೆ ಬರೆದ ಮೊದಲ ಪತ್ರದಿಂದ ವಾಚನ

4ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ. 5ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ. 6ಶಕ್ತಿಸಾಮಥ್ರ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ. 7ಪ್ರತಿಯೊಬ್ಬನಲ್ಲಿ ಕಂಡು ಬರುವ ಪವಿತ್ರಾತ್ಮರ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ. 8ಪವಿತ್ರಾತ್ಮ ಮುಖಾಂತರ ಒಬ್ಬನಿಗೆ ಜ್ಞಾನೋಕ್ತಿಗಳು, ಇನ್ನೊಬ್ಬನಿಗೆ ಅವರ ಮುಖಾಂತರವೇ ವಿದ್ಯೋಕ್ತಿಗಳು ಲಭಿಸುತ್ತವೆ; 9ಅದೇ ಪವಿತ್ರಾತ್ಮರಿಂದ ಒಬ್ಬನಿಗೆ ಅಗಾಧ ವಿಶ್ವಾಸವೂ ಇನ್ನೊಬ್ಬನಿಗೆ ಸ್ವಸ್ಥತೆಯನ್ನೀಯುವ ಶಕ್ತಿಯೂ ದೊರಕುತ್ತದೆ. 10ಒಬ್ಬನಿಗೆ ಪವಾಡಗಳನ್ನು ಎಸಗುವ ಪರಾಕ್ರಮವನ್ನು, ಇನ್ನೊಬ್ಬನಿಗೆ ಪ್ರವಾದನೆ ಮಾಡುವ ಪ್ರತಿಭೆಯನ್ನು, ಮತ್ತೊಬ್ಬನಿಗೆ ಸತ್ಯಾಸತ್ಯವನ್ನು ವಿವೇಚಿಸುವ ಜಾಣ್ಮೆಯನ್ನು, ಮಗದೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಸಾಮಥ್ರ್ಯವನ್ನು, ಮತ್ತೂ ಒಬ್ಬನಿಗೆ ಅವುಗಳನ್ನು ಅರ್ಥೈಸುವ ಅರಿವನ್ನು ಆ ಪವಿತ್ರಾತ್ಮರಿಂದಲೇ ಕೊಡಲಾಗುತ್ತದೆ. 11ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಇಷ್ಟಾನುಸಾರ ಪ್ರತಿಯೊಬ್ಬನಿಗೂ ಹಂಚುತ್ತಾರೆ.




ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

1ಮಾರನೆಯ ದಿನ ಗಲಿಲೇಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. 2ಯೇಸುಸ್ವಾಮಿಯ ತಾಯಿ ಅಲ್ಲಿಗೆ ಬಂದಿದ್ದರು. ಯೇಸುವಿಗೂ ಅವರ ಶಿಷ್ಯರಿಗೂ ಆ ಮದುವೆಗೆ ಆಮಂತ್ರಣವಿತ್ತು. 3ಆ ಸಂದರ್ಭದಲ್ಲಿ ದ್ರಾಕ್ಷಾರಸ ಸಾಲದೆ ಹೋಯಿತು. ಆಗ ಯೇಸುವಿನ ತಾಯಿ, ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ, ಎಂದು ಯೇಸುವಿಗೆ ಹೇಳಿದರು. 4ಅದಕ್ಕೆ ಯೇಸು, ಅಮ್ಮಾ, ಇದನ್ನು ನನಗೇಕೆ ಹೇಳುತ್ತೀ? ನನ್ನ ಗಳಿಗೆ ಇನ್ನೂ ಬಂದಿಲ್ಲ, ಎಂದು ಉತ್ತರಕೊಟ್ಟರು. 5ತಾಯಿ ಸೇವಕರಿಗೆ, ಆತ ಹೇಳಿದಂತೆ ಮಾಡಿ, ಎಂದು ತಿಳಿಸಿದರು. 6ಯೆಹೂದ್ಯರ ಶುದ್ಧಾಚಾರ ಪದ್ಧತಿಯಂತೆ ಆರು ಕಲ್ಲುಬಾನೆಗಳನ್ನು ಅಲ್ಲಿ ಇಟ್ಟಿದ್ದರು. ಅವು ಒಂದೊಂದೂ ಎರಡು ಮೂರು ಕೊಡ ನೀರು ಹಿಡಿಯುವಷ್ಟು ದೊಡ್ಡದಾಗಿದ್ದವು.

7ಯೇಸುಸ್ವಾಮಿ ಸೇವಕರಿಗೆ, ಆ ಬಾನೆಗಳಲ್ಲಿ ನೀರು ತುಂಬಿರಿ, ಎಂದು ಹೇಳಿದರು. ಅವರು ಕಂಠದವರೆಗೆ ತುಂಬಿದರು. 8ಯೇಸು, ಈಗ ತೋಡಿಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿ, ಎಂದು ಹೇಳಲು ಅವರು ಹಾಗೆಯೇ ಮಾಡಿದರು. 9ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರಿನ ರುಚಿ ನೋಡಿದನು. ಅದು ಎಲ್ಲಿಂದ ಬಂದಿತೆಂಬುದು ಅವನಿಗೆ ತಿಳಿದಿರಲಿಲ್ಲ. ನೀರನ್ನು ತೋಡಿಕೊಂಡು ಬಂದ ಸೇವಕರಿಗೆ ಮಾತ್ರ ತಿಳಿದಿತ್ತು. 10ಆದುದರಿಂದ ಅವನು ಮದುಮಗನನ್ನು ಕರೆದು, ಜನರೆಲ್ಲರೂ ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಹಂಚುತ್ತಾರೆ; ಅತಿಥಿಗಳು ಯಥೇಚ್ಛವಾಗಿ ಕುಡಿದಾದ ಮೇಲೆ ಸಾಧಾರಣ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನಾದರೋ ಉತ್ತಮವಾದುದನ್ನು ಈವರೆಗೂ ಇಟ್ಟಿದ್ದೀಯಲ್ಲಾ! ಎಂದು ಹೇಳಿದನು.

11ಯೇಸು ಮಾಡಿದ ಮೊದಲನೆಯ ಸೂಚಕಕಾರ್ಯ ಇದು. ಇದನ್ನು ಗಲಿಲೇಯ ನಾಡಿನ ಕಾನಾ ಊರಿನಲ್ಲಿ ಮಾಡಿ ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಅವರ ಶಿಷ್ಯರಿಗೂ ಅವರಲ್ಲಿ ವಿಶ್ವಾಸ ಮೂಡಿತು. 

ಚಿಂತನೆ

ಪ್ರೇರಣೆ

ಕ್ರಿಸ್ತರು ಇಂದಿನ ಶುಭಸಂದೇಶದಲ್ಲಿ ತಮ್ಮ ಬಹಿರಂಗ ಜೀವನವನ್ನು ಪ್ರಾರಂಭಿಸುತ್ತಾರೆ. ತಮ್ಮ ತಾಯಿಯ ಪ್ರೇರಣೆಯಿಂದ ಮೊದಲ ಅದ್ಭುತವನ್ನು ಮಾಡುತ್ತಾರೆ. ಕ್ರಿಸ್ತರ ದೈವತ್ವವನ್ನು ಅರಿತಿದ್ದ ತಾಯಿ ಮೊದಲ ಅದ್ಬುತಕ್ಕೆ ಸಾಕ್ಷಿಯಾಗುತ್ತಾರೆ. ತನ್ನ ಮಗ ಹನ್ನೆರಡು ವರ್ಷದವನಿರುವಾಗ ದೇವಾಲಯದಲ್ಲಿ ಸಮರ್ಪಿಸಿದ್ದ ತಾಯಿ, ಇಂದು ಇಡೀ ವಿಶ್ವಕ್ಕೆ ಆತನ ದೈವತ್ವವನ್ನು ಪರಿಚಯಿಸಿ ಕೊಡುಗೆಯಾಗಿ ನೀಡುತ್ತಾಳೆ. ಮಾತೆ ಮರಿಯ ಕ್ರಿಸ್ತನಿಗೆ ಪ್ರೇರಣಾ ಶಕ್ತಿಯಾಗುವುದನ್ನು ಇಂದಿನ ಶುಭಸಂದೇಶದಲ್ಲಿ ನಾವು ಕಾಣುತ್ತೇವೆ. ಪ್ರತಿಯೊಂದು ಪವಾಡಕ್ಕೂ ಒಂದು ಪ್ರೇರಣೆ, ಪ್ರೋತ್ಸಾಹ ಬೇಕು. ಅದು ಆಂತರಿಕ ಪ್ರೇರಣೆಯಾಗಬಹುದು ಅಥವಾ ಬಾಹ್ಯ ಪ್ರೇರಣೆಯಾಗಬಹುದು. ಒಂದು ಒಳ್ಳೆಯ ಕೆಲಸ ಮಾಡಲು, ಸಾಧನೆಗೈಯಲು ಪ್ರೇರಣೆಯ ಅವಶ್ಯಕತೆಯಿದೆ. ಕ್ರಿಸ್ತನಿಗೆ ಮಾತೆ ಮರಿಯ ಪ್ರೇರಣೆಯಾದಂತೆ ನಾವು ಕೂಡ ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು. ಮಾತೆ ಮರಿಯಳಲ್ಲಿದ್ದ ಒಳ್ಳೆಯತನ ನಮ್ಮಲ್ಲೂ ಮೂಡಬೇಕು. ಪರರ ಕಷ್ಟದಲ್ಲಿ ನೆರವಾದ ಮರಿಯಳಂತೆ ನಾವು ಸಹ ಸಹಾಯ ಹಸ್ತ ಚಾಚಲು ಸಿದ್ಧರಿರಬೇಕು ಮತ್ತು ಇಂದು ಮಾತೆ ಮರಿಯಳು ನಮಗೆ ನೀಡುವ ಸಂದೇಶ, `ಆತ ಹೇಳಿದಂತೆ ಮಾಡಿ.' ಆತ ಹೇಳಿದಂತೆ ನಡೆದಾಗ ನಮ್ಮ ಜೀವನದಲ್ಲೂ ಅದ್ಭುತಗಳು ನಡೆಯುವುದರಲ್ಲಿ ಸಂಶಯವಿಲ್ಲ.

ಇಂದಿನ ಸಂತರು

1.ಸಂತ ಫಾಬಿಯಾನ್ 

ಅದು ಕ್ರಿಸ್ತಶಕ 236ನೇ ವರ್ಷ. ಜಗದ್ಗುರು ಪೋಪ್ ಅಂಟೆರೋಸ್ ಅವರು ತೀರಿಕೊಂಡು ಹಲವು ದಿನಗಳಾಗಿದ್ದವು. ನೂತನ ಜಗದ್ಗುರು ಪೋಪ್ ಅವರ ಆಯ್ಕೆಯ ಪ್ರಕ್ರಿಯೇ ಆರಂಭವಾಗಿತ್ತು. ಆಸಕ್ತ ಯಾಜಕರು ಮತ್ತು ರೋಮಿನ ಜನತೆ ನೂತನ ಜಗದ್ಗುರುಗಳು ಯಾರಾಗಬಹುದು ಎಂದು ತಿಳಿಯಲು ರೋಮಿನಲ್ಲಿ ನೆರೆದಿದ್ದರು. ಅವರೊಂದಿಗೆ ದೂರದ ಊರುಗಳಿಂದ ಬಂದ ಭಕ್ತಜನಾಂಗವೂ ಇತ್ತು. ಆ ದಿನ ಜಗದ್ಗುರುಗಳ ಆಯ್ಕೆಯು ಅಂತಿಮಗೊಳ್ಳಬೇಕಿತ್ತು. ಎಲ್ಲರೂ ತುದಿಗಾಲಲ್ಲಿ ಸುದ್ದಿಯ ನಿರೀಕ್ಷಣೆಯಲ್ಲಿದ್ದರು. ಅದು ಕೇವಲ ಕುತೂಹಲವಷ್ಟೇ ಅಲ್ಲ, ಅಗಲಿದ ಜಗದ್ಗುರುಗಳಿಗೆ ಶೃದ್ಧಾಂಜಲಿ ಸಲ್ಲಿಸುವ ಕ್ರಮವಾಗಿಯೂ ಆಸಕ್ತ ಭಕ್ತಾದಿಗಳು ರೋಮಿನಲ್ಲಿ ನೆರೆದಿದ್ದರು. ಒಬ್ಬ ಉತ್ತಮ ವಾಗ್ಮಿ ಯಾಜಕ ಜಗದ್ಗುರು ಆಗಬಹುದೆ? ಕ್ರೈಸ್ತರನ್ನು ಮುನ್ನಡೆಸುವ ಧೈರ್ಯದ ವ್ಯಕ್ತಿ ಜಗದ್ಗುರು ಆದರೆ ಒಳ್ಳೆಯದು. ಅಲ್ಲಲ್ಲ, ಒಬ್ಬ ಪ್ರಭಾವಶಾಲಿ ಜಗದ್ಗುರು ಆದರೆ ಅನುಕೂಲ - ಈ ಬಗೆಯ ವಿವಿಧ ಚಿಂತನೆಗಳಲ್ಲಿ ಜನ ಮುಳುಗಿದ್ದರು. 
ಈ ಬಗೆಯ ಚಿಂತನೆ ನಡೆಯುತ್ತಿರುವ ಸಂದರ್ಭದಲ್ಲೇ, ನೂತನ ಜಗದ್ಗುರುಗಳ ಆಯ್ಕೆಗಾಗಿ ನೆರೆದಿದ್ದ ಯಾಜಕರಿದ್ದ ಭವನದ ಛಾವಣಿಯಿಂದ ಪಾರಿವಾಳವೊಂದು ಇಳಿದು ಬಂದಿತು. ಅದು ನೇರವಾಗಿ ಹೊರಗೆ ನೆರೆದಿದ್ದ ಸಾಮಾನ್ಯ ಜನರಲ್ಲಿ ಸಾಮಾನ್ಯನಾಗಿದ್ದ, ಅದುವರೆಗೂ ಒಬ್ಬರಿಗೂ ತಿಳಿಯದಿದ್ದ ವ್ಯಕ್ತಿ ಫಾಬಿಯಾನ್ ಅವರ ತಲೆಯ ಮೇಲೆ ಕುಳಿತುಕೊಂಡಿತು. ಅದು ಹೇಗಿತ್ತೆಂದರೆ, ಜ್ಞಾನಸ್ನಾನ ಕೊಡುತ್ತಿದ್ದ ಸ್ನಾನಿಕ ಯೋವಾನ್ನನು ಪ್ರಭು ಯೇಸುಸ್ವಾಮಿಗೆ ಜ್ಞಾನಸ್ನಾನ ಮಾಡಿಸಿದಾಗ ಅವರ ತಲೆಯ ಮೇಲೆ ಪವಿತ್ರಾತ್ಮರು ಪಾರಿವಾಳದ ರೂಪದಲ್ಲಿ ಬಂದಿಳಿದಿದ್ದನ್ನು ಹೋಲುವ ಪರಿಯಲ್ಲಿತ್ತು. ಅಲ್ಲಿ ಪವಿತ್ರಾತ್ಮರ ಉಪಸ್ಥಿತಿ ಇದ್ದಂತೆ ಅನ್ನಿಸುತ್ತಿತ್ತು. ಯಾಜಕ ಬಳಗ ಮತ್ತು ನೆರೆದವರು ನೂತನ ಜಗದ್ಗುರು ಪಟ್ಟಕ್ಕೆ ಇದುವರೆಗೂ ಯಾರಿಗೂ ತಿಳಿಯದಿದ್ದ ಅನಾಮಿಕ ವ್ಯಕ್ತಿ ಫಾಬಿಯಾನ್ ಅವರೇ ಯೋಗ್ಯರೆಂದು ಬಗೆದರು. ಅವರ ಹೆಸರನ್ನು ಅಂತಿಮಗೊಳಿಸಲಾಯಿತು. 
ಪಾರಿವಾಳವು ಶಾಂತಿಯ ಪ್ರತೀಕವೂ ಹೌದು. ಒಂದು ಬಗೆಯಲ್ಲಿ ಪಾರಿವಾಳದ ಹಾಜರಾತಿ, ಜಗದ್ಗುರು ಫಾಬಿಯಾನ್ ಅವರ ಕಾಲದ ಶಾಂತಿಯ ಆಡಳಿತದ ಪ್ರವಾದನೆಯಂತಿತ್ತು. ಫಾಬಿಯಾನ್ ಅವರ ಅಧಿಕಾರ ವಹಿಸಿಕೊಳ್ಳುವ ಸಮಯದಲ್ಲಿ ಕ್ರೈಸ್ತರು ಅನುಭವಿಸುತ್ತಿದ್ದ ಕಷ್ಟಕೋಟಲೆಗಳಿಗೆ ಮುಕ್ತಿ ಸಿಕ್ಕಿತ್ತು. ಚಕ್ರವರ್ತಿ ಫಿಲಿಪ್ ಕ್ರೈಸ್ತರೊಂದಿಗೆ ಸ್ನೇಹಭಾವ ಹೊಂದಿದ್ದರು. ಕ್ರೈಸ್ತರ ಮೇಲಿನ ಕ್ರಮ ಜರುಗಿಸುವುದು ನಿಂತಿತ್ತು, ಜೊತೆಗೆ ಅವನ್ನು ಆದರದಿಂದ ಕಾಣುವ ಪರಿಪಾಠ ಆರಂಭವಾಗಿತ್ತು. ಈ ಶಾಂತಿ ಕಾಲದ ಸಮಯದಲ್ಲಿ ಜಗದ್ಗುರು ಫಾಬಿಯಾನ್ ಅವರು, ರೋಮಿನಲ್ಲಿ ಧರ್ಮಸಭೆ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಕಾರಣಕರ್ತರಾದರು. ರೋಮ ಪಟ್ಟಣಕ್ಕೆ, ಏಳು ಜನ ಡೀಕನರ ನೇಮಕ ಮಾಡಿದ ಅವರು, ಅಲ್ಲಿನ ಕ್ರೈಸ್ತ ಹುತಾತ್ಮರ ರಕ್ತಸಾಕ್ಷಿಗಳ ವಿವರಗಳ ಕಲೆ ಹಾಕಲು ಒತ್ತಾಸೆಯಾಗಿ ನಿಂತರು. 
ಆದರೆ, ಕಾಲ ನಿಂತ ನೀರಲ್ಲ. ಚಕ್ರವರ್ತಿ ಫಿಲಿಪ್ ತೀರಿಕೊಂಡ ನಂತರ ಶಾಂತಿಯು ಕದಡಿಹೋಯಿತು. ಡೇಸಿಯಸ್ ಚಕ್ರವರ್ತಿ ಪಟ್ಟಕ್ಕೆ ಏರುತ್ತಿದ್ದಂತೆಯೇ ಮತ್ತೆ ಅಶಾಂತಿ ತಾಂಡವವಾಡತೊಡಗಿತು. ಕ್ರೈಸ್ತರ ಮೇಲಿನ ದೌರ್ಜನ್ಯಗಳು ಹೆಚ್ಚತೊಡಗಿದವು. ಜಗದ್ಗುರು ಫಾಬಿಯಾನ್ ಅವರು, ಕ್ರಿಸ್ತಶಕ 250ರ ಸುಮಾರಿನಲ್ಲಿ ರಕ್ತಸಾಕ್ಷಿಯಾಗಿ ಅಸುನೀಗಬೇಕಾಯಿತು. ಡೇಸಿಯಸ್ ಅವರ ಆಡಳಿತದಲ್ಲಿ, ಫಾಬಿಯಾನ್ ಅವರೇ ಕ್ರೈಸ್ತರ ಮೇಲಿನ ದೌರ್ಜನ್ಯದ ಮೊದಲ ಬಲಿಯಾಗುತ್ತಾರೆ. 

2. ಸಂತ ಸಬಸ್ತಿಯಾನ್ 


ಸಂತ ಸೆಬಸ್ತಿಯಾನರ ತಂದೆ ತಾಯಿ, ಬಾಲ್ಯದ ಬಗ್ಗೆ ಯಾವ ಮಾಹಿತಿಯೂ ಲಭಿಸುವುದಿಲ್ಲ. ಆದರೆ, ಅವರು ದಕ್ಷಿಣ ಫ್ರಾನ್ಸ್ ನ ಮೂಲದವರು ಎಂಬುದು ತಿಳಿದು ಬರುತ್ತದೆ. ಅವರು ಮಿಲಾನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ನಂತರ ಕ್ರಿಸ್ತಶಕ 283ರಲ್ಲಿ ರೋಮನ್ ಸೇನೆಯ ಸೇವೆಗೆ ಸೇರಿದರು ಎಂದು ಹೇಳಲಾಗುತ್ತದೆ. ಅವರು ಸೇನೆಯಲ್ಲಿದ್ದಾಗ, ರೋಮನ್ ಅರಸರ ದೌರ್ಜನ್ಯಕ್ಕೆ ತುತ್ತಾದವರ ನೆರವಿಗೆ ಬರುತ್ತಿದ್ದರು ಹಾಗೂ ನೂರಾರು ಜನ ಪ್ರಮುಖರಿಗೆ ಕ್ರೈಸ್ತ ಧರ್ಮದತ್ತ ಒಲವು ಮೂಡುವಂತೆ ಮಾಡಿದ್ದರು. 

ಒಂದು ಬಾರಿ ರೋಮನ್ ದೈವಗಳ ಆರಾಧನೆ ಒಪ್ಪದ ಕ್ರೈಸ್ತರಾದ ಮಾರ್ಕಸ್ ಮತ್ತು ಮರ್ಸೇಲಿಯನ್ ಸಹೋದರರನ್ನು ರೋಮನ್ ಸೈನಿಕರು ಜೈಲಿಗೆ ತಳ್ಳಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಬಂದ ಅವರ ಪಾಲಕರು ಅವರನ್ನು ಕ್ರೈಸ್ತ ಧರ್ಮ ಬಿಟ್ಟುಬಿಡುವಂತೆ ಒತ್ತಡ ಹೇರುವುದನ್ನು ಗಮನಿಸಿದ ಸೆಬಸ್ತಿಯಾನ್, ಆ ಪಾಲಕರೇ ಕ್ರೈಸ್ತ ಧರ್ಮವನ್ನು ಒಪ್ಪವಂತೆ ಮನವೊಲಿಸಿತ್ತಾರೆ. ಅದನ್ನು ತಿಳಿದ ಕ್ರೈಸ್ತ ಮತವನ್ನು ಮತ್ತುಕ್ರೈಸ್ತರನ್ನು ದ್ವೇಷಿಸುತ್ತಿದ್ದ ಚಕ್ರವರ್ತಿ ಡಯಕ್ಲೇಷಿಯನ್, ಕೆಂಡಾಮಂಡಲನಾಗಿ, ಸೆಬಸ್ತಿಯಾನರನ್ನು ಕಂಬಕ್ಕೆ ಬಿಗಿದು ಬಾಣಗಳಿಂದ ಹೊಡೆದು ಸಾಯಿಸುವಂತೆ ಶಿಕ್ಷೆ ವಿಧಿಸುತ್ತಾನೆ. ಅವರ ಮೇಲೆ ಬಾಣಗಳ ಸುರಿಮಳೆಗೈದ ಬಿಲ್ವಿದ್ಯೆ ಪಾರಂಗತರು, ತಮ್ಮ ಬಾಣಗಳ ಏಟಿನಂತೆ ಸೆಬಾಸ್ತಿಯನ್‌ ಸತ್ತೆಹೋದನೆಂದು ಬಗೆಯುತ್ತಾರೆ. ಆದರೆ ರೋಮ ಪಟ್ಟಣದ ನಿವಾಸಿ ಐರಿನ್ ಎಂಬ ವಿಧವೆ, ಅವರನ್ನು ಆರೈಕೆ ಮಾಡಿ ಬದುಕಿಸುತ್ತಾಳೆ.  ಕ್ರೈಸ್ತಳಾದ ಆಕೆಯ ಗಂಡ ರೋಮನ್ ದೈವಗಳರಾಧನೆಯನ್ನು ನಿರಾಕರಿಸಿದ್ದಕ್ಕೆ ಆಕೆಯ ಗಂಡನನ್ನೂ ಸಾಯಿಸಲಾಗಿರುತ್ತದೆ. 

ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿದ ನಂತರ ಚಕ್ರವರ್ತಿಯ ಮುಂದೆ ಆತ ಮತ್ತೆ ಎದುರಾದಾಗ, ವಿಚಲಿತಗೊಳ್ಳುವ ಚಕ್ರವರ್ತಿ, ಈ ಬಾರಿ ಆತ ಖಂಡಿತ ಸಾಯಲೇಬೇಕು ಎಂದು ನಿರ್ಧರಿಸಿ ಆತನು ಸಾಯುವವರೆಗೂ ಬಾರುಕೋಲಿನಿಂದ ಹೊಡಿಯಿರೆಂದು ತನ್ನ ಸೈನಿಕರಿಗೆ ಆದೇಶ ನೀಡುತ್ತಾನೆ. ಅದರಂತೆಯೇ ಕೋಲಿನಿಂದ ಹೊಡೆದು ಸಾಯಿಸಿದ ನಂತರ ಸೆಬಸ್ತಿಯಾನ್ ಅವರ ಶವವನ್ನು ಸೈನಿಕರು ಚರಂಡಿಗೆ ಎಸೆಯುತ್ತಾರೆ. ಕ್ರೈಸ್ತ ಶೃದ್ಧಾಳುಗಳು ಅವನ ಶವವನ್ನು ಚರಂಡಿಯಿಂದ ಎತ್ತಿ ಒಂದು ಗುಹಾ ಸಮಾಧಿಯಲ್ಲಿ ಸಮಾಧಿ ಮಾಡುತ್ತಾರೆ. 

ಜನವರಿ 21 ಸಂತ ಸೆಬಸ್ತಿಯಾನ್ ಅವರ ಹಬ್ಬದ ದಿನ. ಈ ಸಂತರ ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿ, ಕ್ರೀಡಾಪಟುಗಳ ಪಾಲಕ ಸಂತರನ್ನಾಗಿಸಿದ್ದಾರೆ. ರೋಮನ್ ದೈವ ಅಪೋಲೊ ಅವರ ಬಾಣಗಳು ಚುಚ್ಚಿದಾಗ ಸಹಜವಾಗಿ ಅಸ್ವಸ್ಥತೆ ಉಂಟಾಗುತ್ತದೆ ಎಂಬ ನಂಬುಗೆಯಿದೆ. ಅಗಣಿತ ಸಂಖ್ಯೆಯ ಬಾಣಗಳು ಮೈಮೇಲೆ ಮೂಡಿಸಿದ ಗಾಯ ಪ್ಲೇಗ್ ಮಾರಿಯ ಗಾಯಗಳನ್ನು ಹೋಲುತ್ತಿದ್ದ ಹಿನ್ನೆಲೆಯಲ್ಲಿ ಕ್ರೈಸ್ತರು, ಈ ಸಂತರನ್ನು ಈ ರೋಗದಿಂದ ರಕ್ಷಿಸುವ ಸಂತರು ಎಂದು ಗುರುತಿಸುತ್ತಾರೆ. ರೋಮ್ ಪಟ್ಟಣದಲ್ಲಿ ಕ್ರಿಸ್ತಶಕ 680ರಲ್ಲಿ ಮತ್ತು ಮುಂದೆ1575ರಲ್ಲಿ ಮಿಲಾನ್ ಮತ್ತು 1599ರಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡ ಸಂದರ್ಭದಲ್ಲಿ ಈ ಸಂತರನ್ನು ಪ್ರಾರ್ಥಿಸಿದಾಗ, ಈ ರೋಗ ಕಣ್ಮರೆಯಾಯಿತು ಎಂದು ನಂಬಲಾಗುತ್ತದೆ. ಪ್ಲೇಗ್ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡದಂತೆ ಸಂತ ಸೆಬಸ್ತಿಯಾನ್‌ರು ರಕ್ಷಿಸುತ್ತಾರೆ. ಅವರನ್ನು ಬಿಲ್ಲುಗಾರರ, ಕ್ರೀಡಾಪಟುಗಳ ಮತ್ತು ಸೈನಿಕರ ಪಾಲಕ ಸಂತರೆಂದು ಗುರುತಿಸಲಾಗುತ್ತದೆ. 

ಚಿತ್ರ: ಗೂಗಲ್ಕೃಪೆ
© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment