ಫೆಬ್ರವರಿ ೫, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

05 ಫೆಬ್ರವರಿ 2೦19


ಮಂಗಳವಾರ / ಕೆಂಪು /  ಸಂತ ಅಗತ(ಕನ್ಯೆ ಮತ್ತು ರ.ಸಾ) (ಸ್ಮರಣೆ)
1ನೇ ವಾಚನ - ಹಿಬ್ರಿ 12: 1-4
ಕೀರ್ತನೆ - 22: 25-27, 29-31
ಶುಭಸಂದೇಶ - ಮಾರ್ಕ 5: 21-43

ವಾಚನಗಳು
ಮೊದಲನೇ  ವಾಚನ 


ಹಿಬ್ರೀಯರಿಗೆ ಬರೆದ ಪತ್ರದಿಂದ ವಾಚನ

ಹಿಬ್ರಿ 12: 1-4
1ಆದಕಾರಣ ಇಷ್ಟುಮಂದಿ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಆವರಿಸಿರುವಾಗ, ನಮಗೆ ಅಡ್ಡಿಯಾಗಬಲ್ಲ ಹೊರೆಯನ್ನೂ ಅಂಟಿಕೊಳ್ಳುವ ಪಾಪವನ್ನೂ ತೆಗೆದು ಹಾಕಿ, ನಮಗಾಗಿ ನೇಮಿಸಿರುವ ಓಟದ ಸ್ಪರ್ಧೆಯಲ್ಲಿ ನಾವು ಸ್ಥಿರಚಿತ್ತದಿಂದ ಭಾಗವಹಿಸೋಣ. 2ವಿಶ್ವಾಸವನ್ನು ಹುಟ್ಟಿಸುವ ಮತ್ತು ಅದನ್ನು ಪರಿಪೂರ್ಣಗೊಳಿಸುವ ಯೇಸುಸ್ವಾಮಿಯನ್ನು ಗುರಿಯಾಗಿಟ್ಟು ಓಡೋಣ. ಅವರು ತಮ್ಮ ಮುಂದಿಡಲಾದ ಸೌಭಾಗ್ಯವನ್ನು ಗಳಿಸಲು ನಿಂದೆ ಅವಮಾನಗಳನ್ನು ಲೆಕ್ಕಿಸದೆ ಶಿಲುಬೆಯ ಮರಣವನ್ನು ಸಹಿಸಿಕೊಂಡರು. ಈಗಲಾದರೋ ದೇವರ ಸಿಂಹಾಸನದ ಬಲಗಡೆ ಆಸೀನರಾಗಿದ್ದಾರೆ. 3ಪಾಪಿಗಳಿಂದ ತಮಗುಂಟಾದ ಕಠಿಣ ವಿರೋಧವನ್ನು ಯೇಸುಸ್ವಾಮಿ ಹೇಗೆ ಸಹಿಸಿಕೊಂಡರೆಂಬುದನ್ನು ಮನಸ್ಸಿನಲ್ಲಿಡಿ. ಆಗ ನೀವು ಬೇಸತ್ತು ಎದೆಗುಂದಲಾರಿರಿ. 4ಪಾಪದ ವಿರುದ್ಧ ನೀವು ಕೈಗೊಂಡ ಹೋರಾಟದಲ್ಲಿ ನಿಮ್ಮ ರಕ್ತವನ್ನೇ ಸುರಿಸುವ ಸ್ಥಿತಿಗೆ ನೀವಿನ್ನೂ ಬಂದಿಲ್ಲ.




ಕೀರ್ತನೆ 


ಕೀರ್ತನೆ 22:25-26, 27&29, 30-31
ಸಾಷ್ಟಾಂಗವೆರಗುವುವು ಧರೆಯ ಸರ್ವ ಜನಾಂಗಗಳು ಆತನಿಗೆ

ಭಕ್ತಜನರ ಮುಂದೆ ನಾ ಸಲ್ಲಿಸುವೆ, ನಿನಗೆ ಹೊತ್ತ ಹರಕೆ
ಹರಿವುದು ಸ್ತುತಿ ಭಕ್ತರ ಬಾಯಿಂದ; ತುಂಬುವುದು ದಲಿತರುದರ
ಇರಲಿ ಚೈತನ್ಯಭರಿತ ನಿಮ್ಮಂತರಂಗವು ನಿರಂತರ.

ಎಚ್ಚೆತ್ತು ಅಭಿಮುಖವಾಗುವುದು ಜಗದಾದ್ಯಂತ ಪ್ರಭುಗೆ 
ಸಾಷ್ಟಾಂಗವೆರಗುವುವು ಧರೆಯ ಸರ್ವ ಜನಾಂಗಗಳು ಆತನಿಗೆ
ತಲೆಬಾಗುವರಾತನಿಗೆ ಧರೆಯ ಗರ್ವಿಗಳೆಲ್ಲರು
ಅಡ್ಡ ಬೀಳುವರವನಿಗೆ ಮತ್ರ್ಯ ಮಾನವರೆಲ್ಲರು.

ವಂದಿಪುದು ಪ್ರಭುವನು ಮುಂದಿನ ಪೀಳಿಗೆ
ಸಾರುವುದಾತನ ವದಂತಿಯನು ಜನರಿಗೆ
ಸಾರುವರು ಮುಂದಿನ ಜನತೆಗುದ್ಧಾರವನು

ಅರುಹುವರು ಆತನೆಸಗಿದ ಮಹತ್ಕಾರ್ಯವನು.


ಶುಭಸಂದೇಶ


ಸಂತ ಮಾರ್ಕನು ಬರೆದ  ಶುಭಸಂದೇಶದಿಂದ ವಾಚನ

ಮಾರ್ಕ 5: 21-43
21ಯೇಸುಸ್ವಾಮಿ ದೋಣಿಯನ್ನೇರಿ ಸರೋವರದ ಈಚೆದಡಕ್ಕೆ ಮರಳಿದರು. ತೀರವನ್ನು ಸೇರಿದೊಡನೆ ಜನರು ದೊಡ್ಡಗುಂಪಾಗಿ ಅವರ ಸುತ್ತಲೂ ನೆರೆದರು. 22ಪ್ರಾರ್ಥನಾಮಂದಿರದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾಯೀರ. 23ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣಹೊಂದಿ ಬದುಕುವಂತೆ ಅನುಗ್ರಹಿಸಬೇಕು, ಎಂದು ಬಹಳವಾಗಿ ವಿನಂತಿಸಿದನು. 24ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು. 

25ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು. 26ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯ ಮಾಡಿದ್ದರೂ ಅವಳ ರೋಗ ಮಾತ್ರ ಉಲ್ಬಣ ಆಗುತ್ತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. 27ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು. 28ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು. 29ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತುಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದಿದ್ದೇನೆಂದು ಆಕೆಗೆ ಅರಿವಾಯಿತು. 

3೦ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತ ತಮ್ಮ ದೃಷ್ಟಿಯನ್ನು ಹರಿಸಿ, ನನ್ನ ಉಡುಪನ್ನು ಮುಟ್ಟಿದವರಾರು? ಎಂದು ಪ್ರಶ್ನಿಸಿದರು. 31ಅದಕ್ಕೆ ಶಿಷ್ಯರು, ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ 'ನನ್ನನ್ನು ಮುಟ್ಟಿದವರು ಯಾರು?' ಎಂದು ಕೇಳುತ್ತೀರಲ್ಲಾ ಎಂದರು. 32ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು. 33ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು. 

34ಯೇಸು ಆಕೆಗೆ, ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು, ಎಂದು ಅನುಗ್ರಹಿಸಿದರು. 35ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ ಯಾಯೀರನ ಮನೆಯಿಂದ ಕೆಲವರು ಬಂದು ಅವನಿಗೆ, ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುತ್ತೀರಿ? ಎಂದರು. 36ಅವರು ಹೇಳಿದ ಮಾತುಗಳನ್ನು ಯೇಸು ಕೇಳಿಯೂ ಅವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಯಾಯೀರನಿಗೆ, ಭಯಪಡಬೇಡ, ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು, ಎಂದರು. 

37ಅನಂತರ ಪೇತ್ರ, ಯಕೋಬ ಹಾಗೂ ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯೀರನ ಮನೆಯನ್ನು ತಲುಪಿದರು. 38ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು. 39ಯೇಸು ಮನೆಯೊಳಕ್ಕೆ ಹೋಗಿ, ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ, ಎಂದರು. 40ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು. 41ಆಕೆಯ ಕೈಯನ್ನು ಹಿಡಿದು, ತಲಿಥಾಕೂಮ್ ಎಂದರು. ('ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು' ಎಂಬುದು ಆ ಮಾತಿನ ಅರ್ಥ). 
42ಅವಳು ತಟ್ಟನೆ ಎದ್ದು ನಡೆದಾಡತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು. 

43ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರೂ ಕೊಡುವಂತೆ ತಿಳಿಸಿದರು. 

ಚಿಂತನೆ

ಸಂತ ಆಗತ


ಇಟಲಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಸಂತ ಗತ, ಕ್ರಿ.ಶ. 251ರಲ್ಲಿ ಸಿಸಿಲಿಯ ದೇಶ ದೊರೆಯ ಕ್ರೈಸ್ತ ದಮನದಲ್ಲಿ ಹುತಾತ್ಮಳಾಗುತ್ತಾಳೆ. ಆಸ್ಥಾನದ ದೊರೆಯಾಗಿದ್ದ ಕ್ವಿಂಬೇನ್ ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಅವಳನ್ನು ವಿವಾಹವಾಗಲು ಬಯಸಿರುತ್ತಾನೆ. ಆಗತಳಿಗೆ ಮದುವೆಗಿಂತ ಕ್ರಿಸ್ತನ ಸೇವೆ ಮಾಡುವುದು ಮುಖ್ಯವೆನಿಸುತ್ತದೆ. ಹಾಗಾಗಿ ಅತನೊಂದಿಗೆ ಮದುವೆಗೆ ಒಪ್ಪದಿದ್ದಾಗ, ಕ್ರೈಸ್ತ ವಿರೋಧಿ ಕಾನೂನು ಪ್ರಯೋಗಿಸಿ ಆಕೆಯನ್ನು ಹಿಂಸಿಸಲಾಗುತ್ತದೆ. ಸೌಂದರ್ಯವತಿಯಾದ ಆಗತಳನ್ನು ವೇಶ್ಯಾಗೃಹಕ್ಕೆ ತಳ್ಳುವಂತೆ ರಾಜ ಆದೇಶಿಸುತ್ತಾನೆ. ಅಲ್ಲಿ ಆಕೆಯ ಮೇಲೆ ಲೈಂಗಿಕ ಆಕ್ರಮಣವಾಗುತ್ತದೆ. ಕಬ್ಬಿಣದ ಕೊಕ್ಕೆಗಳಿಂದ ಆಕೆಯ ದೇಹವನ್ನು ಮೀಟುತ್ತಾರೆ, ಲೋಹದ ಸಲಾಕೆಯಿಂದ ಬರೆ ಹಾಕುತ್ತಾರೆ. ಕೊನೆಗೆ ಅವಳನ್ನು ಬೆತ್ತಲೆಯಾಗಿಸಿ ಉರಿಯುವ ಕಲ್ಲಿದ್ದಲಿನ ಮೇಲೆ ಎಳೆದಾಡುತ್ತಾರೆ. ಈ ಎಲ್ಲಾ ಹಿಂಸೆ, ಶೋಷಣೆಯ ನಡುವೆಯೂ `ಯೇಸುವೇ ನನ್ನ ಬಾಳಿಗೆ ಬೆಳಕು ಮತ್ತು ಮುಕ್ತಿ' ಎಂದು ಸಾರುತ್ತಾಳೆ.

ಇಂದಿನ ಸಂತರು

ಸಂತ ಅಗಾಥಾ(231-251)
ಇವರು ಸಿಸಿಲಿಯಾದ ಕತಾನಿಯಾದಲ್ಲಿ ಜನಿಸಿದರು. ಆಸ್ಥಾನದ ಕ್ವಿಂಬೇನ್ ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಅನೇಕ ರೀತಿಯಲ್ಲಿ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟರೂ ’ಯೇಸುವೇ ನನ್ನ ಬಾಳಿಗೆ ಬೆಳಕು ಮತ್ತು ಮುಕ್ತಿ’ ಎಂದು ಸಾರುತ್ತಾ ಜೀವಿಸುತ್ತಾಳೆ. ಇದರಿಂದ ವೈರಿಗಳ ಕೋಪಕ್ಕೆ ಒಳಗಾಗಿ ಕಬ್ಬಿಣದ ಕೊಕ್ಕೆಯಿಂದ ಆಕೆಯ ದೇಹವನ್ನು ಮೀಟಿ ಸೀಳಲಾಗುತ್ತದೆ. ಅಂತಿಮವಾಗಿ ಆಕೆಯನ್ನು ಬೆತ್ತಲಾಗಿಸಿ ಉರಿಯುವ ಕಲ್ಲಿದ್ದಲಿನ ಮೇಲೆ ಎಳೆದಾಡಿದಾಗ ಆಕೆಯ ಪ್ರಾಣಪಕ್ಷಿ ಹಾರಿಹೋಯಿತು. ಪ್ರಭುಯೇಸುವಿನಲ್ಲಿ ಆಕೆಗಿದ್ದ ಅಪರಿಮಿತ ವಿಶ್ವಾಸ ಮತ್ತು ಅನುಪಮ ಪ್ರೀತಿಗಾಗಿ ಸಂತ ಆಗತಾ ಯಾವ ತ್ಯಾಗಕ್ಕೂ ಕೂಡಾ ಸಿದ್ಧರಿದ್ದರು. ’ನಾನು ಪ್ರಭುವಿಗಾಗಿಯೇ ಬದುಕುತ್ತೇನೆ’ ಎಂದು ಪಣ ತೊಡುವ ಪ್ರತಿಯೊಬ್ಬ ವ್ಯಕ್ತಿಗೆ ಅದೆಂದೂ ಸುಲಭವಾಗುವುದಿಲ್ಲ. ಆದರೂ ಅದೆಲ್ಲವನ್ನೂ ದಿಟ್ಟತನದಿಂದ ಎದುರಿಸುವಂಥವರು ವಿಶ್ವಾಸದ ಓಟದಲ್ಲಿ ಜಯಶೀಲರಾಗುತ್ತಾರೆ, ರಕ್ತಸಾಕ್ಷಿಯ ಕಿರೀಟವನ್ನು ಗೆದ್ದುಬಿಡುತ್ತಾರೆ. ಮಾನವಕುಲದ ಉದ್ಧಾರಕ್ಕಾಗಿ ಶಿಲುಬೆಯ ಕ್ರೂರ ಯಾತನೆಯನ್ನು ಅನುಭವಿಸಿದ ಪ್ರಭುಯೇಸು ಸಂತ ಆಗತಾರಿಗೆ ಸಾಂತ್ವನವಾದರು. ತಮ್ಮ ಯಾತನೆಯ ಕಿಂಚಿತ್ತನ್ನು ಅನುಭವಿಸಿದ ಸಂತ ಆಗತಾರ ಬದುಕು ಪಾವನವಾಯಿತು.


ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿಡಿ

No comments:

Post a Comment