ಫೆಬ್ರವರಿ ೨, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

02 ಫೆಬ್ರವರಿ 2೦19

ಶನಿವಾರ / ಬಿಳಿ / ದೇವಾಲಯದಲ್ಲಿ ಪ್ರಭುವಿನ ಸಮರ್ಪಣೆ
1ನೇ ವಾಚನ - ಮಲಾ 3: 1-4
ಕೀರ್ತನೆ - 24: 7-10
2ನೇ ವಾಚನ - ಹಿಬ್ರಿ 2: 14-18
ಶುಭಸಂದೇಶ - ಲೂಕ 2: 22-40 (22-32)

ವಾಚನಗಳು
ಮೊದಲನೇ  ವಾಚನ


ಮಲಾಕಿಯ ಗ್ರಂಥದಿಂದ ವಾಚನ

1ನೇ ವಾಚನ - ಮಲಾಕಿ 3: 1-4
1ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.” 2“ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನ ದರ್ಶನವನ್ನು ಪಡೆದು ಬದುಕಬಲ್ಲವನು ಯಾರು? 3ಆತನು ಅಕ್ಕಸಾಲಿಗನ ಕುಲುಮೆಯ ಬೆಂಕಿಗೂ ಅಗಸನ ಚೌಳಿಗೂ ಸಮಾನನು. ಬೆಳ್ಳಿಯನ್ನು ಶುದ್ಧೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ಧಗೊಳಿಸುವನು; ಬೆಳ್ಳಿಬಂಗಾರದಂತೆ ಶುದ್ಧೀಕರಿಸುವನು. ಆಗ ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು. 4ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಇದ್ದಂತೆ ಜೂದಾ ಮತ್ತು ಜೆರುಸಲೇಮಿನ ಜನರ ಕಾಣಿಕೆಗಳು ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು.”



ಕೀರ್ತನೆ 

ಕೀರ್ತನೆ 24: 7, 8, 9, 10
ಯಾರಿವನು ಮಹಿಮಾವಂತ ರಾಜಾಧಿರಾಜನು? ಇವನೇ ಪ್ರಭು

ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು 
ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು.

ಯಾರಿವನು ಮಹಿಮಾವಂತ ರಾಜಾಧಿರಾಜನು? 
ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು!

ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು
ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು.

ಯಾರಿವನು ಮಹಿಮಾವಂತ ರಾಜಾಧಿರಾಜನು? 
ಇವನೇ ಸೇನಾಧೀಶ್ವರನು, ಮಹಿಮಾರಾಜನು.



ಎರಡನೆಯ ವಾಚನ

ಹಿಬ್ರೀಯರಿಗೆ ಬರೆದ ಒತ್ರದಿಂದ ವಾಚನ

ಹಿಬ್ರಿ 2: 14-18


ಶುಭಸಂದೇಶ


ಲೂಕನು ಬರೆದ ಶುಭ ಸಂದೇಶದಿಂದ ವಾಚನ

ಲೂಕ 2: 22-40 ಅಥವಾ (22-32)
22ಮೋಶೆಯ ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು. 23ಏಕೆಂದರೆ, 'ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು. 24ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು.

25ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು. 26ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದಲೇ ಆಶ್ವಾಸನೆ ಪಡೆದಿದ್ದನು. 27ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ, 28ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು;

29ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು; 
 ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನು.
30ನೀನಿತ್ತ ಉದ್ದಾರಕನನು ನಾ ಕಂಡೆ ಕಣ್ಣಾರೆ
31ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ.
32ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ;
 ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ.

33ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆ ತಾಯಿಗಳು ಆಶ್ಚರ್ಯಪಟ್ಟರು. 34ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು. 35(ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು,) ಎಂದು ಹೇಳಿದನು.

36ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಫನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು. 37ಅವಳಿಗೆ ಸುಮಾರು ಎಂಭತ್ತನಾಲ್ಕು ವರ್ಷ ವಯಸ್ಸು. ಮಹಾ ದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು. 38ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು. 39ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು. 

40ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನ ಸಂಪೂರ್ಣರೂ ಆದರು. (ಇದಲ್ಲದೆ) ದೈವಾನುಗ್ರಹ ಅವರ ಮೇಲಿತ್ತು. 


ಚಿಂತನೆ

ದೇವಾಲಯದಲ್ಲಿ ಯೇಸುಬಾಲರ ಸಮರ್ಪಣೆ

ವಿಮೋಚನ ಕಾಂಡ 13:2ರ ಪ್ರಕಾರ ಹುಟ್ಟಿದ ಚೊಚ್ಚಲ ಮಗು ದೇವರಿಗೆ ಮೀಸಲಾಗಿತ್ತು. ಯೆಹೂದ್ಯರ ಧಾರ್ಮಿಕ ಆಚರಣೆ, ಧಾರ್ಮಿಕ ಸಂಪ್ರದಾಯದ ಪ್ರಕಾರ ಮಗು ಜನಿಸಿ ನಲ್ವತ್ತು ದಿನಗಳ ನಂತರ ದೇವಾಲಯದಲ್ಲಿ ಅರ್ಪಿಸಬೇಕಿತ್ತು. ಚೊಚ್ಚಲ ಪ್ರಾಣಿಗಳನ್ನು ದಹನಬಲಿಯನ್ನಾಗಿ ಅರ್ಪಿಸುತ್ತಿದ್ದರು. ಮಕ್ಕಳಾದರೆ ದೇವಾಲಯಕ್ಕೆ ಐದು ಶೆಕೆಲ್ ನಾಣ್ಯಗಳನ್ನು ತೆರಬೇಕಿತ್ತು (ಸಂಖ್ಯಾ 18:16) ಹಾಗೂ ಮಕ್ಕಳ ಬದಲಾಗಿ ಕುರಿಯನ್ನು ಅಥವಾ ಒಂದು ಜೋಡಿ ಬೆಳವಹಕ್ಕಿಗಳನ್ನು ನೀಡುತ್ತಿದ್ದರು. ಜೋಸೆಫ್ ಮತ್ತು ಮರಿಯ ಬಡವರಾಗಿದ್ದರಿಂದ ಬೆಳವ ಹಕ್ಕಿಯನ್ನು ಅರ್ಪಿಸಿದರು. ಯೇಸು ದೇವಕುಮಾರ, ತಮ್ಮನ್ನೇ ಅವರು ಸಂಪೂರ್ಣವಾಗಿ ದೇವರ ಚಿತ್ತಕ್ಕೆ ಸಮರ್ಪಿಸಿಕೊಂಡರು. ಹಾಗಿದ್ದರೂ ದೇವಾಲಯದಲ್ಲಿ ಕಾಣಿಕೆಯಾಗಿ ಅರ್ಪಿಸುವ ಅವಶ್ಯಕತೆಯಿತ್ತೇ? ಜೋಸೆಫ್ ಮತ್ತು ಮರಿಯಳು ಧಾರ್ಮಿಕ ಸಂಪ್ರದಾಯ, ಆಚರಣೆಗಳನ್ನು ಗೌರವಿಸುವುದನ್ನು ಇಲ್ಲಿ ಕಾಣಬಹುದು.


ದೇವಾಲಯದಲ್ಲಿ ಯೇಸುಬಾಲರ ಸಮರ್ಪಣೆ

ಯೇಸುಬಾಲರನ್ನು ದೇವಾಲಯದಲ್ಲಿ ಸಮರ್ಪಿಸುವ ಹಬ್ಬವು ಕ್ರಿಸ್ತ ಜಯಂತಿಯ 40ನೇ ದಿನದಲ್ಲಿ ಆಚರಿಸಲ್ಪಡುತ್ತದೆ. (ಮೋಶೆಯ ಕಟ್ಟಳೆಗಳ ಪ್ರಕಾರ ಶುದ್ಧಾಚಾರದನ್ವಯ ಮಗುವಿಗೆ ಜನ್ಮವಿತ್ತ ಮಹಿಳೆಯು 40 ದಿನಗಳವರೆಗೆ ಅಶುದ್ಧಳಾಗಿರುತ್ತಾಳೆ). ಇಲ್ಲಿ ಈ ಹಬ್ಬವು ಯೇಸುವು ಪ್ರಪ್ರಥಮವಾಗಿ ದೇವಾಲಯವನ್ನು ಪ್ರವೇಶಿಸುವುದರ ಪ್ರಾಮುಖ್ಯತೆಯನ್ನು ಸೂಚಿಸುತ್ತದೆಯೇ ವಿನಃ ಮರಿಯಮ್ಮನವರ ಶುದ್ಧೀಕರಣವನ್ನಲ್ಲ. ನಾವೆಲ್ಲರೂ ಸಹ ಯೇಸುಬಾಲರಂತೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಹಾಗೆ ಸಮರ್ಪಿಸಿಕೊಂಡವರ ಬದುಕಲ್ಲಿ ದೈವ ಪ್ರಸನ್ನತೆಯಿರುತ್ತದೆ. ಅನುದಿನದ ಸಮಸ್ಯೆಗಳನ್ನೆದುರಿಸುವ ಧೈರ್ಯವಿರುತ್ತದೆ. ಜೀವನದ ಪ್ರತಿಯೊಂದು ಸಂದರ್ಭದಲ್ಲೂ ದೇವರ ಚಿತ್ತವನ್ನು ನೆರವೇರಿಸಲು ಸಹಾಯವಾಗುತ್ತದೆ. ಬಾಲಯೇಸುವಿನ ದೀನತೆ ನಮ್ಮ ಇಹಲೋಕದ ಬದುಕಿಗೆ ದಾರಿದೀಪವಾಗಲಿ. 

ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment