ಫೆಬ್ರವರಿ ೧೯, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

19 ಫೆಬ್ರವರಿ 2೦19


ಮಂಗಳವಾರ / ಹಸಿರು / ಸಾಧಾರಣ ಕಾಲದ ಆರನೇ ವಾರ 
1ನೇ ವಾಚನ - ಆದಿ 6: 5-8: 7: 1-5, 10 
ಕೀರ್ತನೆ - 29: 1-4, 8-10 
ಶುಭಸಂದೇಶ - ಮಾರ್ಕ 8: 14-21 

ವಾಚನಗಳು
ಮೊದಲನೇ  ವಾಚನ

ಆದಿಕಾಂಡದಿಂದ ವಾಚನ
ಆದಿಕಾಂಡ 6: 5-8, 7: 1-5, 10
5ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು. 6ಇದನ್ನು ಕಂಡ ಸರ್ವೇಶ್ವರ ಮನುಜನನ್ನು ಇಲ್ಲಿ ಸೃಷ್ಟಿಮಾಡಿದ್ದಕ್ಕಾಗಿ ವ್ಯಥೆಪಟ್ಟು, 7ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ. ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿಕೀಟಗಳನ್ನು ಅಳಿಸಿ ಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದುಃಖವಾಗುತ್ತಿದೆ,” ಎಂದುಕೊಂಡರು. 8ಆದರೆ ನೋಹನ ವಿಷಯದಲ್ಲಿ ಸರ್ವೇಶ್ವರಸ್ವಾಮಿಗೆ ಮೆಚ್ಚುಗೆಯಿತ್ತು.

1ಸರ್ವೇಶ್ವರಸ್ವಾಮಿ ನೋಹನಿಗೆ, ನೀನೂ ನಿನ್ನ ಮನೆಯವರೆಲ್ಲರೂ ನಾವೆಯನ್ನು ಸೇರಿಕೊಳ್ಳಿರಿ; ಈಗಿನ ಪೀಳಿಗೆಯಲ್ಲಿ ನೀನೊಬ್ಬನೇ ನನ್ನ ದೃಷ್ಟಿಗೆ ಸತ್ಪುರುಷ. 2ಎಲ್ಲ ಶುದ್ಧ ಪ್ರಾಣಿಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪ್ರಾಣಿಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ಕರೆದುಕೊ. 3ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೊ. ಹೀಗೆ ಆಯಾ ಜಾತಿಯನ್ನು ಭೂಮಿಯಲ್ಲಿ ಉಳಿಸಿ ಕಾಪಾಡಬೇಕು. 4ಏಳು ದಿನಗಳಾನಂತರ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳೆನ್ನದೆ ಮಳೆ ಸುರಿಸುವೆನು; ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲ ಭೂಮಿಯಿಂದ ಅಳಿಸಿ ಹಾಕುವೆನು, ಎಂದು ಹೇಳಿದರು. 5ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು. 

10ಏಳು ದಿನಗಳಾದ ಬಳಿಕ ಜಲಪ್ರಳಯವಾಗತೊಡಗಿತು.


ಕೀರ್ತನೆ 


ಕೀರ್ತನೆ 29: 1-4, 8-10 
ಪ್ರಭು ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು

ಸುರಪುತ್ರರೇ, ಪ್ರಭುವಿನ ಸ್ತುತಿ ಮಾಡಿರಿ
ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು
ಪೂಜಿಸಿರಿ ಪವಿತ್ರಾಂಬರರಾಗಿ ಆತನನು.

ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ
ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ
ಪ್ರಭುವಿನ ಧ್ವನಿ ಶಕ್ತಿಯುತ ಆತನ ಶಬ್ದ ವೈಭವಯುತ.

ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ
ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು

ಜಲಪ್ರಳಯದೊಳು ಪ್ರಭು ಆಸೀನ ನಾಗಿಹನು 
ಯುಗಯುಗಾಂತರಕು ಅರಸನಾಗಿ ಆಳುವನು.


ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 8: 14-21 
14ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. 15ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,” ಎಂದು ಹೇಳಿದರು. 16ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು. 17ಆ ಚರ್ಚೆಯನ್ನು ಯೇಸು ಗಮನಿಸಿ “ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ? 18ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ? 19ನಾನು ಐದು ರೊಟ್ಟಿಗಳಿಂದ ಐದುಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?” ಎಂದು ಕೇಳಿದರು. “ಹನ್ನೆರಡು ಬುಟ್ಟಿಗಳು” ಎಂದು ಅವರು ಉತ್ತರವಿತ್ತರು. 20“ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕುಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆತುಂಬಾ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಪುನಃ ಅವರನ್ನು ಕೇಳಲು, “ಏಳು ಕುಕ್ಕೆಗಳು,” ಎಂದರು. 21ಆಗ ಯೇಸು, “ಇಷ್ಟಾದರೂ ನಿಮಗಿನ್ನೂ ತಿಳುವಳಿಕೆ ಇಲ್ಲವೆ?” ಎಂದರು. 

ಚಿಂತನೆ
ಸನ್ನಡತೆಯ ನೋಹ
ದೇವರು ಮಾನವನನ್ನು ತಮ್ಮ ಸ್ವಂತ ಹೋಲ್ವಿಕೆಯಲ್ಲಿ ಮತ್ತು ಪ್ರತಿರೂಪದಲ್ಲಿ ಸೃಷ್ಟಿಸಿದರು. ಮಾನವನನ್ನು ಸೃಷ್ಟಿಗೆ ಒಡೆಯನನ್ನಾಗಿ ಮಾಡಿದರು. ಆದರೆ ಮಾನವ ದೇವರ ಪ್ರೀತಿಯನ್ನು ಮರೆತ, ದೇವರಿಗೆ ಅವಿಧೇಯನಾದ, ಕೆಟ್ಟ ಕಾರ್ಯಗಳಿಂದ ಕೆಟ್ಟ ಆಲೋಚನೆಗಳಿಂದ ದೇವರಿಂದ ದೂರವಾದ. ಮನುಷ್ಯನ ಪಾಪಕೃತ್ಯಗಳಿಂದ ವ್ಯಥೆಪಟ್ಟ ದೇವರು ಮನುಷ್ಯನನ್ನು ಸರಿದಾರಿಗೆ ತರುವ ಸಲುವಾಗಿ ಶಿಕ್ಷಿಸಲು ಮುಂದಾಗುತ್ತಾರೆ. ನೋಹನ ಮುಖಾಂತರ ಸೃಷ್ಟಿಯನ್ನು ರಕ್ಷಿಸುತ್ತಾರೆ. ನೋಹ ಅಂದರೆ ಹೀಬ್ರೂ ಭಾಷೆಯಲ್ಲಿ ಶಾಂತಿ, ವಿರಾಮ ಎಂದರ್ಥ. ನೋಹ ತನ್ನ ಸನ್ನಡತೆಯಿಂದ ದೇವರ ಮನಗೆಲ್ಲುತ್ತಾನೆ. ಪಾಪ ಕೃತ್ಯದಿಂದ ದುರ್ಮಾಗದಿಂದ ದೇವರನ್ನು ದುಃಖಿಸದೆ ನೋಹನಂತೆ ಸನ್ನಡತೆಯಿಂದ ದೇವರ ಮೆಚ್ಚುಗೆಗೆ ನಾವು ಪಾತ್ರರಾಗಬೇಕಿದೆ.


ಇಂದಿನ ಸಂತರು

ಸಂತ ಕೊನ್ರಾಡ್ (129೦-1351)
ಇವರು ಉತ್ತರ ಇಟಲಿಯ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಅಮಾಯಕ ವ್ಯಕ್ತಿಯ ಮೇಲೆ ತಾವು ಹೊರಿಸಿದ ಸುಳ್ಳು ಆರೋಪ ಹಾಗೂ ಆತನಿಗಾದ ಮರಣ ದಂಡನೆಯ ಶಿಕ್ಷೆಗಳು ಕೊನ್ರಾಡ್ ನವರನ್ನು ಪಶ್ಚಾತ್ತಾಪದ ಆಳವಾದ ಚಿಂತನೆಗೆ ತಳ್ಳಿದವು. ಇದಾದ ನಂತರ ಇವರು ಎಲ್ಲವನ್ನೂ ತ್ಯಜಿಸಿ ಸಂತ ಫ್ರಾನ್ಸಿಸ್ ಸಭೆ ಸೇರಿದರೆ ಇವರ ಪತ್ನಿ ಮಹಿಳಾ ಧಾರ್ಮಿಕ ಸಭೆಯನ್ನು ಸೇರಿದರು. ಶಿಲುಬೆಯ ಮುಂದೆ ನಿರಂತರ ಪ್ರಾರ್ಥನೆಯಲ್ಲಿ ತೊಡಗುತ್ತಿದ್ದ ಇವರು ಮೊಣಕಾಲಿನಲ್ಲಿ ಪ್ರಾರ್ಥಿಸುವ ಭಂಗಿಯಲ್ಲೇ ಪ್ರಾಣ ಬಿಟ್ಟರು.


ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment