ಪಿತನ, ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ಆಮೆನ್.
ಪಾವನ ಮತ್ತು ಅಖಂಡ ತ್ರಿತ್ವಕ್ಕೆ ಇಂದೂ ಎಂದೆಂದೂ ಸ್ತೋತ್ರವಾಗಲಿ ಆಮೆನ್.
ಓ ಕ್ರೈಸ್ತ ಆತ್ಮವೇ, ನಿನ್ನ ಬಾಳಿನ ಈ ದಿನ ಮತ್ತು ಅನುದಿನ
ನೀ ಮಾಡಬೇಕಾದುದು ಇದೆಂದು ಗಮನಿಸು:-
ದೇವರನ್ನು
ಮಹಿಮೆಪಡಿಸುವುದು.
ಯೇಸುಸ್ವಾಮಿಯನ್ನು ಅನುಕರಿಸುವುದು.
ಒಂದು
ಆತ್ಮವನ್ನು
ರಕ್ಷಿಸುವುದು.
ನರಕವನ್ನು
ವರ್ಜಿಸುವುದು.
ಸ್ವರ್ಗವನ್ನು
ಸಂಪಾದಿಸುವುದು.
ಕಾಮಾಭಿಲಾಷೆಯನ್ನು ನಿಗ್ರಹಿಸುವುದು.
ಸೈತಾನನೊಂದಿಗೆ
ಸೆಣಸುವುದು.
ಈ
ಲೋಕವನ್ನು
ಕಡೆಗಣಿಸುವುದು.
ಸಾವನ್ನು
ಬಹುಶಃ ಎದುರಿಸುವುದು.
ಮತ್ತು
ನ್ಯಾಯ ತೀರ್ಪಿಗೆ ಒಳಗಾಗುವುದು.
ಪ್ರಾತಃಕಾಲದ ಪ್ರಾರ್ಥನೆ
ಯೇಸುವಿನ ದಿವ್ಯ ಹೃದಯವೇ, ಮರಿಯಮ್ಮನವರ ನಿಷ್ಕಳಂಕ ಹೃದಯದ ಮುಖಾಂತರ
ನನ್ನ ಈ ದಿನದ ಪ್ರಾರ್ಥನೆ,
ಕೆಲಸ ಮತ್ತು ಯಾತನೆಯನ್ನು
ನನ್ನ
ಪಾಪಗಳ ಪರಿಹಾರಕ್ಕಾಗಿ ಹಾಗೂ ನಿಮ್ಮನ್ನೇ ನೀವು ಪೀಠದ ಮೇಲೆ ಬಲಿಯಾಗಿಸಿಕೊಳ್ಳುವ
ಇತರ ಅಭಿಪ್ರಾಯಗಳಿಗಾಗಿ ನಾನು ಸಮರ್ಪಿಸುತ್ತೇನೆ.
ನನ್ನ ದೇವರೇ, ಈ
ದಿನವನ್ನು ಪವಿತ್ರವಾಗಿ ಕಳೆಯುವಂತೆ ಮತ್ತು ನನ್ನ ಪ್ರಾರ್ಥನೆಗಳಿಗೂ, ಅಭಿಲಾಷೆಗಳಿಗೂ, ಸತ್ಕಾರ್ಯಗಳಿಗೂ ಮೀಸಲಾಗಿರುವ ಎಲ್ಲ
ಪುಣ್ಯಫಲಗಳನ್ನು ಪಡೆಯುವಂತೆ ಅನುಗ್ರಹಿಸಿರಿ.
ಯೇಸುವೇ, ಮರಿಯಾ
ಮತ್ತು ಜೋಸೆಫರೇ ನನ್ನನ್ನು ಮತ್ತು ನಾನು ಯಾರಿಗಾಗಿ ಪ್ರಾರ್ಥಿಸಬೇಕೋ ಅವರೆಲ್ಲರನ್ನೂ ಆಶೀರ್ವದಿಸಿರಿ. ಆಮೆನ್.
ಆರಾಧನೆಯ ವಿಧಾನ
ನನ್ನ ದೇವರೇ, ನಿಮ್ಮನ್ನು
ನನ್ನ ಸೃಷ್ಟಿಕರ್ತರನ್ನಾಗಿಯೂ,
ಸರ್ವಶ್ರೇಷ್ಠ ಪ್ರಭುವನ್ನಾಗಿಯೂ
ಆರಾಧಿಸುತ್ತೇನೆ.
ನಿಮ್ಮ ಮುಂದೆ ನಶ್ವರನಾದ ನಾನು ನಿಮ್ಮನ್ನೇ ಸಂಪೂರ್ಣವಾಗಿ ಅವಲಂಬಿಸುತ್ತಾ
ಶರಣಾಗಿ ಬಾಳುತ್ತೇನೆ.
ಕೃತಜ್ಞತೆಯ ವಿಧಾನ
ನನ್ನ ದೇವರೇ, ನನ್ನನ್ನು
ನೀವು ಸೃಷ್ಟಿಸಿದಿರಿ ನನ್ನನ್ನು ಸಂರಕ್ಷಿಸುತ್ತೀರಿ. ನಿಮ್ಮ ಪುತ್ರನ ರಕ್ತದಿಂದ ನನ್ನನ್ನು ರಕ್ಷಿಸಿದ್ದೀರಿ. ನಿಮ್ಮ ಧರ್ಮಸಭೆಯ ಮಗುವನ್ನಾಗಿಯೂ
ಮಾಡಿದ್ದೀರಿ.
ಈ ಎಲ್ಲಾ ಬಗೆಯ
ನೆರವನ್ನು ನಿಮ್ಮ ಅನಂತ ಮಮತೆಯಿಂದ ಪಡೆದ ನಾನು ನಿಮಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಸಾಲದು.
ಪ್ರಭುವು ಕಲಿಸಿದ ಪ್ರಾರ್ಥನೆ (ಪಾತೆರ್ ನೋಸ್ತರ್)
ಸ್ವರ್ಗದಲ್ಲಿರುವ ನಮ್ಮ
ತಂದೆಯೇ
ನಿಮ್ಮ
ನಾಮ ಪೂಜಿತವಾಗಲಿ
ನಿಮ್ಮ
ರಾಜ್ಯ ಬರಲಿ
ನಿಮ್ಮ
ಚಿತ್ತ ಸ್ವರ್ಗದಲ್ಲಿ ನೇರುವೇರುವ ಪ್ರಕಾರ
ಭುವಿಯಲ್ಲಿಯೂ
ನೆರವೇರಲಿ.
ನಮ್ಮ
ಅನುದಿನದ ಆಹಾರವನ್ನು
ಇಂದು
ನಮಗೆ ಕೊಡಿರಿ.
ನಮಗೆ
ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ
ನಮ್ಮ
ಪಾಪಗಳನ್ನು
ಕ್ಷಮಿಸಿರಿ.
ನಮ್ಮನ್ನು
ಶೋಧನೆಗೆ ಒಳಪಡಿಸದೆ
ಕೇಡಿನಿಂದ
ನಮ್ಮನ್ನು
ರಕ್ಷಿಸಿರಿ.
ಆಮೆನ್
ಮಂಗಳ ವಾರ್ತೆಯ ಪ್ರಾರ್ಥನೆ (ಆವೆ
ಮರೀಯ)
ನಮೋ
ಮರಿಯಾ,
ಪ್ರಸಾದ ಪೂರ್ಣೇ
ಪ್ರಭುವು
ನಿಮ್ಮೊಡನೆ
ಇದ್ದಾರೆ.
ಸ್ತ್ರೀಯರಲ್ಲಿ
ನೀವು ಧನ್ಯರು ಮತ್ತು
ನಿಮ್ಮ
ಉದರದ ಫಲವಾದ ಶ್ರೀಯೇಸುವೂ ಧನ್ಯರು.
ಸಂತ
ಮರಿಯಾ ದೇವ ಮಾತೆಯೇ
ಪಾಪಿಗಳಾಗಿರುವ
ನಮಗಾಗಿ
ಈಗಲೂ
ನಮ್ಮ ಮರಣದ ಸಮಯದಲ್ಲಿಯೂ
ಪ್ರಾರ್ಥಿಸಿರಿ. ಆಮೆನ್
ವಿಶ್ವಾಸ ಪ್ರಮಾಣ
(ನೈಸಿನೊ ಕಾನ್‌ಸ್ಟಾಂಟಿನೊಪಾಲಿಟನ್ ಕ್ರೀದ್)
ಸ್ವರ್ಗವನ್ನೂ ಭುವಿಯನ್ನೂ ಗೋಚರವಾದುದನ್ನೂ ಅಗೋಚರವಾದುದನ್ನೂ ಸರ್ವವನ್ನೂ
ಸೃಷ್ಟಿಸಿದ ಸರ್ವಶಕ್ತ ಪಿತನಾದ ಏಕ ದೇವರನ್ನು ವಿಶ್ವಾಸಿಸುತ್ತೇನೆ.
ಸಕಲ ಯುಗಗಳ ಮುನ್ನ ಪಿತನಿಂದ ಜನಿಸಿದ ಏಕಮಾತ್ರ ದೇವಪುತ್ರ ಪ್ರಭು ಯೇಸುಕ್ರಿಸ್ತರನ್ನು
ವಿಶ್ವಾಸಿಸುತ್ತೇನೆ.
ಇವರು ದೇವರಿಂದ ದೇವರೂ, ಬೆಳಕಿನಿಂದ
ಬೆಳಕೂ, ನಿಜದೇವರಿಂದ ನಿಜದೇವರೂ, ಜನಿಸಿಯೂ
ಸೃಷ್ಟಿಯಾಗದೆ ಪಿತನ ಸಹಸ್ವಭಾವಿ ಆಗಿರುವರು.
ಇವರ ಮುಖಾಂತರವೇ ಸಕಲವೂ ಸೃಷ್ಟಿಯಾಯಿತು.
ಇವರು ಮಾನವರಾದ ನಮಗಾಗಿಯೂ, ನಮ್ಮ
ರಕ್ಷಣೆಗಾಗಿಯೂ ಸ್ವರ್ಗದಿಂದ ಇಳಿದು ಬಂದರು.
ಮತ್ತು (ತಲೆಬಾಗಿ) ‘ಪವಿತ್ರಾತ್ಮರಿಂದ ಕನ್ಯಾಮರಿಯಮ್ಮನವರಲ್ಲಿ ಮನುಷ್ಯರಾದರು.’
ಪೋಂತ್ಸಿಯುಸ್ ಪಿಲಾತನ ಅಧಿಕಾರದಲ್ಲಿ ನಮಗಾಗಿ ಶಿಲುಬೆಗೇರಿಸಲ್ಪಟ್ಟು,
ಮೃತರಾಗಿ, ಸಮಾಧಿ ಮಾಡಲ್ಪಟ್ಟರು.
ಪವಿತ್ರ ಗ್ರಂಥಗಳ ಪ್ರಕಾರವೇ ಮೂರನೆಯ ದಿನ ಪುನರ್ಜೀವಂತರಾಗಿ ಎದ್ದರು.
ಸ್ವರ್ಗಕ್ಕೇರಿ ಪಿತನ ಬಲಗಡೆಯಲ್ಲಿ ಆಸೀನರಾಗಿರುವರು.
ಅಲ್ಲಿಂದ ಜೀವಂತರಿಗೂ ಮೃತರಿಗೂ ತೀರ್ಪುಕೊಡಲು ಮಹಿಮೆಯೊಂದಿಗೆ ಮರಳಿ ಬರುವರು.
ಅವರ ರಾಜ್ಯಕ್ಕೆ ಅಂತ್ಯವಿರದು.
ಪಿತನಿಂದಲೂ ಸುತನಿಂದಲೂ ಹೊರಡುವ ಪ್ರಭುವೂ ಜೀವದಾತರೂ ಆಗಿರುವ ಪವಿತ್ರಾತ್ಮರನ್ನು
ವಿಶ್ವಾಸಿಸುತ್ತೇನೆ.
ಪ್ರವಾದಿಗಳ ಮುಖಾಂತರ ಮಾತನಾಡಿದ ಇವರು, ಪಿತ ಮತ್ತು
ಸುತನೊಡನೆ ಒಂದಾಗಿ ಆರಾಧನೆಯನ್ನೂ, ಮಹಿಮೆಯನ್ನೂ ಪಡೆಯುತ್ತಾರೆ.
ಏಕ, ಪವಿತ್ರ, ಕಥೋಲಿಕ ಮತ್ತು ಪ್ರೇಷಿತ ಧರ್ಮಸಭೆಯನ್ನು ವಿಶ್ವಾಸಿಸುತ್ತೇನೆ.
ಪಾಪ ಪರಿಹಾರಕ್ಕಾಗಿ ಒಂದೇ ದೀಕ್ಷಾಸ್ನಾನ ಇರುವುದೆಂದು ನಿವೇದಿಸುತ್ತೇನೆ.
ಮೃತರ ಪುನರುತ್ಥಾನವನ್ನೂ ಬರಲಿರುವ ಮರುಲೋಕ ಜೀವನವನ್ನೂ ನಿರೀಕ್ಷಿಸುತ್ತೇನೆ.
ಆಮೆನ್.
ಪ್ರೇಷಿತರ ವಿಶ್ವಾಸ ಸಂಗ್ರಹ (ಕ್ರೇದೋ)
1.
ಸ್ವರ್ಗವನ್ನೂ ಭೂಲೋಕವನ್ನೂ
ಸೃಷ್ಟಿಸಿದ ಸರ್ವಶಕ್ತ ದೇವ ಪಿತನನ್ನು ವಿಶ್ವಾಸಿಸುತ್ತೇನೆ.
2.
ಅವರ ಏಕಮಾತ್ರ ಪುತ್ರರೂ
ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ.
3.
ಇವರು ಪವಿತ್ರಾತ್ಮರಿಂದ
ಗರ್ಭಧರಿಸಿದ ಕನ್ಯಾಮರಿಯಮ್ಮನವರಲ್ಲಿ ಹುಟ್ಟಿದರು.
4.
ಪೋಂತ್ಸಿಯುಸ್ ಪಿಲಾತನ
ಅಧಿಕಾರದಲ್ಲಿ ಯಾತನೆಯನ್ನುಭವಿಸಿ ಶಿಲುಬೆಗೇರಿಸಲ್ಪಟ್ಟು ಮೃತರಾಗಿ ಸಮಾಧಿ ಮಾಡಲ್ಪಟ್ಟರು.
5.
ಪಾತಾಳಕ್ಕೆ ಇಳಿದು
ಮೂರನೆಯ ದಿನ ಮೃತರ ಮಧ್ಯದಿಂದ ಪುನರ್ಜೀವಂತರಾಗಿ ಎದ್ದರು.
6.
ಸ್ವರ್ಗಕ್ಕೆ ಏರಿ
ಸರ್ವಶಕ್ತ ದೇವಪಿತನ ಬಲಪಾರ್ಶ್ವದಲ್ಲಿ ಕುಳಿತುಕೊಂಡಿದ್ದಾರೆ.
7.
ಅಲ್ಲಿಂದ ಜೀವಂತರಿಗೂ
ಮೃತರಿಗೂ ತೀರ್ಪು ಕೊಡಲು ಬರುವರು.
8.
ಪವಿತ್ರಾತ್ಮರನ್ನು
ವಿಶ್ವಾಸಿಸುತ್ತೇನೆ.
9.
ಪವಿತ್ರ ಕಥೋಲಿಕ
ಧರ್ಮಸಭೆಯನ್ನೂ ಸಂತರ ಅನ್ಯೋನ್ಯತೆಯನ್ನೂ ವಿಶ್ವಾಸಿಸುತ್ತೇನೆ.
10.
ಪಾಪ ಪರಿಹಾರವನ್ನು
ವಿಶ್ವಾಸಿಸುತ್ತೇನೆ.
11.
ಶರೀರ ಪುನರುತ್ಥಾನವನ್ನು
ವಿಶ್ವಾಸಿಸುತ್ತೇನೆ
12.
ನಿತ್ಯ ಜೀವವನ್ನು
ವಿಶ್ವಾಸಿಸುತ್ತೇನೆ.
ಆಮೆನ್.
ಕೆಲಸಕಾರ್ಯಗಳ ಮುನ್ನ ಪ್ರಾರ್ಥನೆ
ಸರ್ವಶಕ್ತ
ಅನಂತ ದೇವರೇ, ವಿಶ್ವಾಸ, ಭರವಸೆ ಮತ್ತು ಪ್ರೀತಿಯು ನಮ್ಮಲ್ಲಿ ವರ್ಧಿಸುವಂತೆ ಅನುಗ್ರಹಿಸಿರಿ.
ನೀವು
ನಮಗೆ ಮಾಡಿದ ವಾಗ್ದಾನವನ್ನು ನಾವು
ಪಡೆದುಕೊಳ್ಳುವಂತೆ ಕರುಣಿಸಿರಿ,
ನಿಮ್ಮ ಆಜ್ಞೆಗಳನ್ನು
ಪ್ರೀತಿಸುವಂತೆಯೂ ಅವನ್ನು
ಅನುಷ್ಠಾನಕ್ಕೆ
ತರುವಂತೆಯೂ
ಮಾಡಿರಿ.
ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್
ಪಶ್ಚಾತ್ತಾಪದ ಪ್ರಾರ್ಥನೆ
ನನ್ನ
ದೇವರೇ,
ನನ್ನ ಸಂಪೂರ್ಣ ಹೃದಯದಿಂದ ನನ್ನ
ಪಾಪಗಳಿಗೋಸ್ಕರ
ದುಃಖಪಡುತ್ತೇನೆ.
ಎಲ್ಲಕ್ಕಿಂತಲೂ
ಮಿಗಿಲಾಗಿ
ನಿಮ್ಮನ್ನು
ಪ್ರೀತಿಸಬೇಕಾದ
ನಾನು ಕೆಟ್ಟದ್ದನ್ನು
ಮಾಡಲು
ಆಯ್ಕೆ ಮಾಡಿ ಒಳ್ಳೆಯದನ್ನು ಮಾಡಲು
ನಿರ್ಲಕ್ಷಿಸಿ
ನಿಮಗೆ ವಿರುದ್ಧ ಪಾಪ ಮಾಡಿದ್ದೇನೆ. ನಿಮ್ಮ
ಸಹಾಯದಿಂದ,
ಪ್ರಾಯಶ್ಚಿತ್ತ
ಮಾಡಲು ಇನ್ನು ಮುಂದೆ
ಪಾಪ
ಮಾಡದಿರಲು
ಹಾಗೂ ಪಾಪ ಮಾಡಲು
ಕಾರಣವಾಗುವ
ಎಲ್ಲವನ್ನೂ
ತ್ಯಜಿಸಲು
ದೃಢವಾಗಿ
ತೀರ್ಮಾನಿಸುತ್ತೇನೆ ನಮ್ಮ
ರಕ್ಷಕ ಯೇಸುಕ್ರಿಸ್ತರು ನಮಗಾಗಿ
ಯಾತನೆಯನ್ನು
ಅನುಭವಿಸಿ
ಮೃತರಾದರು
ಅವರ
ಪವಿತ್ರ
ನಾಮದಲ್ಲಿ,
ನನ್ನ ದೇವರೇ, ದಯೆತೋರಿ.
ಪಶ್ಚಾತ್ತಾಪದ ವಿಧಾನ (ಆಕ್ತುಸ್ ಕೊಂತ್ರಿತ್ಸಿಯೋನಿಸ್)
ಸರ್ವೇಶ್ವರಾ, ಪ್ರೀತಿಪಾತ್ರರಾದ ತಂದೆಯೇ,
ನನ್ನ
ಪಾಪಗಳಿಂದ
ನಿಮಗೆ ವಿರೋಧವಾಗಿ ನಡೆದು ನಿಮ್ಮನ್ನು
ದುಃಖಪಡಿಸಿದ್ದೇನೆ. ನಿಮ್ಮ
ಪುತ್ರರಾದ
ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ್ದೇನೆ.
ನಿಮ್ಮ
ದಂಡನೆಗೆ ಗುರಿಯಾಗಿದ್ದೇನೆ. ಆದುದರಿಂದ
ನಾನು ಮಾಡಿದ ಪಾಪಗಳಿಗಾಗಿ ಬಹಳ ವ್ಯಸನಪಡುತ್ತೇನೆ,
ಬಹಳ ದುಃಖಪಡುತ್ತೇನೆ, ಬಹಳ ಪಶ್ಚಾತ್ತಾಪ ಪಡುತ್ತೇನೆ.
ಇನ್ನುಮೇಲೆ
ನಿಮ್ಮ ಕೃಪಾವರದ ಸಹಾಯದಿಂದ ನಿಮ್ಮ ಚಿತ್ತದ ಪ್ರಕಾರ ನಡೆದು ಪಾಪಮಾಡುವುದೇ ಇಲ್ಲವೆಂದು ದೃಢಪ್ರತಿಜ್ಞೆ ಮಾಡುತ್ತೇನೆ. ಸ್ವಾಮಿ.
ವಿಶ್ವಾಸದ ವಿಧಾನ (ಆಕ್ತುಸ್ ಫೀದೆಯಿ)
ಸರ್ವೇಶ್ವರಾ, ನೀವು
ಒಬ್ಬರೇ ದೇವರಾಗಿದ್ದು ನಿಮ್ಮಲ್ಲಿ ಪಿತ
ಸುತ
ಮತ್ತು ಪವಿತ್ರಾತ್ಮರು ಎಂಬ ಮೂರು ದೈವೀ ವ್ಯಕ್ತಿಗಳು
ಇದ್ದಾರೆಂದು
ನಾನು ವಿಶ್ವಾಸಿಸುತ್ತೇನೆ. ನಿಮ್ಮ ಪುತ್ರರು
ಮನುಷ್ಯರಾಗಿ
ಮತ್ತು ನಮ್ಮ ಪಾಪಗಳಿಗೋಸ್ಕರ ಮೃತರಾಗಿ
ಜೀವಂತರಿಗೂ ಮೃತರಿಗೂ ನ್ಯಾಯನಿರ್ಣಯ ಮಾಡಲು
ಬರುವರೆಂದು
ವಿಶ್ವಾಸಿಸುತ್ತೇನೆ.
ಪವಿತ್ರ ಕಥೋಲಿಕ
ಧರ್ಮಸಭೆಯು
ಭೋಧಿಸುವಂತಹ
ಎಲ್ಲ ಸತ್ಯಗಳನ್ನು
ನೀವು
ತಿಳಿಯಪಡಿಸಿದ್ದೀರಿ. ಅನಂತ ಜ್ಞಾನವೂ ಸತ್ಯವೂ
ಆಗಿರುವ
ನೀವು ಮೋಸ ಹೋಗುವವರಲ್ಲ ಹಾಗೂ
ಮೋಸ
ಮಾಡುವವರೂ
ಅಲ್ಲ ಎಂಬುದನ್ನು ನಾನು
ವಿಶ್ವಾಸಿಸುತ್ತೇನೆ. ಈ
ವಿಶ್ವಾಸದಲ್ಲಿ
ನಾನು ಜೀವಿಸಲು ಮತ್ತು
ಸಾಯಲು
ಸಂಕಲ್ಪಿಸಿದ್ದೇನೆ.
ಆಮೆನ್.
ಭರವಸೆಯ ವಿಧಾನ (ಆಕ್ತುಸ್ ಸ್ಪೇಯಿ)
ಸರ್ವೇಶ್ವರಾ
ನೀವು ಅನಂತ ಶಕ್ತಿಶಾಲಿ, ಪ್ರಾಮಾಣಿಕ,
ದಯಾಪರ
ಮತ್ತು ಕೃಪಾಳು. ನೀವು ವಾಗ್ದಾನಿಸಿದ
ಮೇರೆಗೆ
ನಿಮ್ಮ ಅನುಗ್ರಹದಿಂದ ನನ್ನ ಎಲ್ಲಾ ಪಾಪಗಳಿಗೆ
ಕ್ಷಮೆಯನ್ನು
ಮತ್ತು ಇಹಲೋಕದ ಜೀವನ ಮುಗಿದಾಗ
ಅನಂತ
ಆನಂದವನ್ನು
ನಾನು ಪಡೆಯುವೆನೆಂದೇ ನನ್ನ
ಭರವಸೆ.
ಈ ಭರವಸೆಯಲ್ಲಿ ನಾನು ಜೀವಿಸಲು ಮತ್ತು
ಸಾಯಲು
ಸಂಕಲ್ಪಿಸಿದ್ದೇನೆ.
ಆಮೆನ್.
ಪ್ರೀತಿಯ ವಿಧಾನ (ಆಕ್ತುಸ್ ಕಾರಿತಾತಿಸ್)
ಸರ್ವೇಶ್ವರಾ, ನಾನು
ಎಲ್ಲಕ್ಕೂ
ಮಿಗಿಲಾಗಿ
ನಿಮ್ಮನ್ನು
ಪ್ರೀತಿಸುತ್ತೇನೆ ಮತ್ತು
ನಿಮಗೋಸ್ಕರ
ನನ್ನಂತೆಯೇ
ಪರರನ್ನು
ಪ್ರೀತಿಸುತ್ತೇನೆ. ಕಾರಣ ನೀವು ಪರಮ,
ಅನಂತ
ಹಾಗೂ ಪರಿಪೂರ್ಣ ಒಳ್ಳೆಯವರೂ ನನ್ನ
ಎಲ್ಲಾ
ಪ್ರೀತಿಗೂ
ಯೋಗ್ಯರೂ ಆಗಿದ್ದೀರಿ. ಆದುದರಿಂದ
ಈ ಪ್ರೀತಿಯಲ್ಲಿ ನಾನು
ಜೀವಿಸಲು ಮತ್ತು ಸಾಯಲು ಸಂಕಲ್ಪಿಸಿದ್ದೇನೆ. ಆಮೆನ್.
ದೇವರ ಹತ್ತು ಆಜ್ಞೆಗಳು
1. ನಾನೇ
ನಿಮ್ಮ ಪ್ರಭು ದೇವರು, ನಿಮಗೆ
ನನ್ನ ಮುಂದೆ ಬೇರೆ ದೇವರುಗಳು ಇರಬಾರದು.
2. ಪ್ರಭು ದೇವರ ನಾಮವನ್ನು ವ್ಯರ್ಥವಾಗಿ ಉಚ್ಛರಿಸಬಾರದು.
3. ದೇವರ
ದಿನವನ್ನು ಪವಿತ್ರವಾಗಿ ಆಚರಿಸಲು ಮರೆಯಬೇಡ.
4. ನಿನ್ನ
ತಂದೆತಾಯಿಯನ್ನು ಗೌರವಿಸು.
5. ಕೊಲೆ
ಮಾಡಬೇಡ.
6. ವ್ಯಭಿಚಾರ
ಮಾಡಬೇಡ.
7. ಕದಿಯಬೇಡ.
8. ನಿನ್ನ
ನೆರೆಯವರ ವಿರುದ್ಧ ಸುಳ್ಳುಸಾಕ್ಷಿ ಹೇಳಬೇಡ.
9. ನಿನ್ನ
ನೆರೆಯವನ ಪತ್ನಿಯನ್ನು ಬಯಸಬೇಡ.
10. ನಿನ್ನ
ನೆರೆಯವನ ವಸ್ತುಗಳನ್ನು ಆಶಿಸಬೇಡ.
ಈ ಹತ್ತು ಆಜ್ಞೆಗಳು ಎರಡು ಮುಖ್ಯ ಆಜ್ಞೆಗಳಲ್ಲಿ ಅಡಗಿವೆ:
1. ಎಲ್ಲಕ್ಕಿಂತಲೂ
ಹೆಚ್ಚಾಗಿ ದೇವರನ್ನು ಪ್ರೀತಿಸು.
2. ನಿನ್ನಂತೆಯೇ
ಪರರನ್ನು ಪ್ರೀತಿಸು.
ಧರ್ಮಸಭೆಯ ಕಟ್ಟಳೆಗಳು
1. ಆದಿತ್ಯವಾರಗಳಲ್ಲಿಯೂ
ಕಟ್ಟಳೆ ಹಬ್ಬಗಳಲ್ಲಿಯೂ ಪೂರ್ಣ ಬಲಿಪೂಜೆಯಲ್ಲಿ ಭಾಗವಹಿಸುವುದು.
2. ವರ್ಷಕ್ಕೊಮ್ಮೆಯಾದರೂ
ಪಾಪನಿವೇದನೆಯನ್ನು ಮಾಡುವುದು.
3. ಪಾಸ್ಖಕಾಲದಲ್ಲಾದರೂ
ಪರಮಪ್ರಸಾದದಲ್ಲಿ ನಿನ್ನ ಸೃಷ್ಟಿಕರ್ತರನ್ನು ಸ್ವೀಕರಿಸುವುದು.
4. ಧರ್ಮಸಭೆಯು
ನಿಗದಿಪಡಿಸಿದ ಉಪವಾಸ ಮತ್ತು ಮಾಂಸವರ್ಜಿತ ದಿನಗಳನ್ನು ಪಾಲಿಸುವುದು.
5. ಧರ್ಮಸಭೆಯ
ಅವಶ್ಯಕತೆಗಳನ್ನು ಶಕ್ತಿಗನುಸಾರ ಪೂರೈಸುವುದು.
ಪರಿಶುದ್ಧ ಕನ್ಯಾಮಾತೆಗೆ, ಸಂರಕ್ಷಕ ದೂತರಿಗೆ ಹಾಗೂ ನಮ್ಮ ಪಾಲಕ ಸಂತರಿಗೆ ಪ್ರಾರ್ಥನೆ
ಓ ಪವಿತ್ರ ಕನ್ಯೆಯೇ, ದೇವರ ತಾಯೇ,
ನನ್ನ ಪರವಾದಿ ಮತ್ತು ಪಾಲಕೀಯೇ, ನಿಮ್ಮ ಬಡ ಸೇವಕನಿಗಾಗಿ ಪ್ರಾರ್ಥಿಸುತ್ತ ನೀವೇ ನನ್ನ ತಾಯೆಂದು
ತೋರ್ಪಡಿಸಿರಿ.
ಸರ್ವೇಶ್ವರನ ದೂತರೇ, ದಿವ್ಯ ಕೃಪೆಯ ಕಟಾಕ್ಷದಿಂದ ನಿಮ್ಮ ಚರಣಕ್ಕೆ
ಒಪ್ಪಿಸಲ್ಪಟ್ಟಿರುವ ನನಗೆ ಬೆಳಕು ತಂದು ನನ್ನನ್ನು ಕಾದು ನಡೆಸಿ ಪರಿಪಾಲಿಸಿರಿ. ಆಮೆನ್.
ಓ ಸುಪ್ರೀತ ಸಂತರೇ! ನಿಮ್ಮ
ಹೆಸರನ್ನು ಪಡೆದಿರುವ ನನಗಾಗಿ ಪ್ರಾರ್ಥಿಸಿರಿ. ನಾನು ಈ ಜೀವನದಲ್ಲಿ ನಿಮ್ಮ ಆದರ್ಶವನ್ನು
ಅನುಕರಿಸುತ್ತಾ ದೇವರಿಗೆ ನಿಷ್ಠೆಯಿಂದ ಸೇವೆಯನ್ನು ಸಲ್ಲಿಸುತ್ತಾ ನಿಮ್ಮೊಂದಿಗೆ ಅನಂತಕ್ಕೂ
ಸ್ವರ್ಗದಲ್ಲಿ ಅವರನ್ನು ಮಹಿಮೆಪಡಿಸುವಂತೆ ಅನುಗ್ರಹಿಸಿರಿ. ಆಮೆನ್.
ಕಥೋಲಿಕ ಧರ್ಮಸಾರ
ಕರ್ನಾಟಕ
ಪ್ರಾಂತೀಯ ಧರ್ಮೋಪದೇಶ ಆಯೋಗದ ಪರವಾಗಿ
ಈ ಧರ್ಮಸಾರವನ್ನು ಹೊಸದಾಗಿ ಅನುವಾದಿಸಿ ಪರಿಷ್ಕರಿಸಿದವರು:
ಫಾದರ್
ಎಲ್ ಅರುಳಪ್ಪ
ಮತ್ತು
ಫಾದರ್
ದೇವದತ್ತ ಕಾಮತ್ ಯೇ.ಸ.
ಅ. ವಿಶ್ವಾಸ
1. ನಿನ್ನನ್ನು
ಯಾರು ಸೃಷ್ಟಿಸಿದರು?
ನನ್ನನ್ನು ದೇವರು ಸೃಷ್ಟಿಸಿದರು.
2. ದೇವರು
ನಿನ್ನನ್ನು ಏಕೆ ಸೃಷ್ಟಿಸಿದರು?
ನನ್ನನ್ನು ದೇವರು ಈ ಲೋಕದಲ್ಲಿ
ಅವರನ್ನು ಅರಿಯಲು, ಪ್ರೀತಿಸಲು
ಮತ್ತು ಅವರ ಸೇವೆ ಮಾಡಲು ಮತ್ತು ಅವರೊಂದಿಗೆ ಮರುಲೋಕದಲ್ಲಿ ಸಂತೋಷವಾಗಿರಲು ಸೃಷ್ಟಿಸಿದರು.
3. ಯಾರ
ಹೋಲಿಕೆಯಲ್ಲಿ ಮತ್ತು ಸ್ವರೂಪದಲ್ಲಿ ದೇವರು ನಿನ್ನನ್ನು ಸೃಷ್ಟಿಸಿದರು?
ತಮ್ಮ ಸ್ವಂತ ಹೋಲಿಕೆ ಮತ್ತು
ಸ್ವರೂಪದಲ್ಲಿ ದೇವರು ನನ್ನನ್ನು ಸೃಷ್ಟಿಸಿದರು.
4. ದೇವರ ಈ
ಹೋಲಿಕೆ ನಿನ್ನ ಶರೀರದಲ್ಲಿ ಅಥವಾ ಆತ್ಮದಲ್ಲಿದೆ?
ದೇವರ ಈ ಹೋಲಿಕೆಯು ಮುಖ್ಯವಾಗಿ
ನನ್ನ ಆತ್ಮದಲ್ಲಿದೆ.
5. ನಿನ್ನ
ಆತ್ಮವು ದೇವರನ್ನು ಹೋಲುವುದು ಹೇಗೆ?
ನನ್ನ ಆತ್ಮವು ಚೇತನವೂ ಅಮರವೂ
ಆಗಿರುವುದರಿಂದ ಅದು ದೇವರನ್ನು ಹೋಲುತ್ತದೆ.
6. ನಿನ್ನ
ಆತ್ಮ ಅಮರ ಎಂದು ಹೇಳುವಾಗ ಅದರ ಅರ್ಥವೇನು?
ನನ್ನ ಆತ್ಮ ಅಮರ ಎಂದಾಗ ನನ್ನ
ಆತ್ಮ ಎಂದಿಗೂ ಸಾಯವುದಿಲ್ಲವೆಂದು ಅರ್ಥ.
7. ನೀನು
ಯಾವುದರ ಬಗ್ಗೆ ಹೆಚ್ಚು ಗಮನ ನೀಡಬೇಕು. ಶರೀರಕ್ಕೋ ಅಥವಾ ಆತ್ಮಕ್ಕೋ?
ಕ್ರಿಸ್ತರು ಹೇಳಿದ ಮೇರೆಗೆ: ‘ಒಬ್ಬನು
ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಆತ್ಮವನ್ನೇ ಕಳೆದುಕೊಂಡರೆ ಅವನಿಗೆ ದೊರಕುವ ಲಾಭವೇನು?’ ಆದರಿಂದ ನಾನು ನನ್ನ ಆತ್ಮಕ್ಕೆ ಹೆಚ್ಚು ಗಮನವನ್ನು ನೀಡಬೇಕು.
8. ನಿನ್ನ
ಆತ್ಮವನ್ನು ರಕ್ಷಿಸಿಕೊಳ್ಳಲು ನೀನು ಮಾಡಬೇಕಾದ್ದು ಏನು?
ನನ್ನ ಆತ್ಮವನ್ನು
ರಕ್ಷಿಸಿಕೊಳ್ಳಲು ವಿಶ್ವಾಸ,
ಭರವಸೆ ಮತ್ತು ಪ್ರೀತಿಯಿಂದ ನಾನು ದೇವರನ್ನು ಪೂಜಿಸಬೇಕು.
ಅಂದರೆ ನಾನು ಅವರಲ್ಲಿ ವಿಶ್ವಾಸ
ಮತ್ತು ಭರವಸೆಯಿಟ್ಟು ಸಂಪೂರ್ಣ ಹೃದಯದಿಂದ ಅವರನ್ನು ಪ್ರೀತಿಸಬೇಕು.
9. ವಿಶ್ವಾಸ
ಎಂದರೇನು?
ವಿಶ್ವಾಸವೆಂದರೆ ದೇವರ
ಪಾರಮಾರ್ಥಿಕ ಕೊಡುಗೆ. ದೇವರು ಪ್ರಕಟಪಡಿಸಿರುವುದನ್ನು ಸಂದೇಹ ಬಿಟ್ಟು ಸ್ವೀಕರಿಸಲು ಇದು ನಮಗೆ
ಸಹಾಯಕವಾಗುತ್ತದೆ.
10. ದೇವರು
ಪ್ರಕಟಪಡಿಸಿರುವುದನ್ನೆಲ್ಲಾ ನೀನು ಏಕೆ ವಿಶ್ವಾಸಿಸಬೇಕು?
ದೇವರು ಪ್ರಕಟಪಡಿಸಿದ್ದನ್ನು
ನಾನು ವಿಶ್ವಾಸಿಸಲೇಬೇಕು,
ಕಾರಣ ದೇವರೇ ನಿತ್ಯ ಸತ್ಯ. ಅವರು ಮೋಸ ಹೋಗುವವರಲ್ಲ ಹಾಗೂ ಮೋಸ
ಮಾಡುವವರೂ ಅಲ್ಲ.
11. ದೇವರು
ಏನು ಪ್ರಕಟಿಸಿದ್ದಾರೆ ಎಂದು ತಿಳಿಯುವುದು ಹೇಗೆ?
ಕಥೋಲಿಕ ಧರ್ಮಸಭೆಯ ಪುರಾವೆ, ಬೋಧನೆ ಮತ್ತು ಅಧಿಕಾರ ಇವುಗಳಿಂದ ದೇವರು ಏನು ಪ್ರಕಟಿಸಿದ್ದಾರೆ
ಎಂದು ನಾನು ತಿಳಿಯಬಹುದು.
12. ಕಥೋಲಿಕ
ಧರ್ಮಸಭೆಗೆ ಬೋಧಿಸಲು ದೈವ ಅಧಿಕಾರವನ್ನ ನೀಡಿದವರು ಯಾರು?
ಯೇಸುಕ್ರಿಸ್ತರು ಹೋಗಿ
ವಿಶ್ವದಾದ್ಯಂತ ಪ್ರಬೋಧಿಸಿರಿ ಎಂದು ಹೇಳುವುದರ ಮೂಲಕ ಕಥೋಲಿಕ ಧರ್ಮಸಭೆಗೆ ಬೋಧಿಸಲು ದೈವ
ಅಧಿಕಾರವನ್ನು ನೀಡಿದರು.
ಪ್ರೇಷಿತರ ವಿಶ್ವಾಸ ನಿವೇದನೆ
13. ದೇವರು
ಪ್ರಕಟಿಸಿದ ಮುಖ್ಯ ವಿಷಯಗಳನ್ನು ನಾವು ಎಲ್ಲಿ ಕಾಣುತ್ತೇವೆ?
ದೇವರು ಪ್ರಕಟಿಸಿದ ಮುಖ್ಯ
ವಿಷಯಗಳನ್ನು ಪ್ರೇಷಿತರ ವಿಶ್ವಾಸ ನಿವೇದನೆಯಲ್ಲಿ ಕಾಣುತ್ತೇವೆ.
14. ಪ್ರೇಷಿತರ
ವಿಶ್ವಾಸ ನಿವೇದನೆಯನ್ನು ಹೇಳೋಣ:
1. ಪರಲೋಕವನ್ನೂ ಭೂಲೋಕವನ್ನೂ
ಸೃಷ್ಟಿಸಿದ ಸರ್ವಶಕ್ತ ದೇವಪಿತನನ್ನು ವಿಶ್ವಾಸಿಸುತ್ತೇನೆ.
2. ಅವರ ಏಕಮಾತ್ರ ಪುತ್ರರೂ
ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ.
3. ಇವರು ಪವಿತ್ರಾತ್ಮರಿಂದ
ಗರ್ಭಧರಿಸಿದ ಕನ್ಯಾಕುರಿಯಮ್ಮನವರಲ್ಲಿ ಹುಟ್ಟಿದರು.
4. ಪೋಂತ್ಸಿಯುಸ್ ಪಿಲಾತನ
ಅಧಿಕಾರದಲ್ಲಿ ಯಾತನೆಯನ್ನನುಭವಿಸಿ ಶಿಲುಬೆಗೇರಿಸಲ್ಪಟ್ಟು ಮೃತರಾಗಿ ಸಮಾಧಿ ಮಾಡಲ್ಪಟ್ಟರು.
5. ಪಾತಾಳಕ್ಕೆ ಇಳಿದು ಮೂರನೆಯ
ದಿನ ಮೃತರ ಮಧ್ಯದಿಂದ ಪುನರ್ಜೀವಂತರಾಗಿ ಎದ್ದರು.
6. ಪರಲೋಕಕ್ಕೆ ಏರಿ ಸರ್ವಶಕ್ತ
ದೇವಪಿತನ ಬಲಪಾರ್ಶ್ವದಲ್ಲಿ ಕುಳಿತುಕೊಂಡಿದ್ದಾರೆ.
7. ಅಲ್ಲಿಂದ ಜೀವಂತರಿಗೂ
ಮೃತರಿಗೂ ತೀರ್ಪು ಕೊಡಲು ಬರುವರು.
8. ಪವಿತ್ರಾತ್ಮರನ್ನು
ವಿಶ್ವಾಸಿಸುತ್ತೇನೆ.
9. ಪವಿತ್ರ ಕಥೋಲಿಕ
ಧರ್ಮಸಭೆಯನ್ನೂ ಸಂತರ ಅನ್ಯೋನ್ಯತೆಯನ್ನೂ ವಿಶ್ವಾಸಿಸುತ್ತೇನೆ.
10. ಪಾಪ ಪರಿಹಾರವನ್ನು
ವಿಶ್ವಾಸಿಸುತ್ತೇನೆ.
11. ಶರೀರ ಪುನರುತ್ಥಾನವನ್ನು
ವಿಶ್ವಾಸಿಸುತ್ತೇನೆ.
12. ನಿತ್ಯ ಜೀವವನ್ನು ವಿಶ್ವಾಸಿಸುತ್ತೇನೆ.
ಆಮೆನೆ.
15. ಪ್ರೇಷಿತರ
ವಿಶ್ವಾಸ ನಿವೇದನೆಯನ್ನು ಹೇಗೆ ವಿಭಾಗಿಸಲಾಗಿದೆ?
ಪ್ರೇಷಿತರ ವಿಶ್ವಾಸ
ನಿವೇದನೆಯನ್ನು 12 ಅನುಚ್ಛೇದವಾಗಿ ವಿಭಾಗಿಸಲಾಗಿದೆ.
ಮೊದಲ ಅನುಚ್ಛೇದ
16. ಪ್ರೇಷಿತರ
ವಿಶ್ವಾಸ ನಿವೇದನೆಯ ಮೊದಲ ಅನುಚ್ಛೇದ ಯಾವುದು?
ಪರಲೋಕವನ್ನೂ ಭೂಲೋಕವನ್ನೂ
ಸೃಷ್ಟಿಸಿದ ಸರ್ವಶಕ್ತ ದೇವಪಿತನನ್ನು ವಿಶ್ವಾಸಿಸುತ್ತೇನೆ. ಇದೇ ಮೊದಲ ಅನುಚ್ಛೇದ.
17. ದೇವರು
ಯಾರು?
ದೇವರು ಸರ್ವಶ್ರೇಷ್ಠ ಆತ್ಮ, ಅವರು ಸ್ವಯಂಭು. ತಾವೇ ಇರುವವರು ಮತ್ತು ಅವರ ಸಂಪೂರ್ಣತೆಗೆ
ಎಲ್ಲೆಯಿಲ್ಲ.
18. ದೇವರನ್ನು
ಸರ್ವಶಕ್ತರು ಎಂದು ಏಕೆ ಕರೆಯಲಾಗಿದೆ?
ದೇವರಿಗೆ ಸರ್ವವೂ ಸಾಧ್ಯ. ಆದುದರಿಂದ
ಅವರನ್ನು ಸರ್ವಶಕ್ತರು ಎಂದು ಕರೆಯಲಾಗಿದೆ.
19. ದೇವರನ್ನು
ಸ್ವರ್ಗ ಮತ್ತು ಭೂಲೋಕದ ಸೃಷ್ಟಿಕರ್ತ ಎಂದು ಏಕೆ ಕರೆಯುತ್ತಾರೆ?
ದೇವರು ಸ್ವರ್ಗ, ಭೂಮಿ ಮತ್ತು ಎಲ್ಲಾ ವಸ್ತುಗಳನ್ನು ಏನೂ ಇಲ್ಲದೆ ಕೇವಲ ತಮ್ಮ
ನುಡಿಯಿಂದ ಸೃಷ್ಟಿಸಿದುದರಿಂದ ಅವರನ್ನು ಸ್ವರ್ಗ ಮತ್ತು ಭೂಮಿಯ ಸೃಷ್ಟಿಕರ್ತರೆಂದು ಕರೆಯುತ್ತಾರೆ.
20. ದೇವರಿಗೆ
ಆದಿ ಎಂಬುದು ಇದೆಯೇ?
ದೇವರಿಗೆ ಆದಿಯೇ ಇಲ್ಲ. ಅವರು
ಹಿಂದೆಯೂ ಇದ್ದವರು, ಇಂದೂ
ಇರುವರು, ಮುಂದೆಯೂ
ಇರುವವರು.
21. ದೇವರು
ಎಲ್ಲಿದ್ದಾರೆ?
ದೇವರು ಸರ್ವವ್ಯಾಪಿಯಾಗಿದ್ದಾರೆ.
22. ದೇವರು
ಸಕಲವನ್ನೂ ಅರಿಯಲು ಮತ್ತು ನೋಡಲು ಶಕ್ತರೆ?
ದೇವರು ಸಕಲವನ್ನೂ ನೋಡಲು ಮತ್ತು
ತಿಳಿಯಲು ಶಕ್ತರು. ನಮ್ಮ ಅತ್ಯಂತ ಗೂಢ ಯೋಚನೆಗಳು ಸಹ ಅವರಿಗೆ ತಿಳಿದಿವೆ.
23. ದೇವರಿಗೆ
ಶರೀರವಿದೆಯೆ?
ದೇವರಿಗೆ ಶರೀರವಿಲ್ಲ, ಅವರು ಆತ್ಮಸ್ವರೂಪಿ.
24. ದೇವರು
ಒಬ್ಬರೇ?
ಹೌದು, ದೇವರು ಒಬ್ಬರೆ.
25. ದೇವರಲ್ಲಿ
ಮೂವರು ವ್ಯಕ್ತಿಗಳು ಇದ್ದಾರೆಯೆ?
ದೇವರಲ್ಲಿ ಮೂವರು ವ್ಯಕ್ತಿಗಳು
ಇದ್ದಾರೆ. ಪಿತ ದೇವರು,
ಸುತ ದೇವರು ಮತ್ತು ಪವಿತ್ರಾತ್ಮ ದೇವರು.
26. ಈ ಮೂವರು
ವ್ಯಕ್ತಿಗಳು ಮೂವರು ದೇವರುಗಳೆ?
ಈ ಮೂವರು ವ್ಯಕ್ತಿಗಳು ಮೂವರು
ದೇವರುಗಳಲ್ಲ. ಪಿತ ದೇವರು,
ಸುತ ದೇವರು ಮತ್ತು ಪವಿತ್ರಾತ್ಮ ದೇವರು ಇವರೆಲ್ಲ ಸೇರಿ
ಇರುವವರು ಒಬ್ಬರೇ ದೇವರು.
27. ಒಬ್ಬರೇ
ದೇವರಲ್ಲಿ ಮೂವರು ವ್ಯಕ್ತಿಗಳುಳ್ಳ ರಹಸ್ಯವನ್ನು ಏನೆಂದು ಕರೆಯುತ್ತಾರೆ?
ಒಬ್ಬರೇ ದೇವರಲ್ಲಿ ಮೂವರು
ವ್ಯಕ್ತಿಗಳುಳ್ಳ ರಹಸ್ಯವನ್ನು ‘ಪರಮ ತ್ರಿತ್ವದ ರಹಸ್ಯ’ ಎಂದು ಕರೆಯುತ್ತಾರೆ.
28. ರಹಸ್ಯವೆಂದರೇನು?
ರಹಸ್ಯವೆಂದರೆ ನಮ್ಮ ಅರಿವಿಗೂ
ಮೀರಿದ ದೇವರಿಂದ ಪ್ರಕಟಗೊಂಡ ಸತ್ಯ.
29. ಪರಮ
ತ್ರಿತ್ವಕ್ಕೆ ಅನುಗುಣವಾದ ಯಾವುದೇ ಹೋಲಿಕೆ ನಿನ್ನ ಆತ್ಮದಲ್ಲಿ ಇದೆಯೇ?
ನನ್ನ ಆತ್ಮದಲ್ಲಿ ಪರಮ
ತ್ರಿತ್ವಕ್ಕೆ ಅನುಗುಣವಾದ ಹೋಲಿಕೆ ಇದೆ. ದೇವರಲ್ಲಿ ಮೂವರು ವ್ಯಕ್ತಿಗಳು ಇರುವ ಹಾಗೆ ನನ್ನ ಒಂದೇ
ಆತ್ಮದಲ್ಲಿ ಮೂರು ಶಕ್ತಿಗಳು ಇವೆ.
30. ನಿನ್ನ
ಆತ್ಮದಲ್ಲಿರುವ ಆ ಮೂರು ಶಕ್ತಿಗಳು ಯಾವುವು?
ನನ್ನ ಆತ್ಮದಲ್ಲಿರುವ ಆ ಮೂರು
ಶಕ್ತಿಗಳು ಇವು: ಸ್ಮರಣ ಶಕ್ತಿ,
ಬುದ್ಧಿ ಶಕ್ತಿ ಮತ್ತು ಚಿತ್ತ ಶಕ್ತಿ.
ಎರಡನೇ ಅನುಚ್ಛೇದ
31. ಪ್ರೇಷಿತರ
ವಿಶ್ವಾಸ ನಿವೇದನೆಯ ಎರಡನೇ ಅನುಚ್ಛೇದ ಯಾವುದು?
‘ಅವರ ಏಕಮಾತ್ರ ಪುತ್ರರೂ ನಮ್ಮ
ಪ್ರಭುವೂ ಆದ ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ’. ಇದೇ ಎರಡನೇ ಅನುಚ್ಛೇದ.
32. ಯೇಸುಕ್ರಿಸ್ತರೆಂದರೆ
ಯಾರು?
ಯೇಸುಕ್ರಿಸ್ತರು ದೇವರ ಪುತ್ರರು, ನಮಗೋಸ್ಕರ ಮಾನವರಾದವರು.
33. ಯೇಸುಕ್ರಿಸ್ತರು ನಿಜವಾಗಿಯೂ ದೇವರೇ?
ಹೌದು, ಯೇಸುಕ್ರಿಸ್ತರು ನಿಜವಾಗಿಯೂ ದೇವರು.
34. ಯೇಸುಕ್ರಿಸ್ತರು ಏಕೆ ನಿಜವಾಗಿಯೂ
ದೇವರು?
ತಮ್ಮ ತಂದೆಯಾದ ಪಿತ ದೇವರೊಡನೆ
ಸ್ವಭಾವದಲ್ಲಿ ಒಂದೇ ಆಗಿರುವುದರಿಂದ ಯೇಸುಕ್ರಿಸ್ತರು ನಿಜವಾಗಿಯೂ ದೇವರು.
35. ಯೇಸುಕ್ರಿಸ್ತರು ಯಾವಾಗಲೂ
ದೇವರಾಗಿರುವರೆ?
ಆನಾದಿಯಿಂದಲೂ ತಂದೆಯಲ್ಲಿ
ಜನಿಸಿರುವುದರಿಂದ ಯೇಸುಕ್ರಿಸ್ತರು ಯಾವಾಗಲೂ ದೇವರಾಗಿರುವರು.
36. ಪರಮ ತ್ರಿತ್ವದಲ್ಲಿ
ಯೇಸುಕ್ರಿಸ್ತರು ಯಾವ ವ್ಯಕ್ತಿ?
ಯೇಸುಕ್ರಿಸ್ತರು ಪರಮ ತ್ರಿತ್ವದ
ಎರಡನೆಯ ವ್ಯಕ್ತಿ.
37. ಯೇಸುಕ್ರಿಸ್ತರು ನಿಜವಾಗಿಯೂ
ಮನುಷ್ಯರೇ?
ಹೌದು, ಯೇಸುಕ್ರಿಸ್ತರು ನಿಜವಾಗಿಯೂ ಮನುಷ್ಯರು.
38. ಯೇಸುಕ್ರಿಸ್ತರು ಏಕೆ ನಿಜವಾಗಿಯೂ
ಮನುಷ್ಯರು?
ಯೇಸುಕ್ರಿಸ್ತರು ನಮ್ಮ ಹಾಗೆ
ಶರೀರ ಮತ್ತು ಆತ್ಮವನ್ನು ಹೊಂದಿರುವುದರಿಂದ ಅವರು ನಿಜವಾಗಿಯೂ ಮನುಷ್ಯರಾಗಿದ್ದಾರೆ.
39. ಯೇಸುಕ್ರಿಸ್ತರು ಯಾವಾಗಲೂ
ಮನುಷ್ಯರಾಗಿದ್ದರೆ?
ಇಲ್ಲ. ಯೇಸುಕ್ರಿಸ್ತರು ಯಾವಾಗಲೂ
ಮನುಷ್ಯರಾಗಿರಲಿಲ್ಲ. ತಮ್ಮ ಮನುಷ್ಯ ಅವತಾರ (ದೇಹಾಂಬರತೆಯ) ಸಮಯದಿಂದ ಅವರು ಮನುಷ್ಯರಾದರು.
40. ದೇಹಾಂಬರತೆ (ಮನುಷ್ಯಾವತಾರ) ಪದದ
ಅರ್ಥವೇನು?
ದೇಹಾಂಬರತೆ ಎಂದರೆ ದೇವಪುತ್ರ
ಮಾನವ ರೂಪ ತಳೆದರು: ‘ವಾರ್ತೆ ಎಂಬುವವರು ಮನುಷ್ಯರಾದರು’
41. ಯೇಸುಕ್ರಿಸ್ತರಲ್ಲಿ ಎಷ್ಟು
ಸ್ವಭಾವಗಳಿವೆ?
ಯೇಸುಕ್ರಿಸ್ತರಲ್ಲಿ ಎರಡು
ಸ್ವಭಾವಗಳಿವೆ. ಅವು ಯಾವುವೆಂದರೆ: ದೈವಸ್ವಭಾವ ಮತ್ತು ಮನುಷ್ಯಸ್ವಭಾವ.
42. ಯೇಸುಕ್ರಿಸ್ತರಲ್ಲಿ ಒಬ್ಬರೇ
ವ್ಯಕ್ತಿ ಇರುವರೋ?
ಇರುವರು. ಯೇಸುಕ್ರಿಸ್ತರಲ್ಲಿ
ಒಬ್ಬರೇ ಒಬ್ಬ ವ್ಯಕ್ತಿ, ಅವರೇ
ದೇವಪುತ್ರರು.
43. ದೇವಪುತ್ರರು ಏಕೆ ಮನುಷ್ಯರಾದರು?
ದೇವಪುತ್ರರು ನಮ್ಮನ್ನು
ಪಾಪದಿಂದಲೂ ನರಕದಿಂದಲೂ ಬಿಡುಗಡೆ ಮಾಡಲು ಮತ್ತು ಸ್ವರ್ಗ ರಾಜ್ಯದ ಮಾರ್ಗವನ್ನು ತೋರಿಸಲು
ಮನುಷ್ಯರಾದರು.
44. ಯೇಸು ಎಂಬ ಪವಿತ್ರ ನಾಮದ
ಅರ್ಥವೇನು?
ಯೇಸು ಎಂಬ ಪವಿತ್ರನಾಮದ ಅರ್ಥ
‘ರಕ್ಷಕ’ ಎಂದು.
45. ಕ್ರಿಸ್ತ ಎಂಬ ನಾಮದ ಅರ್ಥವೇನು?
ಕ್ರಿಸ್ತ ಎಂಬ ನಾಮದ ಅರ್ಥ ‘ಅಭಿಷಿಕ್ತ’
ಎಂದು.
46. ಯೇಸುಕ್ರಿಸ್ತರು ಎಲ್ಲಿದ್ದಾರೆ?
ದೇವಸ್ವರೂಪಿ ಯೇಸುಕ್ರಿಸ್ತರು
ಸರ್ವವ್ಯಾಪಿಯಾಗಿ ಎಲ್ಲೆಲ್ಲೂ ಇದ್ದಾರೆ. ದೇವರಾಗಿದ್ದು ಮಾನವರಾದ ಕ್ರಿಸ್ತರು ಸ್ವರ್ಗದಲ್ಲಿಯೂ
ಪರಮಪ್ರಸಾದ ಸಂಪುಟದಲ್ಲಿಯೂ ಇದ್ದಾರೆ.
ಮೂರನೇ ಅನುಚ್ಛೇದ
47. ಪ್ರೇಷಿತರ ವಿಶ್ವಾಸ
ನಿವೇದನೆಯ ಮೂರನೆಯ ಅನುಚ್ಛೇದ ಯಾವುದು?
‘ಇವರು
ಪವಿತ್ರಾತ್ಮರಿಂದ ಗರ್ಭಧರಿಸಿದ ಕನ್ಯಾಮರಿಯಮ್ಮನವರಲ್ಲಿ ಜನಿಸಿದರು’ ಇದೇ ಮೂರನೇ ಅನುಚ್ಛೇದ.
48. ಈ ಮೂರನೇ ಅನುಚ್ಛೇದದ
ಅರ್ಥವೇನು?
ಪವಿತ್ರಾತ್ಮರ
ಶಕ್ತಿಯಿಂದ ದೇವರಪುತ್ರ, ಕನ್ಯಾಮರಿಯಮ್ಮನವರ
ಉದರದಲ್ಲಿ ನಮ್ಮ ಹಾಗೆ ಶರೀರ ಮತ್ತು ಆತ್ಮವನ್ನು ಧರಿಸಿಕೊಂಡರು ಎಂಬುದೇ ಇದರ ಅರ್ಥ.
49. ಈ ಧರೆಯಲ್ಲಿ
ಯೇಸುಕ್ರಿಸ್ತರಿಗೆ ತಂದೆಯಿದ್ದರೇ?
ಈ
ಧರೆಯಲ್ಲಿ ಯೇಸುಕ್ರಿಸ್ತರಿಗೆ ಯಾವ ತಂದೆಯೂ ಇರಲಿಲ್ಲ. ಸಂತ ಜೋಸೆಫರು ಕೇವಲ ಸಾಕುತಂದೆ ಅಥವಾ
ಪೋಷಕ ತಂದೆಯಾಗಿದ್ದರು.
50. ನಮ್ಮ ರಕ್ಷಕರು ಎಲ್ಲಿ
ಜನಿಸಿದರು?
ನಮ್ಮ
ರಕ್ಷಕರು ಬೆತ್ಲೆಹೇಮಿನ ಒಂದು ಕೊಟ್ಟಿಗೆಯಲ್ಲಿ ಜನಿಸಿದರು.
51. ನಮ್ಮ ರಕ್ಷಕರಿಗೆ ಎಲ್ಲಿ
ಸ್ನಾನದೀಕ್ಷೆ ನೀಡಲಾಯಿತು?
ನಮ್ಮ
ರಕ್ಷಕರಿಗೆ ಜೋರ್ಡಾನ್ ನದಿಯಲ್ಲಿ ಸ್ನಾನದೀಕ್ಷೆ ನೀಡಲಾಯಿತು.
ನಾಲ್ಕನೇ ಅನುಚ್ಛೇದ
52. ಪ್ರೇಷಿತರ ವಿಶ್ವಾಸ
ಸಂಗ್ರಹದ ನಾಲ್ಕನೇ ಅನುಚ್ಛೇದ ಯಾವುದು?
ಪೊಂತ್ಸಿಯುಸ್
ಪಿಲಾತನ ಅದಿಕಾರದಲ್ಲಿ ಯಾತನೆಯನ್ನು ಅನುಭವಿಸಿ ಶಿಲುಬೆಗೇರಿಸಲ್ಪಟ್ಟು ಮೃತರಾಗಿ ಸಮಾಧಿ
ಮಾಡಲ್ಪಟ್ಟರು’ ಇದೇ ನಾಲ್ಕನೇ ಅನುಚ್ಛೇದ.
53. ಕ್ರಿಸ್ತರ ಮುಖ್ಯ
ಯಾತನೆಗಳು ಯಾವುವು?
ಮೊದಲನೆಯದಾಗಿ
– ಗೆತ್ಸೆಮನಿ ತೋಪಿನಲ್ಲಿ ವೇದನೆ ಮತ್ತು ರಕ್ತದ ಬೆವರನ್ನು ಸುರಿಸಿದ್ದು.
ಎರಡನೆಯದಾಗಿ
- ಕಲ್ಲಿನ ಕಂಬಕ್ಕೆ ಕಟ್ಟಿ ಚಾವಟಿಗಳಿಂದ ಹೊಡೆದು, ಮುಳ್ಳಿನ
ಕಿರೀಟವನ್ನು ತೊಡಿಸಿದ್ದು.
ಮೂರನೆಯದಾಗಿ
– ಶಿಲುಬೆಯ ಹೊತ್ತು ನಡೆದು, ಶಿಲುಬೆ
ಮೇಲೆ ಜಡಿಯಲ್ಲಪಟ್ಟು ಇಬ್ಬರು ಕಳ್ಳರ ನಡುವೆ ಮರಣ ಹೊಂದಿದ್ದು.
54. ಪ್ರಭುವಿನ ಪ್ರಮುಖ
ಯಾತನೆಗಳನ್ನು ಏನೆಂದು ಕರೆಯುತ್ತಾರೆ?
ಪ್ರಭುವಿನ
ಪ್ರಮುಖ ಯಾತನೆಗಳನ್ನು ‘ಯೇಸುಕ್ರಿಸ್ತರ ಯಾತನೆ’ ಎಂದು ಕರೆಯುತ್ತಾರೆ.
55. ನಮ್ಮ ರಕ್ಷಕರು ಏಕೆ
ಯಾತನೆಯನ್ನು ಅನುಭವಿಸಿದರು?
ನಮ್ಮ
ಪಾಪಗಳಿಗೆ ಪರಿಹಾರ ಮಾಡಿ ನಮಗೆ ನಿತ್ಯ ಜೀವವನ್ನು ಸಂಪಾದಿಸಿಕೊಡಲು ನಮ್ಮ ರಕ್ಷಕರು ಯಾತನೆಯನ್ನು
ಅನುಭವಿಸಿದರು.
56. ಯೇಸುಕ್ರಿಸ್ತರನ್ನು ನಮ್ಮ
ರಕ್ಷಕರೆಂದು ಏಕೆ ಕರೆಯುತ್ತೇವೆ?
ತಮ್ಮ
ಅಮೂಲ್ಯವಾದ ರಕ್ತದ ಬೆಲೆಯನ್ನಿತ್ತು ಯೇಸುಕ್ರಿಸ್ತರು ನಮ್ಮನ್ನು ಬಿಡುಗಡೆಗೊಳಸಿದುದರಿಂದ ನಾವು
ಅವರನ್ನು ರಕ್ಷಕರೆಂದು ಕರೆಯುತ್ತೇವೆ.
57. ನಮ್ಮ ರಕ್ಷಕರು ಯಾವ ದಿನ ಮರಣ
ಹೊಂದಿದರು?
ನಮ್ಮ ರಕ್ಷಕರು
ಶುಭಶುಕ್ರವಾರದಂದು ಮರಣ ಹೊಂದಿದರು.
58. ನಮ್ಮ ರಕ್ಷಕರು ಎಲ್ಲಿ ಮೃತರಾದರು?
ನಮ್ಮ ರಕ್ಷಕರು ಕಲ್ವಾರಿ
ಬೆಟ್ಟದ ಮೇಲೆ ಮೃತರಾದರು.
59. ನಾವು ಶಿಲುಬೆಗುರುತನ್ನು ಏಕೆ
ಹಾಕುತ್ತೇವೆ?
ನಾವು ಶಿಲುಬೆಯ ಗುರುತನ್ನು ಹಾಕುವುದರ
ಮೂಲಕ,
ಮೊದಲನೆಯದಾಗಿ,
ಪರಮ ಪವಿತ್ರ ತ್ರಿತ್ವವನ್ನು ನೆನಪಿಗೆ ತಂದುಕೊಳ್ಳುತ್ತೇವೆ.
ಎರಡನೆಯದಾಗಿ,
ದೇವರ ಪುತ್ರ ನಮಗಾಗಿ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದರೆಂದು
ಜ್ಞಾಪಿಸಿಕೊಳ್ಳುತ್ತೇವೆ.
60. ಶಿಲುಬೆಯ ಗುರುತನ್ನು ಹಾಕುವುದರಿಂದ
ನಾವು ಪರಮತ್ರಿತ್ವವನ್ನು ಯಾವರೀತ ನೆನೆಯುತ್ತೇವೆ?
ಪಿತನ ಸುತನ ಮತ್ತು
ಪವಿತ್ರಾತ್ಮನ ನಾಮದಲ್ಲಿ ಎಂದು ಹೇಳುತ್ತಾ ಶಿಲುಬೆ ಗುರುತನ್ನು ಹಾಕುವುದರ ಮೂಲಕ ನಾವು ಪರಮ
ಪವಿತ್ರ ತ್ರಿತ್ವವನ್ನು ನೆನೆಯುತ್ತೇವೆ.
ಐದನೇ ಅನುಚ್ಛೇದ
62. ಪ್ರೇಷಿತರ ವಿಶ್ವಾಸ
ಸಂಗ್ರಹದ ಐದನೇ ಅನುಚ್ಛೇದ ಯಾವುದು?
‘ಪಾತಾಳಕ್ಕೆ
ಇಳಿದು ಮೂರನೇ ದಿನ ಮೃತರ ಮಧ್ಯದಿಂದ ಪುನರ್ಜೀವಂತರಾಗಿ ಎದ್ದರು’ ಎಂಬುದೇ ಐದನೇ ಅನುಚ್ಛೇದ.
63. ಪಾತಾಳಕ್ಕೆ ಇಳಿದರು ಎಂಬ
ಪದಗಳ ಅರ್ಥವೇನು?
ಪಾತಾಳಕ್ಕೆ
ಇಳಿದರು ಎಂಬ ಈ ಪದಗಳಿಂದ ಯೇಸುಕ್ರಿಸ್ತರು ಸತ್ತ ಬಳಿಕ ಅವರ ಪವಿತ್ರ ಆತ್ಮವು ಪಾತಾಳ ಲೋಕದ ‘ಶೆಯೋಲ್’
ಎಂಬ ಸ್ಥಳಕ್ಕೆ ಹೋಯಿತು ಎಂದು ತಿಳಿದುಕೊಳ್ಳುತ್ತೇವೆ.
64. ನೀತಿವಂತರ ಆತ್ಮಗಳು ‘ಶೆಯೋಲ್’
ಸ್ಥಳದಲ್ಲಿ ನೆಲೆಗೊಳಿಸಿದ್ದು ಏಕೆ?
ಕ್ರಿಸ್ತರು
ಸ್ವರ್ಗಸಾಮ್ರಾಜ್ಯವನ್ನು ತೆರೆಯದಿದ್ದುದರಿಂದ ನೀತಿವಂತರ ಆತ್ಮಗಳು ಸ್ವರ್ಗ ಸಾಮ್ರಾಜ್ಯಕ್ಕೆ
ಹೋಗಲು ಸಾಧ್ಯವಿರಲಿಲ್ಲ. ಆದ್ದರಿಂದ ‘ಶೆಯೋಲ್’ ಎಂಬ ಸ್ಥಳದಲ್ಲಿ ಅವು ನೆಲೆಗೊಂಡವು.
66. ‘ಮೂರನೇ ದಿನ ಮೃತರ
ಮಧ್ಯದಿಂದ ಪುನರ್ಜೀವಂತರಾಗಿ ಎದ್ದರು’ ಎಂಬ ಪದಗಳ ಅರ್ಥವೇನು?
‘ಮೂರನೇ
ದಿನ ಮೃತರ ಮಧ್ಯದಿಂದ ಪುನರ್ಜೀವಂತರಾಗಿ ಎದ್ದರು’ ಎಂಬ ಪದಗಳ ಅರ್ಥವೇನೆಂದರೆ,
ಯೇಸುಕ್ರಿಸ್ತರು ಮೃತರಾದ ಮೇಲೆ ಅವರನ್ನು ಮೂರು ದಿನಗಳ ಮಟ್ಟಿಗೆ
ಭೂಸ್ಥಾಪನೆ ಮಾಡಲಾಯಿತು. ಆನಂತರ ಅವರ ಪರಿಶುದ್ಧ ಶರೀರವನ್ನು ಪಿತ ದೇವರು ಮೂರನೇ ದಿನ ಮತ್ತೆ
ಜೀವಕ್ಕೆ ಎಬ್ಬಿಸಿದರು.
67. ಯಾವ ದಿನ ಕ್ರಿಸ್ತರು
ಮೃತರ ಮಧ್ಯದಿಂದ ಮರಳಿ ಜೀವಂತರಾಗಿ ಎದ್ದರು?
ಪಾಸ್ಖ
ಭಾನುವಾರದಂದು ಕ್ರಿಸ್ತರು ಮೃತರ ಮಧ್ಯದಿಂದ ಮರಳಿ ಜೀವಂತರಾಗಿ ಎದ್ದರು.
ಆರನೇ ಅನುಚ್ಛೇದ
68. ಪ್ರೇಷಿತರ ವಿಶ್ವಾಸ
ನಿವೇದನೆಯ ಆರನೇ ಅನುಚ್ಛೇದ ಯಾವುದು?
ಸ್ವರ್ಗಕ್ಕೇರಿ
ಸರ್ವಶಕ್ತ ದೇವಪಿತನ ಬಲಗಡೆಯಲ್ಲಿ ಆಸೀನರಾಗಿದ್ದಾರೆ, ಇದೇ
ಆರನೇ ಅನುಚ್ಛೇದ.
69. ಸ್ವರ್ಗಕ್ಕೇರಿದರು ಎಂಬ
ಪದದ ಅರ್ಥವೇನು?
ನಮ್ಮ
ಪ್ರಭು ಪುನರುತ್ಥಾನರಾದ ಬಳಿಕ ನಾಲ್ವತ್ತನೇ ದಿನ, ಅಂದರೆ
ಸ್ವರ್ಗಾರೋಹಣದ ದಿನ, ತಮ್ಮ
ಶರೀರ ಮತ್ತು ಆತ್ಮದೊಂದಿಗೆ ಸ್ವರ್ಗಕ್ಕೆ ಏರಿ ಹೋದರು ಎಂಬುದೇ ‘ಸ್ವರ್ಗಕ್ಕೇರಿದರು’ ಎಂಬ ಪದದ
ಅರ್ಥ.
70. ಸರ್ವಶಕ್ತ ದೇವ ಪಿತನ
ಬಲಗಡೆಯಲ್ಲಿ ಆಸೀನರಾಗಿದ್ದಾರೆ ಎಂಬ ಪದಗಳ ಅರ್ಥವೇನು?
ಸರ್ವಶಕ್ತ
ದೇವ ಪಿತನ ಬಲಗಡೆಯಲ್ಲಿ ಆಸೀನರಾಗಿದ್ದಾರೆ ಎಂದರೆ, ಕ್ರಿಸ್ತರು
ತಮ್ಮ ದೇವ ಸ್ವರೂಪದಲ್ಲಿ ತಂದೆಯಾದ ದೇವರಿಗೆ ಸರಿಸಮಾನರಾಗಿದ್ದಾರೆ ಮತ್ತು ಮಾನವ ಸ್ವಭಾವದಲ್ಲಿ
ಸ್ವರ್ಗದಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಅರ್ಥ.
ಏಳನೇ ಅನುಚ್ಛೇದ
71. ಪ್ರೇಷಿತರ ವಿಶ್ವಾಸ
ನಿವೇದನೆಯ ಏಳನೇ ಅನುಚ್ಛೇದ ಯಾವುದು?
‘ಅಲ್ಲಿಂದ
ಜೀವಂತರಿಗೂ ಮೃತರಿಗೂ ತೀರ್ಪು ಕೊಡಲು ಮರಳಿ ಬರುವರು’ ಎಂಬುದೇ ಏಳನೇ ಅನುಚ್ಛೇದ.
72. ಕ್ರಿಸ್ತರು ಮರಳಿ ಯಾವಾಗ
ಬರುತ್ತಾರೆ?
ಮಾನವ
ಜನಾಂಗಕ್ಕೆ ನ್ಯಾಯ ನಿರ್ಣಯ ಮಾಡಲು ಕ್ರಿಸ್ತರು ಸ್ವರ್ಗದಿಂದ ಕಡೆಯ ದಿನ ಮರಳಿ ಬರುವರು.
73. ಕ್ರಿಸ್ತರು ಯಾವ ವಿಷಯಗಳ
ಬಗ್ಗೆ ನ್ಯಾಯ ನಿರ್ಣಯ ಮಾಡುವರು?
ಕ್ರಿಸ್ತರು
ನಮ್ಮ ಯೋಚನೆಗಳನ್ನು, ನಮ್ಮ
ನುಡಿಗಳನ್ನು, ಕ್ರಿಯೆಗಳನ್ನು
ಮತ್ತು ಕರ್ತವ್ಯಲೋಪಗಳನ್ನು ಕುರಿತು ನ್ಯಾಯ ನಿರ್ಣಯ ಮಾಡುವರು.
74. ಕ್ರಿಸ್ತರು ದುಷ್ಟರಿಗೆ
ಏನನ್ನು ಹೇಳುವರು?
‘ಶಾಪಗ್ರಸ್ತರೇ,
ನನ್ನಿಂದ ತೊಲಗಿರಿ, ಪಿಶಾಚಿಗೂ
ಅವನ ದೂತರಿಗೂ ಸಿದ್ಧ ಮಾಡಿರುವ ಆರದ ಬೆಂಕಿಗೆ ಬೀಳಿರಿ’ ಎಂದು ಕ್ರಿಸ್ತರು ದುಷ್ಟರಿಗೆ ಹೇಳುವರು.
75. ಕ್ರಿಸ್ತರು ನೀತಿವಂತರಿಗೆ
ಏನೆಂದು ಹೇಳುವರು?
‘ಬನ್ನಿ,
ಲೋಕಾದಿಯಿಂದ ನಿಮಗಾಗಿ ಸಿದ್ಧ ಮಾಡಿದ ಸಾಮ್ರಾಜ್ಯವನ್ನು ನಿಮ್ಮ
ಸೊತ್ತಾಗಿ ಪಡೆಯಿರಿ’ ಎಂದು ಕ್ರಿಸ್ತರು ನೀತಿವಂತರಿಗೆ ಹೇಳುವರು.
76. ಪ್ರತಿಯೊಬ್ಬರೂ ತಮ್ಮ
ಮರಣದ ಸಮಯದಲ್ಲಿ ಹಾಗೂ ಕಡೆಯ ದಿನದಂದು ನ್ಯಾಯ ನಿರ್ಣಯಕ್ಕೆ ಒಳಗಾಗುವರೋ?
ಪ್ರತಿಯೊಬ್ಬರೂ
ತಮ್ಮ ಮರಣದ ಸಮಯದಲ್ಲಿ ಹಾಗೂ ಕಡೆಯ ದಿನದಂದು ನ್ಯಾಯ ನಿರ್ಣಯಕ್ಕೆ ಒಳಗಾಗುವರು. ‘ಪ್ರತಿಯೊಬ್ಬ
ಮಾನವನು ಸಾಯುವುದು ಒಂದೇ ಸಾರಿ. ಆನಂತರ ಅವನು ನ್ಯಾಯ ತೀರ್ಪಿಗೆ ಗುರಿಯಾಗಬೇಕು’
ಎಂಟನೇ ಅನುಚ್ಛೇದ
77. ಪ್ರೇಷಿತರ ವಿಶ್ವಾಸ
ನಿವೇದನೆಯ ಎಂಟನೇ ಅನುಚ್ಛೇದ ಯಾವುದು?
ಪವಿತ್ರಾತ್ಮರನ್ನು
ವಿಶ್ವಾಸಿಸುತ್ತೇನೆ ಎಂಬುದೇ ಎಂಟನೇ ಅನುಚ್ಛೇದ.
78.
ಪವಿತ್ರಾತ್ಮರು ಯಾರು?
ಪರಮತ್ರಿತ್ರ‍್ವದ
ಮೂರನೇ ವ್ಯಕ್ತಿಯೇ ಪವಿತ್ರಾತ್ಮರು.
79.
ಪವಿತ್ರಾತ್ಮರು ಯಾರಿಂದ ಹೊರಡುತ್ತಾರೆ?
ಪವಿತ್ರಾತ್ಮರು ಪಿತನಿಂದಲೂ ಸುತನಿಂದಲೂ ಹೊರಡುತ್ತಾರೆ.
80. ಪವಿತ್ರಾತ್ಮರು ಪಿತನಿಗೂ ಸುತನಿಗೂ ಸಮಾನರೆ?
ಪವಿತ್ರಾತ್ಮರು ಪಿತನಿಗೂ ಸುತನಿಗೂ ಸಮಾನರು, ಕಾರಣ, ಅವರ ಹಾಗೆಯೇ ಇವರೂ ಪ್ರಭುವು ಮತ್ತು
ದೇವರು ಆಗಿದ್ದಾರೆ.
81. ಪವಿತ್ರಾತ್ಮರು
ಪ್ರೇಷಿತರ ಮೇಲೆ ಯಾವಾಗ ಇಳಿದು ಬಂದರು?
ಪವಿತ್ರಾತ್ಮರು ಪಂಚಾಶತ್ತಮ ದಿನದಂದು ಅಗ್ನಿಜ್ವಾಲೆಗಳ ಕೆನ್ನಾಲಿಗೆಯ
ರೂಪದಲ್ಲಿ ಪ್ರೇಷಿತರ ಮೇಲೆ ಇಳಿದು ಬಂದರು.
82. ಪವಿತ್ರಾತ್ಮರು
ಪ್ರೇಷಿತರ ಮೇಲೆ ಏಕೆ ಇಳಿದು ಬಂದರು?
ಪ್ರೇಷಿತರ ವಿಶ್ವಾಸವನ್ನು ದೃಢಪಡಿಸಲು, ಅವರನ್ನು ಪಾವನಗೊಳಿಸಲು ಮತ್ತು
ಅವರಿಗೆ ಧರ್ಮಸಭೆಯನ್ನು ಪ್ರಾರಂಭಿಸುವಂತೆ ಶಕ್ತಿ ನೀಡಲು ಪವಿತ್ರಾತ್ಮರು ಅವರ ಮೇಲೆ ಇಳಿದು ಬಂದರು.
ಒಂಬತ್ತನೇ ಅನುಚ್ಛೇದ
83.
ಪ್ರೇಷಿತರ ವಿಶ್ವಾಸ ನಿವೇದನೆಯ ಒಂಬತ್ತನೆಯ ಅನುಚ್ಛೇದ ಯಾವುದು?
‘ಪವಿತ್ರ
ಕಥೋಲಿಕ ಧರ್ಮಸಭೆಯನ್ನೂ ಸಂತರ ಅನ್ಯೋನ್ಯತೆಯನ್ನೂ ವಿಶ್ವಾಸಿಸುತ್ತೇನೆ’; ಇದೇ ಒಂಬತ್ತನೆಯ
ಅನುಚ್ಛೇದ.
84. ಕಥೋಲಿಕ ಧರ್ಮಸಭೆ
ಎಂದರೇನು?
ಕಥೋಲಿಕ
ಧರ್ಮಸಭೆಯು ಒಂದೇ ನಾಯಕನ ನೇತೃತ್ವದಲ್ಲಿ ಬರುವ ಭಕ್ತಸಮೂಹ.
85. ಕಥೋಲಿಕ ಧರ್ಮಸಭೆಯ
ಶಿರಸ್ಸು ಯಾರು?
ನಮ್ಮ ‘ಪ್ರಭು
ಯೇಸುಕ್ರಿಸ್ತರೇ’ ನಮ್ಮ ಧರ್ಮಸಭೆಯ ಶಿರಸ್ಸು.
86. ಈ ಧರೆಯಲ್ಲಿ ಗೋಚರ
ಮುಖಂಡರಾಗಿ ಧರ್ಮಸಭೆಯಲ್ಲಿ ಯಾರಾದರೂ ಇದ್ದಾರೆಯೇ?
ಈ
ಧರೆಯಲ್ಲಿ ಗೋಚರ ಮುಖಂಡರಾಗಿ ರೋಮ್ ನಗರದ ಧರ್ಮಾಧ್ಯಕ್ಷರು, ಕ್ರಿಸ್ತರ ಪ್ರತಿನಿಧಿಯಾಗಿ
ಧರ್ಮಸಭೆಯಲ್ಲಿ ಇದ್ದಾರೆ.
87. ರೋಮಿನ ಧರ್ಮಾಧ್ಯಕ್ಷರು
ಧರ್ಮಸಭೆಯ ಶಿರಸ್ಸು ಹೇಗೆ?
ಕ್ರಿಸ್ತರು
ಸಂತ ಪೇತ್ರರನ್ನು ಧರ್ಮಸಭೆಯ ಶಿರಸ್ಸಾಗಿ ನೇಮಿಸಿದರು. ರೋಮಿನ ಧರ್ಮಾಧ್ಯಕ್ಷರು ಸಂತ ಪೇತ್ರರ
ಉತ್ತರಾಧಿಕಾರಿಗಳು. ಆದುದರಿಂದ ಅವರು ಧರ್ಮಸಭೆಯ ಶಿರಸ್ಸಾಗಿದ್ದಾರೆ.
88. ಕ್ರಿಸ್ತರು ಸಂತ ಪೇತ್ರನನ್ನು
ಧರ್ಮಸಭೆಯ ಮುಖ್ಯಸ್ಥನನ್ನಾಗಿ ನೇಮಕ ಮಾಡಿದರೆಂಬುದನ್ನು ನಾವು ಹೇಗೆ ಬಲ್ಲೆವು?
‘ನಿನ್ನ
ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು
ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು’ ಎಂದು ಕ್ರಿಸ್ತರು
ಪೇತ್ರನಿಗೆ ಹೇಳಿದರು. ಆದ್ದರಿಂದ ಕ್ರಿಸ್ತರು ಸಂತ ಪೇತ್ರನನ್ನು ಧರ್ಮಸಭೆಯ ಮುಖಂಡರನ್ನಾಗಿ ನೇಮಕ
ಮಾಡಿದರೆಂದು ನಾವು ಬಲ್ಲೆವು.
89. ರೋಮಿನ
ಧರ್ಮಾಧ್ಯಕ್ಷರನ್ನು ಏನೆಂದು ಕರೆಯುತ್ತಾರೆ?
ರೋಮಿನ
ಧರ್ಮಾಧ್ಯಕ್ಷರನ್ನು ಪೋಪ್ (ವಿಶ್ವಗುರುಗಳು)
ಎಂದು ಕರೆಯುತ್ತಾರೆ. ಆ ಪದವು ‘ತಂದೆ’ ಎಂಬ ಅರ್ಥವನ್ನು ಕೊಡುತ್ತದೆ.
90. ವಿಶ್ವಗುರುಗಳು ಸಕಲ
ಕ್ರೈಸ್ತರ ಧಾರ್ಮಿಕ ತಂದೆಯೇ?
ಹೌದು,
ವಿಶ್ವಗುರುಗಳು ಸಕಲ ಕ್ರೈಸ್ತರ ಧಾರ್ಮಿಕ ತಂದೆಯಾಗಿದ್ದಾರೆ.
91. ವಿಶ್ವಗುರುಗಳು ಸಕಲ
ಕ್ರೈಸ್ತರ ಕುರಿಗಾಹಿ ಮತ್ತು ಬೋಧಕರೇ?
ಕ್ರಿಸ್ತರು
ಸಂತ ಪೇತ್ರನನ್ನು ಇಡೀ ಮಂದೆಯ ಕುರಿಗಾಹಿಯನ್ನಾಗಿ ನೇಮಿಸಿದರು. ಪೇತ್ರನನ್ನು ಕುರಿತು
ಕ್ರಿಸ್ತರೇ, ‘ನನ್ನ ಮಂದೆಯನ್ನು ಮೇಯಿಸು, ನನ್ನ ಕುರಿಗಳನ್ನು ಕಾಯಿ’ ಎಂದು ಹೇಳಿದರು. ಆದ್ದರಿಂದ
ಪೋಪ್ ವಿಶ್ವಗುರುಗಳು ಸಕಲ ಕ್ರೈಸ್ತರ ಕುರಿಗಾಹಿ ಮತ್ತು ಬೋಧಕರು ಆಗಿದ್ದಾರೆ. ಪುನಃ ಕ್ರಿಸ್ತರು,
ಪೇತ್ರನ ವಿಶ್ವಾಸವು ಎಂದಿಗೂ ನಾಶವಾಗದಂತೆ ಪ್ರಾರ್ಥಿಸಿ ಆತನ ಸೋದರರನ್ನು ವಿಶ್ವಾಸದಲ್ಲಿ
ದೃಢಪಡಿಸುವಂತೆ ಆತನಿಗೆ ಕಟ್ಟಳೆಯಿತ್ತರು.
92. ವಿಶ್ವಗುರುಗಳು
ಅಸ್ಖಲಿತರೇ?
ಹೌದು.
ವಿಶ್ವಗುರುಗಳು ಅಸ್ಖಲಿತರಾಗಿದ್ದಾರೆ.
93. ವಿಶ್ವಗುರುಗಳು
ಅಸ್ಖಲಿತರು ಎಂದು ನೀನು ಹೇಳುವಾಗ ಅದರ ಅರ್ಥವೇನು?
ವಿಶ್ವಗುರುಗಳು
ಕುರಿಗಾಹಿ ಮತ್ತು ಸಕಲ ಕ್ರೈಸ್ತರ ಬೋಧಕರಾಗಿ ಇಡೀ ದರ್ಮಸಭೆಗೆ ಅನ್ವಯವಾಗುವಂತೆ ವಿಶ್ವಾಸ ಅಥವಾ
ನೈತಿಕ ವಿಷಯಗಳ ಬಗ್ಗೆ ಧರ್ಮತತ್ವಗಳನ್ನು ವ್ಯಾಖ್ಯಾನಿಸುತ್ತಾರೆ. ಈ ವಿಷಯಗಳಲ್ಲಿ ಪೋಪ್
ವಿಶ್ವಗುರುಗಳು ತಪ್ಪು ಮಾಡಲು ಸಾಧ್ಯವೇ ಇಲ್ಲ. ಆದ್ದರಿಂದ ವಿಶ್ವಗುರುಗಳು ಅಸ್ಖಲಿತರಾಗಿದ್ದಾರೆ.
94. ಕ್ರಿಸ್ತರ ಧರ್ಮಸಭೆಯಲ್ಲಿ
ಯಾವುದೇ ಚಿಹ್ನೆಗಳಿಂದ ನಾವು ಆಕೆಯನ್ನು ತಿಳಿಯಲು ಸಾಧ್ಯವೇ?
ಕ್ರಿಸ್ತರ
ಧರ್ಮಸಭೆಯನ್ನು ನಾಲ್ಕು ಚಿಹ್ನೆಗಳಿಂದ ನಾವು ಕಂಡುಕೊಳ್ಳಬಹುದು; ಆಕೆಯು ಏಕ, ಆಕೆಯು ಪವಿತ್ರಳು,
ಆಕೆಯು ಕಥೋಲಿಕಳು, ಆಕೆಯು ಪ್ರೇಷಿತಳು.
95. ಧರ್ಮಸಭೆ ಏಕ, ಹೇಗೆ?
ಧರ್ಮಸಭೆಯ
ಎಲ್ಲಾ ಸದಸ್ಯರು, ಒಂದೇ ವಿಶ್ವಾಸವನ್ನು ಒಪ್ಪಿಕೊಂಡಿದ್ದಾರೆ, ಒಂದೇ ಬಲಿಪೂಜೆ ಮತ್ತು
ಸಂಸ್ಕಾರಗಳನ್ನು ಹೊಂದಿದ್ದಾರೆ ಮತ್ತು ಒಬ್ಬ ನಾಯಕರಿಗೆ ಮಣಿದು ಬಾಳುತ್ತಾರೆ ಎಂದೇ ಧರ್ಮಸಭೆಯು
ಏಕ ಆಗಿದೆ.
96. ಧರ್ಮಸಭೆ ಪವಿತ್ರ ಹೇಗೆ?
ಆಕೆಯು
ಪವಿತ್ರ ತತ್ವಗಳನ್ನು ಬೋಧಿಸುತ್ತಾಳೆ, ಪವಿತ್ರವಾಗಿರಲು ಮತ್ತು ಪಾವನತೆಗೆ ಬೇಕಾದ ಎಲ್ಲ
ಸಾಧನಗಳನ್ನುಅರ್ಪಿಸುತ್ತಾಳೆ ಮತ್ತು ಆಕೆಯ ಅಸಂಖ್ಯಾತ ಮಕ್ಕಳ ಪಾವನತೆ ಅಸಾಧಾರಣವಾಗಿದೆ. ಎಂದೇ
ಧರ್ಮಸಭೆಯು ಪವಿತ್ರಳು.
97. ಕಥೋಲಿಕ ಎಂಬ ಪದದ
ಅರ್ಥವೇನು?
ಕಥೋಲಿಕ
ಎಂಬ ಪದದ ಅರ್ಥ ‘ಸಾರ್ವತ್ರಿಕ’
98. ಧರ್ಮಸಭೆಯು ಹೇಗೆ ಕಥೋಲಿಕ
ಅಥವಾ ಸಾರ್ವತ್ರಿಕ?
ಎಲ್ಲಾ
ಕಾಲದಲ್ಲಿಯೂ ಆಕೆಯು ಅಸ್ತಿತ್ವದಲ್ಲಿರುತ್ತಾಳೆ, ಸಕಲ ರಾಷ್ಟ್ರಗಳಿಗೂ ಬೋಧಿಸುತ್ತಾಳೆ, ಮತ್ತು
ಎಲ್ಲ ರಕ್ಷಣೆಯ ಸಂಪುಟವಾಗಿದ್ದಾಳೆ, ಎಂದೇ ಧರ್ಮಸಭೆಯು ಕಥೋಲಿಕ ಅಥವಾ ಸಾರ್ವತ್ರಿಕ.
99. ಧರ್ಮಸಭೆ
ಹೇಗೆ ಪ್ರೇಷಿತ?
ಧರ್ಮಸಭೆಯು
ಪ್ರೇಷಿತರ ಸಂಪ್ರದಾಯಗಳನ್ನೂ ತತ್ವಗಳನ್ನೂ ತನ್ನ ವಶದಲ್ಲಿ ಇಟ್ಟುಕೊಂಡಿದ್ದಾಳೆ. ತನ್ನ
ಧರ್ಮಗುರುಗಳ ಅವ್ಯಾಹತ ಉತ್ತರಾಧಿಕತ್ವದ ಮೂಲಕ ಆಜ್ಞೆಗಳನ್ನೂ ಧರ್ಮಪ್ರಸಾರ ಕಾರ್ಯಗಳನ್ನೂ ಅವರಿಂದ
ಪಡೆಯುತ್ತಾಳೆ, ಎಂದೇ ಧರ್ಮಸಭೆ ಪ್ರೇಷಿತಳು.
100.
ಧರ್ಮಸಭೆ ತನ್ನ ಬೋಧನೆಯಲ್ಲಿ ತಪ್ಪು ಮಾಡಲು ಸಾಧ್ಯವೇ?
ಧರ್ಮಸಭೆಯು
ವಿಶ್ವಾಸ ಅಥವಾ ನೈತಿಕ ವಿಷಯಗಳ ಬಗ್ಗೆ ಬೋಧಿಸುವಾಗ ತಪ್ಪು ಮಾಡಲು ಸಾಧ್ಯವಿಲ್ಲ. ಈ ಎರಡು
ವಿಷಯಗಳಲ್ಲಿ ಆಕೆಯು ನಮ್ಮ ಅಸ್ಖಲಿತ ಮಾರ್ಗದರ್ಶಕಿ.
ಆ. ಭರವಸೆ
135.
ವಿಶ್ವಾಸವೊಂದೇ ನಮ್ಮ ರಕ್ಷಣೆಗೆ ಸಾಕೇ?
ಸತ್ಕ್ರಿಯೆಗಳಿಲ್ಲದ ಬರೀ ವಿಶ್ವಾಸದಿಂದ
ನಾವು ರಕ್ಷಣೆಯನ್ನು ಪಡೆಯಲು ಸಾಧ್ಯವಿಲ್ಲ. ಅದರೊಂದಿಗೆ ಭರವಸೆ ಮತ್ತು ಪ್ರೀತಿಯನ್ನೂ
ಹೊಂದಿರಬೇಕು.
136.
ಭರವಸೆ ಎಂದರೇನು?
ಭರವಸೆ ಎಂಬುದು ದೇವರ ಪಾರಮಾರ್ಥಿಕ
ಕೊಡುಗೆ. ಇದರಿಂದಾಗಿ ಅವರು ನಮಗೆ ಆಜ್ಞಾಪಿಸುವುದನ್ನು ನಾವು ಮಾಡಿದರೆ ನಮಗೆ ನಿತ್ಯ ಜೀವವನ್ನೂ
ಅದನ್ನು ಪಡೆಯಲು ಅಗತ್ಯವಿದ್ದ ಸಾಧನಗಳನ್ನೂ ದಯಪಾಲಿಸುವರೆಂದು ನಾವು ದೃಢವಾಗಿ ನಂಬುತ್ತೇವೆ.
137. ದೇವರಲ್ಲಿ ನಾವು ಏಕೆ ಭರವಸೆ ಇಡಬೇಕು?
ದೇವರು ಅನಂತ ಒಳ್ಳೆಯವರೂ ಶಕ್ತಿಶಾಲಿಗಳೂ
ಮಾತ್ರವಲ್ಲ,
ತಾವು ಮಾಡಿದ
ವಾಗ್ದಾನಗಳಿಗೆ ನಿಷ್ಠೆಯುಳ್ಳವರು. ಆದುದರಿಂದ ನಾವು ಅವರಲ್ಲಿ ಭರವಸೆ ಇಡಬೇಕು.
138.
ನಮ್ಮಿಂದ ಯಾವುದಾದರೂ ಸತ್ಕಾರ್ಯ ಮಾಡಿ ರಕ್ಷಣೆಯನ್ನು ಗಳಿಸಲು ಸಾಧ್ಯವೇ?
ನಾವಾಗಿಯೇ ನಾವು ಯಾವ ಸತ್ಕಾರ್ಯವನ್ನೂ
ಮಾಡಿ ರಕ್ಷಣೆಯನ್ನು ಗಳಿಸಲು ಸಾಧ್ಯವಿಲ್ಲ. ದೇವರ ವರಪ್ರಸಾದದ ನೆರವು ನಮಗೆ ಅನಿವಾರ್ಯ.
139.
ವರಪ್ರಸಾದ ಎಂದರೇನು?
ವರಪ್ರಸಾದ ಎಂದರೆ ದೇವರ ಪಾರಮಾರ್ಥಿಕ
ಕೊಡುಗೆ. ಇದನ್ನ ನಮ್ಮ ಸಂತೃಪ್ತಿಗಾಗಿಯೂ ರಕ್ಷಣೆಗಾಗಿಯೂ ದೇವರು ತಮ್ಮ ಸ್ವ ಇಚ್ಛೆಯಿಂದ
ನಮಗೀಯುವರು.
140.
ಯಾವ ರೀತಿಯಲ್ಲಿ ನಾವು ದೇವರ ವರಪ್ರಸಾದವನ್ನು ಪಡೆಯಬಹುದು?
ಪ್ರಮುಖವಾಗಿ ಪ್ರಾರ್ಥನೆ ಮತ್ತು ಪವಿತ್ರ
ಸಂಸ್ಕಾರಗಳ ಮೂಲಕ ದೇವರ ವರಪ್ರಸಾದಗಳನ್ನು ನಾವು ಪಡೆಯಬಹುದು.
ಪ್ರಾರ್ಥನೆ
141.
ಪ್ರಾರ್ಥನೆ ಎಂದರೇನು?
ನಮ್ಮ ಹೃನ್ಮನಗಳನ್ನು ದೇವರಲ್ಲಿಗೆ
ಎತ್ತುವುದೇ ಪ್ರಾರ್ಥನೆ.
142.
ಯಾವ ರೀತಿಯಲ್ಲಿ ನಾವು ನಮ್ಮ ಹೃನ್ಮನಗಳನ್ನು ದೇವರೆಡೆಗೆ ಎತ್ತಬಹುದು?
ದೇವರ ಬಗ್ಗೆ ಯೋಚಿಸಿ, ಅವರನ್ನು ಪೂಜಿಸಿ, ಕೊಂಡಾಡಿ, ಅವರ ಉಪಕಾರ ಸ್ಮರಣೆ ಮಾಡಿ ಹಾಗೂ
ಅವರನ್ನು ಹರಸಿ ನಾವು ನಮ್ಮ ಹೃನ್ಮನಗಳನ್ನು ದೇವರಲ್ಲಿಗೆ ಎತ್ತಬಹುದು.
143.
ದೇವರ ಬಗ್ಗೆ ಯೋಚಿಸದೆ ಹಾಗೂ ತಾವು ಏನು ಹೇಳುತ್ತಾರೆಂದೂ ತಿಳಿಯದೆ ಪ್ರಾರ್ಥಿಸುವೆವೆಂದು
ಹೇಳುವವರು ನಿಜವಾಗಿಯೂ ಪ್ರಾರ್ಥಿಸುತ್ತಾರೆಯೇ?
ತಮ್ಮ ಪ್ರಾರ್ಥನೆಯಲ್ಲಿ ದೇವರ ವಿಷಯವಾಗಿ
ಯೋಚಿಸದವರು,
ತಾವು
ಪ್ರಾರ್ಥಿಸುವುದೇನೆಂದು ತಿಳಿಯದವರು ನಿಜವಾಗಿಯೂ ಪ್ರಾರ್ಥಿಸುವುದಿಲ್ಲ. ಸ್ವೇಚ್ಛೆಯಿಂದ ಇತರ
ವಿಷಯಗಳನ್ನು ನೆನೆಯುವವರು ದೇವನಿಂದನೆ ಮಾಡುತ್ತಾರೆ.
144.
ಸಕಲ ಪ್ರಾರ್ಥನೆಗಳಲ್ಲಿ ಸರ್ವಶ್ರೇಷ್ಠವಾದದ್ದು ಯಾವುದು?
ಪ್ರಭುವಿನ (ಸ್ವರ್ಗದಲ್ಲಿರುವ ನಮ್ಮ
ತಂದೆಯೇ) ಪ್ರಾರ್ಥನೆಯೇ ಸರ್ವಶ್ರೇಷ್ಠವಾದದ್ದು.
145.
ಪ್ರಭುವಿನ ಪ್ರಾರ್ಥನೆಯನ್ನು ಕಲಿಸಿದವರಾರು?
ಯೇಸುಕ್ರಿಸ್ತರೇ ಈ ಪ್ರಾರ್ಥನೆಯನ್ನು
ಕಲಿಸಿದರು.
146.
ಪ್ರಭುವಿನ ಪ್ರಾರ್ಥನೆಯನ್ನು ಹೇಳೋಣ:
ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮವು ಪೂಜಿತವಾಗಲಿ, ನಿಮ್ಮ ರಾಜ್ಯ ಬರಲಿ, ನಿಮ್ಮ ಚಿತ್ತ ಸ್ವರ್ಗದಲ್ಲಿ
ನೆರವೇರುವ ಪ್ರಕಾರ ಭುವಿಯಲ್ಲಿಯೂ ನೆರವೇರಲಿ, ನಮ್ಮ
ಅನುದಿನದ ಆಹಾರವನ್ನು ಇಂದು ನಮಗೆ ಕೊಡಿರಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ
ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸದೆ ಕೇಡಿನಿಂದ ನಮ್ಮನ್ನು ರಕ್ಷಿಸಿರಿ.
147.
ಪ್ರಭುವಿನ ಪ್ರಾರ್ಥನೆಯಲ್ಲಿ ಯಾರನ್ನು ನಮ್ಮ ತಂದೆ ಎಂದು ಕರೆಯಲಾಗಿದೆ?
ಪ್ರಭುವಿನ ಪ್ರಾರ್ಥನೆಯಲ್ಲಿ ದೇವರನ್ನು ‘ನಮ್ಮ
ತಂದೆ’ ಎಂದು ಕರೆಯಲಾಗಿದೆ.
148.
ದೇವರನ್ನು ನಮ್ಮ ತಂದೆ ಎಂದು ನಾವು ಏಕೆ ಕರೆಯುತ್ತೇವೆ?
ಪವಿತ್ರ ದೀಕ್ಷಾಸ್ನಾನದಿಂದ ಸರ್ವ
ಕ್ರೈಸ್ತರನ್ನೂ ತಮ್ಮ ಮಕ್ಕಳನ್ನಾಗಿ ಮಾಡಿದ ದೇವರನ್ನು ‘ನಮ್ಮ ತಂದೆ’ ಎಂದು ನಾವು ಕರೆಯುತ್ತೇವೆ.
149.
ದೇವರ ಸಕಲ ಮಾನವಕುಲದ ತಂದೆಯೂ ಹೌದೇ?
ಸಮಸ್ತ ಜನರನ್ನು ಸೃಷ್ಟಿಸಿ, ಪ್ರೀತಿಸಿ, ಸಲಹುವುದರಿಂದ ದೇವರು ಅಖಿಲ ಮಾನವಕುಲದ
ತಂದೆ ಹೌದು.
150.
ದೇವರನ್ನು ‘ನನ್ನ ತಂದೆಯೇ’ ಎಂದು ಹೇಳುವ ಬದಲು ‘ನಮ್ಮ ತಂದೆಯೇ’ ಎಂದು ನಾವು ಏಕೆ ಕರೆಯುತ್ತೇವೆ?
ನಾವೆಲ್ಲರೂ ಸೋದರ ಸೋದರಿಯರಾಗಿದ್ದರು, ಕೇವಲ ನಮಗಾಗಿ ನಾವು
ಪ್ರಾರ್ಥಿಸುವುದಿಲ್ಲ. ಇತರರಿಗಾಗಿಯೂ ನಾವು ಪ್ರಾರ್ಥಿಸಬೇಕಾಗಿರುವುದರಿಂದ ನನ್ನ ತಂದೆಯೇ ಎಂದು
ಹೇಳದೆ ‘ನಮ್ಮ ತಂದೆಯೇ’ ಎಂದು ಸಂಬೋಧಿಸುತ್ತೇವೆ.
151.
‘ನಿಮ್ಮ ನಾಮ ಪೂಜಿತವಾಗಲಿ’ ಎಂದು ಹೇಳುವಾಗ ಯಾವುದಕ್ಕೋಸ್ಕರ ನಾವು ಪ್ರಾರ್ಥಿಸುತ್ತೇವೆ?
‘ನಿಮ್ಮ ನಾಮ ಪೂಜಿತವಾಗಲಿ’ ಎಂದು
ಹೇಳುವಾಗ ದೇವರನ್ನು ಎಲ್ಲ ಸೃಷ್ಟಿಯು ತಿಳಿಯಲಿ, ಪ್ರೀತಿಸಲಿ
ಹಾಗೂ ಸೇವೆ ಸಲ್ಲಿಸಲಿ ಎಂದೇ ನಾವು ಪ್ರಾರ್ಥಿಸುತ್ತೇವೆ.
152.
‘ನಿಮ್ಮ ರಾಜ್ಯ ಬರಲಿ’ ಎಂದು ಹೇಳುವಾಗ ನಾವು ಯಾವುದಕ್ಕೋಸ್ಕರ ಪ್ರಾರ್ಥಿಸುತ್ತೇವೆ?
‘ನಿಮ್ಮ ರಾಜ್ಯ ಬರಲಿ’ ಎಂದು ನಾವು
ಹೇಳುವಾಗ ದೇವರು ತಮ್ಮ ವರಪ್ರಸಾದದಿಂದ ಈ ಲೋಕದಲ್ಲಿ ಸಮಸ್ತರ ಹೃದಯಗಳಲ್ಲಿ ಬಂದು ನೆಲಸಲಿ ಹಾಗೂ
ನಮ್ಮೆಲ್ಲರನ್ನೂ ಕೊನೆಗೆ ತಮ್ಮ ಸ್ವರ್ಗೀಯ ರಾಜ್ಯಕ್ಕೆ ಕರೆದೊಯ್ಯಲಿ ಎಂದು ನಾವು
ಪ್ರಾರ್ಥಿಸುತ್ತೇವೆ.
153.
‘ನಿಮ್ಮ ಚಿತ್ತ ಸರ್ಗದಲ್ಲಿ ನೆರವೇರುವ ಪ್ರಕಾರ ಭುವಿಯಲ್ಲಿಯೂ ನೆರವೇರಲಿ’ ಎಂದು ಹೇಳುವಾಗ ನಾವು
ಯಾವುದಕ್ಕೋಸ್ಕರ ಪ್ರಾರ್ಥಿಸುತ್ತೇವೆ?
‘ನಿಮ್ಮ ಚಿತ್ತ ಸರ್ಗದಲ್ಲಿ ನೆರವೇರುವ
ಪ್ರಕಾರ ಭುವಿಯಲ್ಲಿಯೂ ನೆರವೇರಲಿ’ ಎಂದು ಹೇಳುವಾಗ ಸ್ವರ್ಗದಲ್ಲಿ ಸಂತರು ಮಾಡುವಂತೆ ಅವರ
ಚಿತ್ತವನ್ನು ನಾವೆಲ್ಲರೂ ಮಾಡಲು ನಮಗೆ ಬೇಕಾದ ಶಕ್ತಿ ಮತ್ತು ವರಪ್ರಸಾದವನ್ನು ದೇವರು ನೀಡಲೆಂದು
ನಾವು ಪ್ರಾರ್ಥಿಸುತ್ತೇವೆ.
155.
‘ನಮ್ಮ ಅನುದಿನದ ಆಹಾರವನ್ನು ಇಂದು ನಮಗೆ ಕೊಡಿರಿ’ ಎಂದು ಹೇಳುವಾಗ ನಾವು ಯಾವುದಕ್ಕೋಸ್ಕರ
ಪ್ರಾರ್ಥಿಸುತ್ತೇವೆ?
‘ನಮ್ಮ ಅನುದಿನದ ಆಹಾರವನ್ನು ಇಂದು ನಮಗೆ
ಕೊಡಿರಿ’ ಎಂದು ಹೇಳುವಾಗ ನಮ್ಮ ಆತ್ಮಕ್ಕೂ ಶರೀರಕ್ಕೂ ಅವಶ್ಯವಾದುದನ್ನು ದೇವರು ದಿನಂಪ್ರತಿ ದಯಪಾಲಿಸಲೆಂದು
ನಾವು ಪ್ರಾರ್ಥಿಸುತ್ತೇವೆ.
156.
‘ನಮಗೆ ತಪ್ಪು ಮಾಡಿದರನ್ನು ನಾವು ಕ್ಷಮಿಸುವ ಪ್ರಕಾರ ನಮ್ಮ ಪಾಪಗಳನ್ನು ಕ್ಷಮಿಸಿರಿ’ ಎಂದು
ಹೇಳುವಾಗ ನಾವು ಯಾವುದಕ್ಕೋಸ್ಕರ ಪ್ರಾರ್ಥಿಸುತ್ತೇವೆ?
‘ನಮಗೆ ತಪ್ಪು ಮಾಡಿದವರನ್ನು ನಾವು
ಕ್ಷಮಿಸುವ ಪ್ರಕಾರ ನಮ್ಮ ಪಾಪಗಳನ್ನು ಕ್ಷಮಿಸಿರಿ’ ಎಂದು ಹೇಳುವಾಗ ನಮಗೆ ಹಾನಿ ಮಾಡಿದವರನ್ನು
ನಾವು ಕ್ಷಮಿಸುವಂತೆ ದೇವರೂ ನಮ್ಮ ಪಾಪಗಳನ್ನು ಮನ್ನಿಸಲೆಂದು ನಾವು ಪ್ರಾರ್ಥಿಸುತ್ತೇವೆ.
157.
‘ಕೇಡಿನಿಂದ ನಮ್ಮನ್ನು ರಕ್ಷಿಸಿರಿ’ ಎಂದು ಹೇಳುವಾಗ ನಾವು ಯಾವುದಕ್ಕೋಸ್ಕರ ಪ್ರಾರ್ಥಿಸುತ್ತೇವೆ?
‘ಕೇಡಿನಿಂದ ನಮ್ಮನ್ನು ರಕ್ಷಿಸಿರಿ’
ಎಂದು ಹೇಳುವಾಗ ನಮ್ಮ ದೇಹಾತ್ಮಗಳನ್ನು ಎಲ್ಲ ರೀತಿಯ ಕೇಡುಗಳಿಂದ ಬಿಡುಗಡೆಗೊಳಿಸಿರಿ ಎಂದು ನಾವು
ದೇವರಲ್ಲಿ ಪ್ರಾರ್ಥಿಸುತ್ತೇವೆ.
158.
ದೇವದೂತರನ್ನೂ ಸಂತರನ್ನೂ ನಮಗೋಸ್ಕರ ಪ್ರಾರ್ಥಿಸಿರಿ ಎಂದು ನಾವು ವಿನಂತಿಸಬಹುದೇ?
ದೇವದೂತರೂ ಸಂತರೂ ನಮ್ಮ ಸ್ನೇಹಿತರು
ಹಾಗೂ ಸೋದರ ಸೋದರಿಯರು,
ಮಾತ್ರವಲ್ಲ
ಅವರ ಪ್ರಾರ್ಥನೆಗೆ ದೇವರು ಹೆಚ್ಚಿನ ಗಮನ ಕೊಡುವರು ಎಂದೇ ನಮಗಾಗಿ ಪ್ರಾರ್ಥಿಸಿರಿ ಎಂದು ನಾವು
ಅವರಲ್ಲಿ ವಿನಂತಿಸುವುದು ಸೂಕ್ತ.
159.
ದೇವದೂತರಿಗೂ ಸಂತರಿಗೂ ಭೂಮಿಯಲ್ಲಿ ಏನು ನಡೆಯುತ್ತಿದು ಎಂಬುದು ತಿಳಿದಿರುತ್ತದೆ ಎಂಬುದನ್ನು
ಹೇಗೆ ಅರಿಯಬಹುದು?
ದೇವದೂತರಿಗೂ ಸಂತರಿಗೂ ಭೂಮಿಯಲ್ಲಿ ಏನು
ನಡೆಯುತ್ತಿದು ಎಂಬುದು ತಿಳಿದಿರುತ್ತದೆ. ಯೇಸುಸ್ವಾಮಿಯ ಮಾತುಗಳಿಂದ ನಾವು ಇದನ್ನು ಅರಿಯಬಹುದು:
“ಒಬ್ಬ ಪಾಪಿ ಪ್ರಾಯಶ್ಚಿತ್ತ ಮಾಡುವಾಗ ದೇವದೂತರಲ್ಲಿ ಎಷ್ಟೋ ಗೆಲುವಿರುವುದು. ”
160.
ಧರ್ಮಸಭೆ ಪೂಜ್ಯ ಕನ್ಯಾಮರಿಯಮ್ಮನವರಿಗೆ ಹೇಳುವ ಮುಖ್ಯ ಪ್ರಾರ್ಥನೆ ಯಾವುದು?
ಧರ್ಮಸಭೆ ಪೂಜ್ಯ ಕನ್ಯಾಮರಿಯಮ್ಮನವರಿಗೆ
ಹೇಳುವ ಮುಖ್ಯ ಪ್ರಾರ್ಥನೆಯೇ ‘ನಮೋ ಮರಿಯಾ” ಪ್ರಾರ್ಥನೆ.
161.
ಮಂಗಳವಾರ್ತೆಯ ಪ್ರಾರ್ಥನೆ ಹೇಳುವುದುಃ
ನಮೋ ಮರಿಯಾ, ವರಪ್ರಸಾದ ಪೂರ್ಣೇ, ಪ್ರಭುವು ನಿಮ್ಮೊಡನೆ ಇದ್ದಾರೆ.
ಸ್ತ್ರೀಯರಲ್ಲಿ ನೀವು ಧನ್ಯರು ಮತ್ತು ನಿಮ್ಮ ಉದರದ ಫಲವಾದ ಶ್ರೀಯೇಸುವೂ ಧನ್ಯರು.
ಸಂತ ಮರಿಯಾ, ದೇವಮಾತೆಯೇ, ಪಾಪಿಗಳಾಗಿರುವ ನಮಗಾಗಿ ಈಗಲೂ ನಮ್ಮ
ಮರಣದ ಸಮಯದಲ್ಲಿಯೂ ಪ್ರಾರ್ಥಿಸಿರಿ.
ಆಮೆನ್.
162.
ಮಂಗಳವಾರ್ತೆ ಪ್ರಾರ್ಥನೆಯ ಮೊದಲ ಭಾಗವನ್ನು ಯಾರು ಹೇಳಿದರು?
ಗಬ್ರಿಯೇಲ್ ದೂತನು ಮತ್ತು
ಪವಿತ್ರಾತ್ಮರಿಂದ ಪ್ರೇರಣೆಗೊಂಡ ಸಂತ ಎಲಿಜಬೇತಮ್ಮನವರು ಮಂಗಳವಾರ್ತೆ ಪ್ರಾರ್ಥನೆಯ ಮೊದಲನೆಯ
ಭಾಗವನ್ನು ಹೇಳಿದರು.
163.
ಮಂಗಳವಾರ್ತೆ ಪ್ರಾರ್ಥನೆಯ ಎರಡನೆಯ ಭಾಗವನ್ನು ಯಾರು ರಚಿಸಿದರು?
ದೇವರ ಧರ್ಮಸಭೆಯು ಪವಿತ್ರಾತ್ಮರ
ಮಾರ್ಗದರ್ಶನದ ಮೂಲಕ ಮಂಗಳವಾರ್ತೆ ಪ್ರಾರ್ಥನೆಯ ಎರಡನೆಯ ಭಾಗವನ್ನು ರಚಿಸಿತು.
164.
ನಮೋ ಮರಿಯಾ ಪ್ರಾರ್ಥನೆಯನ್ನು ನಾವು ಆಗಾಗ ಹೇಳುವುದು ಏಕೆ?
ನಮೋ ಮರಿಯಾ ಪ್ರಾರ್ಥನೆಯನ್ನು ನಾವು
ದೇವಪುತ್ರರ ಮನುಷ್ಯಾವತಾರವನ್ನು ಸ್ಮರಿಸಲು ಮತ್ತು ದೇವಮಾತೆ ಮರಿಯಮ್ಮನವರನ್ನು ಗೌರವಿಸಲು ಆಗಾಗ
ಹೇಳುತ್ತೇವೆ.
165.
ನಮೋ ಮರಿಯಾ ಪ್ರಾರ್ಥನೆಯನ್ನು ನಾವು ಆಗಾಗ ಹೇಳಲು ಇನ್ನೂ ಬೇರೆ ಕಾರಣವಿದಯೇ?
ನಮೋ ಮರಿಯಾ ಪ್ರಾರ್ಥನೆಯನ್ನು ನಾವು
ಆಗಾಗ ಹೇಳಲು ಇನ್ನೂ ಬೇರೆ ಕಾರಣವಿದೆ: ಪಾಪಿಗಳಾದ ನಮಗಾಗಿ ಎಂದೆಂದೂ, ವಿಶೇಷವಾಗಿ ನಮ್ಮ ಮರಣದ
ಘಳಿಗೆಯಲ್ಲೂ ಆಕೆ ನಮಗಾಗಿ ಭಿನ್ನವಿಸಲೆಂದೇ ನಾವು ಈ ಪ್ರಾರ್ಥನೆಯನ್ನು ಹೇಳುತ್ತೇವೆ.
166.
ಕನ್ಯಾ ಮರಿಯಮ್ಮನವರಲ್ಲಿ ಕಥೋಲಿಕ ಧರ್ಮಸಭೆಗೆ ವಿಶೇಷ ಭಕ್ತಿ ಇರುವುದೇಕೆ?
ಆಕೆ ದೇವರ ಅಮಲೋದ್ಭವ ಕನ್ಯಾಮಾತೆಯಾಗಿ
ಇರುವುದರಿಂದ ಕನ್ಯಾಮರಿಯಮ್ಮನವರಲ್ಲಿ ಕಥೋಲಿಕ ಧರ್ಮಸಭೆಗೆ ವಿಶೇಷ ಭಕ್ತಿ ಇರುವುದು.
167.
ಕನ್ಯಾ ಮರಿಯಮ್ಮನವರು ದೇವರ ತಾಯಿ ಹೇಗೆ?
ಆಕೆಯು ಜನ್ಮವಿತ್ತ ಯೇಸುಕ್ರಿಸ್ತರು
ಮನುಷ್ಯರು ಮಾತ್ರವಲ್ಲ, ನಿಜ ದೇವರೂ ಆಗಿದ್ದಾರೆ ಎಂದೇ ಆಕೆ ದೇವರ ತಾಯಿ.
168.
ಕನ್ಯಾಮರಿಯಮ್ಮನವರು ನಮಗೂ ತಾಯಿಯೇ?
ಯೇಸುವಿನ ಸೋದರ ಸೋದರಿಯರಾದ ನಾವು ಆಕೆಯ
ಮಕ್ಕಳು. ಆದುದರಿಂದ ಆಕೆ ನಮಗೂ ತಾಯಿ.
169.
ಕನ್ಯಾಮರಿಯಮ್ಮನವರ ಸ್ವರ್ಗ ಸ್ವೀಕರಣ ಎಂದರೇನು?
ದೇವರ ಶಕ್ತಿಯಿಂದ ಮರಿಯಮ್ಮನವರು ತನ್ನ
ಇಹಲೋಕದ ಬಾಳು ಕೊನೆಗೊಂಡಿದ್ದೇ ಶರೀರ ಮತ್ತು ಆತ್ಮ ಸಮೇತ ನಿತ್ಯಾನಂದದಲ್ಲಿ ಪಾಲುಗೊಳ್ಳಲು
ಸ್ವರ್ಗವನ್ನು ಸೇರಿದರೆಂದೂ, ಈಗ ಆಕೆ ಇಹಪರಲೋಕದ ಸಾಮ್ರಾಜ್ಞಿಯಾಗಿ ರಾರಾಜಿಸುವುದು ಸ್ವರ್ಗಸ್ವೀಕಾರದ
ಅರ್ಥ.
170.
ಕನ್ಯಾಮರಿಯಮ್ಮನವರ ಸ್ವರ್ಗಸ್ವೀಕಾರವು ವಿಶ್ವಾಸ ಪ್ರಮಾಣ ಸೂತ್ರವೇ?
ಕನ್ಯಾಮರಿಯಮ್ಮನವರ ಸ್ವರ್ಗಸ್ವೀಕಾರವು
ವಿಶ್ವಾಸಪ್ರಮಾಣದ ಸೂತ್ರ. ಧರ್ಮಸಭೆಯ ಅಸ್ಖಲಿತ ಅಧಿಕಾರದಿಂದ ಉದ್ಘೋಷಿಸಲಾದುದರಿಂದ ಮರಿಯಮ್ಮನವರ ಸ್ವರ್ಗಸ್ವೀಕಾರವು
ವಿಶ್ವಾಸ ಪ್ರಮಾಣ ಸೂತ್ರ.
ಇ. ಪ್ರೀತಿ
ದೈವಾಜ್ಞೆಗಳು
171.
ಪ್ರೀತಿ ಎಂದರೇನು?
ಪ್ರೀತಿಯು ದೇವರೀಯುವ ಪಾರಮಾರ್ಥಿಕ
ಕೊಡುಗೆ, ಇದರಿಂದಾಗಿ ಎಲ್ಲಕ್ಕೂ ಮಿಗಿಲಾಗಿ ದೇವರನ್ನೂ ಅವರ ಸಲುವಾಗಿ ನಮ್ಮಂತೆಯೇ ಪರರನ್ನು ನಾವು
ಪ್ರೀತಿಸುತ್ತೇವೆ.
172.
ದೇವರಲ್ಲಿ ನಮಗಿರುವ ಪ್ರೀತಿಯನ್ನು ನಾವು ತೋರಿಸುವುದು ಹೇಗೆ?
ದೇವರ ಆಜ್ಞೆಗಳನ್ನು ಪಾಲಿಸುವುದರಿಂದ
ನಮಗೆ ಅವರಲ್ಲಿ ಪ್ರೀತಿ ಇದೆಯೆಂದು ನಾವು ತೋರಿಸುತ್ತೇವೆ. ಯೇಸುಸ್ವಾಮಿಯು ಹೀಗೆ ಹೇಳಿದ್ದಾರೆ: ‘ನನ್ನ
ಮೇಲೆ ನಿಮಗೆ ಪ್ರೀತಿ ಇದ್ದಲ್ಲಿ ನನ್ನ ಆಜ್ಞೆಗಳನ್ನು ಪಾಲಿಸಿರಿ’
173.
ದೈವಾಜ್ಞೆಗಳು ಎಷ್ಟು?
ದೈವಾಜ್ಞೆಗಳು ಹತ್ತು.
174.
ಆ ಹತ್ತು ಆಜ್ಞೆಗಳನ್ನು ನಿವೇದಿಸಿರಿ:
1. ನಾನೇ ನಿಮ್ಮ ಪ್ರಭು ದೇವರು. ನಿಮಗೆ
ನನ್ನ ಮುಂದೆ ಬೇರೆ ದೇವರುಗಳು ಇರಬಾರದು.
2. ಪ್ರಭು ದೇವರ ನಾಮವನ್ನು ವ್ಯರ್ಥವಾಗಿ
ಉಚ್ಚರಿಸಬಾರದು.
3. ದೇವರ ದಿನವನ್ನು ಪವಿತ್ರವಾಗಿ
ಆಚರಿಸಲು ಮರೆಯಬೇಡ.
4. ನಿನ್ನ ತಂದೆತಾಯಿಯರನ್ನುಗೌರವಿಸು.
5. ಕೊಲೆ ಮಾಡಬೇಡ.
6. ವ್ಯಭಿಚಾರ ಮಾಡಬೇಡ.
7. ಕದಿಯಬೇಡ.
8. ನಿನ್ನ ನೆರೆಯವರ ವಿರುದ್ಧ ಸುಳ್ಳುಸಾಕ್ಷಿ
ಹೇಳಬೇಡ.
9. ನಿನ್ನ ನೆರೆಯವನ ಪತ್ನಿಯನ್ನು
ಬಯಸಬೇಡ.
10. ನಿನ್ನ ನೆರೆಯವನ ವಸ್ತುಗಳನ್ನು
ಆಶಿಸಬೇಡ.
175.
ದಶಾಜ್ಞೆಗಳನ್ನು ಕೊಟ್ಟವರಾರು?
ಹಳೆಯ
ಒಡಂಬಡಿಕೆಯಲ್ಲಿ ದೇವರು ದಶಾಜ್ಞೆಗಳನ್ನು ಮೋಶೆಗೆ ಕೊಟ್ಟರು. ಹೊಸ ಒಡಂಬಡಿಕೆಯಲ್ಲಿ ಯೇಸುಸ್ವಾಮಿ
ಅವನ್ನು ಮತ್ತೂ ಸಮರ್ಥಿಸಿದರು.
176.
ಮೊದಲನೆಯ ದೈವಾಜ್ಞೆ ಯಾವುದು?
ಮೊದಲನೆಯ ದೈವಾಜ್ಞೆ “ನಾನೇ ನಿಮ್ಮ
ಪ್ರಭುದೇವರು, ನಿಮಗೆ ನನ್ನ ಮುಂದೆ ಇತರ ದೇವರುಗಳು ಇರಬಾರದು”
177.
ಮೊದಲನೆಯ ದೈವಾಜ್ಞೆ ಏನನ್ನು ಮಾಡುವಂತೆ ಜ್ಞಾಪಿಸುತ್ತದೆ?
ವಿಶ್ವಾಸ, ಭರವಸೆ, ಪ್ರೀತಿ ಮತ್ತು
ಧರ್ಮದಿಂದ ಏಕ, ಸತ್ಯ ಹಾಗೂ ಜೀವಂತ ದೇವರನ್ನು ಪೂಜಿಸಬೇಕೆಂದು ಮೊದಲನೆಯ ದೈವಾಜ್ಞೆ
ಆಜ್ಞಾಪಿಸುತ್ತದೆ.
178.
ವಿಶ್ವಾಸಕ್ಕೆ ವಿರುದ್ಧವಾದ ಪಾಪಗಳು ಯಾವುವು?
ಹುಸಿ ಮತಗಳನ್ನು ಅನುಸರಿಸುವುದು,
ಬೇಕೆಂತಲೇ ಧರ್ಮಸೂತ್ರಗಳನ್ನು ಅನುಮಾನಿಸುವುದು, ವಿಶ್ವಾಸ ಸೂತ್ರಗಳನ್ನು ಅಲ್ಲಗಳೆಯುವುದು ಮತ್ತು
ಧರ್ಮಸಭೆಯ ಬೋಧನೆಯನ್ನು ತಿಳಿಯುವುದರಲ್ಲಿ ನಿರಾಸಕ್ತಿ ತೋರುವುದು ಇವೇ ವಿಶ್ವಾಸಕ್ಕೆ
ವಿರುದ್ಧವಾದ ಪಾಪಗಳು.
179.
ನಮ್ಮ ವಿಶ್ವಾಸವನ್ನು ಕಳೆದುಕೊಳ್ಳುವ ಆಪತ್ತನ್ನು ನಾವೇ ಹೇಗೆ ತಂದುಕೊಳ್ಳುತ್ತೇವೆ?
ನಮ್ಮ ಆಧ್ಯಾತ್ಮಿಕ ಕರ್ತವ್ಯಗಳ
ನಿರ್ಲಕ್ಷ್ಯ, ಕೆಟ್ಟ ಪುಸ್ತಕಗಳ ಪಠಣ, ದುಸ್ಸಂಗ, ಮಾದಕ ದ್ರವ್ಯಗಳ ಸೇವನೆ ಮತ್ತು ಕುಡುಕತನದಿಂದ
ನಮ್ಮ ವಿಶ್ವಾಸವನ್ನು ನಾವು ಕಳೆದುಕೊಳ್ಳಬಹುದು.
180.
ಭರವಸೆಗೆ ವಿರುದ್ಧವಾದ ಪಾಪಗಳು ಯಾವುವು?
ಹತಾಶೆ ಮತ್ತು ದುರಹಂಕಾರ ಭರವಸೆಗೆ
ವಿರುದ್ಧವಾದ ಪಾಪಗಳು.
181.
ಧರ್ಮಕ್ಕೆ ವಿರುದ್ಧವಾದ ಮುಖ್ಯಪಾಪಗಳು ಯಾವುವು?
ಸುಳ್ಳುದೇವರುಗಳನ್ನೋ ಮೂರ್ತಿಗಳನ್ನೋ
ಪೂಜಿಸುವುದು, ಹಾಗೂ ದೇವರೊಬ್ಬರಿಗೆ ಸಲ್ಲಬೇಕಾದ ಗೌರವವನ್ನು ಸೃಷ್ಟಿ ಮಾತ್ರಕ್ಕೆ ಕೊಡುವುದು
ಧರ್ಮಕ್ಕೆ ವಿರುದ್ಧವಾದ ಮುಖ್ಯ ಪಾಪಗಳು.
182.
ಮೊದಲನೆಯ ದೈವಾಜ್ಞೆ ಸ್ವರೂಪ ಮಾಡಲು ನಿಷೇಧಿಸುತ್ತದೆಯೇ?
ಸ್ವರೂಪಗಳನ್ನು ಮಾಡುವುದನ್ನು ಮೊದಲನೆಯ
ದೈವಾಜ್ಞೆ ನಿಷೇಧಿಸುವುದಿಲ್ಲ. ದೇವರುಗಳಾಗಿ ಪೂಜಿಸಿ ಗೌರವಿಸುವುದಕ್ಕೆ ಮೂರ್ತಿಗಳನ್ನು
ಮಾಡುವುದನ್ನು ಮಾತ್ರ ನಿಷೇಧಿಸುತ್ತದೆ.
183.
ಮೊದಲನೆಯ ದೈವಾಜ್ಞೆ ಭೂತ ಮತ್ತು ಮೂಢನಂಬಿಕೆಯ ರೂಢಿಗಳೊಂದಿಗೆ ಸಂಪರ್ಕವನ್ನು ಮಾಡಲು
ನಿಷೇಧಿಸುತ್ತದೆಯೇ?
ಮೊದಲನೆಯ ದೈವಾಜ್ಞೆ ಅಂಧಶ್ರದ್ಧೆ,
ವಾಮಪಂಥದ ಆಚಾರ, ಪ್ರೇತಸಂಪರ್ಕ, ಕಣಿ ಕೇಳುವುದು, ಮಾಟ ಮಂತ್ರತಂತ್ರ, ಶಕುನ ಕನಸು ಇವುಗಳಲ್ಲಿ
ನಂಬಿಕೆಯನ್ನು ನಿಷೇಧಿಸುತ್ತದೆ.
184.
ಧರ್ಮನಿಂದೆ ಮತ್ತು ಧಾರ್ಮಿಕ ವಸ್ತುವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲಾ ಪಾಪಗಳನ್ನು ಮೊದಲನೆಯ
ದೈವಾಜ್ಞೆಯು ನಿಷೇಧಿಸುತ್ತದೆಯೇ?
ಧರ್ಮನಿಂದೆ ಮತ್ತು ಧಾರ್ಮಿಕ
ವಸ್ತುವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲಾ ಪಾಪಗಳನ್ನು ಮೊದಲನೆಯ ದೈವಾಜ್ಞೆ ನಿಷೇಧಿಸುತ್ತದೆ.
185.
ದೇವದೂತರಿಗೂ ಸಂತರಿಗೂ ದೈವಿಕ ಸನ್ಮಾನ ಅಥವಾ ಆರಾಧನೆಯನ್ನು ನೀಡುವುದನ್ನು ನಿಷೇಧಿಸುತ್ತದಯೇ?
ದೈವಿಕ ಸನ್ಮಾನ ಅಥವಾ ಆರಾಧನೆ ದೇವರಿಗೆ
ಮಾತ್ರ ಮೀಸಲಾದುದರಿಂದ ಅವನ್ನು ದೇವದೂತರಿಗೂ ಸಂತರಿಗೂ ನೀಡುವುದನ್ನು ನಿಷೇಧಿಸುತ್ತದೆ.
186.
ದೇವದೂತರಿಗೂ ಸಂತರಿಗೂ ಯಾವ ರೀತಿಯ ಸನ್ಮಾನ ಅಥವಾ ಆರಾಧನೆಯನ್ನು ನಾವು ನೀಡಬೇಕು?
ದೇವರಿಗಿಂತಲೂ ಕೆಳಮಟ್ಟದ ಸನ್ಮಾನ ಅಥವಾ
ಗೌರವವನ್ನು ದೇವರ ಸೇವಕರೂ ಆಪ್ತರೂ ಆದ ಅವರಿಗೆ ನಾವು ನೀಡಬೇಕು.
187.
ಧಾರ್ಮಿಕ ಪಟಗಳಿಗೂ, ಶಿಲುಬೆಗೂ ಮತ್ತು ಸಂತರ ಅವಶೇಷಗಳಿಗೂ ಯಾವ ರೀತಿಯ ಗೌರವವನ್ನು ನಾವು
ನೀಡಬೇಕು?
ಧಾರ್ಮಿಕ ಪಟಗಳೂ, ಶಿಲುಬೆಯೂ, ಸಂತರ
ಅವಶೇಷಗಳೂ ಕ್ರಿಸ್ತರಿಗೂ ಅವರ ಸಂತರಿಗೂ ಸಂಬಂಧಿಸಿರುವುದರಿಂದ ಹಾಗೂ ಅವರ
ಸ್ಮಾರಕಗಳಾಗಿರುವುದರಿಂದ ಅವುಗಳಿಗೆ ಪರ್ಯಾಯ ಗೌರವ ಸಲ್ಲಿಸಬೇಕು.
188.
ಅವಶೇಷಗಳಿಗೂ ಮತ್ತು ಸ್ವರೂಪಗಳಿಗೂ ನಾವು ಪ್ರಾರ್ಥಿಸಬಹುದೇ?
ಅವಶೇಷಗಳೂ ಸ್ವರೂಪಗಳೂ ನೋಡುವುದೂ ಇಲ್ಲ,
ಕೇಳುವುದೂ ಇಲ್ಲ. ಅವು ನಮಗೆ ನೆರವಾಗುವುದೂ ಇಲ್ಲ. ಎಂದೇ ಅವನ್ನು ಸಂಬೋಧಿಸಿ ನಾವು
ಪ್ರಾರ್ಥಿಸುವುದಿಲ್ಲ.
189.
ಎರಡನೆಯ ದೈವಾಜ್ಞೆ ಯಾವುದು?
ಎರಡನೆಯ ದೈವಾಜ್ಞೆ, “ಪ್ರಭುದೇವರ
ನಾಮವನ್ನು ವ್ಯರ್ಥವಾಗಿ ಉಚ್ಚರಿಸಬಾರದು”
190.
ಎರಡನೆಯ ದೈವಾಜ್ಞೆಯು ಏನು ಮಾಡುವುದಕ್ಕೆ ವಿಧಿಸುತ್ತದೆ?
ದೇವರನ್ನು, ಪುನೀತ ವ್ಯಕ್ತಿ ಹಾಗೂ
ವಸ್ತುಗಳನ್ನು ಕುರಿತು ಪೂಜ್ಯಭಾವದಿಂದ ಮಾತನಾಡಬೇಕೆಂದೂ, ನಮ್ಮ ಪ್ರಮಾಣಗಳನ್ನೂ ವ್ರತಗಳನ್ನೂ
ಆಚರಿಸುವುದರಲ್ಲಿ ತಪ್ಪಬಾರದೆಂದೂ ಎರಡನೆಯ ದೈವಾಜ್ಞೆಯು ವಿಧಿಸುತ್ತದೆ.
191.
ಎರಡನೆಯ ದೈವಾಜ್ಞೆ ಏನನ್ನು ನಿಷೇಧಿಸುತ್ತದೆ?
ಸುಳ್ಳು, ಅವಿವೇಕ, ಅನ್ಯಾಯ ಮತ್ತು
ಅನಾವಶ್ಯಕ ಪ್ರಮಾಣ, ದೇವದೂಷಣೆ, ಶಪಿಸುವುದು ಮತ್ತು ಭಂಡಮಾತು – ಇವನ್ನೆಲ್ಲ ಎರಡನೆಯ ದೈವಾಜ್ಞೆ
ನಿಷೇಧಿಸುತ್ತದೆ.
192.
ಆಣೆಯಿಡುವುದು ಅಥವಾ ಪ್ರಮಾಣ ಮಾಡುವುದು ಎಂದಾದರೂ ನ್ಯಾಯಸಮ್ಮತವೇ?
ದೇವರ ಗೌರವಕ್ಕೆ ಅಥವಾ ನಮ್ಮ ಇಲ್ಲವೇ
ಇತರರ ಒಳಿತಿಗೋಸ್ಕರ ಇದು ನ್ಯಾಯಸಮ್ಮತ.
193.
ಮೂರನೆಯ ದೈವಾಜ್ಞೆ ಯಾವುದು?
ಮೂರನೆಯ ದೈವಾಜ್ಞೆ, “ದೇವರ ದಿನವನ್ನು
ಪವಿತ್ರವಾಗಿ ಆಚರಿಸಲು ಮರೆಯಬೇಡ”
194.
ಮೂರನೆಯ ದೈವಾಜ್ಞೆ ನಮಗೆ ವಿಧಿಸುವುದು ಏನು?
ಭಾನುವಾರ ಮತ್ತು ವಿಶೇಷ ಹಬ್ಬದ
ದಿನವನ್ನು ಭಕ್ತಿಯಿಂದ ಪಾಲಿಸಬೇಕೆಂದು ಮೂರನೆಯ ದೈವಾಜ್ಞೆ ನಮಗೆ ವಿಧಿಸುತ್ತದೆ.
195.
ಭಾನುವಾರವನ್ನು ನಾವು ಪವಿತ್ರವಾಗಿ ಆಚರಿಸುವುದು ಹೇಗೆ?
ಬಲಿಪೂಜೆಯಲ್ಲಿ ಭಾಗವಹಿಸಿ, ದಿನವಿಡೀ
ಪರಿಶ್ರಮದ ಕೆಲಸದಲ್ಲಿ ತೊಡಗಿಸಿಕೊಳ್ಳದೆ ವಿಶ್ರಮಿಸುವುದರಿಂದ ಭಾನುವಾರವನ್ನು ನಾವು ಪವಿತ್ರವಾಗಿ
ಆಚರಿಸಿಕೊಳ್ಳಬಹುದು.
196.
ಪರಿಶ್ರಮದ ಕೆಲಸದಿಂದ ನಾವು ವಿರಾಮ ಪಡೆಯಬೇಕೆಂದು ನಮಗೆ ವಿಧಿಸಿರುವುದು ಏಕೆ?
ಪರಿಶ್ರಮ ಕೆಲಸವನ್ನು ನಾವು ತಡೆಹಿಡಿದರೆ
ಸಿಗುವ ವಿರಾಮವನ್ನು ಪ್ರಾರ್ಥನೆ ಮಾಡಲು, ಸಂಸ್ಕಾರಗಳನ್ನು ಸ್ವೀಕರಿಸಲು, ಹಿತೋಪದೇಶವನ್ನು ಕೇಳಲು
ಹಾಗೂ ಪವಿತ್ರ ಗ್ರಂಥಗಳನ್ನು ಓದಲು ಬಲಸಬಹುದಾದ್ದರಿಂದ ನಮಗೆ ಹೀಗೆ ವಿಧಿಸಿರುವುದು.
197.
ನಾಲ್ಕನೆಯ ದೈವಾಜ್ಞೆ ಯಾವುದು?
ನಾಲ್ಕನೆಯ ದೈವಾಜ್ಞೆ “ನಿನ್ನ ತಂದೆ
ತಾಯಿಯರನ್ನು ಗೌರವಿಸು”
198.
ನಾಲ್ಕನೆಯ ದೈವಾಜ್ಞೆ ನಮಗೆ ವಿಧಿಸುವುದು ಏನು?
ನಮ್ಮ ತಂದೆ ತಾಯಿಯರನ್ನು ಪ್ರೀತಿಸಿ,
ಗೌರವಿಸುತ್ತ ಪಾಪದ ವಿನಃ, ಅವರ ಮಾತನ್ನು ಪಾಲಿಸಬೇಕೆಂದು ನಾಲ್ಕನೆಯ ದೈವಾಜ್ಞೆ ನಮಗೆ
ವಿಧಿಸುತ್ತದೆ.
199.
ನಾವು ನಮ್ಮ ತಂದೆ ತಾಯಿಯರಿಗೆ ಮಾತ್ರ ವಿಧೇಯರಾಗಿರಬೇಕೇ?
ನಮ್ಮ ತಂದೆ ತಾಯಿಯರೊಡನೆ,
ಧರ್ಮಾಧ್ಯಕ್ಷರ, ಧರ್ಮಪಾಲಕರ, ರಾಜ್ಯಾಧಿಕಾರಿಗಳ ಹಾಗೂ ಇತರ ನ್ಯಾಯಪರ ಅಧಿಕಾರಿಗಳಿಗೂ
ವಿಧೇಯರಾಗಿರಬೇಕು.
200.
ನಮ್ಮ ತಂದೆ ತಾಯಿಯರ ಕೊರತೆಗಳನ್ನು ನೀಗಲು ನೆರವಾಗುವುದು ನಮ್ಮ ಕರ್ತವ್ಯವೇ?
ಅಹುದು. ನಮ್ಮ ತಂದೆ ತಾಯಿಯರ
ಆಧ್ಯಾತ್ಮಿಕ ಹಾಗೂ ಶಾರೀರಿಕ ಕೊರತೆಗಳನ್ನು ನೀಗಿಸಲು ನೆರವಾಗುವುದು ನಮ್ಮ ಕರ್ತವ್ಯ.
201.
ನಮ್ಮ ಧರ್ಮಗುರಗಳ ಅವಶ್ಯಕತೆಗಳಲ್ಲಿ ನೆರವು ನೀಡಲು ನಾವು ಬದ್ಧರೇ?
ನಮ್ಮ ಧರ್ಮಗುರಗಳ ಅವಶ್ಯಕತೆಗಳಲ್ಲಿ
ನೆರವು ನೀಡಲು ನಾವು ಬದ್ಧರು. ಸಂತ ಪೌಲರು ಹೇಳಿದ್ದಾರೆ: “ಶುಭಸಂದೇಶ ಪ್ರಚಾರಕರು ಶುಭಸಂದೇಶ
ಪ್ರಚಾರದ ಆದಾಯದಿಂದಲೇ ಜೀವನ ನಡೆಸಬೇಕೆಂದು ಪ್ರಭುವೇ ಆಜ್ಞಾಪಿಸಿದ್ದಾರೆ”
202.
ತಮ್ಮ ಮಕ್ಕಳ ವಿಷಯದಲ್ಲಿ ತಂದೆ ತಾಯಿಯರ ಕರ್ತವ್ಯವೇನು?
ತಮ್ಮ ಮಕ್ಕಳ ಅಗತ್ಯಗಳನ್ನು
ಪೂರೈಸುವುದು, ಅವರಿಗೆ ಬೋಧನೆಯಿತ್ತು ತಿದ್ದುವುದು ಹಾಗೂ ಅವರಿಗೆ ನೈಜ ಕಥೋಲಿಕ ಶಿಕ್ಷಣವನ್ನು
ಒದಗಿಸುವುದು – ಇವೇ ತಂದೆ ತಾಯಿಯವರ ಕರ್ತವ್ಯ.
203.
ಹಿರಿಯರ, ಉಪಾಧ್ಯಾಯರ ಹಾಗೂ ಇತರ ಅಧಿಕಾರಿಗಳ ಕರ್ತವ್ಯವೇನು?
ತಮ್ಮ ಆಶ್ರಯದಲ್ಲಿರುವವರ ತಕ್ಕ
ಆರೈಕೆಯನ್ನು ಮಾಡುವುದು ಹಾಗೂ ಅವರು ತಮ್ಮ ಧಾರ್ಮಿಕ ಕರ್ತವ್ಯಗಳನ್ನು ಪಾಲಿಸುವಂತೆ ನೆರವಾಗುವುದು
ಇದೇ ಹಿರಿಯರ, ಉಪಾಧ್ಯಾಯರ ಹಾಗೂ ಇತರ ಅಧಿಕಾರಿಗಳ ಕರ್ತವ್ಯ.
204.
ನಾಲ್ಕನೆಯ ದೈವಾಜ್ಞೆ ಏನನ್ನು ನಿಷೇಧಿಸುತ್ತದೆ?
ನಮ್ಮ ತಂದೆ ತಾಯಿಯರ ಹಾಗು ಗುರುಹಿರಿಯರ
ವಿಷಯದಲ್ಲಿ ಯಾವುದೇ ತಾತ್ಸಾರ, ಉದ್ದಟತನ ಮತ್ತು ಅವಿಧೇಯತೆ ತೋರ್ಪಡಿಸುವುದನ್ನು ನಾಲ್ಕನೆಯ
ದೈವಾಜ್ಞೆ ನಿಷೇಧಿಸುತ್ತದೆ.
205.
ಯಾವುದೇ ಗುಪ್ತ ಸಂಘವನ್ನು ಸೇರುವುದು ಪಾಪವೇ?
ಧರ್ಮಸಭೆಯ ಇಲ್ಲವೇ ದೇಶದ ವಿರುದ್ಧ ಒಳಸಂಚು
ಮಾಡುವ ಅಥವಾ ಈ ಗೋಪ್ಯತೆಗಾಗಿ ಧರ್ಮಸಭೆಯು ಖಂಡಿಸುವ ಯಾವುದೇ ಗುಪ್ತಸಂಘವನ್ನು ಸೇರುವುದ ಪಾಪ.
ಸಂತ ಪೌಲರೇ ಹೇಳುವಂತೆ: “ಪ್ರತಿಯೊಬ್ಬನೂ ಸರ್ವೋನ್ನತ ಅಧಿಕಾರಿಗಳಿಗೆ ಅಧೀನನಾಗಿರಬೇಕು”
206.
ಐದನೆಯ ದೈವಾಜ್ಞೆ ಯಾವುದು?
ಐದನೆಯ ದೈವಾಜ್ಞೆ, “ಕೊಲೆ ಮಾಡಬೇಡ”
207.
ಐದನೆಯ ದೈವಾಜ್ಞೆ ಯಾವುದನ್ನು ನಿಷೇಧಿಸುತ್ತದೆ?
ಸ್ವಯಂಚಿತ್ತದಿಂದ ಕೊಲ್ಲುವುದು, ಕಲಹ,
ಜಗಳ, ಹಾನಿಕರ ಮಾತುಗಳು, ಕೆಟ್ಟ ನಡತೆ ಹಾಗೂ ದುರ್ಮಾತೃಕೆ ಇವನ್ನೆಲ್ಲ ಐದನೆಯ ದೈವಾಜ್ಞೆ
ನಿಷೇಧಿಸುತ್ತದೆ.
208.
ಐದನೆಯ ದೈವಾಜ್ಞೆ ಕ್ರೋಧವನ್ನು ನಿಷೇಧಿಸುತ್ತದೆಯೇ?
ಕ್ರೋಧವನ್ನು ಮತ್ತೂ ಮಿಗಿಲಾಗಿ ದ್ವೇಷ
ಹಾಗೂ ಸೇಡು ತೀರಿಸುವುದನ್ನು ಐದನೆಯ ದೈವಾಜ್ಞೆ ನಿಷೇಧಿಸುತ್ತದೆ.
209.
ಐದನೆಯ ದೈವಾಜ್ಞೆ ಕೆಟ್ಟ ನಡತೆ ಮತ್ತು ದುರ್ಮಾತೃಕೆಯನ್ನೇಕೆ ನಿಷೇಧಿಸುತ್ತದೆ?
ನಮ್ಮ ನೆರೆಯವನ ಆತ್ಮಕ್ಕೆ ಹಾನಿ ತಂದು
ಅದರ ಸಾವಿಗೂ ಕಾರಣವಾಗುವುದರಿಂದ ಐದನೆಯ ದೈವಾಜ್ಞೆ ಕೆಟ್ಟ ನಡತೆ ಮತ್ತು ದುರ್ಮಾತೃಕೆಯನ್ನು
ನಿಷೇಧಿಸುತ್ತದೆ.
210.
ಆರನೆಯ ದೈವಾಜ್ಞೆ ಯಾವುದು?
ಆರನೆಯ ದೈವಾಜ್ಞೆ, “ವ್ಯಭಿಚಾರ ಮಾಡಬೇಡ”
211.
ಆರನೆಯ ದೈವಾಜ್ಞೆ ಏನನ್ನು ನಿಷೇಧಿಸುತ್ತದೆ?
ಅನ್ಯ ಸ್ತ್ರೀ, ಇಲ್ಲವೇ ಅನ್ಯ
ಪುರುಷನೊಂದಿಗೆ ಲೈಂಗಿಕ ವಿಷಯಗಳಲ್ಲಿ ಅಕ್ರಮವಾಗಿ ನಡೆಯುವುದನ್ನು ಆರನೆಯ ದೈವಾಜ್ಞೆ
ನಿಷೇಧಿಸುತ್ತದೆ.
212.
ಆರನೆಯ ದೈವಾಜ್ಞೆಯು ಯಾವುದೇ ಅಶ್ಲೀಲತೆಯನ್ನು ನಿಷೇಧಿಸುತ್ತದೆಯೇ?
ಯೋಚನೆಯಲ್ಲಿ, ನುಡಿಯಲ್ಲಿ ಮತ್ತು
ನಡೆಯಲ್ಲಿ ಅಶ್ಲೀಲವಾದುದೆಲ್ಲವನ್ನು ಆರನೆಯ ದೈವಾಜ್ಞೆ ನಿಷೇಧಿಸುತ್ತದೆ.
213.
ಅಶ್ಲೀಲವಾದ ನಾಟಕ, ನೃತ್ಯವನ್ನೆಲ್ಲ ಆರನೆಯ ದೈವಾಜ್ಞೆ ನಿಷೇಧಿಸುತ್ತದೆಯೇ?
ಅಶ್ಲೀಲವಾದ ನಾಟಕ, ನೃತ್ಯವನ್ನೆಲ್ಲ ಆರನೆಯ
ದೈವಾಜ್ಞೆ ನಿಷೇಧಿಸುತ್ತದೆ. ಅದನ್ನು ನೋಡುವುದೂ ಪಾಪವೇ.
214.
ಅಶ್ಲೀಲವಾದ ಹಾಡು, ಪುಸ್ತಕ ಹಾಗೂ ಚಿತ್ರಗಳನ್ನು ಆರನೆಯ ದೈವಾಜ್ಞೆ ನಿಷೇಧಿಸುತ್ತದೆಯೇ?
ಅಶ್ಲೀಲವಾದ ಹಾಡು, ಪುಸ್ತಕ ಹಾಗೂ
ಚಿತ್ರಗಳನ್ನು ಆರನೆಯ ದೈವಾಜ್ಞೆ ನಿಷೇಧಿಸುತ್ತದೆ. ಇವು ಆತ್ಮಕ್ಕೆ ಅಪಾರ ಹಾನಿಯನ್ನುಂಟು ಮಾಡುವುದರೊಂದಿಗೆ
ಮಾರಣಾಂತಿಕ ಪಾಪವನ್ನು ಗೈಯಲೂ ಪ್ರಚೋದಿಸುವುವು.
215.
ಏಳನೆಯ ದೈವಾಜ್ಞೆ ಏನು?
ಏಳನೆಯ ದೈವಾಜ್ಞೆ, “ಕದಿಯಬೇಡ”
216.
ಏಳನೆಯ ದೈವಾಜ್ಞೆ ಏನನ್ನು ನಿಷೇಧಿಸುತ್ತದೆ?
ಪರರ ಸೊತ್ತನ್ನು ಅನ್ಯಾಯವಾಗಿ
ಅಪಹರಿಸುವುದನ್ನೂ, ಇಟ್ಟುಕೊಳ್ಳುವುದನ್ನೂ ಏಳನೆಯ ದೈವಾಜ್ಞೆ ನಿಷೇಧಿಸುತ್ತದೆ.
217.
ಕೊಂಡುಕೊಳ್ಳುವಾಗ ಮಾರುವಾಗ ಯಾವುದೇ ರೀತಿಯಲ್ಲಿ ಮೋಸ ಮಾಡುವುದನ್ನು ಏಳನೆಯ ದೈವಾಜ್ಞೆ
ನಿಷೇಧಿಸುತ್ತದೆಯೇ?
ಕೊಂಡುಕೊಳ್ಳುವಾಗಲೂ ಮಾರುವಾಗಲೂ ಯಾವುದೇ
ರೀತಿಯಲ್ಲಿ ಮೋಸ ಮಾಡುವುದನ್ನು ಏಳನೆಯ ದೈವಾಜ್ಞೆ ನಿಷೇಧಿಸುತ್ತದೆ, ಮಾತ್ರವಲ್ಲ, ಪರರಿಗೆ
ಯಾವೊಂದು ಬಗೆಯ ನಷ್ಟ ಮಾಡುವುದನ್ನೂ ಇದು ನಿಷೇಧಿಸುತ್ತದೆ.
218.
ಅನ್ಯಾಯವಾಗಿ ಅಪಹರಿಸಿದ್ದನ್ನು ನಾವು ಹಿಂದಿರುಗಿಸುವುದು ನಮ್ಮ ಕರ್ತವ್ಯವೇ?
ಅನ್ಯಾಯವಾಗಿ ಅಪಹರಿಸಿದ್ದನ್ನು ನಾವು
ಶಕ್ತ್ಯಾನುಸಾರ ಹಿಂದಿರುಗಿಸಲೇಬೇಕು. ಇಲ್ಲದಿದ್ದರೆ ನಮ್ಮ ಪಾಪಕ್ಕೆ ಕ್ಷಮೆಯಿರದು. ಹಾಗೂ ನಮ್ಮ
ಸಾಲವನ್ನು ನಾವು ತೀರಿಸಲೇಬೇಕು.
219.
ಕಾರ್ಮಿಕರು ತಮ್ಮ ಮಾಲೀಕರ ಸಮಯವನ್ನೂ ಸರಕನ್ನೂ ಪೋಲು ಮಾಡುವುದು ತಪ್ಪೇ?
ಕಾರ್ಮಿಕರು ತಮ್ಮ ಮಾಲೀಕರ ಸಮಯವನ್ನೂ
ಸರಕನ್ನೂ ಪೋಲು ಮಾಡುವುದು ಸರಿಯಲ್ಲ. ಕಾರಣ ಆ ಸಮಯವೂ ಸರಕೂ ಕಾರ್ಮಿಕರ ಸೊತ್ತಲ್ಲ.
220.
ಎಂಟನೆಯ ದೈವಾಜ್ಞೆ ಏನು?
ಎಂಟನೆಯ ದೈವಾಜ್ಞೆ, “ನಿನ್ನ ನೆರೆಯವರ
ವಿರುದ್ಧ ಸುಳ್ಳುಸಾಕ್ಷಿ ಹೇಳಬೇಡ”
221.
ಎಂಟನೆಯ ದೈವಾಜ್ಞೆ ಏನನ್ನು ನಿಷೇಧಿಸುತ್ತದೆ?
ಸುಳ್ಳುಸಾಕ್ಷಿ, ದುಡುಕಿನ ತೀರ್ಪು ಹಾಗೂ
ಸುಳ್ಳು ಇವನ್ನು ಎಂಟನೆಯ ದೈವಾಜ್ಞೆ ನಿಷೇಧಿಸುತ್ತದೆ.
222.
ಸುಳ್ಳು ಆರೋಪ ಮತ್ತು ಮಿಥ್ಯಾಪವಾದವನ್ನು ಎಂಟನೆಯ ದೈವಾಜ್ಞೆ ನಿಷೇಧಿಸುತ್ತದೆಯೇ?
ಅಹುದು. ಸುಳ್ಳು ಆರೋಪ ಮತ್ತು
ಮಿಥ್ಯಾಪವಾದವನ್ನು ಎಂಟನೆಯ ದೈವಾಜ್ಞೆ ನಿಷೇಧಿಸುತ್ತದೆ ಮಾತ್ರವಲ್ಲ, ಅಲ್ಲಸಲ್ಲದ ಚಾಡಿ ಹೇಳಿ
ಮಾನನಷ್ಟ ಮಾಡುವುದೂ ನಿಷಿದ್ಧ.
223.
ನಿನ್ನ ನೆರೆಯವನನ್ನು ಕುರಿತು ಚಾಡಿ ಹೇಳಿ ನೀನು ನಷ್ಟ ಉಂಟುಮಾಡಿದರೆ ಆಗ ನಿನ್ನ ಕರ್ತವ್ಯವೇನು?
ನನ್ನ ನೆರೆಯವನನ್ನು ಕುರಿತು ಚಾಡಿ ಹೇಳಿ
ನಾನು ಮಾಡಿರುವ ನಷ್ಟವನ್ನು ನಾನು ತುಂಬಿಕೊಡಬೇಕು. ಹಾಗೂ ಕೈಯಲ್ಲಾದಷ್ಟು ಆತನ ಗೌರವವನ್ನು ನಾನು
ಹೆಚ್ಚಿಸಬೇಕು.
224.
ಒಂಬತ್ತನೆಯ ದೈವಾಜ್ಞೆ ಏನು?
ಒಂಬತ್ತನೆಯ ದೈವಾಜ್ಞೆ, “ನಿನ್ನ
ನೆರೆಯವನ ಪತ್ನಿಯನ್ನು ಬಯಸಬೇಡ”
225.
ಒಂಬತ್ತನೆಯ ದೈವಾಜ್ಞೆ ಏನನ್ನು ನಿಷೇಧಿಸುತ್ತದೆ?
ಸ್ವೇಚ್ಛೆಯಿಂದ ಅಶ್ಲೀಲ ವಿಷಯಗಳನ್ನು
ಯೋಚಿಸುವುದು, ಅಪೇಕ್ಷಿಸುವುದು ಹಾಗೂ ದೈಹಿಕವಾಗಿ ಲೈಂಗಿಕ ಸುಖ ಪಡುವುದು ಇವನ್ನೆಲ್ಲ ಒಂಬತ್ತನೆಯ
ದೈವಾಜ್ಞೆ ನಿಷೇಧಿಸುತ್ತದೆ.
226.
ಆರನೆಯ ಮತ್ತು ಒಂಬತ್ತನೆಯ ದೈವಾಜ್ಞೆಗಳನ್ನು ಮೀರುವಂತೆ ಪ್ರೇರಿಸುವ ಬೇರೆ ಪಾಪಗಳು ಯಾವುವು?
ಹೊಟ್ಟೆಬಾಕತನ, ಕುಡುಕತನ,
ಸ್ವೇಚ್ಛಾಭಾವ, ಆಲಸ್ಯ, ದುಸ್ಸಂಗ ಹಾಗೂ ಪ್ರಾರ್ಥನೆಯಲ್ಲಿ ಅಸಡ್ಡೆ ಇವೆಲ್ಲವೂ ಆರನೆಯ ಮತ್ತು
ಒಂಬತ್ತನೆಯ ದೈವಾಜ್ಞೆಗಳನ್ನು ಮೀರುವಂತೆ ಪ್ರೇರಿಸುವ ಬೇರೆ ಪಾಪಗಳು.
227.
ಹತ್ತನೆಯ ದೈವಾಜ್ಞೆ ಏನು?
ಹತ್ತನೆಯ ದೈವಾಜ್ಞೆ, “ನಿನ್ನ ನೆರೆಯವನ
ವಸ್ತುಗಳನ್ನು ಆಶಿಸಬೇಡ”
228.
ದೈವಾಜ್ಞೆಯ ಹತ್ತನೆಯ ಕಟ್ಟಳೆ ಏನನ್ನು ನಿಷೇಧಿಸುತ್ತದೆ?
ಪರರ ಸೊತ್ತುಗಳ ಲಾಭ ಸಂಪತ್ತನ್ನು ಕಂಡು
ಅಸೂಯೆ ಮತ್ತು ಅಪೇಕ್ಷೆ ಪಡುವುದು ಇದನ್ನೆಲ್ಲ ಹತ್ತನೆಯ ದೈವಾಜ್ಞೆ ನಿಷೇಧಿಸುತ್ತದೆ.
ಧರ್ಮಸಭೆಯ ಕಟ್ಟಳೆಗಳು
229.
ಧರ್ಮಸಭೆಗೆ ನಾವು ವಿಧೇಯರಾಗಿ ನಡೆಯಬೇಕೆ?
ಧರ್ಮಸಭೆಯ ಪಾಲಕರಿಗೆ ಯೇಸುಸ್ವಾಮಿಯೇ ಹೇಳಿದ್ದಾರೆ:
ನಿಮ್ಮನ್ನು ಆಲಿಸುವವರು ನನ್ನನ್ನೇ ಆಲಿಸಿದಂತೆ; ನಿಮ್ಮನ್ನು ಕಡೆಗಣಿಸುವವರು ನನ್ನನ್ನೇ
ಕಡೆಗಣಿಸಿದಂತೆ. ಎಂದೇ ನಾವು ಧರ್ಮಸಭೆಗೆ ವಿಧೇಯರಾಗಿ ನಡೆಯಬೇಕು.
230. ಧರ್ಮಸಭೆಯ ಪ್ರಮುಖ ಕಟ್ಟಳೆಗಳು
ಯಾವುವು?
1. ಆದಿತ್ಯವಾರಗಳಲ್ಲಿಯೂ ಕಟ್ಟಳೆ ಹಬ್ಬಗಳಲ್ಲಿಯೂ ಪೂರ್ಣ ಬಲಿಪೂಜೆಯಲ್ಲಿ ಭಾಗವಹಿಸುವುದು.
2. ವರ್ಷಕ್ಕೊಮ್ಮೆಯಾದರೂ ಪಾಪ ನಿವೇದನೆಯನ್ನು ಮಾಡುವುದು.
3. ಪಾಸ್ಖಕಾಲದಲ್ಲಾದರೂ ಪರಮ ಪ್ರಸಾದದಲ್ಲಿ ನಿನ್ನ ಸೃಷ್ಟಿಕರ್ತರನ್ನು ಸ್ವೀಕರಿಸುವುದು.
4. ಧರ್ಮಸಬೆಯು ನಿಗದಿಪಡಿಸಿದ ಉಪವಾಸ ಮತ್ತು ಮಾಂಸವರ್ಜಿತ ದಿನಗಳನ್ನು ಪಾಲಿಸುವುದು.
5. ಧರ್ಮಸಭೆಯ ಅವಶ್ಯಕತೆಗಳನ್ನು ಶಕ್ತಿಗನುಸಾರ ಪೂರೈಸುವುದು.
231. ಧರ್ಮಸಭೆಯ ಮೊದಲನೆ ಕಟ್ಟಳೆ ಯಾವುದು?
ಧರ್ಮಸಭೆಯ ಮೊದಲನೆಯ ಕಟ್ಟಳೆ, ‘ಆದಿತ್ಯವಾರಗಳಲ್ಲಿಯೂ ಕಟ್ಟಳೆ ಹಬ್ಬಗಳಲ್ಲಿಯೂ ಪೂರ್ಣ ಬಲಿಪೂಜೆಯಲ್ಲಿ ಭಾಗವಹಿಸುವುದು.’
232. ಭಾರತದಲ್ಲಿ ಆಚರಿಸುವ ಕಟ್ಟಳೆಯ
ಹಬ್ಬದ ದಿನಗಳು ಯಾವುವು?
ಭಾರತದಲ್ಲಿ ಕಟ್ಟಳೆಯ ಹಬ್ಬದ ದಿನಗಳು ಇವು: ವರ್ಷದ ಎಲ್ಲಾ ಭಾನುವಾರಗಳ ಜೊತೆಗೆ ಕನ್ಯಾಮರಿಯಮ್ಮನ ಸ್ವರ್ಗಸ್ವೀಕಾರ ಹಾಗೂ ಕ್ರಿಸ್ತ ಜಯಂತಿ.
233. ಕಥೋಲಿಕ ವಿಶ್ವಾಸಿಗಳು ಭಾನುವಾರ
ಮತ್ತು ಕಟ್ಟಳೆಯ ಹಬ್ಬದ ದಿನದಂದು ಬಲಿಪೂಜೆಯಲ್ಲಿ ಭಾಗವಹಿಸಲೇ ಬೇಕೆ?
ಇತರ ಗುರುತರ ಕರ್ತವ್ಯಗಳೂ, ತೀವ್ರ ಕಾಯಿಲೆಯೂ ಅವರನ್ನು ತಡೆಯದಿದ್ದರೆ ಭಾನುವಾರ ಮತ್ತು ಕಟ್ಟಳೆಯ ಹಬ್ಬದ ದಿನದಂದು ಬಲಿಪೂಜೆಯಲ್ಲಿ ಭಾಗವಹಿಸುವುದು ಅವರ ಮಹಾ ಕರ್ತವ್ಯ.
234. ತಮ್ಮ ಆರೈಕೆಯಲ್ಲಿದ್ದವರು ಭಾನುವಾರ
ಮತ್ತು ಕಟ್ಟಳೆಯ ಹಬ್ಬದಂದು ಬಲಿಪೂಜೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಜನ್ಮದಾತರು, ಉಪಾಧ್ಯಾಯರು ಹಾಗೂ ಯಜಮಾನರು ಪಡೆದಿದ್ದಾರೆಯೇ?
ಅಹುದು.
ತಮ್ಮ ಆರೈಕೆಯಲ್ಲಿದವರು ಭಾನುವಾರ ಮತ್ತು ಕಟ್ಟಳೆಯ ಹಬ್ಬದಂದು ಬಲಿಪೂಜೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಜನ್ಮದಾತರು,
ಉಪಾಧ್ಯಾಯರು ಹಾಗೂ ಯಜಮಾನರು ಪಡೆದಿದ್ದಾರೆ.
235. ಧರ್ಮಸಭೆಯ ಎರಡನೆಯ ಕಟ್ಟಳೆ ಏನು?
ಧರ್ಮಸಭೆಯ ಎರಡನೆಯ ಕಟ್ಟಳೆ ‘ವರ್ಷಕ್ಕೊಮ್ಮೆಯಾದರೂ ಪಾಪನಿವೇದನೆಯನ್ನು ಮಾಡುವುದು.’
236. ನಾವು ಎಷ್ಟು ಸಲ ಪಾಪನಿವೇದನೆ ಮಾಡಬೇಕು?
ನಾವು ಮಾರಕಪಾಪ ಗೈದರೆ ಆಗಾಗ ಪಾಪ ನಿವೇದನೆಯನ್ನು ಮಾಡಬೇಕು.
ಅಂತೂ ವರ್ಷಕ್ಕೆ ಒಮ್ಮೆಯಾದರೂ ಪಾಪ ನಿವೇದನೆಯನ್ನು ಮಾಡಲೇಬೇಕು.
237. ಮಕ್ಕಳು ತಮ್ಮ ಮೊದಲ ಪಾಪನಿವೇದನೆಯನ್ನು
ಯಾವಾಗ ಮಾಡಬೇಕು?
ಮಕ್ಕಳು ತಮ್ಮ ವಿವೇಚನೆಯ ವಯಸ್ಸನ್ನು ತಲಪಿದೊಡನೆ, ಅದರಲ್ಲೂ ಮಹಾಪಾಪವೇನೆಂದು ಅರಿವು ಪಡೆದೊಡನೆ ಪಾಪನಿವೇದನೆಯನ್ನು ಮಾಡಬೇಕು.
238. ಮಕ್ಕಳು ವಿವೇಚನೆಯನ್ನು ತಲಪುವ
ವಯಸ್ಸು ಯಾವುದು?
ಮಕ್ಕಳು ವಿವೇಚನೆಯನ್ನು ಸುಮಾರು ಏಳನೆಯ ವಯಸ್ಸಿನಲ್ಲಿ ತಲಪುತ್ತಾರೆ.
239. ಧರ್ಮಸಭೆಯ ಮೂರನೆಯ ಕಟ್ಟಳೆ ಏನು?
ಧರ್ಮಸಭೆಯ ಮೂರನೆಯ ಕಟ್ಟಳೆ, ಪಾಸ್ಖ ಕಾಲದಲ್ಲಾದರೂ ಪರಮಪ್ರಸಾದದಲ್ಲಿ ನಿನ್ನ ಸೃಷ್ಟಿಕರ್ತರನ್ನು ಸ್ವೀಕರಿಸುವುದು.
240. ಕ್ರೈಸ್ತರು ಪ್ರಪ್ರಥಮವಾಗಿ ಪರಮ
ಪ್ರಸಾದವನ್ನು ಎಂದು ಸ್ವೀಕರಿಸಬೇಕು?
ಸಾಮಾನ್ಯ ರೊಟ್ಟಿಗೂ ಕ್ರಿಸ್ತರ ಶರೀರಕ್ಕೂ ವ್ಯತ್ಯಾಸವಿರುವುದೆಂದು ತಿಳಿಯಬಲ್ಲ ಕ್ರೈಸ್ತರು ಈ ವಿಷಯದಲ್ಲಿ ಸಾಕಷ್ಟು ಬೋಧನೆಯನ್ನು ಪಡೆದು ಪರಮ ಪ್ರಸಾದವನ್ನು ಸ್ವೀಕರಿಸಬೇಕು.
241. ಧರ್ಮಸಭೆಯ ನಾಲ್ಕನೆಯ ಕಟ್ಟಳೆ ಏನು?
ಧರ್ಮಸಭೆಯ ನಾಲ್ಕನೆಯ ಕಟ್ಟಳೆ, ‘ಧರ್ಮಸಭೆಯ ನಿಗದಿಪಡಿಸಿದ ಉಪವಾಸ ಮತ್ತು ಮಾಂಸವರ್ಜಿತ ದಿನಗಳನ್ನು ಪಾಲಿಸುವುದು.’
242. ಉಪವಾಸ ದಿನಗಳೆಂದರೆ ಏನರ್ಥ?
ಉಪವಾಸ ದಿನಗಳಲ್ಲಿ ನಾವು ಒಂದೇ ಒಂದು ಹೊತ್ತು ಪೂರ್ಣ ಊಟ
ಮಾಡಬಹುದು.
243. ಉಪವಾಸದ ದಿನಗಳಾವುವು?
ಉಪವಾಸದ ದಿನಗಳು ಯಾವುವೆಂದರೆ, ವಿಭೂತಿ ಬುಧವಾರ ಮತ್ತು ಶುಭ ಶುಕ್ರವಾರ.
244. ಮಾಂಸಾಹಾರ ವರ್ಜಿತ ದಿನಗಳೆಂದರೆ
ಏನು?
ಮಾಂಸಾಹಾರವನ್ನು ತಿನ್ನಬಾರದ ದಿನಗಳೇ ಮಾಂಸಾಹಾರ ವರ್ಜಿತ ದಿನಗಳು.
245. ಮಾಂಸಾಹಾರ ವರ್ಜಿತ ದಿನಗಳು ಯಾವುವು?
ಮಾಂಸಾಹಾರ ವರ್ಜಿತ ದಿನಗಳು ಯಾವುವೆಂದರೆ,
ವಿಭೂತಿ ಬುಧವಾರ ಮತ್ತು ಶುಭ ಶುಕ್ರವಾರ.
246. ಉಪವಾಸವನ್ನೂ ಮಾಂಸಾಹಾರ ವರ್ಜನವನ್ನು
ಧರ್ಮಸಭೆಯು ನಮಗೇಕೆ ವಿಧಿಸುತ್ತದೆ?
ನಮ್ಮ ದೇಹವನ್ನು ದಂಡಿಸುವಂತೆಯೂ, ನಮ್ಮ ಪಾಪಗಳಿಂದ ನೊಂದ ದೇವರನ್ನು ಸಂತೃಪ್ತಿಗೊಳಿಸುವಂತೆಯೂ ಉಪವಾಸವನ್ನೂ ಮಾಂಸಾಹಾರ ವರ್ಜನವನ್ನೂ ಧರ್ಮಸಭೆಯು ನಮಗೆ ವಿಧಿಸುತ್ತದೆ.
247. ಧರ್ಮಸಭೆಯ ಐದನೆಯ ಕಟ್ಟಳೆ ಏನು?
ಧರ್ಮಸಭೆಯ ಐದನೆಯ ಕಟ್ಟಳೆ, ‘ಧರ್ಮಸಭೆಯ ಅವಶ್ಯಕತೆಗಳನ್ನು ಶಕ್ತಿಗನುಸಾರ ಪೂರೈಸುವುದು.’
248. ಧರ್ಮ ನಿರ್ವಹಣೆಗೆ ಎಲ್ಲರೂ ನೆರವಾಗಬೇಕೆ?
ದೇವರಿಗೆ ತಕ್ಕ ಗೌರವವೂ ಆರಾಧನೆಯೂ ಸಲ್ಲುವಂತೆಯೂ, ಅವರ ಧರ್ಮಸಭೆಯ ಸಾಮ್ರಾಜ್ಯವು ಹರಡುವಂತೆಯೂ ಧರ್ಮ ನಿರ್ವಹಣೆಗೆ ಎಲ್ಲ ನೆರವು ನೀಡುವುದು ಕ್ರೈಸ್ತರ ಕರ್ತವ್ಯ.
3. ಸಂಸ್ಕಾರಗಳು
249. ಸಂಸ್ಕಾರವೆಂದರೇನು?
ಯೇಸುಸ್ವಾಮಿಯಿಂದ ಸ್ಥಾಪಿತವಾದ ಸಂಸ್ಕಾರವಿದು. ಈ ಸಂಸ್ಕಾರವು ಬಾಹ್ಯ ಚಿಹ್ನೆಯಲ್ಲಿ ತೋರುವ ಒಳ ಕೃಪೆ.
ಇದು ನಮ್ಮ ಆತ್ಮಗಳಿಗೆ ಕೃಪಾವರನ್ನು ನೀಡುತ್ತದೆ.
250. ಸಂಸ್ಕಾರಗಳು ಯಾವಾಗಲೂ ಕೃಪಾವರವನ್ನು
ನೀಡುತ್ತವೆಯೇ?
ಯಾರು ಈ
ಸಂಸ್ಕಾರಗಳನ್ನು ಯೋಗ್ಯ ರೀತಿಯಲ್ಲಿ ಸ್ವೀಕರಿಸುತ್ತಾರೋ, ಅವರು ಯಾವಾಗಲೂ ಕೃಪಾವರವನ್ನು ಪಡೆಯುತ್ತಾರೆ.
251. ಸಂಸ್ಕಾರಗಳು ಹೇಗೆ ಕೃಪಾವರವನ್ನು
ನೀಡುವ ಶಕ್ತಿಯನ್ನು ಪಡೆದಿರುತ್ತವೆ?
ನಮ್ಮ ಆತ್ಮಗಳಿಗೆ ಲೇಪಿಸಲ್ಪಡುವ ಕ್ರಿಸ್ತರ ಅಮೂಲ್ಯ ರಕ್ತದ ಗುಣಗಳನ್ನುಳ್ಳ ಸಂಸ್ಕಾರಗಳು ಕೃಪಾವರವನ್ನು ನೀಡುವ ಶಕ್ತಿಯನ್ನು ಪಡೆದಿರುತ್ತವೆ.
252. ಸಂಸ್ಕಾರಗಳನ್ನು ಸ್ವೀಕರಿಸಲು ನಮಗೆ
ಉತ್ಕಟಾಪೇಕ್ಷೆ ಇರಬೇಕೆ?
ಸಂಸ್ಕಾರಗಳನ್ನು ಸ್ವೀಕರಿಸಲು ನಮಗೆ ಉತ್ಕಟಾಪೇಕ್ಷೆ ಇರಬೇಕು. ಕಾರಣ ಅವುಗಳೇ ನಮ್ಮ ರಕ್ಷಣೆಗೆ ಮುಖ್ಯ ಸಾಧನಗಳು.
253. ಯಾವುದಾದರೂ ಸಂಸ್ಕಾರವು ನಮ್ಮ ಆತ್ಮಕ್ಕೆ
ಅಚ್ಚಳಿಯದ ಮುದ್ರೆಯನ್ನು ನೀಡುತ್ತದೆಯೇ?
ಸ್ನಾನದೀಕ್ಷೆ,
ದೃಢೀಕರಣ ಮತ್ತು ಯಾಜಕಾಭಿಷೇಕ ಸಂಸ್ಕಾರವು ನಮ್ಮ ಆತ್ಮಕ್ಕೆ ಅಚ್ಚಳಿಯದ ಮುದ್ರೆಯನ್ನು ನೀಡುತ್ತವೆ.
254. ಮುದ್ರೆ ಎಂದರೇನು?
ಮುದ್ರೆ ಎಂದರೆ ನಮ್ಮ ಆತ್ಮದ ಮೇಲೆ ಅಂಕಿತವಾಗುವ ಅಳಿಸಲಾಗದಂತಹ ಚಿಹ್ನೆ ಅಥವಾ ಮೊಹರು.
ಆದುದರಿಂದ ಈ ಸಂಸ್ಕಾರಗಳನ್ನು ಒಮ್ಮೆ ನೀಡಿದ ಮೇಲೆ ಮತ್ತೆ ನೀಡಲಾಗುವುದಿಲ್ಲ.
255. ಸಂಸ್ಕಾರಗಳು ಎಷ್ಟು?
ಸಂಸ್ಕಾರಗಳು ಏಳು. ಅವು ಯಾವುವೆಂದರೆ: ದೀಕ್ಷಸ್ನಾನ,
ದೃಢೀಕರಣ, ಪಶ್ಚಾತ್ತಾಪ,
ಪರಮಪ್ರಸಾದ, ವ್ಯಾಧಿಸ್ಥರ ಅಭ್ಯಂಗ, ಯಾಜಕಾಭಿಷೇಕ
(ಪವಿತ್ರಾಭೀಷೇಕ) ಮತ್ತು ವಿವಾಹ.
256. ದೀಕ್ಷಾಸ್ನಾನ ಎಂದರೇನು?
ದೀಕ್ಷಾಸ್ನಾನ ಒಂದು ಸಂಸ್ಕಾರ. ಅದು ಜನ್ಮ ಪಾಪದಿಂದ ನಮ್ಮನ್ನು ಶುದ್ಧೀಕರಿಸಿ, ನಮ್ಮನ್ನು ಕ್ರೈಸ್ತರನ್ನಾಗಿಯೂ,
ದೇವರ ಮಕ್ಕಳನ್ನಾಗಿಯೂ ಧರ್ಮಸಭೆಯ ಸದಸ್ಯರನ್ನಾಗಿಯೂ ಮಾಡುತ್ತದೆ.
257. ಕರ್ಮ ಪಾಪಗಳನ್ನು ದೀಕ್ಷಾಸ್ನಾನ
ಕ್ಷಮಿಸುತ್ತದೆಯೇ?
ಯಾರು ಕರ್ಮ ಪಾಪಗಳ ದೋಷಿಯಾಗಿರುತ್ತಾರೋ,
ಅವರು ದೀಕ್ಷಾಸ್ನಾನವನ್ನು ಯೋಗ್ಯವಾದ ಮನೋಧರ್ಮದಿಂದ ಸ್ವೀಕರಿಸಿದರೆ ಅವರು ಮಾಡಿದ ಪಾಪಗಳಿಗೆ ಹಾಗೂ ಅದಕ್ಕೆ ಸಂಬಂಧಿಸಿದ ಶಿಕ್ಷೆಗೆ ಕ್ಷಮೆಯನ್ನು ಪಡೆಯುತ್ತಾರೆ.
258. ದೀಕ್ಷಾಸ್ನಾನದ ಸಾಮಾನ್ಯ ಪುರೋಹಿತರು
ಯಾರು?
ಒಬ್ಬ ಧರ್ಮಗುರು ದೀಕ್ಷಾಸ್ನಾನದ ಸಾಮಾನ್ಯ ಪುರೋಹಿತರು. ಆದರೆ ಒಬ್ಬ ಧರ್ಮಗುರು ಇಲ್ಲದ ಅನಿವಾರ್ಯ ಸಂದರ್ಭದಲ್ಲಿ ಯಾರಾದರೂ ದೀಕ್ಷಾಸ್ನಾವನ್ನು ನೀಡಬಹುದು.
259. ದೀಕ್ಷಾಸ್ನಾನವನ್ನು ಹೇಗೆ ನೀಡಲಾಗುವುದು?
ವ್ಯಕ್ತಿಯ ಹಣೆಯ ಮೇಲೆ ನೀರನ್ನು ಸುರಿಸುತ್ತ, ಅದೇ ಸಮಯದಲ್ಲಿ, ವ್ಯಕ್ತಿಯ ಹೆಸರನ್ನು ಉಚ್ಚರಿಸಿ ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ನಾನು ನಿನಗೆ ದೀಕ್ಷಾಸ್ನಾನವನ್ನು ಕೊಡುತ್ತೇನೆ ಎಂಬ ಪದಗಳನ್ನು ಹೇಳುತ್ತ ದೀಕ್ಷಾಸ್ನಾನವನ್ನು ನೀಡಲಾಗುವುದು.
260. ದೀಕ್ಷಾಸ್ನಾನದಲ್ಲಿ ನಾವು ಮಾಡುವ
ವಾಗ್ದಾನವೇನು?
ದೀಕ್ಷಾಸ್ನಾನದಲ್ಲಿ ನಾವು ಸೈತಾನನನ್ನೂ ಅವನ ಕಾರ್ಯಗಳನ್ನೂ ಬಿಟ್ಟುಬಿಡುತ್ತೇವೆಂದು ವಾಗ್ದಾನ ಮಾಡುತ್ತೇವೆ.
261. ನಮ್ಮ ರಕ್ಷಣೆಗೆ ದೀಕ್ಷಾಸ್ನಾನ
ಅಗತ್ಯವೆ?
ನಮ್ಮ ರಕ್ಷಣೆಗೆ ದೀಕ್ಷಾಸ್ನಾನ ಅಗತ್ಯ.
ಕಾರಣ, ಯೇಸುಕ್ರಿಸ್ತರು ಹೇಳಿದ ಮೇರೆಗೆ ‘ನೀರಿನಿಂದಲೂ,
ಪವಿತ್ರಾತ್ಮನಿಂದಲೂ
ಹುಟ್ಟಿದ ಹೊರತು ಯಾವನೂ ದೇವರ ರಾಜ್ಯವನ್ನು ಪ್ರವೇಶಿಸಲಾರನು.’
262. ದೃಢೀಕರಣವೆಂದರೇನು?
ದೃಢೀಕರಣ ಸಂಸ್ಕಾರದಲ್ಲಿ ನಾವು ಪವಿತ್ರಾತ್ಮರನ್ನು ಪಡೆಯುತ್ತೇವೆ. ಇದರ ಮೂಲಕ ಅವರು ನಮ್ಮನ್ನು ಬಲಗೊಳಿಸುತ್ತಾರೆ ಮತ್ತು ಪರಿಪೂರ್ಣ ಕ್ರೈಸ್ತರನ್ನಾಗಿಸುತ್ತಾರೆ ಹಾಗೂ ಯೇಸುಸ್ವಾಮಿಯ ಯೋಧರನ್ನಾಗಿ ಮಾಡುತ್ತಾರೆ.
263. ದೃಢೀಕರಣದ ಸಾಮಾನ್ಯ ಪುರೋಹಿತರು
ಯಾರು?
ದೃಢೀಕರಣದ ಸಾಮಾನ್ಯ ಪುರೋಹಿತರು ಧರ್ಮಾಧ್ಯಕ್ಷರು.
264. ಧರ್ಮಾಧ್ಯಕ್ಷರು ಯಾವ ರೀತಿಯಲ್ಲಿ
ದೃಢೀಕರಣ ಸಂಸ್ಕಾರವನ್ನು ಕೊಡುತ್ತಾರೆ?
ಧರ್ಮಾಧ್ಯಕ್ಷರು ದೃಢೀಕರಣವನ್ನು ಸ್ವೀಕರಿಸುವ ಅಭ್ಯರ್ಥಿಯ ಮೇಲೆ ಪವಿತ್ರಾತ್ಮರು ಇಳಿದು ಬರುವಂತೆ ಪ್ರಾರ್ಥಿಸುತ್ತಾರೆ ಮತ್ತು ಅವರ ಮೇಲೆ ಹಸ್ತನಿಕ್ಷೇಪ ಮಾಡಿ, ಕ್ರಿಸ್ಮಾ
(ದೀಕ್ಷಾ) ತೈಲದಿಂದ ಅವರ ಹಣೆಯ ಮೇಲೆ ಶಿಲುಬೆ ಗುರುತನ್ನು ಹಾಕಿ,
ಅದೇ ಸಮಯದಲ್ಲಿ ಕೆಲವು ಪದಗಳನ್ನು ಉಚ್ಚರಿಸುತ್ತ ದೃಢೀಕರಣ ಸಂಸ್ಕಾರವನ್ನು ಕೊಡುತ್ತಾರೆ.
265. ದೃಢೀಕರಣ ಸಂಸ್ಕಾರದಲ್ಲಿ ಯಾವ ಪದಗಳನ್ನು
ಉಪಯೋಗಿಸಲಾಗಿದೆ?
ದೃಢೀಕರಣ ಸಂಸ್ಕಾರದಲ್ಲಿ ಉಪಯೋಗಿಸುವ ಪದಗಳು ಯಾವುವೆಂದರೆ: ‘ದೇವರ ದಾನವಾಗಿರುವ ಪವಿತ್ರಾತ್ಮರ ಈ ಮುದ್ರೆಯನ್ನು ಸ್ವೀಕರಿಸು.’
266. ಪರಮಪ್ರಸಾದ ಸಂಸ್ಕಾರವೆಂದರೇನು?
ಪರಮ ಪ್ರಸಾದ ಸಂಸ್ಕಾರವು ರೊಟ್ಟಿ ಮತ್ತು ದ್ರಾಕ್ಷಾರಸದ ರೂಪದಲ್ಲಿ ಹುದುಗಿರುವ ಯೇಸುಕ್ರಿಸ್ತರ ನಿಜವಾದ ಶರೀರವೂ ರಕ್ತವೂ ಆಗಿದೆ.
ಅದರೊಂದಿಗೆ ಅವರ ಆತ್ಮ ಮತ್ತು ದೈವತ್ವ ಕೂಡಿದೆ.
267. ರೊಟ್ಟಿ ಮತ್ತು ದ್ರಾಕ್ಷಾರಸ ಯಾವ
ರೀತಿಯಲ್ಲಿ ಯೇಸುಕ್ರಿಸ್ತರ ಶರೀರ ಮತ್ತು ರಕ್ತವಾಗಿ ಮಾರ್ಪಡುತ್ತವೆ?
ತಮಗೆ ಅಸಾಧ್ಯ ಮತ್ತು ಕಷ್ಟಸಾಧ್ಯವಲ್ಲದ ದೇವರ ಶಕ್ತಿಯಿಂದ ರೊಟ್ಟಿ ಮತ್ತು ದ್ರಾಕ್ಷಾರಸ ಯೇಸುಕ್ರಿಸ್ತರ ಶರೀರ ಮತ್ತು ರಕ್ತವಾಗಿ ಮಾರ್ಪಡುತ್ತವೆ.
268. ರೊಟ್ಟಿ ಮತ್ತು ದ್ರಾಕ್ಷಾರಸ ಯಾವ
ವೇಳೆಯಲ್ಲಿ ಯೇಸುಕ್ರಿಸ್ತರ ಶರೀರ ಮತ್ತು ರಕ್ತವಾಗಿ ಮಾರ್ಪಡುತ್ತವೆ?
ಯೇಸುಕ್ರಿಸ್ತರಿಂದ ನಿರೂಪಿಸಲ್ಪಟ್ಟ ಬಲಿಪೂಜೆಯ ಸಮಯದಲ್ಲಿ ಪ್ರತಿಷ್ಠಾಪನಾ ಪದಗಳನ್ನು ಧರ್ಮಗುರುಗಳು ಉಚ್ಚರಿಸುವಾಗ ರೊಟ್ಟಿ ಮತ್ತು ದ್ರಾಕ್ಷಾರಸ ಯೇಸುಕ್ರಿಸ್ತರ ಶರೀರ ಮತ್ತು ರಕ್ತವಾಗಿ ಮಾರ್ಪಡುತ್ತವೆ.
269. ಯೇಸುಕ್ರಿಸ್ತರು ಪರಮಪ್ರಸಾದದಲ್ಲಿ
ತಮ್ಮನ್ನೇ ಏಕೆ ನಮಗೆ ನೀಡಿದರು?
ಯೇಸುಕ್ರಿಸ್ತರು ನಮ್ಮ ಆತ್ಮಗಳಿಗೆ ಜೀವ ಮತ್ತು ಆಹಾರವನ್ನು ನೀಡಲು ಪರಮಪ್ರಸಾದದಲ್ಲಿ ತಮ್ಮನ್ನೇ ನಮಗೆ ನೀಡಿದರು. ‘ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲಸಿರುತ್ತಾನೆ.
ನಾನು ಅವನಲ್ಲಿ ನೆಲಸಿರುತ್ತೇನೆ.’
‘ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು.’
270. ಕ್ರಿಸ್ತರನ್ನು ಸಂಪೂರ್ಣವಾಗಿ ಅಥವಾ
ಅಖಂಡವಾಗಿ ಒಂದೇ ವಿಧದಲ್ಲಿ ಮಾತ್ರ ಸ್ವೀಕರಿಸುತ್ತೇವೆಯೆ?
ರೊಟ್ಟಿ ಅಥವಾ ದ್ರಾಕ್ಷಾರಸ ಯಾವೊಂದು ವಿಧದಲ್ಲೂ ಕ್ರಿಸ್ತರನ್ನು ಸಂಪೂರ್ಣವಾಗಿ ಮತ್ತು ಅಖಂಡವಾಗಿ ನಾವು ಸ್ವೀಕರಿಸುತ್ತೇವೆ.
271. ಪರಮಪ್ರಸಾದವನ್ನು ಯೋಗ್ಯವಾಗಿ ಸ್ವೀಕರಿಸಲು
ಏನು ಅವಶ್ಯಕ?
ಪರಮಪ್ರಸಾದವನ್ನು ಯೋಗ್ಯವಾಗಿ ಸ್ವೀಕರಿಸಲು ನಾವು ಕೃಪಾವರದ ಸ್ಥಿತಿಯಲ್ಲಿರಬೇಕು ಮತ್ತು ನೇಮಿಸಿರುವ ಉಪವಾಸವನ್ನು ಪಾಲಿಸಬೇಕು.
ನೀರು ಕುಡಿದರೆ ಉಪವಾಸ ಮುರಿಯುವುದಿಲ್ಲ.
272. ಕೃಪಾವರದ ಸ್ಥಿತಿಯಲ್ಲಿರುವುದು
ಎಂದರೇನು?
ಕೃಪಾವರದ ಸ್ಥಿತಿಯಲ್ಲಿರುವುದು ಎಂದರೆ ಮಹಾಪಾಪದಿಂದ ಮುಕ್ತವಾಗಿರುವುದು ಮತ್ತು ದೇವರನ್ನು ಮೆಚ್ಚಿಸುವಂತಿರುವುದು.
273. ಮಹಾಪಾಪದಲ್ಲಿದ್ದು ಪರಮಪ್ರಸಾದವನ್ನು
ಸ್ವೀಕರಿಸುವುದು ಮಹಾಪಾಪವೆ?
ಮಹಾಪಾಪದಲ್ಲಿದ್ದು ಪರಮಪ್ರಸಾದವನ್ನು ಸ್ವೀಕರಿಸುವುದು ಮಹಾಪಾಪ.
ಏಕೆಂದರೆ, ‘ಪ್ರಭುವಿನ ಶರೀರ ಮತ್ತು ರಕ್ತವನ್ನು ಅಯೋಗ್ಯ ರೀತಿಯಲ್ಲಿ ಸೇವಿಸುವವನು ನ್ಯಾಯತೀರ್ಪನ್ನು ತನ್ನ ಮೇಲೆ ಬರಮಾಡಿಕೊಳ್ಳುವುದಕ್ಕಾಗಿಯೇ ಸೇವಿಸುತ್ತಾನೆ.’
274. ಪರಮಪ್ರಸಾದವು ಕೇವಲ ಒಂದು ಸಂಸ್ಕಾರವೆ?
ಪರಮಪ್ರಸಾದವು ಕೇವಲ ಒಂದು ಸಂಸ್ಕಾರ ಮಾತ್ರವಲ್ಲ ಅದು ಒಂದು ಬಲಿಯೂ ಆಗಿದೆ.
275. ಬಲಿ ಎಂದರೇನು?
ಬಲಿ ಎಂದರೆ ಸಕಲ ವಸ್ತುಗಳ ಸಮ್ರಾಟರಾಗಿರುವ ದೇವರ ಪ್ರಮಾಣದ ಮೇರೆಗೆ, ಕಾಣಿಕೆ ವಸ್ತುವು ದೇವರಿಗೆ ಮಾತ್ರ ಧರ್ಮಗುರುವಿನಿಂದ ಅರ್ಪಿತವಾಗುವುದು.
276. ಹೊಸ ಒಡಂಬಡಿಕೆಯಲ್ಲಿ ಬಲಿ ಎಂದರೇನು?
ಹೊಸ ಒಡಂಬಡಿಕೆಯಲ್ಲಿ ಬಲಿ ಎಂದರೆ ದಿವ್ಯ ಬಲಿಪೂಜೆ.
277. ದಿವ್ಯ ಬಲಿಪೂಜೆ ಎಂದರೇನು?
ದಿವ್ಯ ಬಲಿಪೂಜೆ ಎಂದರೆ, ಯೇಸುಕ್ರಿಸ್ತರ ಶರೀರ ಮತ್ತು ರಕ್ತದ ನೈಜ್ಯ ಬಲಿಯರ್ಪಣೆ. ಇದನ್ನು ಪೀಠದ ಮೇಲೆ ರೊಟ್ಟಿ ಮತ್ತು ದ್ರಾಕ್ಷಾರಸಗಳ ರೂಪದಲ್ಲಿ ಜೀವಂತರ ಮತ್ತು ಮೃತರ ಸಲುವಾಗಿ ದೇವರಿಗೆ ಅರ್ಪಿಲಾಗುತ್ತದೆ.
278. ಬಲಿ ಮತ್ತು ದಿವ್ಯ ಬಲಿಪೂಜೆಯು
ಒಂದೇ ಆಗಿದೆಯೇ?
ಅದು ಕಲ್ವಾರಿ
ಬಲಿಗೆ ಸಮಾನವಾಗಿದೆಯೇ?
ದಿವ್ಯ ಬಲಿಪೂಜೆಯು ಮತ್ತು ಬಲಿಯು ಒಂದೇ ಆಗಿದ್ದು ಕಲ್ವಾರಿ ಬಲಿಗೆ ಸರಿಸಮಾನವಾಗಿದೆ. ಕ್ರಿಸ್ತರು ತಮ್ಮನ್ನೇ ಒಂದು ರಕ್ತ ಸಹಿತ ಬಲಿಯಾಗಿ ಶಿಲುಬೆಯ ಮೇಲೆ ಅರ್ಪಿಸಿದರು. ಅದನ್ನೇ ಈಗ
ತಮ್ಮ ಸ್ವರ್ಗೀಯ ಪಿತನಿಗೆ ನಿರಂತವಾಗಿ ಒಬ್ಬ ಧರ್ಮಗುರು ತಮ್ಮ ಸೇವಾಕಾರ್ಯದ ಮೂಲಕ ಬಲಿಪೀಠದ ಮೇಲೆ ರಕ್ತರಹಿತವಾಗಿ ಅರ್ಪಿಸುತ್ತಾರೆ.
279. ದಿವ್ಯ ಬಲಿಪೂಜೆಯನ್ನು ಯಾವ ಉದ್ದೇಶಗಳಿಗೆ
ಅರ್ಪಿಸಲಾಗುತ್ತದೆ?
ದಿವ್ಯ ಬಲಿಪೂಜೆಯನ್ನು ನಾಲ್ಕು ಉದ್ದೇಶಗಳಿಗೆ ಅರ್ಪಿಸಲಾಗುತ್ತದೆ.
1. ಸರ್ವೋತ್ಕೃಷ್ಟ ಗೌರವ ಮತ್ತು ಮಹಿಮೆಯನ್ನು ದೇವರಿಗೆ ಸಲ್ಲಿಸಲು.
2. ಅವರ ಕೊಡುಗೆಗಳಿಗೆ ಕೃತಜ್ಞತೆಯನ್ನು ಸಲ್ಲಿಸಲು.
3. ನಮ್ಮ ಪಾಪಗಳಿಗೆ ಪಶ್ಚಾತ್ತಾಪದ ಕೃಪಾವರವನ್ನು ಗಳಿಸಲು ಹಾಗೂ ದೇವರನ್ನು ತೃಪ್ತಿಪಡಿಸಲು.
4. ಯೇಸುಕ್ರಿಸ್ತರ ಮೂಲಕ ಸಕಲ ಕೃಪಾವರ ಮತ್ತು ಆಶೀರ್ವಾದಗಳನ್ನು ಪಡೆಯಲು.
280. ಬಲಿಪೂಜೆಯು ಪ್ರಭುವಿನ ಯಾತನೆ ಮತ್ತು
ಮರಣದ ಸ್ಮರಣೆಯೆ?
ಬಲಿಪೂಜೆಯು ಪ್ರಭುವಿನ ಯಾತನೆ ಮತ್ತು ಮರಣದ ಸ್ಮರಣೆಯೂ ಆಗಿದೆ.
ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಯೇಸುಕ್ರಿಸ್ತರೇ ಹೇಳಿದ್ದರು: ‘ಇದನ್ನು ನನ್ನ ಸ್ಮರಣೆಗಾಗಿ ಮಾಡಿರಿ.’
281. ಪಶ್ಚಾತ್ತಾಪದ ಸಂಸ್ಕಾರ ಎಂದರೇನು?
ದೀಕ್ಷಾಸ್ನಾನ ಪಡೆದ ಮೇಲೆ ಮಾಡಿರುವ ಎಲ್ಲಾ ಪಾಪಗಳನ್ನು ಪರಿಹರಿಸಿ ದೈವಿಕ ಜೀವವನ್ನು ಪುನಃ ಕೊಡುವ ಸಂಸ್ಕಾರವೇ ಪಶ್ಚಾತ್ತಾಪ.
282. ಪಶ್ಚಾತ್ತಾಪ ಸಂಸ್ಕಾರವು ದೇವರ
ಕೃಪಾವರವನ್ನು ನಮ್ಮ ಆತ್ಮಗಳಲ್ಲಿ ಹೆಚ್ಚಿಸುವುದೇ?
ಪಶ್ಚಾತ್ತಾಪ ಸಂಸ್ಕಾರವು ದೇವರ ಕೃಪಾವರವನ್ನು ನಮ್ಮ ಆತ್ಮಗಳಲ್ಲಿ ಹೆಚ್ಚಿಸುತ್ತದೆ ಹಾಗೂ ಪಾಪಗಳಿಗೆ ಕ್ಷಮೆಯನ್ನು ಕರುಣಿಸುತ್ತದೆ.
ಆದ್ದರಿಂದ, ನಾವು ಆಗಾಗ್ಗೆ ಪಾಪನಿವೇದನೆಗೆ ಹೋಗಬೇಕು.
283. ಪ್ರಭು ಯೇಸುಕ್ರಿಸ್ತರು ಯಾವಾಗ
ಪಶ್ಚಾತ್ತಾಪದ ಸಂಸ್ಕಾರವನ್ನು ಸ್ಥಾಪಿಸಿದರು?
ಪ್ರಭು ಯೇಸುಕ್ರಿಸ್ತರು ಪಶ್ಚಾತ್ತಾಪದ ಸಂಸ್ಕಾರವನ್ನು ತಮ್ಮ ಪ್ರೇಷಿತರ ಮೇಲೆ ಉಸಿರೂದಿ ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಞಮಿಸಲಾಗುವುದು ಎಂದು ಹೇಳಿ ಪಾಪಗಳನ್ನು ಕ್ಷಮಿಸುವ ಶಕ್ತಿಯನ್ನು ನೀಡಿದರು.
284. ಧರ್ಮಗುರುಗಳು ಯಾವ ರೀತಿಯಲ್ಲಿ
ಪಾಪಗಳನ್ನು ಕ್ಷಮಿಸುತ್ತಾರೆ?
ಧರ್ಮಗುರುಗಳು ಕ್ಷಮಾದಾನ ಪದಗಳನ್ನು ಉಚ್ಚರಿಸುತ್ತಾ ದೇವರ ಶಕ್ತಿಯಿಂದ ಪಾಪಗಳನ್ನು ಕ್ಷಮಿಸುತ್ತಾರೆ.
285. ಕ್ಷಮಾದಾನದ ಪದಗಳು ಯಾವುವು?
ಕ್ಷಮಾದಾನದ ಪದಗಳು ಯಾವುವೆಂದರೆ ‘ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ನಾನು ನಿನ್ನನ್ನು ಪಾಪಗಳಿಂದ ಮುಕ್ತಗೊಳಿಸುತ್ತೇನೆ.’
286. ಪಾಪಕ್ಷಮೆಗೆ ಪಶ್ಚಾತ್ತಾಪ ಅಭ್ಯರ್ಥಿಯಿಂದ
ಯಾವುದೇ ಷರತ್ತುಗಳು ಅಗತ್ಯವಿರುವುದೆ?
ಪಾಪಗಳ ಕ್ಷಮಾಪಣೆಗೆ ಮೂರು ಷರತ್ತುಗಳು ಪಶ್ಚಾತ್ತಾಪ ಪಡುವ ಅಭ್ಯರ್ಥಿಗೆ ಅಗತ್ಯವಿದೆ. ಅವು ಯಾವುವೆಂದರೆ:
1. ಪಶ್ಚಾತ್ತಾಪ.
2. ಪಾಪನಿವೇದನೆ
3. ಪರಿಹಾರ
287. ಪಶ್ಚಾತ್ತಾಪ ಎಂದರೇನು?
ಪಶ್ಚಾತ್ತಾಪ ಎಂದರೆ ನಮ್ಮ ಪಾಪಗಳಿಗಾಗಿ ತುಂಬು ಹೃದಯದಿಂದ ಮರುಗಿ ದೃಢ ಉದ್ದೇಶದಿಂದ ಪಾಪ ಮಾಡುವುದಿಲ್ಲವೆಂದು ತೀರ್ಮಾನಿಸುವುದು. ಕಾರಣ,
ನಮ್ಮ ಪಾಪಗಳಿಂದ ಒಳ್ಳೆಯವರಾದ ದೇವರನ್ನು ನಾವು ನೋಯಿಸಿದ್ದೇವೆ.
288. ದೃಢ ಉದ್ದೇಶದ ತೀರ್ಮಾನ ಎಂದರೇನು?
ದೃಢ ಉದ್ದೇಶದ ತೀರ್ಮಾನ ಎಂದರೆ ಪಾಪ ಮಾಡುವುದು ಹಾಗೂ ಪಾಪ ಮಾಡಲು ಪ್ರಚೋದಿಸುವ ಸಂದರ್ಭಗಳನ್ನು ದೇವರ ಕೃಪೆಯಿಂದ ತಪ್ಪಿಸಲು ನಿರ್ಧಾರ ಕೈಗೊಳ್ಳುವುದು.
289. ನಮ್ಮ ಪಾಪಗಳಿಗಾಗಿ ತುಂಬುಹೃದಯದಿಂದ
ದುಃಖವನ್ನು ಹೇಗೆ ಪಡೆಯಬಹುದು?
ಶ್ರದ್ಧೆಯಿಂದ ಪ್ರಾರ್ಥಿಸುವುದರ ಮೂಲಕ ಹಾಗೂ ಅಂತಹ ಆಲೋಚನೆಗಳನ್ನು ಉಪಯೋಗಿಸಿಕೊಳ್ಳುವುದರ ಮೂಲಕ ನಮ್ಮ ಪಾಪಗಳಿಗಾಗಿ ತುಂಬುಹೃದಯದಿಂದ ದುಃಖವನ್ನು ಪಡೆಯಬಹುದು.
290. ದೇವರ ಬಗ್ಗೆ ಯಾವ ಆಲೋಚನೆ ಚಿಂತನೆ
ನಮ್ಮ ಪಾಪಗಳಿಗೆ ದುಃಖವನ್ನು ಉಂಟು ಮಾಡಲು ಸಾಧ್ಯ?
ಮಿತಿಯಿಲ್ಲದ ಒಳ್ಳೆಯ ದೇವರೇ ತಾವಾಗಿದ್ದು ನಮಗೂ ಮಿತಿಯಿಲ್ಲದ ಒಳ್ಳೆಯ ದೇವರಾಗಿರುವವರನ್ನು ನಮ್ಮ ಪಾಪಗಳಿಂದ ನಾವು ನೋಯಿಸಿದ್ದೇವೆ. ಈ ಚಿಂತನೆ ನಮ್ಮ ಪಾಪಗಳಿಗೆ ದುಃಖವನ್ನು ಉಂಟು ಮಾಡಲು ಸಾಧ್ಯ.
291. ರಕ್ಷಕರ ಬಗ್ಗೆ ಯಾವ ಚಿಂತನೆ ನಮ್ಮ
ಪಾಪಗಳಿಗೆ ದುಃಖವನ್ನು ಉಂಟು ಮಾಡಲು ಸಾಧ್ಯ?
ನಮ್ಮ ರಕ್ಷಕರು ನಮ್ಮ ಪಾಪಗಳಿಗೋಸ್ಕರ ಮೃತರಾದರು. ಯಾರು ಘೋರ ಪಾಪಗಳನ್ನು ಮಾಡುತ್ತಾರೋ ಅವರು ದೇವರ ಪುತ್ರನನ್ನು ಮತ್ತೊಮ್ಮೆ ಶಿಲುಬೆಗೇರಿಸಿ ಆತನನ್ನು ಅಪಹಾಸ್ಯ ಮಾಡುತ್ತಾರೆ. ರಕ್ಷಕರ ಬಗ್ಗೆ ಈ ಚಿಂತನೆಯೇ ನಮ್ಮ ಪಾಪಗಳಿಗೆ ದುಃಖವನ್ನು ಉಂಟು ಮಾಡಲು ಸಾಧ್ಯ.
292. ನಮ್ಮ ಪಾಪಗಳಿಂದ ನಾವು ಸ್ವರ್ಗವನ್ನು
ಕಳೆದುಕೊಂಡಿದ್ದೇವೆ.
ನರಕ ದಂಡನೆಗೆ
ಪಾತ್ರರಾಗಿದ್ದೇವೆ ಎಂಬ ಚಿಂತನೆಯಿಂದ ನಾವು ಪಡುವ ದುಃಖವು ಪಾಪನಿವೇದನೆಯಲ್ಲಿ ನಮ್ಮ ಪಾಪಗಳಿಗೆ ಕ್ಷಮೆಯನ್ನು
ಪಡೆಯಲು ಸಾಕೇ?
ನಾವು ಪಾಪನಿವೇದನೆಗೆ ಹೋಗುವಾಗ ಈ ಬಗೆಯ ದುಃಖವು ಪಾಪಕ್ಷಮೆಗೆ ಸಾಕು.
293. ಪೂರ್ಣ ಪಶ್ಚಾತ್ತಾಪ ಎಂದರೇನು?
ದೇವರ ಮೇಲಿನ ಅನನ್ಯ ಪ್ರೀತಿಯ ದೆಸೆಯಿಂದ ನಮ್ಮ ಪಾಪದ ಬಗ್ಗೆ ಉದ್ಭವವಾಗುವ ದುಃಖವೇ ಪೂರ್ಣ ಪಶ್ಚಾತ್ತಾಪ.
294. ಪೂರ್ಣ ಪಶ್ಚಾತ್ತಾಪಕ್ಕೆ ಇರುವ
ವಿಶೇಷ ಮೌಲ್ಯವೇನು?
ನಾವು ಪಾಪನಿವೇದನೆ ಮಾಡುವುದಕ್ಕೆ ಮುಂಚೆಯೇ ಪೂರ್ಣ ಪಶ್ಚಾತ್ತಾಪವಿದ್ದರೆ, ನಮ್ಮ ಪಾಪಗಳು ತಕ್ಷಣವೇ ಕ್ಷಮಿಸಲ್ಪಡುತ್ತವೆ.
ಆದರೂ ಮಹಾಪಾಪಗಳಿದ್ದಲ್ಲಿ,
ಅವುಗಳನ್ನು ಪಾಪನಿವೇದನೆಯಲ್ಲಿ ಹೇಳಲೇಬೇಕು. ಇದುವೇ ಪೂರ್ಣ ಪಶ್ಚಾತ್ತಾಪಕ್ಕೆ ಇರುವ ವಿಶೇಷ ಮೌಲ್ಯ.
295. ಪಾಪನಿವೇದನೆ ಎಂದರೇನು?
ಧರ್ಮಾಧ್ಯಕ್ಷರಿಂದ ಮಾನ್ಯತೆ ಪಡೆದ ಧರ್ಮಗುರುವಿನ ಬಳಿ ನಮ್ಮ ಪಾಪಗಳನ್ನು ಹೇಳಿಕೊಳ್ಳುವುದೇ ಪಾಪ ನಿವೇದನೆ.
296. ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ
ಪಾಪನಿವೇದನೆಯಲ್ಲಿ ಮಹಾಪಾಪವನ್ನು ಬಚ್ಚಿಡಬಹುದೆ?
ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಪಾಪನಿವೇದನೆಯಲ್ಲಿ ಮಹಾಪಾಪವನ್ನು ಬಚ್ಚಿಡುವುದರ ಮೂಲಕ ಮತ್ತಷ್ಟು ದೇವನಿಂದನೆಯ ದೋಷಕ್ಕೆ ಒಳಗಾಗುತ್ತಾನೆ.
ಹೀಗೆ ಪವಿತ್ರಾತ್ಮರಿಗೆ ಮತ್ತೊಂದು ಸುಳ್ಳನ್ನು ಹೇಳಿ ಕೆಟ್ಟ ಪಾಪನಿವೇದನೆಯನ್ನು ಮಾಡುತ್ತಾನೆ.
297. ಪರಿಹಾರ ಎಂದರೇನು?
ಧರ್ಮಗುರು ನೀಡುವ ಪ್ರಾಯಶ್ಚಿತ್ತವನ್ನು ನೆರವೇರಿಸುವುದೇ ಪರಿಹಾರ.
298. ಧರ್ಮಗುರುಗಳು ನೀಡುವ ಪ್ರಾಯಶ್ಚಿತ್ತವು
ಯಾವಾಗಲೂ ಸಂಪೂರ್ಣ ಪರಿಹಾರವನ್ನು ನೀಡುತ್ತದೆಯೇ?
ಧರ್ಮಗುರುಗಳು ನೀಡುವ ಪ್ರಾಯಶ್ಚಿತ್ತವು ಯಾವಾಗಲೂ ಸಂಪೂರ್ಣ ಪರಿಹಾರವನ್ನು ನೀಡುವುದಿಲ್ಲ.
ಆದ್ದರಿಂದ, ಪ್ರಾಯಶ್ಚಿತ್ತದೊಂದಿಗೆ ಬೇರೆ ಒಳ್ಳೆಯ ಕಾರ್ಯಗಳನ್ನು ಮಾಡುವುದರ ಮೂಲಕ ನಾವು ಪುಣ್ಯಫಲಗಳನ್ನು ಪಡೆಯಲು ಪ್ರಯತ್ನಿಸಬೇಕು.
299. ಪುಣ್ಯ ಫಲವೆಂದರೇನು?
ದೋಷ ನಿವಾರಣೆಯಾಗಿದ್ದರೂ ನಮ್ಮ ಪಾಪಗಳಿಗೆ ತಾತ್ಕಾಲಿಕ ಶಿಕ್ಷೆ ಇರುತ್ತದೆ.
ಇವುಗಳಿಗೆ ಧರ್ಮಸಭೆ ನೀಡುವಂತಹ ವಿಮೋಚನೆಯೇ ಪುಣ್ಯಫಲ.
300. ವ್ಯಾಧಿಸ್ಥರ ಅಭ್ಯಂಗದ ಸಂಸ್ಕಾರ
ಎಂದರೇನು?
ಪವಿತ್ರ ಎಣ್ಣೆಯ ಲೇಪನದೊಂದಿಗೆ ಪ್ರಾರ್ಥನೆಯನ್ನು ಸೇರಿಸಿ ನೀಡುವ ಸಂಸ್ಕಾರವೇ ವ್ಯಾಧಿಸ್ಥರ ಅಭ್ಯಂಗ.
301. ವ್ಯಾಧಿಸ್ಥರ ಅಭ್ಯಂಗದ ಸಂಸ್ಕಾರವನ್ನು
ಯಾವಾಗ ನೀಡಲಾಗುವುದು?
ಕಾಯಿಲೆಯ ದೆಸೆಯಿಂದ ನಾವು ಮರಣದ ಅವಸ್ಥೆಯಲ್ಲಿರುವಾಗ ನೀಡುವ ಸಂಸ್ಕಾರವೇ ವ್ಯಾಧಿಸ್ಥರ ಅಭ್ಯಂಗ.
302. ವ್ಯಾಧಿಸ್ಥರ ಅಭ್ಯಂಗದ ಸಂಸ್ಕಾರದ
ಪರಿಣಾಮಗಳು ಯಾವುವು?
ವ್ಯಾಧಿಸ್ಥರ ಅಭ್ಯಂಗದ ಸಂಸ್ಕಾರದ ಪರಿಣಾಮಗಳು ಇವು: ಆತ್ಮಕ್ಕೆ ಬಲ
ಮತ್ತು ಉಪಶಮನ,
ಪಾಪಗಳಿಗೆ ಕ್ಷಮಾಪಣೆ,
ಮತ್ತು ದೈವೇಚ್ಛೆಯಿಂದ ಮರಳಿ ಆರೋಗ್ಯವನ್ನು ಪಡೆಯುವುದು.
303. ಪವಿತ್ರ ಬೈಬಲ್ ಗ್ರಂಥದಲ್ಲಿ ವ್ಯಾಧಿಸ್ಥರ
ಅಭ್ಯಂಗದ ಸಂಸ್ಕಾರದ ಬಗ್ಗೆ ಅಧಿಕೃತ ದಾಖಲೆ ಇರುವುದೆಲ್ಲಿ?
ಪವಿತ್ರ ಬೈಬಲ್ ಗ್ರಂಥದಲ್ಲಿ ಅಧಿಕೃತವಾಗಿ ಸಂತ ಯಕೋಬರ ಪತ್ರದ 5ನೇ ಅಧ್ಯಾಯದಲ್ಲಿ ವ್ಯಾಧಿಸ್ಥರ ಅಭ್ಯಂಗದ ಸಂಸ್ಕಾರ ಕುರಿತು ಹೀಗೆಂದು ಹೇಳಲಾಗಿದೆ: ‘ನಿಮ್ಮಲ್ಲಿ ಯಾರಾದರೂ ಅಸ್ವಸ್ಥರಾಗಿದ್ದರೆ, ಅವನು ಸಭಾಪಾಲಕರನ್ನು ಕರೆಸಲಿ, ಅವರು ಅವನಿಗಾಗಿ ದೇವರನ್ನು ಪ್ರಾರ್ಥಿಸಿ ಪ್ರಭುವಿನ ಹೆಸರಿನಲ್ಲಿ ಅವನ್ನು ಅಭ್ಯಂಗಿಸಲಿ, ಈ ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ.
ಹಾಸಿಗೆ ಹಿಡಿದ ರೋಗಿಯನ್ನು ಪ್ರಭು ಎಬ್ಬಿಸುತ್ತಾರೆ.
ಅವನು ಪಾಪ ಮಾಡಿದವನಾಗಿದ್ದರೆ ಕ್ಷಮೆಯನ್ನು ಪಡೆಯುತ್ತಾನೆ.’
304. ಪವಿತ್ರಾಭಿಷೇಕ ಸಂಸ್ಕಾರ ಎಂದರೇನು?
ಧರ್ಮಾಧ್ಯಕ್ಷರುಗಳನ್ನು ಧರ್ಮಗುರುಗಳನ್ನು ಮತ್ತು ಧರ್ಮಸಭೆಯ ಇತರ ಪುರೋಹಿತರನ್ನು ಅಭ್ಯಂಗಿಸಿ ಇದರ ಮೂಲಕ ಅವರು ಪವಿತ್ರ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಕೃಪಾವರ ಮತ್ತು ಶಕ್ತಿಯನ್ನು ಪಡೆಯುತ್ತಾರೆ. ಇದೇ ಪವಿತ್ರಾಭಿಷೇಕ ಸಂಸ್ಕಾರ.
305. ವಿವಾಹ ಸಂಸ್ಕಾರ ಎಂದರೇನು?
ವಿವಾಹ ಸಂಸ್ಕಾರವು ಕ್ರೈಸ್ತರ ವಿವಾಹದ ಒಪ್ಪಂದವನ್ನು ಪವಿತ್ರೀಕರಿಸುತ್ತದೆ ಮತ್ತು ಅದನ್ನು ಯೋಗ್ಯವಾಗಿ ಯಾರು ಸ್ವೀಕರಿಸುತ್ತಾರೋ ಅವರಿಗೆ ವಿಶೇಷವಾದ ಕೃಪಾವರಗಳನ್ನು ನೀಡುತ್ತದೆ.
306. ವಿವಾಹ ಸಂಸ್ಕಾರವನ್ನು ಯೋಗ್ಯವಾಗಿ
ಸ್ವೀಕರಿಸುವವರಿಗೆ ಸಿಗುವ ವಿಶೇಷ ಕೃಪಾವರ ಯಾವುದು?
ವಿವಾಹ ಸಂಸ್ಕಾರವನ್ನು ಯೋಗ್ಯವಾಗಿ ಸ್ವೀಕರಿಸುವವರು ವಿವಾಹ ಸಂಸ್ಕಾರಕ್ಕೆ ಸಂಬಂಧಿಸಿದಂತಹ ಕಷ್ಟಗಳನ್ನು ಎದುರಿಸಲು, ಒಬ್ಬರನ್ನೊಬ್ಬರು ಪ್ರೀತಿಸಿ ಪ್ರಾಮಾಣಿಕವಾಗಿ ಜೀವಿಸಲು ಅವರ ಮಕ್ಕಳನ್ನು ದೈವಭಯದಲ್ಲಿ ಬೆಳೆಸಲು ಅನುಕೂಲ ಮಾಡಿಕೊಡುವ ವಿಶೇಷವಾದ ಕೃಪಾವರವನ್ನು ಪಡೆದುಕೊಳ್ಳುತ್ತಾರೆ.
307. ಮಹಾಪಾಪದಲ್ಲಿದ್ದವರು, ಧರ್ಮಸಭೆಯ ಕಟ್ಟಳೆಗಳಿಗೆ ವಿರೋಧವಾಗಿ
ಮದುವೆ ಒಪ್ಪಂದವನ್ನು ಮಾಡಿಕೊಳ್ಳುವುದು ದೈವ ದ್ರೋಹವೇ?
ಮಹಾಪಾಪದಲ್ಲಿದ್ದು,
ಧರ್ಮಸಭೆಯ ಕಟ್ಟಳೆಗಳಿಗೆ ವಿರೋಧವಾಗಿ ಮದುವೆ ಒಪ್ಪಂದವನ್ನು ಮಾಡಿಕೊಳ್ಳುವುದು ದೈವ ದ್ರೋಹ ಆಗುತ್ತದೆ. ಅಂತಹವರು ಆಶೀರ್ವಾದಕ್ಕೆ ಒದಲಾಗಿ ದೈವ ಶಾಪವನ್ನು ತಮ್ಮ ಮೇಲೆ ಬರಮಾಡಿಕೊಳ್ಳುತ್ತಾರೆ.
308. ಸಮ್ಮಿಶ್ರ ವಿವಾಹ ಎಂದರೇನು?
ಸಮ್ಮಿಶ್ರ ವಿವಾಹವೆಂದರೆ ಇಬ್ಬರು ವಿವಾಹಿತರಲ್ಲಿ ಒಬ್ಬರೇ ಕಥೋಲಿಕರಾಗಿರುವುದು.
309. ಸಮ್ಮಿಶ್ರ ವಿವಾಹವನ್ನು ಧರ್ಮಸಭೆಯು
ಪ್ರೋತ್ಸಾಹಿಸುತ್ತದೆಯೇ?
ಸಮ್ಮಿಶ್ರ ವಿವಾಹಗಳನ್ನು ಧರ್ಮಸಭೆಯು ಪ್ರೋತ್ಸಾಹಿಸುವುದಿಲ್ಲ.
ಧರ್ಮಸಭೆಯು ಅದನ್ನು ಅಪಾಯಕಾರಿ ಎಂದು ಪರಿಗಣಿಸುತ್ತದೆ.
310. ಸಮ್ಮಿಶ್ರ ವಿವಾಹಕ್ಕೆ ಧರ್ಮಸಭೆಯು
ಕೆಲವೊಮ್ಮೆ ಸಮ್ಮತಿಸುತ್ತದೆಯೇ?
ವಿಶೇಷ ಸಂದರ್ಭಗಳಲ್ಲಿ ವಿನಾಯಿತಿಯನ್ನು ನೀಡುವುದರ ಮೂಲಕ ಸಮ್ಮಿಶ್ರ ವಿವಾಹಕ್ಕೆ ಧರ್ಮಸಭೆಯು ವಿಶೇಷ ಷರತ್ತುಗಳೊಂದಿಗೆ ಸಮ್ಮತಿಸುತ್ತದೆ.
311. ಸಮ್ಮಿಶ್ರ ವಿವಾಹದಲ್ಲಿ ಕಥೋಲಿಕ
ಸಹಪಾಟಿ ಮಾಡುವ ವಾಗ್ದಾನವೇನು?
ಎಲ್ಲಾ ವಿಧಗಳಲ್ಲೂ ತನ್ನ ವಿಶ್ವಾಸವನ್ನು ಕಾಪಾಡಿಕೊಳ್ಳುತ್ತೇನೆ.
ಈ ವಿವಾಹ ಜೀವನದಲ್ಲಿ ಪಡೆಯುವ ಮಕ್ಕಳಿಗೆ ದೀಕ್ಷಾಸ್ನಾನವನ್ನು ಕೊಡಿಸುತ್ತೇನೆ ಮತ್ತು ಅವರನ್ನು ಕಥೋಲಿಕ ಧರ್ಮದಲ್ಲಿ ಬೆಳೆಸುತ್ತೇನೆ ಎಂದು ಕಥೋಲಿಕ ಸಹಪಾಟಿ ಸಮ್ಮಿಶ್ರ ವಿವಾಹದಲ್ಲಿ ವಾಗ್ದಾನ ಮಾಡುತ್ತಾರೆ.
312. ಯಾವುದೇ ಮಾನವ ಶಕ್ತಿಗೆ ವಿವಾಹದ
ಬಂಧನವನ್ನು ಭೇದಿಸಲು ಸಾಧ್ಯವೇ?
ಯಾವುದೇ ಮಾನವ ಶಕ್ತಿಗೆ ವಿವಾಹದ ಬಂಧನವನ್ನು ಭೇದಿಸಲು ಸಾಧ್ಯವೇ ಇಲ್ಲ. ಏಕೆಂದರೆ,
ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ವಿಚ್ಛೇದಿಸದಿರಲಿ ಎಂದು ಯೇಸುಕ್ರಿಸ್ತರು ಹೇಳಿದ್ದಾರೆ.
4. ಸುಗುಣಗಳು ಮತ್ತು ದುರ್ಗುಣಗಳು
313. ದೈವಸ್ಯ ಸುಗುಣಗಳು ಯಾವುವು?
ದೈವಸ್ಯ ಸುಗುಣಗಳು ಯಾವುವೆಂದರೆ:
ವಿಶ್ವಾಸ, ಭರವಸೆ ಮತ್ತು ಪ್ರೀತಿ.
314. ದೈವಸ್ಯ ಸುಗುಣಗಳೆಂದು ಇವನ್ನು
ಏಕೆ ಕರೆಯುತ್ತಾರೆ?
ಅವು ನಿಕಟವಾಗಿ ದೇವರೊಂದಿಗೆ
ಸಂಬಂಧವನ್ನು ಕಲ್ಪಿಸುವುದರಿಂದ ಅವನ್ನು ದೈವಸ್ಯ ಸುಗುಣಗಳೆಂದು ಕರೆಯುತ್ತಾರೆ.
315. ಪ್ರತಿಯೊಬ್ಬ ಕ್ರೈಸ್ತನೂ
ತಿಳಿಯಲೇಬೇಕಾದ ಪ್ರಮುಖ ವಿಶ್ವಾಸದ ರಹಸ್ಯಗಳು ಯಾವುವು?
ಪ್ರತಿಯೊಬ್ಬ ಕ್ರೈಸ್ತನೂ ತಿಳಿಯಲೇಬೇಕಾದ
ಪ್ರಮುಖ ವಿಶ್ವಾಸದ ರಹಸ್ಯಗಳು ಯಾವುವೆಂದರೆ: ಪ್ರತಿಯೊಬ್ಬ ಮಾನವನಿಗೂ ಅವನವನ ಕೆಲಸಕ್ಕೆ ತಕ್ಕಂತೆ
ಫಲ ನೀಡುವ ಏಕ ತ್ರಿತ್ವ ದೇವರು,
ನಮ್ಮ ರಕ್ಷಕರ
ಮನುಷ್ಯಾವತಾರ (ದೇಹಾಂಬರತೆ),
ಮರಣ ಮತ್ತು ಪುನರುತ್ಥಾನ.
316 ಪ್ರಮುಖ ಮಾನವೀಯ ಸುಗುಣಗಳು ಯಾವುವು?
ಪ್ರಮುಖ ಮಾನವೀಯ ಸುಗುಣಗಳು ಯಾವುವೆಂದರೆ,
1. ವಿವೇಕ
2. ನ್ಯಾಯ
3. ದೃಢತೆ
4. ಸಂಯಮ
317 ಇವುಗಳನ್ನು ಏತಕ್ಕಾಗಿ ಪ್ರಮುಖ
ಮಾನವೀಯ ಸುಗುಣಗಳೆಂದು ಕರೆಯುತ್ತಾರೆ?
ಅವು ತಿರುಗುಣಿಯಂತಿದ್ದು, ಅದರ ಮೇಲೆ ನೈತಿಕ ನಡತೆಯ
ಸುಗುಣಗಳು ಚಲಿಸುವುದರಿಂದ ಅವನ್ನು ಪ್ರಮುಖ ಮಾನವೀಯ ಸುಗುಣಗಳೆಂದು ಕರೆಯುತ್ತಾರೆ
318. ಪವಿತ್ರಾತ್ಮರ ಏಳು ವರಗಳು ಯಾವುವು?
ಪವಿತ್ರಾತ್ಮರ ಏಳು ವರಗಳು ಯಾವುವೆಂದರೆ,
1. ಜ್ಞಾನ
2. ಬುದ್ದಿ
3. ವಿವೇಕ
4. ಧೃಢತೆ
5. ತಿಳುವಳಿಕೆ
6. ಭಕ್ತಿ
7. ದೈವಭಯ
319. ಪವಿತ್ರಾತ್ಮರ ಹನ್ನೆರಡನೇ ಫಲಗಳು
ಯಾವುವು?
1. ಪ್ರೀತಿ
2. ಆನಂದ
3. ಶಾಂತಿ
4. ಸಹನೆ
5. ದಯೆ
6. ಔದಾರ್ಯ
7. ಸೈರಣೆ
8. ವಿನಯ
9. ನಿಷ್ಠೆ
10. ಗಾಂಭಿರ್ಯ
11. ಸಂಯಮ
12. ನಿರ್ಮಲತೆ
320. ಪ್ರೀತಿಯ ಶ್ರೇಷ್ಠವಾದ ಎರಡು
ಆಜ್ಞೆಗಳು ಯಾವುವು?
ಪ್ರೀತಿಯ ಎರಡು ಶ್ರೇಷ್ಠವಾದ ಆಜ್ಞೆಗಳು ಯಾವುವೆಂದರೆ:
1. ನಿನ್ನ ಪ್ರಭು ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ, ಆತ್ಮದಿಂದಲೂ, ಪೂರ್ಣ ಮನಸ್ಸಿನಿಂದಲೂ
ಪ್ರೀತಿಸು.
2. ನಿನ್ನನ್ನು ನೀನು ಪ್ರೀತಿಸುವಂತೆ ನಿನ್ನ ನೆರೆಹೊರೆಯವನನ್ನೂ
ಪ್ರೀತಿಸು.
321. ಸಪ್ತ ದೈಹಿಕ ದಯಾಕ್ರಿಯೆಗಳು
ಯಾವುವು?
ಸಪ್ತ ದೈಹಿಕ ದಯಾಕ್ರಿಯೆಗಳು ಯಾವುವುದೆಂದರೆ,
1. ಹಸಿದವರಿಗೆ
ಆಹಾರ
2. ಬಾಯಾರಿದವರಿಗೆ
ಪಾನೀಯ
3. ನಗ್ನರಿಗೆ
ವಸ್ತ್ರ
4. ನಿರ್ವಹಿತರಿಗೆ
ಬಿಡಾರ
5. ರೋಗಿಗಳಿಗೆ
ಸಂದರ್ಶನ
6. ಬಂಧಿತರಿಗೆ
ಭೇಟಿ
7. ಮೃತರಿಗೆ ಶವಸಂಸ್ಕಾರ
322. ಸಪ್ತ ಆತ್ಮಿಕ ದಯಾಕ್ರಿಯೆಗಳು
ಯಾವುವು?
1. ಪಾಪಿಗಳ ಮನಃಪರಿವರ್ತನೆ
2. ಅಜ್ಞಾನಿಗಳಿಗೆ ಅರಿವು ಮೂಡಿಸುವುದು
3. ಸಂಶಯದಲ್ಲಿರುವವರಿಗೆ ಸಲಹೆ ನೀಡುವುದು
4. ಕಂಗೆಟ್ಟವರಿಗೆ ಸಮಾಧಾನ
5. ಸಹನೆಯಿಂದ ಅಪವಾದ ಸ್ವೀಕಾರ
6. ಜೀವಿತರಿಗೆ ಮತ್ತು ಮೃತರಿಗೆ ಪ್ರಾರ್ಥನೆ
7. ಅನ್ಯಾಯಗಳನ್ನು ಕ್ಷಮಿಸುವುದು
323. ಅಷ್ಟ ಭಾಗ್ಯಗಳು ಯಾವುವು?
ಅಷ್ಟ ಭಾಗ್ಯಗಳು ಯಾವುವೆಂದರೆ:
1. ಪಾರಮಾರ್ಥಿಕವಾಗಿ
ಬಡವರು ಭಾಗ್ಯವಂತರು;
ಸ್ವರ್ಗ
ಸಾಮ್ರಾಜ್ಯ ಅವರದು.
2. ದುಃಖಿಗಳು
ಭಾಗ್ಯವಂತರು;
ದೇವರು
ಅವರನ್ನು ಸಂತೈಸುವರು.
3. ವಿನಯಶೀಲರು
ಭಾಗ್ಯವಂತರು;
ಅವರು ದೇವರ
ವಾಗ್ದತ್ತ ನಾಡಿಗೆ ಬಾಧ್ಯಸ್ಥರು.
4. ನ್ಯಾಯನೀತಿಗಾಗಿ
ಹಸಿದು ಹಾತೊರೆಯುವವರು ಭಾಗ್ಯವಂತರು;
ದೇವರು ಅವರಿಗೆ
ತೃಪ್ತಿಯನ್ನೀಯುವರು.
5. ದಯಾವಂತರು
ಭಾಗ್ಯವಂತರು;
ದೇವರ ದಯೆ
ಅವರಿಗೆ ದೊರಕುವುದು.
6. ನಿರ್ಮಲ
ಹೃದಯಿಗಳು ಭಾಗ್ಯವಂತರು;
ಅವರು
ದೇವರನ್ನು ಕಾಣುವರು.
7. ಶಾಂತಿಗಾಗಿ
ಶ್ರಮಿಸುವವರು ಭಾಗ್ಯವಂತರು;
ಅವರು ದೇವರ
ಮಕ್ಕಳೆನಿಸಿಕೊಳ್ಳುವರು.
8. ನ್ಯಾಯ
ನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು.
324. ಏಳು ಪ್ರಧಾನ ಪಾಪಗಳು ಅಥವಾ
ಅವಗುಣಗಳು ಯಾವುವು ಮತ್ತು ಅವುಗಳಿಗೆ ವಿರುದ್ಧವಾದಂತಹ ಸದ್ಗುಣಗಳು ಯಾವುವು?
ಪ್ರಧಾನ ಪಾಪಗಳು ಸದ್ಗುಣಗಳು
1. ಅಹಂಕಾರ 1.
ದೈನ್ಯ
2. ದುರಾಶೆ 2.
ಧಾರಾಳತನ
3. ಕಾಮಾಭಿಲಾಷೆ 3.
ಬ್ರಹ್ಮಚರ್ಯೆ
4. ಕೋಪ 4.
ವಿನಯ
5. ಹೊಟ್ಟೆಬಾಕತನ 5.
ಮಿತಾಚಾರ
6. ಅಸೂಯೆ 6.
ಸೋದರ ಪ್ರೀತಿ
7. ಸೋಮಾರಿತನ 7.
ಕ್ರಿಯಾಶೀಲತೆ
325. ಇವನ್ನು ಪ್ರಧಾನ ಪಾಪಗಳೆಂದು
ಕರೆಯುವುದೇಕೆ?
ಇವನ್ನು ಪ್ರಧಾನ ಪಾಪಗಳೆಂದು ಕರೆಯುವುದರ
ಕಾರಣವೇನೆಂದರೆ ಇವೇ ಎಲ್ಲಾ ರೀತಿಯ ಪಾಪಗಳ ಉದ್ಭವಕ್ಕೆ ಮೂಲಗಳು.
326. ಪವಿತ್ರಾತ್ಮರಿಗೆ ವಿರುದ್ದವಾದ
ಆರು ಪಾಪಗಳು ಯಾವುವು?
1. ದುರಹಂಕಾರ
2. ಹತಾಶೆ
3. ತಿಳಿದಂತಹ ಸತ್ಯವನ್ನು ವಿರೋಧಿಸುವುದು.
4. ಇನ್ನೊಬ್ಬರ ಆಧ್ಯಾತ್ಮಿಕ ಒಳ್ಳೆಯತನವನ್ನು ಕಂಡು ಅಸೂಯೆ ಪಡುವುದು.
5. ಪಾಪದಲ್ಲಿ ಹಠಮಾರಿಯಾಗಿರುವುದು.
6. ಕಡೆಗೂ ಪಶ್ಚಾತ್ತಾಪ ಪಡದೆ ಇರುವುದು.
327. ಪ್ರತಿಕಾರಕ್ಕಾಗಿ ಸ್ವರ್ಗ
ಸಾಮ್ರಾಜ್ಯಕ್ಕೆ ಮೊರೆಯಿಡುವ ನಾಲ್ಕು ಪಾಪಗಳು ಯಾವುವು?
ಪ್ರತಿಕಾರಕ್ಕಾಗಿ ಸ್ವರ್ಗ ಸಾಮ್ರಾಜ್ಯಕ್ಕೆ ಮೊರೆಯಿಡುವ ನಾಲ್ಕು
ಪಾಪಗಳು ಯಾವುವೆಂದರೆ:
1. ಉದ್ದೇಶಪೂರ್ವಕವಾಗಿ
ಕೊಲೆಮಾಡುವುದು
2. ಸೋದೋಮಿನ
ಪಾಪ
3. ಬಡವರನ್ನು
ಹಿಂಸಿಸುವುದು
4. ಕೂಲಿಯಾಳಿನ
ದಿನಗೂಲಿಯನ್ನು ವಂಚಿಸುವುದು
328. ಯಾವಾಗ ನಾವು ಇನ್ನೊಬ್ಬರ
ಪಾಪಗಳಿಗೆ ಹೊಣೆಗಾರರಾಗುತ್ತೇವೆ?
ನಮ್ಮ ಸ್ವಂತ ತಪ್ಪಿನಿಂದಾಗಿ ಅವರ
ಪಾಪಗಳಿಗೆ ನಾವು ಕಾರಣವಾಗಿದ್ದಾಗ ಅಥವಾ ಅವರೊಂದಿಗೆ ಸೇರಿ ನಾವು ಆ ಪಾಪಗಳನ್ನು ಮಾಡಿದಾಗ ನಾವು
ಇನ್ನೊಬ್ಬರ ಪಾಪಗಳಿಗೆ ಹೊಣೆಗಾರರಾಗುತ್ತೇವೆ
329. ಎಷ್ಟು ವಿಧಗಳಲ್ಲಿ ನಾವು
ಇನ್ನೊಬ್ಬರ ಪಾಪಕ್ಕೆ ಕಾರಣವಾಗಬಹುದು ಅಥವಾ ಅವರ ಪಾಪದ ದೋಷದಲ್ಲಿ ಭಾಗಿಗಳಾಗಬಹುದು?
ಒಂಭತ್ತು ವಿಧಗಳಲ್ಲಿ ನಾವು ಇನ್ನೊಬ್ಬರ
ಪಾಪಕ್ಕೆ ಕಾರಣವಾಗಬಹುದು ಅಥವಾ ಅವರ ಪಾಪದ ದೋಷದಲ್ಲಿ ಭಾಗಿಗಳಾಗಬಹುದು. ಅವು ಯಾವುವೆಂದರೆ:
1. ಕೆಟ್ಟ
ಸಲಹೆ ನೀಡುವುದು
2. ಆಜ್ಞಾಪೂರಿತವಾಗಿ
ಮಾಡಿಸುವುದು
3. ಸಮ್ಮತಿಸುವುದು
4. ಪ್ರಚೋದನೆ
ಮಾಡುವುದು
5. ಹೊಗಳುವುದು
6. ಮುಚ್ಚುಮರೆ
ಮಾಡುವುದು
7. ಅಪರಾಧದಲ್ಲಿ
ಭಾಗಿಯಾಗುವುದು
8. ಮೌನ
ವಹಿಸುವುದು
9. ಮಾಡಿದ
ಕೆಟ್ಟದ್ದನ್ನು ಸಮರ್ಥಿಸುವುದು.
330. ಉನ್ನತವಾದ ಮೂರು ಒಳ್ಳೆಯ
ಕಾರ್ಯಗಳು ಯಾವುವು?
ಉನ್ನತವಾದ ಮೂರು ಒಳ್ಳೆಯ ಕಾರ್ಯಗಳು
ಯಾವುವೆಂದರೆ:
1. ಪ್ರಾರ್ಥನೆ
2. ಉಪವಾಸ
3. ದಾನಧರ್ಮ
331. ಸುವಾರ್ತೋಪದೇಶಗಳು ಯಾವುವು?
ಸುವಾರ್ತೋಪದೇಶಗಳು ಯಾವುವೆಂದರೆ,
1. ಸ್ವಯಂ
ದಾರಿದ್ರ್ಯ
2. ಶಾಶ್ವತ
ಬ್ರಹ್ಮಚರ್ಯ
3. ಸಂಪೂರ್ಣ
ವಿಧೇಯತೆ
332. ಸದಾ ನೆನಪಿಡತಕ್ಕಂತಹ ಕಡೆಯ
ನಾಲ್ಕು ವಿಷಯಗಳು ಯಾವುವು?
ಸದಾ ನೆನಪಿಡತಕ್ಕಂತಹ ಕಡೆಯ ನಾಲ್ಕು
ವಿಷಯಗಳು ಯಾವುವುವೆಂದರೆ:
1. ಮರಣ 2. ತೀರ್ಪು 3. ನರಕ 4. ಸ್ವರ್ಗ
5. ಕ್ರೈಸ್ತ ವಿಶ್ವಾಸಿಗಳ ಜೀವನ ನಿಯಮ
333. ನಮ್ಮ ಸಂರಕ್ಷಣೆಯನ್ನು
ಪಡೆಯಬೇಕಾದರೆ ನಾವು ಯಾವ ಜೀವನ ನಿಯಮವನ್ನು ಪಾಲಿಸಬೇಕು?
ನಮ್ಮ ಸಂರಕ್ಷಣೆಯನ್ನು ಪಡೆಯಬೇಕಾದರೆ
ಯೇಸುಸ್ವಾಮಿಯೇ ಬೋಧಿಸಿರುವ ಜೀವನ ನಿಯಮವನ್ನು ನಾವು ಪಾಲಿಸಬೇಕು.
334. ಯೇಸುಸ್ವಾಮಿ ಬೋಧಿಸಿರುವ ಜೀವನ
ನಿಯಮದ ಮೇರೆಗೆ ನಾವು ಏನು ಮಾಡತಕ್ಕದ್ದು?
ಯೇಸುಸ್ವಾಮಿ ಬೋಧಿಸಿರುವ ಜೀವನ ನಿಯಮದ
ಮೇರೆಗೆ ನಾವು ಪಾಪವನ್ನು ದ್ವೇಷಿಸಿ,
ದೇವರನ್ನು
ಪ್ರೀತಿಸತಕ್ಕದ್ದು.
335. ನಾವು ಪಾಪವನ್ನು ದ್ವೇಷಿಸುವುದು
ಹೇಗೆ?
ಯಾವುದೇ ವಸ್ತು ಅಥವಾ ವ್ಯಕ್ತಿಯ
ಪ್ರೀತಿಯಿಂದಲೋ ಭೀತಿಯಿಂದಲೋ ಸ್ವಯಂ ಚಿತ್ತದಿಂದ ಪಾಪಗೈಯಲು ಸಿದ್ದವಿರದಷ್ಟೂ ನಾವು ಸರ್ವ ಕೇಡಿಗೂ
ಮಿಗಿಲಾಗಿ ಪಾಪವನ್ನು ದ್ವೇಷಿಸತಕ್ಕದ್ದು.
336. ನಾವು ದೇವರನ್ನು ಪ್ರೀತಿಸುವುದು
ಹೇಗೆ?
ಎಲ್ಲ ವಸ್ತುಗಳಿಗೂ ಮಿಗಿಲಾಗಿ ನಮ್ಮ ತನುಮನದಿಂದ ನಮ್ಮ
ದೇವರನ್ನು ಪ್ರೀತಿಸಬೇಕು.
337. ನಾವು ದೇವರನ್ನು ಪ್ರೀತಿಸಲು
ಕಲಿಯುವುದು ಹೇಗೆ?
ನನ್ನ ದೇವರೇ, ನಿಮ್ಮನ್ನು ಪ್ರೀತಿಸಲು ನನಗೆ
ಕಲಿಸಿರಿ ಎಂದು ಅವರಲ್ಲಿ ನಾವು ಅಂಗಲಾಚಬೇಕು.
338. ದೇವರಲ್ಲಿ ನಮಗಿರುವ ಪ್ರೀತಿ
ನಮ್ಮಿಂದ ಏನು ಮಾಡಿಸುತ್ತದೆ?
ದೇವರು ಎಷ್ಟು ಒಳ್ಳೆಯವರೆಂದು ನಾವು
ನೆನೆಯುವಂತೆ,
ಈ ಕುರಿತು
ನಮ್ಮ ಅಂತರಂಗದಲ್ಲೇ ನಾವು ಹೇಳಿಕೊಳ್ಳುವಂತೆ ಹಾಗೂ ಯಾವಾಗಲೂ ಅವರು ಒಲಿಯುವುದನ್ನೇ ನಾವು
ಗೈಯವಂತೆ ದೇವರಲ್ಲಿ ನಮಗಿರುವ ಪ್ರೀತಿ ನಮ್ಮನ್ನು ಪ್ರಚೋದಿಸುತ್ತದೆ.
339. ಇತರರನ್ನೂ ನಾವು ಪ್ರೀತಿಸಬೇಕೆಂದು
ಯೇಸುಸ್ವಾಮಿಯು ನಮಗೆ ವಿಧಿಸುತ್ತಾರೆಯೇ?
ಅವರ ಸಲುವಾಗಿ ಇತರರನ್ನೂ ಯಾರೊಬ್ಬರನ್ನೂ
ಬಿಡದೆ, ಎಲ್ಲರನ್ನೂ ಪ್ರೀತಿಸಬೇಕೆಂದು
ಯೇಸುಸ್ವಾಮಿ ನಮಗೆ ವಿಧಿಸುತ್ತಾರೆ
340. ಇತರರನ್ನು ನಾವು ಪ್ರೀತಿಸುವುದು
ಹೇಗೆ?
ಪರಸ್ಪರರ ಹಿತವನ್ನೇ ಬಯಸಿ, ಅವರಿಗಾಗಿ ಪ್ರಾರ್ಥಿಸಿ ಯಾವ
ವಿಧದಲ್ಲೂ ಅವರಿಗೆ ಹಾನಿ ಮಾಡದೆ ಕೆಟ್ಟದ್ದನ್ನು ಆಡದೆ ಹಾಗೂ ಮಾಡದೆ ಇರುವುದರ ಮೂಲಕ ನಾವು
ಅವರನ್ನು ಪ್ರೀತಿಸುತ್ತೇನೆ.
341. ನಮ್ಮ ಶತ್ರುಗಳನ್ನು ಕೂಡ ನಾವು
ಪ್ರೀತಿಸಬೇಕೆ?
ನಮ್ಮ ಶತ್ರುಗಳನ್ನು ನಾವು ಮನಸಾರೆ
ಕ್ಷಮಿಸುವುದು ಅಲ್ಲದೆ,
ಅವರಿಗೆ
ಹಿತವನ್ನೇ ಹಾರೈಸಬೇಕು ಮತ್ತು ಅವರಿಗಾಗಿ ಪ್ರಾರ್ಥಿಸಿ ಅವರನ್ನು ಪ್ರೀತಿಸಬೇಕು.
342. ಯೇಸುಕ್ರಿಸ್ತರು ನಮಗೆ ಮತ್ತೊಂದು
ಆದೇಶವನ್ನಿತ್ತಿದ್ದಾರೆಯೇ?
ಯೇಸುಕ್ರಿಸ್ತರು ನಮಗಿತ್ತ ಮತ್ತೊಂದು
ಆದೇಶವಿದು ನನ್ನ ಹಿಂದೆ ಬರಲೆಣಿಸುವವರು ತಮ್ಮನ್ನು ತಾವೇ ನಿಗ್ರಹಿಸಬೇಕು. ಅನುದಿನವೂ ತಮ್ಮ
ಶಿಲುಬೆಯನ್ನು ಹೊತ್ತುಕೊಳ್ಳಬೇಕು ಮತ್ತು ನನ್ನನ್ನು ಹಿಂಬಾಲಿಸಬೇಕು
343. ನಮ್ಮನ್ನೇ ನಾವು ನಿಗ್ರಹಿಸುವುದು
ಹೇಗೆ?
ನಮಗೆ ಇಷ್ಟವಾದುದನ್ನು ತೊರೆದು ನಮ್ಮ
ಗೌರವ, ಪ್ರವೃತ್ತಿ, ಮೋಹ ಮತ್ತು ಅನುರಾಗಗಳನ್ನು
ಹತ್ತಿಕ್ಕಿ ನಮ್ಮನ್ನೇ ನಾವು ನಿಗ್ರಹಿಸುತ್ತೇವೆ.
344. ನಮ್ಮನ್ನೇ ನಾವು
ನಿಗ್ರಹಿಸುವುದೇಕೆ?
ನಮ್ಮ ಬಾಲ್ಯದಿಂದಲೂ ನಮ್ಮ ಸ್ವಾಭಾವಿಕ
ಪ್ರವೃತ್ತಿಗಳು ನಮ್ಮನ್ನು ಕೆಡಕನ್ನು ಮಾಡಲು ಪ್ರೇರೇಪಿಸುತ್ತವೆ. ಆತ್ಮನಿಗ್ರಹದಿಂದ ನಾವು
ಅವನ್ನು ತಡೆಯದೆ ಹೋದರೆ ನಮ್ಮನ್ನು ಅವು ನರಕಕ್ಕೆ ಕೊಂಡೊಯ್ಯುವುದು ಖಚಿತ. ಎಂದೇ ನಮಗೆ
ಆತ್ಮನಿಗ್ರಹವು ಅನಿವಾರ್ಯ.
345. ಅನುದಿನವೂ ನಮ್ಮ ಶಿಲುಬೆಯನ್ನು
ನಾವು ಹೊತ್ತುಕೊಂಡು ನಡೆಯುವುದು ಹೇಗೆ?
ಕೇವಲ ಕೆಲ ಕಾಲದ ಈ ಬಾಳಿನ
ಪರಿಶ್ರಮವನ್ನೂ ಸಂಕಷ್ಟಗಳನ್ನೂ ಅನುದಿನವೂ ನಾವು ತಾಳ್ಮೆಯಿಂದ ಅನುಭವಿಸುತ್ತಾ ದೇವರಲ್ಲಿ
ನಮಗಿದ್ದ ಪ್ರೀತಿಗಾಗಿ ಅವನ್ನು ಉದಾರ ಮನಸ್ಸಿನಿಂದ ಸ್ವೀಕರಿಸುವುದರಿಂದ ನಮ್ಮ ಶಿಲುಬೆಯನ್ನು
ನಾವು ದಿನಂಪ್ರತಿ ಹೊತ್ತುಕೊಂಡು ನಡೆಯುತ್ತೇವೆ.
346. ನಮ್ಮ ಪ್ರಭು ಕ್ರಿಸ್ತರನ್ನು ನಾವು
ಹಿಂಬಾಲಿಸುವುದು ಹೇಗೆ?
ಪ್ರಭುವಿನ ಹೆಜ್ಜೆಗಳಲ್ಲಿ ಕಾಲಿಟ್ಟು
ಅವರ ಸದ್ಗುಣಗಳನ್ನೇ ನಮ್ಮ ನಡತೆಯಲ್ಲಿ ತೋರಿಸುವುದರಿಂದ ಅವರನ್ನು ನಾವು ಹಿಂಬಾಲಿಸುತ್ತೇವೆ.
347. ಪ್ರಭು ಕ್ರಿಸ್ತರಿಂದ ನಾವು
ಕಲಿಯಬೇಕಾದ ಪ್ರಮುಖ ಸದ್ಗುಣಗಳು ಯಾವುವು?
ನಮ್ರತೆ, ದೀನತೆ ಮತ್ತು ವಿಧೇಯತೆ ಇವೇ ಪ್ರಭು
ಕ್ರಿಸ್ತರಿಂದ ನಾವು ಕಲಿಯಬೇಕಾದ ಪ್ರಮುಖ ಸದ್ಗುಣಗಳು
348. ನಾವು ಜೀವನ ಪರಿಯಂತ ಸೆಣಸಬೇಕಾದ
ಶತ್ರುಗಳು ಯಾವುವು?
ನಾವು ಜೀವನ ಪರಿಯಂತೆ ಸೆಣಸಬೇಕಾದ
ಶತ್ರುಗಳು ಪಿಶಾಚಿ,
ಈ ಲೋಕ ಮತ್ತು
ನಮ್ಮ ಶರೀರ.
349. ಪಿಶಾಚಿಯೆಂದರೇನು?
ಪಿಶಾಚಿಯೆಂದರೆ ಸೈತಾನ ಮತ್ತವನ ದುರುಳ
ದೂತರು. ತಮ್ಮಂತೆಯೇ ನಾವು ಕೂಡ ನರಕಕ್ಕೆ ಬಿದ್ದು ನರಳಾಡಬೇಕೆಂದು ಅವರೇ ನಮ್ಮನ್ನು ಪಾಪಗೈಯಲು
ಪ್ರೋತ್ಸಾಹಿಸುವರು
350. ಈ ಲೋಕವೆಂದರೇನು?
ಜನರ ಹುಸಿ ಮೌಲ್ಯಗಳು ಹಾಗು ಈ ಬಾಳಿನ
ಆಶಾಪಾಶಗಳು,
ಸಂಪತ್ತು
ಮತ್ತು ವಿಲಾಸಗಳಿಗೆ ದೇವರಿಗಿಂತಲೂ ಹೆಚ್ಚಿನ ಮಹತ್ವವನ್ನು ಕೊಡುವ ಜನರ ಸಮಾಜವು ಇದೇ ಈ ಲೋಕವೆಂದು
ಅರ್ಥ.
351. ಪಿಶಾಚಿಯನ್ನೂ ಲೋಕವನ್ನೂ ಆತ್ಮದ
ಶತ್ರುಗಳ ಸಾಲಿಗೆ ನಾವು ಸೇರಿಸುವುದು ಏಕೆ?
ನಡೆಯಿಂದಲೂ ನುಡಿಯಿಂದಲೂ ಇವು ಯಾವಾಗಲೂ
ನಮ್ಮನ್ನು ಅನಂತ ವಿನಾಶದ ದಾರಿಯಲ್ಲಿ ಕೊಂಡೊಯ್ಯಲು ಹೆಣಗುವುದರಿಂದ ಇವನ್ನು ಆತ್ಮದ ಶತ್ರುಗಳ
ಸಾಲಿಗೆ ನಾವು ಸೇರಿಸುವುದು
352. ನಮ್ಮ ಶರೀರವೆಂದರೇನು?
ನಮ್ಮ ಶರೀರವೆಂದರೆ ನಮ್ಮ ನೀಚ
ಕಾಮಲಾಲಸೆಗಳು ಪ್ರವೃತ್ತಿಗಳು. ಇವೇ ನಮ್ಮ ಅತ್ಯುಗ್ರವಾದ ವೈರಿಗಳು.
353. ನಮ್ಮನ್ನು ಪಾಪಕ್ಕೆ ಸೆಳೆಯದಂತೆ
ನಮ್ಮ ಆತ್ಮದ ವೈರಿಗಳನ್ನು ನಾವು ತಡೆಯುವುದು ಹೇಗೆ?
ನಮ್ಮ ಆತ್ಮದ ವೈರಿಗಳು ಪಾಪಕ್ಕೆ
ಸೆಳೆಯದಂತೆ ನಾವು ಯಾವಾಗಲೂ ಎಚ್ಚರಿಕೆ ವಹಿಸಿ ಪ್ರಾರ್ಥಿಸುತ್ತಾ ಅವುಗಳ ಆಕರ್ಷಣೆ ಹಾಗೂ
ಪ್ರಲೋಭನೆಗಳ ವಿರುದ್ದ ಹೋರಾಡಬೇಕು
354. ಪಿಶಾಚಿ, ಲೋಕ ಮತ್ತು ನಮ್ಮ ಶರೀರದ
ವಿರುದ್ದ ನಾವು ಹೋರಾಡುವಾಗ ಯಾರಲ್ಲಿ ನಾವು ವಿಶ್ವಾಸವಿಡಬೇಕು?
ಪಿಶಾಚಿ, ಲೋಕ ಮತ್ತು ನಮ್ಮ ಶರೀರದ ವಿರುದ್ದ ನಾವು
ಹೋರಾಡುವಾಗ ನಮ್ಮನ್ನೇ ನಾವು ಅವಲಂಬಿಸುವುದಲ್ಲ. ನಮಗೆ ದೇವರಲ್ಲಿ ವಿಶ್ವಾಸವಿರಬೇಕು: ನನ್ನನ್ನು
ಸಬಲಗೊಳಿಸುವ ಪ್ರಭುವಿನಲ್ಲಿ ನಾನು ಏನನ್ನೂ ಮಾಡಬಲ್ಲೆನು ಎಂದು ಸಂತ ಪೌಲರೇ ಹೇಳಿದ್ದಾರೆ
6. ಕ್ರೈಸ್ತ ವಿಶ್ವಾಸಿಯ ದೈನಂದಿನ ಅಭ್ಯಾಸ
355. ನೀನು ದಿನವನ್ನು ಹೇಗೆ
ಪ್ರಾರಂಭಿಸಬೇಕು?
ನಾನು ದಿನವನ್ನು ಹೀಗೆ ಪ್ರಾರಂಭಿಸಬೇಕು.
ಬೆಳಗ್ಗೆ ಎದ್ದಾಕ್ಷಣ ನಾನು ಶಿಲುಬೆಯ ಚಿಹ್ನೆಯನ್ನು ಮಾಡಿಕೊಂಡು ಇಂತಹ ಯಾವೊಂದು ಪ್ರಾರ್ಥನೆ
ಮಾಡಬೇಕು. ನನ್ನ ದೇವರೇ,
ನನ್ನ
ತನುಮನವನ್ನು ನಾನು ನಿಮಗೆ ಒಪ್ಪಿಸುತ್ತೇನೆ.
356. ನಾನು ಬೆಳಗ್ಗೆ ಹೇಗೆ ಏಳಬೇಕು?
ನಾನು ಬೆಳಗ್ಗೆ ಉತ್ಸಾಹದಿಂದ ಏಳಬೇಕು.
ಸಭ್ಯ ಬಟ್ಟೆಯುಟ್ಟು,
ಮೊಣಕಾಲೂರಿ
ಪ್ರಾತಃಕಾಲದ ನನ್ನ ಪ್ರಾರ್ಥನೆಗಳನ್ನು ಹೇಳಬೇಕು.
357. ನಿನಗೆ ಬಿಡುವೂ ಅನುಕೂಲವೂ ಇದ್ದರೆ
ಬಲಿಪೂಜೆಯಲ್ಲಿ ನೀನು ಭಾಗವಹಿಸಬೇಕೆ?
ಬಿಡುವೂ ಅನುಕೂಲವೂ ಇದ್ದರೆ
ಬಲಿಪೂಜೆಯಲ್ಲಿ ಭಾಗವಹಿಸುವುದೇ ಅತ್ಯತ್ತಮ ಕಾರ್ಯ. ಅದು ಎಲ್ಲಾ ಭಕ್ತಿ ಕಾರ್ಯಗಳಿಗಿಂತ ಅಧಿಕ
ಫಲದಾಯಕ
358. ಅನುದಿನವೂ ಧ್ಯಾನ ಮಾಡುವುದು
ಉಪಯುಕ್ತವೆ?
ಅನುದಿನವೂ ಧಾನ್ಯ ಮಾಡುವುದು ಉಪಯುಕ್ತ.
ಇದು ಸರ್ವ ಸಂತರ ದಿನಚರ್ಯೆಯು ಆಗಿತ್ತು.
359. ನಾವು ಏನನ್ನು ಧ್ಯಾನಿಸಬೇಕು?
ವಿಶೇಷವಾಗಿ ನಮ್ಮ ಬಾಳಿನ ನಾಲ್ಕು ಅಂತಿಮ
ವಿಷಯಗಳನ್ನು ಯೇಸುಸ್ವಾಮಿಯ ಜೀವನ ಮತ್ತು ಯಾತನೆಯನ್ನೂ ಕುರಿತು ನಾವು ಧ್ಯಾನಿಸುವುದು ಉತ್ತಮ.
360. ನಾವು ಒಳ್ಳೆಯ ಪುಸ್ತಕಗಳನ್ನು
ಆಗಾಗ ಓದಬೇಕೆ?
ಪವಿತ್ರ ಸುವಾರ್ತೆಗಳು, ಸಂತರ ಜೀವನ ಚರಿತ್ರೆಗಳು, ನಮ್ಮ ವಿಶ್ವಾಸವನ್ನೂ
ಭಕ್ತಿಯನ್ನೂ ಪೋಷಿಸುವ ಪುಸ್ತಕಗಳನ್ನು ಓದಬೇಕು, ಲೌಕಿಕವೇ
ಸರ್ವಸ್ವವೆಂದು ಬೋಧಿಸುತ್ತ ನಮ್ಮನ್ನು ಅಡ್ಡದಾರಿಗಳೆಯುವುದರಿಂದ ಈ ಆಧ್ಯಾತ್ಮಿಕ ಗ್ರಂಥಗಳು
ನಮ್ಮನ್ನು ರಕ್ಷಿಸುತ್ತವೆ. ಆದುದರಿಂದ ಇವನ್ನೆಲ್ಲ ನಾವು ಓದುತ್ತಾ ಇರಬೇಕು.
361. ಆಹಾರ ಪಾನೀಯ ನಿದ್ರೆ ಮತ್ತು
ವಿನೋದಾವಳಿ ಈ ಕುರಿತು ನೀವೇನು ಮಾಡಬೇಕು?
ಆಹಾರ, ಪಾನೀಯ ನಿದ್ರೆ ಮತ್ತು ವಿನೋದಾವಳಿ
ಇವನ್ನೆಲ ಮಿತ ಪ್ರಮಾಣದಲ್ಲಿ ಬಳಸಿ ದೇವರಿಗೆ ಮೆಚ್ಚುವುದನ್ನೇ ನಾನು ಅರಸಬೇಕು.
362. ಊಟದ ಮುನ್ನ ಮಾಡುವ
ಪ್ರಾರ್ಥನೆಯನ್ನು ಹೇಳು:
ಪ್ರಭೂ, ನಮ್ಮನ್ನೂ, ನಿಮ್ಮ ಔದಾರ್ಯದ ಫಲವಾಗಿ ನಾವೀಗ
ಸ್ವೀಕರಿಸುವ ನಿಮ್ಮ ಈ ಕೊಡುಗೆಗಳನ್ನೂ ಆಶೀರ್ವದಿಸಿರಿ. ನಮ್ಮ ಪ್ರಭು ಕ್ರಿಸ್ತರ ಮುಖಾಂತರ, ಆಮೆನ್.
363. ಊಟದ ಬಳಿಕ ಮಾಡುವ
ಪ್ರಾರ್ಥನೆಯನ್ನು ಹೇಳು:
ಪ್ರಭೂ ದೇವರೇ, ನೀವು ನಮಗೆ ಮಾಡಿದ ಎಲ್ಲಾ
ಉಪಕಾರಗಳಿಗಾಗಿ ನಾನು ನಿಮ್ಮನ್ನು ವಂದಿಸುತ್ತೇನೆ. ಎಂದೆಂದಿಗೂ ಬಾಳಿ ಆಳುವವರು ನೀವು. ಮೃತರಾದ
ಭಕ್ತ ವಿಶ್ವಾಸಿಗಳ ಆತ್ಮಗಳು ದೇವರ ದಯೆಯಿಂದ ಎಂದೆಂದಿಗೂ ವಿಶ್ರಮಿಸಲಿ. ಆಮೆನ್. ಪ್ರಭು ದೇವರು
ನಮ್ಮನ್ನು ಆಶೀರ್ವದಿಸಲಿ,
ಕೇಡಿನಿಂದ
ಕಾಪಾಡಲಿ ಮತ್ತು ಅನಂತ ಜೀವನಕ್ಕೆ ಕೊಂಡೊಯ್ಯಲಿ. ಆಮೆನ್.
364. ನಿನ್ನ ದೈನಂದಿನ ಸಾಮಾನ್ಯ
ಕೆಲಸವನ್ನೂ ದುಡಿಮೆಯನ್ನೂ ನೀನು ಪಾವನಗೊಳಿಸುವುದು ಹೇಗೆ?
ನನ್ನ ದೈನಂದಿನ ಸಾಮಾನ್ಯ ಕೆಲಸದಲ್ಲೂ
ದುಡಿಮೆಯಲ್ಲೂ ನಾನು ನಿರತನಾಗಿರುವಾಗ ನನ್ನ ತನುಮನವನ್ನು ದೇವರಿಗೆ ಒಪ್ಪಿಸಿ, ಚುಟುಕು ಪ್ರಾರ್ಥನೆಯನ್ನು
ಮಾಡುವುದರಿಂದ ಅದನ್ನೆಲ್ಲ ನಾನು ಪಾವನಗೊಳಿಬಹುದು.
365. ನೀನು ಪಾಪ ಪ್ರಚೋದನೆಯನ್ನು
ಅನುಭವಿಸುತ್ತಿರುವಾಗ ಏನು ಮಾಡಬೇಕು?
ನಾನು ಪಾಪ ಪ್ರಚೋದನೆಯನ್ನು ಅನುಭವಿಸುತ್ತಿರಲು
ನನ್ನ ಹೃದಯದ ಮೇಲೆ ಶಿಲುಬೆಯ ಚಿಹ್ನೆಯನ್ನು ಮಾಡಿ ಅತ್ಯಂತ ಆಸೆಯಿಂದ ದೇವರಲ್ಲಿ ಮೊರೆಯಿಡುತ್ತಾ, ಪ್ರಭು ದೇವರೇ, ನನ್ನನ್ನು ಸಲಹಿ, ಇಲ್ಲವೆ ನಾನು ನಾಶವಾಗುತ್ತೇನೆ
ಎಂದು ಪ್ರಾರ್ಥಿಸುವೆನು.
366. ನೀನು ಪಾಪಗೈದೆ ಎಂದಾದರೆ ಮುಂದೇನು
ಮಾಡುವೆ?
ನಾನು ಪಾಪಗೈದೆನೆಂದರೆ ಯೇಸುಸ್ವಾಮಿಯ
ಕಾಲಿಗೆ ಬೀಳುವುದೇ ನನ್ನ ರಕ್ಷೆಯೆಂದು ಹೇಳಿಕೊಂಡು ಅಂತರಂಗದಲ್ಲಿ ಮರುಗುತ್ತ ಅವರ ಕ್ಷಮೆಗಾಗಿ
ಅಂಗಲಾಚುವೆನು.
367. ದೇವರು ನಿನಗೆ ಏನಾದರೂ ಕಷ್ಟ, ಕಾಯಿಲೆ ಅಥವಾ ನೋವನ್ನು
ಕಳುಹಿಸಿದರೆ ನೀನೇನು ಹೇಳಬೇಕು?
ದೇವರು ನನಗೆ ಏನಾದರೂ ಕಷ್ಟ ಕಾಯಿಲೆ
ಅಥವಾ ನೋವನ್ನು ಕಳುಹಿಸಿದರೆ: ಪ್ರಭು ದೇವರೆ ನಿಮ್ಮ ಚಿತ್ತದಂತಾಗಲಿ, ನನ್ನ ಪಾಪಗಳ ಪ್ರಾಯಶ್ಚಿತ್ತವೇ ಇದು
ಎಂದು ನಾನು ನಂಬುತ್ತೇನೆ ಎಂದು ನಾನು ಹೇಳಬೇಕು.
368. ದಿನವಿಡೀ ಯಾವ ಪ್ರಾರ್ಥನೆಯನ್ನು ನೀನು
ಹೇಳುತ್ತಾ ಇರಬೇಕು?
ದಿನವಿಡೀ ನಾನು ಈ ಕೆಳಗಿನ ಪ್ರಾರ್ಥನೆಗಳನ್ನು
ಹೇಳುತ್ತಾ ಇರಬೇಕು:
ಪಿತ, ಸುತ ಮತ್ತು ಪವಿತ್ರಾತ್ಮರಿಗೆ ಮಹಿಮೆ ಸಲ್ಲಲಿ.
ಆದಿಯಲ್ಲಿ ಇದ್ದ ಹಾಗೆ ಈಗಲೂ ಯಾವಾಗಲೂ ಯುಗಯುಗಾಂತರಕ್ಕೂ ಆಮೆನ್.
ಎಲ್ಲ ವಿಷಯಗಳಲ್ಲೂ ದಿವ್ಯತಮ, ನ್ಯಾಯತಮ ಮತ್ತು ಪ್ರಿಯತಮ ದೇವಚಿತ್ತವು ನೆರವೇರಲಿ, ಸರ್ವದಾ ಸ್ತುತಿಸ್ತೋತ್ರವನ್ನು ಪಡೆಯಲಿ. ಪಾವನತಮ ಪರಮ ಸಂಸ್ಕಾರವೇ, ಸರ್ವಸ್ತುತಿಯೂ ಸರ್ವ ಕೃತಜ್ಞತೆಯೂ
ಅಡಿಗಡಿಗೆ ನಿಮಗೆ ಸಲ್ಲಲಿ.
ಭಜಿಸಿರಿ ಯೇಸು ಸ್ವಾಮಿಯ, ಭಜಿಸಿರಿ ಅನವರತ.
ಪ್ರಭು ಯೇಸು ದಯೆ ತೋರು.
ಮರಿಯಾ ಮಾತೆಯೇ ನೆರವಾಗು.
369. ದಿನವನ್ನು ನೀನು ಕೊನೆಗೊಳಿಸುವುದು
ಹೇಗೆ?
ಮೊಣಕಾಲೂರಿ, ನನ್ನ
ರಾತ್ರಿಯ ಪ್ರಾರ್ಥನೆಗಳನ್ನು ಹೇಳಿ ನಾನು ದಿನವನ್ನು ಕೊನೆಗೊಳಿಸಬೇಕು.
370. ನಿನ್ನ ರಾತ್ರಿಯ ಪ್ರಾರ್ಥನೆ ಬಳಿಕ
ನೀನೇನು ಮಾಡಬೇಕು?
ರಾತ್ರಿಯ ಪ್ರಾರ್ಥನೆಗಳ ಬಳಿಕ ನಾನು ಸಭ್ಯವಾಗಿ
ಹಾಸಿಗೆಯ ಮೇಲೆ ಮಲಗಬೇಕು.
ಸಾವಿನ ವಿಷಯ ಚಿಂತಿಸುತ್ತ
ನನ್ನ ಮನವನ್ನು ಶಿಲುಬೆಯ ಬುಡದಲ್ಲೇ ನೆಟ್ಟು ನನಗಾಗಿ ಶಿಲುಬೆಯ ಮೇಲೆ ಮೃತನಾದ ನನ್ನ ರಕ್ಷಕನನ್ನು
ನೆನೆಯುತ್ತ ನಿದ್ರಾಪರವಶನಾಗಬೇಕು.
ಅನುಬಂಧ
ಪಾಪನಿವೇದನೆ
ಸರ್ವಶಕ್ತ ದೇವರಿಗೂ, ಸೋದರ ಸೋದರಿಯರೇ ನಿಮಗೂ, ಯೋಚನೆಯಿಂದಲೂ ನುಡಿಯಿಂದಲೂ, ನಡತೆಯಿಂದಲೂ, ಕರ್ತವ್ಯಲೋಪದಿಂದಲೂ ನಾನು ಅನೇಕ
ಪಾಪಗಳನ್ನು ಮಾಡಿದ್ದೇನೆಂದು ನಿವೇದಿಸುತ್ತೇನೆ. ನನ್ನ
ಪಾಪವೇ, ನನ್ನ ನನ್ನ ಪಾಪವೇ ನನ್ನ ಮಹಾಪಾಪವೇ. ಆದುದರಿಂದ ಸದಾ ಕನ್ನಿಕೆಯಾದ ಸಂತ
ಮರಿಯಮ್ಮನವರನ್ನೂ ಸಕಲ ದೇವದೂತರನೂ ಸಂತರನ್ನೂ, ಸೋದರ
ಸೋದರಿಯರೇ ನಿಮ್ಮನ್ನೂ ನನಗಾಗಿ ಪ್ರಭು ದೇವರನ್ನು ಪ್ರಾರ್ಥಿಸಬೇಕೆಂದು ಬೇಡಿಕೊಳ್ಳುತ್ತೇನೆ.
ಜಪಮಾಲೆ (ರೋಜಾರಿಯುಂ)
1. ಸಂತೋಷದ ರಹಸ್ಯಗಳು
(ಸೋಮವಾರ ಮತ್ತು ಶನಿವಾರ)
1.
ಗಬ್ರಿಯೇಲ್ ದೂತನು
ಮರಿಯಮ್ಮನವರಿಗೆ ಮಂಗಳ ವಾರ್ತೆಯನ್ನು ಹೇಳಿದನು.
2.
ದೇವಮಾತೆಯು ಸಂತ
ಎಲಿಜಬೇತಮ್ಮನನ್ನು ಸಂಧಿಸಿದರು.
3.
ಯೇಸುಸ್ವಾಮಿ ದನದ
ಕೊಟ್ಟಿಗೆಯಲ್ಲಿ ಜನಿಸಿದರು.
4.
ಮರಿಯಮ್ಮನವರು ಬಾಲಯೇಸುವನ್ನು
ದೇವಾಲಯದಲ್ಲಿ ಕಾಣಿಕೆಯಾಗಿ ಒಪ್ಪಿಸಿದರು.
5.
ಮೂರು ದಿನ ಕಾಣದೆ
ಹೋದ ಬಾಲಯೇಸು ಮಾತಾಪಿತೃಗಳಿಗೆ ದೇವಾಲಯದಲ್ಲಿ ಸಿಕ್ಕಿದರು.
2. ದುಃಖದ ರಹಸ್ಯಗಳು
(ಮಂಗಳವಾರ ಮತ್ತು ಶುಕ್ರವಾರಗಳು)
1.
ಯೇಸು ಗೆತ್ಸೆಮನಿ
ತೋಪಿನಲ್ಲಿ ರಕ್ತದ ಬೆವರನ್ನು ಸುರಿಸಿದರು.
2.
ಯೇಸುವನ್ನು ಕಂಬಕ್ಕೆ
ಕಟ್ಟಿ ಚಾಟಿಗಳಿಂದ ಹೊಡೆದರು.
3.
ಯೇಸುವಿನ ಶಿರಸ್ಸಿಗೆ
ಮುಳ್ಳಿನ ಕಿರೀಟವನ್ನು ತೊಡಿಸಿದರು.
4.
ಯೇಸು ಶಿಲುಬೆಯನ್ನು
ಹೊತ್ತುಕೊಂಡು ಕಪಾಲ ಬೆಟ್ಟವನ್ನು ಹತ್ತಿದರು.
5.
ಯೇಸು ಶಿಲುಬೆಯ
ಮೇಲೆ ನಮಗಾಗಿ ಪ್ರಾಣ ತ್ಯಾಗ ಮಾಡಿದರು.
3. ಮಹಿಮೆಯ ರಹಸ್ಯಗಳು
(ಬುಧವಾರ ಮತ್ತು ಭಾನುವಾರ)
1.
ಮೃತರಾದ ಯೇಸುವು
ಮೂರನೆಯ ದಿನ ಪುನರುತ್ಥಾನರಾದರು.
2.
ಪುನರುತ್ಥಾನದ ನಂತರ
ನಲವತ್ತನೇ ದಿನ ಯೇಸು ಸ್ವರ್ಗಕ್ಕೆ ಆರೋಹಣವಾದರು.
3.
ಪವಿತ್ರಾತ್ಮರು
ಪ್ರೇಷಿತರ ಮೇಲೆ ಇಳಿದು ಬಂದರು.
4.
ದೇವಮಾತೆಯು ಸ್ವರ್ಗಸ್ವೀಕೃತರಾದರು.
5.
ದೇವಮಾತೆ ಸ್ವರ್ಗದ
ಹಾಗೂ ಸಕಲ ಸಂತರ ರಾಣಿಯಾಗಿ ಕಿರೀಟಧಾರಿಣಿಯಾದರು.
4. ಬೆಳಕಿನ ರಹಸ್ಯಗಳು (ಗುರುವಾರ)
1.
ಯೇಸು ಜೋರ್ದಾನ್
ನದಿಯಲ್ಲಿ ದೀಕ್ಷಾಸ್ನಾನವನ್ನು ಸ್ವೀಕರಿಸಿದರು.
2.
ಯೇಸುವು ಕಾನಾ ಊರಿನ
ಮದುವೆ ಸಮಾರಂಭದಲ್ಲಿ ತಮ್ಮನ್ನೇ ಪ್ರಕಟಪಡಿಸಿದರು.
3.
ಯೇಸುವು ಜೀವನ ಪರಿವರ್ತನೆಯ
ಕರೆಯೊಂದಿಗೆ ದೇವರ ರಾಜ್ಯವನ್ನು ಪ್ರಕಟಿಸಿದರು.
4.
ಯೇಸುವು ಮಹಿಮಾರೂಪ
ತಾಳಿದರು.
5.
ಯೇಸು ಪಾಸ್ಖ ರಹಸ್ಯದ
ಸ್ಮರಣೆಗಾಗಿ ಪರಮಪ್ರಸಾದವನ್ನು ಸ್ಥಾಪಿಸಿದರು.
ತ್ರಿಕಾಲ ಪ್ರಾರ್ಥನೆ (ಆಂಜೆಲುಸ್ ದೋಮಿನಿ)
ಪ್ರಭುವಿನ ದೂತನು ಮರಿಯಮ್ಮನವರಿಗೆ ಸಂದೇಶವಿತ್ತನು
ಇವರ ಪವಿತ್ರಾತ್ಮರಿಂದ ಗರ್ಭಧರಿಸಿದರು - ನಮೋ ಮರಿಯಾ
ಇಗೋ ಪ್ರಭುವಿನ ಸೇವಕಿ
ನಿಮ್ಮ ವಚನದ ಪ್ರಕಾರ ನನಗಾಗಲಿ – ನಮೋ ಮರಿಯಾ
ವಾರ್ತೆ ಎಂಬುವರು ಮನುಷ್ಯರಾದರು
ಮತ್ತು ನಮ್ಮಲ್ಲಿ ವಾಸ ಮಾಡಿದರು – ನಮೋ ಮರಿಯಾ
ಕ್ರಿಸರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ
ಪರಿಶುದ್ಧ ದೇವಮಾತೆಯೇ ನಮಗಾಗಿ ಪ್ರಾರ್ಥಿಸಿ
ಪ್ರಾರ್ಥಿಸೋಣ
ಪ್ರಭೂ, ದೇವದೂತನ ಸಂದೇಶದಿಂದ ನಿಮ್ಮ ಪುತ್ರರಾದ
ಯೇಸುಕ್ರಿಸ್ತರು ಮನುಷ್ಯ ಸ್ವಭಾವ ತಾಳಿದ್ದನ್ನು
ಅರಿತಿರುವ ನಾವು ಅವರ ಪಾಡುಗಳ ಹಾಗೂ
ಶಿಲುಬೆಯ ಮೂಲಕ ಪುನರುತ್ಥಾನದ
ಮಹಿಮೆಯನ್ನು ಪಡೆಯುವಂತೆ ನಿಮ್ಮ
ಕೃಪಾವರವನ್ನು ನಮ್ಮ ಹೃದಯದಲ್ಲಿ ಸುರಿಸಬೇಕೆಂದು
ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು
ಪ್ರಾರ್ಥಿಸುತ್ತೇವೆ, ಆಮೆನ್.
ಸ್ವರ್ಗದ ರಾಣಿಯೇ (ರೆಜಿನಾ ಚೇಲಿ)
ಸ್ವರ್ಗದ ರಾಣಿಯೇ ಆನಂದಿಸಿರಿ : ಅಲ್ಲೆಲೂಯ
ಏಕೆಂದರೆ ಯಾರನ್ನು ನಿಮ್ಮ ಉದರದಲ್ಲಿ ಧರಿಸಲು ನೀವು
ಪಾತ್ರರಾದಿರೋ : ಅಲ್ಲೆಲೂಯ
ಅವರು ತಾವು ಹೇಳಿದ ಪ್ರಕಾರ ಪುನರುತ್ಥಾನರಾಗಿದ್ದಾರೆ :
ಅಲ್ಲೆಲೂಯ
ನಮಗಾಗಿ ದೇವರನ್ನು ಪ್ರಾರ್ಥಿಸಿರಿ : ಅಲ್ಲೆಲೂಯ
ಕನ್ಯಾ ಮರಿಯಮ್ಮನವರೇ ಸಂತೋಷಿಸಿರಿ ಆನಂದಿಸಿರಿ : ಅಲ್ಲೆಲೂಯ
ಏಕೆಂದರೆ ಪ್ರಭುವು ನಿಜವಾಗಿ ಪುನರುತ್ಥಾನರಾಗಿದ್ದಾರೆ :
ಅಲ್ಲೆಲೂಯ
ಪ್ರಾರ್ಥಿಸೋಣ
ಪ್ರಭೂ, ನಿಮ್ಮ ಪುತ್ರರೂ ನಮ್ಮ ಪ್ರಭುವೂ
ಆದ ಯೇಸುಕ್ರಿಸ್ತರ ಪುನರುತ್ಥಾನದಿಂದ ಭೂಲೋಕವನ್ನು ಆನಂದ ಪಡಿಸಲು ನೀವು ಅನುಗ್ರಹಿಸಿದಿರಿ. ಅವರ
ಕನ್ಯಾಮಾತೆ ಮರಿಯಮ್ಮನವರ ಮೂಲಕ ನಿತ್ಯ ಜೀವದ ಆನಂದವನ್ನು ನಾವು ಪಡೆಯುವಂತೆ ಕರುಣಿಸಬೇಕೆಂದು
ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.
ನಮೋ ರಾಣಿಯೇ (ಸಾಲ್ವೆ ರೆಜಿನಾ)
ನಮೋ ರಾಣಿಯೇ, ದಯೆಯ ತಾಯಿಯೇ, ನಮ್ಮ
ಜೀವವೇ, ಮಾಧುರ್ಯವೇ, ಮತ್ತು ನಂಬಿಕೆಯೇ.
ಏವೆಯ ಬಹಿಷ್ಕೃತ ಮಕ್ಕಳಾದ ನಾವು ನಿಮಗೆ
ಮೊರೆಯಿಡುತ್ತೇವೆ. ಈ ಕಣ್ಣೀರ ಕಣಿವೆಯಲ್ಲಿ ಬಹಳ ಸಂಕಟದಿಂದ ಅತ್ತು ಪ್ರಲಾಪಿಸುತ್ತೇವೆ.
ಆದುದರಿಂದ ನಮ್ಮ ಆಶ್ರಯವೇ ನಿಮ್ಮ ಕೃಪಾಕಟಾಕ್ಷವನ್ನು ನಮ್ಮ ಮೇಲೆ ಇಡಿರಿ ಮತ್ತು ಈ ದೇಶಾಂತರದ
ವಾಸವು ತೀರಿದ ಬಳಿಕ ನಿಮ್ಮ ಉದರದ ಧನ್ಯ ಫಲವಾದ ಯೇಸುವಿನ ದರ್ಶನವನ್ನು ನಮಗೆ ನೀಡಿರಿ. ದಯಾಪರಿಯೇ
ಪ್ರೀತಿಮಯಿಯೇ ಮಧುರ ಕನ್ಯಾಮರಿಯಾ.
ಕ್ರಿಸ್ತರ ವಾಗ್ದಾನಗಳಿಗೆ ನಾವು
ಪಾತ್ರರಾಗುವಂತೆ,
ಪರಿಶುದ್ಧ ದೇವಮಾತೆಯೇ ನಮಗಾಗಿ
ಪ್ರಾರ್ಥಿಸಿರಿ.
ಪ್ರಾರ್ಥಿಸೋಣ
ಸರ್ವಶಕ್ತರೂ ನಿತ್ಯರೂ ಆಗಿರುವ
ಸರ್ವೇಶ್ವರ, ಮಹಿಮಾಭರಿತ ಕನ್ಯಾಮಾತೆಯಾದ ಮರಿಯಮ್ಮನವರ ಆತ್ಮವನ್ನೂ ಶರೀರವನ್ನೂ ಪವಿತ್ರಾತ್ಮರ
ಸಹಕಾರದ ಮೂಲಕ ನಿಮ್ಮ ಪುತ್ರರಿಗೆ ಯೋಗ್ಯವಾದ ವಾಸಸ್ಥಾನವನ್ನಾಗಿ ಮಾಡಿದಿರಿ. ಅಂತಹ ಪರಿಶುದ್ಧ
ಮಾತೆಯನ್ನು ಸಂತೋಷದಿಂದ ಸ್ಮರಿಸಿಕೊಳ್ಳುವ ನಮ್ಮನ್ನು ಅವರ ದಯಾಪರ ಬಿನ್ನಹಗಳ ಮೂಲಕ ಸಕಲ
ಕೇಡುಗಳಿಂದಲೂ ನಿತ್ಯ ಮರಣದಿಂದಲೂ ರಕ್ಷಿಸಬೇಕೆಂದು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ
ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್
ನೆನಪೋಲೆ (ಮೆಮೊರಾರೆ)
ಮಹಾ ಮರುಕವುಳ್ಳ ತಾಯೇ, ನಿಮ್ಮನ್ನು ಆಶ್ರಯಿಸಿದವರು, ನಿಮ್ಮ
ನೆರವನ್ನು ಬೇಡಿ, ಮಧ್ಯಸ್ತಿಕೆಯನ್ನು ಕೋರಿದ ಯಾರೂ ನಿರಾಶರಾಗಲಿಲ್ಲ. ಆಸರೆ ಕಳೆದುಕೊಂಡ ಒಂದು
ನಿದರ್ಶನವೂ ಈ ಭೂಲೋಕದಲ್ಲಿಲ್ಲ ಎಂಬುದನ್ನು ಸ್ಮರಿಸಿರಿ. ಕನ್ಯೆಯರಲ್ಲಿ ಅತಿ ಶ್ರೇಷ್ಠರೇ, ಇಂತಹ
ದೃಢ ವಿಶ್ವಾಸದಿಂದ ನಾವು ನಿಮ್ಮ ಪಾದಚರಣಕ್ಕೆ ಓಡಿ ಬಂದಿರುತ್ತೇವೆ.
ಪಾಪಿಗಳು ನಾವಾಗಿದ್ದು ನಿಮ್ಮ ಸನ್ನಿಧಿಯಲ್ಲಿ ನಿಟ್ಟುಸಿರು
ಬಿಡುತ್ತಿದ್ದೇವೆ. ಅನಂತ ವಾರ್ತೆಯ ಮಾತೆಯೇ, ನಮ್ಮ ಮೊರೆಯನ್ನು ಕಡೆಗಣಿಸದೆ ದಯೆಯಿಂದ ನಮ್ಮ
ಬೇಡಿಕೆಯನ್ನು ಆಲಿಸಿ ಅನುಗ್ರಹ ತೋರಿ ತಾಯೇ, ಆಮೆನ್.
ಮಹಾಕೀರ್ತನೆ
(ಮ್ಯಾಗ್ನಿಫಿಕಾತ್)
ಎನ್ನ ಮನ ಮಾಡುತಿದೆ ಸರ್ವೇಶ್ವರನ
ಸ್ತುತಿ
ಉಲ್ಲಾಸಿಸುತಿದೆ ಮುಕ್ತಿದಾತ
ದೇವನಲ್ಲಿ
ತನ್ನ ದಾಸಿಯ ದೀನತೆಯನು ನೆನಪಿಗೆ
ತಂದುಕೊಂಡನಾತ
ಧನ್ಯಳೆಂದು ಹೊಗಳುವರೆನ್ನನು
ಇಂದಿನಿಂದ ಸರ್ವ ಜನಾಂಗ
ಏಕೆನೆ ಮಾಡಿಹನೆನಗೆ ಸರ್ವಶಕ್ತನು
ಮಹತ್ಕಾರ್ಯ
ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ
ಆತನಲ್ಲಿ ಭಯಭಕ್ತಿಯುಳ್ಳವರಿಗೆ
ಆತನ ಪ್ರೀತಿ ತಲತಲಾಂತರದವರೆಗೆ
ಗರ್ವಹೃದಯಗಳನಾತ ಚದುರಿಸಿರುವನು
ಪ್ರದರ್ಶಿಸಿಹನು ತನ್ನ ಬಾಹುಬಲವನು
ಇಳಿಸಿಹನು ಗದ್ದುಗೆಯಿಂದ
ಘನಾಧಿಪತಿಗಳನು
ಏರಿಸಿರುವನು ಉನ್ನತಿಗೆ
ದೀನದಲಿತರನು
ತೃಪ್ತಿಪಡಿಸಿರುವನಾತ ಹಸಿದವರನು
ಮೃಷ್ಟಾನ್ನದಿ
ಹೊರದೂಡಿರುವನು ಸಿರಿವಂತರನು
ಬರಿಗೈಯಲಿ
ನೆರವಾದನು ತನ್ನ ದಾಸ
ಇಸ್ರಯೇಲನಿಗೆ ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ
ಮರೆಯಲಿಲ್ಲ ಆತ ಕರುಣೆ ತೋರಲು ಅಬ್ರಹಾಮನಿಗೆ
ಆತನ ಸಂತತಿಗೆ ಯುಗಯುಗಾಂತರದವರೆಗೆ
ಪಾಪ ಪರಿಹಾರಕ್ಕಾಗಿ ಪ್ರಾರ್ಥನೆ
(ಕೀರ್ತನೆ 130)
ಅಂತರಾಳದಿಂದ ಪ್ರಭು,
ಮೊರೆಯಿಡುತ್ತಿರುವೆ ನಿನಗೆ
ಆಲಿಸು, ಕಿವಿಗೊಡು
ಪ್ರಭೂ, ನನ್ನಾರ್ತ ವಿಜ್ಞಾಪನೆಗೆ
ಪಾಪಗಳ ನೀ ಪಟ್ಟಿಮಾಡಿದೆಯಾದರೆ
ಪ್ರಭು
ನಿನ್ನ ಮುಂದೆ ಯಾರುತಾನೆ
ನಿಲ್ಲಬಲ್ಲರು ವಿಭು?
ಪಾಪವನು ಕ್ಷಮಿಸುವವನು ನೀನು
ಎಂತಲೆ ಭಯಭಕ್ತಿಗೆ ಪಾತ್ರನು
ಪ್ರಭುವಿಗಾಗಿ ಎನ್ನ ಮನ ಕಾದಿದೆ
ಆತನ ವಾಕ್ಯದಲಿ ನಂಬಿಕೆ ನನಗಿದೆ
ಸೂರ್ಯೋದಯಕ್ಕಾಗಿ ಕಾವಲುಗಾರ
ಕಾದಿರುವುದಕ್ಕಿಂತ
ಆತುರದಿಂದ ಬೆಳಗಾಗುವುದನು ಎದುರು
ನೋಡುವುದಕ್ಕಿಂತ
ಅತಿಯಾಗಿ ಪ್ರಭುವನು
ನಿರೀಕ್ಷಿಸುತಿದೆ
ಎನ್ನ ಮನ ನಿರುತ
ಇಸ್ರಯೇಲೇ, ನಂಬಿಕೊಂಡಿರು
ಪ್ರಭುವನೇ
ಆತನಲ್ಲಿದೆ ಕರುಣೆ, ಪೂರ್ಣವಿಮೋಚನೆ
ಇಸ್ರಯೇಲನು ಉದ್ಧರಿಸುವನಾತ
ಅದು ಗೈದ ಸಕಲ ದೋಷಗಳಿಂದ
ಪ್ರಭುವೇ, ನಿತ್ಯವಿಶ್ರಾಂತಿಯನ್ನು
ಅವರಿಗೆ ದಯಪಾಲಿಸಿರಿ
ನಿತ್ಯ ಜ್ಯೋತಿಯು ಅವರ ಮೇಲೆ
ಪ್ರಕಾಶಿಸಲಿ
ಸಮಾಧಾನದಲ್ಲಿ ಅವರು ವಿಶ್ರಮಿಸಲಿ
ಆಮೆನ್.
ಪ್ರಭುವೇ ನಮ್ಮ ಪ್ರಾರ್ಥನೆಯನ್ನು
ಆಲಿಸಿರಿ.
ನಾವು ಕೂಗುವ ಸ್ವರವು
ಸರ್ವೇಶ್ವರನ ಸನ್ನಿಧಿಗೆ ಏರಲಿ.
ಪ್ರಾರ್ಥಿಸೋಣ
ಸಮಸ್ತ ಭಕ್ತಾದಿಗಳ
ಸೃಷ್ಟಿಕರ್ತರೂ, ರಕ್ಷಕರೂ ಆಗಿರುವ ದೇವರೇ, ಮೃತರಾದ ಭಕ್ತರಿಗಾಗಿ ನಾವು ಮಾಡುವ
ಪ್ರಾರ್ಥನೆಗಳನ್ನು ಅಂಗೀಕರಿಸಿರಿ. ಅವರು ದೈನ್ಯದಿಂದ ಯಾಚಿಸುವ ಕ್ಷಮೆಯನ್ನು ದಯಪಾಲಿಸಿರಿ.
ಯುಗಯುಗಾಂತರಕ್ಕೂ ಜೀವಿಸಿ ಆಳುವ
ಪ್ರಭುವೇ, ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಹೃದಯಬಯಕೆ
ಯೇಸುವೇ,
ಮರಿಯಾ, ಜೋಸೆಫರೇ,
ನನ್ನ
ಹೃನ್ಮಗಳನ್ನು ನಿಮಗೆ ಸಮರ್ಪಿಸುತ್ತೇನೆ.
ಯೇಸುವೇ,
ಮರಿಯಾ, ಜೋಸೆಫರೇ,
ನನ್ನ ಕಡೆಯ ಯಾತನೆಯಲ್ಲಿ ನನಗೆ ಸಹಾಯಕರಾಗಿರಿ.
ಯೇಸುವೇ,
ಮರಿಯಾ, ಜೋಸೆಫರೇ,
ನನ್ನ ಆತ್ಮವು ಶಾಂತಿಯಿಂದ ನಿಮ್ಮಲ್ಲಿ ವಿಶ್ರಮಿಸಲಿ
-0-

No comments:
Post a Comment