ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
03 ಫೆಬ್ರವರಿ 2೦19
ಭಾನುವಾರ / ಹಸಿರು / ಸಾಧಾರಣ ಕಾಲದ ನಾಲ್ಕನೇ ಭಾನುವಾರ
1ನೇ ವಾಚನ - ಯೆರೆ 1: 4-5, 17-19
ಕೀರ್ತನೆ - 71: 1-6, 15, 17
2ನೇ ವಾಚನ - 1 ಕೊರಿಂಥ 12: 31 -13: 13 ಅಥವಾ (13: 4-13)
ಶುಭಸಂದೇಶ - ಲೂಕ 4: 21-30
ಸಂತ ಬ್ಲೇಸ್, ಸಂತ ಅನ್ಸ್ಗಾರ್ ಸ್ಮರಣೆ ಇರುವುದಿಲ್ಲ
ವಾಚನಗಳು
ಮೊದಲನೇ ವಾಚನ
ಯೆರೆಮೀಯ ಪ್ರವಾದಿಯ ಗ್ರಂಥದಿಂದ ಮೊದಲ ವಾಚನ
ಯೆರೆಮೀಯ 1: 4-5, 17-19
4ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು: 5“ನಿನ್ನನ್ನು ತಾಯಿಯ ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆಯೇ ನಿನ್ನನ್ನು ನಾನು ತಿಳಿದಿದ್ದೆ; ನೀನು ಉದರದಿಂದ ಹೊರ ಬರುವುದಕ್ಕೆ ಮೊದಲೇ ನಿನ್ನನ್ನು ಪವಿತ್ರೀಕರಿಸಿದ್ದೆ; ನಿನ್ನನ್ನು ರಾಷ್ಟ್ರಗಳಿಗೆ ಪ್ರವಾದಿಯನ್ನಾಗಿ ನೇಮಿಸಿದ್ದೇನೆ.”
17ನೀನು ಎದ್ದು ನಡುಕಟ್ಟಿಕೊ, ನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸು, ಅವರಿಗೆ ಹೆದರಬೇಡ; ಹೆದರಿದರೆ ನಾನೂ ನಿನ್ನನ್ನು ಅವರ ಮುಂದೆ ಹೆದರಿಸುವೆನು. 18ನಾನು ಹೇಳುವುದನ್ನು ಗಮನದಿಂದ ಕೇಳು – ಈ ದಿನ ನಿನ್ನನ್ನು ಜುದೇಯದ ಅರಸರು, ಅಧಿಪತಿಗಳು, ಯಾಜಕರು, ಜನ ಸಾಮಾನ್ಯರು, ಹೀಗೆ ನಾಡಿನವರೆಲ್ಲರನ್ನು ಎದುರಿಸತಕ್ಕವನನ್ನಾಗಿ ಮಾಡಿದ್ದೇನೆ; ಕೋಟೆ ಕೊತ್ತಲಗಳಿಂದ ಸುಸಜ್ಜಿತ ನಗರವನ್ನಾಗಿಯೂ ಕಬ್ಬಿಣದ ಕಂಬವನ್ನಾಗಿಯೂ ತಾಮ್ರದ ಪೌಳಿಗೋಡೆಯನ್ನಾಗಿಯೂ ನಿನ್ನನ್ನು ಸ್ಥಾಪಿಸಿದ್ದೇನೆ. 19ನಿನಗೆ ವಿರುದ್ಧವಾಗಿ ಅವರು ಯುದ್ಧಮಾಡುವರು; ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ನುಡಿ”.
ಕೀರ್ತನೆ
ಕೀರ್ತನೆ 71: 1-2, 3-4, 5-6, 15-17
ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ ನೀತಿಯನು
ಆಶ್ರಯಕೋರಿ ಹೇ ಪ್ರಭು, ನಾ ಬಂದಿರುವೆ
ಆಶಾಭಂಗವಾಗದಿರಲೆಂದು ನಾ ಬೇಡುವೆ
ಸತ್ಯಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಯ್ಯಾ
ನನಗೆ ಕಿವಿಗೊಟ್ಟು ಪ್ರಭು ನನ್ನನುದ್ಧರಿಸಯ್ಯಾ.
ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು
ನೀನೇ ನನ್ನ ದುರ್ಗ, ಕೋಟೆ ನನ್ನನು ರಕ್ಷಿಸಲು
ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯಾ
ಕ್ರೂರ ಕೇಡಿಗರ ವಂಶದಿಂದೆನ್ನನು ತಪ್ಪಿಸಯ್ಯಾ.
ಸ್ವಾಮಿ ದೇವಾ, ನೀನೇ ನನ್ನ ಭರವಸೆ
ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ
ಹುಟ್ಟಿನಿಂದಲೆ ನಾ ನಿನಗಂಟಿ ಕೊಂಡಿರುವೆನಯ್ಯಾ
ಗರ್ಭದಿಂದಲೆ ನೀ ಎನ್ನನು ಕರೆದುತಂದೆಯಯ್ಯಾ.
ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ ನೀತಿಯನು
ವಿವರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು
ದೇವಾ, ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ?
ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ.
ಎರಡನೆಯ ವಾಚನ
ಸಂತ ಪೌಲನು ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರದಿಂದ ವಾಚನ
1 ಕೊರಿಂಥಿಯರಿಗೆ 12:
31. 13: 13
31 ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ:
13:1 ಸುರನರರ ನುಡಿಗಳ ನಾನಾಡಬಲ್ಲೆ ನಾದರೂ ಪರಮ ಪ್ರೀತಿಯೊಂದೆನಗಿಲ್ಲದಿರಲು ನಾ ಕೇವಲ ಗಣಗಣಿಸುವ ಘಂಟೆ, ಝಣಝಣಿಸುವ ಜಾಗಟೆ. 2 ಪ್ರವಾದನೆಯ ವರವೆನಗಿರಬಹುದು ಇರಬಹುದು ನಿಗೂಢ ರಹಸ್ಯಗಳರಿವು ಎಲ್ಲದರ ಪರಿಜ್ಞಾನ, ಪರ್ವತವನೇ ಕದಲಿಪ ವಿಶ್ವಾಸ ಪ್ರೀತಿಯೊಂದಿಲ್ಲದಿರೆ ನಾ ಶೂನ್ಯಸಮಾನ.
3 ನನಗಿರುವುದೆಲ್ಲವನು ನಾ ದಾನಮಾಡೆ ದೇಹವನೆ ಸಜೀವ ದಹಿಸಲು ನೀಡೆ ನಾನಾಗಿರೆ ಪರಮ ಪ್ರೀತಿ ವಿಹೀನ ಏನದು ಜೀವನ, ನನಗೇನದು ಪ್ರಯೋಜನ? 4-6 ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ. ಎಡೆಯಿಲ್ಲ ಅದರಲಿ ಗರ್ವಕೆ, ಮರ್ಮಕೆ, ಮೆರೆತಕೆ, ಮತ್ಸರಕೆ, ಸಿಡುಕಿಗೆ, ಸೊಕ್ಕಿಗೆ, ಸ್ವಾರ್ಥಕೆ, ಸೇಡುಗಳೆಣಿಕೆಗೆ. ನಲಿಯದು ಪ್ರೀತಿ ಅನೀತಿಯಲಿ ನಲಿಯದಿರದದು ಸತ್ಯದ ಜಯದಲಿ. 7 ನಂಬುವುದೆಲ್ಲವನು, ನಿರೀಕ್ಷಿಸುವುದೆಲ್ಲವನು, ಸಹಿಸಿಕೊಳ್ಳುವುದು ಸಮಸ್ತವನು ಪ್ರೀತಿಯದೆಂದೂ ಅರಿಯದು ಸೋಲನು. 8-9 ಅಳಿದುಹೋಗುವುವು ಭವಿಷ್ಯವಾಣಿ ಗತಿಸಿಹೋಗುವುದು ಬಹುಭಾಷಾ ಶಕ್ತಿ ಹೋಗುವುವು ನಶಿಸಿ ಜ್ಞಾನ, ಬುದ್ಧಿ. ಆದರೆ ಅಮರವಾದುದು ಪರಮ ಪ್ರೀತಿ. 10 ಅಪೂರ್ವವಾದುದು ನಮ್ಮಾ ಅರಿವೆಲ್ಲ ಪೂರ್ಣವಾದುದಲ್ಲ ಪ್ರವಾದನವದೆಲ್ಲ; ಪರಿಪೂರ್ಣತೆ ಪ್ರಾಪ್ತವಾಗಲು ಇಲ್ಲವಾಗುವುದು ಅಪೂರ್ಣತೆಯೆಲ್ಲ.
11 ಬಾಲಕ ನಾನಾಗಿರೆ ಆಡಿದೆ, ಮಾತಾಡಿದೆ, ಚಿಂತಿಸಿದೆ, ಸುಖದುಃಖಗಳ ಸವಿದೆ ಬಾಲಕನಂತೆ. ಬಲಿತು ಬೆಳೆದು ಮನುಜನಾದುದೆ ಬಾಲಿಶವಾದುದೆಲ್ಲವನು ಬದಿಗೊತ್ತಿದೆ.
12 ನಾವೀಗ ಕಾಂಬುದು ದರ್ಪಣದ ಬಿಂಬವನು ಮುಸುಕಾಗಿ ತರುವಾಯ ಕಾಂಬೆವು ದೇವರನು ಮುಖಾಮುಖಿಯಾಗಿ. ಈಗಿರುವುದೆನ್ನ ಅರಿವು ತುಂಡುತುಂಡಾಗಿ ನಂತರ ದೇವನೆನ್ನ ಅರಿತಂತೆ ಈ ಮೂರಲಿ ನಾನರಿವೆನು ಅಖಂಡವಾಗಿ 13 ನಿಲ್ಲುವುವು ನಂಬಿಕೆ, ನಿರೀಕ್ಷೆ, ಪ್ರೀತಿ ನೆಲೆಯಾಗಿ; ಈ ಮೂರರಲಿ ಪ್ರೀತಿಯೇ ಪರಮೋನ್ನತವೆಂಬುದ ನೀನರಿ.
ಅಥವಾ
ಸಂತ ಪೌಲನು ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರದಿಂದ ವಾಚನ
1 ಕೊರಿಂಥ 13: 4-13
4-6ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ. ಎಡೆಯಿಲ್ಲ ಅದರಲಿ ಗರ್ವಕೆ, ಮರ್ಮಕೆ, ಮೆರೆತಕೆ, ಮತ್ಸರಕೆ, ಸಿಡುಕಿಗೆ, ಸೊಕ್ಕಿಗೆ, ಸ್ವಾರ್ಥಕೆ, ಸೇಡುಗಳೆಣಿಕೆಗೆ. ನಲಿಯದು ಪ್ರೀತಿ ಅನೀತಿಯಲಿ ನಲಿಯದಿರದದು ಸತ್ಯದ ಜಯದಲಿ.
7ನಂಬುವುದೆಲ್ಲವನು, ನಿರೀಕ್ಷಿಸುವುದೆಲ್ಲವನು, ಸಹಿಸಿಕೊಳ್ಳುವುದು ಸಮಸ್ತವನು ಪ್ರೀತಿಯದೆಂದೂ ಅರಿಯದು ಸೋಲನು.
8-9ಅಳಿದುಹೋಗುವುವು ಭವಿಷ್ಯವಾಣಿ ಗತಿಸಿಹೋಗುವುದು ಬಹುಭಾಷಾ ಶಕ್ತಿ ಹೋಗುವುವು ನಶಿಸಿ ಜ್ಞಾನ, ಬುದ್ಧಿ. ಆದರೆ ಅಮರವಾದುದು ಪರಮ ಪ್ರೀತಿ.
10ಅಪೂರ್ವವಾದುದು ನಮ್ಮಾ ಅರಿವೆಲ್ಲ ಪೂರ್ಣವಾದುದಲ್ಲ ಪ್ರವಾದನವದೆಲ್ಲ; ಪರಿಪೂರ್ಣತೆ ಪ್ರಾಪ್ತವಾಗಲು ಇಲ್ಲವಾಗುವುದು ಅಪೂರ್ಣತೆಯೆಲ್ಲ.
11ಬಾಲಕ ನಾನಾಗಿರೆ ಆಡಿದೆ, ಮಾತಾಡಿದೆ, ಚಿಂತಿಸಿದೆ, ಸುಖದುಃಖಗಳ ಸವಿದೆ ಬಾಲಕನಂತೆ. ಬಲಿತು ಬೆಳೆದು ಮನುಜನಾದುದೆ ಬಾಲಿಶವಾದುದೆಲ್ಲವನು ಬದಿಗೊತ್ತಿದೆ.
12ನಾವೀಗ ಕಾಂಬುದು ದರ್ಪಣದ ಬಿಂಬವನು ಮುಸುಕಾಗಿ ತರುವಾಯ ಕಾಂಬೆವು ದೇವರನು ಮುಖಾಮುಖಿಯಾಗಿ. ಈಗಿರುವುದೆನ್ನ ಅರಿವು ತುಂಡುತುಂಡಾಗಿ ನಂತರ ದೇವನೆನ್ನ ಅರಿತಂತೆ ಈ ಮೂರಲಿ ನಾನರಿವೆನು ಅಖಂಡವಾಗಿ
13ನಿಲ್ಲುವುವು ನಂಬಿಕೆ, ನಿರೀಕ್ಷೆ, ಪ್ರೀತಿ ನೆಲೆಯಾಗಿ; ಈ ಮೂರರಲಿ ಪ್ರೀತಿಯೇ ಪರಮೋನ್ನತ ವೆಂಬುದ ನೀನರಿ.
ಶುಭಸಂದೇಶ
ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ
ಲೂಕ 4: 21-30
ಲೂಕ 4: 21-30
21ಆಗ ಯೇಸು, ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು, ಎಂದು ವಿವರಿಸಲಾರಂಭಿಸಿದರು. 22ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. ಇವನು ಜೋಸೆಫನ ಮಗನಲ್ಲವೇ? ಎಂದು ಮಾತನಾಡಿಕೊಂಡರು. 23ಅನಂತರ ಯೇಸು ಅವರಿಗೆ, 'ವೈದ್ಯನೇ, ಮೊದಲು ನಿನ್ನನ್ನು ನೀನು ಗುಣಪಡಿಸಿಕೊ', ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸುವಿರಿ; ಅಲ್ಲದೆ, 'ಕಫೆರ್ನವುಮಿನಲ್ಲಿ ನೀನು ಎಂಥೆಂಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆ; ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು,' ಎಂದೂ ಹೇಳುವಿರಿ. 24ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. 25ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು. 26ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರು. 27ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮಾನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ, ಎಂದು ಹೇಳಿದರು. 28ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು. 29ಯೇಸುವನ್ನು ಆ ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು.
3೦ಯೇಸುವಾದರೋ, ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.
ಚಿಂತನೆ
ಯೇಸುವಿನ ಬೋಧನೆ
ಯೆಹೂದ್ಯರ
ಪದ್ಧತಿಯಂತೆ
ಯೇಸುವು ಪ್ರಾರ್ಥನಾ ಮಂದಿರದಲ್ಲಿ ದೇವರ ವಾಕ್ಯವನ್ನು ಆಲಿಸಿ ಪ್ರಾರ್ಥಿಸಲು ಹೋಗುತ್ತಾರೆ. ಯೆಹೂದ್ಯರ
ಪದ್ಧತಿಯ
ಪ್ರಕಾರ ಧರ್ಮಶಾಸ್ತ್ರವನ್ನು ಬಲ್ಲವರು ಮಾತ್ರ ಅಲ್ಲಿ ಬೋಧನೆ ಮಾಡಲು ಸಾಧ್ಯವಿತ್ತು. ಯೇಸುವಿನ ಧರ್ಮಶಾಸ್ತ್ರ
ವಿದ್ಯಾಭ್ಯಾಸದ ಬಗ್ಗೆ ಶುಭಸಂದೇಶ ನಮಗೆ ಮಾಹಿತಿ ನೀಡುವುದಿಲ್ಲ. ಬಹುಶಃ ಯೇಸುವಿನ ಬೋಧನೆಗಳ, ಅದ್ಬುತಗಳ
ಮತ್ತು ಜನಪ್ರಿಯತೆಯ ಬಗ್ಗೆ ಕೇಳಿದ್ದ ಪ್ರಾರ್ಥನಾ ಮಂದಿರದ ಅಧಿಕಾರಿ ಯೇಸುವನ್ನು ಕರೆದಿರಬಹುದು. ಯೇಸುವಿನ
ಬೋಧನೆ ಜನರ ಊಹೆಗೂ ನಿರೀಕ್ಷೆಗೂ ಮೀರಿದ್ದರಿಂದ ಅವರು ಆಶ್ಚರ್ಯಚಕಿತರಾಗುತ್ತಾರೆ. ಇದೆಲ್ಲಾ ಇವನಿಗೆ
ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥದ್ದು? ಇವನು ಜೋಸೆಫನ ಮಗನಲ್ಲವೆ? ಎಂದು ಪ್ರಶ್ನಿಸುತ್ತಾ
ಯೇಸುವನ್ನು ತಾತ್ಸಾರದಿಂದ ತಿರಸ್ಕರಿಸುತ್ತಾರೆ. ಯೇಸುವಿನಿಂದ ಸಾಂತ್ವನ, ಸಮಾನತೆ ಮತ್ತು ಪ್ರೀತಿಯನ್ನು
ಪಡೆಯಬೇಕಾಗಿದ್ದ ಜನರು ಆತನನ್ನು ತಿರಸ್ಕರಿಸುತ್ತಾರೆ. ಹಳೆಯ ಒಡಂಬಡಿಕೆಯಲ್ಲೂ ಕೂಡ ಇಸ್ರಯೇಲರು ತಮ್ಮ
ಸ್ವಂತ ಪ್ರವಾದಿಗಳನ್ನು ಹಿಂಸಿಸಿ, ಕೊಲೆಮಾಡುತ್ತಾರೆ. ಕಾರಣ ಆ ಪ್ರವಾದಿಗಳು ಜನರ ತಪ್ಪುಗಳನ್ನು ಎತ್ತಿಹಿಡಿದರು.
ಅನ್ಯಾಯ, ಅಕ್ರಮವನ್ನು, ಕಪಟತನವನ್ನು ನಿಷ್ಠುರವಾಗಿ ಖಂಡಿಸಿದ್ದರಿಂದ ನಾವು ಕೂಡ ಹಲವು ಬಾರಿ ನಮ್ಮ
ಕೆಟ್ಟ ಸ್ವಾಭಿಮಾನ ಮತ್ತು ಸ್ವಾರ್ಥದಿಂದ ಪ್ರಾಮಾಣಿಕ ವ್ಯಕ್ತಿಗಳನ್ನೂ ತಪ್ಪಾಗಿ ತಿಳಿಯುತ್ತೇವೆ.
ವ್ಯಕ್ತಿಯ ಹಿನ್ನೆಲೆ, ಜಾತಿ, ಕುಟುಂಬಕ್ಕಿಂತ ಆತನಾಡುವ ಒಳ್ಳೆಯ ಮಾತಿಗೆ
ನಾವು ಬೆಲೆಕೊಡಬೇಕಿದೆ.
ಇಂದಿನ ಸಂತರು
ಸಂತ ಬ್ಲೇಸ್ (ಕ್ರಿಸ್ತಶಕ ಸು. 316)
ವೃತ್ತಿಯಲ್ಲಿ ವೈದ್ಯರಾಗಿದ್ದ ಸಂತ ಬ್ಲೇಸ್ ‘ಗಂಟಲು ಬೇನೆಗಳಿಂದ ನರಳುವವರ ಪಾಲಕ ಸಂತ’ ಎಂದು ಕರೆಯಲ್ಪಡುತ್ತಾರೆ. ತಮ್ಮ ಹುಟ್ಟೂರು ಟರ್ಕಿ ದೇಶದ ಸೆಬಸ್ಟಿಗೆ ಧರ್ಮಾಧ್ಯಕ್ಷರಾಗಿ ನೇಮಕವಾದ ಇವರು ಅದೇ ಊರಿನಲ್ಲಿ ಕ್ರಿಸ್ತಶಕ 316ರಲ್ಲಿ ಹುತಾತ್ಮರಾದರು. ದಂತಕತೆಗಳ ಪ್ರಕಾರ ಇವರು ವಾನಪ್ರಸ್ಥರಾಗಿ ಏಕಾಂಗಿಯಾಗಿ ಮೊಣಕಾಲೂರಿ ಪ್ರಾರ್ಥಿಸುತ್ತಿದ್ದಾಗ ತೋಳಗಳು, ಸಿಂಹಗಳು ಮತ್ತು ಕರಡಿಗಳು ಇವರ ಸುತ್ತ ಶಾಂತವಾಗಿ ನಿಂತಿರುತ್ತಿದ್ದವು. ಜೀವನದಲ್ಲಿನ ಸರ್ವ ಸುಖವನ್ನು ದೇವರ ಪ್ರೀತಿಗಾಗಿ ತೊರೆದ ಈ ಸಂತರು ಬದುಕಿನ ಪ್ರತೀಕ್ಷಣವೂ ಕ್ರಿಸ್ತರಿಗಾಗಿಯೇ ಬದುಕಿದರು. ಪ್ರಭುಯೇಸು ನಮಗಾಗಿ ಅನುಭವಿಸಿದ ಕ್ರೂರ ಯಾತನೆ ಮತ್ತು ಮರಣವನ್ನು ಧ್ಯಾನಿಸಿದ ಸಂತ ಬ್ಲೇಸ್ ತಮ್ಮ ನಡೆ ನುಡಿಯಲ್ಲಿ ಪ್ರತಿಬಿಂಬಿಸಿದ್ದು ಯೇಸುಪ್ರಭುವನ್ನೇ. ಕ್ರಿಸ್ತರಂತಾಗುವುದೇ ನಮ್ಮೆಲ್ಲರ ಬದುಕಿನ ಧ್ಯೇಯವಲ್ಲವೇ? ಆ ಧ್ಯೆಯಕ್ಕನುಗುಣವಾಗಿ ಬದುಕಿದ ಈ ಸಂತರ ಆದರ್ಶವನ್ನು ಅನುದಿನವೂ ಅನುಸರಿಸೋಣ.
ಚಿತ್ರ: ಗೂಗಲ್ ಕೃಪೆ


No comments:
Post a Comment