24 ಹಸಿರು ಬುಧ ಸಾಧಾರಣ ಕಾಲದಹದಿನಾರನೇ ವಾರ
1ನೇ ವಾಚನ - ವಿಮೊ 16: 1-5, 9-15
ಕೀರ್ತನೆ - 78: 18-19, 23-28
ಶುಭಸಂದೇಶ - ಮತ್ತಾಯ 13: 1-9
1ನೇ ವಾಚನ - ವಿಮೊ 16: 1-5, 9-15
1 : ಇಸ್ರಯೇಲರ ಸಮಾಜ ಏಲೀಮಿನಿಂದ ಹೊರಟ ಮೇಲೆ, ಏಲೀಮಿಗೂ ಸಿನಾಯಿ ಬೆಟ್ಟಕ್ಕೂ ನಡುವೆಯಿರುವ ‘ಸೀನ್’ ಎಂಬ ಮರುಭೂಮಿಗೆ ಬಂದರು. ಈಜಿಪ್ಟನ್ನು ಬಿಟ್ಟು ಬಂದ ಎರಡನೆಯ ತಿಂಗಳಿನ ಹದಿನೈದನೆಯ ದಿನ ಅದು.
2 : ಮರುಭೂಮಿಯಲ್ಲಿ ಇಸ್ರಯೇಲರ ಸಮಾಜವೆಲ್ಲ ಮೋಶೆ ಮತ್ತು ಆರೋನರ ವಿರುದ್ಧ ಗೊಣಗುಟ್ಟಿತು.
3 : “ಈ ಸಮಾಜವನ್ನೆಲ್ಲ ಹಸಿವೆಯಿಂದ ಸಾಯಿಸಬೇಕೆಂದು ಈ ಮರುಭೂಮಿಗೆ ನಮ್ಮನ್ನು ಕರೆದುತಂದಿದ್ದೀರಿ; ನಾವು ಈಜಿಪ್ಟಿನಲ್ಲಿದ್ದಾಗ ಸರ್ವೇಶ್ವರನ ಕೈಯಿಂದಲೆ ಸತ್ತಿದ್ದರೆ ಎಷ್ಟೋ ಲೇಸಾಗಿತ್ತು. ಆಗ ಮಾಂಸಪಾತ್ರೆಗಳ ಪಕ್ಕದಲ್ಲೇ ಕುಳಿತು ಹೊಟ್ಟೇ ತುಂಬ ಊಟ ಮಾಡುತ್ತಿದ್ದೆವು,” ಎಂದು ಗುಣಗಿದರು.
4 : ಆಗ ಸರ್ವೇಶ್ವರ ಮೋಶೆಗೆ, “ಇಗೋ ನೋಡು, ಆಕಾಶದಿಂದ ನಿಮಗೋಸ್ಕರ ಆಹಾರವನ್ನು ಸುರಿಸುವೆನು. ಈ ಜನರು ಪ್ರತಿದಿನವು ಹೊರಗೆ ಹೋಗಿ ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕು. ನನ್ನ ಕಟ್ಟಳೆಯ ಪ್ರಕಾರ ನಡೆಯುವರೋ ಇಲ್ಲವೋ ಎಂದು ಇದರಿಂದ ಪರೀಕ್ಷಿಸಿ ತಿಳಿಯುತ್ತೇನೆ.
5 : ಆರನೆಯ ದಿನದಲ್ಲಿ ಮಾತ್ರ ಪ್ರತಿದಿನ ಕೂಡಿಸಿದ್ದಕ್ಕಿಂತಲೂ ಎರಡರಷ್ಟು ಕೂಡಿಸಿ ಸಿದ್ಧಪಡಿಸಿಕೊಳ್ಳಬೇಕು,” ಎಂದು ಹೇಳಿದರು.
9 : ಆರೋನನಿಗೆ ಮೋಶೆ, “ನೀನು ಇಸ್ರಯೇಲ್ ಸಮಾಜದ ಬಳಿಗೆ ಹೋಗಿ, ಅವರಿಗೆ, ‘ಸರ್ವೇಶ್ವರ ನಿಮ್ಮ ಗೊಣಗಾಟವನ್ನು ಕೇಳಿದ್ದಾರೆ. ಆದ್ದರಿಂದ ನೀವೆಲ್ಲರು ಅವರ ಸನ್ನಿಧಿಗೆ ಕೂಡಿಬರಬೇಕು, ಎಂದು ಆಜ್ಞಾಪಿಸು,” ಎಂದು ಹೇಳಿದನು.
10 : ಅಂತೆಯೇ ಆರೋನನು ಇಸ್ರಯೇಲರ ಸಮಾಜಕ್ಕೆಲ್ಲ ಈ ಮಾತುಗಳನ್ನು ತಿಳಿಸುತ್ತಿರುವಾಗ ಆ ಜನರು ಮರುಭೂಮಿಯ ಕಡೆಗೆ ನೋಡಿದರು. ಆಗ ಇಗೋ, ಮೇಘದಲ್ಲಿ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು:
11 : ಸರ್ವೇಶ್ವರ ಮೋಶೆಯ ಸಂಗಡ ಮಾತಾಡಿ ಹೀಗೆಂದರು:
12 : “ಇಸ್ರಯೇಲರ ಗೊಣಗಾಟ ನನಗೆ ಕೇಳಿಸಿತು. ಅವರಿಗೆ, ‘ಸಂಜೆ ಮಾಂಸವನ್ನೂ ಬೆಳಿಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ; ಇದರಿಂದ ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು’ ಎಂದು ಹೇಳು,” ಎಂದರು.
13 : ಸಂಜೆಯಾಗುತ್ತಲೆ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು. ಬೆಳಿಗ್ಗೆ ಪಾಳೆಯದ ಸುತ್ತಲೂ ಮಂಜುಬಿದ್ದಿತು.
14 : ಆ ಮಂಜು ಆರಿಹೋದನಂತರ ಮರುಭೂಮಿಯ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣ ಸಣ್ಣ ರವೆಗಳು ಕಾಣಿಸಿದವು.
15 : ಇಸ್ರಯೇಲರು ಅದನ್ನು ಕಂಡು ಇಂಥದೆಂದು ತಿಳಿಯದೆ ಒಬ್ಬರಿಗೊಬ್ಬರು ‘ಮನ್ನ’ ಎಂದರು. ಇದೇನಿರಬಹುದೆಂದು ವಿಚಾರಿಸಿದರು. ಮೋಶೆ ಅವರಿಗೆ, “ಇದು ಸರ್ವೇಶ್ವರಸ್ವಾಮಿ ನಿಮಗೋಸ್ಕರ ಕೊಟ್ಟ ಆಹಾರ.
ಕೀರ್ತನೆ - 78: 18-19, 23-28
ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು
18 : ಕೋರಿದರು ತನುಗಿಷ್ಟವಾದ ಆಹಾರವನೇ / ಪರೀಕ್ಷಿಸಿದರು ಮನದಲಿ ಆ ದೇವರನೇ //
19 : ಜರೆವ ಮಾತಿನಲಿ ಆಡಿಕೊಂಡರಿಂತು:/ “ಅಡವಿಯಲ್ಲಿ ದೇವನೂಟ ಬಡಿಸುವನೆಂತು?” //
23 : ಆದರು ಮೇಘಮಂಡಲಕೆ ಆಜ್ಞೆಯಿತ್ತನಾತ / ಅಂತರಿಕ್ಷದಾ ದ್ವಾರಗಳನು ತೆರೆದನಾತ //
24 : ಸುರಿಸಿದನು ಅವರ ಮೇಲೆ ಉಣಲು ಅನ್ನವನು / ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು //
25 : ನರರಿಗುಣಲುಕೊಟ್ಟನು ದೇವದೂತರ ಆಹಾರವನು / ಇತ್ತನವರಿಗೆ ತೃಪ್ತಿಕರವಾದ ಭೂರಿ ಔತಣವನು //
26 : ಆಕಾಶದಲೆಬ್ಬಿಸಿದನು ಮೂಡಣ ಗಾಳಿಯನು / ಒಲುಮೆಯಿಂದ ಹೊರಡಿಸಿದನು ತೆಂಕಣ ಗಾಳಿಯನು //
27 : ಧೂಳಿನಷ್ಟು ಸುರಿಸಿದನು ಮಾಂಸವೃಷ್ಟಿಯನು / ಸಮುದ್ರದ ಮರಳಿನಷ್ಟು ರೆಕ್ಕೆ ಹಕ್ಕಿಗಳನು //
28 : ಬೀಳ್ವಂತೆ ಮಾಡಿದನು ಪಾಳೆಯದ ಮಧ್ಯದಲೂ / ಉದುರಿದವು ಅವರಿದ್ದ ಗುಡಾರಗಳ ಸುತ್ತಲೂ //
ಶುಭಸಂದೇಶ - ಮತ್ತಾಯ 13: 1-9
1 : ಅದೇ ದಿನ ಯೇಸುಸ್ವಾಮಿ ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತರು.
2 : ಜನರು ತಂಡೋಪತಂಡವಾಗಿ ಕೂಡಿ ಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು.
3 : ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಯ ರೂಪದಲ್ಲಿ ಹೇಳಿದರು:
4 : "ಒಬ್ಬ ರೈತ ಬಿತ್ತುವುದಕ್ಕೆ ಹೋದ. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದದ್ದೇ ಹಕ್ಕಿಗಳು ಬಂದು ಆ ಬೀಜವನ್ನು ತಿಂದುಬಿಟ್ಟವು.
5 : ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು.
6 : ಆದರೆ ಬಿಸಿಲೇರಿದಾಗ ಬಾಡಿದವು. ಬೇರು ಬಲವಾಗಿಲ್ಲದ ಕಾರಣ ಒಣಗಿಹೋದವು.
7 : ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಆ ಪೊದೆಗಳು ಸಸ್ಯಗಳ ಸಮೇತ ಬೆಳೆದು, ಅವುಗಳನ್ನು ಅಡಗಿಸಿ ಬಿಟ್ಟವು.
8 : ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು, ತೆನೆಬಿಟ್ಟವು. ಕೆಲವು ನೂರರಷ್ಟು, ಮತ್ತೆ ಕೆಲವು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಫಸಲನ್ನು ಕೊಟ್ಟವು.
9 : ಕೇಳಲು ಕಿವಿಯುಳ್ಳವನು ಕೇಳಿಸಿಕೊಳ್ಳಲಿ," ಎಂದು ಒತ್ತಿ ಹೇಳಿದರು.
ಚಿಂತನೆ (ಕೃಪೆ - ಜೀವವಾಕ್ಯ)
ಆಲಿಸು-ಪಾಲಿಸು-ಬೋಧಿಸು
ಇತಿಹಾಸದ ಪುಟಗಳನ್ನು ತಿರುವಿದಾಗ, ನಮ್ಮ ಗಮನಕ್ಕೆ ಬರುವ ಒಂದು ವಿಶಿಷ್ಟ, ಸಂಗತಿ ಎಂದರೆ ಮಾತಿನ ಮಹಿಮೆ, ಅದರ ಶಕ್ತಿ ಮತ್ತು ಪ್ರಭಾವ. ಉದಾಹರಣೆಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ, ಸ್ವಾತಂತ್ರ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂಬ ಬಾಲಗಂಗಾಧರ ತಿಲಕರ ಮಾತುಗಳು ಗಾಂಧೀಜಿಯ ಪರಿಣಾಮಕಾರಿ ಭಾಷಣಗಳು ಇಡೀ ಭಾರತದ ಜನತೆಯನ್ನು ಒಂದುಗೂಡಿಸಿ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಸಹಾಯಕವಾದವು. ಜಾರ್ಜ್ ವಾಷಿಂಗ್‌ಟನ್ ಮತ್ತು ಐನ್‌ಸ್ಟಿನ್ ಚರ್ಚಿಲ್‌ರವರ ವಾಕ್‌ಶಕ್ತಿಗಳು ಯುವಕರಲ್ಲಿ ಸ್ಪೂರ್ತಿಯನ್ನು ಚಿಮ್ಮಿಸಿ ಯುದ್ಧದಲ್ಲಿ ಜಯವನ್ನು ತಂದುಕೊಟ್ಟವು. ನೀನು ಜಗತ್ತನ್ನೇ ಗೆದ್ದು ನಿನ್ನ ಆತ್ಮವನ್ನು ಕಳೆದುಕೊಂಡರೆ ಏನು ಫಲ? ಎನ್ನುವ ಮಾತುಗಳು ಫ್ರಾನ್ಸಿನ್ ಕ್ಸೇವಿಯರ್ ಅವರ ಜೀವನವನ್ನೇ ಬದಲಾಯಿಸಿದವು.
ಇಂದಿನ ಶುಭಸಂದೇಶವು ಎರಡು ಮುಖ್ಯ ಅಂಶಗಳನ್ನು ನಮಗೆ ಮನದಟ್ಟು ಮಾಡುತ್ತದೆ. ಮೊದಲನೆಯದಾಗಿ ನಾವು ಹದವಾದ ಭೂಮಿಯ ಹಾಗೆ ದೇವರ ಸುವಾರ್ತೆಯನ್ನು ಪಡೆದು ನೂರ್‍ಮಡಿ ಫಲಗಳನ್ನು ನೀಡುವುದು. ಎರಡನೆಯದಾಗಿ ಬಿತ್ತುವವನಂತೆ ನಮ್ಮಲ್ಲಿರುವ ಕ್ರಿಸ್ತರನ್ನು ಎಲ್ಲರಿಗೂ ಸಾರುವುದು.
ದೇವರ ವಾಕ್ಯವನ್ನು ಪಡೆದು ಅದನ್ನು ಧ್ಯಾನಿಸಿದಾಗ ಜೀವ ನದಿಗಳು ಹರಿಯುವುದು ನಮಗೆ ಗೋಚರವಾಗುತ್ತದೆ. ನಮ್ಮಿಂದಾದನ್ನು ಪಡೆದು ಅದನ್ನು ಪರರಿಗೆ ಹಂಚುವುದರಲ್ಲಿ ನಮ್ಮ ಸಾರ್ಥಕತೆ ಅಡಗಿದೆ. ಶುಭಸಂದೇಶವನ್ನು ಕೇಳಿ ಅದನ್ನು ನಮ್ಮ ಜೀವನದಲ್ಲಿ ಪಾಲಿಸಿದರೆ ನಮ್ಮ ಜೀವನ ಆಗುವುದು ಪಾವನ.
ನನ್ನ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆಕಟ್ಟಿಕೊಂಡ ಬುದ್ಧಿವಂತನನ್ನು ಹೋಲುತ್ತಾನೆ (ಮತ್ತಾಯ ೭:೨೪). ಯಾವಾಗ ಪರರು ನಮ್ಮ ವಿರುದ್ಧ ತಪ್ಪು ಮಾಡಿದಾಗ, ಅವರ ತಪ್ಪನ್ನು ಮನಸ್ಸಾರೆ ಕ್ಷಮಿಸಿ, ಅವರನ್ನು ಸರಿ ದಾರಿಯಲ್ಲಿ ನಡೆಸುತ್ತೇವೆಯೋ, ಯಾವಾಗ ನಾವು ಪರರನ್ನು ಅರ್ಥ ಮಾಡಿಕೊಂಡು ಅವರ ಕಷ್ಟಗಳಲ್ಲಿ ಭಾಗಿಯಾಗಿ, ಉಪಶಮಿತರಾಗಿರುತ್ತೇವೆಯೋ, ಯಾವಾಗ ನಾವು ನಿಸ್ವಾರ್ಥಿಗಳಾಗಿರುತ್ತೇವೆಯೇ ಆಗ ನಾವು ಫಲಕೊಡುವ ಭೂಮಿಯಂತೆ ಪರರಿಗೆ ದೇವರವಾಕ್ಯವನ್ನು ಸಾರುವ ಪ್ರಚಾರಕರಾಗುತ್ತೇವೆ.
ಪ್ರಪಂಚದಲ್ಲಿ ಮನುಷ್ಯನು ಪಡೆಯಲೇ ಬೇಕಾದಂತಹ ಅಮೂಲ್ಯ ಸಂಪತ್ತು - ದೇವರ ವಾಕ್ಯ.
No comments:
Post a Comment