Saturday, 25 April 2020

ಪಾಸ್ಖಕಾಲದ ಐದನೆಯ ಭಾನುವಾರ

ಮೇ 10, 2020 ಭಾನುವಾರ                                                                [ಬಿಳಿ]
ಪಾಸ್ಕ ಕಾಲದ 5ನೇ ಭಾನುವಾರ
ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:1-7
ಕೀರ್ತನೆ 33: 1-2, 4-5, 18-19 ಶ್ಲೋಕ.22
ನಮ್ಮ ಮೇಲಿರಲಿ ಪ್ರಭೂ, ನಿನ್ನ ಅಚಲ ಪ್ರೀತಿ,
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ.
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಎರಡನೇ ವಾಚನ: 1 ಪೇತ್ರ 2.4-9
ಶುಭಸಂದೇಶ: ಯೊವಾನ್ನ 14.1-12

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:1-7
1 : ಇತ್ತ ಭಕ್ತವಿಶ್ವಾಸಿಗಳ ಸಂಖ್ಯೆ ಹೆಚ್ಚುತ್ತಾ ಬಂದಿತು. ಆಗ ಗ್ರೀಕ್ ಮಾತನಾಡುತ್ತಾ ಇದ್ದವರ ಹಾಗೂ ಸ್ಥಳೀಯ ಭಾಷೆ ಮಾತನಾಡುತ್ತಿದ್ದವರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ದಿನನಿತ್ಯ ಮಾಡುವ ದೀನದಲಿತರ ಸೇವೆಯಲ್ಲಿ ತಮ್ಮ ಕಡೆಯ ವಿಧವೆಯರನ್ನು ಅಲಕ್ಷ್ಯಮಾಡಲಾಗುತ್ತಿದೆ ಎಂದು ಗ್ರೀಕರು ಗೊಣಗುಟ್ಟಿದರು.
2 : ಆಗ ಹನ್ನೆರಡು ಮಂದಿ ಪ್ರೇಷಿತರು ಭಕ್ತವಿಶ್ವಾಸಿಗಳ ಸಭೆಯನ್ನು ಕರೆದು, “ನಾವು ದೇವರ ವಾಕ್ಯದ ಬೋಧನೆಯನ್ನು ಅವಗಣಿಸಿ ಊಟೋಪಚಾರಗಳ ಸೇವೆಯಲ್ಲಿ ಮಗ್ನರಾಗಿ ಇರುವುದು ಸರಿಯಲ್ಲ.
3 : ಆದುದರಿಂದ ಸಹೋದರರೇ, ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಸನ್ಮಾನಿತರೂ ಆಗಿರುವ ಏಳು ವ್ಯಕ್ತಿಗಳನ್ನು ನಿಮ್ಮಿಂದ ಆರಿಸಿಕೊಳ್ಳಿ. ನಾವು ಅವರಿಗೆ ಜವಾಬ್ದಾರಿಯನ್ನು ವಹಿಸುತ್ತೇವೆ.
4 : ನಾವಾದರೋ ಪ್ರಾರ್ಥನೆಯಲ್ಲೂ ವಾಕ್ಯೋಪದೇಶದಲ್ಲೂ ನಿರತರಾಗುತ್ತೇವೆ,” ಎಂದರು.
5 : ಪ್ರೇಷಿತರ ಸಲಹೆಯನ್ನು ಇಡೀ ಸಭೆ ಅನುಮೋದಿಸಿತು. ಅಂತೆಯೇ ಅಗಾಧ ವಿಶ್ವಾಸ ಉಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೇಫನ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬ ಏಳು ಮಂದಿಯನ್ನು ಆರಿಸಿಕೊಂಡರು.
6 : ಪ್ರೇಷಿತರ ಮುಂದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾಡಿದರು.
7 : ದೇವರ ವಾಕ್ಯವು ಪ್ರವರ್ಧಿಸತೊಡಗಿತು. ವಿಶ್ವಾಸಿಗಳ ಸಂಖ್ಯೆ ಜೆರುಸಲೇಮಿನಲ್ಲಿ ಬಹಳವಾಗಿ ಹೆಚ್ಚಿತು. ಬಹುಮಂದಿ ಯಾಜಕರೂ ವಿಶ್ವಾಸಕ್ಕೆ ಶರಣಾದರು.

ಕೀರ್ತನೆ 33: 1-2, 4-5, 18-19 ಶ್ಲೋಕ.22
ನಮ್ಮ ಮೇಲಿರಲಿ ಪ್ರಭೂ, ನಿನ್ನ ಅಚಲ ಪ್ರೀತಿ,
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ.
1 : ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ / ನೀತಿವಂತರೇ, ಆತನ ಸ್ತುತಿ ನಿಮಗೆ ಸುಗುಣ //
2 : ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ / ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ //
4 : ಸತ್ಯವಾದುದು ಆತನ ಪವಿತ್ರ ವಾಕ್ಯ / ಸ್ತುತ್ಯವಾದುದು ಆತನ ಪುನೀತ ಕಾರ್ಯ //
5 : ಸತ್ಯಸಂಧನು, ನ್ಯಾಯಪ್ರಿಯನು ಆತನು | ಅಚಲ ಪ್ರೀತಿಯಿಂದ ಜಗವನು ತುಂಬಿಹನು ||
18 : ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು / ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು //
19 : ತಪ್ಪಿಸುವನವನು ಪ್ರಾಣವನು ಮರಣದಿಂದ / ಉಳಿಸುವನು ಜೀವವನು ಕ್ಷಾಮಡಾಮರದಿಂದ //


ಎರಡನೇ ವಾಚನ: 1 ಪೇತ್ರ 2:4-9
4 : ಪ್ರಭುವಿನ ಬಳಿಗೆ ಬನ್ನಿ; ಸಜೀವ ಶಿಲೆಯಾದ ಅವರನ್ನು ಮಾನವರು ನಿಷ್ಪ್ರಯೋಜಕ ಎಂದು ತಿರಸ್ಕರಿಸಿದರೂ ದೇವರು ಅಮೂಲ್ಯರೆಂದು ಆರಿಸಿಕೊಂಡರು.
5 : ನೀವೂ ಸಹ ಸಜೀವ ಶಿಲೆಗಳಾಗಿದ್ದೀರಿ; ಆಧ್ಯಾತ್ಮಿಕ ದೇವಾಲಯವನ್ನು ನಿರ್ಮಿಸಲು ನಿಮ್ಮನ್ನೇ ಅರ್ಪಿಸಿಕೊಳ್ಳಿ. ದೇವಾಲಯದಲ್ಲೇ ಯೇಸುಕ್ರಿಸ್ತರ ಮುಖಾಂತರ ದೇವರಿಗೆ ಮೆಚ್ಚುಗೆಯಾಗಿರುವ ಆಧ್ಯಾತ್ಮಿಕ ಬಲಿಗಳನ್ನು ಸಮರ್ಪಿಸುವ ಪವಿತ್ರ ಯಾಜಕವರ್ಗದವರು ನೀವಾಗಿರುವಿರಿ.
6 : ಕಾರಣದಿಂದಲೇ ಪವಿತ್ರ ಗ್ರಂಥ ಇಂತೆನ್ನುತ್ತದೆ: “ಅಮೂಲ್ಯ ಶಿಲೆಯೊಂದನ್ನು ನಾನಾರಿಸಿಕೊಂಡೆ. ಸಿಯೋನಿನಲ್ಲಿ ಅದನ್ನೇ ಮುಖ್ಯ ಮೂಲೆಗಲ್ಲನ್ನಾಗಿರಿಸಿದೆ. ಎಂದಿಗೂ ಆಶಾಭಂಗವಾಗದು ಅದರ ಮೇಲೆ ವಿಶ್ವಾಸವಿಡುವವರಿಗೆ.”
7 : ವಿಶ್ವಾಸವಿಟ್ಟಿರುವ ನಿಮಗಂತೂ ಶಿಲೆ ಅತ್ಯಮೂಲ್ಯವಾದುದು. “ಮನೆಕಟ್ಟುವವರು ಬೇಡವೆಂದು ಮೂಲೆಗೆಸೆದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು.”
8 : “ಜನರು ಎಡವಿಬೀಳುವ ಕಲ್ಲಿದು; ಅವರು ಮುಗ್ಗರಿಸಿ ಬೀಳುವ ಬಂಡೆಯಿದು.” ವಿಶ್ವಾಸವಿಡದವರಿಗಾದರೋ ಮೇಲಿನ ವಾಕ್ಯಗಳು ಅನ್ವಯಿಸುತ್ತವೆ. ಜನರು ದೇವರ ವಾಕ್ಯದಲ್ಲಿ ವಿಶ್ವಾಸವಿಡದಿರುವುದರಿಂದಲೇ ಎಡವಿಬೀಳುತ್ತಾರೆ. ಅವರ ಬಗ್ಗೆ ದೈವಸಂಕಲ್ಪವೂ ಇದೇ ಆಗಿತ್ತು.
9 : ನೀವು ದೇವರು ಆಯ್ದುಕೊಂಡ ಜನಾಂಗ; ರಾಜಯಾಜಕರು, ಪವಿತ್ರ ಪ್ರಜೆ, ದೇವರ ಸ್ವಕೀಯ ಜನ; ಅವರ ಅದ್ಭುತ ಕಾರ್ಯಗಳನ್ನು ಪ್ರಚುರಪಡಿಸುವುದಕ್ಕಾಗಿಯೇ ಆಯ್ಕೆಯಾದವರು. ಕಾರ್ಗತ್ತಲಿನಿಂದ ತಮ್ಮ ಅದ್ಭುತಕರವಾದ ಬೆಳಕಿಗೆ ನಿಮ್ಮನ್ನು ಕರೆತಂದವರು ಅವರೇ.

ಶುಭಸಂದೇಶ: ಯೊವಾನ್ನ 14:1-12
1 : ಯೇಸುಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, “ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ.
2 : ನನ್ನ ಪಿತನ ಆಸ್ಥಾನದಲ್ಲಿ ಅನೇಕ ನಿವಾಸಗಳು ಇವೆ. ಹಾಗಿಲ್ಲದ ಪಕ್ಷದಲ್ಲಿ ನಿಮಗೆ ತಿಳಿಸುತ್ತಿದ್ದೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ.
3 : ಅಣಿಗೊಳಿಸಿದ ಬಳಿಕ ಹಿಂದಿರುಗಿ ಬಂದು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವೂ ಇರಬೇಕು.
4 : ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ,” ಎಂದು ಹೇಳಿದರು.
5 : ಆಗ ತೋಮನು, “ಪ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆಂದು ನಮಗೆ ತಿಳಿಯದು; ಅಂದಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಿದನು.
6 : ಅದಕ್ಕೆ ಯೇಸು, “ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು.
7 : ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿಂದ ಅವರನ್ನು ನೀವು ಅರಿತವರಾಗಿದ್ದೀರಿ ಹಾಗೂ ಕಂಡೂ ಇದ್ದೀರಿ,” ಎಂದು ನುಡಿದರು.
8 : ಆಗ ಫಿಲಿಪ್ಪನು, “ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು,” ಎಂದನು.
9 : ಅದಕ್ಕೆ ಉತ್ತರವಾಗಿ ಯೇಸು, “ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, ‘ನಮಗೆ ಪಿತನನ್ನು ತೋರಿಸಿಎಂದು ಹೇಗೆ ಕೇಳುತ್ತೀ?
10 : ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ.
11 : ‘ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ,’ ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ; ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ.
12 : ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿ ವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ.
--------------------
“ಮಾರ್ಗವೂ, ಸತ್ಯವೂ, ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರು ಪಿತನ ಬಳಿಗೆ ಬರಲಾರರು”
ಬಿಷಪ್ ಪುಲ್ಟನ್ ಶೀನ್ ತಮ್ಮ ಆತ್ಮಚರಿತ್ರೆ ಪುಸ್ತಕದಲ್ಲಿ ಈ ಒಂದು ಘಟನೆಯನ್ನು ವಿವರಿಸುತ್ತಾರೆ. ಒಮ್ಮೆ ಒಂದು ನಗರದ ಪುರಸಭೆಗೆ ಹೋಗಬೇಕಾಯಿತ್ತು, ಅದರೇ ಅವರಿಗೆ ಅಲ್ಲಿಗೆ ಹೋಗುವ ದಾರಿ ತಿಳಿದಿರಲ್ಲಿಲ. ಹಾಗೆಯೇ ನಡೆದು ಬರುವಾಗ, ರಸ್ತೆಬದಿಯಲ್ಲಿ ಆಟವಾಡುತ್ತಿದ್ದ ಬಾಲಕರನ್ನು ಪುರಸಭೆಗೆ ಹೋಗುವ ದಾರಿ ಕೇಳಿದರು. ಬಿಷಪ್‍ರನ್ನು ಕಂಡು ಉತ್ಸುಕರಾದ ಬಾಲಕರು, ದಾರಿಯನ್ನು ತೋರಿಸಲು, ತಾವೇ ಖುದ್ದಾಗಿ ಬಿಷಪ್‍ರ ಜೊತೆ ನಡೆಯಲು ಪ್ರಾರಂಭಿಸಿದರು. ಆಗೆಯೇ ಪುರಸಭೆಯ ಕಡೆಗೆ ಮಾತ್ತನಾಡುತ್ತಾ ಸಾಗುವಾಗ, ಬಾಲಕರು ಬಿಷಪ್‍ರಿಗೆ ಪುರ ಸಭೆಗೆ ಹೋಗುವ ಉದ್ದೇಶವನ್ನು ಕೇಳಿದರು. ಅದಕ್ಕೆ ಬಿಷಪ್‍ರು “ಸ್ವರ್ಗಕ್ಕೆ ಹೇಗೆ ಹೋಗುವುದರ” ಬಗ್ಗೆ ಪ್ರವಚನ ನೀಡಲು ಅಲ್ಲಿಗೆ ಹೋಗುವುದಾಗಿ ತಿಳಿಸಿದರು. ಇದನ್ನು ಕೇಳಿದ್ದೇ ತಡ ಬಾಲಕರು ಜೋರಾಗಿ ಕಿಲಕಿಲನೆ ನಗುತ್ತಾ “ಇವರಿಗೆ ಪುರಸಭೆಗೆ ಹೋಗುವ ಮಾರ್ಗವೇ ಗೊತ್ತಿಲ್ಲ, ಸ್ವರ್ಗಕ್ಕೆ ಹೋಗುವ ದಾರಿಯನ್ನು ತೋರಿಸುತ್ತರಂತೆ” ಎಂದು ಪರಿಹಾಸ ಮಾಡಿದರಂತೆ. 

ಪ್ರಸ್ತುತ ಮಹಾಮಾರಿ ಕೊರೊನಾ ನಮ್ಮ ಜೀವನದ ಕ್ರಮವನೇ ಅಸ್ತವ್ಯಸ್ತವಾಗಿಸಿದೆ. ಈ ವೈರೆಸ್‍ನ ಚಲನವಲನಗಳನ್ನು ತಿಳಿಯಲು ವೈಜ್ಞಾನಿಗಳು ಆನೇಕ ಹರಸಾಹಸ ಮಾಡುತ್ತಿದ್ದಾರೆ. ವೈಜ್ಞಾನಿಗಳಿಂದಿಡಿದು ಶ್ರೀಸಾಮಾನ್ಯರವರೆಗೂ ಗೊಂದಲದಲ್ಲಿ ಸಿಲುಕಿ ದಾರಿ ಕಾಣದೆ ಭರವಸೆಯನೇ ಕಳೆದುಕೊಂಡಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂದಿನ ಶುಭುಸಂದೇಶದಲ್ಲಿ ಪ್ರಭು ಯೇಸುವಿನ ನುಡಿಗಳು ನಮ್ಮ ಜೀವನಕ್ಕೆ ಭರವಸೆಯನ್ನೂ, ಧೈರ್ಯವನ್ನು ಮೂಡಿಸುತ್ತದೆ. ಯೇಸು ತಮ್ಮ ಇಹಲೋಕದ ಯಾತ್ರೆಯನ್ನು ತ್ಯಜಿಸಿ ತಮ್ಮ ತಂದೆಯ ಬಳಿಗೆ ಹೋಗುವ ಮುನ್ನ ನಿರುತ್ಸಾಹದ ಶಿಷ್ಯರಿಗೆ ಭರವಸೆ ಹಾಗೂ ಉತ್ಸಾಹವನ್ನು ತುಂಬುವ ನುಡಿಗಳಾಗಿವೆ. ಅಂದು ಶಿಷ್ಯರ, ಇಂದು ನಮ್ಮ ಪರಿಸ್ಥಿತಿಯು ಒಂದು ರೀತಿಯಲ್ಲಿ ಒಂದೇಯಾಗಿದೆ. ಇಂತಹ ಕುಗ್ಗಿದ ಪರಿಸ್ಥಿತಿಯಲ್ಲಿ ಪ್ರಭು ಯೇಸು ನುಡಿಯುತ್ತಾರೆ, ‘ನೀವು ಹೃದಯದಲ್ಲಿ ಕಳವಳಗೊಳ್ಳದಿರಿ, ದೇವರಲ್ಲಿ ವಿಶ್ವಾಸಿಸಿರಿ; ನನ್ನಲ್ಲಿಯೂ ವಿಶ್ವಾಸವಿಟ್ಟು, ನಾನು ನಡೆದು ಬಂದ ಸತ್ಯದ ಮಾರ್ಗವನ್ನು ಅನುಸರಿಸಿದ್ದೆಯಾದರೇ ಅಮರ ಜೀವನ ಲಭಿಸುವುದಾಗಿ ತಿಳಿಸುತ್ತಾರೆ’. ಪ್ರಭು ಯೇಸು ನಮ್ಮ ಉತ್ತಮ ಕುರಿಗಾಹಿಯಾಗಿ ನಮಗೆ ಅಮರ ಜೀವನೀಡಲು ಬಂದಿರುವುದಾಗಿ ಸಂತ ಯೊವಾನ್ನರು ತಮ್ಮ ಶುಭಸಂದೇಶದ 10:10ರಲ್ಲಿ ಚನ್ನಾಗಿ ನಿರುಪಿಸುತ್ತಾರೆ, “ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು”. ಈ ಯಥೇಚ್ಛ ಜೀವನ ನಮ್ಮದಾಗಬೇಕಾದರೆ, ಯೇಸುವನ್ನು ನಮ್ಮ ಜೀವನದ ಕೇಂದ್ರಬಿಂದುವಾಗಿಸಬೇಕು. 

ಯೇಸುವೇ ನಮ್ಮ ಜೀವನದ “ಮಾರ್ಗವೂ, ಸತ್ಯವೂ, ಜೀವವೂ ಆಗಬೇಕೆಂದು ಥಾಮಸ್ ಎ ಕೆಂಫಿಸ್ ತಮ್ಮ ಕ್ರಿಸ್ತನ ಅನುಕರಣೆಯ ಪುಸ್ತಕದಲ್ಲಿ ಸುಂದರವಾಗಿ ಹೀಗೆಂದು ವ್ಯಕ್ತಪಡಿಸುತ್ತಾರೆ “ ನಾನೇ ನೀವು ಅನುಸರಿಸಬೇಕಾದ ಮಾರ್ಗ, ನೀವು ನಂಬಬೇಕಾದ ಸತ್ಯ ಮತ್ತು ನೀವು ಆಶಿಸಬೇಕಾದ ಜೀವನ”. ಆದ್ದರಿಂದ ಯೇಸುವನ್ನು ನಮ್ಮ ಜೀವನದ ಜಿಪಿಎಸ್‍ಯಾಗಿ ಆಳವಾಡಿಸಿಕೊಳ್ಳೋಣ, ಈ ಮೂಲಕ ನಮ್ಮ ಜೀವನದ ಮಾರ್ಗದಲ್ಲಿ ಬರುವ ಕಷ್ಟ-ನೋವು, ಏರು-ಪೇರುಗಳನ್ನು ಧೈರ್ಯದಿಂದ, ಭರವಸೆಯಿಂದ ಎದುರಿಸಬಹುದು.

No comments:

Post a Comment