Saturday, 12 October 2019

ಸಾಧಾರಣ ಕಾಲದ ಇಪ್ಪತ್ತೊಂಬತನೇ ಭಾನುವಾರ

ಸಾಧಾರಣ ಕಾಲದ ಇಪ್ಪತ್ತೊಂಬತನೇ ಭಾನುವಾರ



2೦/ಹಸಿರು/ಭಾನು

1ನೇ ವಾಚನ - ವಿಮೋ: 17:8-13
ಕೀರ್ತನೆ - 121: 1-8
2ನೇ ವಾಚನ - 2 ತಿಮೊ 3: 14-4:2
ಶುಭಸಂದೇಶ - ಲೂಕ 18: 1-8

1ನೇ ವಾಚನ - ವಿಮೋ: 17:8-13
ಅಮಾಲೇಕ್ಯರು ರೆಫೀದೀಮಿನಲ್ಲಿ ಇಸ್ರಯೇಲರ ಮೇಲೆ ಯುದ್ಧ ಮಾಡುವುದಕ್ಕೆ ಬಂದರು. ಮೋಶೆ ಯೆಹೋಶುವನಿಗೆ, “ನೀನು ಯೋಧರನ್ನು ಆರಿಸಿಕೊಂಡು ನಾಳೆ ನಮ್ಮ ಪರವಾಗಿ ಹೊರಟು ಅಮಾಲೇಕ್ಯರೊಡನೆ ಯುದ್ಧಮಾಡು. ನಾನು ದೇವರ ದಂಡವನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ತುದಿಯಲ್ಲಿ ನಿಂತುಕೊಳ್ಳುವೆನು,” ಎಂದು ಹೇಳಿದನು. ಮೋಶೆಯ ಅಪ್ಪಣೆಯ ಮೇರೆಗೆ ಯೆಹೋಶುವನು ಅಮಾಲೇಕ್ಯರ ಸಂಗಡ ಯುದ್ಧಮಾಡಲು ಹೊರಟನು. ಮೋಶೆ, ಆರೋನ ಹಾಗೂ ಹೂರ ಈ ಮೂವರು ಗುಡ್ಡದ ತುದಿಗೆ ಏರಿದರು. ಮೋಶೆ ತನ್ನ ಕೈಗಳನ್ನು ಮೇಲಕ್ಕೆ ಎತ್ತಿರುವಾಗಲೆಲ್ಲಾ ಇಸ್ರಯೇಲರು ಜಯಶೀಲರಾಗುತ್ತಿದ್ದರು, ಇಳಿಸುವಾಗಲೆಲ್ಲಾ ಅಮಾಲೇಕ್ಯರು ಜಯಶೀಲರಾಗುತ್ತಿದ್ದರು. ಹೀಗಿರಲು ಮೋಶೆಯ ಕೈಗಳು ಆಯಾಸಗೊಳ್ಳುತ್ತಿದ್ದುದರಿಂದ ಆರೋನ ಮತ್ತು ಹೂರನು ಒಂದು ಕಲ್ಲನ್ನು ತಂದಿಟ್ಟು, ಅದರ ಮೇಲೆ ಮೋಶೆಯನ್ನು ಕುಳ್ಳಿರಿಸಿದರು. ಅಲ್ಲದೆ ಬಲಗಡೆ ಒಬ್ಬನು ಎಡಗಡೆ ಒಬ್ಬನು ನಿಂತು ಅವನ ಕೈಗಳಿಗೆ ಆಧಾರಕೊಟ್ಟರು. ಈ ರೀತಿಯಾಗಿ ಅವನ ಕೈಗಳು ಹೊತ್ತು ಮುಳುಗುವ ತನಕ ಇಳಿಯದೆ ನಿಂತೇ ಇರುವಂತೆ ಮಾಡಿದರು. ಹೀಗೆ ಯೆಹೋಶುವನು ಅಮಾಲೇಕ್ಯರ ಯೋಧರನ್ನು ಕತ್ತಿಗೆ ತುತ್ತಾಗಿಸಿ ಅವರನ್ನು ಸೋಲಿಸಿದನು.

ಕೀರ್ತನೆ - 121: 1-8
1 : ಕಣ್ಣೆತ್ತಿ ನಾ ನೋಡುವೆ ಪರ್ವತದತ್ತ / ಕೇಳುವೆ: “ನನಗೆ ಒತ್ತಾಸೆ ಎತ್ತಣಿಂದ?”
2 : ನನಗೆ ಒತ್ತಾಸೆ ಪ್ರಭುವಿನಿಂದ / ಭೂಮ್ಯಾಕಾಶ ಸೃಜಿಸಿದವನಿಂದ
3 : ನಿನ್ನ ಕಾಲೆಡವದಂತೆ ನೋಡುವನಾತ / ತೂಕಡಿಸಲಾರನು ನಿನ್ನ ಕಾಯುವಾತ
4 : ಇಗೋ, ಇಸ್ರಯೇಲನು ಕಾಯುವಾತನು / ನಿದ್ರಿಸಲಾರನು, ತೂಕಡಿಸಲಾರನು
5 : ನಿನ್ನನು ಕಾಯುತಿಹನು ಪ್ರಭುವೇ / ಬಲಗಡೆ ನೆರಳಂತಿಹನು ವಿಭುವೇ
6 : ನಿನ್ನ ಬಾಧಿಸನು ಸೂರ್ಯನು ಹಗಲೊಳು / ನಿನ್ನ ಪೀಡಿಸನು ಚಂದ್ರನು ಇರುಳೊಳು
7 : ಪ್ರಭು ಕಾಯುವನು ನಿನ್ನ ಪ್ರಾಣವನು / ಸಕಲ ಕೇಡಿನಿಂದ ಕಾಪಾಡುವನು
8 : ಪ್ರಭು ಕಾಯುವನು ನಿನ್ನ ಆಗುಹೋಗುಗಳನು / ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು //

2ನೇ ವಾಚನ - 2 ತಿಮೊ 3: 14-4:2
ನೀನಾದರೋ ನಿನಗೆ ಬೋಧಿಸಲಾಗಿರುವ ಹಾಗೂ ನೀನು ದೃಢವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು. ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರಗ್ರಂಥವನ್ನು ಪರಿಚಯಮಾಡಿಕೊಂಡಿರುವೆ. ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಆ ಪವಿತ್ರಗ್ರಂಥದಿಂದಲೇ. ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ. ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು. ನನ್ನ ಪ್ರೀತಿಯ ಪುತ್ರ ತಿಮೊಥೇಯನಿಗೆ ಪೌಲನು ಬರೆಯುವ ಪತ್ರ. ಕ್ರಿಸ್ತಯೇಸುವಿನಲ್ಲಿರುವವರಿಗೆ ಲಭಿಸುವ ಅಮರ ಜೀವದ ವಾಗ್ದಾನವನ್ನು ಸಾರಲು ದೈವಚಿತ್ತಾನುಸಾರ ಪ್ರೇಷಿತನಾದ ನಾನು ತಿಳಿಸುವುದೇನೆಂದರೆ: ಪಿತನಾಗಿರುವ ದೇವರೂ ಒಡೆಯರಾದ ಕ್ರಿಸ್ತಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ!

ಶುಭಸಂದೇಶ - ಲೂಕ 18: 1-8
ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: “ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿ ಅನ್ಯಾಯ ಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ,’ ಎಂದು ಕೇಳಿಕೊಳ್ಳುತ್ತಿದ್ದಳು. ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, ‘ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,’ ಎಂದುಕೊಂಡ.” ಅನಂತರ ಪ್ರಭು ಯೇಸು, “ಈ ನೀತಿಕೆಟ್ಟ ನ್ಯಾಯಾಧೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ? ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ? ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?” ಎಂದರು.
----
ಚಿಂತನೆ
ಯೇಸು ಪ್ರಾರ್ಥಿಸಿದರು. ನಿರ್ಜನ ಪ್ರದೇಶದಲ್ಲಿ ಬೆಟ್ಟಗಳಲ್ಲಿ ಏಕಾಂತದಲ್ಲಿ ತಮ್ಮ ತಂದೆಯೊಂದಿಗೆ ಸಂಭಾಷಿಸುತ್ತಿದ್ದರು. ಅದ್ಬುತಗಳನ್ನು ಮಾಡುವ ಮುನ್ನ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಪ್ರಾರ್ಥಿಸಿದರು. ತಮ್ಮ ಪಾಲನ ಕಾರ್ಯಕ್ಕೆ ಬೇಕಾದ ಶಕ್ತಿಯನ್ನು ಪ್ರಾರ್ಥನೆಯಿಂದ ಪಡೆಯುತ್ತಿದ್ದರು. ಯೇಸು ತಾನು ಮಾತ್ರ ಪ್ರಾರ್ಥಿಸಲಿಲ್ಲ, ತಮ್ಮ ಶಿಷ್ಯರಿಗೂ ಪ್ರಾರ್ಥಿಸುವುದನ್ನು ಪ್ರಾರ್ಥನೆಯ ಪರಿ ಮತ್ತು ಮಹತ್ವವನ್ನು ಬೋಧಿಸಿದರು. ಕೆಲವೊಮ್ಮೆ ಸಾಮತಿಗಳ ರೂಪದಲ್ಲಿ, ಕೆಲವೊಮ್ಮೆ ನೇರ ಮಾತುಗಳಲ್ಲಿ ಹಲವೊಮ್ಮೆ ಮಾತುಗಳೇ ಇಲ್ಲದೆ ಕ್ರಿಯೆಯಲ್ಲಿ ಯೇಸು ಪ್ರಾರ್ಥನೆಯ ಬಗ್ಗೆ ಕಲಿಸಿದರು. 

ಪ್ರಾರ್ಥನೆ ದೈವತ್ವದೊಂದಿಗಿನ ಒಡನಾಟ, ಆ ಒಡನಾಟ ನಿರಂತರವಾಗಿರಬೇಕೆಂದು ಈ ಸಾಮತಿಯ ಮೂಲಕ ತಿಳಿಸುತ್ತಿದ್ದಾರೆ. ಈ ಸಾಮತಿಯಲ್ಲಿ ಬರುವುದು ಎರಡೇ ಪಾತ್ರ, ಒಂದು ವಿಧವೆ ಮತ್ತೊಂದು ನ್ಯಾಯಧೀಶನದು. ಈ ವಿಧವೆಯನ್ನು ನಮಗೆ ಹೋಲಿಸಿಕೊಂಡರೆ, ನ್ಯಾಯಧೀಶನನ್ನು ದೇವರಿಗೆ ಹೋಲಿಸಬೇಕು. ಈ ನ್ಯಾಯಧೀಶ ಒಬ್ಬ ದುಷ್ಟ. ಈ ನ್ಯಾಯಧೀಶನ ದುಷ್ಟತನಕ್ಕೆ ತದ್ವಿರುದ್ಧವಾಗಿ ದೇವರ ಒಳ್ಳೆಯತನವನ್ನು ತೋರಿಸಲಾಗಿದೆ. ಸಾಮಾನ್ಯವಾಗಿ ಈ ನ್ಯಾಯಧೀಶರು ಕಡು ಭ್ರಷ್ಟರಾಗಿದ್ದರು. ಹಣ ಅಥವಾ ಶಿಪರಸು ಇಲ್ಲದೇ ನ್ಯಾಯ ಪಡೆಯುವುದು ತುಂಬಾ ಕಷ್ಟವಾಗಿತ್ತು. ಈ ವಿಧವೆ ಬಡವರ ಮತ್ತು ಶೋಷಿತರ ಪ್ರತಿನಿಧಿ. ಆಕೆಯಲ್ಲಿ ಹಣ ಅಥವಾ ಶಿಪಾರಸ್ಸು ಇರಲಿಲ್ಲ. ಆದರೆ ಸಹನೆ ಮತ್ತು ಹಠ ಆಕೆಯ ಅಸ್ತ್ರವಾಗಿತ್ತು. ಕೊನೆಗೆ ಅವಳಿಗೆ ನ್ಯಾಯ ಸಿಕ್ಕಿದ್ದು ಈ ಅಸ್ತ್ರದಿಂದಲೇ. ದೇವರು ಕರುಣಾಮಯಿ ಮತ್ತು ಪ್ರೀತಿಸ್ವರೂಪಿ ನಾವು ಹಗಲಿರುಳು ಮೊರೆಯಿಡುವಾಗ ಅದನ್ನು ಹೇಗೆ ನಿರ್ಲಕ್ಷಿಸಬಲ್ಲರು?

No comments:

Post a Comment