ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
20 ಫೆಬ್ರವರಿ 2೦19
ಬುಧವಾರ / ಹಸಿರು / ಸಾಧಾರಣ ಕಾಲದ ಆರನೇ ವಾರ
1ನೇ ವಾಚನ - ಆದಿ: 8: 6-13, 20-22
ಕೀರ್ತನೆ - 116: 12-13, 14-15, 18-19
ಶುಭಸಂದೇಶ - ಮಾರ್ಕ8: 22-26
1ನೇ ವಾಚನ - ಆದಿ: 8: 6-13, 20-22
ಕೀರ್ತನೆ - 116: 12-13, 14-15, 18-19
ಶುಭಸಂದೇಶ - ಮಾರ್ಕ8: 22-26
ವಾಚನಗಳು
ಮೊದಲನೇ ವಾಚನ
ಆದಿಕಾಂಡದಿಂದ ವಾಚನ
ಆದಿಕಾಂಡ 8: 6-13, 20-22
6ನಲವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ್ದ ನಾವೆಯ ಕಿಟಕಿಯನ್ನು ತೆರೆದು ಕಾಗೆಯೊಂದನ್ನು ಹೊರಕ್ಕೆ ಬಿಟ್ಟನು. 7ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು. 8ನೀರು ಇಳಿಯಿತೋ ಇಲ್ಲವೋ ಎಂದು ತಿಳಿದುಕೊಳ್ಳಲು ನೋಹನು ಅನಂತರ ಪಾರಿವಾಳವೊಂದನ್ನು ಹೊರಕ್ಕೆ ಬಿಟ್ಟನು. 9ಭೂಮಿಯ ಮೇಲೆಲ್ಲ ನೀರು ಇದ್ದುದರಿಂದ, ಕಾಲಿಡುವುದಕ್ಕೆ ಸ್ಥಳ ಕಾಣದೆ ಈ ಪಾರಿವಾಳ ನಾವೆಗೆ ಹಿಂತಿರುಗಿತು. ನೋಹನು ಕೈ ಚಾಚಿ ಅದನ್ನು ಹಿಡಿದುಕೊಂಡು ನಾವೆಯೊಳಗೆ ಹಾಕಿಕೊಂಡನು. 10ಇನ್ನೂ ಏಳು ದಿವಸ ಕಾದು, ಪಾರಿವಾಳವನ್ನು ಹೊರಕ್ಕೆ ಬಿಟ್ಟನು. 11ಸಂಜೆ ವೇಳೆಗೆ ಆ ಪಾರಿವಾಳ ಅವನ ಬಳಿಗೆ ಮರಳಿತು; ಆಗ ಇಗೋ! ಅದರ ಬಾಯಲ್ಲಿ ಎಣ್ಣೇಮರದ ಹೊಸ ಚಿಗುರಿತ್ತು. ಇದನ್ನು ನೋಡಿ ನೋಹನು ಭೂಮಿಯ ಮೇಲಿಂದ ನೀರು ಇಳಿದುಹೋಗಿದೆಯೆಂದು ತಿಳಿದುಕೊಂಡನು. 12ಮತ್ತೆ ಏಳುದಿನಗಳಾದ ಮೇಲೆ ಇನ್ನೊಮ್ಮೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಈ ಸಾರಿ ಅದು ಹಿಂತಿರುಗಿ ಬರಲೇ ಇಲ್ಲ. 13ನೋಹನ 601ನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಂದು ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಸಣಿಗೆಯನ್ನು ತೆಗೆದು ನೋಡಿದನು. ಇಗೋ, ಭೂಮಿಯ ತೇವ ಆರುತ್ತಿತ್ತು.
20ನೋಹನು ಸರ್ವೇಶ್ವರಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿದನು. ಶುದ್ಧವಾದ ಎಲ್ಲ ಪ್ರಾಣಿಪಕ್ಷಿಗಳಿಂದ ಆಯ್ದು ಆ ಪೀಠದ ಮೇಲೆ ದಹನಬಲಿಯನ್ನು ಅರ್ಪಿಸಿದನು. 21ಗಮಗಮಿಸುವ ಅದರ ಸುಗಂಧವು ಸ್ವಾಮಿಯನ್ನು ಮುಟ್ಟಿತು. ಅವರು ಮನದಲ್ಲೆ ಹೀಗೆಂದುಕೊಂಡರು: “ಇನ್ನು ಮೇಲೆ ನಾನು ಮನುಷ್ಯರ ನಿಮಿತ್ತ ಭೂಮಿಯನ್ನು ಶಪಿಸುವುದಿಲ್ಲ. ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದು. ಈಗ ಮಾಡಿದಂತೆ ಇನ್ನು ಮೇಲೆ ಎಲ್ಲ ಜೀವಿಗಳನ್ನು ನಾನು ಸಂಹರಿಸುವುದಿಲ್ಲ. 22ಬಿತ್ತನೆ - ಕೊಯಿಲು ಚಳಿ - ಬಿಸಿಲು ಗ್ರೀಷ್ಮ - ಹೇಮಂತ ಹಗಲು - ಇರುಳು ಈ ಕ್ರಮಕ್ಕೆ ಇರದು ಅಂತ್ಯ ಜಗವಿರುವವರೆಗು.”
ಕೀರ್ತನೆ
ಕೀರ್ತನೆ 116: 12-13, 14-15,
18-19
ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು
ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ
ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?
ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು
ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು.
ಆತನಿಗೆ ನಾ ಹೊತ್ತ ಹರಕೆಗಳನು
ಆತನ ಸಭೆಮುಂದೆಯೆ ತೀರಿಸುವೆನು
ಪ್ರಭು ಅಲ್ಪವೆಂದೆಣಿಸನು
ತನ್ನ ಭಕ್ತರ ಮರಣವನು.
ಹೇ ಜೆರುಸಲೇಮೇ, ನಿನ್ನ ಮಧ್ಯದೊಳು
ಆತನಿರುವ ಮಂದಿರದ ಅಂಗಳದೊಳು
ತೀರಿಸುವೆನು ಆತನ ಸಭೆಯ ಸಮ್ಮುಖದೊಳು
ಅರ್ಪಿಸುವೆನು ನಾ ಹೊತ್ತ ಆ ಹರಕೆಗಳನು.
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ8: 22-26
22ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವರು ಯೇಸುವಿನ ಬಳಿಗೆ ಕುರುಡನೊಬ್ಬನನ್ನು ಕರೆತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು. 23ಯೇಸು ಕುರುಡನ ಕೈಹಿಡಿದು, ಅವನನ್ನು ಊರ ಹೊರಗೆ ಕರೆದೊಯ್ದರು. ಅವನ ಮೇಲೆ ಕೈಯಿಟ್ಟು, “ನಿನಗೆ ಏನಾದರೂ ಕಾಣುತ್ತಿದೆಯೇ?” ಎಂದು ಕೇಳಿದರು. 24ಆಗ ಅವನು ಕಣ್ಣೆತ್ತಿ ನೋಡಿ, “ನನಗೆ ಮನುಷ್ಯರು ಮರಗಳಂತೆ ಕಾಣಿಸುತ್ತಾರೆ. ಆದರೂ ಅವರು ನಡೆದಾಡುತ್ತಿದ್ದಾರೆ,” ಎಂದನು. 25ಯೇಸು ಪುನಃ ಅವನ ಕಣ್ಣುಗಳ ಮೇಲೆ ಕೈಯಿಟ್ಟರು. ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು. ಎಲ್ಲವೂ ಅವನಿಗೆ ಸ್ಪಷ್ಟವಾಗಿ ಕಾಣಿಸಿತು. 26ಅನಂತರ ಯೇಸು, “ನೀನು ಊರೊಳಗೆ ಹೋಗುವುದೇ ಬೇಡ,” ಎಂದು ಅವನಿಗೆ ಆಜ್ಞಾಪಿಸಿ, ಮನೆಗೆ ಕಳುಹಿಸಿಬಿಟ್ಟರು.
ಚಿಂತನೆ
ಪರರಲ್ಲಿನ ದೇವರ ಪ್ರಸನ್ನತೆ
ಯೇಸುಸ್ವಾಮಿ ಶಿಷ್ಯರೊಂದಿಗೆ ಬೆತ್ಸಾಯಿದಕ್ಕೆ ಬರುತ್ತಾರೆ. `ಬೆತ್ಸಾಯಿ'ದ ಅಂದರೆ `ಮೀನುಗಾರರ ಮನೆ' ಎಂದರ್ಥ. ಈ ಪಟ್ಟಣವು ಜೋರ್ಡಾನ್ ನದಿಯ ಪೂರ್ವದಲ್ಲಿದ್ದು, ಮೀನು ವ್ಯಾಪಾರ ಮಾಡಲು ಯೋಗ್ಯ ಸ್ಥಳವಾಗಿತ್ತು. ಆಂದ್ರೆಯ, ಪೇತ್ರ ಮತ್ತು ಫಿಲಿಪ್ಪರು ಈ ಪಟ್ಟಣಕ್ಕೆ ಸೇರಿದವರಾಗಿದ್ದರು.
ಕುರುಡನ ಕರುಣಾಜನಕ ಸ್ಥಿತಿಯನ್ನು ಕಂಡು ಯೇಸು ಆತನನ್ನು ಗುಣಪಡಿಸುತ್ತಾರೆ. ಕುರುಡನ ಸ್ನೇಹಿತರು ಆತನನ್ನು ಕ್ರಿಸ್ತನ ಬಳಿ ಕರೆತಂದಂತೆ ನಾವು ಕೂಡ ಇತರರನ್ನು ಯೇಸುವಿನ ಬಳಿ ಕರೆತರಬೇಕು. ಅನೇಕ ಬಾರಿ ನಾವು ದೇವರ ಪ್ರಸನ್ನತೆಯನ್ನು ಗುರುತಿಸಲು ವಿಫಲರಾಗಿದ್ದೇವೆ. ಪರಮಪ್ರಸಾದದಲ್ಲಿ ಹಾಗೂ ಪವಿತ್ರ ಗ್ರಂಥದಲ್ಲಿ ದೇವರ ಪ್ರಸನ್ನತೆ ಗುರುತಿಸುವ ನಾವು ಪರರಲ್ಲಿ ಗುರುತಿಸಲು ವಿಫಲರಾಗುತ್ತೇವೆ. ಯೇಸು ನಮ್ಮ ಆಧ್ಯಾತ್ಮಿಕ ಕುರುಡತನವನ್ನು ಗುಣಪಡಿಸಲಿ ಎಂದು ಪ್ರಾರ್ಥಿಸುವಾ.
ಚಿತ್ರ: ಗೂಗಲ್ ಕೃಪೆ

No comments:
Post a Comment