Friday, 6 September 2019

ಸಾಧಾರಣ ಕಾಲದ ಇಪ್ಪತ್ಮೂರನೇ ವಾರ ಸೋಮವಾರ

ಸಾಧಾರಣ ಕಾಲದ ಇಪ್ಪತ್ಮೂರನೇ ವಾರ ಸೋಮವಾರ 

9/ಬಿಳಿ/ಸೋಮ/ಸಂತ ಪೀಟರ್ ಕ್ಲೇವರ್ (ಯಾ).
1ನೇ ವಾಚನ - ಕೊಲೊ 1: 24-2:3
ಕೀರ್ತನೆ - 62: 5-6, 8, 7
ಶುಭಸಂದೇಶ - ಲೂಕ 6: 6-11

1ನೇ ವಾಚನ - ಕೊಲೊ 1: 24-2:3
ಈಗ ನಿಮಗೋಸ್ಕರ ಸಂಕಟಪಡುವುದರಲ್ಲಿ ನನಗೆ ಸಂತೋಷವಿದೆ. ಕ್ರಿಸ್ತಯೇಸು ತಮ್ಮ ಶರೀರವಾದ ಧರ್ಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಳಿಸುತ್ತಿದ್ದೇನೆ. ದೇವರು ನನ್ನನ್ನು ಧರ್ಮಸಭೆಯ ದಾಸನನ್ನಾಗಿ ನೇಮಿಸಿದ್ದಾರೆ. ನಿಮ್ಮ ಹಿತಕ್ಕಾಗಿ ಒಂದು ಮಹತ್ವದ ಕಾರ್ಯವನ್ನು ನನಗೆ ವಹಿಸಿರುತ್ತಾರೆ ಯುಗಯುಗಾಂತರಗಳಿಂದಲೂ ತಲತಲಾಂತರಗಳಿಂದಲೂ ನಿಗೂಢವಾಗಿದ್ದ ರಹಸ್ಯವನ್ನು, ಅಂದರೆ ತಮ್ಮ ವಾಕ್ಯವನ್ನು, ಈಗ ತಮ್ಮ ಜನರಿಗೆ ದೇವರು ಪ್ರಕಟಿಸಿದ್ದಾರೆ. ಈ ರಹಸ್ಯ ಎಷ್ಟು ಶ್ರೀಮಂತವಾದುದು, ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ಎಲ್ಲಾ ಜನಾಂಗಗಳಿಗೂ ತಿಳಿಸಲು ದೇವರು ಇಚ್ಛಿಸಿದರು. ಕ್ರಿಸ್ತ ಯೇಸು ನಿಮ್ಮಲ್ಲಿದ್ದು ಮುಂದಿನ ಮಹಿಮೆಯ ನಿರೀಕ್ಷೆಗೆ ಆಧಾರವಾಗಿದ್ದಾರೆ ಎಂಬುದೇ ಈ ರಹಸ್ಯ. ನಾವು ಸಾರುತ್ತಲಿರುವುದೂ ಯೇಸುಕ್ರಿಸ್ತರನ್ನೇ. ಎಲ್ಲರಿಗೂ ಬುದ್ಧಿ ಹೇಳುತ್ತಾ ಎಲ್ಲರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ ದೇವರ ಮುಂದೆ ಎಲ್ಲರನ್ನು ಕ್ರಿಸ್ತಯೇಸುವಿನಲ್ಲಿ ಪರಿಣತರನ್ನಾಗಿ ಊರ್ಜಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನನ್ನನ್ನು ಚೇತನಗೊಳಿಸುತ್ತಿರುವ ಯೇಸುಕ್ರಿಸ್ತರ ಶಕ್ತಿಯಿಂದ ಈ ಗುರಿಯನ್ನು ಸಾಧಿಸಲು ಶ್ರಮವಹಿಸಿ ಹೋರಾಡುತ್ತಿದ್ದೇನೆ. ನಿಮಗಾಗಿಯೂ ಲವೊದಿಕೀಯದವರಿಗಾಗಿಯೂ ಹಾಗೂ ನನ್ನ ನೇರ ಪರಿಚಯ ಇಲ್ಲದವರಿಗಾಗಿಯೂ ನಾನು ಎಷ್ಟು ಶ್ರಮಿಸುತ್ತಿದ್ದೇನೆಂಬುದನ್ನು ತಿಳಿಸಬಯಸುತ್ತೇನೆ. ಇದರಿಂದ ಅವರು ಅಂತರಂಗದಲ್ಲಿ ಉತ್ತೇಜನಗೊಂಡು ಪ್ರೀತಿಯಲ್ಲಿ ಒಂದಾಗಬೇಕು; ನೈಜ ಅರಿವಿನಿಂದ ಅವರಿಗೆ ಪೂರ್ಣಜ್ಞಾನ ಲಭಿಸಬೇಕು ಎಂಬುದೇ ನನ್ನ ಆಶಯ. ಆಗ ಅವರು ದೇವರ ರಹಸ್ಯವನ್ನು, ಅಂದರೆ ಕ್ರಿಸ್ತಯೇಸುವನ್ನು ಅರಿತುಕೊಳ್ಳಲು ಸಾಧ್ಯ. ಕ್ರಿಸ್ತಯೇಸುವಿನಲ್ಲಿಯೇ ಜ್ಞಾನ, ವಿವೇಕ ಎಂಬ ಸಿರಿಸಂಪತ್ತು ಅಡಗಿದೆ

ಕೀರ್ತನೆ - 62: 5-6, 8, 9
5 : ಎನ್ನ ಮನಕೆ ಶಾಂತಿ ದೇವನಿಂದಲೆ / ನನಗೆ ನಂಬಿಕೆ ನಿರೀಕ್ಷೆ ಆತನಿಂದಲೆ //
6 : ಆತನೆನಗೆ ದುರ್ಗ, ರಕ್ಷಕ, ಶರಣು / ನಾನೆಂದಿಗೂ ಕದಲಿ ಬೀಳೆನು //
7 : ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ / ಭದ್ರವಾದ ಬಂಡೆ, ನನಗಾಶ್ರಯ ಆತನೆ //
8 : ಜನರೇ, ಸದಾ ಭರವಸೆ ಇಡಿ ದೇವನಲಿ / ತೋಡಿಕೊಳ್ಳಿ ನಿಮ್ಮ ಅಳಲನು ಆತನಲಿ //
9 : ನರಮಾನವರೆಲ್ಲರು ಬರೇ ಉಸಿರು / ನರಾಧಿಪತಿಗಳು ತೀರಾ ಹುಸಿಯು / ತ್ರಾಸಿನಲಿ ತೂಗಲು ಅವರೆಲ್ಲರು / ಉಸಿರಿಗಿಂತಲೂ ಅತ್ಯಂತ ಹಗುರು //

ಶುಭಸಂದೇಶ - ಲೂಕ 6: 6-11
ಮತ್ತೊಂದು ಸಬ್ಬತ್‍ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಉಪದೇಶ ಮಾಡುತ್ತಿದ್ದರು. ಅಲ್ಲಿ ಬಲಗೈ ಬತ್ತಿ ಹೋಗಿದ್ದ ಒಬ್ಬಾತ ಇದ್ದನು. ಅವನನ್ನು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಧರ್ಮಶಾಸ್ತ್ರಿಗಳು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. ಯೇಸು ಅವರ ಆಲೋಚನೆಗಳನ್ನರಿತು ಬತ್ತಿದ ಕೈಯುಳ್ಳವನಿಗೆ, “ಬಂದು ಇಲ್ಲಿ ನಿಲ್ಲು,” ಎಂದರು. ಅವನು ಎದ್ದು ಬಂದು ನಿಂತನು. ಆಗ ಯೇಸು ಅವರಿಗೆ, “ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ: ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?” ಎಂದರು. ಅನಂತರ ಸುತ್ತಲೂ ಇದ್ದವರೆಲ್ಲರನ್ನು ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆ ತಿರುಗಿ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು. ಅವರಾದರೋ ಕ್ರೋಧಭರಿತರಾಗಿ, ಯೇಸುವಿಗೆ ಏನಾದರೂ ಮಾಡಬೇಕೆಂದು ತಮ್ಮತಮ್ಮೊಳಗೆ ಸಂಚುಮಾಡಿದರು.
--------
ಚಿಂತನೆ

ಪ್ರಭುವಿನ ದಿನವನ್ನು ಪವಿತ್ರವಾಗಿಡು ಮತ್ತು ದೇವರ ದಿನವನ್ನು ಪವಿತ್ರವಾಗಿ ಆಚರಿಸು ಎಂಬ ಕಟ್ಟಳೆಯ ಹಿಂದಿನ ಉದ್ದೇಶ ಏನು? ಧಾರ್ಮಿಕ ಮುಖಂಡರು ವಿಷಯದ ಕುರಿತು ಯೇಸುವಿನೊಡನೆ ತರ್ಕಕಿಳಿಯುವುದನ್ನು ಇಂದಿನ ಶುಭಸಂದೇಶದಲ್ಲಿ ಕಾಣುತ್ತೇವೆ. ಸೃಷ್ಟಿ ಹಾಗೂ ರಕ್ಷಣೆಯಲ್ಲಿನ ದೇವರ ಮಹಾತ್ಕಾರ್ಯಗಳನ್ನು ನೆನೆದು ದೇವರನ್ನು ಆರಾಧಿಸಲೆಂದು ಸಬ್ಬತ್ ದಿನದಂದು ವಿಶ್ರಾಂತಿಯನ್ನು ಪಡೆಯಬೇಕೆಂದು ತಿಳಿಸಲಾಗಿತ್ತು. ದೇವರ ಆರಾಧನೆಗೆ ಮೀಸಲಿಟ್ಟ ದಿನವೇ ಸಬ್ಬತ್ ದಿನ ಆದ್ದರಿಂದ ಸಬ್ಬತ್ ಆದ್ದರಿಂದ ಸಬ್ಬತ್ ದಿನದಲ್ಲಿ ಯಾವುದೇ ಕೆಲಸ ಮಾಡುವುದು ನಿಶಿದ್ಧ. ಆದ್ದರಿಂದ ಯೇಸು ಬತ್ತಿದ  ಕೈಯುಳ್ಳವನನ್ನು ಗುಣಪಡಿಸಿದ್ದೆ ಆದರೆ ಯೇಸುವಿನ ವಿರುದ್ಧ ಅಪಾದನೆ ಮಾಡಲು ಕಾಯುತ್ತಾರೆ. ಅವರ ಆಲೋಚನೆಗಳನ್ನು ತಿಳಿದು ಯೇಸು ಸಬ್ಬತ್ ದಿನದಲ್ಲಿ ಯಾವುದು ಧರ್ಮ? ಒಬ್ಬನ ಪ್ರಾಣವನ್ನು ಉಳಿಸುವುದೋ? ಅಥವಾ ಅಳಿಸುವುದು? ಎಂದು ಕೇಳಿ ಕೈ ಬತ್ತಿದವನ ಕೈಯನ್ನು ಸ್ಪಷ್ಟಪಡಿಸುತ್ತಾರೆ. ನಾವು ಪ್ರಭುವಿನ ದಿನವಾದ ಭಾನುವಾರವನ್ನು ಸಬ್ಬತ್ ದಿನವನ್ನಾಗಿ ಆಚರಿಸುತ್ತೇವೆ. ನಾವು ದೇವರನ್ನು ಪ್ರೀತಿಸಿದ್ದೇ ಆದರೆ ಪ್ರತಿದಿನವು ನೆರೆಹೊರೆಯವರನ್ನು ಪ್ರೀತಿಸಬೇಕು.

No comments:

Post a Comment