Saturday, 14 March 2020

ತಪಸ್ಸು ಕಾಲದ ಮೂರನೆಯ ಶನಿವಾರ

ಮಾರ್ಚ್ 21, 2020 ಶನಿವಾರ                     [ನೇರಳೆ]
ಮೊದಲ ವಾಚನ: ಹೊಶೇಯ 6:1-6
ಕೀರ್ತನೆ 51:1-3, 16-19. ಶ್ಲೋಕ.ಹೊಶೇಯ 6:6
ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ
ಶುಭಸಂದೇಶ: ಲೂಕ 18.9-14
-----------------
ಮೊದಲ ವಾಚನಹೊಶೇಯ 6:1-6
1 : ನನ್ನನ್ನು ಜನರು ಮರೆಹೋಗುತ್ತಾ ಹೀಗೆನ್ನುವರು: “ಬನ್ನಿ, ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿಸಿದವರು. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ; ಅವರೇ ನಮ್ಮ ಗಾಯಗಳನ್ನು ಕಟ್ಟಿ ಗುಣಪಡಿಸುವರು. ಒಂದೆರಡು ದಿನಗಳ ನಂತರ ಅವರು ನಮ್ಮನ್ನು ಬದುಕಿಸುವರು.
2 : ಮೂರನೆಯ ದಿನದಲ್ಲಿ ಅವರು ನಮ್ಮನ್ನು ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು.
3 : ನಿರಂತರವಾಗಿ ಹುಡುಕಿ ಅವರನ್ನು ಕಂಡುಕೊಳ್ಳೋಣ; ಸರ್ವೇಶ್ವರಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದಂತೆ ನಿಶ್ಚಯ. ಭೂಮಿಯನ್ನು ತಣಿಸುವ ಮುಂಗಾರು ಹಿಂಗಾರು ಮಳೆಗಳಂತೆ ಅವರು ನಮ್ಮ ಬಳಿಗೆ ಬಂದೇ ಬರುವರು.
4 : ಆದರೆ ಸರ್ವೇಶ್ವರ ಹೇಳುವುದೇನೆಂದರೆ: “ಎಫ್ರಯಿಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದಂತಿದೆ; ಬೇಗನೆ ಮಾಯವಾಗುವ ಇಬ್ಬನಿಯಂತಿದೆ.
5 : ಖಂಡ ತುಂಡವಾದ ತೀರ್ಪುನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯ ದಂಡನೆ ಮಿಂಚಿನಂತೆ ಹೊರಡುವುದು.

6 : ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ; ನನಗೆ ಬೇಕಾದುದು ದೈವಜ್ಞಾನ, ದಹನಬಲಿ ದಾನವಲ್ಲ.
-------------------------
ಕೀರ್ತನೆ 51:1-3, 16-19. ಶ್ಲೋಕ.ಹೊಶೇಯ 6:6
ನನಗೆ ಬೇಕಾದುದು ಕರುಣೆಬಲಿಯರ್ಪಣೆಯಲ್ಲ
3 : ಒಪ್ಪಿಕೊಂಡೆನಿದೋ, ನಾನೇ ಅಪರಾಧಿ / ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ //
16 : ಬಲಿಯರ್ಪಣೆಯಲಿ ನಿನಗೊಲವಿಲ್ಲ | ದಹನ ಬಲಿಯಿತ್ತರು ನಿನಗೆ ಬೇಕಿಲ್ಲ ||
17 : ಮುರಿದ ಮನವೇ ದೇವನೊಲಿವ ಯಜ್ಞವು / ನೊಂದು ಬೆಂದ ಮನವನಾತ ಒಲ್ಲೆಯೆನನು //
18 : ಸಿಯೋನಿಗೆ ದೇವಾ, ಶುಭವನು ಕರುಣಿಸು / ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು //

19 : ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು / ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು //
-----------------
ಶುಭಸಂದೇಶಲೂಕ 18.9-14
9 : ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು:
10 : “ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು.
11 : ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: ‘ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ.
12 : ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ.
13 : “ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, ‘ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,’ ಎನ್ನುತ್ತಾ ಎದೆಬಡಿದುಕೊಂಡ.
14 : “ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕ ವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು ಯೇಸು.
--------------------
ಆಹಂ ಎನ್ನುವುದು ಮನುಷ್ಯನ ಅವನತಿಯ ಮೊದಲ ಹಂತ. ಇತಿಹಾಸದುದ್ದಕ್ಕು ಈ 'ಆಹಂ' ಇಂದ ಪತನಗೊಂಡವರು ಸಹಸ್ರಾರು ಮಂದಿ. ಇಂತಹದ್ದೆ ಅಹಮ್ಮಿನ ಸನ್ನಿವೇಷವನ್ನು ಇಂದಿನ ಶುಭಸಂದೇಶದಲ್ಲಿ  ಕ್ರಿಸ್ತ ಹೇಳುತ್ತಾರೆ. ಒಬ್ಬ ಫರಿಸಾಯ ಮತ್ತು ಸುಂಕದವನ ಪ್ರಾರ್ಥನೆಗಳು ಎಷ್ಟು ವಿಭಿನ್ನವಾಗಿರುತ್ತವೆ ಎಂಬುದನ್ನು ಕ್ರಿಸ್ತ ತೋರಿಸುತ್ತಾರೆ. ಫರಿಸಾಯನ 'ಅಹಮ್ಮಿನ ಪ್ರಾರ್ಥನೆ' ಮತ್ತು ಸುಂಕದವನ 'ಪಶ್ಚಾತಾಪ ಪೂರಿತ ಪ್ರಾರ್ಥನೆ' ಗಳ ಎರಡು ಆಯ್ಕೆಗಳನ್ನು ಇಂದಿನ ಶುಭಸಂದೇಶ ನಮ್ಮ ಮುಂದಿಡುತ್ತದೆ. ಆರಿಸಿಕೊಳ್ಳುವ ಸ್ವಾತಂತ್ರ ನಮ್ಮದು. ಅಂತರಂಗದ ನಮ್ಮೆಲ್ಲ ಅಳುಕು-ಹುಳುಕುಗಳನ್ನು ಅರಿತಿರುವ ಸರ್ವಶಕ್ತ ದೇವರಿಗೆ, ನಾವು ಯಾರು ಎಂದು ಹೇಳುವುದು, ಪಾರ್ಥನೆಯಲ್ಲೂ ಬಡಾಯಿ ಕೊಚ್ಚಿಕೊಳ್ಳುವುದು ನಮ್ಮ ಕಪಟತನದ ಪರಮಾವಧಿ.
------------------------
ನಮ್ಮ ಪ್ರಾರ್ಥನೆ ಹೇಗಿರಬೇಕು, ಪ್ರಾರ್ಥನೆಯ ಭಂಗಿ ಯಾವುದು ಎಂದು ಇಂದಿನ ಶುಭಸಂದೇಶದಲ್ಲಿ ಯೇಸು ತಿಳಿಸುತ್ತಾರೆ. ಇಬ್ಬರು ವ್ಯಕ್ತಿಗಳ ಪ್ರಾರ್ಥನೆಯ ಉದಾಹರಣೆ ಇಲ್ಲಿದೆ ಒಬ್ಬ ಫರಿಸಾಯ, ಸಮಾಜದ ದೃಷ್ಟಿಯಲ್ಲಿ ದೊಡ್ಡ ವ್ಯಕ್ತಿ, ಸಜ್ಜನ, ಕಾನೂನು ಪಾಲಕ. ಇನ್ನೊಬ್ಬ ಸುಂಕ ವಸೂಲಿಯವ, ಸಮಾಜದ ದೃಷ್ಟಿಯಲ್ಲಿ ಪಾಪಿ, ಶೋಷಕ, ಇಲ್ಲಿ ಕಾಣಸಿಗುವ ಫರಿಸಾಯ ಒಬ್ಬ ಸ್ವಾರ್ಥಿಯಾಗಿದ್ದ, ಅಹಂಕಾರ, ಗರ್ವ ಆತನಲ್ಲಿ ಮನೆಮಾಡಿತ್ತು. ತನ್ನ ಆತ್ಮ ಪ್ರಶಂಸೆಗಾಗಿ ಪರನಿಂದೆಯಲ್ಲಿ ನಿರತನಾದ, ಇನ್ನೊಬ್ಬನನ್ನು ತುಚ್ಛೀಕರಿಸುವುದು ಪಾಪ ಎಂಬುದಾಗಿ ಮರೆತ.
ಸುಂಕವಸೂಲಿಯವ ದೇವರ ಮುಂದೆ ತನ್ನ ಪಾಪ ನೆನೆದು ಕ್ಷಮೆಯಾಚಿಸಿದ. ದೇವರ ಸನಿಹದಲ್ಲಿ ಪ್ರತಿಯೊಬ್ಬನಿಗೂ ಇಂಥಾ ಪಾಪ ಪ್ರಜ್ಞೆ ಮೂಡಬೇಕು ಎಂದು ಕಲಿಸಿದ. ದೇವರ ಮೆಚ್ಚುಗೆಗೆ ಪಾತ್ರನಾದ ಪ್ರಾರ್ಥನೆಯನ್ನು ತಪ್ಪಾಗಿ ಗ್ರಹಿಸಿದ್ದ ಫರಿಸಾಯನನ್ನು ಯೇಸು ಖಂಡಿಸುತ್ತಾರೆ.
------------------------
© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment