Tuesday, 18 June 2019

19 ಜೂನ್ 2೦19

ಹಸಿರು/   ಬುಧ/  ಸಾಧಾರಣ ಕಾಲದ ಹನ್ನೋಂದನೇ ವಾರ           
1ನೇ  ವಾಚನ  -  2ಕೊರಿಂಥ  96-11    
ಕೀರ್ತನೆ  -  1121-23-49              
ಶುಭಸಂದೇಶ - ಮತ್ತಾಯ 6;1-6, 16-18               
ಐಚ್ಛಿಕ  ಸ್ಮರಣೆ  -  ಸಂತ  ರೋಮುವಾಲ್ಡ್ (ಮಠಾ)                              


1ನೇ  ವಾಚನ  -  2ಕೊರಿಂಥ  9:  6-11  
6 : ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯತ್ತಾನೆ. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ.
7 : ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.
8 : ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ.
9 : “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
10 : ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.
11 : ನೀವು ಸದಾ ಉದಾರಿಗಳಾಗಿರುವಂತೆ ನಿಮ್ಮನ್ನು ಎಲ್ಲಾ ವಿಧದಲ್ಲೂ ಸಿರಿವಂತರನ್ನಾಗಿ ಮಾಡುವರು. ನಿಮ್ಮ ಕೊಡುಗೆ ನಮ್ಮ ಸೇವೆಯ ಮೂಲಕ ಬೇರೆಯವರಿಗೆ ತಲುಪಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ಮಾಡುವುದು.
ಕೀರ್ತನೆ  -  112:  1-2,  3-4,  9
ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು
1 : ಅಲ್ಲೆಲೂಯ / ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು / ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು //
2 : ಬಲಿಷ್ಠವಾಗುವುದು ಜಗದೊಳು ಅವನ ಸಂತಾನ / ಸಜ್ಜನರ ಸಂತತಿ ಪಡೆವುದು ಆಶೀರ್ವಚನ //
3 : ಸಿರಿಸಂಪತ್ತಿರುವುದವನ ಮನೆಯಲಿ ಸಮೃದ್ಧಿಯಾಗಿ / ನೀತಿ ಫಲಿಸುವುದು ಆತನ ಮನದಲಿ ಶಾಶ್ವತವಾಗಿ //
4 : ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು / ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು //
9 : ಉದಾರತೆಯಿಂದ ಕೊಡುವನು ಬಡವರಿಗೆ / ಫಲಿಸುವುದು ಅವನಾ ನೀತಿ ಸದಾಕಾಲಕೆ / ಮಹಿಮೆತರುವ ಕೋಡುಮೂಡುವುದು ಅವನಿಗೆ //

ಶುಭಸಂದೇಶ - ಮತ್ತಾಯ 6;1-616-18
1 : "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು.
2 : ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ.
3 : ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ.
4 : ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."
5 : "ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ.
6 : ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."
16 : "ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ.
17 : ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ.
18 : ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು."

ಚಿಂತನೆ
ಪ್ರಾರ್ಥನೆ ದೇವರನ್ನು ಆಕರ್ಷಿಸುವ ಸಂಗೀತ

ಇಂದಿನ ಶುಭ ಸಂದೇಶದಲ್ಲಿ ಪ್ರಭುಕ್ರಿಸ್ತರ ಉಪವಾಸ, ಪ್ರಾರ್ಥನೆ ಮತ್ತು ದಾನ ಮಾಡುವುದರ ಬಗೆಗಿನ ವಿಮರ್ಶೆ ಕೇಳಿದ್ದೇವೆ. ಅಂತೆಯೇ ಸಂತ ಪೌಲರ ದಾನ ಮಾಡುವುದರ ಬಗ್ಗೆ ವಿಮರ್ಶೆ ಕೇಳಿದ್ದೇವೆ. ಅಂತೆಯೇ ಸಂತ ಪೌಲರು ದಾನ ಮಾಡುವುದರ ಬಗ್ಗೆ ಸಂಕ್ಷಿಪ್ತವಾಗಿ ಚಿತ್ರಿಸುತ್ತಾ ಮೊದಲನೆಯ ವಾಚನಕ್ಕೆ ಒಂದು ಉತ್ತಮ ಸ್ಥಾನವನ್ನು ಕೊಟ್ಟಿದ್ದಾರೆ.
ವಿಶ್ವ ಪ್ರಖ್ಯಾತ ಲೇಖಕ ಲಿಯೋ ಟಾಲ್ಸ್‌ಟಾಯ್ ಒಮ್ಮೆ ರೈಲು ನಿಲ್ದಾಣದಲ್ಲಿ ಏನೋ ಬರೆಯುತ್ತಾ ಕುಳಿತಿದ್ದನು. ಒಬ್ಬ ಭಿಕ್ಷುಕ ಅವರಲ್ಲಿ ಭಿಕ್ಷೆಯನ್ನು ಕೇಳುತ್ತಾ ಬಳಿ ಬಂದ. ತನ್ನಲ್ಲಿ ಹಣವಿಲ್ಲದ ಕಾರಣ ಕಣ್ಣೀರಿಟ್ಟರು. ಇಲ್ಲಿಯ ತನಕ ಯಾರೂ ಕೊಡದ ಬೆಲೆ ಬಾಳುವ ಭಿಕ್ಷೆಯನ್ನು ಅವನು ಪಡೆದಿರುವುದಾಗಿ ಭಿಕ್ಷುಕ ನುಡಿದನು.

ತನ್ನ ಹೆಸರು ಇಡೀ ಸಮಾಜಕ್ಕೆ ತಿಳಿಯಬೇಕೆಂದು ಕೆಲವರು ದಾನ ಮಾಡುವರು. ಕೆಲವರು ತಾವು ಮೋಸಮಾಡಿ ಸಂಪಾದಿಸಿದ ದುಡ್ಡನ್ನು ದಾನವನ್ನಾಗಿ ಕೊಟ್ಟು ದೇವರ ಕರುಣೆಯನ್ನು ಯಾಚಿಸುವರು. ಮತ್ತೆ ಕೆಲವರು ಸರ್ಕಾರಕ್ಕೆ ತೆರಿಗೆ ಕಟ್ಟಿದರೆ ದುಡ್ಡು ವ್ಯರ್ಥವಾಗುತ್ತದೆಂದು ಅನಾಥಶ್ರಮಕ್ಕೆ ಕೊಟ್ಟು ಹೆಸರು ಪಡೆಯುವರು. ಇವರೆಲ್ಲರೂ ಕೊಡುವುದು ದಾನವೇ? ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೆ ಗೊತ್ತಾಗದಿರಲಿ ಎಂಬ ಕ್ರಿಸ್ತರ ಮಾತಿಗೆ ಅರ್ಥವಾದರೂ ಏನು? ಲಿಯೋ ಟಾಲ್ಸ್‌ಟಾಯ್‌ನ ಆತ್ಮದಿಂದ ಉಕ್ಕಿ ಬಂದ ದಾನಕ್ಕೆ ಮಾತ್ರ ದೇವರ ಬೆಲೆಯಿರುವುದು. ಈ ರೀತಿ ದಾನ ಮಾಡುವವರೇ ದೇವರನ್ನು ಏಕಾಂತದಲ್ಲಿ ಪ್ರಾರ್ಥನೆಯ ಮೂಲಕ ಸಂದರ್ಶಿಸುವರು. ನೀನು ಪ್ರಾರ್ಥಿಸುವಾಗ ಯಾರಿಗೂ ತಿಳಿಯದಿರಲಿ ಎನ್ನುತ್ತಿದ್ದಾರೆ ಪ್ರಭು ಕ್ರಿಸ್ತರು. ಪ್ರಾರ್ಥನೆ ಎನ್ನುವುದು ಬರೀ ಮಾತುಗಳಲ್ಲ, ಬದಲಿಗೆ ಅವು ದೇವರನ್ನು ತಮ್ಮೆಡೆಗೆ ಸೆಳೆಯುವ ಸಂಗೀತ.
ಉಪವಾಸ ಮಾಡುವುದು ದೇವರಿಗೆ ಮತ್ತು ಉಪವಾಸ ಮಾಡುವ ವ್ಯಕ್ತಿಗೆ ಮಾತ್ರ ತಿಳಿದಿರಬೇಕು. ಒಳ್ಳೆಯ ಕೆಲಸವನ್ನು ಮಾಡಿ ದೇವರ ಸಾಮ್ರಾಜ್ಯದ ಫಲಗಳನ್ನು ಪಡೆಯುವುದೇ ನಮ್ಮ ಗುರಿಯಾಗಿರಬೇಕು. ಅನ್ಯರ ಮೆಚ್ಚುಗೆಗಾಗಿ ಮಾಡುವುದ್ದಾಗಿರಬಾರದು.
ನಮ್ಮ ಹೃದಯಗಳು ಪವಿತ್ರಾತ್ಮರ ಆಲಯವೆಂದು ಸಂತ ಪೌಲರು ನುಡಿದಿದ್ದಾರೆ. ಈ ಹೃದಯದಲ್ಲಿ, ಪವಿತ್ರಾತ್ಮರ ಆಲಯದಲ್ಲಿ ಮಾಡುವ ಪ್ರಾರ್ಥನೆ ನಿಶ್ಶಬ್ಧತೆಯಿಂದ, ಶಾಂತಿಯಿಂದ ಮಾಡುವ ಪ್ರಾರ್ಥನೆಯಾಗಿರಬೇಕು. ಕೊರಳಲ್ಲಿ ಮಾಲೆಯ ಧರಿಸಿ, ಜಪಸರ ಮಾಡಿ, ಹೊರಗೆ ಒಂದು ರೀತಿಯ ಜೀವನ ಮತ್ತು ಆಂತರಿಕದಲ್ಲಿ ಮತ್ತೊಂದು ರೀತಿಯ ಜೀವನವನ್ನು ನಡೆಸದೆ, ದೇವರನ್ನು ಮತ್ತು ಮಾನವನನ್ನು ಪ್ರೀತಿಸಿ, ಒಳ್ಳೆಯ ರೀತಿಯ ಪ್ರಾರ್ಥನೆ, ದಾನ ಮತ್ತು ಉಪವಾಸವನ್ನು ಮಾಡುತ್ತಾ ಕಪಟತನ ತೊರೆದು ಅಪ್ಪಟ ಭಕ್ತಾದಿಗಳಾಗೋಣ.

ಪ್ರಾರ್ಥನೆ ಮಾಡಿದರೂ ಹೃದಯದಲ್ಲಿ ಮಾಡು
(ಕೃಪೆ - ಜೀವವಾಕ್ಯ)

No comments:

Post a Comment