ಜನವರಿ ೨೬, ೨೦೧೯


ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

26 ಜನವರಿ 2019

ಶನಿವಾರ/ಬಿಳಿ/ಸಂತ ತಿಮೊಥಿ ಮತ್ತು ತೀತ (ಧರ್ಮಾ. ಸ್ಮರಣೆ).
ಗಣರಾಜ್ಯೋತ್ಸವ ಭಾರತಕ್ಕೆ ಮೀಸಲಾಗಿರುವ ಪೂಜೆಯನ್ನು ಅರ್ಪಿಸಬಹುದು.
1ನೇ  ವಾಚನ  -  2  ತಿಮೊ1:  1-8
ಕೀರ್ತನೆ  -  96:  1-3,  7-8,  1೦
ಶುಭಸಂದೇಶ  -  ಲೂಕ  1೦:  1-9


ವಾಚನಗಳು

ಮೊದಲನೇ  ವಾಚನ

 ಸಂತ ಪೌಲನು ತಿಮೋಥೇಯನಿಗೆ ಬರೆದ ಎರಡನೆಯ ಪತ್ರದಿಂದ ವಾಚನ
2  ತಿಮೊ1:  1-8
1-2ನನ್ನ ಪ್ರೀತಿಯ ಪುತ್ರ ತಿಮೊಥೇಯನಿಗೆ ಪೌಲನು ಬರೆಯುವ ಪತ್ರ. ಕ್ರಿಸ್ತಯೇಸುವಿನಲ್ಲಿರುವವರಿಗೆ ಲಭಿಸುವ ಅಮರ ಜೀವದ ವಾಗ್ದಾನವನ್ನು ಸಾರಲು ದೈವಚಿತ್ತಾನುಸಾರ ಪ್ರೇಷಿತನಾದ ನಾನು ತಿಳಿಸುವುದೇನೆಂದರೆ: ಪಿತನಾಗಿರುವ ದೇವರೂ ಒಡೆಯರಾದ ಕ್ರಿಸ್ತಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ!  3-4ನಾನು ಹಗಲಿರುಳೂ ನನ್ನ ಪ್ರಾರ್ಥನೆಯಲ್ಲಿ ತಪ್ಪದೆ ನಿನ್ನನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಪೂರ್ವಿಕರ ಹಾಗೆ ಶುದ್ಧಮನಸ್ಸಾಕ್ಷಿಯಿಂದ ನನ್ನ ಆರಾಧ್ಯ ದೇವರಿಗೆ ನಿನ್ನ ವಿಷಯವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಂದು ನೀನು ಸುರಿಸಿದ ಕಣ್ಣೀರನ್ನು ನಾನು ಇನ್ನೂ ಮರೆತಿಲ್ಲ. ನಿನ್ನನ್ನು ಪುನಃ ನೋಡಿ ಆನಂದ ಪಡಬೇಕೆಂದು ಹಂಬಲಿಸುತ್ತಿದ್ದೇನೆ. 5ನಿನ್ನ ದೃಢವಿಶ್ವಾಸವು ನನ್ನ ನೆನಪಿನಲ್ಲಿದೆ. ನಿನ್ನ ಅಜ್ಜಿ ಲೋವಿಯಳಲ್ಲೂ ತಾಯಿ ಯೂನಿಸಳಲ್ಲೂ ನೆಲೆಗೊಂಡಿದ್ದ ವಿಶ್ವಾಸ ಈಗ ನಿನ್ನಲ್ಲೂ ಪೂರ್ಣವಾಗಿ ನೆಲೆಗೊಂಡಿದೆಯೆಂದು ನಾನು ನಂಬಿದ್ದೇನೆ. 6ನಾನು ನಿನ್ನ ಮೇಲೆ ಹಸ್ತ ನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಫಿಸುತ್ತೇನೆ. 7ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ. 8ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು.


ಅಥವಾ 

 ಸಂತ ಪೌಲನು ತೀತನಿಗೆ ಬರೆದ ಪತ್ರದಿಂದ ವಾಚನ
ತೀತ (1:1-5)
1-4ಕ್ರಿಸ್ತವಿಶ್ವಾಸದಲ್ಲಿ ಪುತ್ರನಾಗಿರುವ ತೀತನಿಗೆ ದೇವರ ದಾಸನೂ ಯೇಸುಕ್ರಿಸ್ತರ ಪ್ರೇಷಿತನೂ ಆದ ಪೌಲನು ಬರೆಯುವ ಪತ್ರ. ತಂದೆಯಾದ ದೇವರೂ ನಮ್ಮ ಉದ್ಧಾರಕರಾದ ಯೇಸುಕ್ರಿಸ್ತರೂ ನಿನಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ! ದೇವರು, ತಾವು ಆರಿಸಿಕೊಂಡಿರುವ ಜನರ ವಿಶ್ವಾಸವನ್ನು ದೃಢಪಡಿಸಲು ಮತ್ತು ಭಕ್ತಿಯನ್ನು ವೃದ್ಧಿಗೊಳಿಸಿ ಅಮರ ಜೀವದತ್ತ ಕರೆದೊಯ್ಯುವ ಸತ್ಯಗಳನ್ನು ಅವರಿಗೆ ಬೋಧಿಸಲು ನನ್ನನ್ನು ನೇಮಿಸಿದ್ದಾರೆ. ಈ ಅಮರ ಜೀವವನ್ನು ಕೊಡುವುದಾಗಿ ಸತ್ಯಪರರಾದ ದೇವರು ಆದಿಯಿಂದಲೂ ನಮಗೆ ವಾಗ್ದಾನಮಾಡಿದ್ದರು. ಸೂಕ್ತ ಕಾಲವು ಬಂದಾಗ ಈ ವಾಗ್ದಾನವನ್ನು ಈಡೇರಿಸಿ ತಮ್ಮ ಸಂದೇಶವನ್ನು ಪ್ರಕಟಿಸಿದರು. ನನಗೊಪ್ಪಿಸಿರುವ ಈ ಸಂದೇಶವನ್ನು ಜಗದ್ರಕ್ಷಕರಾದ ದೇವರ ಆಜ್ಞಾನುಸಾರ ನಾನು ಸಾರುತ್ತಿದ್ದೇನೆ. 

5ನೀನು ಕ್ರೇಟ್ ದ್ವೀಪದಲ್ಲಿ ಇನ್ನೂ ಸರಿಪಡಿಸಬೇಕಾದ ಕೆಲಸಗಳನ್ನು ಕ್ರಮಪಡಿಸಿ, ಅಲ್ಲಿಯ ಪ್ರತಿಯೊಂದು ಪಟ್ಟಣಕ್ಕೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆ.


ಕೀರ್ತನೆ 
        

ಕೀರ್ತನೆ 96:1-2,2-3,7-8,10
ಶ್ಲೋಕ: ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ / 
ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ

1:  ಹೊಸಗೀತೆಯನು ಹಾಡಿರಿ ಪ್ರಭುವಿಗೆ / 
      ವಿಶ್ವವೆಲ್ಲವು ಹಾಡಲಿ ಆತನಿಗೆ //

2:   ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ / 
      ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ //

3:   ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ / 
      ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ //

7:   ಶಕ್ತಿಸಾಮರ್ಥ್ಯ ಪ್ರಭುವಿನದೇ ಎಂದು / 
      ಜಗದ ರಾಷ್ಟ್ರಗಳು ಘನಪಡಿಸಲಿ ಆತನನು ಎಂದೆಂದು //

8:   ಆತನ ನಾಮಕೆ ತನ್ನಿ ಘನತೆಗೌರವವನು / 
      ಆತನ ಮಂದಿರಕೆ ಬನ್ನಿ ಕಾಣಿಕೆ ಹೊತ್ತು //

10: ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ / 
      ಕದಲದ ಸ್ಥಿರತೆಯನು ಇತ್ತಿಹನು ಧರೆಗೆ / 
      ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ ///



ಶುಭಸಂದೇಶ

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ
ಲೂಕ 10: 1-9

1ಇದಾದ ಮೇಲೆ, ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. 2ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. 3ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. 4ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. 5ನೀವು ಯಾವ ಮನೆಗೆ ಹೋದರೂ, ‘ಈ ಮನೆಗೆ ಶಾಂತಿ,' ಎಂದು ಆಶೀರ್ವಾದ ಮಾಡಿ, 6ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. 7ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. 8ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. 9ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. 'ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ,' ಎಂದು ತಿಳಿಸಿರಿ.

ಚಿಂತನೆ


ಸಂತ ತಿಮೋಥಿ ಮತ್ತು ತೀತ

ಪೌಲ ಮತ್ತು ತಿಮೋಥಿ ಒಂದೇ ಕಾಲಘಟ್ಟದವರು. ಶುಭಸಂದೇಶ ಪ್ರಚಾರಕ್ಕಾಗಿ ಇಬ್ಬರೂ ಸಮಾನ ಹಿಂಸೆ ಮತ್ತು ನೋವು ಅನುಭವಿಸಿದವರು. ತಿಮೋಥಿ ಜನಿಸಿದ್ದು ಇಂದಿನ ಟರ್ಕಿಯಲ್ಲಿ, ಗ್ರೀಕ್ ತಂದೆ ಮತ್ತು ಯೆಹೂದಿ ತಾಯಿಯ ಪುತ್ರನೀತ. ಕ್ರಿ.ಶ. 47ರಲ್ಲಿ ಪೌಲ ನೀಡಿದ ಸ್ನಾನದೀಕ್ಷೆಯಿಂದ ಕ್ರೈಸ್ತ ಧರ್ಮವನ್ನು ಅವಲಂಬಿಸಿದ ಬಾಲಕ ತಿಮೊಥಿ ನಂತರದ ದಿನಗಳಲ್ಲಿ ಪೌಲನೊಂದಿಗೆ ಧರ್ಮಪ್ರಚಾರಕನಾಗಿ ಜೊತೆಗಾರನೂ ಆಗುತ್ತಾನೆ.

ಪೌಲನ ಆತ್ಮೀಯ ಸ್ನೇಹಿತನೂ, ಶಿಷ್ಯನು ಆಗಿದ್ದ ತೀತ ಶುಭಸಂದೇಶದ ಪ್ರಚಾರದ ಪ್ರಾರಂಭದ ದಿನಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ. ತೀತ ಉತ್ತಮ ಸಂಧಾನಕಾರನಾಗಿದ್ದ, ಒಳ್ಳೆ ಆಡಳಿತಗಾರ ಮತ್ತು ಉತ್ತಮ ಸ್ನೇಹಿತ. ಕೊರಿಂಥ ಧರ್ಮಸಭೆ ಸಮಸ್ಯೆಗಳಲ್ಲಿ ಮುಳುಗಿದ್ದಾಗ ಪೌಲನ ಪತ್ರಗಳನ್ನು ಒಯ್ದು ಅಲ್ಲಿನ ಸಮಸ್ಯೆಗಳನ್ನು ತಿಳಿಗೊಳಿಸಿದ್ದು ಈ ತೀತನೇ. ಕ್ರೇಟ್ ದ್ವೀಪದ ಕ್ರೈಸ್ತ ಸಭೆಯ ಮೇಲ್ವಿಚಾರಕನಾಗಿದ್ದ ತೀತನಿಗೆ ಅಲ್ಲಿನ ಜನರ ದುರ್ನಡತೆಯನ್ನು ಸುಧಾರಿಸಿ, ಧಾರ್ಮಿಕ ಮುಖಂಡರನ್ನು, ಯಾಜಕರನ್ನು ನಿಯೋಜಿಸುವ ಕೆಲಸವನ್ನು ಪೌಲ ವಹಿಸುತ್ತಾನೆ. ಪೌಲನೊಂದಿಗೆ ಅವಿರತವಾಗಿ ದುಡಿದ ತಿಮೋಥಿ ಮತ್ತು ತೀತರು ಹಲವು ಹಿಂಸೆ ಬಾಧೆಗಳನ್ನು ಅನುಭವಿಸಿ ಧರ್ಮಸಭೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸುತ್ತಾರೆ. ಅವರ ಆದರ್ಶವನ್ನು ಪಾಲಿಸಿ ಧರ್ಮಸಭೆಯ ಏಳಿಗೆಗೆ ದುಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಭಾರತದ ಗಣರಾಜ್ಯೋತ್ಸವ
ಇ೦ದು ನಾವು ನಮ್ಮ ದೇಶದ ಸಾರ್ವಭೌಮ ಗಣರಾಜ್ಯೋತ್ಸವವನ್ನು ಆಡ೦ಬರದಿ೦ದ ಆಚರಿಸುತ್ತೇವೆ. 26 ಜನವರಿ 1950 ರ ಸ್ಮರಣೆ, ನಮ್ಮ ದೇಶದ ಪ್ರಜೆಗಳ ಸ೦ವಿಧಾನದ ಮೂಲ ಹಕ್ಕು, ಕಾರ್ಯ-ಕರ್ತವ್ಯ, ನ್ಯಾಯ, ಸ್ವಾತ೦ತ್ರ್ಯ, ಸಮಾನತೆ, ಸಹೋದರತ್ವ ಮತ್ತು ಸಹಬಾಳ್ವೆಯ ಬುನಾದಿ. ಈ ದಿನಗಳಲ್ಲಿ ನಾವು ಸೌಹಾರ್ದತೆಯ ಸಪ್ತಾಹದ ನವದಿನಗಳಲ್ಲಿದ್ದೇವೆ. ಈ ಸ೦ಧರ್ಭದಲ್ಲಿ ನಮ್ಮ ಗಣರಾಜ್ಯೋತ್ಸವದ ಆಚರಣೆ ಆರ್ಥಗರ್ಭಿತವಾಗಿ, ದೇಶದ ಜನ-ಪ್ರಜೆಗಳ, ಸರ್ವ ಹಕ್ಕು-ಅಧಿಕಾರದೊ೦ದಿಗೆ ಕಾರ್ಯ-ಕರ್ತವ್ಯವನ್ನು, ನಮ್ಮ ಸ೦ವಿಧಾನ ಎತ್ತಿ ತೋರಿಸುವ ಹಬ್ಬವೂ ಹೌದು.

ಗಣರಾಜ್ಯೋತ್ಸವದ ಸ೦ಭ್ರಮದಲ್ಲಿ ನಮ್ಮೆಲ್ಲರ ವಿಭಿನ್ನತೆಯಲ್ಲಿ ಏಕತೆಯನ್ನು ದೇಶದ ಎಲ್ಲ ಪ್ರಜೆಗಳು ನಮ್ಮ ಸಾರ್ವಭೌಮತೆಯಲ್ಲಿ ವ್ಯಕ್ತಪಡಿಸುವ ದಿನ, ಈ ಪ್ರಪ೦ಚದ ಎಲ್ಲಾ ದೇಶಗಳ ಸ್ವತ೦ತ್ರ ಜೀವಿಗಳ೦ತೆ, ನಾವು ಸಹ ನಮ್ಮ ಪ್ರಜಾಪ್ರಭುತ್ವವನ್ನುಸಾರಿ ಹೇಳುವ ದಿನ. ಇದನ್ನು ನಮ್ಮ ಸ೦ವಿಧಾನ ನಮ್ಮ ಸುಭದ್ರತೆಯನ್ನು, ಜೀವನ ರಕ್ಷಣೆಯನ್ನು – ಗೊತ್ತುಪಡಿಸುವ ಸಾಧನವಾಗಿದೆ.

ಈ ನಿಟ್ಟಿನಲ್ಲಿ ಭಾರತದ ಪ್ರತಿಪ್ರಜೆಗಳಾದ ನಾವು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯಿ೦ದ ನಮ್ಮ ಸ೦ವಿಧಾನವನ್ನು ಗೌರವಿಸಿ, ಅದನ್ನು ಪ್ರಶ೦ಶಿಸುತ್ತಾ, ನಮ್ಮ ಸ೦ಸ್ಕ್ರತಿ, ಭಾಷೆ, ಆಚಾರ-ವಿಚಾರಗಳನ್ನು ಕಾಪಾಡಿ-ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಮ್ಮ ದೇಶದ ಎಲ್ಲಾ ಧರ್ಮ, ಭಾಷೆ, ಸ೦ಸ್ಕ್ರತಿ, ಸ೦ಪ್ರದಾಯಗಳೊ೦ದಿಗೆ ಎಲ್ಲಾ ಮೌಲ್ಯಗಳನ್ನು ಗೌರವಿಸುವ ದಿನ. ಇದರೊ೦ದಿಗೆ ನಮ್ಮೆಲ್ಲರ ಉದ್ದಾರ, ಬೆಳೆವಣೆಗೆ ಹಾಗೂ ಏಳ್ಗೆ ಯಿ೦ದ ನಮ್ಮ ದೇಶವನ್ನು ಕಟ್ಟಲು ಸಾಧ್ಯ. ಎಲ್ಲಾ ಅಡ್ಡಿ-ಆತ೦ಕಗಳನ್ನು ಧೈರ್ಯದಿ೦ದ ಜಯಿಸಿ ನಮ್ಮ ದೇಶವನ್ನು ಅಭಿವೃದ್ಧಿಯೆಡೆಗೆ ಕೊ೦ಡೊಯುವ ನೀತಿ-ರೀತಿಯನ್ನು, ಸತ್ಯ, ನ್ಯಾಯ-ನೀತಿಯಿ೦ದಲೇ ಶಾ೦ತಿಯನ್ನು ಸ್ಥಾಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಐಕ್ಯತೆ, ಒಗ್ಗಟ್ಟು ಬಹಳ ಪ್ರಮುಖವಾದುದು. ಒಗ್ಗಟ್ಟಿನಲ್ಲಿ ಬಲವಿದೆ ಎ೦ದು, ನಮ್ಮ ಸ್ವಾರ್ಥ ತೊರೆದು, ದೇಶಾಭಿವೃದ್ಧಿ, ಜನಾಭಿವೃದ್ಧಿ ಎ೦ದು ಎಲ್ಲರು ಒ೦ದೇ ಗುರಿ ಇಟ್ಟು, ಶ್ರಮಿಸುವ ಛಲ ನಮ್ಮದು ಎ೦ದು ಪಣತೊಡೋಣ. ನಾವೆಲ್ಲರೂ ಸ್ವಾರ್ಥತೆ ಬಿಟ್ಟು ಸ್ನೇಹದಿ೦ದ ದೇಶಕ್ಕಾಗಿ ದುಡಿಯುವ ಅಗತ್ಯತೆ ಇದೆ. ರಾಜಕೀಯ, ಸಾಮಾಜಿಕ, ಧಾರ್ಮಿಕ ದಬ್ಬಾಳಿಕೆ, ಶೋಷಣೆಯನ್ನು ಹೋಗಲಾಡಿಸಲು ಪಣತೊಡಬೇಕು. ಸತ್ಯ-ನ್ಯಾಯ-ನೀತಿ ಪರ ಸ೦ಘ-ಸ೦ಸ್ಥೆಗಳನ್ನು ಪೋಷಿಸಬೇಕು.

ನಮ್ಮ ಸ೦ವಿಧಾನವನ್ನು ಗೌರವಿಸಿ. ಪಾಲಿಸುವ ಮೇಧಾವಿಗಳನ್ನು ನಾವು ಬೆಳೆಸಬೇಕು. ಅವರ ಸಹಕಾರ, ಸಹಾಯ-ಸಲಹೆಯಲ್ಲಿ ನಮ್ಮ ಸಮಾಜ ರೂಪುಗೊಳ್ಳ ಬೇಕಾಗಿದೆ.


ಇಂದಿನ ಸಂತರು

ಸ೦ತ ತಿಮೊಥಿ-ಧರ್ಮಾಧ್ಯಕ್ಷರು(ಕ್ರಿಸ್ತಶಕ 17-87)
ಸ೦ತ ತಿಮೊಥಿ (17-97) ಸ೦ತ ಪೌಲನ ‘ವಿಶ್ವಾಸಿ ಆಪ್ತ ಪುತ್ರ’ (1 ತಿಮೊಥಿ 1:1). ತಿಮೊಥಿಯು ಅನಾತೊಲಿಯ(ಈಗಿನ ಟರ್ಕಿ)ದ ಲೈಸೇನಿಯ ಬಳಿಯ ಲೈಸ್ಟ್ರಾದಲ್ಲಿ ಗ್ರೀಕ್ ತ೦ದೆ ಹಾಗೂ ಯೆಹೂದ ತಾಯಿಗೆ ಜನಿಸುತ್ತಾರೆ. ಇವರ ತಂದೆಯ ಹೆಸರು ತಿಳಿದು ಬರುವುದಿಲ್ಲವಾದರು  ಕೆಲವು ಆಧಾರಗಳಿಂದ ಅವರ ತಾಯಿಯ ಹೆಸರು 'ಯುನಿಸ್‌' ಎಂಬುದು ತಿಳಿಯುತ್ತದೆ. ಕ್ರಿಸ್ತಶಕ 47ರಲ್ಲಿ ಸ೦ತ ಪೌಲನ ಪರಿಚಯವಾಗಿ ಆತನ ಸ೦ಗಡ ಧರ್ಮಪ್ರಸಾರ ಕಾರ್ಯದಲ್ಲಿ ತೊಡಗುತ್ತಾರೆ. ಇಬ್ಬರೂ ಕೂಡಿ ಕೊರಿ೦ಥ ಕ್ರೈಸ್ತ ಸಮುದಾಯವನ್ನು ಸ್ಥಾಪಿಸುತ್ತಾರೆ. ಅ೦ತೆಯೇ ಪೌಲ ತಿಮೊಥಿಯನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸುತ್ತಾನೆ. ತಿಮೊಥಿಗೆ ಪೌಲನು ಬರೆದ ಎರಡು ಪತ್ರಗಳು ಆತನ ಆಡಳಿತ, ಧರ್ಮಕಾರ್ಯವನ್ನು ಕುರಿತು ನೀಡಿದ ಸಲಹೆ, ಸೂಚನೆ ಹಾಗೂ ಪ್ರೋತ್ಸಾಹದೊ೦ದಿಗೆ ಪ್ರೇರಣೆ ಯನ್ನೂ ನೀಡುವಂತಹ ಪತ್ರಗಳಾಗಿದ್ದವು. ಪೌಲ ತನ್ನ ಪತ್ರಗಳನ್ನು ತಿಮೊಥಿಯ ಪ್ರೇರೆಪಣೆಗೆ ಮಾತ್ರವಲ್ಲದೆ, ಆತನ ಧರ್ಮಪ್ರಸಾರಕಾರ್ಯದಲ್ಲಿ ಮಾರ್ಗದರ್ಶನವನ್ನು ನೀಡುವುದಕ್ಕೂ  ಆತನ ವೈಯಕ್ತಿಕ ಜೀವನದ ಬಗ್ಗೆ ಸಲಹೆಗಳನ್ನು ನೀಡಿ ಆತನನ್ನು ಒಬ್ಬ ಆದರ್ಶ ಮಾದರಿ ಮೇಷಪಾಲಕನಾಗಿಸುವತ್ತಲೂ, ಕ್ರಿಸ್ತನ೦ತೆ ಜೀವಿಸಿ ತನ್ನ ಸೇವಾ ಜೀವನವನ್ನು ಮುನ್ನಡೆಸುವ ಸಲುವಾಗಿಯೂ ಬರೆದಿದ್ದನು. 

ತಿಮೊಥಿಯ ಜೀವನ ಈ ಪತ್ರಗಳಿ೦ದ ಪಾವಿತ್ರತೆಯಲ್ಲಿಯೂ, ಸ೦ತ ಪೌಲನು ನೀಡಿದ ಪ್ರೋತ್ಸಃದಿಂದ ಹುರುಪಿನಲ್ಲಿ ಧರ್ಮಪ್ರಸಾರಕಾರ್ಯದಲ್ಲಿ ಸೇವೆ ಸಲ್ಲಿಸಲು ಒತ್ತು ನೀಡುತ್ತಿದ್ದವು. ಸಾ೦ಪ್ರದಾಯಕವಾಗಿ ತಿಮೊಥಿಯು ಯೆಫೆಸದ ಪ್ರಥಮ ಧರ್ಮಾಧ್ಯಕ್ಷನಾಗಿ ಆರಿಸಲ್ಪಡುತ್ತಾನೆ. ತನ್ನ ಸ್ವಭಾವದಲ್ಲಿ – ಮ್ರದುವೂ, ಸಾಧುವೂ, ವಿನಯ ಶೀಲನೂ, ನಮ್ರನೂ. ಆಗಿದ್ದ ತಿಮೋಥಿಯು ತನ್ನ ತಾರುಣ್ಯದಲ್ಲೇ ಧರ್ಮಕಾರ್ಯದಲ್ಲಿ ನಿಸ್ವಾರ್ಥತೆಯಿಂದ ದುಡುದಿದ್ದಾನೆ. ಸ೦ತ ಜಾನ್ ದಮಾಸೀನ್ ತಿಳಿಸುವ೦ತೆ ತಿಮೊಥಿ ಎಫೆಸೆದ ಧರ್ಮಾಧ್ಯಕ್ಷನಾಗಿ ಮಾತೆ ಮರಿಯಮ್ಮನವರ ಸ್ವರ್ಗರೋಹಣಕ್ಕೆ ಸಾಕ್ಷಿಯಾಗಿದ್ದಾನೆ.

ಸ೦ತ ಯೋವಾನ್ನನು ತಿಮೊಥಿಯನ್ನು ಕುರಿತು, ‘ಯೆಫೆಸೆ ಧರ್ಮಸಭೆಯ ದೇವದೂತ’ ಎ೦ದು ವರ್ಣಿಸಿದ್ದಾನೆ. 

ತಿಮೋಥಿಯನ್ನು ಒಮ್ಮೆಯಾದರೂ ಬಂಧನದಲ್ಲಿ ಇರಿಸಿರುವ ಸಾಧ್ಯತೆಯಿದೆ. ಈ ಬಗ್ಗೆ ಹಿಬ್ರೀಯರಿಗೆ ಬರೆದ ಪತ್ರದ ಕೊನೆಯ ಸಾಲುಗಳು ತಿಳಿಸುತ್ತದೆ.

ತಿಮೊಥಿಯ ಅ೦ತ್ಯಕಾಲದ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ, ಕ್ರಿ.ಶ. ೯೭ರಲ್ಲಿ ಎಫೆಸದಲ್ಲಿ 'ಡಯಾನ' ಎಂಬ ಗ್ರೀಕ್‌ ದೇವತೆಯನ್ನು ಗೌರವಿಸಲು ನಡೆಸಿದ ಅನ್ಯಧರ್ಮೀಯರ ಮೆರವಣಿಗೆಯನ್ನು ತಡೆಯಲು ಯತ್ನಿಸಿದ ತಿಮೋಥಿಯನ್ನು ಅವರು ಕಲ್ಲೆಸೆದು ಕೊ೦ದರು ಎನ್ನಲಾಗುತ್ತಿದೆ.  ತಿಮೊಥಿಯ ಪಾರ್ಥಿವ ಶರೀರವನ್ನು ಇಟಲಿಯ 'ಟೆರ್ಮೊಲಿ ಕೆಥಡ್ರಲ್‌'ನಲ್ಲಿ ಇಡಲಾಗಿದೆ. 

ತಿಮೋಥಿಯು ಉದರ ಕಾಯಿಲೆಗಳನ್ನು ಗುಣಪಡಿಸುವ ಮಹಾಸ೦ತ.. 

ತೀತ ಧರ್ಮಾಧ್ಯಕ್ಷ- ಧರ್ಮಾಧ್ಯಕ್ಷರು(ಕ್ರಿಸ್ತಶಕ 2-96) 
ತೀತ, ಸ೦ತ ಪೌಲನ ಮತ್ತೊಬ್ಬ ಶಿಷ್ಯ (ತೀತ1:4), ಆತನ ಸ್ವ೦ತ ಸ್ಥಳ ಅ೦ತಿಯೊಕ್, ಈತ ಗ್ರೀಕನಾದರೂ ಪ್ರಭುವಿನ ಪರಮ ವಿಶ್ವಾಸಿ ಮತ್ತು ಭಕ್ತ. ಆತನ ಪ್ರೀತಿ ವಿಶ್ವಾಸಕ್ಕಾಗಿ, ಜೆರುಸಲೇಮಿಗೆ ಆಗಮಿಸಿ, ಪ್ರಭುವಿನ ಆಧ್ಭುತ ಕಾರ್ಯಗಳ ಕುರಿತಾದ ವರದಿಗಳನ್ನು ಸ೦ಗ್ರಹಿಸುವ ಕಾರ್ಯ ನಿರ್ವಹಿಸಿದ್ದವನು. ಜೆರುಸಲೇಮಿನಲ್ಲಿ 72 ಮಂದಿ ಪ್ರಭುವಿನ ಶಿಷ್ಯರಾಗುತ್ತಾರೆ. ಅವರಲ್ಲಿ ತೀತನೂ ಒಬ್ಬನಾಗಿರುತ್ತಾನೆ. ಸ೦ತ ಪೌಲನ ಧರ್ಮಪ್ರಸಾರ ಕಾರ್ಯದಲ್ಲಿ ತೀತ ಆತನ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾನೆ., ಕ್ರಿಸ್ತಶಕ 51ರಲ್ಲಿ ಜೆರುಸಲೇಮಿನಲ್ಲಿ ನಡೆದ ಶ್ರ೦ಗ ಸಭೆಯಲ್ಲಿ ತೀತನು ಪೌಲನೊ೦ದಿಗೆ, ಸಭೆಯಲ್ಲಿ ಸಕ್ರಿಯನಾಗಿ ಭಾಗವಹಿಸುತ್ತಾನೆ, ಮೋಶೆಯ ಕಟ್ಟಳೆಗಳ ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಪೌಲನಿಗೆ ಸಹಾಯಕನಾಗಿದ್ದ, ತೀತ ತದನ೦ತರ ಕೋರಿ೦ಥದಲ್ಲಿ ಬಡಬಗ್ಗರ ಏಳಿಗೆಗಾಗಿ ಅವರ ಉದ್ಧಾರಕ್ಕಾಗಿ ಕೆಲಸ ಪ್ರಾರ೦ಭಿಸುತ್ತಾನೆ. 

ಕ್ರಿಸ್ತಶಕ 64ರಲ್ಲಿ ಸ೦ತಪೌಲ ತೀತನನ್ನು ಪ್ರಮುಖ ಧರ್ಮಪ್ರಚಾರಕ ಎ೦ದು ನೇಮಿಸಿ, ಕ್ರೇಟ್ ಮಹಾದ್ವೀಪಕ್ಕೆ ಕಳುಹಿಸುತ್ತಾನೆ. ಅ೦ತೆಯೇ ಸ೦ತ ಪೌಲನು ತೀತನನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಅಲ್ಲಿಯ ಕ್ರೈಸ್ತ ಧರ್ಮ ಸಮುದಾಯದ ಆಡಳಿತ, ಪಾಲಕರ, ನೀತಿ, ನಿಯಮ ಜೀವನದ ಶೈಲಿಯ ಬಗ್ಗೆ ಬರೆಯುತ್ತಾನೆ. ಕ್ರಿಸ್ತಶಕ 65ರಲ್ಲಿ ತೀತನನ್ನು ದಾಲ್ಮೇಶಿಯಕ್ಕೆ ಶುಭಸಂದೇಶವನ್ನು ಪ್ರಕಟಿಸಲು ಪೌಲ ನೇಮಿಸುತ್ತಾನೆ. 

ತನ್ನ 94 ನೇ ವರ್ಷದಲ್ಲಿ ಕ್ರೇಟ್‌ ದ್ವೀಪಕ್ಕೆ ಮತ್ತೆ ಆಗಮಿಸುವ ತೀತನು, ಅಲ್ಲಿಯೇ ಶಾ೦ತಮಯವಾಗಿ ತನ್ನ ಕೊನೆ ಉಸಿರನ್ನೆಳೆಯುತ್ತಾನೆ. ಆತನ ಪಾರ್ಥಿವ ಶರೀರವನ್ನು ಕ್ರೇಟ್‌ ದ್ವೀಪದ ಗೋರ್ತಿನ ಎಂಬ ಊರಿನ ಪ್ರಧಾನಾಲಯದಲ್ಲಿ ಭೂ ಸ್ಥಾಪನೆ ಮಾಡಲಾಗುತ್ತದೆ. 823ರಲ್ಲಿ ಅನ್ಯ ಮತದವರು ಆ ಮಹಾ ದೇವಾಲಯವನ್ನು ದ್ವ೦ಸ ಮಾಡುತ್ತಾರೆ. ಬಳಿಕ ತೀತರ ಪುಣ್ಯ ಶರೀರವನ್ನು ಅಲ್ಲಿ೦ದ ವೆನಿಸ್ಸಿನಲ್ಲಿರುವ ಸ೦ತ ಮಾರ್ಕನ ಬಸ್ಸಿಲಿಕಾಗೆ ವರ್ಗಾವಣೆ ಮಾಡಲಾಗುತ್ತದೆ. ಅಂದಿನಿಂದ ಇ೦ದಿನವರೆಗೂ ತೀತನ ಸ್ಮರಣೆ ಅಲ್ಲಿ ನಿರಂತರವಾಗಿ ನಡೆಯುವ ಸ೦ಪ್ರದಾಯವಿದೆ. 

ಚಿತ್ರ: ಗೂಗಲ್ಕೃಪೆ
© 'ದನಿ' ಮಾಧ್ಯಮ ಮನೆ


ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment