ಮೇ 6, 2020 ಬುಧವಾರ [ಬಿಳಿ]
ಸಂತ ಡೊಮಿನಿಕ್ ಸಾವಿಯೊ (ಸ್ಮರಣೆ)
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:24-13:5
ಕೀರ್ತನೆ 67:2-3, 5, 6, 8 ಶ್ಲೋಕ.3
ನಿನ್ನ ಕೀರ್ತಿಸಲಿ ದೇವಾ, ಜನರು ಸಂಕೀರ್ತಿಸಲಿ ಅವರೆಲ್ಲರೂ.
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 12:44-50
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು
12:24-13:5
24 : ದೇವರ ಶುಭಸಂದೇಶವಾದರೋ ಹಬ್ಬಿ ಹರಡತೊಡಗಿತು.
25 : ಬಾರ್ನಬ ಮತ್ತು ಸೌಲನು ತಮ್ಮ ಧರ್ಮಕಾರ್ಯವನ್ನು ಮುಗಿಸಿಕೊಂಡು ಮಾರ್ಕ ಎಂದು ಹೆಸರುಗೊಂಡ ಯೊವಾನ್ನನೊಂದಿಗೆ ಜೆರುಸಲೇಮಿನಿಂದ ಹಿಂದಿರುಗಿದರು.
1 : ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂದು ಕರೆಯಲಾದ ಸಿಮೆಯೋನ್, ಸಿರೇನಿನ ಲೂಸಿಯಸ್, ಸಾಮಂತ ಹೆರೋದನ ಬಾಲ್ಯಸ್ನೇಹಿತ ಮೆನಹೇನ ಮತ್ತು ಸೌಲ
2 : ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವ್ರತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, “ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಆ ಕಾರ್ಯಕ್ಕಾಗಿ ವಿೂಸಲಾಗಿಡಿ,” ಎಂದರು.
3 : ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆ ಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ ಕಳುಹಿಸಿಕೊಟ್ಟರು.
4 : ಸೈಪ್ರಸ್ ದ್ವೀಪದಲ್ಲಿ ಧರ್ಮಪ್ರಚಾರ ಹೀಗೆ ಪವಿತ್ರಾತ್ಮ ಅವರೇ ಕಳುಹಿಸಿದ ಬಾರ್ನಬ ಮತ್ತು ಸೌಲ ಸೆಲೂಸಿಯಾಕ್ಕೆ ಹೋದರು. ಅಲ್ಲಿಂದ ಸೈಪ್ರಸ್ ದ್ವೀಪಕ್ಕೆ ನೌಕಾಯಾನ ಮಾಡಿದರು.
5 : ಅವರು ಸಲವಿೂಸ್ ಎಂಬ ಸ್ಥಳಕ್ಕೆ ಬಂದಾಗ ಯೆಹೂದ್ಯರ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಶುಭಸಂದೇಶವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೊವಾನ್ನ ಅವರ ಸಂಗಡವಿದ್ದು ಅವರಿಗೆ ನೆರವಾಗುತ್ತಿದ್ದನು.
ಕೀರ್ತನೆ
67:2-3, 5, 6, 8 ಶ್ಲೋಕ.3
ನಿನ್ನ ಕೀರ್ತಿಸಲಿ ದೇವಾ, ಜನರು ಸಂಕೀರ್ತಿಸಲಿ ಅವರೆಲ್ಲರೂ
1 : ಹರಸು ದೇವಾ, ನಮ್ಮನಾಶೀರ್ವದಿಸು | ನಿನ್ನ ಮುಖ ಕಾಂತಿಯಿಂದೆಮ್ಮನು ಬೆಳಗಿಸು ||
2 : ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ / ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲ //
3 : ನಿನ್ನ ಕೀರ್ತಿಸಲಿ ದೇವಾ, ಜನರು / ಸಂಕೀರ್ತಿಸಲಿ ಅವರೆಲ್ಲರೂ //
4 : ನ್ಯಾಯದ ಪ್ರಕಾರ ತೀರ್ಪಿಡುತಿ ಜನತೆಗೆ / ಆದರ್ಶನೀಡುತಿ ಜಗದ ರಾಷ್ಟ್ರಗಳಿಗೆ / ಹರ್ಷಾನಂದವಾಗಲಿ ಜನಾಂಗಗಳಿಗೆ //
5 : ನಿನ್ನ ಕೀರ್ತಿಸಲಿ ದೇವಾ, ಜನರು / ಸಂಕೀರ್ತಿಸಲಿ ಅವರೆಲ್ಲರೂ //
6 : ಇತ್ತನೆಮ್ಮ ದೇವನು ಆಶೀರ್ವಾದವನು / ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು //
7 : ನಮ್ಮೆಲ್ಲರನು ದೇವನು ಹರಸಲಿ / ಎಲ್ಲೆಡೆ ಆತನ ಭಯಭಕ್ತಿಯಿರಲಿ //
ಶುಭಸಂದೇಶ: ಯೊವಾನ್ನ 12: 44-50
44 : ಯೇಸುಸ್ವಾಮಿ ಗಟ್ಟಿಯಾಗಿ ಕೂಗಿ ಇಂತೆಂದರು: “ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ.
45 : ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ.
46 : ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ.
47 : ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆ ಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪು ಕೊಡುವುದಕ್ಕಾಗಿ ಅಲ್ಲ.
48 : ನನ್ನನ್ನು ನಿರಾಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ.
49 : ಅದು ಯಾವುದೆಂದರೆ ನಾನು ಆಡಿದ ಮಾತೇ. ಅಂತಿಮ ದಿನದಂದು ಅದೇ ಅವನಿಗೆ ತೀರ್ಪುಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲಾ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿದ ಪಿತನೇ, ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನಗೆ ಆಜ್ಞೆ ಮಾಡಿದ್ದಾರೆ.
50 : ಅವರ ಆಜ್ಞೆಯೇ ನಿತ್ಯಜೀವದಾಯಕ ಎಂದು ನಾನು ಬಲ್ಲೆ. ಆದ್ದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.”
------------------
------------------
ಕುರುಬನ ಬಳಿಯೊಂದು ನಾಯಿಯಿತ್ತು. ಅವರಿಬ್ಬರೂ ತುಂಬಾ ಆತ್ಮೀಯವಾಗಿದ್ದರು. ಕಾಯಿಲೆ ಹಿಡಿದ ಕುರುಬ ತೀರಿಹೋದ. ಸಂಬಂಧಿಕರು, ಕುಟುಂಬಸ್ಥರು ಆತನನ್ನು ಸಮಾಧಿ ಮಾಡಿ ಮನೆಕಡೆ ಹೊರಟರು. ಆದರೆ ಈತನ ನಾಯಿ ಸಮಾಧಿಯ ಬಳಿಯೇ ಉಳಿಯಿತು. ಒಂದು ದಿನವಲ್ಲ, ವಾರವಲ್ಲ, ತಿಂಗಳಲ್ಲ ..... 12ವರ್ಷಗಳು. ಯಾರಾದರೂ ಕರುಣೆಯಿಂದ ಒಂದಿಷ್ಟು ರೊಟ್ಟಿ, ನೀರು ಕೊಟ್ಟಾಗ ತಿನ್ನುತ್ತಿತ್ತು ಮತ್ತು ಸಮಾಧಿ ಬಳಿಯೇ ಇದ್ದು ಕೊನೆಗೆ ತೀರಿಕೊಂಡಿತು.
ನಂಬಿಕೆ ವಿಶ್ವಾಸವೆಂದರೆ ಹೀಗೆ. ಏನೇ ಬಂದರೂ ಬಿಟ್ಟುಕೊಡುವುದಿಲ್ಲ. ಕಷ್ಟ ಸಂಕಟ ಬಂದಾಗ, ಸಂಶಯ ಸೋಲು ಎದುರಾದಾಗ ..... ಸಂಬಂಧ ಹಾಳಾಗದಂತೆ ಕಾಪಾಡಿಕೊಳ್ಳಬೇಕು. ಇವೆಲ್ಲಾ ಬಂದು ಹೋಗುವ ಹಾಗೂ ನಮ್ಮನ್ನು ಪರೀಕ್ಷಿಸುವ ಸಲುವಾಗಿ ಬಂದವುಗಳಷ್ಟೇ.
---------------
© 'ದನಿ' ಮಾಧ್ಯಮ ಮನೆ

No comments:
Post a Comment