ಹಸಿರು/ ಬುಧ /ಸಾಧಾರಣ ಕಾಲದ ಹನ್ನೆರಡನೇ ವಾರ
1ನೇ ವಾಚನ - ಆದಿ: 15 1-12, 17-18
ಕೀರ್ತನೆ - 1೦5: 1, 2-3, 5, 7, 8-9
ಶುಭಸಂದೇಶ - ಮತ್ತಾಯ 7: 15-2೦
1ನೇ ವಾಚನ - ಆದಿ: 15 1-12, 17-18
ಕೀರ್ತನೆ - 1೦5: 1, 2-3, 5, 7, 8-9
ಶುಭಸಂದೇಶ - ಮತ್ತಾಯ 7: 15-2೦
1ನೇ ವಾಚನ - ಆದಿ: 15 1-12, 17-18
1 : ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯ ದರ್ಶನ ಆಯಿತು. ಅದರಲ್ಲಿ ಸರ್ವೇಶ್ವರಸ್ವಾಮಿಯ ಈ ವಾಣಿ ಕೇಳಿಸಿತು: “ಅಬ್ರಾಮನೇ, ಭಯಪಡಬೇಡ, ನಿನ್ನನ್ನು ರಕ್ಷಿಸುವ ಕವಚ ನಾನೇ, ಘನವಾದ ಬಹುಮಾನ ಸಿಗುವುದು ನಿನಗೆ.”
2 : ಅದಕ್ಕೆ ಪ್ರತ್ಯುತ್ತರವಾಗಿ ಅಬ್ರಾಮನು - "ಸ್ವಾಮಿ ಸರ್ವೇಶ್ವರಾ, ನನಗೆ ಏನು ಕೊಟ್ಟರೇನು? ನಾನು ಪುತ್ರಸಂತಾನವಿಲ್ಲದವನು. ನನ್ನ ಮನೆ ಮಾರುಗಳಿಗೆ ಉತ್ತರಾಧಿಕಾರಿ ದಮಸ್ಕದ ಎಲೀಯೆಜರನೇ ಹೊರತು ಮತ್ತಾರೂ ಇಲ್ಲ.
3 : ನೀವು ನನಗೆ ಮಕ್ಕಳನ್ನು ಕೊಟ್ಟಿಲ್ಲ. ನನ್ನ ಮನೆದಾಸನೇ ನನಗೆ ಉತ್ತರಾಧಿಕಾರಿ,” ಎಂದನು.
4 : ಮತ್ತೆ ಸ್ವಾಮಿಯ ವಾಣಿ - “ಇಲ್ಲ, ಅವನು ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಉತ್ತರಾಧಿಕಾರಿ ಆಗುತ್ತಾನೆ,” ಎಂದಿತು.
5 : ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, “ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!” ಎಂದರು.
6 : ಅಬ್ರಾಮನು ಸರ್ವೇಶ್ವರಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು.
7 : ಸರ್ವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: “ಈ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ,” ಎಂದರು.
8 : ಅದಕ್ಕೆ ಅಬ್ರಾಮನು, “ಸರ್ವೇಶ್ವರಾ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?” ಎಂದನು.
9 : ಸರ್ವೇಶ್ವರ ಪ್ರತ್ಯುತ್ತರವಾಗಿ, “ನೀನು ಮೂರು ಮೂರು ವರ್ಷದ ಒಂದು ಕಡಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗು ಒಂದು ಮರಿಪಾರಿವಾಳವನ್ನು ತೆಗೆದುಕೊಂಡು ಬಾ,” ಎಂದರು
10 : ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಆ ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳು ಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ.
11 : ಆ ಪ್ರಾಣಿಗಳ ತುಂಡುಗಳ ಮೇಲೆ ರಣಹದ್ದುಗಳು ಎರಗಿದಾಗ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.
12 : ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು.
17 : ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು.
18 : ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು: “ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರೆಗೆ, ಕೊಡುವೆನು ಈ ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ,”
ಕೀರ್ತನೆ - 1೦5: 1, 2-3, 5, 7, 8-9
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು
1 : ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು / ಮಾಡಿರಿ ಆತನ ನಾಮಸ್ಮರಣೆಯನು / ಸಾರಿರಿ ಜಗಕೆ ಆತನ ಸತ್ಕಾರ್ಯಗಳನು //
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು / ಧ್ಯಾನಿಸಿ ನೀವು ಆತನ ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ / ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ //
4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ / ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು //
5 : ಆತನ ದಾಸ ಅಬ್ರಹಾಮನ ಸಂತತಿಯವರೇ / ಆತನಾರಿಸಿಕೊಂಡ ಯಕೋಬನ ವಂಶದವರೇ /
6 : ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು / ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು //
7 : ಪ್ರಭು ನಮ್ಮ ದೇವನೆಂಬುದು ಶ್ರುತ / ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ //
8 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು / ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು //
9 : ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು / ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು //
ಶುಭಸಂದೇಶ - ಮತ್ತಾಯ 7: 15-2೦
15 : "ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತುತಿನ್ನುವ ತೋಳಗಳು.
16 : ಅವರ ವರ್ತನೆಯಿಂದ ನೀವು ಅವರನ್ನು ಗುರುತು ಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ?
17 : ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ.
18 : ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು.
19 : ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು.
20 : ಆದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತುಹಚ್ಚುವಿರಿ." ನುಡಿದಂತೆ ನಡೆ (ಲೂಕ 13:25-27)
ಚಿಂತನೆ
ಮೊದಲನೆಯ ವಾಚನ ಆದಿ 15: 6 “ಅಬ್ರಹಾಮನು ಸರ್ವೇಶ್ವರನಾದ ಸ್ವಾಮಿಯಲ್ಲಿ ವಿಶ್ವಾಸವಿಟ್ಟನು, ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು”. ಪ್ರಸ್ತುತ ಪ್ರಪಂಚದಲ್ಲಿ ನಮ್ಮ ವಿಶ್ವಾಸವು ನಶಿಸಿಹೋಗಿದೆ, ಅಳಿದು ಹೋಗಿದೆ, ಕಣ್ಮರೆಯಾಗಿದೆ, ಹಾಗಾಗಿ ನಮ್ಮ ಸಂಬಂಧಗಳು ಪ್ರಭುವಿನಲ್ಲಿ ಆಳವಾಗಿ ಬೇರೂರದೆ ತೊಳಲಾಡುತ್ತಿದೆ. ಈ ಸಂಬಂಧಗಳ ಪುನರ್ ಸ್ಥಾಪನೆಗೆ ನಾವು ನಮ್ಮನ್ನೇ ಪೂರ್ಣವಾಗಿ ಸಮರ್ಪಿಸಿ ಹಗಲಿರುಳು ಪ್ರಭುವಿನಲ್ಲಿ ಐಕ್ಯವಾಗಲು ಶ್ರಮಿಸಬೇಕು ಇಲ್ಲದೇ ಹೋದರೆ ನಾವು ನಿರ್ನಾಮವಾಗುತ್ತೇವೆ. ಇಂದಿನ ಶುಭಸಂದೇಶದಲ್ಲಿ ತಿಳಿಸುವಂತೆ ನಾವು ಒಳ್ಳೆಯ ಮರದಲ್ಲಿ ಒಳ್ಳೆಯ ಫಲವನ್ನು ಬಯಸುತ್ತೇವೆ ಹೊರತು ಕೆಟ್ಟಫಲವನ್ನಲ್ಲ. ನಮ್ಮ ಜೀವನದಲ್ಲಿಯೂ ಸಹ ಒಳ್ಳೆಯ ಮನಸ್ಸುಗಳನ್ನು ನಾವು ಕಟ್ಟಿಕೊಂಡು ಅವುಗಳನ್ನು ಬೆಳೆಸಿಕೊಂಡು ಅವುಗಳನ್ನು ವೃದ್ಧಿಸಿಕೊಂಡು ಜೀವಿಸಿದಾಗ ಅಲ್ಲಿ ಪ್ರೀತಿ ಕ್ಷಮೆ ಸಹನೆ ಸಹಕಾರ ಬೆಳೆದು ನಮ್ಮ ಬಾಳು ಬೆಳಕಾಗುತ್ತದೆ. ಶ್ವಾಸ ವೆಂಬುದು ನಮ್ಮ ಆತ್ಮದ ಶ್ವಾಸವಾಗದೆ ಹೋದರೆ ನಮ್ಮ ಜೀವನ ವ್ಯರ್ಥ. ಹಾಗಾಗಿ ನಮ್ಮ ನಮ್ಮ ಆತ್ಮ ಪೋಷಣೆಗೆ ವಿಶ್ವಾಸವನ್ನು ವೃದ್ಧಿಸಿಕೊಂಡು ಬಾಳುವ ಸುಮನಸನ್ನು ಪಡೆದುಕೊಳ್ಳೋಣ ಮತ್ತು ಅದರಂತೆಯೇ ಜೀವಿಸೋಣ.
No comments:
Post a Comment