Wednesday, 12 June 2019

14 ಜೂನ್ 2೦19

ಹಸಿರು /    ಶುಕ್ರ    /    ಸಾಧಾರಣ ಕಾಲದ ಹತ್ತನೇ ವಾರ         
1ನೇ ವಾಚನ - 2 ಕೊರಿಂಥ 4: 7-15       
ಕೀರ್ತನೆ - 116:10-11,15-16,17-18      
ಶುಭಸಂದೇಶ - ಮತ್ತಾಯ 5: 27-32  
1ನೇ ವಾಚನ - 2 ಕೊರಿಂಥ 47-15     
7 : ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ, ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ.
8 : ನಾವು ಇಕ್ಕಟ್ಟು ಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ.
9 : ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ.
10 : ಯೇಸುವಿನ ದಿವ್ಯಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆ.
11 : ಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆ.
12 : ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ.
13 : “ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು,” ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ.
14 : ಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು
15 : ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾ ಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು.
ಕೀರ್ತನೆ - 116:10-11,15-16,17-18   
ನಾ ನುಡಿದೆನಾದರೂ ‘ಬಹಳ ಸಂಕಟದಲ್ಲಿರುವೆ’ನೆಂದು
10 : ನಾ ನುಡಿದೆನಾದರೂ ‘ಬಹಳ ಸಂಕಟದಲ್ಲಿರುವೆ’ನೆಂದು / ನಾನುಸುರಿದೆನಾದರೂ ‘ಯಾರನು ನಂಬಲಾಗ’ದೆಂದು /
11 : ನನ್ನಲ್ಲಿ ಅಳಿಯದೆ ಉಳಿಯಿತಾ ವಿಶ್ವಾಸವು ಎಂದೆಂದು //
12 : ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ / ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? //
13 : ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
14 : ಆತನಿಗೆ ನಾ ಹೊತ್ತ ಹರಕೆಗಳನು / ಆತನ ಸಭೆಮುಂದೆಯೆ ತೀರಿಸುವೆನು //
15 : ಪ್ರಭು ಅಲ್ಪವೆಂದೆಣಿಸನು / ತನ್ನ ಭಕ್ತರ ಮರಣವನು //
16 : ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು / ನಿನ್ನ ದಾಸಿಯ ಮಗನು, ನಿನ್ನ ಸೇವಕನು / ಬಿಡಿಸಿರುವೆ ನೀನು ನನ್ನ ಬಂಧನಗಳನು //
17 : ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
18 : ಹೇ ಜೆರುಸಲೇಮೇ, ನಿನ್ನ ಮಧ್ಯದೊಳು / ಆತನಿರುವ ಮಂದಿರದ ಅಂಗಳದೊಳು /
19 : ತೀರಿಸುವೆನು ಆತನ ಸಭೆಯ ಸಮ್ಮುಖದೊಳು / ಅರ್ಪಿಸುವೆನು ನಾ ಹೊತ್ತ ಆ ಹರಕೆಗಳನು //
ಶುಭಸಂದೇಶ - ಮತ್ತಾಯ 527-32  
27 : "ವ್ಯಭಿಚಾರ ಮಾಡಕೂಡದು ಎಂಬ ನಿಯಮವನ್ನು ನೀವು ಕೇಳಿದ್ದೀರಿ;
28 : ಆದರೆ ನಾನು ಹೇಳುತ್ತೇನೆ, ಕೇಳಿ: ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ತನ್ನ ಹೃದಯದಲ್ಲಿ ಆಕೆಯೊಡನೆ ಆಗಲೇ ವ್ಯಭಿಚಾರ ಮಾಡಿದವನೇ ಆಗುತ್ತಾನೆ.
29 : ನಿನ್ನ ಬಲಗಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತೆಸೆದುಬಿಡು; ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು.
30 : ನಿನ್ನ ಬಲಗೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಬಿಸಾಡಿಬಿಡು; ನಿನ್ನ ಇಡೀ ದೇಹ ನರಕದ ಪಾಲಾಗುವುದಕ್ಕಿಂತ ಒಂದು ಅವಯವ ನಾಶವಾಗುವುದು ಎಷ್ಟೋ ಮೇಲು."
31 : "ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ವಿವಾಹ ವಿಚ್ಛೇದನ ಪತ್ರವನ್ನು ಅವಳಿಗೆ ಕೊಡಲಿ,’ ಎಂದು ವಿಧಿಸಲಾಗಿದೆ.
32 : ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಹೆಂಡತಿಯ ದುರ್ನಡತೆಯ ಕಾರಣದಿಂದಲ್ಲದೆ, ಅವಳನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ; ಅಲ್ಲದೆ ಗಂಡ ಬಿಟ್ಟವಳನ್ನು ಮದುವೆಯಾಗುವವನು ಕೂಡ ವ್ಯಭಿಚಾರಿಯಾಗುತ್ತಾನೆ."
ಚಿಂತನೆ
ದೇವರ ಚಿತ್ತವನ್ನು ಮರೆತು ನಮ್ಮಿಚ್ಛೆಯಂತೆ ನಡೆಯುದೇ ಪಾಪ. ದೈವೀಚ್ಛೆಯಂತೆ ನಡೆಯಲು ಪ್ರಯತ್ನಿಸುವ ಪ್ರತಿಯೊಬ್ಬರೂ ಪಾಪದಿಂದ ದೂರವಿರಲು ಸಾಧ್ಯ. ಪಾಪವು ಮಾನವರನ್ನು ದೇವರಿಂದ ದೂರಸರಿಸಿ ದುರ್ಗುಣಗಳ ಕಂದಕಕ್ಕೆ ತಳ್ಳುತ್ತದೆ. ಅಲ್ಲಿ ಮಾನವ ತನ್ನ ಸಂತೋಷವನ್ನು ಕಳೆದುಕೊಂಡು "ಇಂಗು ತಿಂದ ಮಂಗನಂತಾಗುತ್ತಾನೆ" ಕಾರಣವನ್ನೇ ಮುಂದಿರಿಸಿಕೊಂಡು ಪ್ರಭು ಮಾನವ ಕುಲವನ್ನು ಎಚ್ಚರಿಸುತ್ತಾ ಪಾಪಕ್ಕೆ ಕಾರಣವಾಗ ಬಹುದಾದ ಎಲ್ಲ ವಿಚಾರಗಳಿಂದ ದೂರವಿದ್ದು ನಃಶುದ್ಧಿ, ತನುಶುದ್ಧಿಯಿಂದ ಜೀವನವನ್ನು ನಡೆಸಲು ಕರೆ ನೀಡುತ್ತಾರೆ.

No comments:

Post a Comment