ಸಾಧಾರಣ ಕಾಲದ ಇಪ್ಪತ್ಮೂರನೇ ವಾರ ಗುರುವಾರ
12/ಹಸಿರು/ಗುರು
1ನೇ ವಾಚನ - ಕೊಲೊ 3:12-17
ಕೀರ್ತನೆ - 15೦: 1-6
ಶುಭಸಂದೇಶ - ಲೂಕ: 6: 27-38
12/ಹಸಿರು/ಗುರು
1ನೇ ವಾಚನ - ಕೊಲೊ 3:12-17
ಕೀರ್ತನೆ - 15೦: 1-6
ಶುಭಸಂದೇಶ - ಲೂಕ: 6: 27-38
1ನೇ ವಾಚನ - ಕೊಲೊ 3:12-17
ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು. ದೇವರ ಸ್ವಂತ ಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣಗಳಾಗಿರಲಿ. ಒಬ್ಬರನ್ನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು ಸಂಪೂರ್ಣಗೊಳಿಸುವ ಬಂಧನ. ನಿಮ್ಮ ಹೃನ್ಮನಗಳು ಕ್ರಿಸ್ತಯೇಸುವಿನ ಶಾಂತಿ ಸಮಾಧಾನದಿಂದ ತುಂಬಿರಲಿ. ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ; ಕೃತಜ್ಞತೆ ಉಳ್ಳವರಾಗಿ ಜೀವಿಸಿರಿ. ಕ್ರಿಸ್ತಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿರಿ ಹಾಗೂ ಬುದ್ಧಿಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ತಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ. ನುಡಿಯಲ್ಲಾಗಲೀ ನಡೆಯಲ್ಲಾಗಲೀ ನೀವು ಏನು ಮಾಡಿದರೂ ಯೇಸುಸ್ವಾಮಿಯ ಹೆಸರಿನಲ್ಲಿಯೇ ಮಾಡಿರಿ. ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.
ಕೀರ್ತನೆ - 15೦: 1-6
1 : ಅಲ್ಲೆಲೂಯ! / ಸ್ತತಿಸಿರಿ ದೇವರನು ಆತನ ಪರಿಶುದ್ಧ ಆಲಯದಲಿ / ಆತನ ಶಕ್ತಿಯನು ಸಾರುವಾ ಆಕಾಶ ಮಂಡಲದಲಿ
2 : ಸ್ತುತಿಸಿರಿ ಆತನ ಮಹತ್ಕಾರ್ಯಗಳಿಗಾಗಿ / ಆತನ ಮಹಾಪ್ರಭಾವಕ್ಕೆ ಅನುಗುಣವಾಗಿ
3 : ಆತನನ್ನು ಸ್ತುತಿಸಿರಿ ಕೊಂಬುಗಳನ್ನೂದುತಾ / ಸ್ವರಮಂಡಲಗಳನು, ಕಿನ್ನರಿಗಳನು ಬಾರಿಸುತಾ
4 : ಆತನನ್ನು ಸ್ತುತಿಸಿರಿ ತಮಟೆ ಬಡಿಯುತಾ ಕುಣಿಯುತಾ / ಆತನನ್ನು ಸ್ತುತಿಸಿರಿ ತಂತಿವಾದ್ಯ ನುಡಿಸುತಾ ಕೊಳಲೂದುತಾ
5 : ಆತನನ್ನು ಸ್ತುತಿಸಿರಿ ತಾಳದಿಂದ / ಆತನನ್ನು ಸ್ತುತಿಸಿರಿ ಝಲ್ಲರಿಯಿಂದ
6 : ಪ್ರಭುವನು ಸ್ತುತಿಸಲಿ ಉಸಿರಿರುವುದೆಲ್ಲವೂ / ಪ್ರಭುವಿಗೆ ಸ್ತೋತ್ರವಾಗಲಿ ಅಲ್ಲೆಲೂಯ!
ಶುಭಸಂದೇಶ - ಲೂಕ: 6: 27-38
“ನನ್ನನ್ನು ಆಲಿಸುತ್ತಿರುವವರೇ, ನನ್ನ ಮಾತನ್ನು ಕೇಳಿರಿ: ‘ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವವರನ್ನು ಸತ್ಕರಿಸಿರಿ. ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಒಡ್ಡು, ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆದುಕೊಳ್ಳಲು ಬಿಡು. ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು, ನಿನ್ನ ಸೊತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು. ಅಲ್ಲದೆ, ಇತರರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ಅದೇನು ಪುಣ್ಯ? ಪಾಪಿಷ್ಠರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲವೆ? ಉಪಕಾರ ಮಾಡಿದವರಿಗೇ ಉಪಕಾರ ಮಾಡಿದರೆ ಅದೇನು ಪುಣ್ಯ? ಪಾಪಿಷ್ಠರು ಸಹ ಹಾಗೆಯೇ ಮಾಡುತ್ತಾರಲ್ಲವೆ? ಸಾಲತೀರಿಸುವಂಥ ನಂಬಿಗಸ್ಥರಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಠರು ಸಹ ಸಾಲ ಕೊಡುತ್ತಾರಲ್ಲವೆ?’ “ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವರಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲ ಕೊಡಿ. ಆಗ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ. ದೇವರು ದುರ್ಜನರಿಗೂ ಒಳ್ಳೆಯವರು, ಕೃತಘ್ನರಿಗೂ ಒಳ್ಳೆಯವರು. ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. ನೀವು ಕೊಟ್ಟ ಅಳತೆಯಲ್ಲೇ ನಿಮಗೆ ಅಳೆಯಲಾಗುವುದು (ಮತ್ತಾ. 7.1-5) “ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ, ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು,” ಎಂದರು.
ಚಿಂತನೆ
ನಿಷ್ಕಳಂಕ ಮಾತೆಯ ಪವಿತ್ರನಾಮ
ಚಿಂತನೆ
ನಿಷ್ಕಳಂಕ ಮಾತೆಯ ಪವಿತ್ರನಾಮ
ಸೇಡಿಗೆ ಸೇಡು ಹಲ್ಲಿಗೆ ಹಲ್ಲು ಎಂಬ ಮಾತುಗಳನ್ನು ಕೇಳಿದ್ದೇವೆ. ಈ ಪ್ರಪಂಚದಲ್ಲಿ ಯಾವುದೇ ಜೀವಿಯಾಗಲಿ ತನಗೆ ನೋವು ಮಾಡಿದವರನ್ನು ನೋಯಿಸಲು, ಸೇಡನ್ನು ತೀರಿಸಲು ಕಾಯುತ್ತಿರುತ್ತದೆ. ಅದು ಪ್ರಕೃತಿ ನಿಯಮ. ಆದರೆ ಯೇಸು ನುಡಿಯುತ್ತಾರೆ, `ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವವರನ್ನು ಸತ್ಕರಿಸಿರಿ, ಆಶೀರ್ವದಿಸಿರಿ, ಅವರಿಗಾಗಿ ಪ್ರಾರ್ಥಿಸಿರಿ ಎಂಬುದಾಗಿ . ಆದರೆ ಇದನ್ನು ಪಾಲಿಸಲು ಸಾಧ್ಯವೇ? ಖಂಡಿತವಾಗಿ ಸಾಧ್ಯವಿದೆ, ಯೇಸುವು ತನ್ನನ್ನು ಶಿಲುಬೆಗೇರಿಸಿದರವನ್ನು ಕ್ಷಮಿಸಿದರು. ಅವರ ಹಿಂಬಾಲಕರಾದ ಅನೇಕ ಸಂತರು ತಮ್ಮನ್ನು ಹಿಂಸಿಸಿದವರನ್ನು ಕ್ಷಮಿಸಿದ್ದಾರೆ. ನಮ್ಮೆಗೆಲ್ಲರಿಗೆ ಉದಾಹರಣೆಗಳಾಗಿದ್ದಾರೆ. ಯೇಸುವಿನಂತೆ ಸಂತರಂತೆ ನಮ್ಮ ಶತ್ರುಗಳನ್ನು ಪ್ರೀತಿಸಿ ಅವರಿಗಾಗಿ ಪ್ರಾರ್ಥಿಸೋಣ. ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗೋಣ, ವರಗಳನ್ನು ಪಡೆಯೋಣ.
No comments:
Post a Comment