ಮೊದಲ ವಾಚನ: ಆಮೋ 5.14-15, 21-24
14 : ಕೆಟ್ಟದ್ದನ್ನು ಬಿಟ್ಟುಬಿಡಿ, ಒಳ್ಳೆಯದನ್ನು ಆಸಕ್ತಿಯಿಂದ ಮಾಡಿ; ನೀವು ಬಾಳುವಿರಿ. ಆಗ ನೀವು ಹೇಳಿಕೊಳ್ಳುವಂತೆ, ಸೇನಾಧೀಶ್ವರ ದೇವರಾದ ಸರ್ವೇಶ್ವರ ನಿಮ್ಮೊಡನೆ ಇರುವರು.
15 : ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ. ನ್ಯಾಯ ಮಂಟಪದಲ್ಲಿ ಸತ್ಯಕ್ಕೆ ಜಯವಾಗುವಂತೆ ನೋಡಿಕೊಳ್ಳಿರಿ. ಆಗ ಬಹುಶಃ ಸೇನಾಧೀಶ್ವರ ದೇವರಾದ ಸರ್ವೇಶ್ವರ ಅಳಿದುಳಿದ ಜೋಸೆಫನ ವಂಶಕ್ಕೆ ಕರುಣೆತೋರಿಯಾರು.
21 : “ನಿಮ್ಮ ಹಬ್ಬಹುಣ್ಣಿಮೆಗಳನ್ನು ಹಗೆ ಮಾಡುತ್ತೇನೆ, ತುಚ್ಛೀಕರಿಸುತ್ತೇನೆ. ನಿಮ್ಮ ಉತ್ಸವಗಳ ವಾಸನೆಯೂ ನನಗೆ ಬೇಡ.
22 : ನೀವು ನನಗೆ ದಹನಬಲಿದಾನಗಳನ್ನು, ಧಾನ್ಯ ನೈವೇದ್ಯಗಳನ್ನು ಅರ್ಪಿಸುವುದಕ್ಕೆ ಬಂದರೂ ನಾನು ಅವುಗಳನ್ನು ಸ್ವೀಕರಿಸುವುದಿಲ್ಲ. ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸುವ ಕೊಬ್ಬಿದ ಪಶುಗಳನ್ನು ನಾನು ಕಟಾಕ್ಷಿಸೆನು.
23 : ನಿಮ್ಮ ಭಜನೆ ನಿಂತುಹೋಗಲಿ; ನಿಮ್ಮ ವೀಣಾವಾದ್ಯಗಳು ತೊಲಗಲಿ.
24 : ನ್ಯಾಯನೀತಿ ಹೊಳೆಯಂತೆ ಹರಿಯಲಿ; ಸದ್ಧರ್ಮ ಮಹಾನದಿಯಂತೆ ಪ್ರವಹಿಸಲಿ.
----------------------------
ಕೀರ್ತನೆ 50:7, 8-9, 10-11, 12-13, 16-17, ಶ್ಲೋಕ.23
ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು
7 : “ಎಲೈ ಪ್ರಜೆ ಇಸ್ರಯೇಲ್, ನಾನು ನಿನ್ನ ದೇವರು / ಕಿವಿಗೊಟ್ಟು ಆಲಿಸು ನಾನು ನಿನ್ನ ವಿರುದ್ಧ ವಾದಿಸುವುದನು //
8 : ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ / ನಿನ್ನ ಮುಂದಿವೆ ಸತತ ನಿನ್ನ ದಹನ ಬಲಿಗಳೆಲ್ಲ //
9 : ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ / ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ //
10 : ಕಾಡಿನಲ್ಲಿರುವ ಮೃಗಜಂತುಗಳೆಲ್ಲ ನನ್ನವೆ / ಗುಡ್ಡದಲಿರುವ ಸಹಸ್ರಾರು ಪಶುಗಳು ನನ್ನವೆ //
11ನಾ ಬಲ್ಲೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೆಲ್ಲ I ನನಗೆ ಸೇರಿವೆ ಅಡವಿಯಲಿ ಓಡಾಡುವ ಜೀವಜಂತುಗಳೆಲ್ಲ II
12 : ನನಗೆ ಹಸಿವಾದರೆ, ನಿಮಗೆ ತಿಳಿಸಬೇಕಿಲ್ಲ / ಜಗವು, ಅದರದೆಲ್ಲವು ನನ್ನವಾಗಿವೆಯಲ್ಲಾ //
13 : ಹೋರಿಗಳ ಮಾಂಸವನು ನಾ ಭುಜಿಸುವುದುಂಟೆ?/ ಹೋತಗಳ ರಕ್ತವನು ನಾ ಕುಡಿಯುವುದುಂಟೇ?//
16 : ದುರ್ಜನರಿಗೆ ದೇವ ಹೇಳುವನು ಇಂತೆಂದು / “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು?/ ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?”//
17 : ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ / ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ //
-----------------------------
ಶುಭಸಂದೇಶ: ಮತ್ತಾಯ 8.28-34
28 : ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ಕಡೆಯಿದ್ದ ಗದರೇನ ಎಂಬ ಪ್ರಾಂತ್ಯಕ್ಕೆ ಬಂದರು. ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಹೊರಬಂದು ಅವರಿಗೆ ಎದುರಾದರು. ಅವರಿಬ್ಬರೂ ಮಹಾಕ್ರೂರಿಗಳು. ಈ ಕಾರಣ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ.
29 : ಅವರು ಯೇಸುವನ್ನು ನೋಡಿದೊಡನೆಯೇ "ಓ ದೇವರ ಪುತ್ರನೇ, ನಿಮಗೇಕೆ ನಮ್ಮ ಗೊಡವೆ? ನಿಯಮಿತಕಾಲಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಬಂದಿರಾ?" ಎಂದು ಕೂಗಿಕೊಂಡರು.
30 : ಹಂದಿಗಳ ದೊಡ್ಡ ಹಿಂಡೊಂದು ಅಲ್ಲಿಂದ ಸ್ವಲ್ಪ ದೂರದಲ್ಲೇ ಮೇಯುತ್ತಿತ್ತು.
31 : "ನೀವು ನಮ್ಮನ್ನು ಹೊರದೂಡಿದ್ದೇ ಆದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ," ಎಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು.
32 : ಯೇಸು, "ಹೋಗಿ" ಎಂದು ಅಪ್ಪಣೆಯಿತ್ತರು. ದೆವ್ವಗಳು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆಕ್ಷಣವೇ ಆ ಹಿಂಡೆಲ್ಲಾ ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ, ಸರೋವರಕ್ಕೆ ಬಿದ್ದು, ನೀರುಪಾಲಾಗಿ ಹೋಯಿತು.
33 : ಹಂದಿ ಮೇಯಿಸುತ್ತಿದ್ದವರು ಅಲ್ಲಿಂದ ಪಲಾಯನ ಮಾಡಿ ಊರಿಗೆ ಓಡಿಹೋಗಿ ನಡೆದದ್ದೆಲ್ಲವನ್ನೂ ಮತ್ತು ದೆವ್ವ ಮೆಟ್ಟಿದ್ದವರಿಗೆ ಸಂಭವಿಸಿದ್ದನ್ನೂ ವರದಿಮಾಡಿದರು.
34 : ಆಗ ಊರಿಗೆ ಊರೇ ಯೇಸುವನ್ನು ನೋಡಲು ಬಂದಿತು. ಅವರನ್ನು ಕಂಡು ತಮ್ಮ ಆಸುಪಾಸನ್ನು ಬಿಟ್ಟುಹೋಗಬೇಕೆಂದು ಮನವಿಮಾಡಿಕೊಂಡಿತು.
-----------------------------
ಚಿಂತನೆ
ಕೆಟ್ಟದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, ನೀವು ಬಾಳುವಿರಿ. ಇಂದಿನ ಮೊದಲನೇ ವಾಚನದಲ್ಲಿ ಹೊರಗಿನ ಪೊಳ್ಳು ಆಡಂಬರ ಹಾಗೂ ಸಂಭ್ರಮಕ್ಕಿಂತ ಇತರರಿಗೆ ನೈಜರೀತಿಯಲ್ಲಿ ಒಳಿತು ಮಾಡುವುದು ಒಳ್ಳೆಯದೆಂದು ತಿಳಿಸುತ್ತಾರೆ. ನಾವು ಇತರರಿಗೆ ಒಳ್ಳೆಯದನ್ನು ಬಯಸಿದರೆ ದೇವರು ನಮಗೆ ಒಳ್ಳೆಯದನ್ನೇ ಬಯಸುತ್ತಾರೆ. ಇದರಿಂದ ನಮ್ಮ ಬಾಳು ಬಂಗಾರವಾಗುತ್ತದೆ. ಶುಭಸಂದೇಶದಲ್ಲಿಯೇಸು ಎಲ್ಲಾ ಸಾಮ್ರಾಜ್ಯಗಳ ಒಡೆಯ ಎಂದು ತಿಳಿಸುತ್ತದೆ. ಎಲ್ಲಾ ರೋಗರುಜಿನಗಳ, ಸೈತಾನನ ಸಂಕೋಲೆಗಳ ಹಾಗೂ ಆಧ್ಯಾತ್ಮಿಕ ಬಂಧನಗಳ ಮುಕ್ತಿದಾತನೆಂದು ಹಾಗೂ ಸರ್ವಾಧಿಕಾರಿಯೆಂದು ತಿಳಿಸುತ್ತದೆ. ದೆವ್ವಹಿಡಿದಿದ್ದ ಇಬ್ಬರನ್ನು ತಮ್ಮ ಆಧಿಕಾರವಾಣಿಯಿಂದಲೂ ಮತ್ತು ಭೌತಿಕ ಸ್ವಾಸ್ಥ್ಯ ಕೊಡುವ ದೇವರಾಗಿಯೂ ದೆವ್ವ ಹಿಡಿದವರನ್ನು ಸಂಪೂರ್ಣವಾಗಿ ಸ್ವಸ್ಥ ಪಡಿಸುತ್ತಾರೆ. ನಮ್ಮಲ್ಲಿಯೂ ಗರ್ವ, ಅಹಂಕಾರ, ಮದ-ಮತ್ಸರ, ಕಾಮ, ಕ್ರೂರತೆ, ಅಸೂಯೆಯಂತಹ ದೆವ್ವಗಳು ನಮ್ಮ ಜೀವನದಲ್ಲಿ ಹೊಕ್ಕು ನಮ್ಮನ್ನು ನಾಶಪಡಿಸುತ್ತದೆ. ಇಂತಹ ಸಮಯದಲ್ಲಿ ಕ್ರಿಸ್ತನವಾಣಿ, ಗುಣಪಡಿಸುವ ಹಸ್ತ ಹಾಗೂ ಸೌಖ್ಯದಾಯಕ ಸಹೃದಯ ಅಗತ್ಯವಾಗಿದೆ. ಇಂದು ನಾವೆಲ್ಲರು ಯೇಸುವಿನ ವಾಣಿಯಿಂದ ಪುನೀತರಾಗಿ, ಅವರ ಕೈಗುಣಗಳಿಂದ ಪೂರ್ಣ ಸ್ವಸ್ತರಾಗಿ ದೇವರ ಮಹಿಮೆಯನ್ನು ಕೊಂಡಾಡುವಂತೆ ಪವಿತಾತ್ಮರ ವರಗಳಿಗೋಸ್ಕರ ಪ್ರಾರ್ಥಿಸೋಣ.
---------------------
© 'ದನಿ' ಮಾಧ್ಯಮ ಮನೆ
No comments:
Post a Comment