Wednesday, 18 December 2019

ಆಗಮನ ಕಾಲದ ನಾಲ್ಕನೆಯ ಮಂಗಳವಾರ

ಡಿಸೆಂಬರ್ 24/  2019
ಆಗಮನ ಕಾಲದ ನಾಲ್ಕನೆಯ  ಮಂಗಳವಾರ
ಮೊದಲನೇ ವಾಚನ:  2 ಸಮುವೇಲ 7:1-5, 8-11, 16
 ಕೀರ್ತನೆ: 89:2-3, 4-5, 27, 29
ಶುಭಸಂದೇಶ : ಮತ್ತಾಯ 1:67-79
----------------
ಮೊದಲನೇ ವಾಚನ:  2 ಸಮುವೇಲ 7:1-5, 8-11, 16
1 : ಸರ್ವೇಶ್ವರನ ಅನುಗ್ರಹದಿಂದ ಸುತಮುತ್ತ ಇದ್ದ ವೈರಿಗಳ ಭಯ ನಿಂತುಹೋಯಿತು. ದಾವೀದನು. ನೆಮ್ಮದಿಯಿಂದ ಅರಮನೆಯಲ್ಲಿ ವಾಸಿಸುತ್ತಿದ್ದನು.
2 : ಒಂದು ದಿನ ಅವನು ಪ್ರವಾದಿ ನಾತಾನನಿಗೆ, “ನೋಡು, ನಾನು ವಾಸಮಾಡುತ್ತಿರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ; ಆದರೆ ದೇವರ ಮಂಜೂಷ ಇರುವುದು ಬಟ್ಟೆಯ ಗುಡಾರದಲ್ಲಿ!” ಎಂದನು.
3 : ಅದಕ್ಕೆ ನಾತಾನನು ಸಮ್ಮತಿಸಿ, “ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ,” ಎಂದನು.
4 : ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:
5 : ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ?
8 : “ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ ಹೇಳು, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೀಗೆ ಹೇಳಿದೆಯೆಂದು ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ.
9 : ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು
10 : ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು.
11 : ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚಿಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮೇಲೆ ಆಗದು. ನೀನು ಶತ್ರುಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ.
16 : ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”
----------
ಕೀರ್ತನೆ: 89:2-3, 4-5, 27, 29
2 : ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ / ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ //
3 : ನೀನೆಂದೆ, “ನಾನರಿಸಿದವನೊಡನೆ ಮಾಡಿರುವೆ ಒಪ್ಪಂದ / ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ : //
4 : “ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು / ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು”//
5 : ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು / ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು //
27 : ಮಾಡುವೆನವನನು ಜೇಷ್ಠ ಪುತ್ರನನ್ನಾಗಿ / ಭೂರಾಜರುಗಳೊಳು ಅತ್ಯುನ್ನತನನ್ನಾಗಿ //
29 : ಉಳಿಸುವೆನು ಅವನ ಸಂತಾನವನು ನಿರಂತರವಾಗಿ / ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ //
----------------
ಶುಭಸಂದೇಶ : ಮತ್ತಾಯ 1:67-79
67 : ಆಗ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು :
68 : ಸ್ತುತಿಸ್ತೋತ್ರ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ ! ತಾನಾಗಿ ಬಂದು ತನ್ನ ಪ್ರಜೆಯನು ಬಿಡುಗಡೆ ಮಾಡಿದಾತನಿಗೆ !!
69 : ಉದಯಗೊಳಿಸಿರುವನಾತ ತನ್ನ ದಾಸ ದಾವೀದನ ವಂಶದೊಳು ! ನಮಗೊಬ್ಬ ಶಕ್ತಿಯುತ ಮುಕ್ತಿದಾತನನು !!
70 : ಪುರಾತನ ಕಾಲದಿಂದಲೆ, ಪೂಜ್ಯ ಪ್ರವಾದಿಗಳ ಬಾಯಿಂದಲೆ ! ಅರುಹಿಸಿರುವನು ಇಂತೆಂದು ನಮಗೆ:!!
71 : ‘ಹಗೆಗಳಿಂದ, ದ್ವೇಷಿಗಳೆಲ್ಲರ ಹಿಡಿತದಿಂದ ನಿಮಗೆ ಅನುಗ್ರಹಿಸುವೆನು ಸಂರಕ್ಷಣೆ’ !!
72 : ವ್ಯಕ್ತಪಡಿಸಿರುವನು ಪೂರ್ವಜರಿಗೆ ಪ್ರಮಾಣಿಸಿದ ಪ್ರೀತಿಯನು ! ಸ್ಮರಿಸಿಕೊಂಡಿರುವನು ತನ್ನ ಪವಿತ್ರ ಒಡಂಬಡಿಕೆಯನು !!
73 : ಪಿತಾಮಹ ಅಬ್ರಹಾಮನಿಗಿತ್ತ ಮಾತಿಗನುಸಾರ !
74 : ನಮಗಿತ್ತಿರುವನು ಶತ್ರುಗಳಿಂದ ರಕ್ಷಿಸುವನೆಂಬ ಅಭಯ !!
75 : ಹೀಗೆ ಜೀವಮಾನವೆಲ್ಲ ನಾವು ಆತನ ಸೇವೆ ಮಾಡುವಂತಾಯಿತು ನಿರ್ಭೀತರಾಗಿ ! ಆತನ ಸನ್ನಿಧಿಯಲಿ ಬಾಳುವಂತಾಯಿತು ಪುನೀತರಾಗಿ, ಸದ್ಭಕ್ತರಾಗಿ !!
76 : ಸುಕುಮಾರಾ, ನೀನೆಸಿಕೊಳ್ಳುವೆ ‘ಪರಾತ್ಪರನ ಪ್ರವಾದಿ’ !
77 : ಸರ್ವೇಶ್ವರನ ಮಾರ್ಗವನು ಸಜ್ಜುಗೊಳಿಸುವೆ, ಮುಂದಾಗಿ ತೆರಳಿ !! ಪಾಪಕ್ಷಮೆಯನು ಸಾರುವೆ ಆತನ ಪ್ರಜೆಗೆ ! ಈ ಮೂಲಕ ಜೀವೋದ್ಧಾರದ ಜ್ಞಾನವನ್ನೀಯುವೆ ಆ ಜನರಿಗೆ !!
78 : ಕೃಪಾಸಾಗರ, ದಯಾಮಯ ನಮ್ಮ ದೇವನು ! ಆತನ ಕರುಣೆಯಿಂದ ನಮಗಾಯಿತು ಮೇಲಿಂದ ಅರುಣೋದಯವು !!
79 : ಬೆಳಗಿಸಲು ಇರುಳಿನಲು, ಮರಣದ ಮುಸುಕಿನಲು ಬಾಳುವವರನು ! ನಮ್ಮ ಕಾಲುಗಳನ್ನೂರಿಸಿ ನಡೆಸಲು ಶಾಂತಿಪಥದೊಳು !!
----------------
ಚಿಂತನೆ
ಇಂದಿನ ಮೊದಲನೆಯ ವಾಚನದಲ್ಲಿ ದಾವೀದ ಅರಸನು ದೇವಾಲಯ ನಿರ್ಮಾಣ ಕನಸು ಕಾಣುತ್ತಾನೆ. ಕ್ರಿ.ಪೂ. ೯೯೮ರಲ್ಲಿ ದಾವೀದನು ದೇವಾಲಯದ ನಿರ್ಮಾಣಕ್ಕೆ ಪೂರ್ವ ಸಿದ್ದತೆ ಪ್ರಾರಂಭಿಸುತ್ತಾನೆ. ಆದರೆ ನಾತಾನ್ ಪ್ರವಾದಿಯ ಮೂಲಕ ದೇವರು ದಾವೀದನು ದೇವಾಲಯ ಕಟ್ಟಕೂಡದು ಎಂದು ಆದೇಶಿಸುತ್ತಾರೆ. ದಾವೀದನ ಪಾಪ ಕೃತ್ಯಗಳಿಗೆ ದೇವರು ದೇವಾಲಯದ ನಿರ್ಮಾಣಕ್ಕೆ ತಡೆಹಿಡಿಯುತ್ತಾರೆ.

ನಾಳೆ ಕ್ರಿಸ್ತ ಜಯಂತಿಯ ಹಬ್ಬ. ಎಲ್ಲರೂ ಹಬ್ಬದ ಸಿದ್ದತೆಯಲ್ಲಿದ್ದೇವೆ. ಅನೇಕರು ಗೋದಲಿಯ ನಿರ್ಮಾಣಕಾರ್ಯದಲ್ಲಿ ನಿರತರಾಗಿದ್ದಾರೆ. ದಾವೀದನ ದೇವಾಲಯದಲ್ಲಿ ದೇವರಿಗೆ ವಾಸಿಸಲು ಇಷ್ಟವಿರಲಿಲ್ಲ. ಇಂದು ನಾವು ನಿರ್ಮಿಸುತ್ತಿರುವ ಗೋದಲಿಯಲ್ಲಿ ಕ್ರಿಸ್ತ ಜನಿಸಬೇಕಾದರೆ ಅಲ್ಲಿ ಪಾಪವಿರಬಾರದು, ಬದಲಾಗಿ ಸದ್ಗುಣಗಳಿರಬೇಕು. ನಮ್ಮ ಹೃದಯವನ್ನೇ ಗೋದಲಿಯನ್ನಾಗಿಸೋಣ. ಅಲ್ಲಿ ಪ್ರೀತಿ, ಧೀನತೆ, ಶಾಂತಿ, ಕರುಣೆ, ಪರೋಪಕಾರ, ಕ್ಷಮೆ ಸದಾ ತುಂಬಿರಲಿ.


No comments:

Post a Comment