Thursday, 13 June 2019

16 ಜೂನ್ 2೦19

ಬಿಳಿ/ ಭಾನು / ಪವಿತ್ರ ಪರಮ ತ್ರಿತ್ವದ ಮಹೋತ್ಸವ   
1ನೇ  ವಾಚನ  -  ಜ್ಞಾನೊಕ್ತಿ  822-31  
ಕೀರ್ತನೆ  83-9                   
2ನೇ  ವಾಚನ  -  ರೋಮ  51-5
ಶುಭಸಂದೇಶ - ಯೊವಾನ್ನ 16: 12-15

1ನೇ  ವಾಚನ  -  ಜ್ಞಾನೊಕ್ತಿ  8:  22-31
22 : ತನ್ನ ಸೃಷ್ಟಿಕ್ರಮದಲ್ಲಿ ಸರ್ವೇಶ್ವರ ನಿರ್ಮಿಸಿದ ನನ್ನನ್ನು ಮೊತ್ತಮೊದಲು ಆತನ ಪುರಾತನ ಕಾರ್ಯಕ್ರಮಗಳಲ್ಲಿ ನಾನೇ ಪ್ರಥಮಳು.
23 : ನಾನು ಸ್ಥಾಪಿಸಲ್ಪಟ್ಟೆ ಪ್ರಾರಂಭದಲ್ಲೆ ಜಗದುತ್ಪತ್ತಿಗೆ ಮುಂಚೆಯೇ ಅನಾದಿಕಾಲದಲ್ಲೆ.
24 : ಜಲನಿಧಿಗಳಾಗಲಿ, ನೀರಿನ ಬುಗ್ಗೆಗಳಾಗಲಿ ಇಲ್ಲದಿರುವಾಗಲೆ ನಾ ಬಂದೆ ಜನ್ಮತಾಳಿ.
25 : ನಾನು ಹುಟ್ಟಿದೆ ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮೊದಲೆ.
26 : ನಾನು ಜನಿಸಿದೆ ಭೂಮಿಯನ್ನಾಗಲಿ, ಬೈಲನ್ನಾಗಲಿ ನೆಲದ ಅಣುರೇಣನ್ನಾಗಲಿ ಆತ ನಿರ್ಮಿಸದೆ ಇರುವಾಗಲೆ.
27 : ನಾನು ಅಲ್ಲಿದ್ದೆ ಆತ ಆಕಾಶಮಂಡಲವನ್ನು ಸ್ಥಾಪಿಸುವಾಗ ಸಾಗರದ ಮೇಲೆ ಚಕ್ರಾಕಾರದ ಗೆರೆಯನ್ನು ಎಳೆವಾಗ,
28 : ಗಗನವನ್ನು ಮೇಲೆ ಸ್ಥಿರಪಡಿಸುವಾಗ ಸಾಗರದ ಸೆಲೆಗಳನ್ನು ನೆಲೆಗೊಳಿಸಿದಾಗ,
29 : ಜಲಪ್ರವಾಹಗಳು ತನ್ನ ಅಪ್ಪಣೆಯನ್ನು ವಿೂರದ ಹಾಗೆ ಸಮುದ್ರಕ್ಕೆ ಎಲ್ಲೆಕಟ್ಟನ್ನು ನೇಮಿಸುವಾಗ ಭೂಮಿಯ ಅಸ್ತಿಭಾರವನ್ನು ಗೊತ್ತುಮಾಡುವಾಗ.
30 : ನಾನು ಆತನ ಬಳಿ ಕುಶಲ ಶಿಲ್ಪಿಯಂತಿದ್ದೆ ಅನುದಿನವೂ ಆತನಿಗೆ ಆನಂದವನ್ನೀಯುತ್ತಿದ್ದೆ ಸದಾ ಆತನ ಮುಂದೆ ಸಂತೋಷಪಡುತ್ತಿದ್ದೆ.
31 : ಉಲ್ಲಾಸಿಸುತ್ತಿದ್ದೆ ಆತನ ಭುಲೋಕದಲ್ಲಿ ಹರ್ಷಿಸುತ್ತಾ ಇದ್ದೆ ಮಾನವ ಸಂತಾನದಲ್ಲಿ.

ಕೀರ್ತನೆ  8:  3-9  
ಪ್ರಭು, ಓ ಎಮ್ಮ ಪ್ರಭು, ನಿನ್ನ ನಾಮಾಮೃತ / ಬೆಳಗಿದೆ ತನ್ನ ಮಹಿಮೆಯನು ಭುವನ ಪರ್ಯಂತ // 
3 : ಆಕಾಶಮಂಡಲ ನಿನ್ನ ಕೈಕೆಲಸವಯ್ಯಾ / ಚಂದ್ರ ನಕ್ಷತ್ರಗಳು ನಿನ್ನ ರಚನೆಗಳಯ್ಯಾ //
4 : ಇಂತಿರಲು, ಮನುಜನು ಎಷ್ಟರವನು ನೀನವನನು ಲಕ್ಷಿಸಲು? / ಏತರದವನು ನರಮಾನವನು ನೀನವನನು ಪರಾಮರಿಸಲು? //
5 : ಆದರೆ ದೇವದೂತರಿಗಿಂತ ಕಿಂಚಿತ್ತೆ ಕೀಳಾಗಿಸಿದೆ ಮನುಜನನು / ಮುಡಿಸಿದೆ ಮುಕುಟವಾಗವನಿಗೆ ಘನ ಮಾನವನು, ಸಿರಿಹಿರಿಮೆಯನು //
6 : ಒಡೆಯನಾಗಿಸಿದೆ ನಿನ್ನಯ ಕರಕೃತಿಗಳಿಗೆ / ಒಳಪಡಿಸಿದೆ ಸಕಲವನು ಅವನ ಪಾದದಡಿಗೆ //
7 : ಕುರಿಗಳನು, ಕರುಗಳನು, ಕಾಡು ಮೃಗಗಳನು / ಗರಿಗಳನು, ವಿೂನುಗಳನು, ಜಲಚರಗಳನು /
8 : ಕರಗತ ಮಾಡಿದೆ ನೀ ಅವನಿಗೆಲ್ಲವನು //
9 : ಪ್ರಭು, ಓ ಎಮ್ಮ ಪ್ರಭು, ನಿನ್ನ ನಾಮಾಮೃತ / ಬೆಳಗಿದೆ ತನ್ನ ಮಹಿಮೆಯನು ಭುವನ ಪರ್ಯಂತ //

2ನೇ  ವಾಚನ  -  ರೋಮ  5:  1-5
1 : ಹೀಗಿರಲಾಗಿ, ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧದಲ್ಲಿರುವ ನಾವು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರೊಡನೆ ಶಾಂತಿಸಮಾಧಾನದಿಂದಿರುತ್ತೇವೆ.
2 : ವಿಶ್ವಾಸದ ಮೂಲಕ ನಾವು ದೈವಾನುಗ್ರಹವನ್ನು ಸವಿಯುವಂತೆ ಯೇಸುಕ್ರಿಸ್ತರು ದಾರಿ ತೋರಿಸಿದರು. ನಾವೀಗ ನೆಲೆಗೊಂಡಿರುವುದು ಆ ಅನುಗ್ರಹದಲ್ಲಿಯೇ. ಆದ್ದರಿಂದಲೇ, ದೇವರ ಮಹಿಮೆಯಲ್ಲಿ ನಾವೂ ಪಾಳುಗೊಳ್ಳುತ್ತೇವೆಂಬ ಭರವಸೆಯಿಂದ ಹೆಮ್ಮೆಪಡುತ್ತೇವೆ.
3 : ಅಷ್ಟೇ ಅಲ್ಲ, ನಮಗೆ ಬಂದೊದಗುವ ಕಷ್ಟಸಂಕಟಗಳಲ್ಲೂ ಹೆಮ್ಮೆಪಡುತ್ತೇವೆ. ಏಕೆಂದರೆ, ಕಷ್ಟಸಂಕಟಗಳು ಸಹನೆಯನ್ನು,
4 : ಸಹನೆಯು ಸದ್ಗುಣವನ್ನು, ಸದ್ಗುಣವು ನಂಬಿಕೆನಿರೀಕ್ಷೆಯನ್ನು ಬೆಳೆಸುತ್ತವೆಂದು ನಾವು ಬಲ್ಲೆವು. 5ಈ ನಂಬಿಕೆ
5 : ಈ ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ.

ಶುಭಸಂದೇಶ - ಯೊವಾನ್ನ 1612-15
12 : ನಾನು ನಿಮಗೆ ಹೇಳಬೇಕಾದುದು ಇನ್ನೂ ಎಷ್ಟೋ ಇದೆ. ಸಧ್ಯಕ್ಕೆ ಅವು ನಿಮಗೆ ಹೊರಲಾಗದ ಹೊರೆಯಾಗಬಾರದು.
13 : ಹೇಗೂ ಸತ್ಯಸ್ವರೂಪಿ ಆದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರು; ಮುಂದೆ ನಡೆಯಲಿರುವುದನ್ನೂ ನಿಮಗೆ ತಿಳಿಸುವರು.
14 : ಅವರು, ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು ಬೆಳಗಿಸುವರು.
15 : ಪಿತನಿಗೆ ಇರುವುದೆಲ್ಲವೂ ನನ್ನದೇ. ಆದುದರಿಂದಲೇ ಪವಿತ್ರಾತ್ಮ ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸುವರೆಂದು ನಾನು ಹೇಳಿದ್ದು.

ಚಿಂತನೆ
ಪರಮ ತ್ರಿತ್ವದ ಮಹೋತ್ಸವ
ದೇವರು ಒಬ್ಬರೆ. ಆದರೆ ಮೂವರು ವ್ಯಕ್ತಿಗಳಾಗಿ ಪರಿಪೂರ್ಣ ಪ್ರೀತಿಯ ಸಂಗಮವಾಗಿದ್ದಾರೆ. ಅವರು ನಿರಂತರವಾಗಿ ತುಂಬು ಪ್ರೀತಿಯ ಹೊನಲನ್ನು ಮಾನವರ ರಕ್ಷಣೆಗಾಗಿ ಹರಿಸುತ್ತಿದ್ದಾರೆ. ಅವರಲ್ಲಿ ಏಕತ್ವ ಮನೆ ಮಾಡಿದೆ. ಸಮತ್ವ ಅವರ ಸತ್ವವಾಗಿದೆ, ಸಮರಸ ಅವರ ಜೀವನದ ಮಿಡಿತವಾಗಿದೆ. ಅವರು ಮಾನವರ ಅಭ್ಯುದಯಕ್ಕಾಗಿ ನಿರಂತರ ಕಾರ್ಯತತ್ಪರರಾಗಿದ್ದಾರೆ. ಅವರಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಅವರ ಪ್ರೀತಿಯು ಅಪಾರವೂ ಅಮರವೂ ಆಗಿದೆ. ಇವರು ಪರಮ ಸತ್ಯವೇ ಆಗಿದ್ದಾರೆ. ಸತ್ಯವನ್ನು ಮಾನವರೆಲ್ಲರೂ ಅರಿತು ಬಾಳುವಂತೆ ತಂದೆ ದೇವರು ತಮ್ಮ ಒಬ್ಬನೆ ಮಗ ನಮ್ಮ ಪ್ರಭು ಯೇಸುವನ್ನು ಕಳುಹಿಸಿದರು. ಅವರು ನಮಗೆ ರಕ್ಷಣೆಯ ಸಂದೇಶವನ್ನು ಸಾರಿ ಮಾನವರಿಗೆ ಮುಕ್ತಿಯ ಪಥವನ್ನು ತೋರಿಸಿ ತಾವೇ  ಕೈಹಿಡಿದು ಡೆಸುತ್ತಿದ್ದಾರೆ.      

No comments:

Post a Comment