Wednesday, 31 July 2019

ಸಾಧಾರಣ ಕಾಲದ ಹದಿನೇಳನೇ ವಾರ ಶುಕ್ರವಾರ


ಸಾಧಾರಣ ಕಾಲದ ಹದಿನೇಳನೇ ವಾರ ಶುಕ್ರವಾರ



2 /ಹಸಿರು/ಶುಕ್ರ/ಐಚ್ಛಿಕ  ಸ್ಮರಣೆ-ಸಂತ  ಯುಸೇಬಿಯುಸ್

1ನೇ  ವಾಚನ  -  ಯಾಜಕ  23: 1,4-11,15-16,27,34-37
ಕೀರ್ತನೆ  -  81:  2-3,4-5,9-1೦
ಶುಭಸಂದೇಶ -ಮತ್ತಾಯ 13: 54-58




1ನೇ  ವಾಚನ  -  ಯಾಜಕ  23: 1,4-11,15-16,27,34-37

ಇಸ್ರಯೇಲರಿಗೆ ಈ ಪ್ರಕಾರ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು: ಸರ್ವೇಶ್ವರನಿಂದ ನೇಮಕವಾದ ಹಬ್ಬದ ಕಾಲಗಳಲ್ಲಿ ದೇವರ ಆರಾಧನೆಗಾಗಿ ಸಭೆಸೇರಬೇಕು. ಆ ಹಬ್ಬದ ದಿನಗಳನ್ನು ನಿಯಮಿತ ಕಾಲದಲ್ಲಿ ಪ್ರಕಟಿಸಬೇಕು: “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ವೇಳೆಯಲ್ಲಿ ಸರ್ವೇಶ್ವರ ನೇಮಿಸಿದ ಪಾಸ್ಕಹಬ್ಬವಾಗಬೇಕು.
ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ಹಬ್ಬವನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು. ಅಂದು ಮೊದಲ್ಗೊಂಡು ಏಳು ದಿನಗಳಲ್ಲೂ ಹುಳಿರಹಿತ ರೊಟ್ಟಿಯನ್ನು ಊಟ ಮಾಡಬೇಕು.
ಮೊದಲನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು.
ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನಿಗೆ ದಹನಬಲಿಗಳನ್ನು ಸಮರ್ಪಿಸಬೇಕು. ಏಳನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಅಂದು ಯಾವ ದುಡಿಮೆಯನ್ನೂ ಕೈಗೊಳ್ಳಬಾರದು.” ಮೋಶೆಯ ಮುಖಾಂತರ ಇಸ್ರಯೇಲರಿಗೆ ಸರ್ವೇಶ್ವರ ಹೀಗೆ ಆಜ್ಞಾಪಿಸಿದರು: “ನಾನು ನಿಮಗೆ ಕೊಡುವ ನಾಡನ್ನು ನೀವು ಸೇರಿದ ನಂತರ ಅಲ್ಲಿನ (ಜವೆಗೋದಿ) ಪೈರನ್ನು ಕೊಯ್ಯುವಾಗ ಪ್ರಥಮ ಫಲದ ಸಿವುಡನ್ನು ಯಾಜಕನ ಬಳಿಗೆ ತಂದೊಪ್ಪಿಸಬೇಕು.ನೀವು ಅಂಗೀಕೃತರಾಗುವಂತೆ ಯಾಜಕನು ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯವಾಗಿ ಆರತಿಯೆತ್ತಬೇಕು. ಆ ಸಿವುಡನ್ನು ನೈವೇದ್ಯವಾಗಿ ಆರತಿಯೆತ್ತುವ ದಿನದಂದೇ “ಸಬ್ಬತ್‍ದಿನದ ಮಾರನೆಯ ದಿನ ಮೊದಲ್ಗೊಂಡು, ಅಂದರೆ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ಆರತಿ ಎತ್ತಿದ ದಿನ ಮೊದಲುಗೊಂಡು, ಪೂರ್ಣವಾಗಿ ಏಳುವಾರಗಳು ಮುಗಿಯುವಂತೆ, ಐವತ್ತು ದಿನಗಳನ್ನು ಎಣಿಸಬೇಕು. ಏಳನೆಯ ಸಬ್ಬತ್‍ದಿನದ ಮರುದಿನದಲ್ಲಿ ಸರ್ವೇಶ್ವರನಿಗೆ ಹೊಸ ಬೆಳೆಯ ನೈವೇದ್ಯವನ್ನು ಸಮರ್ಪಿಸಬೇಕು.“ಅದೇ ಏಳನೆಯ ತಿಂಗಳಿನ ಹತ್ತನೆಯ ದಿನವನ್ನು ಸರ್ವದೋಷಪರಿಹಾರ ದಿನವನ್ನಾಗಿ ಆಚರಿಸಬೇಕು. ಅಂದು ದೇವಾರಾಧನೆಗಾಗಿ ಸಭೆಕೂಡಬೇಕು. ಪೂರ್ಣವಾಗಿ ಉಪವಾಸ ಮಾಡಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನಮಾಡಬೇಕು. “ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲ್ಗೊಂಡು ಏಳು ದಿನದವರೆಗೆ ಪರ್ಣಕುಟೀರಗಳ ಜಾತ್ರೆಯನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು. ಮೊದಲನೆಯ ದಿನ ದೇವಾರಾಧನೆಗಾಗಿ ಸಭೆ ಸೇರಬೇಕು; ಯಾವ ದುಡಿಮೆಯನ್ನೂ ಕೈಗೊಳ್ಳಬಾರದು. ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿದಾನ ಮಾಡಬೇಕು. ಎಂಟನೆಯ ದಿನದಂದು ದೇವ ಆರಾಧನೆಗಾಗಿ ಸಭೆಸೇರಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿದಾನ ಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಅಂದು ಎಲ್ಲ ದುಡಿಮೆಯನ್ನು ನಿಲ್ಲಿಸಬೇಕು.
“ಸರ್ವೇಶ್ವರ ನೇಮಿಸಿರುವ ಸಬ್ಬತ್ ದಿನಗಳನ್ನು ಮತ್ತು ಮೇಲೆ ಹೇಳಿದ ಸ್ವಾಮಿಯ ಹಬ್ಬದ ದಿನಗಳನ್ನು ನೀವು ಆಚರಿಸಬೇಕು. ಆ ದಿನಗಳಲ್ಲಿ ದೇವಾರಾಧನೆಗಾಗಿ ಸಭೆಸೇರುವಂತೆ ಜನರಿಗೆ ಪ್ರಕಟಿಸಬೇಕು.

ಕೀರ್ತನೆ  -  81:  2-3,4-5,9-1೦

2 : ಆರಂಭಿಸಿ ಸಂಗೀತವನು, ಬಾರಿಸಿ ಮೃದಂಗವನು / ನುಡಿಸಿರಿ ಮಧುರ ವೀಣೆಯನು, ಸ್ವರಮಂಡಲವನು //
3 : ಊದಿರಿ ಕೊಂಬನು ಅಮವಾಸ್ಯೆಯಲಿ / ಉತ್ಸವದಿನವಾದ ಪೂರ್ಣಿಮೆಯಲಿ //
4 : ದೇವರಿತ್ತ ನಿಯಮವದು ಯಕೋಬ್ಯರಿಗೆ / ಕೊಟ್ಟಕಟ್ಟಳೆಯದು ಇಸ್ರಯೇಲರಿಗೆ //
5 : ಈಜಿಪ್ಟರಿಗೆದುರಾಗಿ ತೆರಳಿದಂದು / ಜೋಸೆಪ್ಯರಿಗಾತ ವಿಧಿಸಿದಾಜ್ಞೆಯದು //
9 : “ಇರಬಾರದು ಅನ್ಯದೇವತೆಗಳು ನಿಮ್ಮಲಿ / ಪರದೇವತೆಗಳ ಪೂಜೆ ಕೂಡದು ನಿಮ್ಮಲಿ,//
10 : “ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ ದೇವನು ನಾನು / ತೆರೆಯಿರಿ ನಿಮ್ಮ ಬಾಯನು, ತುಂಬಿಸಿ ತೃಪ್ತಿಪಡಿಸುವೆ ನಾನದನು //

ಶುಭಸಂದೇಶ -ಮತ್ತಾಯ 13: 54-58
ಸಾಮತಿಗಳನ್ನು ಹೇಳಿಯಾದ ಮೇಲೆ ಯೇಸುಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, "ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?" ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು. ಅವರಿಗೆ ಯೇಸು, "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು," ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತ ಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.

ಚಿಂತನೆ:
'ಹಿತ್ತಲ ಗಿಡ ಮದ್ದಲ್ಲ' ಎಂಬ ಗಾದೆಯಂತೆ ಯೇಸುವನ್ನು ತಮ್ಮ ಸ್ವಂತ ನಾಡಿನಲ್ಲಿ ಸ್ವಂತ ಜನರೇ ತಿರಸ್ಕರಿಸುತ್ತಾರೆ. ವ್ಯಕ್ತಿಯ ಸಂದೇಶ ಮತ್ತು ಸಾಧನೆಗಿಂತ ವ್ಯಕ್ತಿಯ ಮತ್ತು ಆತನ ಕುಟುಂಬದ ಹಿನ್ನೆಲೆ ನೋಡುವವರೇ ಹೆಚ್ಚು. ಯೇಸುವಿನ ಜನನದ, ತಂದೆ ತಾಯಿಯ, ಅವರ ಬಡತನದ, ಸರಳತೆಯ ಬಗ್ಗೆ ಅರಿತಿದ್ದ ಜನ ಯೇಸುವನ್ನು ಸ್ವೀಕರಿಸಲು ಹಿಂದೇಟಾಕುತ್ತಾರೆ. ಇಂದಿನ ಶುಭಸಂದೇಶದಲ್ಲಿ ಯೇಸುವಿನ ಸಹೋದರ, ಸಹೋದರಿಯರ ಪ್ರಸ್ತಾಪವಿದೆ. ಯೇಸುವಿಗೆ ಇತರ ಸಹೋದರ ಸಹೋದರಿಯರು ಇದ್ದರೇ ಎಂಬ ಪ್ರಶ್ನೆ ಮೂಡಬಹುದು. ಇಲ್ಲಿ ಬಳಸಲಾದ ಗ್ರೀಕ್ ಪದ ಅದೆಲ್ ಪೋಸ್(Adelphos) ಎಂದರೆ ದೊಡ್ಡಪ್ಪನ ಅಥವಾ ಚಿಕ್ಕಪ್ಪನ ಮಕ್ಕಳು ಎಂದರ್ಥ. ಅವರು ಒಡಹುಟ್ಟಿದವರಲ್ಲ. ಮರಿಯಳಿಗೆ ಯೇಸು ಬಿಟ್ಟರೆ ಬೇರೆ ಮಕ್ಕಳಿರಲಿಲ್ಲ. 

No comments:

Post a Comment