01 ಮಾರ್ಚ್ 2019

01 ಮಾರ್ಚ್ 2019
ಶುಕ್ರವಾರ, ಸಂತ ಡೇವಿಡ್
ಸಾಧಾರಣ ಕಾಲದ ಏಳನೇ ವಾರ

ಮೊದಲವಾಚನ 
ಸಿರಾಖ 6: 5-17
5ಸವಿನುಡಿ ಹೆಚ್ಚಿಸುವುದು ಸ್ನೇಹಿತರನ್ನು ಸರಳ ನುಡಿ ಹೆಚ್ಚಿಸುವುದು ಸತ್ಕಾರವನ್ನು6ಸಮಾಧಾನದಿಂದ ವರ್ತಿಸು ಹಲವರೊಡನೆ ಸಲಹೆಗಾರ ಮಾತ್ರ ನಿನಗಿರಲಿ ಸಾವಿರದಲ್ಲೊಬ್ಬನೇ7ಸ್ನೇಹಬೆಳೆಸುವ ಮುನ್ನ ವ್ಯಕ್ತಿಯನ್ನು ಪರೀಕ್ಷಿಸು ಯಾರನ್ನೂ ಕೂಡಲೇ ನಂಬಿಬಿಡಲು ಅವಸರಪಡದಿರು8ಸ್ನೇಹಬೆಳೆಸುವ ಗೆಳೆಯರಿದ್ದಾರೆ ಸಮಯ ಸಾಧಕರಾಗಿ ಕೈಕೊಡುವರವರು ನಿನಗೆ ಕಷ್ಟಕಾಲದಲಿ9ಇಂದು ಗೆಳೆಯ, ನಾಳೆ ಶತ್ರು ಆಗುವವನೂ ಇದ್ದಾನೆ ಇಂಥವನು ನಿನ್ನೊಡನೆ ಜಗಳವಾಡಿ ನಿನ್ನ ಮಾನಕಳೆಯುತ್ತಾನೆ10ಸಹವಾಸ ಮಾಡುವವರಿದ್ದಾರೆ ನಿನ್ನ ತಿಂಡಿ ತೀರ್ಥಕ್ಕಾಗಿ ನಿನ್ನ ಸಂಗಡ ಇರುವುದಿಲ್ಲ ಕಷ್ಟದಲ್ಲಿ ಸಹಾಯ ಮಾಡಲಿಕ್ಕಾಗಿ11ನಿನ್ನ ಸುಖದ ದಿನಗಳಲ್ಲಿ ಪ್ರಾಣಸ್ನೇಹಿತನಂತಿರುವನು ನಿನ್ನ ಆಳುಹೋಳುಗಳನ್ನು ಬೆದರಿಸಿ ಕೆಲಸಮಾಡಿಸಿಕೊಳ್ಳುವನು 12ನಿನ್ನ ದುಃಖದ ದಿನಗಳಲ್ಲಿ ವಿರೋಧಿಯಾಗುವನು ತನ್ನ ಮುಖವನ್ನು ನಿನ್ನಿಂದ ಮರೆಸಿಕೊಳ್ಳುವನು13ನಿನ್ನ ವೈರಿಗಳಿಂದ ಆದಷ್ಟು ದೂರವಿರು ನಿನ್ನ ಸಂಗಡಿಗರ ವಿಷಯದಲ್ಲಿ ಎಚ್ಚರಿಕೆಯಿಂದಿರು14ನಂಬಿಗಸ್ಥ ಗೆಳೆಯ, ಸುರಕ್ಷಿತ ಆಶ್ರಯಗಿರಿಯಂತೆ ಅಂಥವನು ಸಿಕ್ಕುವುದು ಸಂಪತ್ತಿನ ನಿಧಿ ಸಿಕ್ಕಿದಂತೆ15ಯಾವುದೂ ಸಾಟಿಯಿಲ್ಲ ನಂಬಿಕಸ್ಥ ಗೆಳೆಯನಿಗೆ ಅಷ್ಟಿಷ್ಟಲ್ಲ ಅಂಥವನ ಶ್ರೇಷ್ಠತೆ16ನಂಬಿಕಸ್ಥ ಗೆಳೆಯ ಸಂಜೀವಿನಿಯಂತೆ ಸಿಗುವನವನು ದೇವರಿಗೆ ಭಯಪಡುವವನಿಗೆ17ದೇವಭಕ್ತನು ಸ್ನೇಹಿತನನ್ನು ಆಪ್ತನನ್ನಾಗಿಸಿ ಕೊಳ್ಳುವನು, ಏಕೆಂದರೆ ತನ್ನಂತೆಯೇ ಅವನನ್ನು ಕಂಡು ಭಾವಿಸುವನು.

ಕೀರ್ತನೆ 119: 12, 16, 18, 27, 34, 35
ಎನ್ನ ನಡೆಸು ಪ್ರಭು, ನಿನ್ನ ಆಜ್ಞಾಮಾರ್ಗದಲಿ

12: ಸ್ತುತಿ ಸಲ್ಲಲಿ ಪ್ರಭು ನಿನಗೆ ನಿನ್ನ ಆಜ್ಞೆಗಳನು ಕಲಿಸು ಎನಗೆ
16: ನಿನ್ನ ನಿಯಮಗಳ ನೆನೆದು ನಲಿವೆನಯ್ಯಾ ನಿನ್ನ ವಾಕ್ಯವನು ಮರೆಯಲಾರೆನಯ್ಯಾ
18: ನಿನ್ನ ಶಾಸ್ತ್ರದ ಮಹಿಮೆಯನು ಅರಿಯುವಂತೆ ನನ್ನ ಕಣ್ಗಳಿಂದ ನೀ ತೆಗೆದುಬಿಡು ಅಂಧತೆ
27: ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ
34: ನೀಡೆನಗೆ ನಿನ್ನ ಶಾಸ್ತ್ರದ ಅರಿವನು ಪೂರ್ಣಮನದಿಂದ ಆಚರಿಸುವೆನದನು
35: ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲಿ ಪಡೆಯುವೆ ಹರ್ಷಾನಂದವನು ಅದರಲಿ

ಶುಭಸಂದೇಶ: 
ಮಾರ್ಕ 10: 1-12
1ಅಲ್ಲಿಂದ ಯೇಸುಸ್ವಾಮಿ ಜೋರ್ಡನ್ ನದಿಯ ಆಚೆಕಡೆಯಿದ್ದ ಜುದೇಯ ಪ್ರಾಂತ್ಯಕ್ಕೆ ಬಂದರು. ಅಲ್ಲಿಯೂ ಜನರು ಗುಂಪು ಗುಂಪಾಗಿ ಅವರ ಬಳಿಗೆ ಬಂದರು. ಯೇಸು ಅವರಿಗೂ ಉಪದೇಶ ಮಾಡಿದರು. 2ಫರಿಸಾಯರಲ್ಲಿ ಕೆಲವರು, ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೇ? ಎಂದು ಕೇಳಿದರು. 3ಯೇಸು, ಈ ವಿಷಯವಾಗಿ ಮೋಶೆ ನಿಮಗೆ ಏನೆಂದು ವಿಧಿಸಿದ್ದಾನೆ? ಎಂದು ಅವರನ್ನೇ ಪುನಃ ಪ್ರಶ್ನಿಸಿದರು. 4ಅದಕ್ಕೆ ಅವರು, ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಲು ಮೋಶೆ ಅನುಮತಿ ಇತ್ತಿದಾನೆ, ಎಂದರು.

5ಆಗ ಯೇಸು, ನಿಮ್ಮ ಹೃದಯ ಕಲ್ಲಾಗಿ ಇದ್ದುದರಿಂದಲೇ ಮೋಶೆ ಈ ನಿಯಮವನ್ನು ಬರೆದಿಟ್ಟನು. 6ಆದರೆ ಸೃಷ್ಟಿಯ ಆರಂಭದಿಂದಲೇ 'ದೇವರು ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದ್ದಾರೆ. 7ಈ ಕಾರಣದಿಂದ ಗಂಡನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು' ಎನ್ನುತ್ತದೆ ಪವಿತ್ರಗ್ರಂಥ. 8ಹೀಗಿರುವಲ್ಲಿ ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರ. 9ಆದುದರಿಂದ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ, ಎಂದರು.

10ಅಂದು, ಮನೆಗೆ ಹೋದ ಬಳಿಕ ಶಿಷ್ಯರು, ಅದೇ ವಿಷಯವಾಗಿ ಯೇಸುವನ್ನು ವಿಚಾರಿಸಿದರು. 11ಅದಕ್ಕೆ ಅವರು, ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹ ಬಗೆದು ವ್ಯಭಿಚಾರಿಯಾಗುತ್ತಾನೆ. 12ಅಂತೆಯೇ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿಣಿಯಾಗುತ್ತಾಳೆ, ಎಂದರು.



ಚಿಂತನೆ: ಪ್ರಸ್ತುತ ಸಮಾಜದಲ್ಲಿ ವಿವಾಹವು ತನ್ನ ಮೂಲ ಅರ್ಥವನ್ನು ಕಳೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ವಿವಾಹ ಒಂದು ಪವಿತ್ರ ಸಂಸ್ಕಾರ ಹಾಗೂ ನಿಷ್ಕಳಂಕ ಪ್ರೀತಿಯ ಅನುಬಂಧ. ಸಂಸ್ಕಾರಭರಿತ ಹಾಗೂ ಆರೋಗ್ಯಕರ ಸಮಾಜಕ್ಕೆ ಪವಿತ್ರ ವಿವಾಹವೇ ಮೂಲ. ವಿವಾಹ ಸಂಸ್ಕಾರವನ್ನು ಸ್ವೀಕರಿಸಿದ ದಂಪತಿಗಳು ಇನ್ನು ಮುಂದೆ ತಾವು ಇಬ್ಬರಲ್ಲ ಒಂದೇ ಶರೀರ ಎಂಬ ಪರಮಸತ್ಯವನ್ನು ಗ್ರಹಿಸಿಕೊಂಡು ದೇವರು ತಮಗಿತ್ತ ವಿವಾಹ ಜೀವನವನ್ನು ಪಾವನಗೊಳಿಸಬೇಕು. ನೈಜ ಪ್ರೀತಿ, ತ್ಯಾಗವಿದ್ದಲ್ಲಿ ವಿವಾಹ ಜೀವನ ಸುಮಧುರವಾಗಬಲ್ಲದು. ಇಲ್ಲದಿದ್ದಲ್ಲಿ ಉಪ್ಪಿನ ಸವಿಯನ್ನು ಕಳೆದುಕೊಂಡ ಉಪ್ಪಿನಂತಾಗಬಹುದು. 

ಸಂತ ಡೇವಿಡರು 
 Stained glass of Saint David of Wales | All Saints Episcopal Church, San Francisco, CA | photo by AJ Alfieri-Crispin
ಸಂಪ್ರದಾಯದ ಪ್ರಕಾರ ಸಂತ ಡೇವಿಡರು, ದಕ್ಷಿಣ ವೇಲ್ಸ್‌‍ನ ರಾಜನಾದ ಸಾಂತ್ ಅವರ ಪುತ್ರ. ಗುರುವಾಗಿ ದೀಕ್ಷೆಯನ್ನು ಪಡೆದು, ಸಂತ ಪೌಲಿನುಸ್ ಅವರ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿದರು. ಆನಂತರ ಸೇವಾಕಾರ್ಯಗಳನ್ನು ಆರಂಭಿಸಿ, ಅನೇಕ ಕೈಸ್ತ ಸನ್ಯಾಸಿಗಳ ಮಠವನ್ನು ಸ್ಥಾಪಿಸಿದರು. ಅತ್ಯಂತ ವಿರಕ್ತ ಮತ್ತು ತ್ಯಾಗಮಯ ಜೀವನವನ್ನು ತಮ್ಮ ಮಠಗಳಲ್ಲಿ ನಡೆಸುತ್ತ ದಿನಪೂರ್ತಿ ಕೆಲಸ ಮತ್ತು ಬೈಬಲ್ ಅಧ್ಯಯನಗಳಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು 550ರಲ್ಲಿ ಇವರು ಧರ್ಮಾಧಿಕಾರಿಗಳ ಆಲೋಚನಾ ಸಭೆ (Synod) ನಲ್ಲಿ ಭಾಗವಹಿಸಿ, ತಮ್ಮ ನೆರವನ್ನು ನೀಡಿದರು. ನಂತರ ಇವರನ್ನು ಮಹಾಧರ್ಮಾಧ್ಯಕ್ಷರನ್ನಾಗಿ ನೇಮಿಸಲಾಯಿತು. 589ರಲ್ಲಿ ಸಂತ ಡೇವಿಡರು ಮರಣಹೊಂದಿದರು. ಇವರಲ್ಲಿದ್ದಂತಹ ಗುಣಗಳಲ್ಲಿ ಶ್ರೇಷ್ಠವಾದುದೆಂದರೆ, ಧಾರ್ಮಿಕ ನಾಯಕತ್ವದ ಗುಣ. ಇವರ ಪ್ರಾರ್ಥನಾಮಯ, ತ್ಯಾಗಮಯ ಜೀವನದ ಮೂಲಕ ಇತರರಿಗೆ ಮಾರ್ಗದರ್ಶಿಯಾಗಿದ್ದರು.
ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ

No comments:

Post a Comment