Wednesday, 11 September 2019

ಸಾಧಾರಣ ಕಾಲದ ಇಪ್ಪತ್ಮೂರನೇ ವಾರ ಶನಿವಾರ

ಸಾಧಾರಣ ಕಾಲದ ಇಪ್ಪತ್ಮೂರನೇ ವಾರ ಶನಿವಾರ

14/ಕೆಂಪು/ಶನಿ/ಪವಿತ್ರ ಶಿಲುಬೆಯ ವಿಜಯೋತ್ಸವ ಹಬ್ಬ
1ನೇ  ವಾಚನ - ಸಂಖ್ಯಾ 21: 4-9
ಕೀರ್ತನೆ - 78: 1-2, 34-35, 36-37, 38
ಶುಭಸಂದೇಶ - ಯೊವಾನ್ನ 3:13-17

1ನೇ  ವಾಚನ - ಸಂಖ್ಯಾ 21: 4-9
ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸ ದಿಂದ ಅವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡ ತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್‍ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು. ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ,” ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿ ಒಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು,” ಎಂದು ಆಜ್ಞಾಪಿಸಿದರು. ಅಂತೆಯೆ ಮೋಶೆ ಕಂಚಿನಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.

ಕೀರ್ತನೆ - 78: 1-2, 34-35, 36-37, 38
1 : ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ / ಗಮನಕೊಡಿ ನಾ ಹೇಳುವ ಮಾತುಗಳಿಗೆ / 
2 : ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು / ಹೊರಪಡಿಸುವೆನು ಪೂರ್ವಕಾಲದ ಗೂಡಾರ್ಥಗಳನು // 
34 : ಆತನನು ನೆನಸಿಕೊಂಡರವರು ವಧೆಯಾಗುವಾಗ / ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ // 
35 : ನೆನೆದರಾಗ ದೇವರೇ ತಮಗಾಶ್ರಯ ದುರ್ಗವೆಂದು / ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು // 
36 : ಆದರೆ ಅವರ ನಾಲಿಗೆಯಾಡಿತು ಅಸತ್ಯ / ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ // 
37 : ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ / ಬದ್ಧರಾಗಿರಲಿಲ್ಲ ಆತನ ನಿಬಂಧನೆಗಳಲಿ // 
38 : ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ / ಕೋಪವ ತಾಳಿಕೊಂಡನು ಹಲವು ವೇಳೆ, ಉದ್ರೇಕಗೊಳ್ಳದೆ //

ಶುಭಸಂದೇಶ - ಯೊವಾನ್ನ 3:13-17
ಸ್ವರ್ಗಲೋಕದಿಂದಲೇ ಇಳಿದು ಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. “ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು.

ಚಿಂತನೆ

ಹಬ್ಬ : ಪವಿತ್ರ ಶಿಲುಬೆಯ ವಿಜಯ

ಶಿಲುಬೆಯು ನಮ್ಮ ಕ್ರೈಸ್ತರ ಲಾಂಚನ. ಕಾರಣ ಇದು ಪ್ರಭು ಯೇಸುವಿನ ಜೀವನದ ಗುರಿಯಾಗಿತ್ತು. ಇದು ದೇವರ ಪ್ರೀತಿಯನ್ನು ಪ್ರಕಟಿಸುತ್ತದೆ. ನಮ್ಮನ್ನು ರಕ್ಷಿಸಲು, ಕ್ರಿಸ್ತರು ಶಿಲುಬೆಯ ಮೇಲೆ ಸಾಯಬೇಕಿತ್ತು. ಶಿಲುಬೆಯ ಮೇಲೆ ಅವರು ಸುರಿಸಿದ ರಕ್ತ-ಮರಣ. ಇದು ನಮ್ಮೆಲ್ಲರ ರಕ್ಷಣೆಯ ಸಾಧನವಾಗಿದೆ. ನಮ್ಮೆಲ್ಲರ ಪಾಪಗಳ ಪರಿಹಾರಕ್ಕಾಗಿ ನಮ್ಮನ್ನು ಮರಣದಿಂದ ಬಿಡಿಸಲು ಕ್ರಿಸ್ತರು ಕೊಲೆಗಡುಕರ, ದರೋಡೆಕೋರರ ಶಿಕ್ಷೆಯಾದ ಶಿಲುಬೆಯ ಮರಣವನ್ನು ಅಪ್ಪಿದರು. ಮರಣವನ್ನು ಜಯಿಸಿ ಎಲೈ ಸಾವೆ, ನಿನ್ನ ಜಯವೆಲ್ಲಿ? ಎಂದು ಸಾವಿನ ಮೇಲೆ ವಿಜಯವನ್ನು ಸಾಧಿಸಿದರು.
 ಪ್ರಭುವಿನ ಜೀವನದಿಂದ ಪ್ರೇರಿತರಾದ ನಾವು ಕೂಡ ನಮ್ಮ ದಿನನಿತ್ಯದ ಶಿಲುಬೆಗಳನ್ನು ತಾಳ್ಮೆಯಿಂದ ಹೊತ್ತು ಪ್ರಭುವನ್ನು ಹಿಂಬಾಲಿಸುವುದು ಅಗತ್ಯವಾಗಿದೆ.
 ಇಂದು ನಾವು ಪ್ರಭುವಿನ ಶಿಲುಬೆಯ ವಿಜಯವನ್ನು ಕೊಂಡಾಡುವಾಗ ಅವರ ಶಿಲುಬೆಯ ಹಾದಿಯಲ್ಲಿ ನಡೆದು ಅವರ ವಿಜಯದಲ್ಲಿ ಪಾಲುದಾರರಾಗಿ ನಮ್ಮ ಜೀವನವನ್ನು ಪಾವನಗೊಳಿಸೋಣ.

No comments:

Post a Comment