Sunday, 17 November 2019

ಸಾಧಾರಣ ಕಾಲದ ಮೂವತ್ನಾಲ್ಕನೇ ವಾರ ಶುಕ್ರವಾರ

29/ಹಸಿರು/ಶುಕ್ರ
1ನೇ ವಾಚನ - ದಾನಿ 7: 2-14 
ಕೀರ್ತನೆ - ಅಜರ್ಯ 53-54,55-56,57-59
ಶುಭಸಂದೇಶ - ಲೂಕ  21:  29-33


1ನೇ ವಾಚನ - ದಾನಿ 7: 2-14
ಬಾಬಿಲೋನಿನ ಅರಸನಾದ ಬೇಲ್ಯಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದಾನಿಯೇಲನು ಹಾಸಿಗೆಯ ಮೇಲೆ ಮಲಗಿದ್ದಾಗ ಒಂದು ಕನಸು ಕಂಡನು. ಅವನ ಮನಸ್ಸಿಗೆ ಒಂದು ದೃಶ್ಯಕಾಣಿಸಿತು. ಕೂಡಲೆ ಅವನು ಆ ಕನಸನ್ನೂ ಅದರ ಮುಖ್ಯಾಂಶಗಳನ್ನೂ ಬರೆದಿಟ್ಟನು. ಅದರ ಸಾರಾಂಶ ಇದು: ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕು ದಿಕ್ಕುಗಳಿಂದಲೂ ಗಾಳಿ ಮಹಾಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿತ್ತು. ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಆ ಸಾಗರದಿಂದ ಹೊರಗೆ ಬಂದವು. ಮೊದಲು ಕಾಣಿಸಿದ ಮೃಗ ಸಿಂಹದ ಹಾಗಿತ್ತು. ಆದರೆ ಅದಕ್ಕೆ ಹದ್ದಿನಂಥ ರೆಕ್ಕೆಗಳಿದ್ದವು. ನಾನು ನೋಡುತ್ತಿರುವಾಗಲೆ ಆ ರೆಕ್ಕೆಗಳು ಕೀಳಲ್ಪಟ್ಟವು. ಆ ಮೃಗವನ್ನು ನೆಲದಿಂದ ಮೇಲಕ್ಕೆತ್ತಿ ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲಾಯಿತು. ಅದಕ್ಕೆ ಮನುಷ್ಯನ ಹೃದಯಕೊಡಲಾಯಿತು. ಬಳಿಕ ಎರಡನೆಯ ಇನ್ನೊಂದು ಮೃಗವನ್ನು ಕಂಡೆ. ಅದು ಕರಡಿಯ ಹಾಗಿತ್ತು. ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ತನ್ನ ಬಾಯಲ್ಲಿನ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು. “ನೀನೆದ್ದು ಬೇಕಾದಷ್ಟು ಮಾಂಸವನ್ನು ತಿನ್ನು,” ಎಂದು ಅದಕ್ಕೆ ಹೇಳಲಾಯಿತು. ಅನಂತರ ನಾನು ನೋಡುತ್ತಿರುವಾಗಲೆ ಚಿರತೆಯ ಹಾಗಿದ್ದ ಮತ್ತೊಂದು ಮೃಗ ಕಾಣಿಸಿತು. ಅದರ ಪಕ್ಕಗಳಲ್ಲಿ ಪಕ್ಷಿಯ ರೆಕ್ಕೆಗಳಂತಿರುವ ನಾಲ್ಕು ರೆಕ್ಕೆಗಳಿದ್ದವು. ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು. ಅದಕ್ಕೆ ದೊರೆತನ ಕೊಡಲಾಯಿತು. ಇದಾದ ಬಳಿಕ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ನಾಲ್ಕನೇ ಮೃಗ ಭಯಂಕರವಾಗಿತ್ತು. ಹದರಿಸುವಂಥದಾಗಿತ್ತು. ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿತ್ತು. ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಮುಂಚಿನ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು. ನಾನು ಆ ಕೊಂಬುಗಳನ್ನು ಗಮನಿಸುತ್ತಿರುವಾಗಲೆ ಅವುಗಳ ನಡುವೆ ಇಗೋ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು. ಅದಕ್ಕೆ ಎಡೆಮಾಡಿಕೊಡಲು ಮುಂಚಿನ ಕೊಂಬುಗಳಲ್ಲಿ ಮೂರನ್ನು ಬೇರುಸಹಿತ ಕೀಳಲಾಯಿತು. ಆಶ್ಚರ್ಯವೆಂದರೆ, ಆ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳಿದ್ದವು. ಬಡಾಯಿ ಕೊಚ್ಚಿಕೊಳ್ಳುವ ಬಾಯೂ ಇತ್ತು. ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು. ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು. ನಾನು ನೋಡುತ್ತಾ ಇದ್ದೆ: ಆ ಕಿರುಕೊಂಬು ಬಡಾಯಿಕೊಚ್ಚಿಕೊಂಡ ನಿಮಿತ್ತ ಆ ಕೊಂಬಿನ ಮೃಗವನ್ನು ಕೊಂದು ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು. ಮಿಕ್ಕ ಮೃಗಗಳ ದೊರೆತನವನ್ನು ತೆಗೆದುಬಿಟ್ಟರು. ಆದರೆ ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ, ಅವುಗಳ ಜೀವಾವಧಿಯನ್ನು ಉಳಿಸಿದರು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ - ಅಜರ್ಯ 53-54,55-56,57-59
53: ಬೆಟ್ಟ-ಗುಡ್ಡಗಳೇ, ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
54: ಇಳೆಯಲ್ಲಿ ಬೆಳೆಯುವ ಎಲ್ಲಾ ಗಿಡ-ಮರಗಳೇ, ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
55: ಕಡಲು ಹೊಳೆಗಳೇ, ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
56: ಬುಗ್ಗೆ ಚಿಲುಮೆಗಳೇ, ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
57: ಜಲಚರಗಳೇ, ತಿಮಿಂಗಲಗಳೇ, ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
58: ಆಕಾಶದ ಪಕ್ಷಿಗಳೇ, ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
59: ಕಾಡು ಮೃಗಗಳೇ, ದನಕರುಗಳೇ, ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.

ಶುಭಸಂದೇಶ - ಲೂಕ  21:  29-33
ಬಳಿಕ ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು; “ಅಂಜೂರದ ಹಾಗೂ ಇತರ ಮರಗಳನ್ನು ಗಮನಿಸಿರಿ. ಅವುಗಳ ಎಲೆಗಳು ಚಿಗುರುತ್ತಲೇ ವಸಂತಕಾಲ ಆರಂಭಿಸಿತೆಂದು ನೀವೇ ಅರಿತುಕೊಳ್ಳುತ್ತೀರಿ. ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ದೇವರ ಸಾಮ್ರಾಜ್ಯವು ಸಮೀಪಿಸಿತೆಂದು ತಿಳಿದುಕೊಳ್ಳಿರಿ. ಇವೆಲ್ಲ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿ ಹೋಗದೆಂದು ಒತ್ತಿಹೇಳುತ್ತೇನೆ. ಭೂಮ್ಯಾಕಾಶಗಳು ಗತಿಸಿಹೋಗುತ್ತವೆ; ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ.
ಚಿಂತನೆ
ಅಂಜೂರದ ಮರದಿಂದ ಮುಂಜಾಗರೂಕತೆಯ ಹಾಗೂ ಯೇಸುವಿನ ಆಗಮನದ ಬಗ್ಗೆ ತಿಳಿಯಲು ಶಿಷ್ಯರಿಗೆ ಈ ಸಾಮತಿಯ ಮೂಲಕ ಕರೆ ನೀಡಲಾಗಿದೆ. ಪ್ಯಾಲೆಸ್ತಿನ್ ದೇಶದೆಲ್ಲೆಡೆ ಕಾಣಸಿಗುವ ಅಂಜೂರದ ಮರದ ಬೆಳವಣಿಗೆಯನ್ನು ಅದು ಫಲವನ್ನು ನೀಡುವ ಮುನ್ನ ಸೂಚಿಸುವ ಸಂಕೇತಗಳ ಆಧಾರದ ಮೇರೆಗೆ ದೇವರ ರಾಜ್ಯದ ಆಗಮನದ ಬಗ್ಗೆ ತಿಳಿಸಲಾಗಿದೆ. ಪ್ಯಾಲೆಸ್ತಿನ್ ದೇಶದಲ್ಲಿ ಚಳಿಗಾಲವು ಬಂದಾಗ ಎಲ್ಲಾ ಮರಗಳಲ್ಲಿ ಎಲೆಗಳಿರುತ್ತವೆ. ಆದರೆ ಅಂಜೂರದ ಮರದಲ್ಲಿ ಎಲೆಗಳೆಲ್ಲ ಉದುರಿ ಹೋಗುತ್ತವೆ. ಎಲೆ ಉದುರಿಹೋದಾಗ ಅಂಜೂರದ ಮರವು ನಿರ್ಜೀವ ಅಥವಾ ಸತ್ತು ಹೋದ ರೀತಿಯಲ್ಲಿ ಕಾಣುತ್ತದೆ. ಅಂಜೂರದ ಮರವು ಚಿಗುರೊಡೆಯಲು ಪ್ರಾರಂಭಿಸಿದ ತಕ್ಷಣ ವಸಂತಕಾಲ ಸಮೀಪಿಸಿದೆ ಎಂದು ಎಲ್ಲರೂ ಅರಿಯುತ್ತಾರೆ. ಯೇಸುವಲ್ಲಿರಿಸಿದ ವಿಶ್ವಾಸವು ಅಂಜೂರದ ಮರದಂತೆ ಇರಬೇಕು. ಭರವಸೆಯಿಲ್ಲದಿರುವ ಜನರ ಮಧ್ಯೆ ಭರವಸೆಯಿಂದ ಜೀವಿಸಬೇಕು. ಯೇಸುವಿನ ವಾಕ್ಯಗಳು ದೇವರ ವಾಕ್ಯದಂತೆ ಎಂದಿಗೂ ಎಂದೆಂದಿಗೂ ಶಾಶ್ವತ, ಜೀವ ಮತ್ತು ಭರವಸೆಯನ್ನೀಯುವ ವಾಕ್ಯಗಳಾಗಿವೆ.

No comments:

Post a Comment