ಫೆಬ್ರವರಿ ೯, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

09 ಫೆಬ್ರವರಿ 2೦19


ಶನಿವಾರ / ಹಸಿರು / ಸಾಧಾರಣ ಕಾಲದ ನಾಲ್ಕನೇ ವಾರ
1ನೇ ವಾಚನ - ಹಿಬ್ರಿ 13: 15-17, 20-21
ಕೀರ್ತನೆ - 23: 1-4, 5, 6
ಶುಭಸಂದೇಶ - ಮಾರ್ಕ 6: 30-34

ವಾಚನಗಳು
ಮೊದಲನೆಯ ವಾಚನ


ಹಿಬ್ರೀಯರಿಗೆ ಬರೆದ ಪತ್ರದಿಂದ ವಾಚನ

ಹಿಬ್ರಿ 13: 15-17, 20-21
15ಆದ್ದರಿಂದ, ಪ್ರಭುವಾದ ಯೇಸುಕ್ರಿಸ್ತರನ್ನು ಮುಕ್ತ ಕಂಠದಿಂದ ಗುಣಗಾನ ಮಾಡುತ್ತಾ ಅವರ ಮುಖಾಂತರ ಸ್ತುತಿಯೆಂಬ ಬಲಿಯನ್ನು ದೇವರಿಗೆ ಸತತವಾಗಿ ಸಮರ್ಪಿಸೋಣ. 16ಇದಲ್ಲದೆ, ಪರೋಪಕಾರ ಮಾಡುವುದನ್ನೂ ನಿಮಗಿರುವುದನ್ನು ಪರರೊಡನೆ ಹಂಚಿಕೊಳ್ಳುವುದನ್ನೂ ನಿಲ್ಲಿಸಬೇಡಿ. ಇವು ಕೂಡ ದೇವರಿಗೆ ಮೆಚ್ಚುಗೆಯಾದ ಬಲಿಯರ್ಪಣೆಗಳೇ. 17ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ. ಅವರ ಆಜ್ಞೆಗಳನ್ನು ಪಾಲಿಸಿರಿ. ಅವರು ನಿಮ್ಮ ಆತ್ಮಗಳ ಪಾಲಕರು; ದೇವರಿಗೆ ಲೆಕ್ಕ ಒಪ್ಪಿಸಬೇಕಾದವರು. ಈ ಸೇವೆಯನ್ನು ಅವರು ಸಂತೋಷದಿಂದ ಮಾಡುವಂತೆ ನೀವು ನಡೆದುಕೊಳ್ಳಿ. ಅವರು ಮನನೊಂದುಕೊಂಡು ಮಾಡುವ ಸೇವೆಯಿಂದ ನಿಮಗೆ ಒಳಿತಾಗದು.

20ಸಭೆಯೆಂಬ ಕುರಿಮಂದೆಗೆ ಮಹಾಪಾಲಕರಾದ ಯೇಸುಸ್ವಾಮಿ ಶಾಶ್ವತ ಒಡಂಬಡಿಕೆಯನ್ನು ನಿಶ್ಚಯಪಡಿಸುವುದಕ್ಕಾಗಿ ತಮ್ಮ ರಕ್ತವನ್ನು ಸುರಿಸಿದರು. ಶಾಂತಿದಾತರಾದ ದೇವರು ನಮ್ಮ ಪ್ರಭುವನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದರು. 21ನೀವು ಇಂಥ ದೇವರ ಚಿತ್ತವನ್ನು ನೆರವೇರಿಸಲು ನಿಮಗೆ ಬೇಕಾದ ಎಲ್ಲಾ ವರದಾನಗಳನ್ನು ಅವರು ನಿಮಗೆ ಅನುಗ್ರಹಿಸಲಿ. ಸ್ವಾಮಿ ಯೇಸುಕ್ರಿಸ್ತರ ಮುಖಾಂತರ ನಾವು ಅವರಿಗೆ ಪ್ರಿಯರಾದವರಾಗಿ ಬಾಳುವಂತಾಗಲಿ. ಯೇಸುಕ್ರಿಸ್ತರಿಗೆ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ ! ಆಮೆನ್.



ಕೀರ್ತನೆ 

ಕೀರ್ತನೆ 23: 1-3, 3-4, 5, 6
ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?

ಪ್ರಭು ಕುರಿಗಾಹಿಯಾಗಿರಲು ನನಗೆ
ಕುಂದುಕೊರತೆಗಳೆಲ್ಲಿಯವು ಎನಗೆ?
ಹಸಿರುಗಾವಲುಗಳಲೆನ್ನ ತಂಗಿಸುವನು
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು
ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ.

ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ
ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ
ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ.

ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ 
ನನಗೌತಣವನು ಹಚ್ಚುವೆ ತಲೆಗೆ ತೈಲವನು,
ತುಂಬಿತುಳುಕಿಸುವೆ ಪಾನಪಾತ್ರೆಯನು.


ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ 
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ.


ಶುಭಸಂದೇಶ


ಸಂತ ಮಾರ್ಕನು ಬರೆದ  ಶುಭಸಂದೇಶದಿಂದ ವಾಚನ

ಮಾರ್ಕ 6: 3೦-34
30ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗೂ ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದರು. 31ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ. 32ಆದುದರಿಂದ ಯೇಸು, ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ, ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು. 33ಆದರೆ ಅವರು ಹೋಗುತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು ಸೇರಿದರು. 34ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು. 

ಚಿಂತನೆ
 ತಂದೆಯೊಂದಿಗೆ ಸಂಭಾಷಣೆ

ಶಿಷ್ಯರು ಯೇಸುವಿನ ಅಪ್ಪಣೆಯಂತೆ ಶುಭಸಂದೇಶವನ್ನು ಸಾರಲು ಹೊರಟಿದ್ದರು. ಅವರು ಮರಳಿ ಬಂದು ಯೇಸುವಿಗೆ ತಮ್ಮ ಕಾರ್ಯಕಲಾಪಗಳ ವರದಿ ಒಪ್ಪಿಸುತ್ತಾರೆ. ಶಿಷ್ಯರ ಬಳಲಿಕೆಯನ್ನು ಅರಿತಿದ್ದ ಯೇಸು ಅವರನ್ನು ನಿರ್ಜನ ಪ್ರದೇಶಕ್ಕೆ ವಿಶ್ರಾಂತಿಗಾಗಿ ಕರೆದೊಯ್ಯುತ್ತಾರೆ. ಯೇಸು ಅನೇಕ ಬಾರಿ ನಿರ್ಜನ ಪ್ರದೇಶಕ್ಕೆ ಪ್ರಾರ್ಥನೆ ಮಾಡಲು ಹೋಗುವುದನ್ನು ಶುಭಸಂದೇಶದಲ್ಲಿ ಕಾಣುತ್ತೇವೆ. ನಿರ್ಜನ ಪ್ರದೇಶದಲ್ಲಿ ಯೇಸು ತಂದೆಯೊಂದಿಗೆ ಸಂಭಾಷಿಸುತ್ತಿದ್ದರು. ಇಂದು ದೇವರ ಅನುಭವಕ್ಕೆ, ಕೆಲವೊಮ್ಮೆ ಮೌನಕ್ಕೆ, ಏಕಾಂತಕ್ಕೆ ಶರಣಾಗಬೇಕಿದೆ. ಆದರೆ ನಮ್ಮದು ಸದ್ದು ಗದ್ದಲದ ಜಗತ್ತು. ಇಂದು ಗಟ್ಟಿಯಾಗಿ ಅರಚುವವರಿಗೆ ಮಾತ್ರ ಬೆಲೆಯಿದ್ದಂತೆ ಕಾಣುತ್ತದೆ. ಪ್ರಾರ್ಥನಾ ಕೂಟಗಳು ಕೂಡ ಇಂದು ಸದ್ದು, ಗದ್ದಲ, ಅಬ್ಬರದ ಸಂಗೀತದಲ್ಲಿ ಮುಳುಗಿ ಹೋಗಿದೆ. ದೇವರ ಸ್ವರ ಆಲಿಸಲು ನಮಗೆ ಏಕಾಂತದ ಅವಶ್ಯಕತೆಯಿದೆ.

ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment