ಬಿಳಿ / ಸೋಮ/ ಪಾಸ್ಖ ಕಾಲದ ಆರನೇ ವಾರ
1ನೇ ವಾಚನ - ಪ್ರೇ.ಕಾ: 16: 11-15
11 : ನಾವು ತ್ರೋವದಲ್ಲಿ
ಹಡಗುಹತ್ತಿ ಸಮೋಥ್ರಕ್ಕೆ ನೇರವಾಗಿ ಪ್ರಯಾಣಮಾಡಿದೆವು. ಮಾರನೆಯ ದಿನ ನೆಯಫೋಲನ್ನು ತಲುಪಿ,
12 : ಅಲ್ಲಿಂದ ಮಕೆದೋನಿಯದ
ಪ್ರಮುಖ ಪಟ್ಟಣವಾದ ಫಿಲಿಪ್ಪಿಗೆ ಬಂದೆವು. ಇದು ರೋಮಿನ ವಸಾಹತು; ಇಲ್ಲಿ ಕೆಲವು ದಿನಗಳನ್ನು ಕಳೆದೆವು.
13 : ಪಟ್ಟಣದ ಹೊರಗಿರುವ
ನದಿತೀರದ ಬಳಿ ಯೆಹೂದ್ಯರ ಪ್ರಾರ್ಥನಾ ಸ್ಥಳವಿರಬಹುದೆಂದು ಭಾವಿಸಿ ಸಬ್ಬತ್‍ದಿನ ಅಲ್ಲಿಗೆ ಹೋದೆವು.
ನಾವು ಕುಳಿತುಕೊಂಡು ಅಲ್ಲಿ ಸೇರಿದ್ದ ಮಹಿಳೆಯರೊಡನೆ ಸಂಭಾಷಿಸಿದೆವು.
14 : ನಮ್ಮ ಬೋಧನೆಯನ್ನು
ಕೇಳಿದ ಆ ಮಹಿಳೆಯರಲ್ಲಿ ಲಿಡಿಯ ಎಂಬವಳು ಒಬ್ಬಳು. ಈಕೆ ಥುವತ್ಯೆರ ಎಂಬ ಊರಿನವಳು; ಪಟ್ಟೆ ಪೀತಾಂಬರಗಳ
ವ್ಯಾಪಾರಿ ಹಾಗೂ ದೇವಭಕ್ತೆ. ಪೌಲನ ಬೋಧನೆಗೆ ಕಿವಿಗೊಟ್ಟು ಗ್ರಹಿಸುವಂತೆ ಪ್ರಭು ಆಕೆಯ ಹೃದಯವನ್ನು
ತೆರೆದರು.
15 : ಅಂತೆಯೇ ತನ್ನ
ಮನೆಯವರ ಸಮೇತ ದೀಕ್ಷಾಸ್ನಾನವನ್ನು ಪಡೆದಳು. ಅನಂತರ, “ನಾನು ಪ್ರಭುವಿನ ನಿಜವಾದ ವಿಶ್ವಾಸಿಯೆಂದು
ನೀವು ಒಪ್ಪಿಕೊಳ್ಳುವುದಾದರೆ ನನ್ನ ಮನೆಗೆ ಬಂದು ತಂಗಿರಿ,” ಎಂದು ನಮ್ಮನ್ನು ಒತ್ತಾಯ ಪೂರ್ವಕವಾಗಿ
ಆಹ್ವಾನಿಸಿದಳು.
ಕೀರ್ತನೆ - 149: 1-6, 9
ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು
1 : ಅಲ್ಲೆಲೂಯ
! ಹಾಡಿರಿ ಪ್ರಭುವಿಗೆ ನೂತನ ಕೀರ್ತನೆಯನು / ಭಕ್ತರ ಸಭೆಯಲಿ ಸ್ತುತಿಮಾಡಿರಿ ಆತನನು
2 : ಆನಂದಿಸಲಿ ತಮ್ಮ
ಸೃಷ್ಟಿಕರ್ತನಲಿ ಇಸ್ರಯೇಲರು / ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು
3 : ಆತನ ನಾಮವನು
ಕೀರ್ತಿಸಲಿ ಕುಣಿತದಿಂದ / ಆತನನು ಭಜಿಸಲಿ ತಮಟೆ, ಕಿನ್ನರಿಗಳಿಂದ
4 : ಪ್ರೀತಿಸುತ್ತಾನೆ
ಪ್ರಭು ತನ್ನ ಪ್ರಜೆಯನು / ಜಯಶೀಲರನ್ನಾಗಿಸುತ್ತಾನೆ ದೀನದಲಿತರನು
5 : ಹಿಗ್ಗಲಿ ಭಕ್ತಾದಿಗಳು
ದೊರೆತ ವಿಜಯದಲಿ / ಜಯಕಾರ ಮಾಡಲಿ ತಮ್ಮ ತಮ್ಮ ಶಿಬಿರಗಳಲಿ
6 : ಇರಲಿ ಪ್ರಭುವಿನ
ಸ್ತೋತ್ರ ಅವರ ಬಾಯಲಿ / ಇರಲಿ ಇಬ್ಬಾಯಿ ಕತ್ತಿಯು ಅವರ ಕೈಯಲಿ
7 : ಈಪರಿ ಮುಯ್ಯಿತೀರಿಸಲಿ
ಜನಾಂಗಗಳಿಗೆ / ವಿಧಿಸಲಿ ದಂಡನೆಯನು ಅನ್ಯ ರಾಷ್ಟ್ರಗಳಿಗೆ
8 : ಬಂಧಿಸಲಿ ಅವರ
ರಾಜರನು ಸಂಕೋಲೆಯಿಂದ / ಅವರ ಅಧಿಕಾರಿಗಳನು ಕಬ್ಬಿಣದ ಬೇಡಿಗಳಿಂದ
9 : ವಿಧಿಸಲಿ ಅವರಿಗೆ
ಲಿಖಿತಾಜ್ಞೆಯ ಶಿಕ್ಷೆಯನು / ಇದು ತರಲಿ ಭಕ್ತರೆಲ್ಲರಿಗೆ ಗೌರವವನು / ಅಲ್ಲೆಲೂಯ!
ಶುಭಸಂದೇಶ - ಯೊವಾನ್ನ 15: 26- 16: 4
26 : ಪಿತನಿಂದ ಹೊರಡುವ
ಸತ್ಯಸ್ವರೂಪಿಯಾದ ಪವಿತ್ರಾತ್ಮರನ್ನು ನಿಮ್ಮ ಪೋಷಕರನ್ನಾಗಿ ನಾನು ಪಿತನಿಂದಲೇ ಕಳುಹಿಸುವೆನು. ಅವರು
ಬಂದು ನನ್ನ ಪರವಾಗಿ ಸಾಕ್ಷಿ ನೀಡುವರು.
27 : ಮೊತ್ತ ಮೊದಲಿನಿಂದಲೂ
ನನ್ನ ಸಂಗಡ ಇದ್ದ ನೀವು ಕೂಡ ನನ್ನನ್ನು ಕುರಿತು ಸಾಕ್ಷಿ ನೀಡುವವರಾಗಿದ್ದೀರಿ.
1 : “ನಿಮ್ಮ ವಿಸ್ವಾಸ
ಕುಸಿಯದಂತೆ ನೀವು ಎಚ್ಚರಿಕೆ ವಹಿಸಬೇಕೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.
2 : ಜನರು, ನಿಮ್ಮನ್ನು
ಪ್ರಾರ್ಥನಾಮಂದಿರದಿಂದ ಬಹಿಷ್ಕರಿಸುವರು, ಅಷ್ಟೇ ಅಲ್ಲ, ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ
ಬಲಿಕೊಟ್ಟೆನೆಂದು ಭಾವಿಸುವ ಕಾಲವೂ ಬರಲಿದೆ.
3 : ನನ್ನನ್ನಾಗಲಿ,
ಪಿತನನ್ನಾಗಲಿ ಅವರು ಅರಿತಿಲ್ಲದ ಕಾರಣ ನಿಮಗೆ ಹೀಗೆ ಮಾಡುವರು.
4 : ಅಂಥ ಕಾಲ ಬಂದಾಗ
ಇದನ್ನೆಲ್ಲಾ ಕುರಿತು ನಾನು ನಿಮ್ಮನ್ನು ಮೊದಲೇ ಎಚ್ಚರಿಸಿದ್ದೇನೆಂದು ನೀವು ನೆನಸಿಕೊಳ್ಳುವಂತೆ ಇದನ್ನು
ಹೇಳುತ್ತಿದ್ದೇನೆ.
ಚಿಂತನೆ
ಕ್ರಿಸ್ತರು ನಮ್ಮ ಪೋಷಕರನ್ನಾಗಿ ಪವಿತ್ರಾತ್ಮರನ್ನು ಕಳುಹಿಸುವುದಾಗಿ
ನಮಗೆ ಭರವಸೆಯನ್ನು ನೀಡುತ್ತಾರೆ. ಪವಿತ್ರಾತ್ಮರು ನಮ್ಮ ಪರವಾಗಿದ್ದು ನಮ್ಮನ್ನು ಬೆಂಬಲಿಸುವುದಲ್ಲದೆ,
ಬದುಕಿನ ಸಂಕಷ್ಟದ ಸಮಯದಲ್ಲಿ ನಮ್ಮ ಒತ್ತಾಸೆಯಾಗಿಯೂ ಮತ್ತು ನೈತಿಕ ಬೆಂಬಲವಾಗಿಯೂ ನಿಲ್ಲುವರು. ಮುಖ್ಯವಾಗಿ
ಜನರು ನಮ್ಮನ್ನು ಬಹಿಷ್ಕರಿಸಿ ಹಿಂಸಿಸುವಾಗ ಪವಿತ್ರಾತ್ಮರು ಕ್ರಿಸ್ತನಲ್ಲಿನ ನಮ್ಮ ವಿಶ್ವಾಸವನ್ನು
ಸಧೃಡಗೊಳಿಸಿ ಮುನ್ನಡೆಸುವರು. ಎರಡನೇಯದಾಗಿ ಕ್ರಿಸ್ತನಿಗೆ ಸಾಕ್ಷಿಯಾಗಿ ಬಾಳಲು ಇಂದಿನ ಶುಭಸಂದೇಶ ಕರೆಕೊಡುತ್ತದೆ. ನಮ್ಮ ಬದುಕು ಕ್ರಿಸ್ತನೆಡೆಗಿನ
ಪ್ರಯಾಣಕ್ಕೆ ಮಾರ್ಗಸೂಚಿಯಾಗಬೇಕು. ಅಸ್ಸಿಸಿಯ ಸಂತ ಫ್ರಾನ್ಸಿಸ್‍ರವರ ಬದುಕಿನಲ್ಲಿ ನಡೆದ ಒಂದು ಘಟನೆ.
ಫ್ರಾನ್ಸಿಸ್‍ರವರು ಶುಭಸಂದೇಶವನ್ನು ಬೋಧಿಸಲು ಒಬ್ಬ ತರುಣ ಸನ್ಯಾಸಿಯನ್ನು ತನ್ನೊಟ್ಟಿಗೆ ಕರೆದುಕೊಂಡು ನಗರಕ್ಕೆ ಹೋಗುತ್ತಾರೆ. ಇಡೀ
ದಿನ ನಗರದ ಹಾದಿಬೀದಿಗಳಲ್ಲಿ ಸುತ್ತಾಡಿ ಮನಗೆ ವಾಪಸ್ಸಾಗುತ್ತಾರೆ. ಯುವ ಸನ್ಯಾಸಿಯು ನಿರಾಶೆಗೊಂಡು ”
ನಾವು ನಗರಕ್ಕೆ ಹೋಗಿದ್ದು ಶುಭಸಂದೇಶವನ್ನು ಬೋಧಿಸಲು ಎಂದು ನಾನು ಭಾವಿಸಿದೆ; ಆದರೆ ನಾವು ಎಲ್ಲೂ ಬೋಧಿಸದೆ
ನಗರದ ಹಾದಿಬೀದಿಗಳಲ್ಲಿ ಸುತ್ತಾಡಿ ಸುಮ್ಮನ್ನೇ ಹಿಂದುರುಗಿದ್ದೇವು!!” ಎಂದು ಟೀಕೆಮಾಡಿದಾಗ ಪ್ರತ್ಯುತ್ತರವಾಗಿ
ಫ್ರಾನ್ಸಿಸ್ “ ನಾವು ಹಾದಿಬೀದಿಗಳಲ್ಲಿ ನಡೆಯುವಾಗ ನಮ್ಮ ನಡತೆಗಳಿಂದಲೇ ಜನರಿಗೆ ಬೋಧಿಸಿದ್ದೇವೆ” ಎಂದು
ಹೇಳುತ್ತಾರೆ. ಹೌದು ಕ್ರಿಸ್ತನ ಸಾಕ್ಷಿಗಳಾಗಿ ಬಾಳಲು ಪ್ರವಿತ್ರಾತ್ಮರ ಒತ್ತಾಸೆಗೆ ಪ್ರಾರ್ಥಿಸೋಣ.
No comments:
Post a Comment