Saturday, 28 December 2019

7 ಜನವರಿ 2020

7 ಜನವರಿ 2020
ಮಂಗಳವಾರ/ಬಿಳಿ/ದೈವದರ್ಶನದ ನಂತರದ ಮಂಗಳವಾರ
ಪೆನ್ಯಫೋರ್ಟಿನ ಸಂತ ರೈಮಂಡ್ (ಐಚ್ಛಿಕ ಸ್ಮರಣೆ)
1ನೇ ವಾಚನ - 1 ಯೊವಾನ್ನ 4: 7-10
ಕೀರ್ತನೆ  -  72:  1- 4,  7-8
ಶುಭಸಂದೇಶ  -  ಮಾರ್ಕ  6:  34 - 44 

ವಾಚನಗಳು
ಪ್ರಥಮ ವಾಚನ

ಸಂತ ಯೊವಾನ್ನನು ಬರೆದ ಮೊದಲ ಪತ್ರದಿಂದ ವಾಚನ

7ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು. 8ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿಸ್ವರೂಪಿ. 9ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು. 10ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜ ಗುಣ ತೋರಿಬರುತ್ತದೆ.

ಕೀರ್ತನೆ 
        
ಶ್ಲೋಕ: ರಾಷ್ಟ್ರಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ

1 : ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ|
     ಕಲಿಸು ನಿನ್ನ ನೀತಿಯನು ರಾಜಕುವರನಿಗೆ||

2 : ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ|
     ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ||

3 : ಬೆಟ್ಟಗುಡ್ಡಗಳಿಂದ ಬರಲಿ ಸಮೃದ್ಧಿ|
     ನಿನ್ನ ಪ್ರಜೆಗೆ ಫಲಿಸಲಿ ನ್ಯಾಯನೀತಿ||

4 : ದೀನದಲಿತರನಾತ ಉದ್ಧರಿಸಲಿ|
     ಬಡಬಗ್ಗರಿಗೆ ನ್ಯಾಯ ದೊರಕಿಸಲಿ|
     ಪ್ರಜಾಹಿಂಸಕರನು ಸದೆಬಡಿಯಲಿ||

7 : ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ|
     ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ||

8 : ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ|
     ಮಹಾ ನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ||


ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

34ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು. 35ಅಷ್ಟರಲ್ಲಿ ಸಂಜೆಯಾಗುತ್ತಾ ಬಂದಿತು. ಶಿಷ್ಯರು ಯೇಸುವಿನ ಬಳಿಗೆ ಬಂದು, 36ಈಗಾಗಲೇ ಹೊತ್ತು ವಿರಿಹೋಯಿತು; ಇದು ನಿರ್ಜನ ಪ್ರದೇಶ; ಇನ್ನು ಜನರನ್ನು ಕಳುಹಿಸಿಬಿಡಿ. ಅವರು ಸವಿಪದ ಊರುಕೇರಿಗಳಿಗೆ ಹೋಗಿ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ, ಎಂದರು. 

37ಆಗ ಯೇಸು, ನೀವೇ ಅವರಿಗೆ ಊಟಕ್ಕೇನಾದರೂ ಕೊಡಿ, ಎಂದರು ಅದಕ್ಕೆ ಶಿಷ್ಯರು ನಾವು ಹೋಗಿ ಇನ್ನೂರು ದೆನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುತಂದು ಅವರಿಗೆ ಊಟಕ್ಕೆ ಬಡಿಸೋಣವೇನು? ಎಂದರು. 38ಯೇಸು, ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ, ಹೋಗಿ ನೋಡಿಕೊಂಡು ಬನ್ನಿ, ಎಂದರು. ಅವರು ವಿಚಾರಿಸಿಕೊಂಡು ಬಂದು, ನಮ್ಮಲ್ಲಿ ಐದುರೊಟ್ಟಿ ಮತ್ತು ಎರಡು ವಿನುಗಳಿವೆ, ಎಂದು ತಿಳಿಸಿದರು.

39ಎಲ್ಲರು ಪಂಕ್ತಿಪಂಕ್ತಿಯಾಗಿ ಹಸಿರು ಹುಲ್ಲಿನ ಮೇಲೆ ಊಟಕ್ಕೆ ಕುಳಿತುಕೊಳ್ಳಬೇಕೆಂದು ಯೇಸು ಅಪ್ಪಣೆಮಾಡಿದರು. 40ಅವರು ಐವತ್ತರಂತೆಯೂ ನೂರರಂತೆಯೂ ಪಂಕ್ತಿಯಲ್ಲಿ ಕುಳಿತರು. 41ಯೇಸು ಆ ಐದು ರೊಟ್ಟಿಗಳನ್ನೂ ಎರಡು ವಿನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಆ ರೊಟ್ಟಿಗಳನ್ನು ಮುರಿದು ಜನರಿಗೆ ಬಡಿಸುವಂತೆ ಅವನ್ನು ಶಿಷ್ಯರಿಗೆ ಕೊಟ್ಟರು. ಅಂತೆಯೇ ಎರಡು ವಿನುಗಳನ್ನು ಜನರೆಲ್ಲರಿಗೆ ಹಂಚುವಂತೆ ಮಾಡಿದರು. 42ಎಲ್ಲರೂ ಹೊಟ್ಟೆ ತುಂಬಾ ತಿಂದು ತೃಪ್ತರಾದರು. 43ಇನ್ನೂ ಉಳಿದಿದ್ದ ರೊಟ್ಟಿ ಮತ್ತು ವಿನಿನ ತುಂಡುಗಳನ್ನು ಒಟ್ಟುಗೂಡಿಸಿದಾಗ, ಅವು ಹನ್ನೆರಡು ಬುಟ್ಟಿ ತುಂಬ ಆದವು. 44ಊಟ ಮಾಡಿದವರಲ್ಲಿ ಗಂಡಸರ ಸಂಖ್ಯೆಯೇ ಐದು ಸಾವಿರ. 

ಚಿಂತನೆ
ಆಧ್ಯಾತ್ಮಿಕ ಹಸಿವು

ಆಹಾರ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಬಡವರ, ನಿರ್ಗತಿಕರ ಕಷ್ಟ, ಹಸಿವನ್ನು ಕಂಡಾಗ ಕ್ರಿಸ್ತನ ಮನ ಕರಗುತಿತ್ತು. ತಮ್ಮ ಬೋಧನೆಯ ಮೂಲಕ ಆಧ್ಯಾತ್ಮಿಕ ಹಸಿವನ್ನು ನೀಗಿಸುವುದರ ಜೊತೆಗೆ  ಶಾರೀರಿಕ ಹಸಿವನ್ನು ನೀಗಿಸುತ್ತಾರೆ. ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಐದು ಸಾವಿರ ಜನರಿಗೆ ಭೋಜನ ಹಂಚುವುದನ್ನು ನಾವು ಓದುವಾಗ ಇಸ್ರಯೇಲ್ ಜನರಿಗೆ ಮರುಭೂಮಿಯಲ್ಲಿ ಸರ್ವೇಶ್ವರ ಸ್ವಾಮಿ ಮನ್ನಾ ನೀಡಿದ್ದನ್ನು ನೆನಪಿಸುತ್ತದೆ (ವಿಮೋ 16; ಸಂಖ್ಯಾ 11) ಮತ್ತು ಯೇಸುಸ್ವಾಮಿ ಧರೆಗಿಳಿದ ಜೀವಂತ ಮನ್ನಾ ಎಂಬುದನ್ನು ಮುಂತಿಳಿಸುತ್ತದೆ. ಕ್ರಿಸ್ತನಿಗಿದ್ದ ಅನುಕಂಪದ ಮನಸ್ಸು ನಮ್ಮದಾಗಲಿ. ಕ್ರಿಸ್ತ ತಮ್ಮ ಬೋಧನೆ ಮತ್ತು ವ್ಯಕ್ತಿತ್ವದಿಂದ ಜನ ಸಮೂಹವನ್ನು ಆಕರ್ಷಿಸಿದಂತೆ ನಾವು ಕೂಡ ನಮ್ಮ ಬದುಕಿನಿಂದ ಸದ್ಗುಣಗಳಿಂದ ಕ್ರಿಸ್ತನನ್ನು ಪ್ರತಿಬಿಂಬಿಸುತ್ತಾ ಜನರನ್ನು ಕ್ರಿಸ್ತನೆಡೆಗೆ ಸೆಳೆಯ ಬೇಕಿದೆ.
----------------

ಇಂದಿನ ಸಂತರು

ಪೆನ್ಯಫೋರ್ಟಿನ ಸಂತ ರೈಮಂಡ್ (ಸು. 1175-1275)

ಸಂತ ರೈಮಂಡ್‌ರವರು ಸ್ಪಾನಿಷ್ ಪಾದ್ರಿ.  20ನೇ ಶತಮಾನದವರೆಗೂ ಚಾಲ್ತಿಯಲ್ಲಿದ್ದ ಧರ್ಮಸಭೆಯ ನೀತಿನಿಯಮಗಳ ಸಂಗ್ರಹವನ್ನು ರಚಿಸಿದ ಕೀರ್ತಿ ಇವರದು. ಈ ಸಂತರು, ನ್ಯಾಯವಾದಿಗಳ, ಅದರಲ್ಲೂ ಕ್ಯಾಥೊಲಿಕ್ ಚರ್ಚ್ ವಿಷಯಗಳ ಕಾನೂನನ್ನು ಅಧ್ಯಯನ ಮಾಡಿದ ನ್ಯಾಯವಾದಿಗಳ ಪೋಷಕರು. 

ಸ್ಪೇನಿನ ಕ್ಯಾಟಲೋನಿಯಾದ ಬಾರ್ಸಿಲೋನ ಬಳಿಯ ಒಂದು ಚಿಕ್ಕ ಊರಿನಲ್ಲಿ ಇವರ ಜನನವಾಗುತ್ತದೆ. ವಿದ್ಯಾಭ್ಯಾಸ, ಬಾರ್ಸಿಲೋನದ, ಬೋಲೋನದ, ವಿಶ್ವವಿದ್ಯಾಲಯಗಳಲ್ಲಿ. ಸಿವಿಲ್ ಹಾಗೂ ಧರ್ಮಸಭೆಯ ಕಾನೂನುಗಳಲ್ಲಿ ಡಾಕ್ಟರೇಟ್ ಪದವಿ ಪಡೆದ ನಂತರ, 15 ವರ್ಷಗಳ ಕಾನೂನು ಅಧ್ಯಾಯನ. ಮುಂದೆ, ಪ್ರಾಧ್ಯಾಪಕರಾದ ಅವರಿಗೆ, ಹೊಸದಾಗಿ ರಚಿತವಾದ ಡಾಮಿನಿಕನ್ ವಿಭಾಗದ ಪರಿಚಯವಾಗುತ್ತದೆ. ಅಲ್ಲಿನ ಪ್ರಬೋಧನೆಗಳಿಂದ ಆಕರ್ಷಿತರಾಗುವ ಅವರು ತಮ್ಮ 47ನೇ ವಯಸ್ಸಿನಲ್ಲಿ ಯಾಜಕರಾಗುತ್ತಾರೆ. 

ಸಂತ ರೈಮಂಡ್ ನವರು, “ಮರ್ಸಿಡೇರಿಯನ್ ಪಾದ್ರಿಗಳು” ಎನ್ನುವ ವಿಭಾಗ(ಆರ್ಡರ್)ವನ್ನು  ಸ್ಥಾಪನೆಮಾಡಿದವರು. ಈ ಕಾರ್ಯಕ್ಕೆ ಆರೆಗಾನ್ 1ನೇ ಜೇಮ್ಸ್ ನವರ ಒಪ್ಪಿಗೆಯೂ ಸಿಗುತ್ತದೆ. ಇದರಿಂದಾಗಿ ಯಾಜಕರುಗಳು, ಬೇರೆಬೇರೆ ಭಾಷೆಗಳನ್ನು ಕಲಿಯಲು ಸಹಾಯಕವಾಗುತ್ತದೆಯಲ್ಲದೆ ಅವರು ಮುಸ್ಲಿಂ ರಾಷ್ಟ್ರಗಳಲ್ಲೂ ದೇವರ ಸೇವೆ ಮಾಡಲು ಅನುಕೂಲವಾಗುತ್ತದೆ. 

ಪಾಪನಿವೇದನೆಯನ್ನು ಕೇಳಿಸಿಕೊಳ್ಳುವವರಿಗೆ ಸಹಾಯವಾಗಲು ಒಂದು ಹೊತ್ತಗೆ ಬರೆದು, ಅದರಲ್ಲಿ, ಯಾವಯಾವ ಪಾಪಕ್ಕೆ ಯಾವಯಾವ ಪ್ರಾಯಶ್ಚಿತ್ತ ಹೇಳಬೇಕು ಎಂದೂ ನಮೂದಿಸುತ್ತಾರೆ. ಇದು, ಯಾಜಕರುಗಳಲ್ಲಿ ತುಂಬಾ ಪ್ರಸಿದ್ದಿಯನ್ನು ಪಡೆಯುತ್ತದೆ.

ಕ್ರಮೇಣ, 9ನೇ ಪೋಪ್ ಗ್ರಿಗೊರಿಯವರು, ರೈಮಂಡ್‌ರವರನ್ನು ತಮ್ಮ ವಿಶೇಷ ಸಹಾಯಕರನ್ನಾಗಿಯೂ, ಮಹಾ ಸುಧಾರಣಾಗೃಹದ ಮುಖ್ಯಾಧಿಕಾರಿಯನ್ನಾಗಿಯೂ ನೇಮಿಸುತ್ತಾರೆ. ಕಾನೂನುತಜ್ಞರೂ ಆಗಿದ್ದ ಇವರ ಮೂಲಕ ಪೋಪ್‌ರವರು, ಕ್ಯಾಥೊಲಿಕ್ ಸಭೆಯ ನೀತಿನಿಯಮ ಕಾನೂನು ಕಾಯಿದೆಗಳನ್ನು ಒಂದು ಚೌಕಟ್ಟಿಗೆ ತರುವಂತಹ ಕಾರ್ಯ ಕೈಗೊಳ್ಳುತ್ತಾರೆ. 

ಆಗ ಅರಸರಾಗಿದ್ದ 1ನೇ ಜೇಮ್ಸ್ರವರು ಧರ್ಮಸಭೆಗೆ ಬಹಳ ನಿಷ್ಠರಾಗಿದ್ದರೂ, ಕಾಮಾಭಿಲಾಷೆಗೆ ದಾಸರಾಗಿದ್ದರು. ಒಮ್ಮೆ, ಒಂದು ದ್ವೀಪದಲ್ಲಿ ನಡೆಯುತ್ತಿದ್ದ ಧಾರ್ಮಿಕ ಪರಿವರ್ತನಾ ಕೂಟಕ್ಕೆ ಅವರು, ತಮ್ಮ ಪ್ರೇಯಸಿಯನ್ನು ಕರೆದುಕೊಂಡು ಬಂದಿದ್ದನ್ನು ರೈಮಂಡರು ಕಂಡು ಅದಕ್ಕೆ ಕಟುವಾದ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ಅರಸರು ಸ್ಪಂದಿಸದೆ ಇದ್ದಾಗ, ಅವರ ಸಹವಾಸವನ್ನೇ ತೊರೆಯುತ್ತಾರೆ. ಅರಸರು ಕ್ರುದ್ಧರಾಗಿ, ರೈಮಂಡ್‌ರವರನ್ನು ಅದೇ ದ್ವೀಪದಲ್ಲಿ ನಿರ್ಬಂಧದಲ್ಲಿರಿಸುತ್ತಾರೆ.  ಪವಾಡಪುರುಷರಾದ ರೈಮಂಡ್‌ರವರು, ತಮ್ಮ ಮೇಲುಹೊದಿಕೆಯ ಒಂದು ಭಾಗವನ್ನು ನೀರಿನಲ್ಲಿ ಮುಳುಗಿಸಿ, ಇನ್ನೊಂದು ಭಾಗವನ್ನು ತಮ್ಮ ಕೈಕೋಲಿಗೆ ಕಟ್ಟಿ, ಅದರಲ್ಲೇ ಮೈಲಿಗಟ್ಟಲೆ ದಾಟಿ, ಒಂದು ಅದ್ಭುತಕಾರ್ಯವನ್ನೇ ಮೆರೆಯುತ್ತಾರೆ! ಇದನ್ನು ಕಂಡ ಅರಸರು, ತಮ್ಮ ಎಲ್ಲಾ ದುಷ್ಟತನವನ್ನೂ ತೊರೆದು, ಮುಂದೆ ಒಳ್ಳೇ ಕ್ರೈಸ್ತರೆನಿಸಿಕೊಳ್ಳುತ್ತಾರೆ. 

ಸಂತ ರೈಮಂಡ್‌ರವರ ಇಳಿವಯಸ್ಸಿನಲ್ಲಿ ಆರ್ಚ್ ಬಿಷಪ್ ಆಗಲು ಕರೆ ಬಂದರೂ ಒಪ್ಪಿಕೊಳ್ಳದೆ, ಬಾರ್ಸಿಲೋನಾದಲ್ಲೇ ಉಳಿಯುತ್ತಾರೆ.  ಪ್ರಬೋಧಕರ ನಾಯಕರಾಗಿದ್ದ ಇವರು, ಆ ಪ್ರದೇಸದ ಎಲ್ಲಾ ಪಾದ್ರಿಗಳ, ಕನ್ಯಾಸ್ತ್ರೀಯರ ನಿವಾಸಗಳಿಗೂ ಭೇಟಿ ಕೊಡುತ್ತಿದ್ದರಾದರೂ ಮುಂದೆ, ಅದನ್ನೂ ನಿಲ್ಲಿಸುತ್ತಾರೆ. 

ಅರಸರಿಗೆ ಸಲಹೆಗಾರರಾಗಿದ್ದ  ಸಂತ ರೈಮಂಡ್‌ರವರು, ಕ್ರಮಬದ್ಧ ವಿಚಾರಣೆ (ಇಂಕ್ವಿಸಿಷನ್) ಬಗೆಗಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಸೆರೆಯಲ್ಲಿದ್ದವರು, ತಮ್ಮ ಪತ್ನಿಯರನ್ನು ಭೇಟಿಯಾಗಲು ಅನುಮತಿ ನೀಡಿದ್ದರು. ಇಬ್ರಿಯ ಹಾಗೂ ಕ್ಯಾಥೊಲಿಕ್‍ಗಳ ನಡುವೆ ಚರ್ಚೆಯನ್ನು ರಾಜಸನ್ನಿಧಾನದಲ್ಲಿ ಇವರು ಏರ್ಪಡಿಸಿದ್ದೊಂದು ವಿಶೇಷವೇ ಸರಿ. 

1601ರಲ್ಲಿ 8ನೇ ಪೋಪ್‍ ಕ್ಲೆಮೆಂಟ್‍ರವರು ರೈಮಂಡ್‍ನವರು ಸಂತರೆಂದು ಘೋಷಿಸುತ್ತಾರೆ. ಧಾರ್ಮಿಕ ನ್ಯಾಯವಾದಿಗಳ ಪೋಷಕ ಸಂತರೆನಿಸಿದ. ಇವರ ಪುಣ್ಯದಿನವು ಜನವರಿ 7 ರಂದು ನಡೆಯುತ್ತದೆ.

ಚಿತ್ರಗಳು : ಗೂಗಲ್‌ ಕೃಪೆ

© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment