Tuesday, 19 May 2020

ಜೂನ್ 7, 2020 ಭಾನುವಾರ - ಪರಮ ತ್ರಿತ್ವದ ಮಹೋತ್ಸವ

 [ಬಿಳಿ]
ಮೊದಲ ವಾಚನ: ವಿಮೋಚನಾ 34.4-6, 8-9
ಕೀರ್ತನೆ ಅಜರ್ಯನ ಗೀತೆ 1:29-34. ಶ್ಲೋಕ. 29
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು
ಎರಡನೇ ವಾಚನ: 2 ಕೊರಿಂಥಿಯರಿಗೆ 13.11-13
ಶುಭಸಂದೇಶ: ಯೊವಾನ್ನ 3.16-18


ಮೊದಲ ವಾಚನ: ವಿಮೋಚನಾ 34.4-6, 8-9 

4 : ಅಂತೆಯೇ ಮೋಶೆ ಮೊದಲಿದ್ದ ಹಲಗೆಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಸಿದ್ಧಪಡಿಸಿಕೊಂಡು, ಸರ್ವೇಶ್ವರನ ಅಪ್ಪಣೆಯ ಮೇರೆಗೆ ಬೆಳಿಗ್ಗೆ ಎದ್ದು ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟವನ್ನು ಹತ್ತಿದನು.
5 : ಆಗ ಸರ್ವೇಶ್ವರಸ್ವಾಮಿ ಮೇಘಾವ್ರತರಾಗಿ ಇಳಿದುಬಂದು ಅಲ್ಲಿ ಅವನ ಹತ್ತಿರ ನಿಂತು, ‘ಸರ್ವೇಶ್ವರ’ ಎಂಬ ತಮ್ಮ ನಾಮವನ್ನು ಪ್ರಕಟಿಸಿದರು.
6 : ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: “ಸರ್ವೇಶ್ವರನು; ಸರ್ವೇಶ್ವರನು ಕರುಣಾಮಯನು, ದಯಾಳುದೇವರು. ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ಥನು.
7 : ಸಾವಿರಾರು ತಲೆಗಳವರೆಗೂ ಅಚಲಪ್ರೀತಿ ತೋರುವವನು, ದೋಷಾಪರಾಧಗಳನ್ನೂ ಪಾಪಗಳನ್ನೂ ಕ್ಷಮಿಸುವವನು; ಆದರೂ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡದವನು. ಹೆತ್ತವರ ದೋಷ ಪರಿಣಾಮಗಳನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು.”
8 : ಕೂಡಲೇ ಮೋಶೆ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿ,
9 : “ಸ್ವಾಮಿ ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಟಮಾರಿಗಳು. ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.

ಕೀರ್ತನೆ ಅಜರ್ಯನ ಗೀತೆ 1:29-34. ಶ್ಲೋಕ. 29 

29 ನಮ್ಮ ಪೂರ್ವಜರ ದೇವರಾದ ಸರ್ವೇಶ್ವರನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.

 30 ಆ ಮಹಿಮಾಯುತವಾದ ನಿನ್ನ ನಾಮ ಸ್ತುತ್ಯಾರ್ಹವಾದುದು, ಪರಮಪೂಜ್ಯವಾದುದು, ಎಂದೆಂದಿಗೂ ಮಹಾ ಘನತರವಾದುದು

31 ಪರಮ ವೈಭವದಿಂದ ಕೂಡಿದ ಮಂದಿರದಲ್ಲಿ ನೀವು ಸ್ತುತಿ ಸ್ತೋತ್ರ ಕ್ಕೆ ಪಾತ್ರರು: ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು

 32 ಸಾಗರಾಧಿಗಳನ್ನು ಸಮೀಕ್ಷಿಸುವ ನಿಮಗೆ ಕೆರೂಬಿಗಳ ಮೇಲೆ ಆಸೀನರಾಗಿರುವ ನಿಮಗೆ ಸ್ತೋತ್ರ! ನೀವು ಪರಮ ಪೂಜ್ಯರು, ಎಂದೆಂದಿಗೂ ಮಹೋನ್ನತರು.

 33 ನಿಮ್ಮ ಸಾಮ್ರಾಜ್ಯದ ಸಿಂಹಾಸನದ ಮೇಲೆ ಮಂಡಿಸಿರುವ ನಿಮಗೆ ಸ್ತೋತ್ರ: ನೀವು ಪರಮ ಪೂಜ್ಯರು, ಎಂದೆಂದಿಗೂ ಮಹೋನ್ನತರು

 34 ಗಾನ ಮಂಡಲದಲ್ಲಿ ಸ್ತೋತ್ರಪಾತ್ರರು: ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿತರು.


ಎರಡನೇ ವಾಚನ: 2 ಕೊರಿಂಥಿಯರಿಗೆ 13.11-13 
1 : ಕೊನೆಯದಾಗಿ ಪ್ರಿಯ ಸಹೋದರರೇ, ಸಂತೋಷದಿಂದಿರಿ. ಪರಿಪೂರ್ಣರಾಗಲು ಪ್ರಯತ್ನಿಸಿರಿ. ನನ್ನ ಬುದ್ಧಿಮಾತುಗಳಿಗೆ ಕಿವಿಗೊಡಿ; ಒಮ್ಮನಸ್ಸಿನಿಂದ ಬಾಳಿರಿ; ಸಮಾಧಾನದಿಂದ ಜೀವಿಸಿರಿ; ಆಗ ಪ್ರೀತಿ ಮತ್ತು ಶಾಂತಿಸ್ವರೂಪರಾದ ದೇವರು ನಿಮ್ಮೊಡನೆ ಇರುತ್ತಾರೆ.
12 : ಪವಿತ್ರವಾದ ಮುದ್ದಿಟ್ಟು ಒಬ್ಬರನ್ನು ಒಬ್ಬರು ವಂದಿಸಿರಿ. ದೇವಜನರೆಲ್ಲರೂ ನಿಮಗೆ ಶುಭಾಶಯಗಳನ್ನು ಕೋರಿದ್ದಾರೆ.
13 : ನಮ್ಮ ಪ್ರಭು ಯೇಸುಕ್ರಿಸ್ತರ ವರ ಪ್ರಸಾದವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ!
ಶುಭಸಂದೇಶ: ಯೊವಾನ್ನ 3.16-18
16 : ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ.
17 : ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು.
18 : ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ.
----------------
ಚಿಂತನೆ
ಪರಮ ತ್ರಿತ್ವದ ಮಹೋತ್ಸವ
ದೇವರು ಒಬ್ಬರೆ. ಆದರೆ ಮೂವರು ವ್ಯಕ್ತಿಗಳಾಗಿ ಪರಿಪೂರ್ಣ ಪ್ರೀತಿಯ ಸಂಗಮವಾಗಿದ್ದಾರೆ. ಅವರು ನಿರಂತರವಾಗಿ ತುಂಬು ಪ್ರೀತಿಯ ಹೊನಲನ್ನು ಮಾನವರ ರಕ್ಷಣೆಗಾಗಿ ಹರಿಸುತ್ತಿದ್ದಾರೆ. ಅವರಲ್ಲಿ ಏಕತ್ವ ಮನೆ ಮಾಡಿದೆ. ಸಮತ್ವ ಅವರ ಸತ್ವವಾಗಿದೆ, ಸಮರಸ ಅವರ ಜೀವನದ ಮಿಡಿತವಾಗಿದೆ. ಅವರು ಮಾನವರ ಅಭ್ಯುದಯಕ್ಕಾಗಿ ನಿರಂತರ ಕಾರ್ಯತತ್ಪರರಾಗಿದ್ದಾರೆ. ಅವರಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಅವರ ಪ್ರೀತಿಯು ಅಪಾರವೂ ಅಮರವೂ ಆಗಿದೆ. ಇವರು ಪರಮ ಸತ್ಯವೇ ಆಗಿದ್ದಾರೆ. ಆ ಸತ್ಯವನ್ನು ಮಾನವರೆಲ್ಲರೂ ಅರಿತು ಬಾಳುವಂತೆ ತಂದೆ ದೇವರು ತಮ್ಮ ಒಬ್ಬನೆ ಮಗ ನಮ್ಮ ಪ್ರಭು ಯೇಸುವನ್ನು ಕಳುಹಿಸಿದರು. ಅವರು ನಮಗೆ ರಕ್ಷಣೆಯ ಸಂದೇಶವನ್ನು ಸಾರಿ ಮಾನವರಿಗೆ ಮುಕ್ತಿಯ ಪಥವನ್ನು ತೋರಿಸಿ ತಾವೇ ಕೈಹಿಡಿದು ನಡೆಸುತ್ತಿದ್ದಾರೆ. 
-------------------





No comments:

Post a Comment