Wednesday, 1 July 2020

ಜುಲೈ 3, 2020 ಶುಕ್ರವಾರ

ಜುಲೈ 3, 2020 ಶುಕ್ರವಾರ                                [ಕೆಂಪು]
ಸಂತ ತೋಮಾಸ್ [ಭಾರತದ ಪ್ರೇಷಿತ] 
ಮೊದಲ ವಾಚನ: ಎಫೆಸಿಯರಿಗೆ 2:19-22
ಕೀರ್ತನೆ 117:1, 2
ಆತನನು ಹೊಗಳಿ ಹಾಡಿ ಸರ್ವಜನಾಂಗಗಳೇ
ಶುಭಸಂದೇಶ: ಯೊವಾನ್ನ 20.24-29
-----------------
ಎಫೆಸಿಯರಿಗೆ 2:19-22
19 : ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶಿಗಳೂ ಆಗಿರದೆ, ದೇವಜನರೊಂದಿಗೆ ಸಹಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ.
20 : ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸುಕ್ರಿಸ್ತರೇ ಈ ತಳಹದಿಯ ಮುಖ್ಯ ಮೂಲೆಗಲ್ಲು.
21 : ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವಮಂದಿರ ಆಗುತ್ತದೆ.
22 : ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.
-------------------------
ಕೀರ್ತನೆ 117:1, 2

ಆತನನು ಹೊಗಳಿ ಹಾಡಿ ಸರ್ವಜನಾಂಗಗಳೇ
1 : ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ / ಆತನನು ಹೊಗಳಿ ಹಾಡಿ ಸರ್ವಜನಾಂಗಗಳೇ //
2 : ನಮ್ಮ ಮೇಲೆತನಿಗಿರುವ ಪ್ರೀತಿ ಅಚಲ / ಆತನ ಸತ್ಯಪರತೆ ಇರುವುದು ಅನಂತ ಕಾಲ //
---------------------
ಯೊವಾನ್ನ 20.24-29

24 : ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸುಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ.
25 : ಉಳಿದ ಶಿಷ್ಯರು “ನಾವು ಪ್ರಭುವನ್ನು ನೋಡಿದೆವು,” ಎಂದು ಹೇಳಿದರು. ಅದಕ್ಕೆ ಅವನು, “ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು, ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ,” ಎಂದುಬಿಟ್ಟನು.
26 : ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಶಾಂತಿ” ಎಂದರು.
27 : ಆಮೇಲೆ ತೋಮನಿಗೆ, “ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು; ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು,” ಎಂದು ಹೇಳಿದರು.
28 : ಆಗ ತೋಮನು, “ನನ್ನ ಪ್ರಭುವೇ, ನನ್ನ ದೇವರೇ,” ಎಂದನು.
29 : ಯೇಸು ಅವನಿಗೆ “ನನ್ನನ್ನು ಕಂಡುದರಿಂದ ತಾನೆ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು,” ಎಂದು ಹೇಳಿದರು.
-------------------
ಚಿಂತನೆ
 ಸಂಶಯದ ಮನೋವೃತ್ತಿಯವರೆಂದೆಣಿಸಿದ್ದ ಸಂತ ತೋಮಾಸರು, ಕ್ರಿಸ್ತದರ್ಶನದ ನಂತರ ಒಬ್ಬ ಧೈರ್ಯವಂತ ಮತ್ತು ಎದೆಗಾರಿಕೆಯುಳ್ಳ ವ್ಯಕ್ತಿಯಾಗಿ ಪರಿವರ್ತನೆಯಾಗುತ್ತಾರೆಇಂದಿನ ಶುಭಸಂದೇಶದಲ್ಲಿ ಕ್ರಿಸ್ತನ ಪುನರುತ್ಥಾನದ ಬಗ್ಗೆ ಸಂಶಯಾತ್ಮಕವಾಗಿ ಕಂಡುಬಂದಿದ್ದ ತೋಮಾಸರ ನಂಬಿಕೆ, ಯೇಸುವನ್ನು ಕಂಡಿದ್ದೇ ಪರಿತಾಪದೊಂದಿಗೆನನ್ನ ಪ್ರಭುವೇ, ನನ್ನ ದೇವರೇ.” ಎಂಬ ಅಚಲ ವಿಶ್ವಾಸದ ಘೋಷಣೆಯಾಗುತ್ತದೆ. ಮುಂದೆ ತೋಮಾಸರು, ತನ್ನ ಗುರುವಿಗಾಗಿ ಹಿಂಸೆಯನ್ನು ಕೂಡ ಎದುರಿಸುವ ಛಲವನ್ನು ತೋರ್ಪಡಿಸುತ್ತಾರೆ. ಅಂತೆಯೇ ಕ್ರಿಸ್ತನ ಸ್ವರ್ಗಾರೋಹಣದ ನಂತರ ಭಾರತದೇಶಕ್ಕೆ ಶುಭಸಂದೇಶ ಪ್ರಚಾರಕನಾಗಿ ಬಂದುಕ್ರಿಸ್ತನಿಗೋಸ್ಕರ ತನ್ನ ಪ್ರಾಣವನ್ನೇ ಅರ್ಪಿಸಿ ರಕ್ತಸಾಕ್ಷಿಯಾಗುತ್ತಾರೆಜೀವನದ ಕೆಲವು ಸನ್ನಿವೇಶಗಳು ನಮ್ಮನ್ನು ಎದೆಗುಂದುವಂತೆ ಮಾಡಿದರೆ, ಅವುಗಳಿಂದ ಪಾಠಗಳನ್ನು ಕಲಿತು, ಧೈರ್ಯಸ್ಥೈರ್ಯದಿಂದ ಮುನ್ನುಗಬೇಕೆಂದು ಸಂತ ತೋಮಾಸರ ಜೀವನ ನಮಗೆ ತಿಳಿಯಪಡಿಸುತ್ತದೆ. ಸಂತ ತೋಮಸರಂತೆ  ದೃಢ-ವಿಶ್ವಾಸ, ಮತ್ತು ಅಚಲ ಪ್ರೀತಿಯಿಂದ ಕ್ರಿಸ್ತನಿಗಾಗಿ ಬಾಳಲು ಕಲಿಯೋಣ.
-----------------
ದಿದುಮನೆಂದು ಮತ್ತೊಂದು ಹೆಸರಿನಿಂದ ಕರೆಯಲ್ಪಡುವ, `ಸಂದೇಹ ಪಟ್ಟವ’ ಎಂದೂ ಗುರುತಿಸಲ್ಪಡುವ ಸಂತ ತೋಮಾಸ್ರ ಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಭಾರತದ ಪ್ರೇಷಿತರೆಂದೂ ಇವರನ್ನು ಕರೆಯುತ್ತೇವೆ. ಕ್ರಿ.ಶ. 50ರಲ್ಲಿ ಭಾರತಕ್ಕೆ ಬಂದು ತಮಿಳುನಾಡು, ಕೇರಳದಲ್ಲಿ ಮೊದಲಿಗೆ ಶುಭಸಂದೇಶ ಪ್ರಸಾರ ಮಾಡಿದರು. `ನನ್ನ ಪ್ರಭುವೇ ನನ್ನ ದೇವರೇ’ ಎಂಬ ವಿಶ್ವಾಸ ಪ್ರಕಟಣೆಯು ನಮ್ಮದಾಗಲಿ ಸಂದೇಹ, ಸಂಶಯಗಳು ಬರುವುದು ಸಹಜ. ಆದರೆ ಅದೇ ಜೀವನದ ರೀತಿ ಯಾಗಬಾರದು. ವಿಶ್ವಾಸಭರಿತರಾಗಿ ಬಾಳಬೇಕಲ್ಲವೆ.
-----------------
@ ದನಿ ಮಾಧ್ಯಮ ಮನೆ



No comments:

Post a Comment